ದಾರಿ ತಪ್ಪುವ ಮಕ್ಕಳು, ದಿಕ್ಕೆಡುವ ಪಾಲಕರು, ಇಕ್ಕಟ್ಟಿನಲ್ಲಿ ಶಿಕ್ಷಕರು!
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಕ್ಕಳನ್ನು ಶಿಕ್ಷಿಸುವ ಕುರಿತಂತೆ ಇತ್ತೀಚೆಗೆ ಅಕ್ಷರ ಮಾಧ್ಯಮದಲ್ಲಿ ವಿಭಿನ್ನ ವಿಚಾರಗಳು ಮುಖಾಮುಖಿಯಾಗಿವೆ. ಇದಕ್ಕೆ ಚಾಲನೆ ಸಿಕ್ಕಿದ್ದು ಶಾಲೆಗಳಲ್ಲಿ ಮಕ್ಕಳ ದಂಡನೆಯ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಬಹುದೆಂಬ ಇಲಾಖೆಯ ಸಲಹೆಯಿಂದ. ಈ ಸಲಹೆ ಹಲವು ಭೂತಗಳು ಧುತ್ತನೆ ಎದ್ದು ಕೂರುವಂತೆ ಮಾಡಿದೆ. ಮಕ್ಕಳನ್ನು ಶಿಕ್ಷಿಸುವುದು ಅನಿವಾರ್ಯವೇ? ಒಂದು ಶಾಲೆಯ ತರಹೇವಾರಿ ಮಕ್ಕಳನ್ನೆಲ್ಲ ಪ್ರೀತಿ-ವಿಶ್ವಾಸ-ಸಲಹೆ-ಉಪದೇಶಗಳಿಂದಲೇ ತಿದ್ದುವುದು, ಗೆಲ್ಲುವುದು ಶಕ್ಯವೇ? ಇವೆಲ್ಲವೂ ಸೋತಾಗ ಏನು ಶಿಕ್ಷಕರಿಗೆ ಶಿಕ್ಷಿಸುವ ಅಧಿಕಾರವಿದೆಯೇ? ಇದ್ದರೆ ಎಷ್ಟರಮಟ್ಟಿಗೆ? ಶಿಕ್ಷಕರ ಅಪರಾಧ ಪೊಲೀಸ್ ಸ್ಟೇಷನ್ನಲ್ಲಿ ಪರಿಹಾರವಾಗಬೇಕಾದದ್ದೇ? ಆಮೇಲೆ ಮಕ್ಕಳ ಮುಂದೆ ಅಂಥ ಶಿಕ್ಷಕರ ಪಾಡೇನು? ಇದೇ ತರ್ಕವನ್ನು ಇನ್ನೊಂದು ಚೂರು ಬೆಳೆಸಿದರೆ, ಮಕ್ಕಳನ್ನು ಕೆಲವೊಮ್ಮೆ ಉಗ್ರವಾಗಿಯೇ ಶಿಕ್ಷಿಸುವ ತಂದೆ-ತಾಯಂದಿರ ವಿರುದ್ಧ ಯಾರಿಗೆ ದೂರು ನೀಡುವುದು ಎಂಬ ಪ್ರಶ್ನೆ ಏಳುತ್ತದೆ.
ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಇಂಥ ಪ್ರಶ್ನೆಗಳು ಕೂಡ ಸಾಧ್ಯ ಎಂಬುದು ನಮ್ಮ ಅರಿವಿಗೆ ಬಂದದ್ದೇ ಇತ್ತೀಚಿನ ಎರಡು ದಶಕಗಳಲ್ಲಿ. ಹಿಂದೆಂದೋ ಗುರುಕುಲ ಪದ್ಧತಿಯಿತ್ತಂತೆ. ಅದೀಗ ಒಂದು ಪ್ರತೀತಿ ಅಷ್ಟೇ. ಇಂದಿನ ರೆಸಿಡೆನ್ಶಿಯಲ್ ಶಾಲೆಗಳು, ಅವುಗಳ ಅಣಕಗಳು, ವ್ಯಂಗ್ಯಾವತಾರಗಳು. ಶಿಕ್ಷಣ ಕ್ಷೇತ್ರದ ಎಲ್ಲ ವ್ಯಾಧಿಗಳಿಗೆ ಗುರುಕುಲ ಪದ್ಧತಿಗೆ ಮರಳುವುದೇ ದಿವ್ಯೌಷಧ ಎನ್ನುವವರು ಕೂಡ ನೆನಪಿಡಬೇಕಾದ ಸಂಗತಿಯಿದೆ. ಶಿಕ್ಷೆಯ ದೃಷ್ಟಿಯಿಂದ ಹೇಳುವುದಾದರೆ, ಗುರುಕುಲ ಪದ್ಧತಿಯಲ್ಲೂ ಅದಿತ್ತು. ಅಂದಿನದು ಆತ್ಮವಿದ್ಯೆ. ಗುರುಸೇವೆಗೆ ಸರಿದೂಗುವ ವಿದ್ಯಾದಾನ ಅಂದಿನ ಪಠ್ಯಕ್ರಮ. ಶಿಷ್ಯನ ಗುಣಾವಗುಣಗಳಿಗೆ ತಕ್ಕಂತೆ ಗುರುಗಳು ಶಾಪಾನುಗ್ರಹಗಳನ್ನು ಕ್ಷಿಪ್ರ ನೀಡುತ್ತಿದ್ದರು. ಆ ಶಿಕ್ಷೆಯನ್ನು ಇಂದು ನೆನೆದರೇ ಮೈ ನಡುಗುತ್ತದೆ.
ನಾವು ಕಲಿಯುವಾಗಲಂತೂ ಶಿಕ್ಷೆ ನೀಡುವುದು ಶಿಕ್ಷಕರ ಮಾಮೂಲಿ (ಅಥವಾ ಖದೀಮಿ) ಹಕ್ಕೇ ಆಗಿತ್ತು. ಇದನ್ನು ಕುಟುಂಬದಿಂದ ಹಿಡಿದು ಯಾವ ನ್ಯಾಯಲಯದಲ್ಲೂ ಪ್ರಶ್ನಿಸುವಂತಿರಲಿಲ್ಲ. ನೀವು ಬೇಕಾದರೆ, ಯಾವುದೇ ಹಳ್ಳಿ ಅಥವಾ ಪುಟ್ಟ ಪಟ್ಟಣದ ಚರಿತ್ರೆಯನ್ನು ಗಮನಿಸಿ. ಅಲ್ಲೊಬ್ಬನೋ-ಕೆಲವರೋ ಶಾಲಾ ಮಾಸ್ತರರಿರುತ್ತಾರೆ. ಇಡೀ ಊರಿನ ಅಕ್ಷರಜ್ಞಾನಕ್ಕೆ, ಚಾರಿತ್ರ್ಯಕ್ಕೆ ಇವರು ಕಾರಣರಾದವರು. ಅವರು ಕೊಡುತ್ತಿದ್ದ ಉಗ್ರ ಶಿಕ್ಷೆಯನ್ನು ಜನ ಇಂದೂ ಭಯ-ಭಕ್ತಿಯಿಂದ ನೆನೆಯುತ್ತಾರೆ. ನಾವು ಮನುಷ್ಯರಾದದ್ದೇ ಆ ಮಾಸ್ತರರಿಂದ ಎಂಬ ಕೃತಜ್ಞತೆಯಲ್ಲಿ ಅವರ ಹೃದಯ ತುಳುಕುತ್ತದೆ. ಅಧ್ಯಯನ, ನಿಷ್ಠೆ, ಶಿಷ್ಯವಾತ್ಸಲ್ಯಕ್ಕೆ ಪ್ರತಿಯಾಗಿ ಮಾಸ್ತರ ಎಂಬ ಹೆಸರು ಪಡೆದಿದ್ದವರು ಅವರು.
