-ಆಟ ಆಡ್ಕೊಂಡು, 'ಆಟೋಗ್ರಾಫ್' ಕೊಟ್ಕೊಂಡ್ ಆರಾಮಾಗಿರೋ ವಯಸ್ಸಲ್ಲಿ ಈ 'ಸೈನ್' ಲ್ಯಾಂಗ್ವೇಜ್ ಸಹವಾಸ ಬೇಕಿತ್ತಾ?
ಏನ್ ಮಾಡೋದು ನೋಡಿ, ಈಗ ಕಡೆಗೆ ಐಪಿಎಲ್ ಮತ್ತು ಇಂಡಿಯನ್ ಟೀಮ್‌ಗೆ 'ರಿಸೈನ್' ಮಾಡೋ ಪರಿಸ್ಥಿತಿ ಬಂದ್‌ಬಿಡ್ತು.
-ಸರಿ, ನಿಮ್ಮ ಮೇಲೆ ಫಿಕ್ಸಿಂಗ್ ಆರೋಪ ಬಂದಿದೆ. ನಿಮ್ಮ ಪರ್ಫಾಮೆನ್ಸ್ ಮೂಲಕ ಎಲ್ಲರ ಟೀಕೆಗಳನ್ನು 'ಶಾಂತ' ಮಾಡೋಕಂತೂ ಆಗಲ್ಲ, ಬೇರೇನ್ ಮಾಡ್ತೀರಾ?
'ಬುಕ್ ಮೈ ವಿಕೆಟ್ಸ್' ಅಂತ ವೆಬ್‌ಸೈಟ್ ಶುರು ಮಾಡೋಣಾಂತಿದೀನಿ. ಆ್ಯಕ್ಚುಯಲೀ, ನಾನೇನೂ ಮಾಡ್ಲಿಲ್ಲ. ಫಾರ್ಮ್‌ನಲ್ಲಿ ಇಲ್ಲದ ಬ್ಯಾಟ್ಸ್‌ಮನ್ ತನ್ನ ಮೇಲಿನ ಟೀಕೆಗಳಿಗೆ ಬ್ಯಾಟಿನಿಂದಲೇ ಉತ್ತರ ಕೊಡೋ ಥರಾ ನಾನು ಕೈ ಬಾಯಿ ಸನ್ನೆ ಮಾಡಿ ಬುಕ್ಕಿಗಳಿಗೆ ಉತ್ತರ ಕೊಟ್ಟೆ ಅಷ್ಟೆ. ನಿಜ ಹೇಳ್‌ಬೇಕಂದ್ರೆ, ಇದೆಲ್ಲ ಧೋನಿ ಕಿತಾಪತಿ.
-ಓ.. ಇಂಡಿಯನ್ ಟೀಮ್‌ಗೆ ನೀವೇ ಕ್ಯಾಪ್ಟನ್ ಆಗ್‌ಬೇಕಿತ್ತು ಬಿಡಿ. ಅದಕ್ಕೇನಾ, ಈ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ತಗೊತೀರ ಅಂದ್ಕೊಂಡ್ರೆ, ನಿಮ್ಮನ್ನ ನಂಬ್‌ಕೊಂಡವರಿಗೇ ಕ್ಯಾಪ್ ಹಾಕಿ 'ಕ್ಯಾಪ್' ಟನ್ ಆಗ್‌ಬಿಟ್ಟಿದ್ದು?
ಏನ್ ಮಾಡೋದು, ಇಂಡಿಯಾ ಟೀಮಲ್ಲಿ ಬೌಲರ್ ಜಾಗಕ್ಕೆ ಕರ್ಚೀಫ್ ಹಾಕಿದ್ದು ಉಪಯೋಗ ಆಗಲಿಲ್ಲ, ಅದಕ್ಕೆ ಟವೆಲ್ ಯೂಸ್ ಮಾಡ್ದೆ. ಅದೂ ವರ್ಕ್ ಔಟ್ ಆಗ್‌ಲಿಲ್ಲ.
-ಅದ್ಸರಿ, ಸಾಮಾನ್ಯವಾಗಿ, ಪ್ರತಿಯೊಬ್ಬ ಯಶಸ್ವಿ ಗಂಡಸಿನ ಹಿಂದೆ ಒಬ್ಬ ಹೆಂಗಸು ಇರ್ತಾಳಂತೆ. ಆದ್ರೆ ಇದೇನು, ನಿಮ್ಮನ್ನ ಅರೆಸ್ಟ್ ಮಾಡೋ ಟೈಮಲ್ಲೂ ಕಾರಿನ ಹಿಂದಿನ ಸೀಟಲ್ಲಿ ಹುಡುಗೀರಿದ್ರಂತೆ?
