ಅಂಕಣಗಳು

ಅಮ್ಮನ ಅಂಗೈ, ಅವನಿಗೆ ಕಾರುಣ್ಯದ ಕಥೆ ಹೇಳಿತು...

ನನಗಿನ್ನೂ ಮೂರು ವರ್ಷವಿದ್ದಾಗಲೇ ಅಪ್ಪ ತೀರಿಕೊಂಡರಂತೆ. ಹಾಗಾಗಿ ನನಗೆ ಅಪ್ಪನ...

ನನಗಿನ್ನೂ ಮೂರು ವರ್ಷವಿದ್ದಾಗಲೇ ಅಪ್ಪ ತೀರಿಕೊಂಡರಂತೆ. ಹಾಗಾಗಿ, ನನಗೆ ಅಪ್ಪನ ಮುಖ ಪರಿಚಯವೇ ಇಲ್ಲ. ಆತ ನನ್ನನ್ನು ಎತ್ತಿಕೊಂಡದ್ದು, ಮುದ್ದು ಮಾಡಿದ್ದು, ಹೆದರಿಸಿದ್ದು, ಆಕಾಶಕ್ಕೆ ಎಸೆದಂತೆ ಮಾಡಿ ತಕ್ಷಣವೇ ಕ್ಯಾಚ್ ಹಿಡಿದುಕೊಂಡದ್ದು... ಉಹುಂ, ಇಂಥ ಯಾವ ಘಟನೆಗಳೂ ನನಗೆ ನೆನಪಿಲ್ಲ. ನನ್ನ ಜಗತ್ತು ಅಂದರೆ ಅವಳೊಬ್ಬಳೇ-ಅಮ್ಮ. ಆಕೆ ಮನೆಮನೆಯಲ್ಲಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದಳು. ಅದೆಷ್ಟೋ ವರ್ಷಗಳಿಂದಲೂ ಸುಣ್ಣ ಬಣ್ಣವನ್ನೇ ಕಾಣದಂತಿದ್ದ ಸಿಂಗಲ್ ಬೆಡ್‌ರೂಂನ ಬಾಡಿಗೆ ಮನೆಯೊಂದರಲ್ಲಿ ನಾವು ವಾಸವಾಗಿದ್ದೆವು.
ಅದೇನು ಕಾರಣವೋ, ನಮ್ಮ ಮನೆಗೆ ಬಂಧುಗಳು ಹೆಚ್ಚಾಗಿ ಬರುತ್ತಿರಲಿಲ್ಲ. ಕೆಲವರು ಬಂದರೂ, ಹತ್ತಿಪ್ಪತ್ತು ನಿಮಿಷ ಮಾತಾಡಿ ಹೋಗಿ ಬಿಡುತ್ತಿದ್ದರು. ಎದ್ದುಹೋಗುವ ಮುನ್ನ ನನ್ನ ಕೆನ್ನೆ ಚಿವುಟಿ -'ಮೂಗು, ಕಣ್ಣು, ಮಾತು, ನಗು ಎಲ್ಲಾ ಥೇಟ್ ಅಪ್ಪನ ಥರಾನೇ' ಎನ್ನುತ್ತಿದ್ದರು. ಇಂಥ ಸಂದರ್ಭದಲ್ಲೆಲ್ಲ ನಾನು ಅಪ್ಪನ ಥರಾನೇ ಇದೀನಿ ಅನ್ನಿಸಿ ಖುಷಿಯಾಗುತ್ತಿತ್ತು. ಹಿಂದೆಯೇ, ನನ್ನೊಂದಿಗೆ ಅಪ್ಪ ಇಲ್ಲವಲ್ಲ ಅನ್ನಿಸಿ ಸಂಕಟವೂ ಆಗುತ್ತಿತ್ತು.
