ತಲೆಯಲ್ಲ್ಲಿ ಕೂದಲಿಲ್ಲ್ಲದಿದ್ದರೂ ವಿಗ್ಗಿಗೆ ಮಲ್ಲಿಗೆ ಹೂ
ಕೆಲವರು ಬೊಕ್ಕತಲೆಸಹಿಸದೆ ಜೀವನ ಪೂರ್ತಿ ತಮಗೆ ತಾವೇ ಟೊಪ್ಪಿ ಹಾಕಿಕೊಳ್ಳುತ್ತಾರೆ. ಇದೆಲ್ಲ ರಗಳೆ ಬೇಡ ಎಂದು ತಲೆಗೆ ನಾಟಿ ಮಾಡಿಸಿಕೊಳ್ಳುವ 'ನಾಟಿ' ಪರ್ಸನಾಲಿಟಿಯವರೂ ಇದ್ದಾರೆ. ಇನ್ನು ಕೆಲವರು ವಿಗ್ಗಿನ ಮೊರೆ ಹೋಗುತ್ತಾರೆ. ಆದರೆ ವಿಗ್ಗು ತೊಟ್ಟಾಗ ಬೆವರು ಬಂದರೆ, ತುರಿಕೆಯಾದರೆ ಹೇಗೆ ಸಹಿಸಬಹುದು ಎಂಬ ಚಿಂತೆ ನನಗೆ!
ಇಂದು ಬದುಕಲು ತಲೆಯಿರಬೇಕು ಎಂಬುದಕ್ಕಿಂತ ತಲೆಯ ಮೇಲೆ ಕೂದಲಿರಬೇಕು, ಅದರಲ್ಲೂ ಹೊಳಪಿನ ಕಪ್ಪನೆಯ, ಇಂತಿಷ್ಟು ಉದ್ದ-ದಪ್ಪ, ನೇರ- ಗುಂಗುರು ಕೂದಲು ಇರಬೇಕು ಎಂದೆಲ್ಲ ಯೋಚಿಸುತ್ತಾರೆ. ಕೂದಲೇನೋ ಹುಟ್ಟುವಾಗಲೇ ಭಗವಂತ ಕೊಟ್ಟೇ ಇರುತ್ತಾನಾದರೂ ಅವು ತಮ್ಮೆಣಿಕೆಯಂತೆ ಇರುವುದಿಲ್ಲ ಎಂಬುದೇ ಚಿಂತೆ.
ಹಣ್ಣಾಗುವ ಕೂದಲೆಷ್ಟೋ ಅಷ್ಟೇ ಸಮಸ್ಯೆಗಳು. ಸಮಸ್ಯೆಗಳಿದ್ದ ಮೇಲೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸದಿರುತ್ತಾನೆಯೇ ಮಾನವ? ಆದರೆ ಪರಿಹಾರಕ್ಕಾಗಿ ಅವನು ಕಂಡುಕೊಳ್ಳುವ ಉಪಾಯಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ ಅಥವಾ ಹೊಸ ಸಮಸ್ಯೆ ಹುಟ್ಟುಹಾಕುತ್ತವೆ ಎನ್ನುವುದೇ ಯೋಚಿಸಬೇಕಾದ ವಿಷಯ.
