ಅಂಕಣಗಳು

ಕಟ್ಟುಪಾಡುಗಳ ವಿರುದ್ಧ ಮಾತಾಡುವವರು ನಂಗಿಷ್ಟ...

'ಹಳೇ ಕಾಲದ ಆಚರಣೆಗಳಿಗೆ ನಾವು ಕೇರ್ ಮಾಡಬಾರದು ಕಣೇ. ಮೊದಲು ನಮ್ಮ ಕಾಲ ಮೇಲೆ ನಾವು ನಿಂತ್ಕೋಬೇಕು.

'ಹಳೇ ಕಾಲದ ಆಚರಣೆಗಳಿಗೆ ನಾವು ಕೇರ್ ಮಾಡಬಾರದು ಕಣೇ. ಮೊದಲು ನಮ್ಮ ಕಾಲ ಮೇಲೆ ನಾವು ನಿಂತ್ಕೋಬೇಕು. ಹೊಟ್ಟೆಪಾಡಿಗೆ, ಭವಿಷ್ಯಕ್ಕೆ ತೊಂದರೆಯಾಗದಂತೆ ಒಂದು ನೌಕರಿ ಹುಡುಕಿಕೊಳ್ಳಬೇಕು. ಆನಂತರ, ಹೆಂಗಸರನ್ನು ಪಂಜರದ ಹಿಂದಕ್ಕೆ ನೂಕುವ ಆಚರಣೆಗಳಿಗೆ ಸೆಡ್ಡು ಹೊಡೆಯಬೇಕು. ನಾನಂತೂ ಅಂಥ ಕೆಲಸವನ್ನು ಮೊನ್ನೆ ಆರಂಭಿಸಿದ್ದೇನೆ...' ಎಂದು ಸಿಡಿಮಿಡಿಯಿಂದಲೇ ಹೇಳಿದಳು ಅನಿತಾ.
ಅನಿತಾ, ನಮ್ಮ ಪಿ.ಜಿ.ಗೆ ಸೇರಿಕೊಂಡಿರುವ ಹೊಸ ಗೆಳತಿ ತೆಳ್ಳಗಿದ್ದಾಳೆ. ಬೆಳ್ಳಗಿದ್ದಾಳೆ. ಐದೂವರೆ ಅಡಿ ಎತ್ತರವಿದ್ದಾಳೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ಸಖತ್ ಸುಂದರಾಂಗಿ. 'ಇಷ್ಟು ಮುದ್ದು ಮುದ್ದಾಗಿ ಇದೀಯ ಯಾವುದಾದ್ರೂ ಸೀರಿಯಲ್‌ಗೆ ಹೀರೋಯಿನ್ ಆಗಬಾರ್ದೇನೆ?' ಎಂದು ಕೇಳಿದ್ದಕ್ಕೆ-ಅಯ್ಯೋ, ಅದೊಂದು ಮಾತ್ರ ಬೇಡ ಕಣೆ. ಯಾಕಂದ್ರೆ ಒಂದು ಸೀರಿಯಲ್ ಶುರುವಾದ್ರೆ ಐದಾರು ವರ್ಷ ಆದ್ರೂ ಮುಗಿಯೋದಿಲ್ಲ. ಅಷ್ಟು ದಿನ ಡಯಟ್ ಮಾಡಿಕೊಂಡೇ ಬದುಕಬೇಕು... ಐದು ವರ್ಷ ಒಂದೇ ಥರಾ ಇರಲಿಕ್ಕೆ ನನಗಂತೂ ಸಾಧ್ಯವಿಲ್ಲ. ಅದೂ ಅಲ್ದೇ, ಸೀರಿಯಲ್‌ಗೆ ಸೇರಿದ್ರೆ ಯಾವಾಗ್ಲೂ ಮೇಕಪ್ ಮಾಡ್ಕೋತಾನೇ ಇರಬೇಕು. ಅದಂತೂ ನನ್ನಿಂದ ಸಾಧ್ಯವಿಲ್ಲ' ಎಂದಿದ್ದಳು. ಬೆಳ್ಳಗಿದ್ದಳಲ್ಲ, ಅದೇ ಕಾರಣಕ್ಕೋ ಏನೋ; ಎಲ್ಲ ಕಲರಿನ ಬಟ್ಟೆಗಳಲ್ಲಿ ಆಕೆ ಮುದ್ದಾಗಿ ಕಾಣುತ್ತಿದ್ದಳು. ಪಿ.