ಅಂಕಣಗಳು

ಜೀತ ಪದ್ಧತಿ ಕೊನೆಗೊಳಿಸಿದ್ದು ಯಾರು?

ಯಶಸ್ಸಿಗೆ ಹಲವಾರು ಪಾಲುದಾರರು ಎನ್ನುವ ಮಾತಿದೆ. ಆದರೆ ಯಶಸ್ಸು ತಮ್ಮದೇ ಮಗು ಎಂದು ಹಕ್ಕು ಚಲಾಯಿಸಲೂ ಹಲವಾರು ತಾಯಂದಿರೂ ಮುಂದೆ ಬರುತ್ತಾರೆ!
1975ರಲ್ಲಿ ಇಂದಿರಾಗಾಂಧಿ ಜೀತ ಪದ್ಧತಿಯನ್ನು 'ಕೊನೆಗಾಣಿಸಿದರು'. ಈ ಕುರಿತು ಎಲ್ಲಾ ಪತ್ರಿಕೆಗಳಲ್ಲೂ ಪೂರ್ಣ ಪುಟದ ಜಾಹೀರಾತುಗಳನ್ನು ಪ್ರಕಟಿಸಲಾಯಿತು. ಇನ್ನು ಮುದ್ರಣ ಮಾಧ್ಯಮಗಳೆಲ್ಲವು, ಹೇಗೆ ಇಂದಿರಾಗಾಂಧಿ ಸರ್ಕಾರದ ಪರಿಶ್ರಮದಿಂದಾಗಿ, ಮಾಜಿ ಜೀತದಾಳುಗಳು ಈಗ ಸಂತೋಷದ ಜೀವನ ನಡೆಸುತ್ತಿದ್ದಾರೆ ಎನ್ನುವುದನ್ನು ತಿಳಿಯಲು ಗ್ರಾಮಗಳಿಗೆಲ್ಲ ಮುಗಿಬಿದ್ದು ವರದಿ ಬರೆದವು.
38 ವರ್ಷಗಳ ನಂತರ, ಇಂದಿರಾಗಾಂಧಿಯವರ ಸೊಸೆ ಸೋನಿಯಾ ಗಾಂಧಿ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜನರ ತೆರಿಗೆ ಹಣದಿಂದ ಬಹುಕೋಟಿ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದಾರೆ. 'ಭಾರತದಲ್ಲಿ ಈಗ ಜೀತಪದ್ಧತಿ ಇಲ್ಲವೇ ಇಲ್ಲ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ(ನರೇಗಾ) ಯೋಜನೆಯಿಂದ ಅದು ಕೊನೆಯಾಗಿದೆ. ಶ್ರೀಮಂತ ಭೂ ಒಡೆಯರ ಗದ್ದೆಗಳಲ್ಲಿ ಜೀತದಾಳಾಗಿ ದುಡಿಯುತ್ತಿದ್ದ ಎಸ್‌ಸಿ, ಎಸ್‌ಟಿ ಮತ್ತು ಬಡತನ ರೇಖೆಗಿಂತಲೂ ಕೆಳಗೆ ವಾಸಿಸುವವರು ನರೇಗಾದಿಂದಾಗಿ ಬಂಧ ಮುಕ್ತರಾಗಿದ್ದಾರೆ' ಎಂದು ಹೇಳುತ್ತದೆ ಆ ಜಾಹೀರಾತು.  ಆದರೆ ಜೀತಪದ್ಧತಿಯನ್ನು ಎರಡೆರಡು ಬಾರಿ 'ಸಂಪೂರ್ಣ' ನಿರ್ಮೂಲನೆ ಮಾಡುವುದು ಅಂದರೇನು? ಹಾಗೆ ಮಾಡುವುದು ಸಾಧ್ಯವೇ? ಅಥವಾ 'ತಮ್ಮ ಸರ್ಕಾರ ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದೆ' ಎಂದು ಅಂದು ಇಂದಿರಾ ಗಾಂಧಿಯವರು ಹೇಳಿದ್ದು ಸುಳ್ಳು ಎಂದು ಸೋನಿಯಾ ಹೇಳುತ್ತಿದ್ದಾರೆಯೇ?