ಚಿಕ್ಕ ವಯಸ್ಸಿಗೇ ಅಪ್ಪ ಸತ್ತು ಹೋದದ್ದು ಯಾಕೆ ಎಂಬುದು ನನಗೆ ಗೊತ್ತಿರಲೇ ಇಲ್ಲ. ಐದನೇ ಕ್ಲಾಸಿಗೆ ಬಂದಾಗ ಒಂದು ಬಾರಿ ಅಮ್ಮನನ್ನೇ ಈ ಬಗ್ಗೆ ಕೇಳಿದ್ದೆ. ಆಕೆ ಮಾತಾಡುವ ಬದಲು ಬಿಕ್ಕಳಿಸಲು ಶುರು ಮಾಡಿದಳು. ನನಗೆ ಕಸಿವಿಸಿ ಮತ್ತು ಗಾಬರಿ ಒಟ್ಟಿಗೇ ಆಯಿತು. ಅದೇ ಕೊನೆ. ಅಮ್ಮನನ್ನು ಮತ್ತೆಂದೂ ಆ ಬಗ್ಗೆ ಪ್ರಶ್ನಿಸಲೇ ಇಲ್ಲ. ಆದರೆ ನನ್ನ ಕುತೂಹಲದ ಪ್ರಶ್ನೆಯನ್ನು ಅಮ್ಮನಿಲ್ಲದ ವೇಳೆಯಲ್ಲಿ ಮನೆಗೆ ಬಂದ ಬಂಧುವೊಬ್ಬರ ಮುಂದಿಟ್ಟೆ. ಆತ- 'ಅಯ್ಯೋ, ನಿಮ್ಮಮ್ಮನೇ ಅದಕ್ಕೆಲ್ಲ ಕಾರಣ. ಸುರಿಯೋ ಮಳೇಲಿ ಅವಳು ನಿಮ್ಮ ಅಪ್ಪನನ್ನು ಅಂಗಡೀಗೆ ಕಳಿಸಿದ್ಲು. ಆ ಕಡೆಯಿಂದ ಬರುವಾಗ ಕರೆಂಟ್ ಶಾಕ್ ಹೊಡೆದು ಆತ ಸತ್ತು ಹೋದ. ನಿಮ್ಮಮ್ಮ ಚಂಡಿ ಹಿಡಿದು ಅಂಗಡಿಗೆ ಕಳಿಸದೇ ಹೋಗಿದ್ರೆ ನಿಮ್ಮ ಅಪ್ಪ ಖಂಡಿತಾ ಬದುಕಿರ್ತಾ ಇದ್ದ' ಎಂದು ಹೇಳಿದರು. ಎದ್ದು ಹೋಗುವ ಮುನ್ನ ನಾನು ಹೀಗೆಲ್ಲ ಹೇಳಿದೆ ಅಂತ ಅಪ್ಪಿ ತಪ್ಪಿ ಕೂಡ ನಿಮ್ಮ ಅಮ್ಮನಿಗೆ ಹೇಳಬೇಡ. ಹಾಗೇನಾದ್ರೂ ಹೇಳಿದ್ರೆ ಮನೆದೇವರ ಮೇಲಾಣೆ ಎಂದುಬಿಟ್ಟರು.
'ಅವತ್ತಿನಿಂದಲೇ ಅಮ್ಮನ ವಿಷಯವಾಗಿ ನನಗೆ ತಾತ್ಸಾರ ಶುರುವಾಯಿತು. ಸ್ಕೂಲ್‌ಗೆ ಹೋಗಿ ಬರಲು ಅಮ್ಮ ಒಂದು ಸೈಕಲ್ ಕೊಡಿಸಿದ್ದಳು. ಆದರೆ ನನ್ನ ಸಹಪಾಠಿಗಳೆಲ್ಲ ಅಪ್ಪಂದಿರ ಜೊತೆ ಬೈಕ್, ಕಾರ್‌ಗಳಲ್ಲಿ ಬರುತ್ತಿದ್ದರು. ಕೆಲವರು ಮಾತಿಗೊಮ್ಮೆ-'ನಮ್ಮಪ್ಪ ಮೊನ್ನೆ ಸರ್ಕಸ್‌ಗೆ ಕರ್ಕೊಂಡು ಹೋಗಿದ್ರು. ನಮ್ಮಪ್ಪ ಕ್ರಿಕೆಟ್ ಮ್ಯಾಚ್‌ಗೆ ಕರ್ಕೊಂಡ್ ಹೋಗಿದ್ರು. ನಮ್ಮಪ್ಪ ಏನು ಕೇಳಿದ್ರೂ ತಕ್ಷಣವೇ ಕೊಡಿಸ್ತಾರೆ ಗೊತ್ತಾ ಎಂದೆಲ್ಲಾ ಹೇಳುತ್ತಲೇ ಇದ್ದರು. ಅಂಥ ಸಂದರ್ಭದಲ್ಲೆಲ್ಲ, ನನಗೂ ಅಪ್ಪ ಇದ್ದಿದ್ರೆ ಎಷ್ಟೊಂದು ಮಜವಾಗಿ ಇರಬಹುದಿತ್ತಲ್ವ ಅನಿಸುತ್ತಿತ್ತು. ಹಿಂದೆಯೇ, ಅಪ್ಪನ ಸಾವಿಗೆ ಅಮ್ಮನೇ ಕಾರಣ ಎನ್ನಿಸಿ ಸಿಟ್ಟೂ ಬರುತ್ತಿತ್ತು. ಆದರೆ ಅಮ್ಮನ ಮುಂದೆ ನಿಂತು, ಈಗಿನ ಎಲ್ಲ ಸಂಕಟಕ್ಕೂ ನೀನೇ ಕಾರಣವಂತೆ ಎನ್ನಲು ನನಗೆ ಧೈರ್ಯವಿರಲಿಲ್ಲ.