ಕಾಲ ಬದಲಾಗಿದೆ. ಜೊತೆಗೆ ಶಿಕ್ಷಣ ಪ್ರಕ್ರಿಯೆ ಕೂಡ. ಕಾರಣ. ಶಿಕ್ಷೆಯ ವಿಧಾನ-ವ್ಯಾಖ್ಯಾನಗಳು ಬದಲಾಗಿದ್ದಷ್ಟೇ ಅಲ್ಲ, ಗಂಭೀರ ಚರ್ಚೆಗೆ, ವಿವಾದಕ್ಕೆ ಸಹ ಒಳಗಾಗಿವೆ. ಈ ವಿವಾದದ ವಿಚಾರಣೆಯಲ್ಲಿ ಮೊದಲು ಕಟಕಟೆಯಲ್ಲಿ ನಿಲ್ಲಬೇಕಾದವರು ಕೆಲವು ವ್ಯಗ್ರ ಮನೋವೃತ್ತಿಯ ಶಿಕ್ಷಕರೇ. ಕೆಲವು ಶಿಕ್ಷಕರು ಹೇಗೋ ಕೆಲ ವಿದ್ಯಾರ್ಥಿಗಳ ಬಗ್ಗೆ ಅಸಹನೆ ಮತ್ತು ಪೂರ್ವಾಗ್ರಹ ಬೆಳೆಸಿಕೊಂಡುಬಿಡುತ್ತಾರೆ. ಮಕ್ಕಳನ್ನು ಒಮ್ಮೊಮ್ಮೆ ನಿಷ್ಕಾರಣವಾಗಿ ಉಗ್ರವಾಗಿ ದಂಡಿಸುತ್ತಾರೆ. ಇಂಥ ಕ್ರೌರ್ಯರತಿಯನ್ನು ಎಂದೂ ಸಮರ್ಥಿಸಲಾಗದು. ಇದಕ್ಕೆ- ಪೊಲೀಸ್ ಸ್ಟೇಷನ್ನಲ್ಲಿ ಅಲ್ಲದಿದ್ದರೂ- ಒಂದು ಹಂತದಲ್ಲಿ ಕಡಿವಾಣ ಬೀಳಲೇಬೇಕು. ಶಿಕ್ಷಕರ ಈ ಮನೋವಿಕಾರಕ್ಕೆ ಆಡಳಿತ ಮಂಡಳಿಯ, ಶಾಲಾ ಮುಖ್ಯಸ್ಥರ ಮತ್ತು ಇಲಾಖೆಯ 'ಮಾರ್ಕ್ಸ್'ವಾದ ಕೂಡ ಒಮ್ಮೊಮ್ಮೆ ಕಾರಣವಾಗುತ್ತದೆ. ವಿದ್ಯಾರ್ಥಿಗಳನ್ನು ಅಂಕದ ಕೋಳಿಗಳನ್ನಾಗಿ ಮಾಡಲಾಗದ ಶಿಕ್ಷಕರ ಹತಾಶೆ ವಿದ್ಯಾರ್ಥಿಗಳ ದಂಡನೆಯಲ್ಲಿ ಪರ್ಯವಸಾನಗೊಳ್ಳುತ್ತದೆ.
ಶಿಕ್ಷಣ ಇಲಾಖೆ ಪೊಲೀಸ್ ಸ್ಟೇಷನ್ಗೆ ದೂರು ಕೊಡಲು ಸಲಹೆ ನೀಡಿದ್ದು ಉಗ್ರ ದೈಹಿಕ ದಂಡನೆಯ ಸಂದರ್ಭದಲ್ಲಿ ಎಂಬುದು ಸ್ವಯಂವೇದ್ಯ. ಆದರೆ ಕೆಲವರು ಅತಿರೇಕವಾದಿಗಳು. ಶಾಲೆಗಳಲ್ಲಿ ಉಗ್ರ ದಂಡನೆ ತಪ್ಪು ಎಂಬಲ್ಲಿಗೇ ಅವರು ನಿಲ್ಲುವುದಿಲ್ಲ. ಕ್ಲಾಸಿನಲ್ಲಿ ಎದ್ದು ನಿಲ್ಲಿಸಿದ್ದು, ಅನಧಿಕೃತ ಗೈರು ಹಾಜರಿಗೆ ಪಾಲಕರ ಚೀಟಿ ತರಲು ಹೇಳಿದ್ದು, ಮನೆಗೆಲಸ ಮಾಡದಿದ್ದಾಗ ಧ್ವನಿ ಏರಿಸಿ ಎಚ್ಚರಿಸಿದ್ದು, ಫಟಿಂಗ, ಕಳ್ಳ, ಮೂರ್ಖ, ಪೆದ್ದ, ಮೈಗಳ್ಳ ಇತ್ಯಾದಿ ಶಬ್ದಗಳನ್ನು ಉಪಯೋಗಿಸಿದ್ದು ಎಲ್ಲವೂ ಅವರಿಗೆ ಮಾನಸಿಕ ಹಿಂಸೆಯಾಗಿ ಕಾಣುವ ಸಾಧ್ಯತೆಯಿದೆ.