ಯುಪಿಎ ಸರ್ಕಾರದ ಇತ್ತೀಚಿನ ಜಾಹೀರಾತುಗಳನ್ನು ನಿಸ್ಸಂಶಯವಾಗಿಯೂ ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ರಚಿಸಲಾಗಿದೆ. ಅದರಲ್ಲಿನ ಬಹಳಷ್ಟು ಅಂಶಗಳು ನಗು ಬರಿಸುವಂತಿಲ್ಲದಿದ್ದರೂ, ಬಾಲಿಷತನಗಳಿಂದ ಕೂಡಿವೆ ಎನ್ನುವುದಂತೂ ಸ್ಪಷ್ಟ. ಆದರಲ್ಲೂ ಇನ್ನೂ ಕೆಲವು ಅಂಶಗಳಂತೂ ಯುಪಿಎ/ಕಾಂಗ್ರೆಸ್‌ನ ನೀತಿಗಳಿಗೆ ವಿರುದ್ಧವಾಗಿಯೇ ಇವೆ! ಆ ಜಾಹೀರಾತುಗಳಲ್ಲಿ ಕಣ್ಣಿಗೆ ರಾಚುವಂತಿರುವ ವಿಸಂಗತಿಗಳತ್ತ ಮೊದಲು ಗಮನ ಹರಿಸೋಣ.
ಒಂದು ಜಾಹೀರಾತು ಹೇಳುವುದೇನೆಂದರೆ, 'ನರೆಗಾ 2008 ರಿಂದ ಪ್ರತಿ ವರ್ಷ ಸುಮಾರು 5 ಕೋಟಿ ಕುಟುಂಬಗಳಿಗೆ ಕೆಲಸ ಕೊಟ್ಟಿದೆ' ಎಂದು. ಈ ಅಂಕಿ ಅಂಶಗಳನ್ನು ಒಂದು ನಿಮಿಷ ಸತ್ಯವೆಂದೇ ಒಪ್ಪಿಕೊಳ್ಳೋಣ. ಆದರೆ ಇದನ್ನು ಮನಮೋಹನ್ ಸಿಂಗ್ ಅವರ ಖಾಸಾ ಗೆಳೆಯ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ 'ಯೋಜನಾ ಆಯೋಗದ' ವರದಿಯ ಅಂಶಗಳೊಂದಿಗೆ ಹೋಲಿಸಿ ನೋಡಿದಾಗ, ಬೇರೆಯದ್ದೇ ಕಥೆ ಹರವಿಕೊಳ್ಳುತ್ತದೆ. '1999 ಮತ್ತು 2004ರ ನಡುವೆ ನಮ್ಮಲ್ಲಿ 6 ಕೋಟಿ ಉದ್ಯೋಗಗಳು ಹುಟ್ಟಿಕೊಂಡವು. 2009-10ರ ವೇಳೆಗೆ ನಮ್ಮ ಆರ್ಥಿಕತೆ 0.27ಕೋಟಿ ಉದ್ಯೋಗಗಳನ್ನು ನಿರ್ಮಾಣ ಮಾಡಿತು' ಎನ್ನುತ್ತದೆ ಆ ಯೋಜನಾ ಆಯೋಗದ ವರದಿ.