ಒಂದಲ್ಲ ಎರಡಲ್ಲ, ನಾಲ್ಕು ಮನೆಗಳಲ್ಲಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದಳು ಅಮ್ಮ. ಬೆಳಗ್ಗೆ ತಿಂಡಿ ಹಾಗೂ ಲಂಚ್‌ಬಾಕ್ಸ್ ಕೊಟ್ಟು ಆಕೆ ಅವಸರದಿಂದಲೇ ಮನೆ ಬಿಡುತ್ತಿದ್ದಳು. ಸಂಜೆ ಓದಿಕೊಳ್ಳಲು ಹೇಳಿ ಮತ್ತೊಂದು ಮನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ವಿಚಿತ್ರ ಎನ್ನುವಂತೆ, ಆಕೆ ಸ್ಪೂನ್‌ನ ನೆರವಿನಿಂದಲೇ ಊಟ, ತಿಂಡಿ ಸೇವಿಸುತ್ತಿದ್ದಳು. ಅದನ್ನು ಕಂಡ ಕೆಲವರು-ಅಹಹಹ, ಮಾಡೋದು ಕೂಲಿ ಕೆಲಸ, ಆದ್ರೆ ಫ್ಯಾಷನ್‌ಗೇನೂ ಕಡಿಮೆ ಇಲ್ಲ. ಸ್ಪೂನ್ ಇಲ್ದೇ ತಿಂಡಿ ತಿಂದ್ರೆ ಅವಳ ಕೈ ಸವೆದು ಹೋಗುತ್ತಾ ಎಂದು ಕೊಂಕು ನುಡಿಯುತ್ತಿದ್ದರು. ನನಗೂ ಹಾಗೇ ಅನಿಸುತ್ತಿತ್ತು. ಆದರೆ ಯಾಕಮ್ಮ ಹೀಗೆ ಮಾಡ್ತೀಯ ಎಂದು ಕೇಳಲು ಧೈರ್ಯ ಸಾಲುತ್ತಿರಲಿಲ್ಲ.
ದಿನಗಳು ಉರುಳಿದಂತೆಲ್ಲ ಅಮ್ಮನ ಮೇಲಿನ ಅಸಹನೆ ಹೆಚ್ಚುತ್ತಲೇ ಹೋಯಿತು. ಏಳನೇ ತರಗತಿ ಮುಗಿವ ವೇಳೆಗೆ ನಾನು ಖಡಾಖಂಡಿತವಾಗಿ ನಿರ್ಧರಿಸಿದ್ದೆ: 'ಅಪ್ಪನ ಮಮತೆಯಿಂದ ನಾನು ವಂಚಿತನಾಗುವುದಕ್ಕೆ ಅಮ್ಮನೇ ಕಾರಣ. ಮನೆ ಕೆಲಸದ ಹೆಂಗಸು ಅನ್ನಿಸಿಕೊಳ್ಳುವ ಈಕೆಯಿಂದ ದೂರವಿರುವುದೇ ಒಳ್ಳೆಯದು. ನನ್ನ ಹಣೇಲಿ ಬರೆದಂತೆ ಆಗಲಿ. ಮುಂದೆ ಡಿಗ್ರಿ ಮುಗಿಯೋ ತನಕ ಯಾವುದಾದ್ರೂ ಹಾಸ್ಟೆಲ್ ಸೇರುವುದೇ ಸರಿ...'
ಅದೊಂದು ಮುಂಜಾನೆ ಧೈರ್ಯ ಮಾಡಿ ಅಮ್ಮನ ಮುಂದೆ ನಿಂತು, ನಾನು ಹಾಸ್ಟೆಲ್ ಸೇರ್ಕೋತೇನೆ ಎಂದು ಹೇಳಿಬಿಟ್ಟೆ. ಅಂಥದೊಂದು ಮಾತನ್ನು ಆಕೆ ನಿರೀಕ್ಷಿಸಿರಲಿಲ್ಲ. ನನಗೆ ಯಾರು ದಿಕ್ಕು ಮಗನೇ? ನಿನಗಿಲ್ಲಿ ಏನು ತೊಂದರೆ ಆಗಿದೆಯೋ ಕಂದಾ? ಹಾಸ್ಟೆಲ್‌ಗೆ, ಸ್ಕೂಲ್‌ಗೆ ಎರಡೂ ಕಡೆಗೆ ಫೀ ಹೊಂದಿಸಲು ನನಗೆ ಕಷ್ಟ ಆಗುತ್ತೆ ಕಣೋ. ಇಲ್ಲೇ ಇದ್ದು ಓದಪ್ಪಾ...' ಎಂದೆಲ್ಲಾ ಬುದ್ಧಿ ಹೇಳಿದಳು. ನಾನು ಪಟ್ಟು ಸಡಿಲಿಸಲಿಲ್ಲ. ಸಿಟಿಗೆ ಹೋಗೋದೇ ಸೈ ಎಂದು ರಚ್ಚೆ ಹಿಡಿದೆ. ಕೊನೆಗೊಮ್ಮೆ, ನನಗೂ ಅಪ್ಪ ಅನ್ನುವವನೊಬ್ಬ ಇದ್ದಿದ್ರೆ ಇದೆಲ್ಲಾ ರಗಳೆಯೇ ಇರುತ್ತಿರಲಿಲ್ಲ. ಕೇಳಿದ ತಕ್ಷಣವೇ ಕೆಲಸ ಆಗ್ತಿತ್ತು ಎಂದು ದನಿ ಎತ್ತರಿಸಿ ಹೇಳಿ ಸರಸರನೆ ಹೋಗಿ ಬಿಟ್ಟೆ.
