ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸತ್ಯವನ್ನೇ ಹೇಳಿದ್ದೀರಿ ಆದ್ರೂ ಸಾಫ್ಟ್ ಆಗಿರ್ಬೇಕಿತ್ತು

Srinivasa Murthy VN
Updated On : 18 May 2013, 10:32 am

'ಕನ್ನಡಪ್ರಭ' ಪತ್ರಿಕೆಯ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಹಲವಾರು ವರ್ಷಗಳಿಂದ ತಪ್ಪದೇ ಓದಿಕೊಂಡು ಬಂದವನಾಗಿರುತ್ತೇನೆ. ಇತ್ತೀಚೆಗೆ ಪತ್ರಿಕೆ ನೂತನವಾಗಿ ಮಾರ್ಪಾಡುಗಳನ್ನು ಮಾಡಿಕೊಂಡು ನವ ವಧುವಿನಂತೆ ಕಂಗೊಳಿಸುತ್ತಿರುವುದು ಸಂತಸ ತಂದಿದೆ. ಇತ್ತೀಚೆಗೆ ಈ ಪತ್ರಿಕೆಯಲ್ಲಿ ಮುಖ್ಯಮಂತ್ರಿಗಳವರ, ಮಂತ್ರಿ ಮಹೋದಯರ ಹಾಗೂ ಇನ್ನಿತರೆ ಗಣ್ಯರ ಹೆಸರುಗಳನ್ನು ತಿರುಚಿ ಅಡ್ಡ ಹೆಸರಿನಿಂದ ಬರೆಯುವ ದುಸ್ಸಂಪ್ರದಾಯ ಪ್ರಾರಂಭವಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಸಿದ್ದರಾಮಯ್ಯನವರನ್ನು 'ಸಿದ್ದು' ಎಂತಲೂ ಹೀಗೆ ಅನೇಕರ ಹೆಸರನ್ನು ತಿರುಚಿ ಬರೆಯುವುದು ಅವರಿಗೆ ಅಪಹಾಸ್ಯ ಮಾಡಿದಂತಾಗುವುದಿಲ್ಲವೇ? ನೀವು ಇದೇ ಸಂಪ್ರದಾಯವನ್ನು ಮುಂದುವರಿಸಿದರೆ ಇಂದಿನ ಮಕ್ಕಳೂ ಇದೇ ರೀತಿ ಕಲಿಯುವುದು ರೂಢಿ ಮಾಡಿಕೊಂಡು ಬಿಡುತ್ತಾರೆ. ಗೌರವಾನ್ವಿತ ಹುದ್ದೆಯನ್ನು ಅಲಂಕರಿಸಿರುವ ಯಾರೇ ಆಗಲಿ ದಯ ಮಾಡಿ ಅವರುಗಳನ್ನು ಅಡ್ಡ ಹೆಸರಿನಿಂದ ಬರೆಯದೆ ಅವರ ಪೂರ್ಣ ಹೆಸರನ್ನು ಬರೆದು, ತನ್ಮೂಲಕ ನಮ್ಮ ರಾಜ್ಯದ ಘನತೆ, ಗೌರವಗಳನ್ನು ಕಾಪಾಡುವ ಪ್ರಯತ್ನ ಮಾಡೋಣ ಎಂಬುದೇ ನನ್ನ ಆಶಯವಾಗಿದೆ.
-ಪ್ರಹ್ಲಾದರಾಜು ಬುರ್ಲಿ, 1675/43 ನಂದಗೋಕುಲ, ಕೆ.ಹೆಚ್. ರಂಗನಾಥ ಬಡಾವಣೆ, ದಾವಣಗೆರೆ-5

ಕನ್ನಡಪ್ರಭದ ಮುಕ್ಕಾಲು ಓದುಗರ ಅಚ್ಚುಮೆಚ್ಚಿನ ಅಂಕಣ 'ಗೋಡೆಬರಹ' ನಾಪತ್ತೆ ಆಗಿದೆ! ಚುನಾವಣೆ ಭರಾಟೆಯಲ್ಲಿ ಈ ಅಂಕಣ ಪ್ರಕಟಿಸುವುದನ್ನೇ ಮರೆತಿರಾ, ಹೇಗೆ? ಪ್ರತೀ ದಿನದ 'ಬೈಟುಕಾಫಿ'ಯನ್ನು ಓದುಗರಿಗೆ ನೀಡಿರುವಂತೆ ಗೋಡೆಬರಹ ಈ ವಾರದಿಂದಲೇ (ಭಾನುವಾರ) ಬರಲಿ...
-ಬಿ.ಎಸ್. ರಮೇಶ್, ಬೆಳ್ಳಾವೆ, ಬನಶಂಕರಿ, ಬೆಂಗಳೂರು