ಜಿ.ಯಲ್ಲಿದ್ದ ಹುಡುಗಿಯರೆಲ್ಲ ತಮ್ಮ ಮೈಕಾಂತಿಯ ಹೊಳಪು ಹೆಚ್ಚಿಸಿಕೊಳ್ಳಲು ಟಿ.ವಿ.ಯ ಜಾಹೀರಾತುಗಳಲ್ಲಿ ಬರುವ ಎಲ್ಲಾ ಕ್ರೀಂಗಳನ್ನು ಬಳಸಿ ಏನೂ ಪ್ರಯೋಜನವಿಲ್ಲದೆ ಒದ್ದಾಡುತ್ತಿದ್ದಾಗಲೇ, ಯಾವುದೇ ಕ್ರೀಂ ಬಳಸದೆ ಕಡಲೆ ಹಿಟ್ಟಿನಿಂದ ಮುಖ ತೊಳೆಯುತ್ತಿದ್ದ ಅನಿತಾ ನಮ್ಮೆಲ್ಲರ ಮಧ್ಯೆ ಬೆಳದಿಂಗಳ ಬಾಲೆಯ ಥರಾ ಹೊಳೆಯುತ್ತಿದ್ದಳು. ಅವಳೊಂದಿಗೆ ಶಾಪಿಂಗ್‌ಗೆಂದು ಹೊರಟರೆ, ಎದುರಿಗೆ ಸಿಕ್ಕ ಹುಡುಗರು, ಅವಳನ್ನೇ ತಿಂದು ಬಿಡುವಂತೆ ನೋಡುತ್ತಿದ್ದರು. ಮತ್ತೆ ಕೆಲವರು-'ಹಿಂಗೆಲ್ಲ ಕಲರ್ ಕಲರ್ರಾಗಿ ಬಂದು ನಮ್ಮನ್ನು ಯಾಕೆ ಕೋಲ್ತಿಯೋ ಮಗಾ?' ಎಂದು ಪಕ್ಕದಲ್ಲಿದ್ದ ಗೆಳೆಯನಿಗೆ ಹೇಳಿ ಕಣ್ಣು ಹೊಡೆಯುತ್ತಿದ್ದರು. ಇನ್ನು ಕೆಲವರು-ಹುಡುಗಿಯೇನೋ ಕೈ ತೊಳ್ಕೊಂಡು ಮುಟ್ಟಬೇಕು ಅನ್ನುವ ಹಾಗಿದಾಳೆ. ನೋಡ್ತಾ ಇದ್ರೆ ಕೈ ಮುಗಿದು ಪ್ರಪೋಸ್ ಮಾಡಬೇಕು ಅಂತ ಆಸೆ ಆಗ್ತಿದೆ. ಬೈ ಛಾನ್ಸ್ ಅವಳು ಛಕ್ಕಂತ ಒಪ್ಕೋಬಿಟ್ರೆ ಭಾಳಾ ಕಷ್ಟ. ನಂಗೆ ಬರೋ ಸಂಬಳ ಅವಳ ಅಲಂಕಾರಕ್ಕೆ ಸಾಲೋದಿಲ್ವೇನೋ ಅನಿಸುತ್ತೆ. ಹಂಗಾಗಿ ಸುಮ್ನೇ ನೋಡಿ ಕಣ್ಣು ತಂಪು ಮಾಡಿಕೊಳ್ಳೋಣ' ಎಂದು ನಮಗೆಲ್ಲಾ ಕೇಳುವಂತೆಯೇ ಹೇಳುತ್ತಿದ್ದರು. ಹೆಂಡ್ತೀನ ಸಾಕುವ ಯೋಗ್ಯತೆಯಿಲ್ಲದ ಗಂಡುಗಳ ಹಣೆಬರಹವೇ ಇಷ್ಟು ಎಂದು ಅನಿತಾ ತಮಾಷೆ ಮಾಡುತ್ತಿದ್ದಳು.
ಅವಳು ಪಿ.ಜಿ.ಯಲ್ಲಿ ಎಲ್ಲರೊಂದಿಗೂ ಅಡ್ಜೆಸ್ಟ್ ಆದಳು ಎಂದು ನಾವೆಲ್ಲ ಖುಷಿಪಡುವ ಸಂದರ್ಭದಲ್ಲಿಯೇ ಆಕೆಯ ಊರಿಂದ ಫೋನ್ ಬಂದಿತ್ತು. ನಮ್ಮೆಲ್ಲರ ಮುಂದೆಯೇ ಸಂಭಾಷಣೆ ಆರಂಭಿಸಿದ ಅನಿತಾ-'ಅಮ್ಮ, ಇಷ್ಟು ಬೇಗ ನಂಗೆ ಮದುವೆ ಬೇಡ. ಒಂದೆರಡು ವರ್ಷ ಆರಾಮಾಗಿ ಇರ್ತೇನೆ. ನೀನೀಗ ಸುಮ್ಮನಿದ್ದು ಬಿಡು' ಎಂದಳು. ಅದಕ್ಕೆ ಆ ತುದಿಯಿಂದ 'ಎಂಥಾ ಮಾತಾಡ್ತೀಯ ಅನೀ? ಗಂಡಿನ ಕಡೆಯವರು ಹುಡುಕಿಕೊಂಡು ಬಂದಾಗ 'ಮುಂದೆ ನೋಡೋಣ' ಎನ್ನುವಂಥ ಮಾತಾಡಬಾರದು. ಯಾರಿಗೆ ಗೊತ್ತು? ಈಗ ಬರ್ತಿರೋ ಸಂಬಂಧ ತುಂಬಾ ಒಳ್ಳೆಯದಿರಬಹುದು. ಈಗ ನೀನು ಹಿಂದೇಟು ಹಾಕಿದ್ರೆ ಮುಂದೊಂದು ದಿನ ಪಶ್ಚಾತ್ತಾಪ ಪಡುವಂತೆ ಆಗಬಾರದು. ಸುಮ್ನೆ ಬಂದು ಹೋಗು' ಎಂದುಬಿಟ್ಟರು. ಅಮ್ಮನಿಗೆ ತಿರುಗಿ ಮಾತಾಡಲು ಇಷ್ಟವಿಲ್ಲದ ಕಾರಣದಿಂದ ಅನಿತಾ ಊರಿಗೆ ಹೋಗಿ ಬಂದಳು. ಅಲ್ಲಿಂದ ಬಂದ ನಂತರವೇ ಅವಳು ಹಳೆಯ ಸಂಪ್ರದಾಯಗಳನ್ನೆಲ್ಲ, ಆಚರಣೆಗಳನ್ನೆಲ್ಲ ವಿರೋಧಿಸಬೇಕು. ನಮ್ಮ ಕಾಲ ಮೇಲೆ ನಿಂತುಕೊಂಡು ಸ್ವತಂತ್ರವಾಗಿ ಬದುಕಬೇಕು' ಎಂಬರ್ಥದ ಮಾತುಗಳನ್ನಾಡಿದ್ದು.
ಅವಳು ಹೀಗೆಲ್ಲಾ ಮಾತಾಡಲು ಕಾರಣವೆಂದರೆ-'ಹುಡುಗಿಯನ್ನು ನೋಡಲು ಬಂದ ಗಂಡಿನ ಕಡೆಯವರು, ಹುಡುಗಿಗೆ ಮನೆ ಕೆಲಸವೆಲ್ಲಾ ಬರುತ್ತೆ ತಾನೆ? ಎಂದು ಪ್ರಶ್ನಿಸಿದ್ದಾರೆ. ಅನಿತಾ- 'ಈಗೇನಿದ್ರೂ ಗಂಡ ಹೆಂಡ್ತಿ ಇಬ್ರೂ ಕೆಲಸವನ್ನು ಹಂಚಿಕೊಂಡು ಬದುಕು ನಿಭಾಯಿಸ್ತಾರೆ. ಹಾಗಾಗಿ ಈ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ' ಎಂದುಬಿಟ್ಟಿದ್ದಾಳೆ. ಹುಡುಗಿಯ ಕಡೆಯಿಂದ ಇಂಥ ಉತ್ತರವನ್ನು ನಿರೀಕ್ಷಿಸದಿದ್ದ ಗಂಡಿನ ಕಡೆಯವರು ಕಕ್ಕಾಬಿಕ್ಕಿಯಾಗಿದ್ದಾರೆ. ಆನಂತರವೂ ಮಾತುಕತೆ ಮುಂದುವರಿದಿದೆ. ಎದ್ದು ಹೋಗುವ ಮುನ್ನ-'ನಮಗೇನೋ ಹುಡುಗಿ ಒಪ್ಪಿಗೆ. ಆದರೆ ನಾವು ಹೇಳಿದ ಛತ್ರದಲ್ಲಿಯೇ ಮದುವೆ ಮಾಡಿಕೊಡಬೇಕು. ಸಾಕಷ್ಟು ಒಡವೆ ಮಾಡಿಸಿ ಹಾಕಬೇಕು' ಎಂದರಂತೆ. ಈ ಮಾತುಗಳನ್ನು ನೆನಪಿಸಿಕೊಂಡೇ ಮತ್ತೆ ಮತ್ತೆ ಸಿಟ್ಟಾಗುತ್ತಿದ್ದಳು ಅನಿತಾ.