ಹಿಂದೆ ಹೆಣ್ಣು ಮಕ್ಕಳಿಗೆ ಹಾವಿನಂತೆ ಉದ್ದದ ಜಡೆಯಿರಬೇಕು ಎಂಬ ಅಲಿಖಿತ ನಿಯಮವಿತ್ತು. ಅವರು ಒಂದು ಜಡೆ, ಎರಡು ಜಡೆ, ಬುಟ್ಟಿ ಜಡೆ, ನೀರು ಜಡೆ ಹೀಗೆ ನಾನಾ ಕೇಶವಿನ್ಯಾಸ ಮಾಡಿಕೊಂಡು ಬೀಗುತ್ತಿದ್ದರು. ಉದ್ದದ ಜಡೆಯೆಂದು ತೋರಿಸಲು ಚೌಲಿ ಹಾಕಿ ಬಿಂಕ ತೋರುವ ಹುಡುಗಿಯರೂ ಇದ್ದರು. ಮೊಗ್ಗಿನ ಜಡೆ, ನಾಗರ ಜಡೆಗಳನ್ನು ಹಾಕಿಕೊಂಡು ಕನ್ನಡಿಯ ಮುಂದೆ ನಿಂತು ಮುಂಭಾಗ ಮತ್ತು ಜಡೆ ಎರಡೂ ಕಾಣುವಂತೆ ಭಾವಚಿತ್ರ ತೆಗೆಸಿಕೊಳ್ಳುತ್ತಿದ್ದರು. ಹಿಂದೆ ಸಿನಿಮಾ ನಾಯಕಿಯನ್ನಂತೂ ನೀಳವೇಣಿಯಾಗಿಯೇ ತೋರಿಸುತ್ತಿದ್ದರು. ಆಗಿನ ಕೆಲ ಹುಡುಗರೂ ಕೂದಲಿಗೆ ಕತ್ತರಿ ತಾಗಿಸದೆ ಜಡೆ ಹಾಕಿಸಿಕೊಂಡು ಶಾಲೆಗೆ ಬಂದಾಗ ಮಕ್ಕಳು 'ಜುಟ್ಲ' ಎಂದು ಕಿಚಾಯಿಸುತ್ತಿದ್ದರಂತೆ.
ಜಾನಪದ ಕತೆಯೊಂದರಲ್ಲಿ ಒಬ್ಬ ರಾಜನಿಗೆ ಇಬ್ಬರು ರಾಣಿಯರಂತೆ. ಒಬ್ಬಳಿಗೆ ಒಂದು ಕೂದಲು ಇನ್ನೊಬ್ಬಳಿಗೆ ಮೂರು. ರಾಜ ಒಂದು ಕೂದಲಿನ ರಾಣಿಯನ್ನು ಪ್ರೀತಿಸದೇ ಅರಮನೆಯಿಂದ ಹೊರಹಾಕುತ್ತಾನೆ. ಅವಳು ಅಳುತ್ತಾ ಹೋಗುತ್ತಿರುವಾಗ ಪೆಟ್ಟಾದ ಸರ್ಪಕ್ಕೆ ಮದ್ದು ಹಚ್ಚುತ್ತಾಳೆ, ಒಡೆದ ಒಲೆಯನ್ನು ಸರಿ ಮಾಡುತ್ತಾಳೆ, ಮುಳ್ಳು ಮೆಳೆಯಲ್ಲಿ ಸಿಕ್ಕಿಬಿದ್ದ ದನವನ್ನು ಪಾರು ಮಾಡಿ ಕರುವಿನ ಬಳಿ ಬಿಡುತ್ತಾಳೆ, ಸೊರಗಿದ ಗುಲಾಬಿ ಗಿಡಕ್ಕೆ ನೀರು ಹಾಕುತ್ತಾಳೆ. ಅಲ್ಲೊಂದು ಗುಡಿಸಲಲ್ಲಿ ನರಳುತ್ತಿರುವ ಅಜ್ಜಿಗೆ ಗಂಜಿ ಕಾಯಿಸಿ ಉಣಿಸುತ್ತಾಳೆ. ಅಜ್ಜಿ 'ಮಗೂ ಸುಸ್ತಾಗಿದ್ದೀಯಾ ಸ್ನಾನ ಮಾಡಿ ಹೋಗು' ಎನ್ನುತ್ತಾಳೆ. ಸ್ನಾನ ಮಾಡಿದ ಕೂಡಲೇ ಒಂದು ಕೂದಲ ರಾಣಿಗೆ ತಲೆ ತುಂಬ ಹೊಳಪಿನ ಕೂದಲು ಬಂದುಬಿಡುತ್ತವೆ. ಅಜ್ಜಿ ತಲೆ ಬಾಚಿ ಉದ್ದನೆಯ ಜಡೆ ಹೆಣೆದು ಕಳಿಸುತ್ತಾಳೆ.
