ಭುಜದ ಮೇಲೆ ನೊಗ ಹೊತ್ತು ಭೂಮಿಯನ್ನು ಉತ್ತಿದ್ದು!
ವಿಧಾನ ಮಂಡಲ ಅಧಿವೇಶನ ಮುಗಿದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆಯೇ ದಿನಪತ್ರಿಕೆಯೊಂದರಲ್ಲಿ , ಒಬ್ಬ ಮಹಿಳೆಯು ತನ್ನ ಭುಜದ...
ವಿಧಾನ ಮಂಡಲ ಅಧಿವೇಶನ ಮುಗಿದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆಯೇ ದಿನಪತ್ರಿಕೆಯೊಂದರಲ್ಲಿ , ಒಬ್ಬ ಮಹಿಳೆಯು ತನ್ನ ಭುಜದ ಮೇಲೆ ನೊಗ ಹೊತ್ತು ಭೂಮಿಯನ್ನು ಉಳುತ್ತಿರುವ ಚಿತ್ರವನ್ನು ಪ್ರಕಟಿಸಲಾಗಿತ್ತು. ತಕ್ಷಣವೇ ಮುಖ್ಯ ಮಂತ್ರಿಗಳ ಕಚೇರಿಯಿಂದ ನನಗೆ ದೂರವಾಣಿ ಕರೆ ಬಂದಿತು. ಈ ಚಿತ್ರ ಮಾನವ ಹಕ್ಕು ಉಲ್ಲಂಘನೆ, ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರತೀಕವಾಗಿದೆ. ಇದು ದೊಡ್ಡ ಹಗರಣವಾಗಿ ಅಂತಾರಾಷ್ಟ್ರೀಯ ಮಟ್ಟದವರೆಗೂ ಹೋಗಿ ಸರ್ಕಾರವನ್ನು ತೊಂದರೆಗೀಡುಮಾಡುವ ಸಾಧ್ಯತೆಯಿತ್ತು. ಬೆಳಗಾವಿ ನಗರದಿಂದ ಮೂವತ್ತು ಕಿಲೋಮೀಟರುಗಳ ದೂರದ ಹಳ್ಳಿಯಲ್ಲಿ ಈ ಚಿತ್ರವನ್ನು ತೆಗೆಯಲಾಗಿತ್ತು. ನಾನು ತಕ್ಷಣವೇ ಕೃಷಿ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪಂಚಾಯತಿ ಸದಸ್ಯರುಗಳನ್ನೂ ಕರೆದುಕೊಂಡು ಆ ಸ್ಥಳಕ್ಕೆ ಹೋದೆ. ಚಿತ್ರದಲ್ಲಿದ್ದ ಮಹಿಳೆಯ ಮನೆಗೆ ಹೋಗಿ ನೋಡಿದರೆ, ಅವರು ಬಡವರಾಗಿರಲಿಲ್ಲ. ಅದು ಉತ್ತಮ ಮಟ್ಟದಲ್ಲಿದ್ದ ರೈತ ಕುಟುಂಬವಾಗಿತ್ತು. ಅವರನ್ನು