ಎರಡು ದಿನ ಅಮ್ಮ ಮಾತಾಡಲಿಲ್ಲ. ಆದರೆ ಮೂರನೇ ದಿನ ನನ್ನ ಎಲ್ಲ ಬೇಡಿಕೆಗಳಿಗೂ ಒಪ್ಪಿಕೊಂಡಳು. ಹಾಸ್ಟೆಲ್‌ಗೆ, ಸ್ಕೂಲ್‌ಗೆ ಪ್ರತಿ ತಿಂಗಳೂ ನಾನು ಹೇಗಾದ್ರೂ ದುಡ್ಡು ಹೊಂದಿಸಿ ಕಳಿಸ್ತೇನೆ ಕಂದಾ. ಹೊಟ್ಟೆ ತುಂಬಾ ಊಟ ಮಾಡು. ಕಣ್ತುಂಬ ನಿದ್ರೆ ಮಾಡು. ಚೆನ್ನಾಗಿ ಓದಿ ದೊಡ್ಡ ಆಫೀಸರ್ ಆಗು ಎಂದು ಹಾರೈಸಿದಳು. ನಾನು ಕೋಲೆ ಬಸವನಂತೆ ಸುಮ್ಮನೇ ಕತ್ತು ಕುಣಿಸಿದೆ. ಅಮ್ಮನಿಂದ ಬಿಡುಗಡೆ ಪಡೆದದ್ದು ನನಗೆ ದೊಡ್ಡ ಖುಷಿ ನೀಡಿತ್ತು.
ಮುಂದೆ ಪದವಿಯವರೆಗೂ ನಾನು ಹಾಸ್ಟೆಲ್ ನಿವಾಸಿಯೇ ಆಗಿಬಿಟ್ಟೆ. ದುಡ್ಡು ಬೇಕು ಅನ್ನಿಸಿದಾಗೆಲ್ಲ ಅಮ್ಮನಿಗೆ ಪತ್ರ ಬರೆಯುತ್ತಿದ್ದೆ. ಆಕೆ ಹಣ ಕಳಿಸಲು ಒಂದೆರಡು ದಿನ ತಡವಾದರೂ ತಕ್ಷಣವೇ ಊರಿಗೆ ಹೋಗಿ ಕೂಗಾಡುತ್ತಿದ್ದೆ. ಮಾತಿನ ಕೊನೆಗೆ ಯಥಾಪ್ರಕಾರ-ನನಗೂ ಅಪ್ಪ ಅನ್ನೋನು ಇದ್ದಿದ್ರೆ ಹೀಗೆಲ್ಲಾ ನಿನ್ನ ಮುಂದೆ ನಿಂತು ಭಿಕ್ಷೆ ಬೇಡಬೇಕಿತ್ತಾ ಅಂದುಬಿಡುತ್ತಿದ್ದೆ. ಈ ಮಾತು ಕೇಳಿದ ಕೂಡಲೇ ಅಮ್ಮ ತಲೆ ತಗ್ಗಿಸುತ್ತಿದ್ದಳು. ನಂತರ ಅದು ಹೇಗೋ ಹಣ ಹೊಂದಿಸಿ ಕೊಡುತ್ತಿದ್ದಳು. ಆನಂತರದಲ್ಲಿ ದುಡ್ಡು ಬೇಕು ಅನ್ನಿಸಿದಾಗೆಲ್ಲ ಅಪ್ಪನ ಹೆಸರು ಹೇಳಿ ಬ್ಲಾಕ್‌ಮೇಲ್ ಮಾಡುವುದು ನನಗೆ ಅಭ್ಯಾಸವಾಗಿ ಹೋಯಿತು. ಕಾಲೇಜಿನಲ್ಲಾಗಲಿ, ಮನೆಯಲ್ಲಾಗಲಿ ನನಗೆ ಹೇಳುವವರು, ಕೇಳುವವರು ಇರಲಿಲ್ಲ. ಹಾಗಾಗಿ ಕಾಲೇಜಿನಿಂದ ಡಿಗ್ರಿಯವರೆಗೂ ನನ್ನ ಫಲಿತಾಂಶ ಸೆಕೆಂಡ್ ಕ್ಲಾಸ್‌ನ ಮಟ್ಟಕ್ಕೆ ಮಾತ್ರವೇ ಇತ್ತು.