ಗುಲಾಬಿ ಗಿಡ ಅರಳಿದ ಸುಂದರ ಹೂವನ್ನು ಮುಡಿಗೆ ಕೊಡುತ್ತದೆ. ದನ ಹಾಲು ಕೊಡುತ್ತದೆ. ಒಲೆ ಅದನ್ನು ಕಾಯಿಸಿ ರಾಣಿಗೆ ಕುಡಿಸುತ್ತದೆ. ಸರ್ಪ ಮುತ್ತು ರತ್ನಗಳ ಒಡವೆಗಳಿಂದ ರಾಣಿಯನ್ನು ಸಿಂಗರಿಸುತ್ತದೆ. ಅರಮನೆಗೆ ಬಂದಾಗ ರಾಜ ಒಂದು ಕೂದಲ ರಾಣಿಯ ಸೌಂದರ್ಯರಾಶಿಯನ್ನು ಕಂಡು ಮುದ್ದಿನ ಮೂರು ಕೂದಲ ರಾಣಿಗೆ ಗುದ್ದು ಕೊಟ್ಟು ಓಡಿಸಿಬಿಡುತ್ತಾನೆ. ಅವಳು ಮೊದಲ ರಾಣಿಯಲ್ಲಿ ಅವಳ ಕತೆ ಎಲ್ಲವನ್ನೂ ತಿಳಿದುಕೊಂಡು ನಗುತ್ತಾ ಹೋಗುತ್ತಾಳೆ. ದಾರಿಯಲ್ಲಿ ಸಿಕ್ಕ ಯಾರಿಗೂ ಒಳ್ಳೆಯದನ್ನು ಮಾಡುವ ಬದಲಿಗೆ ಕೆಡುಕನ್ನು ಮಾಡುತ್ತಾಳೆ. ಅಜ್ಜಿಗೆ ಗಂಜಿ ಕಾಯಿಸುವ ಬದಲಿಗೆ ಅವಳನ್ನು ಬೈಯ್ಯುತ್ತಾ ಸೀದಾ ಸ್ನಾನಕ್ಕೆ ಓಡುತ್ತಾಳೆ. ನೀರು ಹೊಯ್ದ ತಕ್ಷಣ ಇದ್ದ ಮೂರೂ ಕೂದಲೂ ಉದುರಿ ಮೈಯೆಲ್ಲ ಸುಟ್ಟು ಹೋಗುತ್ತದೆ. ಅಲ್ಲಿಂದ ಬೊಬ್ಬೆ ಹೊಡೆಯುತ್ತ ಬಂದರೆ ಗುಲಾಬಿ ಗಿಡ ಮುಳ್ಳಿನಿಂದ ಪರಚುತ್ತದೆ. ದನ ಹಾಯುತ್ತದೆ, ಒಲೆ ಸುಡುತ್ತದೆ. ಹಾವು ಅವಳನ್ನು ಕೊಂದೇ ಹಾಕುತ್ತದೆ. ಈಗಲೂ ಸೌಂದರ್ಯ ಇಲ್ಲದವರಿಗೆ ಸಿಗುವ ಬೆಲೆ ಅಷ್ಟರಲ್ಲೇ ಇದೆ ಬಿಡಿ. ಆದರೆ ಒಂದು ವೇಳೆ ಕತೆಯೆ ಹಾಗೇನಾದರೂ ಆಗುವಂತಿದ್ದರೆ ಎಷ್ಟು ಜನ ಸುಂದರಿಯರಾಗುತ್ತಿದ್ದರೋ ಎಷ್ಟು ಜನ ಸಾಯುತ್ತಿದ್ದರೋ ಗೊತ್ತಿಲ್ಲ.