ಪ್ರತಾಪ್‌ರವರೇ, ಮೇ 18ರ ನಿಮ್ಮ ಅಂಕಣದಲ್ಲಿ ನೀವು ಹೇಳಿರುವುದೆಲ್ಲ ಕಹಿ ಸತ್ಯ. ಆದರೆ ದೇಶಕ್ಕಾಗಿ ತಮ್ಮ ಜೀವನವನ್ನು ಸವೆಸಿದ ಅಡ್ವಾಣಿಯವರನ್ನು ಅತಿಯಾಗಿ ಟೀಕಿಸುವುದು ಸರಿಯಲ್ಲ. ಅಡ್ವಾಣಿಯವರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಹೇಳಿದ್ದೀರ. ಅದೇನು ಸಾಮಾನ್ಯದ ಕೆಲಸವೇ!?ಒಂದು ಕಾಲದಲ್ಲಿ ನರೇಂದ್ರ ಮೋದಿಯಂತೆ ಅಡ್ವಾಣಿಯವರೆಂದರೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು. ಈಗ ಲಾಲು, ದಿಗ್ವಿಜಯ್‌ರಂತಹವರು 'ಅಡ್ವಾಣಿಯವರೇ ನೀವು ಒಂದು ದಿನ ಪ್ರಧಾನಿ ಆಗುವಿರಂತೆ ಬಿಡಿ' ಎಂದು ಟೀಕಿಸುವಂತಾಗಿದೆ. ಇಂತಹ ನೂರಾರು ಟೀಕೆಗಳಿಂದ ನೊಂದು ದೇಶಕ್ಕಾಗಿ ಪಕ್ಷವನ್ನು ಬಲಪಡಿಸಿದ ಆ ಹಿರಿ ಹೃದಯಕ್ಕೆ ಕಠೋರವಾಗಿ ಟೀಕಿಸುವುದು ನಿಮ್ಮ ವರ್ಚಸ್ಸಿಗೆ ಸರಿ ಹೊಂದುವುದಿಲ್ಲ. ಒಂದೇ ಮನೆಯಲ್ಲಿರುವ ಎರಡು ಮಕ್ಕಳಲ್ಲಿ ಒಂದನ್ನು ಅತಿಯಾಗಿ ತೆಗಳಿ, ಒಂದನ್ನು ಅತಿಯಾಗಿ ಹೊಗಳುತ್ತಿದ್ದರೆ, ಆ ಎರಡು ಮಕ್ಕಳಲ್ಲಿ ದ್ವೇಷ ಬೆಳೆಯುತ್ತದೆಯೇ ಹೊರತು, ನಾವು ಬಯಸಿದಂತೆ ಮಕ್ಕಳು ಬೆಳೆಯಲು ಸಾಧ್ಯವಿಲ್ಲ.  ಅಡ್ವಾಣಿಯವರ ಕಡೆಯಿಂದ ತಪ್ಪೇ ನಡೆದಿಲ್ಲ ಎಂದೇನೂ ಇಲ್ಲ. ನೀವು ಬರೆದಿರುವುದೆಲ್ಲ ನಿಜವೇ ಆದರೂ ಅದನ್ನು ಜನರ ಮುಂದಿಡುವಾಗ ಸ್ವಲ್ಪ ಮೃದುತ್ವವಿದ್ದರೆ ಚೆನ್ನ. 'ನನ್ನ ಸ್ಟೈಲೇ ಹಾಗೇ, ಅದಕ್ಕೆ ನಾನು ಜನರಿಗೆ ಇಷ್ಟವಾಗೋದು!' ಎನ್ನುತ್ತೀರೇನೋ ನೀವು!...ಹುಮ್‌ಮ್...
-ಮ್ಹಾಲಸಾ ನಂದನ್ mhalasa@gmail.com