ಶಂಕರ್ ಐಯ್ಯರ್ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ಬರೆದ ಲೇಖನವನ್ನು ಉಲ್ಲೇಖಿಸುವುದಾದರೆ:
'1990-00 ಮತ್ತು 2004-2005ರ ವೇಳೆಗೆ ಉತ್ಪಾದನಾ ವಲಯದಲ್ಲಿನ ಉದ್ಯೋಗಗಳ ಸಂಖ್ಯೆ 4.4 ಕೋಟಿಯಿಂದ 5.5 ಕೋಟಿಗೆ ಏರಿತ್ತು. ಆದರೆ 2004-2005 ಮತ್ತು 2009-10ರ ನಡುವೆ ಅದರ ಸಂಖ್ಯೆ 5.5 ಕೋಟಿಯಿಂದ ಗಣನೀಯವಾಗಿ ಕುಸಿದು 5 ಕೋಟಿಗೆ ಇಳಿಯಿತು. ಇನ್ನು ಸೇವಾ ಕ್ಷೇತ್ರದಲ್ಲಿ, 1999-00ದಲ್ಲಿ 94.20 ಮಿಲಿಯನ್‌ಗಳಷ್ಟಿದ್ದ ಉದ್ಯೋಗ ಪ್ರಮಾಣ 2004-05ರ ವೇಳೆಗೆ 128.81 ಮಿಲಿಯನ್‌ಗೆ ಏರಿತ್ತು ಮತ್ತು 2009-10ರ ವೇಳೆಗೆ ಅದು 112.33 ಮಿಲಿಯನ್‌ಗೆ ಕುಸಿಯಿತು. ಯೋಜನಾ ಆಯೋಗದ ಪ್ರಕಾರ 1999 ಮತ್ತು 2004ರ ನಡುವೆ, ಎಲ್ಲಾ ವಲಯಗಳು ಒಟ್ಟಾಗಿ 60 ಮಿಲಿಯನ್ ಹೊಸ ಉದ್ಯೋಗಗಳು ಸೃಷ್ಟಿಸಿದರೆ, ಅದೇ 2005 ಮತ್ತು 2010ರ ನಡುವೆ ಆ ಸಂಖ್ಯೆ ಕೇವಲ 2.72 ಮಿಲಿಯನ್ ಉದ್ಯೋಗಗಳಿಗಷ್ಟೇ ಸೀಮಿತವಾಯಿತು.'
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಎನ್‌ಡಿಎ 'ನಿಧಾನ ಬೆಳವಣಿಗೆಯ' ಆರ್ಥಿಕತೆ, ಎಲ್ಲಾ ವಲಯಗಳಲ್ಲೂ  ಒಟ್ಟಾರೆ 60 ಮಿಲಿಯನ್(6 ಕೋಟಿ) ಉದ್ಯೋಗಗಳನ್ನು ಸೃಷ್ಟಿಸಿದರೆ, 'ಕ್ಷಿಪ್ರ ಅಭಿವೃದ್ಧಿಯ' ಯುಪಿಎ-1ರ ಅಧಿಕಾರಾವಧಿಯಲ್ಲಿ ಸೃಷ್ಟಿಯಾಗಿದ್ದು ಕೇವಲ 2.72 ಮಿಲಿಯನ್ ಅಥವಾ 0.27 ಕೋಟಿ ಉದ್ಯೋಗಗಳು ಮಾತ್ರ!
ಇವೆರಡರ ನಡುವಿನ ವ್ಯತ್ಯಾಸ ಗಮನಿಸಿ. ಸುಮಾರು 5.7 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲು ಯುಪಿಎ-1 ವಿಫಲವಾಯಿತು ಎಂದೇ ಇದರರ್ಥವಲ್ಲವೇ? ಯುಪಿಎ-2 ಬಂದ ಮೇಲೆ ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆಯೋ ಏನೋ ಎಂಬುದು ನಮಗಿನ್ನೂ ಗೊತ್ತಿಲ್ಲ.
