ಅಂಕಣಗಳು

ಇದು ಯುಪಿಎ ಅಲ್ಲ, ದೇಶಕ್ಕೆ ಭಾರವಾಗಿರುವ ಎನ್‌ಪಿಎ

ಬ್ಯಾಂಕಿಂಗ್ ಪರಿಭಾಷೆಯಲ್ಲಿ ಹೇಳುವುದಾದರೆ ಬ್ಯಾಂಕುಗಳ ಸಾಲ ಮತ್ತು ಬಡ್ಡಿ ಪ್ರಮಾಣ.

Non Performing Asset.
ಬ್ಯಾಂಕಿಂಗ್ ಪರಿಭಾಷೆಯಲ್ಲಿ ಹೇಳುವುದಾದರೆ ಬ್ಯಾಂಕುಗಳ ಸುಸ್ತಿ ಸಾಲ ಮತ್ತು ಬಡ್ಡಿ ಪ್ರಮಾಣ. ಈ ಪ್ರಮಾಣ ಹೆಚ್ಚಿದಂತೆ ಬ್ಯಾಂಕಿನ ಆರ್ಥಿಕ ಆರೋಗ್ಯ ಕುಸಿಯುತ್ತದೆ. ಬ್ಯಾಂಕುಗಳು ತಮ್ಮ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು, ಸೂಕ್ತ ಪರಿಶೀಲನೆ, ಪರಾಮರ್ಶೆ ನಡೆಸದೆ ನೀಡುವ ಸಾಲ ಅವಧಿ ಮೀರಿ ವರ್ಷಗಳೇ ಕಳೆದರೂ ವಾಪಸ್ ಬಾರದೆ,  ಸಾಲಗಾರನೇ ನಾಪತ್ತೆಯಾಗಿ, ಸಾಲ ವಸೂಲಾತಿ ಅಸಾಧ್ಯ ಎಂದಾದಾಗ ಬ್ಯಾಂಕಿಗೆ ಉಂಟಾಗುವ ನಷ್ಟವನ್ನು ಃಕಿಆ  ಎಂದು ಕರೆಯಲಾಗುತ್ತದೆ. ಆರ್ಥಿಕ ಉದಾರೀಕರಣ ನೀತಿಗಳು ಜಾರಿಗೆ ಬಂದಾಗಿನಿಂದಲಂತೂ ಬ್ಯಾಂಕುಗಳ ಸ್ವರೂಪವೂ ಬದಲಾಗಿದೆ. ಖಾಸಗಿ ಬ್ಯಾಂಕುಗಳು ಗಣನೀಯ ಸಂಖ್ಯೆಯಲ್ಲಿ ವೃದ್ಧಿಸಿವೆ. ಈ ಬ್ಯಾಂಕುಗಳಿಗೆ ಬಂಡವಾಳ ಮರುಹೂರಣಕ್ಕೆ ಅದರ ಃಕಿಆ ಪ್ರಮಾಣ ಬಹಳ ಮುಖ್ಯ. ಈ ಪ್ರಮಾಣ ಅಂಕೆ ಮೀರಿದರೆ ಬ್ಯಾಂಕು ದಿವಾಳಿಯಾಗುವುದು ಖಚಿತ. ಇದು ಬ್ಯಾಂಕುಗಳ ಪಾಲಿಗೆ ಆರ್ಥಿಕ ಹೊರೆ. ಒಂದು ನಯಾಪೈಸೆ ಲಾಭ ತರದ ಬಂಡವಾಳ. ಅನುತ್ಪಾದಕ ವೆಚ್ಚ. ಈಗ ಯೋಚಿಸಿ ಒಂಬತ್ತು ವರ್ಷಗಳ ಹಿಂದೆ ಅಚಾನಕ್ಕಾಗಿ ಹಾಗೂ ನಾಲ್ಕು ವರ್ಷಗಳ ಹಿಂದೆ ಪ್ರಜ್ಞಾಪೂರ್ವಕವಾಗಿ ಮತ್ತು ನಿರೀಕ್ಷೆಗಳ ಮೂಟೆ ಹೊತ್ತು ಮತದಾರ ಯುಪಿಎ ಸರ್ಕಾರದ ಮೇಲೆ ಹೂಡಿದ ವಿಶ್ವಾಸದ ಬಂಡವಾಳದಿಂದ ಆತನಿಗೆ ಏನಾದರೂ  ರಿಟರ್ನ್ಸ್ (ಲಾಭ) ಸಿಕ್ಕಿದೆಯೇ? ಅಥವಾ ಯುಪಿಎ ಸಹ ದೇಶದ ಪಾಲಿಗೆ ಎನ್‌ಪಿಎ ಆಗಿದೆಯೇ? ಇವೆರಡರ ನಡುವೆ ಏನಾದರೂ ವ್ಯತ್ಯಾಸ ಕಾಣುತ್ತಿದೆಯೇ? ರೈತರು, ಕಾರ್ಮಿಕರು, ಬಂಡವಾಳಿಗರು, ಮಧ್ಯಮ ವರ್ಗ, ಧನಿಕ ಹೀಗೆ ಎಲ್ಲರೂ ಈ ಯುಪಿಎ ಎಂಬ ಸರ್ಕಾರದಲ್ಲಿ ಹೂಡಿದ ಬಂಡವಾಳಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆಯೇ? ಯಾವುದೇ ಒಂದು ವರ್ಗವಾದರೂ ಸುಪ್ರೀತವಾಗಿದೆಯೇ?