ಪದವಿ ಮುಗೀತಿದ್ದಂತೆಯೇ, ನೌಕರಿಯ ಹುಡುಕಾಟಕ್ಕೆ ನಿಂತೆ. ಒಳ್ಳೆಯ ಸಂಬಳದ ಕೆಲಸ ಸಿಕ್ಕರೆ ಸಿಟಿಯಲ್ಲಿ ಮನೆ ಮಾಡಿಕೊಂಡು ಆರಾಮಾಗಿ ಇರಬೇಕು. ಆದಷ್ಟೂ ಮಟ್ಟಿಗೆ ಅಮ್ಮನಿಂದ ದೂರ ಇರಬೇಕು ಎಂಬುದು ನನ್ನ ಆಸೆಯಾಗಿತ್ತು. ಅದೃಷ್ಟವೆಂಬಂತೆ ಒಂದು ಮಲ್ಟಿ ನ್ಯಾಷನಲ್ ಕಂಪನಿಯಿಂದ ಮೆನೇಜರ್ ಹುದ್ದೆಗೆ ಕರೆ ಬಂತು. ಸಂದರ್ಶನ ಮಾಡುತ್ತಿದ್ದ ಕಂಪನಿಯ ಎಂ.ಡಿ. ನನ್ನ ಅಂಕಪಟ್ಟಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಕೇಳಿದರು: 'ಮಿಸ್ಟರ್ ಸುಧಾಕರ್, ನಿಮ್ಮ ತಂದೆ ಏನು ಕೆಲಸ ಮಾಡ್ತಾರೆ?'
'ಸರ್, ನಂಗೆ ತಂದೆ ಇಲ್ಲ. ನನಗೆ 3 ವರ್ಷ ಇದ್ದಾಗಲೇ ಅವರು ಹೋಗಿಬಿಟ್ರಂತೆ...'
'ಹೌದಾ? ವೆರಿ ಸಾರಿ. ನಿಮಗೆ ಸ್ಕೂಲು, ಕಾಲೇಜಿನಲ್ಲಿ ಸ್ಕಾಲರ್‌ಶಿಪ್ ಸಿಕ್ತಿತ್ತಾ?'
'ಇಲ್ಲ ಸಾರ್. ನನ್ನನ್ನು ಓದಿಸಿದ್ದು ಅಮ್ಮ...'
'ವೆರಿಗುಡ್. ನಿಮ್ಮ ತಾಯಿ ಏನು ಕೆಲ್ಸ ಮಾಡ್ತಾರೆ ಸುಧಾಕರ್?' ಎಂ.ಡಿ. ಸೀರಿಯಸ್ಸಾಗಿ ಕೇಳಿಬಿಟ್ಟರು. ನಾನು ಆಗಲೂ ಒಂಥರಾ ತಾತ್ಸಾರದಿಂದಲೇ ಹೇಳಿದೆ: 'ಸರ್, ನಮ್ಮ ತಾಯಿ ಮನೆಮನೇಲಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಕೆಲಸ ಮಾಡ್ತಾರೆ...'
ಎಂ.ಡಿ. ಒಂದು ಕ್ಷಣ ವಿಸ್ಮಯದಿಂದ ನೋಡಿ, ನಂತರ ಕೇಳಿದರು: ಮಿಸ್ಟರ್ ಸುಧಾಕರ್, ನೀವು ಯಾವತ್ತಾದ್ರೂ ತಾಯಿಗೆ ಮನೆಗೆಲಸದಲ್ಲಿ ನೆರವಾಗಿದ್ದೀರಾ? ಪಾತ್ರೆ ತೊಳೆಯುವಾಗ, ಬಟ್ಟೆ ಒಗೆಯುವ ಸಂದರ್ಭದಲ್ಲಿ ಆಕೆಯ ಹೊರೆಯನ್ನು ಕಡಿಮೆ ಮಾಡಿದ್ದೀರಾ? ನಾಲ್ಕಾರು ಮನೆಗಳಲ್ಲಿ ದುಡಿದು ಬಂದ ಸಂದರ್ಭದಲ್ಲಿ ಆಕೆಯ ಶ್ರಮದ ಬಗ್ಗೆ ಮೆಚ್ಚಿ ಮಾತಾಡಿದ್ದೀರಾ?'
ನಾನು ತುಂಬ ಸ್ಪಷ್ಟವಾಗಿ ಹೇಳಿದೆ: 'ಇಲ್ಲ ಸರ್. ಒಮ್ಮೆ ಕೂಡ ಹಾಗೆ ಮಾಡಲಿಲ್ಲ. ಹಾಗೆಲ್ಲ ಮಾಡಬೇಕು ಅಂತ ಅನ್ನಿಸಲೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ಅಮ್ಮ ನನಗಿಂತ ವೇಗವಾಗಿ ಕೆಲಸ ಮಾಡ್ತಾಳೆ. ಜೊತೆಗೆ, ನೀನು ಆರಾಮಾಗಿ ಓದಿಕೊಳ್ತಾ ಇರಪ್ಪ ಎಂದು ಆಕೆ ಹೇಳ್ತಾನೆ ಇದ್ಳು. ಹಾಗಾಗಿ ನಾನು ಅಮ್ಮನ ಸಹಾಯಕ್ಕೆ ಯಾವತ್ತೂ ಹೋಗಲಿಲ್ಲ...'