ಅಯ್ಯೋ ಅಭಿಮಾನಿಗಳು ಅಂದ ಮೇಲೆ 'ಹಿಂದೆ ಬೀಳೋದು' ಸಹಜ. ಅದನ್ನೆ ಪೊಲೀಸ್ನವ್ರು ತಪ್ಪು ತಿಳ್ಕೊಂಡ್ರೆ ನಾನೇನ್ ಮಾಡ್ಲಿ.
-ಆಗ ಹರ್‌ಭಜನ್ ಮಾತ್ರ ನಿಮ್ಮ ಕೆನ್ನೆಗೆ ಹೊಡೆದಿದ್ರು, ಈಗ ನಿಮ್ಮ ಆಟನಾ ಇಷ್ಟು ದಿನ ಸೀರಿಯಸ್ ಆಗಿ ನೋಡಿದ ಎಲ್ಲ ಜನರೂ ಕೆನ್ನೆಗೆ ಹೊಡೀಯೋಕೆ ಕ್ಯೂ ನಿಂತಿದಾರಲ್ಲ?
ಹಂಗೆಲ್ಲಾ ಏನಿಲ್ಲ, ನೋಡ್ತಾ ಇರಿ. ನಾನು ನಿರಪರಾಧಿ ಅಂತ ಗೊತ್ತಾದ್‌ಮೇಲೆ ಅದೇ ಜನ ನನಗೆ ಟವೆಲ್ ಹೊದಿಸಿ ಸನ್ಮಾನ ಮಾಡ್ತಾರೆ.
ಒಮ್ಮೆ ಭೇಟಿ ಕೊಡಿ
ಸ್ಮಾರ್ಟ್‌ಪೋನ್‌ಗಳಲ್ಲಿನ ಅಪ್ಲಿಕೇಶನ್‌ಗಳನ್ನು ಬಳಸುವುದು ಎಲ್ಲರಿಗೂ ಗೊತ್ತು. ಆದರೆ, ಆ್ಯಂಡ್ರಾಯ್ಡ್‌ನ ಗೂಗಲ್ ಪ್ಲೇ ರೀತಿಯ ವೆಬ್‌ಸೈಟ್‌ಗಳಲ್ಲಿ ಅಪ್ಲಿಕೇಶನ್‌ಗಳ ಜೊತೆ ಆಟ ಆಡುವುದಕ್ಕಷ್ಟೇ ಸೀಮಿತವಾಗದೆ, ಅಂಥ ಅಪ್ಲಿಕೇಶನ್‌ಗಳನ್ನು ಬಿಲ್ಡ್ ಮಾಡುವುದನ್ನೂ ಕಲಿತರೆ ಒಂದಿಷ್ಟು ಹಣವನ್ನೂ ಗಳಿಸಬಹುದು. ಆರಂಭದ ಹಂತದಲ್ಲಿ ಒಂದು ಸಿಂಪಲ್ ಆದ ಮೊಬೈಲ್ ಅಪ್ಲಿಕೇಶನ್ ಅನ್ನು ತಯಾರಿಸುವುದು ಹೇಗೆ ಎಂಬಲ್ಲಿಂದ ಹಿಡಿದು ಇಲ್ಲಿ ಈ ಬಗ್ಗೆ ವಿವರಗಳಿವೆ.
-bit.ly/pMVMyH n bit.ly/Z3mvGM n bit.ly/m80LjO n bit.ly/JDS7VL n bit.ly/VrOUy2
ಹರಿ-ಕಥೆ
ಶ್ರೀಮಂತನೊಬ್ಬ ದೋಣಿಯಲ್ಲಿ ವಿದೇಶಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿದ. ಆದರೆ ದಾರಿ ಗೊತ್ತಿರಬೇಕಲ್ಲ ಎಂಬ ಕಾರಣಕ್ಕೆ ಒಬ್ಬ ಗೈಡ್ ಅನ್ನು ಹುಡುಕುತ್ತಿದ್ದ. 'ನಾನು ಇಂಡಿಯಾದಲ್ಲೇ ಬೆಸ್ಟ್ ಗೈಡ್' ಎಂದು ಹೇಳಿಕೊಂಡುವ ಬಂದವನೊಬ್ಬನ್ನು ಆಯ್ಕೆ ಮಾಡಿಕೊಂಡು ದೋಣಿಯಲ್ಲಿ ಪ್ರವಾಸ ಹೊರಟ ಶ್ರೀಮಂತ. ಈ ಶ್ರೀಮಂತನಿಗೆ ಕುಡಿಯುವ ಚಟ. ಹಾಗಾಗಿ ದೋಣಿಯ ತುಂಬಾ ಸಾಕಷ್ಟು ಬಿಯರ್ ಬಾಟಲ್‌ಗಳನ್ನು ಸ್ಟಾಕ್ ಇಟ್ಟುಕೊಂಡಿದ್ದ. ಹೊರಟ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಸಮುದ್ರ ನೋಡುತ್ತಾ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದ ಶ್ರೀಮಂತ. ಕೆಲವು ದಿನಗಳ ನಂತರ ಒಂದು ದಿನ ರಾತ್ರಿ ದೋಣಿ ನಡೆಸುವವ 'ದಾರಿ ಗೊತ್ತಾಗ್ತಾ ಇಲ್ಲ' ಎಂದ. ಗೈಡ್‌ನನ್ನು ಕೇಳಿದ್ದಕ್ಕೆ 'ನನಗೂ ಗೊತ್ತಾಗ್ತಿಲ್ಲ' ಅಂದ. 'ಮತ್ತೆ, ಇಂಡಿಯಾದಲ್ಲೇ ಬೆಸ್ಟ್ ಗೈಡ್ ಅಂತ ಹೇಳ್ಕೊಂಡೆ' ಎಂದು ಶ್ರೀಮಂತ ಕೇಳಿದ್ದಕ್ಕೆ 'ಹೌದು ಆದರೆ ಈಗ ನಾವು ಇಂಡಿಯಾ ಬಿಟ್ಟು ಶ್ರೀಲಂಕಾ ಗಡಿಯಲ್ಲಿದ್ದೇವಲ್ಲಾ' ಎಂದು ಮಾರುತ್ತರ ಬಂತು. ಶ್ರೀಮಂತನಿಗೆ ಸಿಟ್ಟು ಬಂದು ಬಾಟಲಿಗೆ ಕೈ ಹಾಕಿದರೆ ಅಲ್ಲಿ ಬಿಯರ್ ಕೂಡಾ ಖಾಲಿಯಾಗಿತ್ತು. ಅವನಿಗೆ ದಾರಿ ತಪ್ಪಿದುದಕ್ಕಿಂತ ಈಗ ಬಿಯರ್‌ನ ಯೋಚನೆ ಹೆಚ್ಚಾಯ್ತು. ಅಷ್ಟರಲ್ಲೇ ಸಮುದ್ರದಲ್ಲಿ ಒಂದು ಅಲ್ಲಾವುದ್ದೀನನ ದೀಪ ತೇಲಿ ಬಂತು. ಅದನ್ನು ತೆಗೆದುಕೊಂಡ ಶ್ರೀಮಂತ ಅದನ್ನು ಉಜ್ಜಿದ. ಅಲ್ಲಾವುದ್ದೀನ್ ಹೊರಬಂದು 'ನಿನಗೇನು ಬೇಕು?' ಎಂದು ಕೇಳಿದ. ಅದಕ್ಕೆ ಶ್ರೀಮಂತ ಈ ಇಡೀ ಸಮುದ್ರದಲ್ಲಿ ನೀರಿನ ಬದಲು ಬಿಯರ್ ಇರುವಂತೆ ಮಾಡು ಎಂದ. ಏನೋ ಹೇಳಲು ಬಾಯಿ ತೆರೆದ ಗೈಡ್‌ನ ಬಾಯಿ ಮುಚ್ಚಿಸಿದ ಶ್ರೀಮಂತ. ನಂತರ ಅಲ್ಲಾವುದ್ದೀನ್ ಮಾಯವಾದ. ಸಮುದ್ರದ ನೀರೆಲ್ಲ ಬಿಯರ್ ಆಯಿತು. ಶ್ರೀಮಂತ ಫುಲ್ ಖುಷ್. ಆಗ ಮೆಲ್ಲನೆ ಗೈಡ್ ಬಾಯಿತೆರೆದ 'ಅಲ್ರೀ, ಇಡೀ ಸಮುದ್ರದ ನೀರನ್ನ ಬಿಯರ್ ಮಾಡಿದ್ರಲ್ಲ, ಇನ್ಮೇಲೆ ದೋಣಿ ಒಳಗೆ ಮಾತ್ರ 'ಸುಸ್ಸು' ಮಾಡಬೇಕಾಗುತ್ತೆ, ನೆನಪಿರಲಿ?