ಎಲ್ಲ ಸಂಕೇತಗಳೂ ನಕಾರಾತ್ಮಕವಾಗಿವೆ. ಆಡಳಿತ, ನೀತಿ ನಿರೂಪಣೆ, ಆರ್ಥಿಕ ಚತುರತೆ ಮತ್ತು ಎಲ್ಲಕ್ಕಿಂತ ವಿಶ್ವಾಸಾರ್ಹತೆ, ಈ ಎಲ್ಲ ವಿಷಯದಲ್ಲಿಯೂ ಯುಪಿಎ ಎಡವಿರುವುದು ಸ್ಪಷ್ಟ. ಇದೇ 22, ಬುಧವಾರ ಪ್ರಧಾನಿ ಮನಮೋಹನ್ ಸಿಂಗ್ ಯುಪಿಎ-2 ಸರ್ಕಾರ ನಾಲ್ಕು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಾಧನೆಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿದ್ದಾರೆ. ಇದು ಪ್ರತಿ ವರ್ಷದ ವಾಡಿಕೆ. ಕನಿಷ್ಠ ಈ ನೆಪದಲ್ಲಾದರೂ ಕಾಂಗ್ರೆಸ್ ನಾಯಕರು ತಮ್ಮ ಅಂಗ ಪಕ್ಷಗಳ ನಾಯಕರ ಮುಖ ನೋಡಲು, ಮರೆತಿದ್ದರೆ ನೆನಪಿಸಿಕೊಳ್ಳಲು ಒಂದು ಅವಕಾಶ ಪಡೆಯುತ್ತಾರೆ. ಅಷ್ಟು ಬಿಟ್ಟರೆ ಇಲ್ಲಿ ಇನ್ನಾವ ಘನ ಚಿಂತನ-ಮಂಥನವೂ ನಡೆದಿಲ್ಲ. ಈ ಬಾರಿಯೂ ನಡೆಯುವ ಲಕ್ಷಣಗಳಿಲ್ಲ. ಇಷ್ಟಕ್ಕೂ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲು ಈ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕಡಿದು ಕಟ್ಟೆ ಹಾಕಿರುವುದಾದರೂ ಏನು? ಎಡವದೆ, ಎಡವಟ್ಟು ಮಾಡಿಕೊಳ್ಳದೆ ನೆಟ್ಟಗೆ ಒಂದಾದರೂ ಹೆಜ್ಜೆ ಇಟ್ಟಿದೆಯೇ?
2009ರಲ್ಲಿ ದೇಶದ ಮತದಾರ ಮನಮೋಹನ್ ಸಿಂಗ್ ಅವರ ಕೈಗೆ ಎರಡನೇ ಬಾರಿಗೆ ಆಡಳಿತ ನೀಡುವ ಅವಕಾಶ ಕಲ್ಪಿಸಿದಾಗ ಪೆಟ್ರೋಲ್ ಬೆಲೆ 50ರ ಆಸು-ಪಾಸಿನಲ್ಲಿತ್ತು. ಡೀಸೆಲ್ ಬೆಲೆ ರೂ.40 ದಾಟಿರಲಿಲ್ಲ. ಹಣದುಬ್ಬರ ಕೈಯಳತೆಯಲ್ಲಿತ್ತು. ಆದರೆ ಇಂದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಯಾವುದು ಹೆಚ್ಚು ದುಬಾರಿ ಎಂಬ ಪೈಪೋಟಿಗೆ ಬಿದ್ದಂತಿವೆ. ಪೆಟ್ರೋಲ್ ಅಂತೂ 80 ಗಡಿಯನ್ನು ದಾಟಿ ಬಂದಿದೆ. ಇತ್ತೀಚೆಗೆ ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಇನ್ನು ಹಣದುಬ್ಬರವಂತೂ ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಈಗ ಹತೋಟಿಗೆ ಬರುವ ಲಕ್ಷಣ ಕಾಣುತ್ತಿದೆಯಾದರೂ ಅದು ಕೃತಕ ಇಳಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ಸರ್ಕಾರದ ಹಣದುಬ್ಬರ ಲೆಕ್ಕಾಚಾರವನ್ನು ನಂಬಲು ಭಾರತೀಯ ರಿಸರ್ವ್ ಬ್ಯಾಂಕ್ ಸಿದ್ಧವಿಲ್ಲ. ಹಾಗೆಂದೇ ಅದು ಕಳೆದ ಐದಾರು ತಿಂಗಳಿಂದ ಬ್ಯಾಂಕ್ ದರಗಳಲ್ಲಿ ಗಣನೀಯ ಇಳಿಕೆ ಮಾಡಲು ಹಿಂಜರಿಯುತ್ತಿದೆ. ಈ ವಿಷಯದಲ್ಲಿ ಹಣಕಾಸು ಇಲಾಖೆಯ ಧಮಕಿಗೂ, ಗೋಗರೆತಕ್ಕೂ ಅದು ತಲೆ ಬಾಗಿಲ್ಲ. ಶೇ.6ರಿಂದ 8ರ ಬಡ್ಡಿ ದರದಲ್ಲಿ ಸಿಗುತ್ತಿದ್ದ ನಾನಾ ಬಗೆಯ ಸಾಲ ಈಗ ಶೇ. 10ರಿಂದ 12ರವರೆಗೆ  ತಲುಪಿದೆ. ಇದು ಏನನ್ನು ಸೂಚಿಸುತ್ತದೆ? ಇನ್ನು ವಿದೇಶಿ ಬಂಡವಾಳ ಆಕರವಂತೂ ಬಹುತೇಕ ಸ್ತಬ್ಧವಾಗಿದೆ. ತೀರಾ ಇತ್ತೀಚೆಗೆ ವಿತ್ತ ಸಚಿವ ಚಿದಂಬರಂ ಅವರು ನಾನಾ ದೇಶಗಳನ್ನು ಸುತ್ತಿ ಇಲ್ಲಿ ಬಂಡವಾಳ ಹೂಡುವಂತೆ ಮಾಡಿದ ಮನವಿ ಸಹ ಪ್ರಯೋಜನಕ್ಕೆ ಬಂದಿಲ್ಲ. ಇದು ಏನನ್ನು ಹೇಳುತ್ತದೆ? ಕುಸಿಯುತ್ತಿರುವ ದೇಶದ ಆರ್ಥಿಕತೆಗೆ ಚೈತನ್ಯ ತುಂಬಲು ಮಂತ್ರ ದಂಡ ಎಂದೇ ಬಿಂಬಿಸಿ ಬಹುತೇಕ ಎಲ್ಲರ ವಿರೋಧದ ನಡುವೆಯೂ ಜಾರಿಗೆ ಬಂದ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಪ್ರಸ್ತಾಪದಿಂದ ಈವರೆಗೆ ಎಷ್ಟು ಕೋಟಿ ಡಾಲರ್ ಬಂಡವಾಳ ಹರಿದು ಬಂದಿದೆ? ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಎಷ್ಟರ ಮಟ್ಟಿಗೆ ಸುಧಾರಿಸಿದೆ? ಸುಮಾರು ಹತ್ತು ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಇಕಿಯಾ ಸಂಸ್ಥೆ ಮುಂದಾಗಿ ಪರವಾನಗಿ ಪಡೆದಿದ್ದರೂ ಸರ್ಕಾರದ ರೆಡ್‌ಟೇಪ್ (ಆಡಳಿತಶಾಹಿ)ನಿಂದಾಗಿ ಇನ್ನೂ ಭಾರತದಲ್ಲಿ ಕಾಲಿಡಲು ಸಾಧ್ಯವಾಗಿಲ್ಲ. ಇದು ಏನನ್ನು ತೋರುತ್ತದೆ? ಮೂರು ವರ್ಷಗಳ ನಿದ್ದೆಯಿಂದ ಮೈಕೊಡವಿಕೊಂಡು ಎದ್ದು ಕಳೆದ ಆರೇಳು ತಿಂಗಳಲ್ಲಿ ಆರ್ಥಿಕ ಸುಧಾರಣೆಯ ಉಪಕ್ರಮಗಳಿಗೆ ಎಲ್ಲಿಲ್ಲದ ಮುತುವರ್ಜಿ, ಆದ್ಯತೆ ನೀಡುತ್ತಿರುವ ಸರ್ಕಾರಕ್ಕೆ ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಎಸ್ ಆ್ಯಂಡ್ ಪಿ ರವಾನಿಸಿರುವ ಸಂದೇಶವಾದರೂ ಏನು? 'ನೀವು ಹೇಳುತ್ತಿರುವುದು, ಮಾಡುತ್ತಿರುವುದು, ಕೈಗೊಳ್ಳುತ್ತಿರುವ ಕ್ರಮಗಳು ಯಾವುದೂ ಪರಿಸ್ಥಿತಿಗೆ ಅನುಗುಣವಾಗಿಲ್ಲ ಒಂದೆರಡು ಕ್ರಮಗಳಿಂದ ಆರೋಗ್ಯಕರ ಸ್ಥಿತಿಗೆ ಮರಳಲು ಸಾಧ್ಯವಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ಆರ್ಥಿಕ ವರ್ಷದ ವೇಳೆಗೆ ಭಾರತದ ಆರ್ಥಿಕತೆ ಕುಲಗೆಟ್ಟ ಸ್ಥಿತಿ ತಲುಪುವುದರಲ್ಲಿ ಸಂದೇಹವೇ ಇಲ್ಲ ಮತ್ತು ಅದನ್ನು ತಪ್ಪಿಸಲೂ ಸಾಧ್ಯವಿಲ್ಲ' ಎಂದು ರೇಟಿಂಗ್ ಸಂಸ್ಥೆ ಹೇಳಿದೆ. ಇದು ನೀಡುತ್ತಿರುವ ಸಂದೇಶವಾದರೂ ಏನು?
Fiscal Consolidation  (ಆರ್ಥಿಕ ಸಧೃಡತೆ) ಇರಲಿ ಕನಿಷ್ಠ Fiscal management(ಆರ್ಥಿಕ ನಿರ್ವಹಣೆ)ನಲ್ಲೂ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಲ್ಲವೇ? ಆರ್ಥಿಕ ತಜ್ಞರ, ಪರಿಣಿತರ ದಂಡೇ ಇದ್ದರೂ ದೇಶಕ್ಕೆ ಇಂತಹ ಸ್ಥಿತಿ ತಂದಿಟ್ಟಿದ್ದು ಸಾಧನೆ ಎಂದು ಬಿಂಬಿಸಿಕೊಳ್ಳಲು ಸಾಧ್ಯವೇ?
ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯ ನಂತರ ಆಡಳಿತ ಹಸ್ತಾಂತರವಾದಾಗ ಎಲ್ಲ ಹಿರಿ-ಕಿರಿ ಕಾಂಗ್ರೆಸ್ ನಾಯಕರು ಜನಾದೇಶವನ್ನು ಬಿಜೆಪಿಯ ಐದು ವರ್ಷಗಳ ದುರಾಡಳಿತಕ್ಕೆ ಕೊಟ್ಟ ಉತ್ತರ ಎಂದು ಕಂಡ ಕಂಡಲ್ಲೆಲ್ಲ ಬೊಬ್ಬೆ ಹೊಡೆದರು. ಇದರಲ್ಲಿ ಉತ್ಪ್ರೇಕ್ಷೆ ಇರಲಿಲ್ಲ. ಬಿಜೆಪಿ ಕೊಟ್ಟ ಸರ್ಕಾರವೂ ಅಂತಹುದೇ ಆಗಿತ್ತು. ಆದರೆ ಅದೇ ಮಾನದಂಡವನ್ನು ಕಳೆದ ನಾಲ್ಕು ವರ್ಷಗಳ ಯುಪಿಎ ಆಡಳಿತಕ್ಕೆ ಹೋಲಿಸಿದರೆ ಏನಾದರೂ ವ್ಯತ್ಯಾಸ ಕಂಡೀತೇ? 2004ರಿಂದ ಐದು ವರ್ಷಗಳ ಕಾಲ ಯಾವುದೇ ಕಳಂಕ ಅಂಟಿಸಿಕೊಳ್ಳದೆ 2009ರಲ್ಲಿ ಅದಕ್ಕೆ ತಕ್ಕ ಫಲ ಪಡೆದ ಯುಪಿಎ ಸರ್ಕಾರ ಈಗ ನೀಡಿರುವ, ನೀಡುತ್ತಿರುವ ಆಡಳಿತ (ಅದನ್ನು ಆಡಳಿತ ಎಂದು ಕರೆಯುವುದಾದರೆ)ವಾದರೂ ಎಂಥದ್ದು? ಕಳ್ಳನೊಬ್ಬ ಮನೆ ದರೋಡೆ ಮಾಡಲು ನಾಲ್ಕಾರು ತಿಂಗಳು ಸ್ಕೆಚ್ ಹಾಕಿ ಅವಕಾಶ ಸಿಕ್ಕ ನಂತರ ಮನೆ ದೋಚುವಂತೆ 2004ರಿಂದ ಐದು ವರ್ಷ ದೋಚಲಾಗದ್ದನ್ನು ನಾಲ್ಕು ವರ್ಷಗಳಲ್ಲಿ ದೋಚಿದ್ದೇ ಯುಪಿಎ ಸಾಧನೆಯಾಗಿದೆ. ಕಾಮನ್ವೆಲ್ತ್‌ನಿಂದ ಹಿಡಿದು 2ಜಿ, ಕೋಲ್‌ಗೇಟ್‌ವರೆಗಿನ ಈ ದೋಚುವಿಕೆ ಅವ್ಯಾಹತವಾಗಿ ಸಾಗಿಯೇ ಇದೆ. ಇದು ಉತ್ತಮ ಆಡಳಿತದ ವೈಖರಿಯೇ? ಸರ್ಕಾರದ ಹುಳುಕುಗಳನ್ನು ಒಂದೊಂದಾಗಿ ಬಯಲಿಗೆಳೆದು ಅದರಿಂದ ಖಜಾನೆಗಾದ ನಷ್ಟದ ಅಂದಾಜನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರನ್ನು  (CAG)  ಬಿಜೆಪಿಯ ಏಜೆಂಟ್ ಎಂದೂ, 2ಜಿ ಮತ್ತು ಕೋಲ್‌ಗೇಟ್ ಹಗರಣಗಳ ತನಿಖೆ ಹಳಿತಪ್ಪದಂತೆ ನೋಡಿಕೊಳ್ಳುತ್ತಿರುವ ಸುಪ್ರೀಂಕೋರ್ಟ್ ಅನ್ನೇ ನೀವು ಹದ್ದು ಮೀರುತ್ತಿದ್ದೀರಿ ಎಂದು ತೆಗಳುವಷ್ಟು ಧಾರ್ಷ್ಟ್ಯ ಈ ಸರ್ಕಾರ ಮತ್ತು ಅದರ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದಾದರೆ ಸಾಂವಿಧಾನಿಕ ಸಂಸ್ಥೆಗಳಿಗೆ ಇಲ್ಲಿ ಎಷ್ಟು ಬೆಲೆ ಇದೆ ಎಂಬುದು ತಿಳಿಯುವುದಿಲ್ಲವೆ?