ಎಂ.ಡಿ. ತಕ್ಷಣವೇ ಹೇಳಿದರು: 'ಸರಿ. ನಿಮಗೆ ಇಲ್ಲಿ ಖಂಡಿತ ಕೆಲ್ಸ ಕೊಡ್ತೇವೆ. ಮೆನೇಜರ್ ಆಗುವವನು ನೌಕರರ ಕೆಲಸ ಗಮನಿಸಬೇಕು. ಗುರುತಿಸಬೇಕು. ಅಗತ್ಯ ಬಿದ್ದಾಗ ಅವರ ಸುಖ-ದು:ಖ ಕೇಳಬೇಕು. ಪರಿಶ್ರಮವನ್ನು ಮೆಚ್ಚಬೇಕು. ಅಂಥದೊಂದು ಅನುಭವ ಪಡೆಯಲು ನೀವೊಂದು ಕೆಲ್ಸ ಮಾಡಿ: ಇವತ್ತು ರಾತ್ರಿ ನಿಮ್ಮ ತಾಯಿಯ ಕೈಗಳನ್ನು ತೊಳೆಯಿರಿ. ಸಾಧ್ಯವಾದ್ರೆ ಮತ್ತೆ ತೊಳೆಯುವುದಕ್ಕೂ ಸಹಾಯ ಮಾಡಿ. ಬೆಳಿಗ್ಗೆ ಬಂದು ನಿಮ್ಮ ಅನುಭವವನ್ನು ಹಂಚಿಕೊಳ್ಳಿ....'
ಕೆಲ್ಸ ಪಡೆಯಬೇಕಿದ್ದರೆ ಎಂ.ಡಿ ಹೇಳಿದ್ದಂತೆ ಮಾಡಲೇಬೇಕಿತ್ತು. ಹಾಗಾಗಿ, ಅವತ್ತು ರಾತ್ರಿ ಅಮ್ಮನ ಮುಂದೆ ನಿಂತು ಹೇಳಿದೆ: 'ನಾನಿವತ್ತು ನಿನ್ನ ಕೈಗಳನ್ನು ತೊಳೀತೇನೆ.' ಈ ಮಾತು ಕೇಳಿ ಅಮ್ಮ ಒಂದರೆಕ್ಷಣ ವಿಚಲಿತಳಾದಳು. ಆಕೆ ಎರಡನೇ ಮಾತಾಡಲು ನಾನು ಅವಕಾಶವನ್ನೇ ಕೊಡಲಿಲ್ಲ. ಎಲ್ಲಿ, ನಿನ್ನ ಕೈ ಕೊಡಮ್ಮ ಎಂದು ಸಿಡಿಮಿಡಿಯಿಂದಲೇ ಹೇಳಿ, ಪಾತ್ರೆಯಲ್ಲಿದ್ದ ಬಿಸಿ ನೀರನ್ನು ಆಕೆಯ ಎರಡೂ ಅಂಗೈಗೆ ಸುರಿದುಬಿಟ್ಟೆ. ಬೇಗ ಆಕೆಯ ಕೈ ತೊಳೆದು ಎದ್ದು ಹೋಗುವುದು ನನ್ನ ಉದ್ದೇಶವಾಗಿತ್ತು. ಆದರೆ ಕೈ ಮೇಲೆ ಬಿಸಿ ನೀರು ಬಿದ್ದಾಕ್ಷಣ ಅಮ್ಮ 'ಹೋ' ಎಂದು ಚೀರಿಕೊಂಡಳು. ನನಗೆ ಗಾಬರಿಯಾಯಿತು. ನೀರು ಅಷ್ಟೇನೂ ಸುಡುತ್ತಿಲ್ಲ. ಆದರೂ ಆಕೆ ಚೀರಿದ್ದೇಕೆ ಎಂದುಕೊಳ್ಳುತ್ತಾ ಹುಷಾರಾಗಿ ಅಮ್ಮನ ಕೈಗಳನ್ನೇ ಗಮನಿಸಿದೆ. ಆಗ ಕಂಡ ದೃಶ್ಯವನ್ನು ನಾನು ಎಂದೆಂದೂ ಮರೆಯಲಾರೆ. ಅಮ್ಮನ ಎರಡೂ ಕೈನ ಹಸ್ತದ ಚರ್ಮ ಅಲ್ಲಲ್ಲಿ ಕಿತ್ತು ಹೋಗಿತ್ತು. ದಿನವೂ ಬಟ್ಟೆ ಒಗೆಯುವ, ಪಾತ್ರೆಗಳನ್ನು ತೊಳೆಯುವ ಕೆಲಸ ಮಾಡಿದ್ದರಿಂದ ಆಕೆಯ ಬೆರಳುಗಳು ಕಪ್ಪಾಗಿ ಹೋಗಿದ್ದವು. ಬಗೆಬಗೆಯ ಡಿಟರ್ಜೆಂಟುಗಳನ್ನು ಬಳಸಿದ ಕಾರಣದಿಂದ ಬೆರಳುಗಳಲ್ಲಿ ಗಾಯವಾಗಿದ್ದವು. ಮೂರು ಬೆರಳುಗಳಲ್ಲಿ ಕೀವು ತುಂಬಿತ್ತು. ಈಗ ಏಕಾಏಕಿ ಬಿಸಿ ನೀರು ಬಿದ್ದಿದ್ದರಿಂದ ಹಾಗೂ ಅಮ್ಮನ ಕೈಗಳನ್ನು ನಾನು ಒರಟಾಗಿ ಎಳೆದಿದ್ದರಿಂದ ಆ ಗಾಯಗಳಿದ್ದ ಜಾಗದಿಂದ ರಕ್ತ ಬರತೊಡಗಿತು. ಅಮ್ಮ ಊಟ-ತಿಂಡಿಗೆ ಸದಾ ಸ್ಪೂನ್ ಬಳಸುತ್ತಿದ್ದುದು ಏಕೆಂದು ನನಗೆ ತಕ್ಷಣ ಅರ್ಥವಾಯಿತು. ಅವಳ ಕೈಗಳನ್ನೇ ನೋಡುತ್ತ ಮೆಲ್ಲನೆ ತಲೆಯೆತ್ತಿದೆ. ಅಷ್ಟೆ: ನನ್ನ ಕಣ್ಣಿಂದ ದಳದಳ ಉದುರಿದ ಕಣ್ಣೀರು ಅಮ್ಮನ ಬೊಗಸೆಗೆ ಬಿತ್ತು. ಆ ಕ್ಷಣದಲ್ಲೇ ನನ್ನೊಳಗಿನ ರಾಕ್ಷಸ ಸತ್ತು ಹೋಗಿದ್ದ. ನಾನು ಗದ್ಗದನಾಗಿ ಕೇಳಿದೆ: 'ಏನಮ್ಮಾ ಇದು? ಏನು ಮಾಡಿಕೊಂಡೆ?'
 ಅಮ್ಮ ನಿಧಾನವಾಗಿ, ಆದರೆ ಸ್ಪಷ್ಟವಾಗಿ ಹೇಳಿದಳು: '3 ವರ್ಷದವನಿದ್ದಾಗ ನಿನಗೆ ಅದೊಮ್ಮೆ ತುಂಬಾ ಜ್ವರ ಬಂದಿತ್ತು. ಮಗೂಗೆ ಮಾತ್ರೆ ತರ್ತೀನಿ ಅಂತ ನಿಮ್ಮ ತಂದೆ ಹೊರಟು ನಿಂತರು. ಮಳೆ ಬರುವ ಹಾಗಿದೆ. ಹೋಗೋದು ಬೇಡ ಎಂದೆ. ಅವರಿಗೆ ವಿಪರೀತ ಹಠ. ಹತ್ತು ನಿಮಿಷದಲ್ಲಿ ಹೋಗಿ ಬರ್ತೇನೆ, ತೆಪ್ಪಗಿರು ಎಂದು ಗದರಿಸಿ ಹೋದರು. ಅತ್ತಲಿಂದ ಬರುವಾಗ ಜೋರು ಮಳೆ. ಬಿರುಗಾಳಿಗೆ ಲೈಟ್ ಕಂಬ ಉರುಳಿ ಬಿದ್ದಿತ್ತು. ನಿಮ್ಮ ತಂದೆ ನೋಡದೇ ವೈರ್ ತುಳಿದು ಸ್ಥಳದಲ್ಲೇ ಹೋಗಿ ಬಿಟ್ರು. ವಿಷಯ ಗೊತ್ತಿಲ್ಲದ ಜನ ತಲೆಗೊಂದು ಮಾತಾಡಿದ್ರು. ನನಗೆ ಗೊತ್ತಾಗದ ಹಾಗೆ ನಿಮ್ಮ ತಂದೆಯ ಆಸ್ತಿಯನ್ನೆಲ್ಲ ತಿಂದು ಹಾಕಿದ್ರು. ಸಂಕಟದ ಮಧ್ಯೆ ಉಳಿವ ಬದಲು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದೆ. ಆದರೆ ನಿನ್ನನ್ನು ಅನಾಥನನ್ನಾಗಿ ಮಾಡಿ ಹೋಗಲು ಮನಸ್ಸು ಒಪ್ಪಲಿಲ್ಲ. ಹೊಟ್ಟೆ ಪಾಡು ನಡೀಬೇಕಲ್ಲ: ಹಾಗಾಗಿ ಮನೆಮನೇಲಿ ಕೆಲಸಕ್ಕೆ ಸೇರಿಕೊಂಡೆ. ಕೆಲವು ಮನೆಗಳಲ್ಲಿ ಕೇಳಿದ ದಿನವೇ ಸಂಬಳ ಕೊಡ್ತಿರಲಿಲ್ಲ. ಮತ್ತೆ ಕೆಲವರು ಸಂಬಳ ಕೊಟ್ಟ ದಿನವೇ ಬೇರೆ ಯಾವುದೋ ಎಕ್ಸ್‌ಟ್ರಾ ಕೆಲಸ ಹೇಳ್ತಿದ್ರು. ದಿನಕ್ಕೆ ನಾಲ್ಕು ಮನೆಯ ಕೆಲಸ. ಎಲ್ಲಿ ಎಡವಟ್ಟಾಗ್ತಿತ್ತೋ ಗೊತ್ತಿಲ್ಲ. ಹಂಗಾಗಿ ಕೈ ತುಂಬಾ ಗಾಯಗಳಾಗೋಕೆ ಶುರುವಾಯ್ತು. ಇದನ್ನೆಲ್ಲ ಯಾರೊಂದಿಗಾದ್ರೂ ಹೇಳಿಕೊಳ್ಳೋಣ ಅಂದ್ರೆ ಬಂಧುಗಳು ಅಂತ ಯಾರೂ ಇರಲಿಲ್ಲ. ನೀನು ಹಾಸ್ಟೆಲಿಗೆ ಹೋದ ಮೇಲೆ ನಾನು ಸಂಪೂರ್ಣವಾಗಿ ಒಂಟಿಯಾಗಿ ಬಿಟ್ಟೆ. ಮನೆ ಕೆಲಸ ಮಾಡಿಸ್ತಾ ಇದ್ರಲ್ಲ, ಆ ಮನೆಗಳ ಸಾಹೇಬರುಗಳಿಗೆ ಕೈ ಮುಗಿದು ಅವರ ಮೂಲಕವೇ ನಿಂಗೆ ಕಾಲೇಜು-ಹಾಸ್ಟೆಲ್‌ಗೆ ಫೀಸ್ ಕಳಿಸ್ತಾ ಇದ್ದೆ ಕಣಪ್ಪಾ. ಇಷ್ಟು ದಿನ ಇದನ್ನೆಲ್ಲಾ ಹೇಳಬಾರ್ದು ಅಂತಿದ್ದೆ. ಆದ್ರೆ ಇವತ್ತು ಹೇಳ್ಕೋಬಿಟ್ಟೆ. ಸಾರಿ ಕಣೋ. ನಾಳೆ ಕೆಲ್ಸ ಇದೆ ಅಂತೀಯ. ನಿಂಗೆ ಸುಸ್ತಾಗುತ್ತೆ. ಹೋಗಿ ನಿದ್ದೆ ಮಾಡು...'
ಅವತ್ತು ರಾತ್ರಿ ಅಮ್ಮನ ಎಲ್ಲ ಕೆಲಸಗಳನ್ನು ನಾನೇ ಮಾಡಿದೆ. ನಂತರ ಅಮ್ಮನ ಮಡಿಲಲ್ಲಿ ಮುಖವಿಟ್ಟು ಅದೆಷ್ಟೋ ಹೊತ್ತಿನವರೆಗೂ ಬಿಕ್ಕಳಿಸುತ್ತಲೇ ಇದ್ದೆ. ನಂಗೇನೂ ಆಗಿಲ್ಲ ರಾಜಾ ಎನ್ನುತ್ತಲೇ ಅಮ್ಮ ಚುಕ್ಕು ತಟ್ಟಿದಳು. ಮತ್ತೆ ಎಚ್ಚರವಾದಾಗ ಹೊರಗೆ ಬಿಸಿಲಿತ್ತು. ಕಣ್ತೆರವ ಮೊದಲೇ ಅಮ್ಮನ ಪ್ರಾರ್ಥನೆ ಕಿವಿಗೆ ಬಿತ್ತು: 'ದೇವ್ರೇ, ನನಗೆ ಬಂದಂಥ ಕಷ್ಟ ನನ್ನ ಮಗನಿಗೆ ಬಾರದಿರಲಿ. ಅವನಿಗೆ ಒಳ್ಳೆಯದಾಗಲಿ...'
ತಕ್ಷಣವೇ ಅಮ್ಮನ ಕೈ ಹಿಡಿದು ಹಣೆಗೊತ್ತಿಕೊಂಡೆ. ಎಲ್ಲವನ್ನೂ ಎಂ.ಡಿ. ಅವರಿಗೆ ವಿವರಿಸುವ ಉದ್ದೇಶದಿಂದ ಸರಸರನೆ ಆಫೀಸಿನತ್ತ ನಡೆದೆ.

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವುದಿಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!