ಸ್ಕ್ಯಾಂಡಲ್‌ವುಡ್
ಕಿರುತೆರೆಯ ರಿಯಾಲಿಟಿ ಶೋಗಳಲ್ಲಿನ ಮಾತುಗಳಷ್ಟೇ ಹೆಚ್ಚು ಮಾತು, ಅವುಗಳ ಬಗೆಗೆ ಮಾತನಾಡುವರ ಬಾಯಲ್ಲೂ ಕೇಳಿಬರುತ್ತಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಬಿಗ್‌ಬಾಸ್ ಬಗೆಗೆ ಶಿವರಾಜ್‌ಕುಮಾರ್ ಆಡಿರುವ ಮಾತು. ಆದರೆ ಇತ್ತೀಚೆಗೆ ಸುದೀಪ್ ಕಾಲು ಕೆರೆದುಕೊಂಡು 'ನನ್ನದು ಆರಾಮಾಗಿ ಕೂತ್ಕೊಂಡು ನಡೆಸೆಕೊಡುವ ರಿಯಾಲಿಟಿ ಶೋ ಅಲ್ಲ' ಎನ್ನುತ್ತಾ ಕೋಟ್ಯಾಧಿಪತಿಗೆ ಟಾಂಗ್ ಕೊಟ್ಟಿದ್ದರು. ಅದಕ್ಕೆ ಉತ್ತರ ಎನ್ನುವಂತಲ್ಲದಿದ್ದರೂ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಕ್ಯಾಷುವಲ್ ಆಗಿ 'ನೀವು ಬಿಗ್‌ಬಾಸ್ ನೋಡ್ತೀರಾ?' ಎಂದು ಕೇಳಿದಾಗ 'ನಾನು ಯಾವ್ ಬಿಗ್‌ಬಾಸ್, ಸ್ಮಾಲ್ ಬಾಸ್‌ನೂ ನೋಡಲ್ಲ. ಹಿಂದಿಯಲ್ಲಿ ಬರುವಾಗಲೂ ನೋಡಿಲ್ಲ, ಕನ್ನಡದಲ್ಲೂ ನೋಡಲ್ಲ. ಅಲ್ಲದೆ ಯಾಕೆ ನೋಡಬೇಕು ಹೇಳಿ. ಯಾರೋ ಒಂದಷ್ಟು ಜನರ ಸಣ್ಣಬುದ್ಧಿಗಳು, ಜಗಳ, ಕಿರಿಕಿರಿಗಳನ್ನು ನೋಡಿ ನಾವ್ಯಾಕೆ ಸಮಯ ಹಾಳುಮಾಡಿಕೊಳ್ಳಬೇಕು?. ಇಂಥಹ ಕಾರ್ಯಕ್ರಮಗಳಲ್ಲಿ ಉಪಯೋಗವಾಗುವಂಥದ್ದು ಏನಾದರೂ ಇದೆಯಾ? ಕೋಟ್ಯಾಧಿಪತಿ ನೋಡಿದರೆ ಒಂದಿಷ್ಟು ಜನರಲ್ ನಾಲೆಡ್ಜ್ ಆದ್ರೂ ಇಂಪ್ರೂವ್ ಆಗುತ್ತದೆ' ಎಂದಿದ್ದಾರೆ ಶಿವರಾಜ್‌ಕುಮಾರ್. ಆರಂಭದಿಂದಲೂ ಬಿಗ್‌ಬಾಸ್ ಬಗ್ಗೆ ಎಲ್ಲ ಕಡೆಯೂ ಅಪಸ್ವರ ಇದ್ದೇ ಇದೆ. ಒಂದು ವೆಬ್‌ಸೈಟ್ ಅಂತೂ ಇಂಥ ಕಾರ್ಯಕ್ರಮಗಳು ಬೇಕೆ? ಎಂಬ ಪ್ರಶ್ನೆ ಕೇಳಿ ಉತ್ತರಕ್ಕೆ ಒಂದು ಮುಕ್ತ ವೇದಿಕೆಯನ್ನೇ ಸೃಷ್ಠಿಸಿದೆ. ಅಲ್ಲಿ ಬಂದಿರುವ ಕಾಮೆಂಟ್‌ಗಳಿಗೆ ಹೋಲಿಸಿದರೆ ಶಿವರಾಜ್‌ಕುಮಾರ್‌ರ ಕಾಮೆಂಟ್ ತೀರಾ ಖಾರವೇನಲ್ಲ ಬಿಡಿ.