ಪ್ರಶ್ನೆ ಮಾಡಿದಾಗ ಅವರ ಉತ್ತರ ಇಂತಿತ್ತು- 'ನಮ್ಮ ಭೂಮಿಯಲ್ಲಿ ಮಣ್ಣು ತುಂಬಾ ಮೃದುವಾಗಿದೆ. ಎತ್ತುಗಳನ್ನು ಕಟ್ಟಿಕೊಂಡು ಉಳಲು ಹೋದರೆ ಸರಿ ಹೋಗುವುದಿಲ್ಲ. ಬಹಳ ಆಳಕ್ಕೆ ಸುಲಭವಾಗಿ ಇಳಿದು ಬಿಡುತ್ತದೆ. ನಮಗೆ ಹಗುರವಾಗಿ ಮೇಲ್ಮಟ್ಟದಲ್ಲಿ ಮಾತ್ರ ಉಳಬೇಕಾಗಿದೆ. ಈ ರೀತಿ ಮನೆ ಮಂದಿಯೆಲ್ಲಾ ಸೇರಿ ತಮ್ಮ ಭುಜಗಳ ಮೇಲೆ ನೊಗವನ್ನಿಟ್ಟುಕೊಂಡು ಹಗುರವಾಗಿ ಉಳುವುದು ನಮಗೆ ಸರ್ವೇ ಸಾಮಾನ್ಯ. ಇದನ್ನೇಕೆ ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದೀರಿ?' ಅಂದರು. ಉಳಿದ ಹಳ್ಳಿಯ ರೈತರೂ ಸಹ ಅವರ ಮಾತನ್ನು ಅನುಮೋದಿಸಿದರು. 'ಬೇರೆಯವರನ್ನು ಕರೆಸಿ ದುಡ್ಡು ಕೊಟ್ಟು ಕೆಲಸ ಮಾಡಿಸಲು ನಮಗಾಗುವುದಿಲ್ಲ. ಹಾಗಾಗಿ ಈ ಕೆಲಸವನ್ನು ಮನೆಯವರೇ ಮಾಡಿಕೊಳ್ಳುತ್ತೇವೆ. ನಮ್ಮ ಭೂಮಿಯ ಸೇವೆ ನಮ್ಮ ಕೆಲಸ. ಅದರಲ್ಲೇನಿದೆ?' ಎಂದರು. ನಾನೂ ಒಮ್ಮೆ ನೋಗ ಹೊತ್ತು ನೋಡುತ್ತೇನೆ ಎಂದು ವಿನಂತಿಸಿಕೊಂಡೆ. ನಂತರ ಭುಜದ ಮೇಲೆ ನೊಗ ಹೊತ್ತು ಭೂಮಿಯನ್ನು ಉತ್ತಲು ಪ್ರಯತ್ನಿಸಿದೆ. ಆಗ ಮೊಬೈಲಿನಿಂದ ಒಂದು ಚಿತ್ರವನ್ನು ತೆಗೆಯಲು ನನ್ನ ವಾಹನ ಚಾಲಕನಿಗೆ ಹೇಳಿದೆ. ಆ ಚಿತ್ರವನ್ನು ಮುಖ್ಯ ಮಂತ್ರಿಗಳಿಗೆ ಕಳುಹಿಸಿ ವಸ್ತುಸ್ಥಿತಿಯನ್ನು ತಿಳಿಸಿದೆ! ಪತ್ರಿಕೆಯಲ್ಲಿ ಪ್ರಕಟವಾದ ಆ ಚಿತ್ರ ನಿಜಕ್ಕೂ ಸರ್ಕಾರವನ್ನು ಮೊದಲುಗೊಂಡು ಎಲ್ಲರನ್ನೂ ಬೇಸ್ತು ಬೀಳಿಸಿತ್ತು.