ಬೈಟು ಕಾಫಿಯಲ್ಲಿ ದಯವಿಟ್ಟು ರಾಜಕೀಯದ ವಿಷಯವನ್ನು ಪ್ರಕಟಿಸಬೇಡಿ. ಹಾಗೆ ದಿನಾಂಕ ಏಪ್ರಿಲ್ 11ರ ಸಂಚಿಕೆಯಲ್ಲಿ 'ಪದಸ್ಪರ್ಶ್‌' ಕಾಣಿಯಾಗಿದ್ದು ತುಂಬಾನೆ ಬೇಸರ ತಂದಿತ್ತು. ಅದರ ಬದಲಿಗೆ ಸೇಡಂ ಶಾಸಕರಾದ ಡಾ೤ ಶರಣ್ ಪ್ರಕಾಶ್ ರುದ್ರಪ್ಪ, ಪಾಟೀಲ್‌ರವರ ಪರಿಚಯ ಲೇಖನ ಪ್ರಕಟಿಸಿದ್ದೀರ ಏಕೆ? ಓದುಗರೆ ಬರೆಯುವ 'ಪದಸ್ಪರ್ಶ್‌' ಬದಲು ಶಾಸಕರ ಪರಿಚಯ ಲೇಖನ ಬೇಕಂತೆ?
-ರವಿಕುಮಾರ್ ಜಿ.ಬಿ., ಶ್ರೀವಿನಾಯಕ ಕಾಂಡಿಮೆಂಟ್ಸ್
ನಂ.82, 1ನೇ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು.
ಮೊ. 944 9669897.

ಸಂಪಾದಕರಿಗೆ ಮಾಡುವ ವಂದನೆಗಳು. ಸಾರ್ 'ಆನೆಗಳ ಕಿವಿಯಲ್ಲಿ ಅಂಥೋನಿ ಪಿಸುಮಾತು (14.4.13) ಲೇಖನ ತುಂಬಾ ಚೆನ್ನಾಗಿತ್ತು. ದಯವಿಟ್ಟು ಲಾರೆನ್ಸ್ ಅಂಥೋನಿ ಬಗ್ಗೆ ಇನ್ನಷ್ಟು ಕುತೂಹಲದ, ಆಶ್ಚರ್ಯದ ವಿಷಯಗಳನ್ನು ಬರೆಯುತ್ತೀರೆಂದು ನಂಬಿರುತ್ತೇನೆ.
-ಓಂ ಚನ್ನೇಶ್, ಅರಬಿಳಚಿಕ್ಯಾಂಪ್

ದೀಪಾ ಸನ್ನಿಧಿಯ ಬಗ್ಗೆ "ಬೆಳಗದ ದೀಪ" ಲೇಖನ (ಬೈಟುಕಾಫಿ ಏ.8) ಇಂದಿನ ಕನ್ನಡಚಿತ್ರರಂಗದ ಕಟುವಾಸ್ತವ. ನಿಜ, ನಮ್ಮ ಚಿತ್ರರಂಗದ ಪ್ರಭೃತಿಗಳಿಗೆ ಹಿತ್ತಲಗಿಡ ಮದ್ದಲ್ಲ! ಕನ್ನಡದಲ್ಲಿ ಅವಕಾಶ ಸಿಗದೇ ಪರಭಾಷಾ ರಂಗದಲ್ಲಿ ಪ್ರತಿಭೆಗೆ ಮಣೆ ದೊರೆತು ಮಿಂಚಿದ ಅನುಷ್ಮಾಶೆಟ್ಟಿ, ಪ್ರಿಯಾಮಣಿ, ಸುಚಿತ್ರಶೆಟ್ಟಿ,. ನಿತ್ಯಾಮೆನನ್ ಮೊದಲಾದವರಿಗೆ ಈಗೀಗ ಕನ್ನಡದಲ್ಲಿ ಅವಕಾಶ ದೊರೆಯುತ್ತಿದೆ. ಸುಂದರಿ ದೀಪಾ ಸನ್ನಿಧಿಗೆ ನನ್ನದೊಂದು ಸಲಹೆ. ಹೇಗಾದರೂ ಮಾಡಿ ತೆಲುಗು ಅಥವಾ ತಮಿಳಿನಲ್ಲಿ ಒಂದು ಅವಕಾಶ ಗಿಟ್ಟಿಸಿ ನಂತರ ನೋಡಿ, ಇದೇ ನಿರ್ಮಾತೃಗಳು ನಿಮ್ಮೆದುರು ಡೊಗ್ಗು ಸಲಾಮು ಹೊಡೆದು ಅರ್ಧ ಕೋಟಿ ಕೊಟ್ಟು ಕೈ ತುಂಬಾ ಅವಕಾಶ ಕೊಡುತ್ತಾರೆ.
-ಕೆ. ಆದಿತ್ಯ ಹೆಬ್ಬಾರ್, ಹರಪನಹಳ್ಳಿ, ದಾವಣಗೆರೆ ಜಿಲ್ಲೆ

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement