ಅಂಕಣಗಳು

ಅತಿ ಸುದ್ದಿ ಆರೋಗ್ಯಕ್ಕೆ ಹಾನಿಕರ!

'ಸುದ್ದಿಯಿಂದ ದೂರವಿರಿ' ಎಂದು ಕೂಗುತ್ತಿರುವ ಈ ಲೇಖನವನ್ನು ಸುದ್ದಿಮನೆಯ ಬಲದಲ್ಲೇ..

'ಸುದ್ದಿಯಿಂದ ದೂರವಿರಿ' ಎಂದು ಕೂಗುತ್ತಿರುವ ಈ ಲೇಖನವನ್ನು ಸುದ್ದಿಮನೆಯ ಬಲದಲ್ಲೇ ಸಂಸಾರ ಕಟ್ಟಿಕೊಂಡಿರುವ ಯಾರೂ ಉದಾಹರಿಸಬಾರದು. ಆದರೂ ನಾವು ಭಿನ್ನ ದೃಷ್ಟಿಕೋನಗಳನ್ನೂ ಹೊಸ ವಾದಗಳನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಇರಲಾಗುವುದಿಲ್ಲ. ಇದನ್ನು ಓದಿ ನೀವೇನೂ ಪತ್ರಿಕೆ ಓದುವುದು ನಿಲ್ಲಿಸಲಾರಿರಿ ಎಂಬ ವಿಶ್ವಾಸದೊಂದಿಗೆ...

'ಸಂಪಾದಕ ಎಂದರೆ ಗಂಡ ಇದ್ದಂತೆ' ಎಂಬುದು ನನ್ನ ಪುಸ್ತಕವೊಂದರ ಹೆಸರು. ಓದುಗರು ಹೆಂಡತಿ ಇದ್ದಂತೆ ಎಂಬುದು ಹೇಳದೆಯೂ ಅರ್ಥವಾಗುವ ಮಾತು. ಅಂದರೆ ಯಾವ ಸಂಪಾದಕನೂ ತಾನು ಓದುಗರನ್ನು ನೂರಕ್ಕೆ ನೂರರಷ್ಟು ಅರ್ಥಮಾಡಿಕೊಂಡುಬಿಟ್ಟಿದ್ದೇನೆ ಎಂದು ಬೀಗುವಂತೆಯೇ ಇಲ್ಲ. ಇವತ್ತೇನೋ ಯಾರಿಗೂ ಸಿಕ್ಕದ ಸ್ಫೋಟಕ ಸುದ್ದಿಯೊಂದನ್ನು ನೀಡಿದ್ದೇನೆ ಎಂದು ಸಹೋದ್ಯೋಗಿಗಳೊಂದಿಗೆ ಸಂಭ್ರಮಾಚರಣೆ ಮಾಡುತ್ತಿರುವ ವೇಳೆಗೆ ರಾಜ್ಯದ ಯಾವುದೋ ಮೂಲೆಯಿಂದ ಕರೆ ಮಾಡುವ ಒಬ್ಬ ಓದುಗ, 'ಎಂಥಾ ಪತ್ರಿಕೇರೀ ನಿಮ್ದೂ, ಹವಾಮಾನ ವರದೀನೇ ಪ್ರಕಟಿಸಿಲ್ಲ. ನಾವ್ಯಾಕ್ರೀ ನಿಮ್ಮ ಪೇಪರ್ ಓದ್ಬೇಕು' ಅಂತ ಜಬರದಸ್ತು ಮಾಡಿಬಿಡುತ್ತಾನೆ. ಯಾವುದೂ ಆಸಕ್ತಿಕರ ಸುದ್ದಿ ಇಲ್ಲ ಎಂಬ ನಿರಾಸೆಯಲ್ಲಿ ಅನ್ಯ ಮಾರ್ಗವಿಲ್ಲದೇ ಪಕ್ಕಕ್ಕೆ ಎತ್ತಿಟ್ಟಿದ್ದ ವರದಿಯೊಂದನ್ನು ಪುಟಕ್ಕೆ ಕೂರಿಸಿ ಅತೃಪ್ತಿಯಿಂದಲೇ ಮನೆಗೆ ಹೋದ ಮಾಧ್ಯಮಜೀವಿಗೆ ಮರುದಿನ ಅಚ್ಚರಿ ಎದುರಾಗಿರುತ್ತದೆ. 'ಇವತ್ತು ನಿಮ್ಮಲ್ಲಿ ಬಹಳ ಇಂಟರೆಸ್ಟಿಂಗ್ ವರದಿಯೊಂದನ್ನು ಪ್ರಕಟಿಸಿದ್ದೀರಿ. ಆ ವರದಿಯಲ್ಲಿ ಪ್ರಸ್ತಾಪವಾದ ಇಂಥವರೊಬ್ಬರ ನಂಬರ್ ಬೇಕಿತ್ತಲ್ಲ' ಅಂತ ವಿಚಾರಿಸಿಕೊಂಡು ಒಂದಿಷ್ಟು ಕರೆಗಳು ಬಂದಿರುತ್ತವೆ.
ಹೀಗಾಗಿ ಮಾಧ್ಯಮದಲ್ಲಿರುವವರು ನಮ್ಮ ಕೆಲಸ ಜನಕ್ಕೆ ಮುಟ್ಟುತ್ತಿಲ್ಲವೇನೋ ಅಥವಾ ನಾವು ಪ್ರಾಮುಖ್ಯ ಅಂದುಕೊಂಡಿದ್ದು ಅವರಿಗೆ ಮಹತ್ವ ಎನ್ನಿಸುತ್ತಿಲ್ಲವೇನೋ ಎಂದು ದಿಗಿಲಿಗೆ ಒಳಗಾಗುತ್ತ ಇರಬೇಕಾಗುತ್ತದೆ. ಅಂಥದೊಂದು ಕಳವಳ ಕಾಡಿದರೆ ಚಿಂತೆ ಪಡಬೇಕಿಲ್ಲ. ಬದಲಿಗೆ ಅದೊಂದು ಆರೋಗ್ಯಕರ ಲಕ್ಷಣ. ಆಗ ಮಾತ್ರವೇ ನಾವು ಭಿನ್ನವಾಗಿ ಯೋಚನೆಗೆ ತೊಡಗುತ್ತೇವೆ ಹಾಗೂ ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತೇವೆ.
ಹೀಗೆಲ್ಲ ಯೋಚಿಸುವಾಗಲೇ ಇತ್ತೀಚೆಗೆ ಪ್ರತಿಷ್ಠಿತ 'ದ ಗಾರ್ಡಿಯನ್‌' ಪತ್ರಿಕೆಯಲ್ಲಿ ರಾಲ್ಫ್ ಡಾಬೆಲ್ಲಿ ಎಂಬುವವರು ಬರೆದ ಲೇಖನವೊಂದು ಆಸಕ್ತಿಯಿಂದ ಓದಿಸಿಕೊಂಡು ಹೋಯಿತು. ಅದನ್ನು ಮಾಧ್ಯಮ ವಿಮರ್ಶೆ ಎಂದು ಪಕ್ಕಾ ಹೇಳುವುದಕ್ಕೂ ಆಗದು. ಏಕೆಂದರೆ ಆ ಲೇಖನವು ಮಾಮೂಲಿ ಧಾಟಿಯ ಆಕ್ಷೇಪಗಳಾದ- ಮಾಧ್ಯಮವು ರೋಚಕತೆ ಹಿಂದೆ ಬಿದ್ದಿದೆ, ಅವಸರದಲ್ಲಿ ಸುದ್ದಿ ನೀಡುವ ಧಾವಂತದಲ್ಲಿ ಎಡವಟ್ಟುಗಳನ್ನು ಮಾಡುತ್ತಿದೆ ಎಂಬಿತ್ಯಾದಿ ಆರೋಪಗಳನ್ನೆಲ್ಲ ಮತ್ತೆ ಪಟ್ಟಿ ಮಾಡುವ ಗೋಜಿಗೆ ಹೋಗಿಲ್ಲ. ಮೂಲತಃ ಸುದ್ದಿ ಎಂಬ ಪರಿಕಲ್ಪನೆಯ ಮೇಲೆಯೇ ದಾಳಿ ಮಾಡಿರುವ ಬರಹ ಅದು. ಸುದ್ದಿಮನೆಯ ಬಲದಲ್ಲೇ ಸಂಸಾರ ಕಟ್ಟಿಕೊಂಡಿರುವ ಯಾರೂ ಈ ಲೇಖನವನ್ನು ಉದಾಹರಿಸಬಾರದು. ಏಕೆಂದರೆ ಅದು  'ಸುದ್ದಿಯಿಂದ ದೂರವಿರಿ' ಎಂದು ಕೂಗುತ್ತಾ ನಮ್ಮ ಬುಡಕ್ಕೇ ಕೊಡಲಿ ಇಡುತ್ತಿದೆ! ಅದೇನೇ ಇದ್ದರೂ ಲೇಖನದಲ್ಲಿ ವಿಚಾರವನ್ನು