ಈಗ ಸೃಷ್ಟಿಯಾಗದ 5.7 ಕೋಟಿ ಉದ್ಯೋಗಗಳ ಪಕ್ಕದಲ್ಲಿ, ನರೇಗಾದಿಂದ ಸೃಷ್ಟಿಯಾದ 5 ಕೋಟಿ ಉದ್ಯೋಗಗಳನ್ನು ಇಟ್ಟು ನೋಡಿ. ಅಂದರೆ ನರೇಗಾದಿಂದಾಗಿ ಒಳ್ಳೆಯ ಉದ್ಯೋಗಗಳೆಲ್ಲವೂ ಹಾಳಾಗಿ ಬರೀ ಹುಸೀ ಉದ್ಯೋಗಗಳು ಸೃಷ್ಟಿಯಾಗಿ ಕುಳಿತಿವೆಯೇ? ಈ ಚಮತ್ಕಾರದ ಒಳ ಮರ್ಮವನ್ನು ಅರಿಯ ಹೊರಟರೆ ಅರ್ಥಶಾಸ್ತ್ರಜ್ಞರು ಮತ್ತು ಸಂಶೋಧಕರು ತಮ್ಮ ಕೆಲಸಕ್ಕೆ ತಿಲಾಂಜಲಿ ಇಟ್ಟು ಕೂಡಬೇಕಾಗುತ್ತದೆ!
ಇನ್ನು ನರೆಗಾದಿಂದಾಗಿ ಜಾರ್ಖಂಡ್‌ನ ಪಾಕುರ್ ಜಿಲ್ಲೆಯಲ್ಲಾಗಿರುವ ಬದಲಾವಣೆಯ ಬಗ್ಗೆಯೂ ಈ ಜಾಹೀರಾತಿನಲ್ಲಿ ಹೇಳಲಾಗಿದೆ (ಈ ಜಿಲ್ಲೆಯಲ್ಲಿ ಇತ್ತೀಚಿನವರೆಗೂ ಬಿಜೆಪಿಯೇ ಅಧಿಕಾರದಲ್ಲಿತ್ತು). ನರೇಗಾದ ಹಣದಿಂದ ಅಲ್ಲೊಂದು ಕೊಳ ನಿರ್ಮಾಣ ಮಾಡಲಾಗಿದೆಯಂತೆ. ಆ ಕೊಳ, 'ವಿವಿಧ ಹಿನ್ನೆಲೆಯ ಜನರ ನಡುವೆ ನಂಟು ಬೆಸೆಯುವ ತಾಣವಾಗಿ ಬದಲಾಗಿದೆ' ಎಂದು ಆ ಜಾಹೀರಾತು ಹೇಳುತ್ತದೆ. 'ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಆ ಜಾಗದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಎಲ್ಲರೂ ಭಾಗವಹಿಸುತ್ತಿದ್ದಾರೆ. ಜಾತಿ ಮತ್ತು ಕೋಮಿನ ನಡುವೆ ಶತಮಾನಗಳಿಂದ ಎದ್ದು ನಿಂತಿದ್ದ ಗೋಡೆಯನ್ನು ಇದು ಕೆಡವಿದೆ' ಎಂದೂ ಹೇಳುತ್ತದದು.
ಆಯಿತು. ನರೇಗಾ ಎಲ್ಲಾ ಸಾಮಾಜಿಕ ಅಡಚಣೆಗಳನ್ನೂ ಛಿದ್ರಗೊಳಿಸುತ್ತಿದೆ ಎನ್ನುವ ಮಾತನ್ನೂ ಒಂದು ಕ್ಷಣ ಒಪ್ಪಿಕೊಳ್ಳೋಣ. ಆದರೆ ನಿಜಕ್ಕೂ ಯುಪಿಎ(ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್) ಯಾವ ರೀತಿಯಲ್ಲಿ ಯೋಚಿಸುತ್ತದೆ ಎನ್ನುವುದನ್ನು ನೋಡೋಣ.
ಒಂದು ಕೋಮಿಗಷ್ಟೇ ಸೀಮಿತವಾಗದ ನರೇಗಾದಂತಹ ತಟಸ್ಥ ಯೋಜನೆಗಳು ಜಾತಿ ಮತ್ತು ಕೋಮಿನ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತವೆ ಎನ್ನುತ್ತದೆ ಆ ಜಾಹೀರಾತು. ಹಾಗಿದ್ದರೆ ನರೇಂದ್ರ ಮೋದಿ ಹೇಳುವುದೇನು? ಅವರೂ ಅದನ್ನೇ ತಾನೇ ಹೇಳುತ್ತಿರುವುದು?