ಶಾಲೆಗಳಲ್ಲಿ ಕೊಡುವ ಚಿಕ್ಕಪುಟ್ಟ ಶಿಕ್ಷೆ ಕೂಡ ಪೊಲೀಸರ ಥರ್ಡ್ ಡಿಗ್ರಿ ದಂಡನೆಯಾಗಿ ಜನರಿಗೆ ಕಾಣುವಂತಾಗುವಲ್ಲಿ ಮನಃಶಾಸ್ತ್ರದ ಕೊಡುಗೆ ಧಾರಾಳವಾಗಿದೆಯೆನ್ನಬೇಕು. ಆದರೆ ಬಹಳಷ್ಟು ಸಲ ಇದನ್ನು ಮತ್ತೊಂದು ಅತಿರೇಕಕ್ಕೆ ಒಯ್ದು ನಿರ್ಭೀತಿಯ ಹೆಸರಿನಲ್ಲಿ ದಾರ್ಷ್ಟ್ಯವನ್ನು ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರವನ್ನು ಸಹಿಸಲಾಗದು. ಹಾಗೇನಾದರೂ ಆದರೆ ಮಕ್ಕಳು ದಾರಿ ತಪ್ಪುತ್ತಾರೆ.
ಮಕ್ಕಳನ್ನು ಶಿಕ್ಷಿಸುವುದು ಶಿಕ್ಷಕರಿಗೆ ಇಷ್ಟದ ಕೆಲಸವೇನೂ ಅಲ್ಲ. ಪಠ್ಯಕ್ರಮ ಮುಗಿಸುವುದಷ್ಟೇ ಆದರೆ (ಮುಗಿಸುವುದು, ಕಲಿಸುವುದಲ್ಲ) ಮಕ್ಕಳನ್ನು ಶಿಕ್ಷಿಸಿ ಅಪ್ರಿಯನಾಗುವ ಉಪದ್ವ್ಯಾಪ ಯಾರಿಗೆ ಬೇಕಾಗಿದೆ, ಹೇಳಿ ಮಕ್ಕಳ ಡಿಸ್ಕೋ ಡಾನ್ಸಿಗೇ ತಾಳ ಹಾಕುತ್ತ ಜನಪ್ರಿಯವಾಗಿಯೇ ಇರಬಹುದಲ್ಲ. ಅವರ ಲೋಪದೋಷಗಳನ್ನು ಕಂಡರೂ ಕಾಣದಂತೆ ಇರಬಹುದಲ್ಲ ಅಂಥ ಶಿಕ್ಷಕರೆಷ್ಟೋ ಹಾಯಾಗಿ ಇರುವುದನ್ನು ನಾವು ಕಾಣುತ್ತೇವೆ. ಆದರೆ ಇಲಾಖೆ ಮತ್ತು ಸಮಾಜ, ಶಿಕ್ಷಕರು ಭವಿಷ್ಯದ ನಾಗರಿಕರನ್ನು ಸೃಷ್ಟಿಸುವ ಪ್ರತಿ ಬ್ರಹ್ಮರೆಂದೇ ಪರಿಗಣಿಸಿದೆ. ಆದರೆ ಮಕ್ಕಳ ಗುಣ-ನಡತೆ ರೂಪಿಸುವ ಹೊಣೆಯನ್ನು-ಅದೆಷ್ಟು ಸಾಧ್ಯವಾಗಿದೆಯೋ ಗೊತ್ತಿಲ್ಲ- ಶಿಕ್ಷಕರಿಗೆ ವಹಿಸಿದೆ. ಆದ್ದರಿಂದ ತರಗತಿಯಲ್ಲಷ್ಟೇ ಅಲ್ಲ, ಹೊರಗೆ ಕೂಡ ಮಕ್ಕಳಿಗೆ ಶಿಕ್ಷಕರೇ ದಿಗ್ದರ್ಶಕರು. ಈ ಹೊಣೆ ನಿರ್ವಹಿಸುವುದಂತೂ ಶಿಕ್ಷಕರಿಗೆ ಇಕ್ಕಟ್ಟಿನ ಕೆಲಸವೇ. ಅಲ್ಪಸ್ವಲ್ಪ ನಿಷ್ಠುರತೆ ಇರದಿದ್ದರೆ ಅರಾಜಕತೆ ಕಟ್ಟಿಟ್ಟದ್ದು. ಹಾಗಾದಲ್ಲಿ ಇಲಾಖೆಯೂ ಸಹಿಸದು. ಪಾಲಕರೂ ಸಹಿಸರು, ಅಲ್ಲವೇ?