ಅನಿತಾಳ ಸಿಡಿಮಿಡಿಯಲ್ಲೂ ಸತ್ಯವಿದೆ ಅನ್ನಿಸಿತು. ಈ ಹಿಂದೆ ಹೆಣ್ಣು ನೋಡಲು ಹೋದವರು ಎಂತೆಂಥಾ ಕಂಡೀಷನ್ ಹಾಕುತ್ತಿದ್ದರೋ ನೆನಪಿಸಿಕೊಳ್ಳಿ. ಆಗೆಲ್ಲ, ಹುಡುಗಿಗೆ ಸಂಗೀತ ಜ್ಞಾನವಿರಬೇಕಿತ್ತು. ಆಕೆ ತಲೆತಗ್ಗಿಸಿ ಕೂತು-'ಪೂಜಿಸಲೆಂದೇ ಹೂಗಳ ತಂದೆ' ಎಂದೋ, 'ಇಂದು ಎನಗೆ ಗೋವಿಂದಾ ಎನ್ನಯ ಪಾದಾರವಿಂದ...' ಎಂದೋ ಹಾಡಬೇಕಿತ್ತು. ಅದಕ್ಕಿಂತ ಮುಖ್ಯವಾಗಿ 'ಹುಡುಗಿ ತುಂಬಾ ಸಾಧು' ಎಂಬಂಥ ಸರ್ಟಿಫಿಕೇಟ್ ನೆರೆಹೊರೆಯ ಮನೆಗಳಿಂದ ಸಿಗಬೇಕಿತ್ತು. ಇಷ್ಟಲ್ಲದೆ ಆಕೆಗೆ ಹಸೆ ಹಾಕಲು, ಅಡುಗೆ ಮಾಡಲು, ಅತ್ತೆ-ನಾದಿನಿಯರೊಂದಿಗೆ ಅನುಸರಿಸಿಕೊಂಡು ಹೋಗುವಂಥ ತಾಳ್ಮೆ ಇರಲೇಬೇಕಿತ್ತು. ವಿಚಿತ್ರವೆಂದರೆ, ಮದುವೆಯಾಗುವ ಹೆಣ್ಣಿಗೆ ಇಂಥ ಕಟ್ಟುಪಾಡಿನ ಸಂಕೋಲೆಗಳೇಕೆ ಎಂದು ಯಾರೂ ಪ್ರಶ್ನಿಸಲೇ ಇಲ್ಲ!
ಈಗ ಕಾಲ ಬದಲಾಗಿದೆ. ಹುಡುಗಿಯರೂ ಬದಲಾಗಿದ್ದಾರೆ. ಕಟ್ಟುಪಾಡುಗಳ ಹೆಸರಲ್ಲಿ ತಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ ಎಂಬುದು ಅರ್ಥವಾಗಿ ಹೋಗಿದೆ. ಒಳ್ಳೆಯ ನೌಕರಿ ಸಿಕ್ಕರೆ, ಗಂಡಸರ ಹಂಗಿಲ್ಲದೆ, ಅವರಿಗೆ ಸರಿಸಮನಾಗಿ ಬದುಕಬಲ್ಲೆವೆಂಬ ಆತ್ಮವಿಶ್ವಾಸವೂ ಅವರಿಗೆ ಬಂದುಬಿಟ್ಟಿದೆ. ಅದೇ ಕಾರಣಕ್ಕೆ, ಅರ್ಥವಿಲ್ಲದ ಆಚರಣೆಗಳ ವಿರುದ್ಧ 'ಅನಿತಾಳಂಥ' ದಿಟ್ಟೆಯರು ಆಗಿಂದ್ದಾಗ್ಗೆ ಸಿಡಿದೇಳುತ್ತಲೇ ಇದ್ದಾರೆ. ಸುಳ್ಳಲ್ಲ, ಅಂಥವರೆಲ್ಲ ನಂಗಿಷ್ಟ...ನಿಮಗೆ?

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!