ಹಿಂದೆಲ್ಲ ಹೇನು ನೋಡುವ ದೃಶ್ಯ ಎಲ್ಲೆಲ್ಲೂ ಕಾಣುತ್ತಿತ್ತು. ಕೆಲವೊಮ್ಮೆ ಹೆಂಗಸರು ಒಬ್ಬರ ಹಿಂದೆ ಒಬ್ಬರು ರೈಲಿನಂತೆ ಕುಳಿತು ಹೇನು ನೋಡುತ್ತಿದ್ದರು. ಈಗ ಅವಕ್ಕೆಲ್ಲ ಮದ್ದು ಬಂದಿದ್ದರೂ ಹೇನಿನ ಕಾಟ ಮಾತ್ರ ತಪ್ಪಿದಂತೆ ಕಾಣುವುದಿಲ್ಲ. ಇನ್ನು ಈಗಂತೂ ಹೆಣ್ಣು ಮಕ್ಕಳು ಬಾಯ್ ಕಟ್, ಸ್ಟೆಪ್ ಕಟ್, ವಿ ಷೇಪ್, ಯು ಷೇಪ್, ಕರ್ಲ್, ಲೇಸರ್ ಕಟ್ ಅದೂ ಇದೂ ಅಂತ ಕತ್ತರಿಸಿ ಹೇರ್ ಡೈ, ಮೆಹೆಂದಿಯೆಂದೆಲ್ಲ ಹಚ್ಚುತ್ತ, ಬ್ಯೂಟಿ ಪಾರ್ಲರುಗಳಿಗೆ ಹೋಗಿ ಹಲವು ಬಗೆಯ ವಿನ್ಯಾಸ ಮಾಡಿಕೊಂಡು ಸಿಂಗರಿಸಿಕೊಳ್ಳುತ್ತಾರೆ. ಹುಡುಗರೇನೂ ಕಮ್ಮಿಯಲ್ಲ. ಸ್ಪೈಕ್ ಕಟ್, ಗಜನಿ ಕಟ್, ಪಂಕ್ ಕಟ್, ಕ್ಲಾಸಿಕ್ ಕಟ್, ಫ್ಲ್ಯಾಟ್ ಟಾಪ್, ರೆಟ್ರೋ ಕಟ್, ಮೆಸ್ಸಿ ಕಟ್, ಅಲ್ಲದೆ ಒಬ್ಬೊಬ್ಬರು ದೇಶ, ರಾಜ್ಯಗಳ ನಕ್ಷೆ ಕೆತ್ತಿಸಿಕೊಂಡಿರುವುದನ್ನು ಕಾಣುತ್ತೇವೆ. ಉದ್ದಕ್ಕೆ ಕೂದಲು ಬಿಡುವವರೂ ಇದ್ದಾರೆ. ಅವರು ಹೆಣ್ಣು ಮಕ್ಕಳಂತೆ ಕೂದಲು ಹರಡಿಕೊಂಡರೆ ಹೆಣ್ಣೋ ಗಂಡೋ ತಿಳಿಯುವುದಿಲ್ಲ. ಕೆಲವರು ಸಣ್ಣ ಜುಟ್ಟು ಕಟ್ಟಿಕೊಂಡರೆ, ಇನ್ನು ಕೆಲವರು ಇಲಿ ಬಾಲದಂತೆ ಸಪೂರ ಜಡೆಯನ್ನು ಪುರುಸೊತ್ತಿನಲ್ಲಿ ಹೆಣೆದುಕೊಳ್ಳುತ್ತಾರೆ. ಮತ್ತೆ ಕೆಲವರು ನುಣ್ಣಗೆ ಬುರುಡೆ ಹೊಡೆಸಿಕೊಂಡು ಥಳ ಥಳ ಹೊಳೆಯುತ್ತಿರುತ್ತಾರೆ. ಅಂತಹ ಬುರುಡೆಯ ಮೇಲೆ ಬಣ್ಣ ಬಣ್ಣದ ಹಚ್ಚೆ ಹಾಕಿಸಿಕೊಳ್ಳುವವರೂ ಇದ್ದಾರೆ. ಸಣ್ಣಗೆ ಕೂದಲು ಕತ್ತರಿಸಿ ನಡುವೆ ಪಟ್ಟೆಗಳನ್ನು ಹೊಡೆಸಿಕೊಂಡಿರುವವರನ್ನೂ ನೋಡುತ್ತೇವೆ. ಇದು ಜಪಾನಿನ ಗದ್ದೆಗಳನ್ನು ವಿಮಾನದಿಂದ ನೋಡಿದರೆ ಹೇಗೆ ಕಾಣುವುದೋ ಹಾಗೆ ಕಾಣುವುದಿದೆ. ಹುಡುಗರು ಈಗೆಲ್ಲ ಅದೇನೋ ಜೆಲ್ ಸುರಿದುಕೊಳ್ಳುತ್ತಾರೆ. ಹಿರಿಯರು ಆಶೀರ್ವದಿಸಲು ತಲೆ ಮುಟ್ಟಿದರೆ ಕೈಯೆಲ್ಲ ಅಂಟಂಟು!