ಆ ಸಮಯದಲ್ಲಿ ಇನ್ನೊಂದು ಪತ್ರಿಕೆಯಲ್ಲಿ ಬಂದ ವರದಿ ಭೂಕಂಪದ ತರಹ ಬಂದೆರಗಿತು. ಜಿಲ್ಲೆಯ ಖಾನಾಪುರ ತಾಲೂಕಿನ, ಪಶ್ಚಿಮ ಘಟ್ಟದ ಅತೀ ದೊಡ್ಡ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿದೆಯೆಂಬುದು ಆ ಸುದ್ದಿಯಾಗಿತ್ತು. ಪರಿಸರವಾದಿಗಳಾದಿಯಾಗಿ ಅನೇಕರು ಈ ವಿಷಯ ಹಿಡಿದುಕೊಂಡು ದೊಡ್ಡ ವಿವಾದವನ್ನೇ ಸೃಷ್ಟಿಸಬಹುದೆಂದು ಅನ್ನಿಸಿ, ವಸ್ತುಸ್ಥಿತಿಯನ್ನು ಸ್ವತಃ ತಿಳಿಯಲು ನಿರ್ಧರಿಸಿದೆ. ಎಲ್ಲಾ ಪತ್ರಿಕೆಯವರೂ ನನ್ನನ್ನು ಸಂಪರ್ಕಿಸಿ, ಸುದ್ದಿಯಲ್ಲಿ ಸತ್ಯಾಂಶವಿದ್ದರೆ ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಕೇಳಲಾರಂಭಿಸಿದರು. ನಾನಂದೆ, 'ನೋಡಿ, ನಾನು ಸ್ಥಳೀಯ ತಹಶೀಲ್ದಾರ್ ಅಥವಾ ರೆವಿನ್ಯೂ ಇನ್ಸ್‌ಪೆಕ್ಟರ್‌ಗಳಿಂದ ಮಾಹಿತಿ ಪಡೆದು ನಿಮಗೆ ನೀಡಬಹುದು. ಆದರೆ ಅದನ್ನು ನೀವು ನಂಬದೇ ಇರಬಹುದು. 'ಅಧಿಕಾರಿಗಳು ದುಡ್ಡು ತಿಂದು ಅಲ್ಲಿ ಎಲ್ಲವೂ ಸರಿಯಾಗಿದೆ ಎಂದು ವರದಿ ನೀಡಿದ್ದಾರೆ, ಅಥವಾ ಪ್ರಭಾವೀ ರಾಜಕಾರಣಿಗಳು ಇದರಲ್ಲಿ ಶಾಮೀಲುಗೊಂಡಿದ್ದಾರೆ' ಅನ್ನಲೂಬಹುದು. 'ಅದಕ್ಕೇ ನಾನೇ ಅಲ್ಲಿಗೆ ಹೋಗಿ ಬಂದು, ಸಂಜೆ ನಿಮಗೆ ವಸ್ತುಸ್ಥಿತಿಯನ್ನು ತಿಳಿಸುತ್ತೇನೆ. ನಿಮಗೂ ನನ್ನ ಜೊತೆ ಬರಬೇಕೆನಿಸಿದರೆ, ಖಂಡಿತ ಬರಬಹುದು'
ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿ ಅನಿರೀಕ್ಷಿತವಾಗಿ ಸ್ಥಳ ಪರಿಶೀಲನೆ ಮಾಡಲಿಚ್ಛಿಸುತ್ತೇನೆ ಎಂದೆ. ಆಗ ಅವರು, 'ಅಲ್ಲಿ ಭೀಮಘರ್ ಎನ್ನುವ ಪ್ರಾಚೀನ ಕೋಟೆ ಇದೆ. ಇದು ಬೆಳಗಾವಿ ಮತ್ತು ಗೋವಾದ ಗಡಿಯಲ್ಲಿ ಬರುತ್ತದೆ. ಬೆಳಗಾವಿಯಿಂದ ಒಂದೂವರೆ ಗಂಟೆ ರಸ್ತೆಯ ಮೇಲೆ ಪ್ರಯಾಣ ಮಾಡಿ ಸುಮಾರು ಹದಿಮೂರರಿಂದ ಹದಿನಾಲ್ಕು ಕಿಲೋಮೀಟರುಗಳು ದಟ್ಟ ಅರಣ್ಯದಲ್ಲಿ ನಡೆಯಬೇಕು. ಅದಕ್ಕೆ ತಾವು ಸಿದ್ಧರಿರಬೇಕು. ಹಾಗೂ ಸಂಜೆಯ ನಾಲ್ಕು ಗಂಟೆಯ ಒಳಗೆ ನಾವು ಅರಣ್ಯವನ್ನು ಬಿಡಬೇಕು, ಏಕೆಂದರೆ ಅಲ್ಲಿ ಕತ್ತಲೆ ಬಹಳ ಬೇಗ ಆಗುತ್ತದೆ' ಎಂದರು. ಹಾಗಾಗೇ ಬೆಳಗಿನ ಎಂಟು ಗಂಟೆಗೆಲ್ಲಾ ಬೂಟು, ಟೊಪ್ಪಿ ಧರಿಸಿ ಹೊರಟೆ. ನಮಗೆ ಐ.ಎ.ಎಸ್. ಅಕಾಡೆಮಿಯ ತರಬೇತಿಯಲ್ಲಿ ಟ್ರೆಕ್ಕಿಂಗ್ ಅನುಭವ ದೊರೆತಿರುವುದು ಅಂದು ನನಗೆ ಉಪಯೋಗಕ್ಕೆ ಆಯಿತು ಎನಿಸಿತು. ರಜನೀಶ್ ಅವರನ್ನು ಭೀಮಘರ್‌ಗೆ ಟ್ರೆಕ್ಕಿಂಗ್‌ಗೆ ಆಹ್ವಾನಿಸಿದೆ. ಅವರೂ ಅತ್ಯಂತ ಖುಷಿಯಿಂದ ಜೊತೆಗೆ ಬಂದರು.
ಸುಮಾರು ಹನ್ನೊಂದು ಗಂಟೆಗೆ ನಾವು ಅರಣ್ಯದಲ್ಲಿ ನಡೆಯಲು ಪ್ರಾರಂಭ ಮಾಡಿದೆವು. ದಾರಿಯಲ್ಲಿ ಇಲಾಖೆಯ ಒಬ್ಬ ಅಧಿಕಾರಿ ನಮಗೆ ಪ್ರತಿಯೊಂದು ಗಿಡದ ಬಗ್ಗೆ ಮಾಹಿತಿ ನೀಡುತ್ತಾ ಹೋದರು. ಮಳೆಗಾಲದಲ್ಲಿ ಕೆಲವೊಮ್ಮೆ ಜಿಗಣೆಗಳು ಇರುತ್ತವೆ, ಅದಕ್ಕೇ ಒಂದು ಗಿಡದ ಎಲೆಯನ್ನು ಕಾಲಿನ ಮೇಲೆ ಉಜ್ಜಿಕೊಂಡರೆ ಅವು ಹತ್ತಿರ ಬರುವುದಿಲ್ಲ ಎಂದರು. ಒಂದು ವೇಳೆ ಜಿಗಣೆಗಳು ಹಿಡಿದರೆ ರಕ್ತವನ್ನು ನಿಲ್ಲಿಸಲು ಇನ್ನೊಂದು ಎಲೆಯನ್ನು ತೆಗೆದುಕೊಟ್ಟರು. ದಾರಿಯಲ್ಲಿ ಓಟೆಯಿಲ್ಲದ ರಸಭರಿತ ಕೆಂಪು ಹಣ್ಣುಗಳು ಸಿಕ್ಕಿದವು. ಇದನ್ನು ತಿನ್ನಬಹುದು ಎಂದು ಅವರು ಹೇಳಿದಾಗ ನಾವೂ ತಿಂದೆವು. ತುಂಬಾ ರುಚಿಯಾಗಿದ್ದವು. ಒಳಗೆ ಯಾವ ಕಾಲದಾರಿಯೂ ಇರಲಿಲ್ಲ. ಎಲ್ಲಿ ಜಾಗ ಸಿಗುತಿತ್ತೋ ಆ ಮೂಲಕವೇ ನಾವು ಮುಂದೆ ಸಾಗುತ್ತಿದ್ದೆವು. ನಮ್ಮ ಅರಣ್ಯ ಪ್ರದೇಶಗಳು ಸೌಂದರ್ಯದ ಮತ್ತು ಸಂಪತ್ತಿನ ದೊಡ್ಡ ಭಂಡಾರಗಳು. ಇಲ್ಲಿ ಯಾವ ರೈತನೂ ಭೂಮಿಗೆ ಗೊಬ್ಬರ ಹಾಕಬೇಕಾಗಿಲ್ಲ, ನೀರಾವರಿ ವ್ಯವಸ್ಥೆಯನ್ನು ಮಾಡಬೇಕಾಗಿಲ್ಲ, ಆದರೂ ಅಮೂಲ್ಯವಾದಂಥ ಉತ್ಪನ್ನಗಳು ನಿರಂತರವಾಗಿ ಬೆಳೆಯುತ್ತಿರುತ್ತವೆ. ಇವುಗಳ ಬಗ್ಗೆ ತಿಳಿದುಕೊಂಡು, ಆಯುರ್ವೇದ ವಿದ್ಯೆಯ ಮೂಲಕ ಗುಣಾವಗಣುಗಳನ್ನು ಅರಿತು, ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಿಗಳನ್ನು ತಯಾರಿಸಲು ಕ್ರಮ ಜರುಗಿಸಿದರೆ, ಎಷ್ಟೊಂದು ಜನರಿಗೆ ಉದ್ಯೋಗ ಹಾಗೂ ಆದಾಯವನ್ನು ಸೃಷ್ಟಿಸಬಹುದೋ ಯೋಚಿಸಿ?
ಆ ಅರಣ್ಯದಲ್ಲಿ ಕೆಲವು ಕಾಡು ಮೊಲ, ಕಾಡು ಹಂದಿ ನಮಗೆದುರಾದವು. ಕೆಲವೊಮ್ಮೆ ಕರಡಿಗಳೂ ಸಹ ಬರುತ್ತವೆ ಎಂದು ತಿಳಿಸಿದರು. ನಡೆಯುತ್ತಾ ನಡೆಯುತ್ತಾ ನಾವು ಒಂದು ಜಾಗಕ್ಕೆ ಬಂದಿದ್ದೆವು. ಅಲ್ಲಿ ಉದ್ದ್‌ಡಕ್ಕಿ ಜಲಪಾತವನ್ನು ಕಂಡೆವು. ಕೆಳಗೆ ಕಣಿವೆ ಇತ್ತು. ಕೆಲವೊಂದು ಮನೆಗಳೂ ಇದ್ದವು. ಭತ್ತದ ಗದ್ದೆಗಳೂ ಸಹ ಕಾಣುತ್ತಿದ್ದವು. ಆದರೆ ಎಲ್ಲಿಯೂ ಗಣಿಗಾರಿಕೆಯ ಚಟುವಟಿಕೆಗಳು ಕಾಣುತ್ತಿರಲಿಲ್ಲ. ಆಚೆಯ ಕಡೆಗೆ ಗೋವಾದ ಗಡಿರೇಖೆ ಇತ್ತು. ಆ ದಿಕ್ಕಿನಲ್ಲಿ ರಸ್ತೆಯ ಸಂಪರ್ಕವಿದ್ದಿತು. ಗೋವಾಗೆ ಹೋಗುವವರು ಆ ಜಾಗದಲ್ಲಿ ನಿಂತು ಜಲಪಾತವನ್ನು ವೀಕ್ಷಿಸುತ್ತಿದ್ದರು. ಇದೇ ದಾರಿಯಿಂದ ಗಣಿಗಾರಿಕೆಯ ವಾಹನಗಳು ಬರಬಹುದಾಗಿತ್ತು. ನಾವೂ ಸಹ ರಸ್ತೆಯ ಮೂಲಕ ಈ ಕಡೆಗೆ ಬರಬಹುದಿತ್ತು. ಆದರೆ ಅರಣ್ಯದ ನೈಜ ಪರಿಚಯ ಆಗುತ್ತಿರಲಿಲ್ಲ. ಜಲಪಾತದ ಮೇಲುಭಾಗದ ಸುಮಾರು ಎರಡಡಿ ಅಗಲದ ಕಾಲುದಾರಿಯ ಮೇಲೆ ಕೋಲುಗಳನ್ನು ಹಿಡಿದು ನಾವು ಮುಂದೆ ಸಾಗಿದೆವು. ಸ್ವಲ್ಪ ಕಾಲು ಜಾರಿದರೂ ನಮ್ಮ ಕಥೆ ಮುಗಿಯುತ್ತಿತ್ತು. ಇನ್ನು ಮುಂದೆ ನಾವು ಸ್ವಲ್ಪ ಗುಡ್ಡ ಹತ್ತಿದರೆ ಬೃಹತ್ ಭೀಮಘರ್ ಕೋಟೆ ಕಾಣುತ್ತಿತ್ತು. ಶಿವಾಜಿಯ ಕಾಲದ ಈ ಕೋಟೆ ಅಂದು ಪಾಳು ಬಿದ್ದಿತ್ತು. ಕಲ್ಲಿನ ಆ ಕೋಟೆ ಒಂದೊಮ್ಮೆ ಭದ್ರತೆಯ ಪ್ರತೀಕವಾಗಿದ್ದಿತು. ಕೆಳಗಡೆ ಗುಹೆಗಳು ಇದ್ದವು. ಕಲ್ಲಿನ ಮೂರ್ತಿಗಳೂ ಇದ್ದವು. ಈಗಲೂ ಯಾರೋ ಪೂಜೆ ಮಾಡುತ್ತಿದ್ದಾರೆ ಎಂದು ಅನಿಸಿತು. ಆದರೆ ಬಹಳಷ್ಟು ಕಲ್ಲುಗಳನ್ನು ಜನ ಸಾಗಿಸಿದ್ದುದರ ಪರಿಣಾಮವಾಗಿ ಅದು ವಿನಾಶದ ಅಂಚಿನಲ್ಲಿತ್ತು. ಇಂಥಹ ಅಪೂರ್ವ ತಾಣಗಳನ್ನು ಅಭಿವೃದ್ಧಿ ಪಡಿಸಿದರೆ ಜನರಿಗೆ ಸಾಹಸದ ಜೊತೆಗೆ ಐತಿಹಾಸಿಕ ಜ್ಞಾನವೂ ಲಭ್ಯವಾಗುತ್ತದೆ ಎನಿಸಿತು. ಎಲ್ಲಾ ಸ್ಥಳಗಳ ಪರಿಶೀಲನೆಯ ಚಿತ್ರಗಳನ್ನು ಸೆರೆ ಹಿಡಿದು, ಹುಟ್ಟುವಳಿಯ ನಕಾಶೆಯನ್ನೂ ಹಾಗೂ ಜಾಗದ ಆಸ್ತಿಯ ವಿವರಣೆಗಳನ್ನೂ ರೆವಿನ್ಯೂ ಅಧಿಕಾರಿಗಳಿಂದ ಪಡೆದು ವಿಚಾರಣೆ ಮುಗಿಸಿದೆವು. ವಾಪಸ್ಸು ಬಂದು ಪತ್ರಿಕಾ ಗೋಷ್ಠಿಯನ್ನು ಮಾಡಿ ಈ ವಿಷಯಗಳನ್ನು ಹಂಚಿಕೊಂಡಾಗ ಎಲ್ಲರಿಗೂ ಸಮಾಧಾನವಾಗಿತ್ತು.
ಆಡಳಿತದಲ್ಲಿ ಸಮಯಕ್ಕೆ ಸರಿಯಾಗಿ ಪತ್ರಿಕೆಗಳ ಪ್ರಕಟಣೆಗಳನ್ನು ಗಮನಿಸಿ ಕ್ರಮ ಜರುಗಿಸಿದರೆ ಸುಮಾರು ಅನಾಹುತಗಳನ್ನು ತಡೆಹಿಡಿಯಬಹುದು.
(ಮುಂದುವರೆಯುವುದು)
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com