ಡಬ್ಕುಡಬಲ್ ತುದಾಂಡಲ್...
- ಖೇಮು ಲಕ್ಕಿ ಡ್ರಾದಲ್ಲಿ ಚೈನಾ ಟ್ರಿಪ್‌ಗೆ ಹೋದ.
ಈಗ ಅಲ್ಲಿಂದ ವಾಪಸ್ ಬರೋಕೆ ಪ್ರತಿದಿನ ಇನ್ನೊಂದು ಲಕ್ಕಿ ಡ್ರಾಗೋಸ್ಕರ ಟ್ರೈ ಮಾಡ್ತಿದಾನಂತೆ.
- ಮಕ್ಕಳ ಪ್ರಶ್ನೆಗಳಿಗೆ ಓವರ್ ಸ್ಮಾರ್ಟ್ ಆಗಿ ಉತ್ತರ ಕೊಟ್ರೆ ಏನಾಗುತ್ತೆ?
ಮಗ ಅಮ್ಮನನ್ನು ಕೇಳಿದ 'ಅಮ್ಮ, ನನ್ನನ್ನ ಹುಟ್ಟಿಸಿದ್ದು ಯಾರು?'
ಅಮ್ಮ ಹೇಳಿದಳು 'ದೇವರು ಮಗೂ'.
ಮರುದಿನ ಸ್ಕೂಲಲ್ಲಿ ಆ ಹುಡುಗನನ್ನ ಅವನ ಟೀಚರ್ ಕೇಳಿದಳು 'ನಿನ್ನನ್ನ ಹುಟ್ಟಿಸಿದ್ದು ಯಾರು?'
ಹುಡುಗನಿಗೆ ನಿನ್ನೆ ಅಮ್ಮ ಹೇಳಿದ್ದು ಸರಿಯಾಗಿ ನೆನಪಿಗೆ ಬರದೆ ತಡವರಿಸಿದ 'ಇಷ್ಟು ದಿನ ನಮ್ಮಪ್ಪ ಅಂದ್ಕೊಂಡಿದ್ದೆ. ಆದ್ರೆ ನಿನ್ನೆ ನಾನು ಇದೇ ಪ್ರಶ್ನೆ ಕೇಳಿದಾಗ ಅಮ್ಮ ಬೇರೆ ಯಾರದೋ ಹೆಸರು ಹೇಳಿದಳು, ನೆನಪೇ ಆಗ್ತಿಲ್ಲ..'
- ಬ್ರಹ್ಮಾಂಡ ಸ್ವಾಮಿನ ಮೊದಲೆಲ್ಲಾ ಬಯ್ಕೊತಿದ್ದ ಜನ ಈಗ ಬಿಗ್‌ಬಾಸ್‌ನಲ್ಲಿ ಇಷ್ಟಪಡೋಕೆ ಶುರು ಮಾಡಿದ್ದಾರೆ.
ಇದೂ ಒಂಥರಾ 'ನರೇಂದ್ರ' ಮೋಡಿ
- ಸಂಜಯ್ ದತ್‌ಗೆ ಜೈಲಲ್ಲಿ ಅಡುಗೆ ಮಾಡೋ ಕೆಲಸ ಕೊಟ್ಟಿದಾರಂತೆ.
ಮಾಡಿದ್ದುಣ್ಣೋ ಮಹರಾಯ ಅಂದ್ರೆ ಇದೇನಾ..?
- ಶ್ರೀಶಾಂತ್‌ನ ಅರೆಸ್ಟ್ ಮಾಡಿದಾಗ ಅವರ ಕಾರಲ್ಲಿ ಹುಡುಗಿಯರು ಇದ್ರಂತೆ.
ಕೆನ್ನೆ ಇರೋದು ಬರೀ ಹೊಡೆಸಿಕೊಳ್ಳೋಕೆ ಅಲ್ಲ ಬಿಡಿ.
- ಸನ್ನೆ ಮಾಡೋದರ ಮೂಲಕ ಮೂವರು ಐಪಿಎಲ್ ಆಟಗಾರರು ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ.
ಇದು 'ಸಮೂಹ ಸನ್ನೆ'
-ಹರಿ
harikannadaprabha@gmail.com