'ಅಭಿವೃದ್ಧಿ/ಬೆಳವಣಿಗೆ ಎಲ್ಲರನ್ನೂ ಬೆಸೆಯುತ್ತದೆ ಮತ್ತು ಸರ್ಕಾರಿ ಯೋಜನೆಗಳು ಎಲ್ಲರನ್ನೂ ಸಮಾನವಾಗಿ ಪರಿಗಣನೆಗೆ ತೆಗೆದುಕೊಳ್ಳುವಂತೆ ರೂಪುಗೊಂಡಿರಬೇಕು' ಎಂದೇ ಅವರು ಹೇಳುತ್ತಾರೆ. ಆದರೆ ಯುಪಿಎ ಸರ್ಕಾರ ಮಾಡುತ್ತಿರುವುದೇನು? ಮುಸಲ್ಮಾನರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸಲು ಅದು ಶತಾಯಗತಾಯ ಪ್ರಯತ್ನ ಪಡುತ್ತಿದೆ. ಅಲ್ಲದೆ ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ನಿಗದಿಪಡಿಸುವ ಬಗ್ಗೆ ಮಾಯಾವತಿಯವರೊಂದಿಗೆ ಚೌಕಾಶಿಗೂ ಇಳಿದಿದೆ.  ಅಂದರೆ ಒಂದು ನಿರ್ದಿಷ್ಟ ಗುಂಪಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಯುಪಿಎದ ನಿರ್ಧಾರ ಸಾಮಾಜಿಕ ಸಾಮರಸ್ಯಕ್ಕೆ ಮಾರಕವೆಂದಂತಾಯಿತಲ್ಲವೇ? ಈ ಮಾತನ್ನು ನರೆಗಾದ ಜಾಹಿರಾತು ಒಪ್ಪಿಕೊಳ್ಳುತ್ತದೆಯೇ?  
------
ಇದರರ್ಥವಿಷ್ಟೆ. ನರೆಗಾದ ಪ್ರಭಾವ 'ಬೆಳವಣಿಗೆಯ' ಮೇಲೆ ಹೆಚ್ಚಾಗಿ ಆಗುತ್ತದೆಯೇ ಹೊರತು, 'ವೇತನ ಹೆಚ್ಚಳದ' ಮೇಲಲ್ಲ. ಆದರೆ ಯುಪಿಎ-2 ಸರ್ಕಾರ ಅದಾಗಲೇ ಯಶಸ್ವಿಯಾಗಿ ಬೆಳವಣಿಗೆಯನ್ನು ಕೊಂದು ಹಾಕಿದೆ. ಸಾಲದೆಂಬಂತೆ ನರೇಗಾ, ಹೆಚ್ಚುತ್ತಿರುವ ಹಣದುಬ್ಬರಕ್ಕೆ ತನ್ನ ಪಾಲಿನ ಕೊಡುಗೆ ನೀಡಲು ಸಿದ್ಧವಾಗಿದೆ. ಯುಪಿಎ-1ರಲ್ಲಿ, ಬೆಳವಣಿಗೆ ಇತ್ತು, ಆದರೆ ಉದ್ಯೋಗಗಳು ಸತ್ತವು. ಯುಪಿಎ-2ರಲ್ಲಿ ಬೆಳವಣಿಗೆಯ ಜೊತೆಗೆ ಉದ್ಯೋಗಗಳೂ ಕೊನೆಯಾಗುತ್ತಿವೆ!

-ಆರ್. ಜಗನ್ನಾಥನ್, ಸಂಪಾದಕರು,
ಫಸ್ಟ್‌ಪೋಸ್ಟ್ ಡಾಟ್‌ಕಾಂ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!