ಪಾಕಿಸ್ತಾನ ಎಂದಿಗೂ ಬದಲಾಗದು!
ಪಾಕಿಸ್ತಾನದ ಚುನಾವಣಾ ಸಮಯದಲ್ಲಿ ಬಹುತೇಕ ವಿದೇಶಿ ಪತ್ರಕರ್ತರು ಪಾಕಿಸ್ತಾನದ ಮಿಲಿಟರಿ ಪುಸ್ತಕಗಳಲ್ಲಿರುವುದನ್ನೇ ಉರುಹೊಡೆದು ಭವಿಷ್ಯದ ಬಗ್ಗೆ ಊಹೆ ಮಾಡುತ್ತಿದ್ದರು. ಆದರೆ ಇಬ್ಬರು ಮಾತ್ರ ಮುಂದೇನೋ ಅಪಾಯ ಕಾದಿದೆ ಎನ್ನುವುದರ ಬಗ್ಗೆ ಸಣ್ಣ ಸುಳಿವು ನೀಡಿದರು.
ಮೊದಲನೆಯವರು, ನ್ಯೂಯಾರ್ಕ್ ಟೈಮ್ಸ್ನ ಸುದ್ದಿಗಾರ ಡೆಕ್ಲನ್ ವಾಲ್ಶ್. ಇವರು 2011ರಲ್ಲಿ 'ಸೀಕ್ರೆಟ್ ವಾರ್ ಇನ್ ಬಲೂಚಿಸ್ತಾನ್'(ಬಲೂಚಿಸ್ತಾನದಲ್ಲಿ ರಹಸ್ಯ ಯುದ್ಧ) ಎನ್ನುವ ಲೇಖನದಲ್ಲಿ ಪಾಕಿಸ್ತಾನದ ಹಲವಾರು ಹಳವಂಡಗಳನ್ನು ಹೊರಗೆಡವಿದ್ದರು. ಅವರನ್ನು ಕಳೆದ ತಿಂಗಳು ಗಡಿಪಾರು ಮಾಡಲಾಯಿತು. ದೇಶ ತೊರೆಯುವಂತೆ ಆದೇಶ ನೀಡಿದ್ದ ಪತ್ರದಲ್ಲಿ, ಡೆಕ್ಲನ್ 'ಅನಪೇಕ್ಷಿತ ಚಟುವಟಿಕೆಗಳಲ್ಲಿ' ತೊಡಗಿದ್ದಾರೆ ಎಂದು ಹೇಳಲಾಗಿತ್ತು. ಮತ್ತೊಬ್ಬರು, ಮೆಹ್ರಾನ್ ಮರ್ರಿ. ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯಲ್ಲಿ ಇವರು ಬಲೋಚಿಸ್ತಾನದ ಪ್ರತಿನಿಧಿ. ಇತ್ತೀಚೆಗೆ ಅವರು ಟ್ವಿಟರ್ನಲ್ಲಿ ಗಂಭೀರ ಸಂದೇಶವೊಂದನ್ನು ಬರೆದಿದ್ದರು: 'ಬಲೋಚಿಸ್ತಾನ, ಸಿಂಧ್ ಮತ್ತು ಖೈಬರ್-ಪುಖ್ತುನ್ಖ್ವಾ(ಕೆಪಿ)ದಲ್ಲಿ ಯಾವ ಇಸ್ಲಾಮಿ ಗುಂಪು ಆಡಳಿತ ನಡೆಸಲಿದೆ ಎಂದು ನಿರ್ಧರಿಸುವುದಕ್ಕಾಗಿ ಪಂಜಾಬ್ನಲ್ಲಿ(ಪಾಕಿಸ್ತಾನದ ಮಿಲಿಟರಿ ನೆಲೆ) ನಾಳೆ ಚುನಾವಣೆ ನಡೆಯಲಿದೆ'
------
ಡೆಕ್ಲನ್ ಅವರ 'ಅನಪೇಕ್ಷಿತ ಚಟುವಟಿಕೆಗಳು' ಬಗ್ಗೆ ನಮಗೆ ಗೊತ್ತಿಲ್ಲವಾದರೂ, ಮೆಹ್ರಾನ್ರ ಟ್ವೀಟ್ನಲಿ ಮಾತ್ರ ಕಟು ಸತ್ಯವಡಗಿದೆ. ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಪಾಕಿಸ್ತಾನದ ಸಂಪೂರ್ಣ ಹಿಡಿತ ಪಂಜಾಬ್ನ ಕೈ ಸೇರಿದೆ. ಪ್ರಧಾನ ಮಂತ್ರಿ ನವಾಜ್ ಶರೀಫ್, ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಅಶ್ಫಕ್ ಪರ್ವೇಜ್ ಕಯಾನಿ ಮತ್ತು