ಹರವಿಟ್ಟ ರೀತಿ ಚೆಂದವಿದೆ. ಅಲ್ಲದೇ ನಾವು ಭಿನ್ನ ದೃಷ್ಟಿಕೋನಗಳನ್ನೂ ಹೊಸ ವಾದಗಳನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಇರಲಾಗುವುದಿಲ್ಲ. ಬದಲಾಗಿರುವ ಲೋಕದಲ್ಲಿ ಈಗ ಎಲ್ಲವೂ ಬೆರಳ ತುದಿಗೆ. ಸುದ್ದಿ ಎಂಬುದೂ ಈಗ ಪತ್ರಿಕೆ, ನಿಯತಕಾಲಿಕ, ಟಿವಿಗಳಿಗೆ ಸೀಮಿತವಾಗಿಲ್ಲ. ನಿಮ್ಮ ಮೊಬೈಲ್‌ಗೆ ಸುದ್ದಿ ಹರಿದುಬಂದು ಕಿಣಕಿಣಗುಡುತ್ತದೆ. ಕ್ರಿಕೆಟ್ ಮ್ಯಾಚ್‌ಗಳ ಬಗ್ಗೆ, ವಿದ್ಯಾ ಬಾಲನ್ ಉಟ್ಟ ಸೀರೆ ಬಗ್ಗೆ, ಅಮಿತಾಭ್ ಸೀನಿದ್ದರ ಕುರಿತು 'ಅಪ್‌ಡೇಟ್‌'ಗಳ ಹಣೆಪಟ್ಟಿ ಹೊತ್ತು ಮೆಸೇಜುಗಳು ಬಂದುದುರುತ್ತವೆ. ಇಂಟರ್ನೆಟ್ ಎದುರಿದ್ದರಂತೂ ಒಂದು ಚಿಕ್ಕ ಸುದ್ದಿ ನಿಮ್ಮ ಚಿತ್ತವನ್ನು ಅಪಹರಿಸಿ, ಜಾಲಾಡುವ ಹುಚ್ಚು ಹತ್ತಿಸಿ ಎಲ್ಲಿಗೋ ಕರೆದುಕೊಂಡು ಹೋಗಿಬಿಡುತ್ತದೆ. ತಾಸುಗಳ ನಂತರ ನಿಮಗೆ ಯಾವ ವಿಷಯಕ್ಕೆ ಹುಡುಕುತ್ತಿದ್ದೆ ಎಂಬುದೇ ಮರೆತುಹೋಗುವಷ್ಟರ ಮಟ್ಟಿಗೆ ಅಂತರ್ಜಾಲದ ಮಾಯಾಜಾಲ ಕೆಲಸ ಮಾಡುತ್ತದೆ. ಹೀಗೆಲ್ಲ ಆಗುತ್ತಿರುವಾಗ ನಮ್ಮ ಸುದ್ದಿ ಸ್ವೀಕಾರ ಅತಿಯಾಯಿತೇನೋ ಎಂದು ಅನ್ನಿಸುವುದು ಸಹಜ. ಗಾರ್ಡಿಯನ್‌ನ ಲೇಖನವೂ ಸಾರಾಸಗಟಾಗಿ ಅದನ್ನೇ ಹೇಳುತ್ತಿದೆ- 'ನ್ಯೂಸ್ ಈಸ್ ಬ್ಯಾಡ್ ಫಾರ್ ಯು- ಆ್ಯಂಡ್ ಗಿವಿಂಗ್ ಅಪ್ ರೀಡಿಂಗ್ ವಿಲ್ ಮೇಕ್ ಯು ಹ್ಯಾಪಿಯರ್‌'. ಸುದ್ದಿ ನಿಮಗೆ ಕೆಟ್ಟದು ಮಾಡುತ್ತಿದೆ, ಅದರ ಸಹವಾಸ ಕಡಿಮೆ ಮಾಡಿದಷ್ಟೂ ಖುಷಿಯಾಗಿರುತ್ತೀರಿ ಎಂದು ಖಡಾಖಡಿಯಾಗಿ ಘೋಷಿಸುತ್ತಿದ್ದಾನೆ ಈ ಲೇಖಕ ರಾಲ್ಫ್! ಎಲಾ ಇವನಾ ಅಂದುಕೊಂಡು ಓದಿದರೆ ಆತನ ವಾದ ಸರಣಿ ಹೀಗಿದೆ-