ಮಕ್ಕಳಿಗೆ ದಂಡನೆ ಕೊಡಲೇಬೇಕಾದಾಗ, ಅವರನ್ನು ದಂಡಿಸದೇ ಅವರ ಪಾಲಕರನ್ನು ಕರೆದು ಮಕ್ಕಳ ಬಗ್ಗೆ ತಿಳಿಸುವುದು ಇಲಾಖೆ ಶಿಕ್ಷಕರಿಗೆ ಕೊಡುವ ಸಲಹೆ. ಸಂಯುಕ್ತ ಪ. ಪೂ. ಕಾಲೇಜಿನ ಪ್ರಾಚಾರ್ಯನಾಗಿ ಕೆಲಸ ಮಾಡಿದ ನನ್ನ ಅನುಭವವನ್ನು ಇಲ್ಲಿ ಹೇಳಬೇಕು. ಪಾಲಕರನ್ನು ಶಾಲೆಗೆ ಕರೆದರೆ ಬರುವವರ ಸಂಖ್ಯೆ ತೀರ ಕಡಿಮೆ. ಮಕ್ಕಳನ್ನು ತರಗತಿಯಿಂದ ಹೊರಹಾಕಿ ಒತ್ತಡ ತಂದರೆ ಮಾತ್ರ ಕೆಲವರು ಬರುತ್ತಾರೆ. ಮೂಗು ಹಿಡಿದು ಬಾಯಿ ಕಳೆಸುವ ಪರಿ ಇದು. ಗ್ರಾಮಾಂತರ ಪ್ರದೇಶಗಳಲ್ಲಿ ಬಹುತೇಕ ಪಾಲಕರು ಮಕ್ಕಳನ್ನು ಸಾರಾಸಗಟು ಶಾಲೆಗೆ ದತ್ತು ನೀಡಿರುತ್ತಾರೆ. ಬರುವ ಪಾಲಕರಲ್ಲಿ ಕೆಲವರು, 'ಸರ್, ನೀವ್ ಬೇಕಾದ್ರೆ ಹೊಡೀರಿ, ಬಡೀರಿ. ನಮ್ಮ ತಕರಾರಿಲ್ಲ. ನಾವಂತೂ ಹೆಚ್ಚು ಕಲೀಲಿಲ್ಲ, ಇವನಾದ್ರೂ ನಾಲ್ಕಕ್ಷರ ಕಲೀಲಿ' ಎನ್ನುವ ಸಂಪೂರ್ಣ ಶರಣಾಗತಿಗೆ ಹೋಗುತ್ತಾರೆ.
ದಾರಿ ಇದೆ. ಇದ್ದೇ ಇದೆ. ಶಿಕ್ಷೆಯನ್ನು ಶಿಕ್ಷೆ ಎನಿಸದ ಹಾಗೆ ಕೊಡುವುದು. ಹಾಗೆ ನೋಡಿದರೆ, ಶಿಕ್ಷಕರು ಕೊಡುವ ಶಿಕ್ಷೆ ಶಿಕ್ಷೆಯೇ ಅಲ್ಲ. ಅದೊಂದು ತೀವ್ರ ಹಿತಾಕಾಂಕ್ಷೆ. ಇಜ್ಝಟ್ಜಿ ್ಛ್ಠ್ಡಜಟ ಡ್ಟಿ ಛಿಜ ್ಞ್ಝಟಿಜ ಎನ್ನುವುದಿಲ್ಲವೇ? ಹಾಗೆ. ಪ್ರೀತಿ-ವಿಶ್ವಾಸ ಸೋತಲ್ಲಿ ಶಿಕ್ಷಕರ ಎಚ್ಚರಿಕೆಯ ತೋರುಬೆರಳು, ಕಟುಮಾತು, ವ್ಯಗ್ರ ಕಣ್ಣೋಟ, ಆಗೀಗ ಕೊಡುವ ಲಗುವಾದ ದೈಹಿಕ ಶಿಕ್ಷೆ ಮಕ್ಕಳನ್ನು ಸರಿದಾರಿಗೆ ತರಬಲ್ಲದು. ಮೊದಲೇ ಹೇಳಿದಂತೆ, ಇದು ಕೂಡ ಅಸಾಧ್ಯ. ಶಿಕ್ಷೆ ಎಂದು ಮಕ್ಕಳಿಗೆ-ಪಾಲಕರಿಗೆ ಅನ್ನಿಸಿದರೆ ದುರದೃಷ್ಟಕರ. ಆಗ ಶಾಲೆಗಳನ್ನು ದೇವರೇ ಕಾಪಾಡಬೇಕು. ಶಿಕ್ಷೆ ಶಿಕ್ಷೆಯ ಹಾಗೆ ಅನಿಸದಿರಲು ಶಿಕ್ಷಕರ ಕಡೆಯಿಂದ ಈ ಕೆಲವು ಸುರಕ್ಷಾ ಕವಚಗಳು ಇರಬೇಕು. ಒಂದು, ಶಿಕ್ಷೆಯ ಹಿಂದೆ ಪ್ರೀತಿಯಿರಬೇಕು, ದ್ವೇಷವಲ್ಲ. ಅದನ್ನು ಕೊನೆಯ ಅಸ್ತ್ರವಾಗಿ ಬಳಸಬೇಕು. ಎರಡು, ಶಿಕ್ಷಕರು ವಿಷಯ ತಜ್ಞರಾಗಿ ನಿಷ್ಕಳಂಕರಾಗಿ ಸಾಮಾಜಿಕ ಗೌರವ ಪಡೆದಿರಬೇಕು. ಮೂರು, ಅವರು ಜಾತ್ಯತೀತ, ಸಕಲ ಕೋಮು ಸ್ನೇಹಿಗಳಾಗಿರಬೇಕು. ನಾಲ್ಕು, ಎಂದೂ ಜಾತಿ-ಮತ-ವೃತ್ತಿ-ಪ್ರದೇಶವಾಚಕ ಬೈಗುಳ ಬಳಸಬಾರದು. ಐದು, ವೇತನಕ್ಕೆ ಸರಿದೂಗುವ ಕೆಲಸ- ಈ ಸಮೀಕರಣ ಮುರಿಯಬೇಕು. ಶಿಕ್ಷಕರು ತಮ್ಮ ಬಗ್ಗೆ ವಿಶೇಷ ಕಾಳಜಿ-ಕಳಕಳಿ ತೋರುತ್ತಿದ್ದಾರೆಂದು ವಿದ್ಯಾರ್ಥಿಗಳಿಗೆ ಮನವರಿಕೆಯಾಗುವಷ್ಟು ನಿಷ್ಠೆಯ ನಿಷ್ಕಾಮ ಕೆಲಸ ಮಾಡಬೇಕು. ಆರು, ಶಿಕ್ಷಕರು ತಮ್ಮ ಬತ್ತಳಿಕೆಯ ಕೊಟ್ಟ ಕೊನೆಯ ಅಸ್ತ್ರವನ್ನು ಎಂದೂ ಬಳಸತಕ್ಕದ್ದಲ್ಲ. ಅದು ಹಾವಾಡಿಗನ ಪೆಟ್ಟಿಗೆಯ ಹಾವಿನಂತೆ ಎಂದೆಂದೂ ರಹಸ್ಯವಾಗಿಯೇ ಇರಬೇಕು. ಮುಚ್ಚಳ ತೆಗೆದರೆ ಕೆಲಸ ಕೆಟ್ಟಿತು. ಎಲ್ಲ ಬಯಲಾಗಿ ಬಿಡುತ್ತದೆ. ಮುಚ್ಚಿರುವ ವರೆಗೆ ಭಯ-ಭಕ್ತಿ ಹೆಚ್ಚು.
ಇಂಥ ಶಿಕ್ಷಕರು ಕೊಡುವ ಸಾಧಾರಣ ಎಂಥ ಶಿಕ್ಷೆಯನ್ನಾದರೂ ಮಕ್ಕಳು ತಮ್ಮ ಭವಿಷ್ಯದ ಶ್ರೀರಕ್ಷೆ ಎಂದೇ ತಿಳಿಯುತ್ತಾರೆ. ಪಾಲಕರು ಉಪಕಾರ ಎಂದೇ ಭಾವಿಸುತ್ತಾರೆ.
- ಡಾ. ವಿ.ಎನ್. ಹೆಗಡೆ
ಧಾರವಾಡ