ಸುಪ್ರೀಮ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರ ತವರು ಪಂಜಾಬ್. ಸದ್ಯಕ್ಕೆ ಪಾಕಿಸ್ತಾನದಲ್ಲಿ ಯಾವ ರಾಷ್ಟ್ರೀಯ ಪಕ್ಷವೂ ಇಲ್ಲ. ಮೆಹ್ರಾನ್ನೊಂದಿಗೆ ನಾನು ಮಾತಾಡಿದಾಗ, ಅಧಿಕಾರದ ಚುಕ್ಕಾಣಿ ಇಂದಿಗೂ ಪಾಕಿಸ್ತಾನಿ ಮಿಲಿಟರಿ ಕೈಯಲ್ಲಿಯೇ ಇದೆ ಎಂದಾತ ಹೇಳಿದ. 'ಭಾರತದ ವ್ಯಾಪಾರ ಮತ್ತು ಸಂಸ್ಕೃತಿಯ ಬೆಳವಣಿಗೆಯ ಹಾದಿತಪ್ಪಿಸಿ, ಅಂತಾರಾಷ್ಟ್ರೀಯ ವಲಯದಲ್ಲಿನ ಅದರ ಗೆಳೆತನಗಳನ್ನು (ಅಮೆರಿಕ ಒಳಗೊಂಡು) ಹಾಳು ಮಾಡಲು ಅದು ನವಾಜ್ ಶರೀಫ್ ಅವರನ್ನು ಬಳಸಿಕೊಳ್ಳಲಿದೆ' ಎನ್ನುತ್ತಾರೆ ಮೆಹ್ರಾನ್. 'ಶರೀಫ್ ಅವರ ಶಾಂತಿ ಮುಖವಾಡಕ್ಕೆ ಇಡೀ ಪ್ರಪಂಚ ಮಾರುಹೋಗಿರುವ ಸಮಯದಲ್ಲಿ, ಪಾಕಿಸ್ತಾನಿ ಸೇನೆ ದೇಶದ ಪಶ್ಚಿಮ ಭಾಗದಲ್ಲಿ ತನ್ನ ಕೆಲಸವನ್ನು ಚುರುಕುಗೊಳಿಸಿದೆ. ಕಟ್ಟರ್ಪಂಥೀಯರಿಂದ ಆಯ್ಕೆಯಾದ ಕೆಪಿಸರ್ಕಾರ ಮತ್ತು ಬಲೂಚಿಸ್ತಾನದ ಕೈಗೊಂಬೆ ಸರ್ಕಾರಗಳನ್ನು ಬಳಸಿಕೊಂಡು, 2014ರಲ್ಲಿ ಅಮೆರಿಕ ಸೇನೆ ಕಾಬೂಲ್ನಿಂದ ಹೊರಟಾಕ್ಷಣ ಅಲ್ಲಿ ತಾಲಿಬಾನನ್ನು ಮತ್ತೆ ಗಟ್ಟಿಗೊಳಿಸಬೇಕು ಎಂದು ಸಿದ್ಧತೆ ನಡೆಸಿದೆ.' ತಾಲಿಬಾನಿ ಉಗ್ರರು ಕೆಪಿಯಲ್ಲಿ ಆಡಳಿತ ನಡೆಸುತ್ತಿದ್ದ ಜಾತ್ಯತೀತ ಎಎನ್ಪಿ ಪಕ್ಷದ ಮೇಲೆ ನಿರಂತರವಾಗಿ ದಾಳಿ ನಡೆಸಿದರು. ಇದನ್ನೆಲ್ಲ ನೋಡಿಕೊಂಡೂ ಪಾಕಿಸ್ತಾನಿ ಸೇನೆ ಸುಮ್ಮನಿತ್ತು. ಉಗ್ರರ ಪರ ಅಲೆ ಆ ಭಾಗದಲ್ಲಿ ಹೆಚ್ಚಾಯಿತಾದ್ದರಿಂದ ಸಂಸತ್ತಿನಲ್ಲಿ ಎಎನ್ಪಿ ಪಕ್ಷ ತನ್ನೆಲ್ಲಾ ಸ್ಥಾನಗಳನ್ನು ಕಳೆದುಕೊಂಡಿತು. ಜಿಹಾದಿ ಉಗ್ರರು ದುಷ್ಕೃತ್ಯಕ್ಕೆ 2008ರಿಂದ ಇಲ್ಲಿಯವರೆಗೂ ಸುಮಾರು 700 ಎಎನ್ಪಿ ಸದಸ್ಯರು ಮೃತಪಟ್ಟಿದ್ದಾರೆ. ಈಗ ಈ ಬೂದಿಯಿಂದಲೇ ಎದ್ದು ಬಂದಿದ್ದಾರೆ ತಾಲಿಬಾನಿ ಸ್ನೇಹಿ ಇಮ್ರಾನ್ ಖಾನ್! ಜಾತ್ಯತೀತ ಪಕ್ಷಗಳು ಮುಜುಗರ ಅನುಭವಿಸಿದ್ದು ಕೇವಲ ಕೆಪಿಯಲ್ಲಷ್ಟೇ ಅಲ್ಲ. ಬಲೂಚಿಸ್ತಾನದಲ್ಲೂ ಅವರಿಗೆ ಇಂಥದ್ದೇ ಪರಿಸ್ಥಿತಿ ಎದುರಾಯಿತು.