ಇನ್ನು ಈ ಯುಪಿಎ ಎನ್‌ಪಿಎ ಮಾತ್ರವಲ್ಲದೆ ಎನ್‌ಇಎ (Non Existing Alliance) ಸಹ ಆಗಿದೆ. 2004ರಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಾಗ ಅಂಗ ಪಕ್ಷಗಳಾಗಿದ್ದ ತೆಲಂಗಾಣ ರಾಷ್ಟ್ರ ಸಮಿತಿ, ಪಟ್ಟಾಳಿ ಮಕ್ಕಳ್ ಕಚ್ಚಿ, ಹೊರಗಿನಿಂದ ಬೆಂಬಲ ನೀಡುತ್ತಿದ್ದ ಮತ್ತು ಈ ಮೈತ್ರಿಕೂಟಕ್ಕೆ ಯುಪಿಎ ಎಂದು ನಾಮಕರಣ ಮಾಡಿದ ಎಡ ಪಕ್ಷಗಳು ಕಾಂಗ್ರೆಸ್ ನೆರಳಿನಿಂದ ಬಲುದೂರ ಸಾಗಿ ಆಗಿದೆ.
ಆರಂಭದಿಂದಲೂ ಯುಪಿಎ ಮೈತ್ರಿಕೂಟದ ಭಾಗವಾಗಿದ್ದ ಕರುಣಾನಿಧಿ ಅವರ ದ್ರಾವಿಡ ಮುನ್ನೇಟ್ರ ಕಳಗಂ ದೂರ ಸರಿದಿದೆ. ಯುಪಿಎ-2 ಪ್ರಮುಖ ಅಂಗ ಪಕ್ಷವಾಗಿದ್ದ ತೃಣಮೂಲ ಕಾಂಗ್ರೆಸ್ ಹೊರ ನಡೆದಿದೆ. ಸಣ್ಣಪುಟ್ಟ ಪಕ್ಷಗಳಾದ ಎಂಐಎಂ, ಜೆವಿಪಿ, ಜೆಎಂಎಂ ಸಹ ಯುಪಿಎ ಸಂಗ ಒಲ್ಲೆ ಎಂದಿವೆ. ಮೂರು ಮತ್ತೊಂದು ಪಕ್ಷಗಳಷ್ಟೇ ಇನ್ನೂ ಯುಪಿಎದಲ್ಲಿ ಉಳಿದುಕೊಂಡಿವೆ. ಸರ್ಕಾರ ಉಳಿದಿರುವುದು ಮುಲಾಯಂ ಮತ್ತು ಮಾಯಾವತಿ ಕೃಪೆಯಿಂದಾಗಿಯೇ ಹೊರತು ಮಿತ್ರ ಪಕ್ಷಗಳ ಬೆಂಬಲದ ಮೇಲಲ್ಲ. ಇನ್ನು ಕಾಂಗ್ರೆಸ್ ಮತ್ತು ಎಸ್ಪಿ ನಡುವಿನ ಸಂಬಂಧವಾದರೂ ಹೇಗಿದೆ? ವಿಚ್ಛೇದನಕ್ಕೆ ಅರ್ಜಿ ಹಾಕಿ ನ್ಯಾಯಾಧೀಶರ ಆಪ್ತ ಸಲಹೆ ಮೇರೆಗೆ ಮತ್ತಷ್ಟು ದಿನ ಬಲವಂತವಾಗಿ ಒಂದೇ ಸೂರು ಹಂಚಿಕೊಳ್ಳುವ ದಂಪತಿಗಳಂತಾಗಿದೆ ಯುಪಿಎ-ಎಸ್ಪಿ ಮೈತ್ರಿ. ದುರಾಚಾರ, ದುರಾಡಳಿತ, ವೈಫಲ್ಯ ಮತ್ತು ಅಹಂಕಾರಗಳೇ ಸಾಧನೆ ಎನ್ನುವುದಾದರೆ ಬುಧವಾರ ಪ್ರಧಾನಿ ಸಿಂಗ್ ಬಿಡುಗಡೆ ಮಾಡಲಿರುವ ಸಾಧನಾ ಪತ್ರ (ರಿಪೋರ್ಟ್ ಕಾರ್ಡ್) ಲಜ್ಜೆಗೆಟ್ಟ ಸರ್ಕಾರದ, ಲಜ್ಜೆಗೇಡಿ ಕ್ರಮ ಎನ್ನದೇ ವಿಧಿ ಇಲ್ಲ. ಈಗ ಹೇಳಿ ಈ ಯುಪಿಎ ಎಂಬ ಎನ್‌ಪಿಎ ನಮಗೆ ಬೇಕೆ?

-ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