ಒಬ್ಬರ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿ ಬಿಳಿ ಕೂದಲ ದಂಪತಿಗಳ ಭಾವಚಿತ್ರವನ್ನು ತೂಗು ಹಾಕಲಾಗಿತ್ತು. ಅದರ ಎದುರಿಗೆ ಕಪ್ಪಾನುಕಪ್ಪು ತಲೆಗೂದಲ ಅದೇ ಭಾವಚಿತ್ರದಲ್ಲಿರುವ ದಂಪತಿ ಕುಳಿತು ಮಾತನಾಡುತ್ತಿದ್ದರು. ಬೊಕ್ಕ ತಲೆಯವರನ್ನು ಬಾಣಲೆ, ಟಕ್ಲು, ಪೂರ್ಣ ಚಂದ್ರ, ಅರ್ಧ ಚಂದ್ರ ಎಂದೆಲ್ಲ ಕರೆಯುವುದಿದೆ. ಇಲ್ಲಿ ಚಂದ್ರ ಎನ್ನುತ್ತಾರಾದರೂ ಆ ತಲೆಗಳು ಸೂರ್ಯನಂತೆ ಹೊಳೆಯುವುದೇ ಜಾಸ್ತಿ. ಬೊಕ್ಕ ತಲೆಯಾಗುವುದರಿಂದ ಲಾಭವೂ ಇದೆ ಬಿಡಿ. ಇವರನ್ನು ಅನಾಯಾಸವಾಗಿ ಬುದ್ಧಿವಂತರೆಂದು ಜನ ತಿಳಿದುಬಿಡುತ್ತಾರೆ. ಎಣ್ಣೆಯ ಖರ್ಚೂ ಕಡಿಮೆ. ಹೆಚ್ಚೆಂದರೆ ಒಂದು ಹನಿ ನೆತ್ತಿಯಲ್ಲಿ ಹನಿಸಿಬಿಟ್ಟರಾಯಿತು. ಇಲ್ಲೊಬ್ಬರು ಕಿವಿಯ ಬಳಿ ಉದ್ದ ಕೂದಲು ಬಿಟ್ಟು ಎಣ್ಣೆ, ನೀರು ಹಾಕಿ ಇನ್ನೊಂದು ಕಿವಿವರೆಗೂ ಬರುವಂತೆ ನೆತ್ತಿಯ ಮೇಲೆ ಚೆನ್ನಾಗಿ ತಟ್ಟಿ ಕೂರಿಸುತ್ತಾರೇನೋ ನಿಜ. ಸ್ವಲ್ಪ ಹೊತ್ತಲ್ಲೇ ಗಾಳಿಗೆ ನೆತ್ತಿಯಿಂದ ಹಾರಿ ಕಿವಿಯ ಬಳಿ ಗೇಣುದ್ದದ ಗುಂಗುರು ಮುಂಗುರುಳು ಉಯ್ಯಾಲೆಯಾಡುತ್ತಿರುತ್ತದೆ!
ಕೆಲವರು ಬೊಕ್ಕತಲೆಯಾದರೆ ಸಹಿಸದೆ ಜೀವನ ಪೂರ್ತಿ ತಮಗೆ ತಾವೇ ಟೊಪ್ಪಿ ಹಾಕಿಕೊಳ್ಳುತ್ತಾರೆ. ಇದೆಲ್ಲ ರಗಳೆ ಬೇಡ ಎಂದು ತಲೆಗೆ ನಾಟಿ ಮಾಡಿಸಿಕೊಳ್ಳುವ 'ನಾಟಿ' ಪರ್ಸನಾಲಿಟಿಯವರೂ ಇದ್ದಾರೆ. ಇನ್ನು ಕೆಲವರು ವಿಗ್ಗಿನ ಮೊರೆ ಹೋಗುತ್ತಾರೆ. ಆದರೆ ವಿಗ್ಗು ತೊಟ್ಟಾಗ ಬೆವರು ಬಂದರೆ, ತುರಿಕೆಯಾದರೆ ಹೇಗೆ ಸಹಿಸಬಹುದು ಎಂಬ ಚಿಂತೆ ನನಗೆ.
ವಿಗ್ಗು ಧರಿಸುವುದೇನೋ ಸರಿ, ವಿಗ್ಗಿನ ಬಣ್ಣ, ಆಕಾರ ಸರಿಯಾಗಿರದಿದ್ದರೆ ಎಡವಟ್ಟಾಗುತ್ತದೆ. ವಿಗ್ಗಿನ ಆಕಾರ ಬಣ್ಣ ಸರಿಯಾಗಿದ್ದರೂ ಧರಿಸುವ ಕ್ರಮವೂ ಗೊತ್ತಿರಬೇಕು. ವಿಗ್ಗು ತಲೆಗಿಂತ ದೊಡ್ಡದಿದ್ದರೆ ಮುಗಿದೇ ಹೋಯಿತು. ಒಮ್ಮೆ ಒಬ್ಬ ಮಹಿಳೆ ವಿಗ್ಗನ್ನು ಕೈಯ್ಯಲ್ಲಿಟ್ಟುಕೊಂಡು ಅಂದವಾಗಿ ಜಡೆ ಹೆಣೆದು ತೊಟ್ಟು ಮಲ್ಲಿಗೆ ಮಾಲೆ ಮುಡಿದು ಒಂದು ಮದುವೆ ಮನೆಗೆ ಬಂದರು. ಯಾರೋ ಹಿಂದಿನಿಂದ ಕರೆದರೆಂದು ಸರಕ್ಕನೆ ತಿರುಗಿದರು. ಚಂದವಾದ ಜಡೆ ವಿಗ್ಗಿನ ಸಮೇತ ಗಿರಕ್ಕನೆ ತಿರುಗಿ ಹಣೆಯ ಬಳಿ ನೇತಾಡತೊಡಗಿತು!
ಒಂದೂರಲ್ಲಿ ಒಬ್ಬರಿದ್ದರು ಇಂಥ ವಿಗ್ಗು ಧಾರಿಗಳು. ಶಾಲೆಯ ಬಳಿಯೇ ಅವರ ಪೆನ್ನು ಪುಸ್ತಕದಂಗಡಿಯಿದ್ದುದರಿಂದ ಮಕ್ಕಳು ಅಲ್ಲಿಗೆ ಹೋಗಿಯೇ ಹೋಗುತ್ತಿದ್ದರು. ಹೆಣ್ಣು ಮಕ್ಕಳು ಅಲ್ಲಿಗೆ ಹೋದಾಗ ಸಮಯ ನೋಡಿಕೊಂಡು ಅವರು ಹುಡುಗಿಯರ ಮೈ ಕೈ ಮುಟ್ಟುತ್ತಿದ್ದರು. ಹಾಗಾಗಿ ಒಂದು ದಿನ ಜನರೆಲ್ಲ ಸೇರಿಕೊಂಡು ಚೆನ್ನಾಗಿ ಬಡಿದರು. ಆಗ ಅವರ ವಿಗ್ಗು ಹತ್ತೂ ದಿಕ್ಕುಗಳಿಗೂ ಹಾರಿದ್ದು ಎಲ್ಲೋ ಮಾಯವಾಗಿಬಿಟ್ಟಿತಂತೆ. ಆಮೇಲಿಂದ ಅವರು ವಿಗ್ಗು ತೊಡುವ ಸಾಹಸಕ್ಕೆ ಹೋಗದೇ ಬೊಕ್ಕ ತಲೆಯ ಬುದ್ದಿವಂತರಾದರು.
ಆದ್ದರಿಂದ ತಲೆ ಹೇಗೇ ಇರಲಿ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ವಿಗ್ಗು ಗಿಗ್ಗುಗಳ ಹಂಗಿಲ್ಲದೆ, ನಮಗೆ ನಾವೇ ಗುಗ್ಗುಗಳೆಂದುಕೊಂಡು ತಲೆ ತಗ್ಗಿಸದೆ ಎಗ್ಗು ತಗ್ಗಿಲ್ಲದೇ ಜಗ್ಗದೆ ಕುಗ್ಗದೆ ಹೇಗಿದ್ದೇವೋ ಹಾಗೆ ಹಿಗ್ಗಿನಿಂದ ಬಾಳುವುದೇ ಸರಿಯಲ್ಲವೇ?
-ಮುದ್ದು ತೀರ್ಥಹಳ್ಳಿ, ಸಂಪಾದಕಿ
'ಮಂದಾನಿಲ ಮಾಸಿಕ', ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