ಇನ್ನು ಡೆಕ್ಲನ್ ವಾಲ್ಶ್ ಅವರನ್ನು ದೇಶದಿಂದ ಏಕೆ ಹೊರದೂಡಲಾಯಿತು ಎನ್ನುವುದು ನಮಗೆ ಸ್ಪಷ್ಟವಾಗಿ ಗೊತ್ತಿಲ್ಲವಾದರೂ, ಅವರು 2011ರಲ್ಲಿ ಹೇಗೆ ಪಾಕಿಸ್ತಾನಿ ಸೇನೆ ಉಗ್ರವಾದಿಗಳ ಅಟ್ಟಹಾಸವನ್ನು ಸಹಿಸಿಕೊಳ್ಳುತ್ತಾ ಸುಮ್ಮನಿದೆ ಎನ್ನುವ ವಿಷಯವನ್ನು ಹೊರಗೆಡವಿ, ಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನುವುದಂತೂ ಸತ್ಯ. ಬಲೂಚಿಸ್ತಾನದ ಬಗ್ಗೆ 'ದಿ ಗಾರ್ಡಿಯನ್' ಪತ್ರಿಕೆಗೆ ಡೆಕ್ಲನ್ ಬರೆದ ಲೇಖನದ ಮೊದಲ ಪ್ಯಾರಾ ಹೀಗಿದೆ:
'ದಿನವೂ ಇಲ್ಲಿ ಹೆಣಗಳು ಬಂದು ಬೀಳುತ್ತವೆ. ಕೆಲವೊಮ್ಮೆ ನಿರ್ಜನ ಬೆಟ್ಟದ ತಪ್ಪಲಿನಲ್ಲಿ ಮತ್ತು ಕೆಲವೊಮ್ಮೆ ರಸ್ತೆಯಂಚಿನಲ್ಲಿ. ಅವೆಲ್ಲ ಮಾನವನ ನಿರ್ದಯ ಗುಣಕ್ಕೆ ರೂಪಕವೆಂಬಂತೆ ಕಾಣುತ್ತವೆ. ತುಂಡಾದ ಕೈಕಾಲು, ಬಾತುಹೋದ ಮುಖ, ವಿದ್ಯುತ್ ಶಾಕ್ನಿಂದ ಸುಟ್ಟುಹೋದ ಜನನಾಂಗಗಳು....ಎಲ್ಲಾ ದೇಹಗಳ ಹಣೆಯಲ್ಲಿ ಗುಂಡಿನ ಗುರುತು ಮಾತ್ರ ಸ್ಪಷ್ಟವಾಗಿ ಕಾಣಿಸುತ್ತದೆ' ಡೆಕ್ಲನ್ ಮತ್ತು ಮೆಹ್ರಾನ್, ಇಸ್ಲಾಮಾಬಾದ್ನ ಇನ್ಯಾವುದೇ ಪತ್ರಕರ್ತ ಹೇಳಲು ಹಿಂಜರಿಯುವ ವಿಷಯವನ್ನು ಧೈರ್ಯವಾಗಿ ಹೇಳಿದ್ದಾರೆ.
ನವಾಜ್ ಷರೀಫ್ರ ಸರ್ಕಾರ ಬಂದ ನಂತರ ಪಾಕಿಸ್ತಾನದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ ಎಂದು ಕಥೆ ಹುಟ್ಟಿಸಲಾಗುತ್ತಿದೆ. ಆಗ ಪಾಕಿಸ್ತಾನ ಅಷ್ಟು ಬೇಗ ಬದಲಾಗುವಂಥದ್ದಲ್ಲ!
-ತಾರೀಖ್ ಫತಾ