ನಾವೀಗ ಆಹಾರದ ಬಗ್ಗೆ ಜಾಗೃತಿ ಬೆಳೆಸಿಕೊಂಡು ಬೊಜ್ಜು, ಸಕ್ಕರೆ ಕಾಯಿಲೆಗಳ ಸಾಧ್ಯತೆ ತಪ್ಪಿಸುವ ಆಹಾರಕ್ರಮ ಯಾವುದು ಎಂದೆಲ್ಲ ಎಚ್ಚರಿಕೆ ವಹಿಸುತ್ತಿದ್ದೇವೆ. ಆದರೆ ನಮ್ಮ ದೇಹಕ್ಕೆ ಶುಗರ್ ಹೇಗೋ ಅಂತೆಯೇ ಮೆದುಳಿಗೆ ನ್ಯೂಸ್ ಎಂಬುದನ್ನು ಮಾತ್ರ ಇನ್ನೂ ಅರ್ಥ ಮಾಡಿಕೊಂಡಿಲ್ಲ. ಮಾಧ್ಯಮ ನಮಗೆ ಸಂಬಂಧವೇ ಇಲ್ಲದ ಸುದ್ದಿಯನ್ನು ತುಣುಕು ತುಣುಕಾಗಿ, ಆಕರ್ಷಕವಾಗಿಸಿ ತುಂಬುತ್ತಲೇ ಇದೆ. ಹೀಗಾಗಿಯೇ ನಮ್ಮ ಮನಸ್ಸಿನಲ್ಲಿ ಅಬ್ಬಾ ಸಾಕು ಎಂಬ ಭಾವ ಹೊಯ್ದಾಡುತ್ತಿದೆ.
ಸುದ್ದಿ ನಮ್ಮನ್ನು ದಾರಿ ತಪ್ಪಿಸುತ್ತದೆ. ಕಾರ್ ಒಂದು ಸೇತುವೆ ಮೇಲೆ ಹೋಗುತ್ತಿದ್ದಾಗ ಆ ಸೇತುವೆ ಮುರಿದುಬೀಳುತ್ತದೆ ಎಂದಿಟ್ಟುಕೊಳ್ಳೋಣ. ಆ ಸುದ್ದಿ ಹೇಗೆ ಹರಡಿಕೊಳ್ಳುತ್ತದೆ ಎಂಬುದನ್ನು ಗಮನಿಸಿ. ಕಾರು ಯಾವುದಾಗಿತ್ತು? ಅದರೊಳಗಿನ ವ್ಯಕ್ತಿ ಯಾರು? ಆತ ಎಲ್ಲಿಂದ ಬಂದ? ಎಲ್ಲಿಗೆ ಹೊರಟಿದ್ದ? ಬದುಕುಳಿದವನಾದರೆ ಆ ಅಪಘಾತ ಅವನಿಗೆ ನೀಡಿದ ಅನುಭವವೇನು ಎಂಬೆಲ್ಲ ವಿವರಗಳನ್ನು ಸುದ್ದಿರೂಪದಲ್ಲಿ ಒಂದರ ಹಿಂದೊಂದರಂತೆ ಮಾಧ್ಯಮ ಬಗೆದಿಡುತ್ತದೆ. ಆದರೆ ನಿಜಕ್ಕೂ ಪ್ರಸ್ತುತವಾಗಬೇಕಿರುವುದು ಆ ಸೇತುವೆ ಮುರಿದುಬೀಳುವುದಕ್ಕೆ ಕಾರಣವೇನು ಎಂಬ ವಿವರ. ಏಕೆಂದರೆ ಅಂಥದೇ ಸ್ಥಿತಿಯಲ್ಲಿರುವ ಹಲವು ಸೇತುವೆಗಳ ಮೇಲೆ ಬೆಳಕು ಚೆಲ್ಲಿ ಅವಘಡಗಳನ್ನು ತಡೆಯುವುದಕ್ಕೆ ಅದು ಮುನ್ನುಡಿಯಾಗುತ್ತದೆ. ಆದರೆ ಕಾರು ಮತ್ತು ಅದರೊಳಗಿನ ವ್ಯಕ್ತಿ ನಮಗೆ ಕಣ್ಣು ಕುಕ್ಕುವ ಅಂಶ. ಹೀಗಾಗಿ ಅವುಗಳ ಸುತ್ತಲೇ ಹಲವು ಹದಿನೆಂಟು ಕತೆಗಳು ಹುಟ್ಟಿಕೊಳ್ಳುತ್ತವೆ. ಭಯೋತ್ಪಾದನೆ ಮುಖ್ಯ ವಿಷಯವಾಗುತ್ತದೆ; ಅದಕ್ಕಿಂತ ಹೆಚ್ಚಿನ ಸಾವುಗಳನ್ನು ಉಂಟುಮಾಡುವ ಹಸಿವು-ಅನಾರೋಗ್ಯಗಳ ಲೋಕ ಗೌಣವಾಗುತ್ತದೆ. ಗಗನಯಾತ್ರಿಗಳ ಬಗ್ಗೆ ಇಂಚಿಂಚು ವಿವರಗಳಿರುತ್ತವೆ; ನರ್ಸ್‌ಗಳ ಸೇವೆ ಸುದ್ದಿಯಲ್ಲ.
ಕಳೆದ ವರ್ಷ ನೀವು ಸುಮಾರು 10 ಸಾವಿರ ಸುದ್ದಿಗಳನ್ನು ನಿಮ್ಮ ಮಸ್ತಿಷ್ಕಕ್ಕೆ ಬಿಟ್ಟುಕೊಂಡಿರಬಹುದೇನೋ? ಈ ಪೈಕಿ ನಿಮ್ಮ ಬದುಕನ್ನು ಬದಲಿಸುವ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣವಾದ ಯಾವುದಾದರೂ ಒಂದು ಸುದ್ದಿಯನ್ನು ಹೆಸರಿಸಿ ನೋಡೋಣ? ಜನರ ಸಮಸ್ಯೆಯೇ ಅದು. ಜನರಿಗೆ ಹೊಸದು ಮತ್ತು ಪ್ರಸ್ತುತ ಇವುಗಳ ನಡುವೆ ವ್ಯತ್ಯಾಸ ಗುರುತಿಸುವುದು ಗೊತ್ತಿಲ್ಲ. ಹೊಸ ಸಂಗತಿಗಳು ದಿನವೂ ಘಟಿಸುತ್ತಿರುತ್ತವೆ. ಆದರೆ ಪ್ರಸ್ತುತ ಯಾವುದು ಅನ್ನೋದಷ್ಟೇ ತಿಳಿದುಕೊಳ್ಳಬೇಕಿರುವುದು.
ಈ ಸುದ್ದಿ ಪ್ರವಾಹವಿದೆಯಲ್ಲ, ನಿಮ್ಮ ಆಲೋಚನೆಗಳಿಗೇ ಬ್ರೇಕ್ ಹಾಕುತ್ತದೆ. ಆಲೋಚನೆಗೆ ಬೇಕಾಗಿರುವುದು ಏಕಾಗ್ರತೆ. ಏಕಾಗ್ರತೆ ರೂಢಿಸಿಕೊಳ್ಳುವುದಕ್ಕೆ ವಿರಾಮ ಸಮಯ ಬೇಕು. ಆದರೆ ಸುದ್ದಿಗಳಿರುವುದೇ ನಿಮ್ಮ ಲಹರಿಯನ್ನು ಅಸ್ತವ್ಯಸ್ತಗೊಳಿಸುವುದಕ್ಕೆ. ಸಿಕ್ಕಾಪಟ್ಟೆ ಸುದ್ದಿ ಸಾಂಗತ್ಯದಲ್ಲಿರುವುದು ನಿಮ್ಮ ಯೋಚನಾ ಬಲಕ್ಕೆ ಜಾಗವಿಲ್ಲದಂತೆ ಮಾಡುತ್ತದೆ.
ಸುದ್ದಿ ಎಂಬುದು ಡ್ರಗ್ಸ್‌ನಂತೆ. ಒಂದು ಸುದ್ದಿಯ ಪ್ರಾರಂಭದ ಕಡೆ ಗಮನ ಹರಿಸಿದರೆ ಅದರ ಹತ್ತೆಂಟು ಕವಲುಗಳನ್ನು ಬೆನ್ನತ್ತುವ ಮನಸ್ಸಾಗುತ್ತದೆ. ಸುದ್ದಿ ಪ್ರವಾಹದಲ್ಲೇ ಮುಳುಗಿಕೊಂಡಿರುವವರನ್ನು ಗಮನಿಸಿ. ಅವರಿಗೆ ಆಳ ವಿಶ್ಲೇಷಣೆಯ ವಿವರ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಓದಲಿಕ್ಕಾಗುವುದಿಲ್ಲ. ಮೂರ್ನಾಲ್ಕು ಪುಟ ಓದುತ್ತಿದ್ದಂತೆಯೇ ಸುಸ್ತಾಗತೊಡಗುತ್ತದೆ. ಏಕೆಂದರೆ ಸುದ್ದಿಯ ಉಪಭೋಗ ಅವರ ಮೆದುಳಿನ ವಿನ್ಯಾಸವನ್ನೇ ಹಾಗೆ ಬದಲಿಸಿರುತ್ತದೆ.
ಸುದ್ದಿ ಸೃಜನಶೀಲತೆಯನ್ನು ಕೊಲ್ಲುತ್ತದೆ. ನಾವು ತಿಳಿದುಕೊಂಡಿದ್ದೇವೆ ಎಂಬ ಗ್ರಹಿಕೆಯೇ ನಮ್ಮ ಸೃಜನಶೀಲತೆಯನ್ನು ಮಿತಿಗೊಳಿಸುತ್ತದೆ. ಹೊಸ ಐಡಿಯಾಗಳ ಜನನಕ್ಕೆ ಮೆದುಳಿನಲ್ಲಿ ವಿಸ್ತಾರ ಜಾಗ ಬೇಕು. ತಲೆತುಂಬ ಸುದ್ದಿಯನ್ನೇ ಬಿಟ್ಟುಕೊಂಡ ಯಾರೊಬ್ಬರೂ ಕ್ರಿಯೇಟಿವ್ ಅನ್ನಿಸಿಕೊಂಡಿದ್ದನ್ನು ನಾನು ನೋಡಿಲ್ಲ. ಲೇಖಕ, ಸಂಗೀತಗಾರ, ಚಿತ್ರ ಕಲಾವಿದ, ವಿಜ್ಞಾನಿ, ವಿನ್ಯಾಸಕಾರ ಹೀಗೆ ಗುರುತಿಸಿಕೊಳ್ಳುವವರ್ಯಾರೂ ನ್ಯೂಸ್‌ಜಂಕಿ ಅಥವಾ ಸುದ್ದಿಹುಳು ಎನ್ನಿಸಿಕೊಂಡಿರುವುದಿಲ್ಲ.
ಸಮಾಜಕ್ಕೆ ಪತ್ರಿಕೋದ್ಯಮ ಬೇಕು. ಆದರೆ ಅದಕ್ಕೆ ತನಿಖಾ ಆಯಾಮವಿರಬೇಕು. ವಿಸ್ತಾರವಾದ ಲೇಖನಗಳು ಹಾಗೂ ಪುಸ್ತಕಗಳು ನಿಮಗೆ ಒಳ್ಳೆಯದನ್ನು ಮಾಡುತ್ತವೆ. ನಾಲ್ಕು ವರ್ಷಗಳಿಂದ ನಾನು ಸುದ್ದಿ ಸಹವಾಸ ಗೌಣವಾಗಿರಿಸಿದ್ದೇನೆ. ಏಕಾಗ್ರತೆ ಹೆಚ್ಚಾಗಿದೆ, ಯೋಚನೆ ಆಳ ಪಡೆದುಕೊಂಡಿದೆ, ಸಮಯ ಹೆಚ್ಚು ಸಿಗುತ್ತಿದೆ, ಹೊಸ ದೃಷ್ಟಿಕೋನಗಳು ಸ್ಫುರಿಸುತ್ತಿವೆ!

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