ಅಂಕಣಗಳು

ಜಲಸಚಿವರೆದುರು ಸವಾಲು, ಅಹವಾಲು

ಮತ್ತೊಮ್ಮೆ ಕ್ರಿಯಾಶೀಲ, ಯುವ ಉತ್ಸಾಹಿ ನೇತಾರನೊಬ್ಬ ರಾಜ್ಯದ ಜಲಸಂಪನ್ಮೂಲ...

ಮೊಟ್ಟ ಮೊದಲಿಗೆ ಅಭಿನಂದನೆಗಳು ಸಲ್ಲಲೇಬೇಕು. ಮತ್ತೊಮ್ಮೆ ಕ್ರಿಯಾಶೀಲ, ಯುವ ಉತ್ಸಾಹಿ ನೇತಾರನೊಬ್ಬ ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬರಪೀಡಿದ ಪ್ರದೇಶದ ಹಿನ್ನೆಲೆಯಿಂದಲೇ ಬಂದವರು. ಆರಂಭದಿಂದಲೂ ರೈತಾಪಿ ವರ್ಗದ, ಗ್ರಾಮೀಣರ ಬದುಕನ್ನು ಹತ್ತಿರದಿಂದ ಕಂಡವರು. ಜನಪರ ಹೋರಾಟಗಳಿಂದ ಗುರುತಿಸಿಕೊಂಡವರು, ಎಲ್ಲಕ್ಕಿಂತ ಹೆಚ್ಚಾಗಿ ನಾಡಿನ ಬಗೆಗೆ ಕಳಕಳಿ ಕಾಳಜಿಯನ್ನು ಹೊಂದಿರುವ, ಇಚ್ಛಾಶಕ್ತಿಯುಳ್ಳ ಕೆಲವೇ ವಿವೇಚನಾಶೀಲ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಬಬಲೇಶ್ವರದ ಶಾಸಕ ಎಂ.ಬಿ. ಪಾಟೀಲರು ರಾಜ್ಯದ ಜಲಕಾಯಕಕ್ಕೆ ನೇಮಕಗೊಂಡಿದ್ದಾರೆ. ಸಚಿವರೇ,  ರಾಜ್ಯದ ಜನತೆಯ ಪರವಾಗಿ ನಿಮಗೆ ಅಭಿನಂದನೆಗಳು.
ರಾಜ್ಯದ ನೀರಿನ ಪರಿಸ್ಥಿತಿ ಶೋಚನೀಯವಾಗಿರುವ ಈ ಸನ್ನಿವೇಶದಲ್ಲಿ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಹಜವಾಗಿ ನಿರೀಕ್ಷೆಗಳು ಹೆಚ್ಚಿವೆ. ಮಳೆ ದೂರದೂರಕ್ಕೆ ಹೋಗಿದೆ. ರಾಜ್ಯದ ಎಲ್ಲ ಜಲಾಶಯಗಳೂ ಬರಿದಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇನ್ನೊಂದು ವಾರ ಕಳೆದರೆ ರಾಜಧಾನಿ ಬೆಂಗಳೂರಿನಲ್ಲಿ ಹಾಹಾಕಾರವೇಳುವ ಸಂಭವವಿದೆ. ಏಕೆಂದರೆ ಇಲ್ಲಿನ ದಾಹ ತಣಿಸಲು ನಿಂತಿರುವ ಕೆ.ಆರ್.ಎಸ್. ತಳಕಂಡಿದೆ. ಜಗತ್ತೇ ಹೊತ್ತಿ ಉರಿದರೂ ರಾಜ್ಯದಲ್ಲಿ ಸರಕಾರ ಅಲುಗಾಡುವುದಿಲ್ಲ. ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಬೆಂಗಳೂರಿನ ದೈನಂದಿನ ಬದುಕಿಗೆ ಒಂದಿನಿತು ವ್ಯತ್ಯಾಸವಾದರೂ ಊರಿಡೀ ಬೊಬ್ಬೆ ಶುರುವಾಗಿಬಿಡುತ್ತದೆ. ಏಕೆಂದರೆ ಇಲ್ಲಿನ ಮಾಧ್ಯಮಗಳ ಗಮನ ಕೇಂದ್ರೀಕೃತವಾಗಿರುವುದು ಬೆಂಗಳೂರಿನ ಮೇಲೆ. ರಾಜಕಾರಣಿಗಳು, ಅಧಿಕಾರಗಳ 'ಆಸಕ್ತಿ' ನಿಂತಿರುವುದೂ ಇಲ್ಲಿನ ಕೈಗಾರಿಕೆಗಳ ಮೇಲೆ. ಇನ್ನ ಕನ್ನಡಿಗರ 'ಸ್ವಾಭಿಮಾನ'  ಕೆರಳುವುದು ಸಹ ಕಾವೇರಿ ವಿಚಾರದಲ್ಲಿ ಆಗಿರುವುದರಿಂದ ನಿಜಕ್ಕೂ ಸಚಿವರಿಗೆ ಆರಂಭದಲ್ಲೇ ಸವಾಲು ಎದುರಾಗಿದೆ.
ಸಚಿವರೇ, ನೀವೊಬ್ಬ ಒಳ್ಳೆಯ ಜಲಸಂಪನ್ಮೂಲ ಸಚಿವರು, ಸಮರ್ಥರು ಎಂದಾಗಬೇಕಿದ್ದರೆ ಕಾವೇರಿ ಮತ್ತು ಬೆಂಗಳೂರನ್ನು ಬಿಡಲೇಬೇಡಿ. ಆ ಬಗ್ಗೆ ಭಾವನಾತ್ಮಕವಾಗಿ ಏನಾದರೊಂದು ಹೇಳುತ್ತಲೇ ಇರಿ. ಇದು 'ಉಚಿತ'  ಸಲಹೆ. ಇನ್ನು ಎರಡನೇ ಆದ್ಯತೆ ಕೃಷ್ಣ ಬಿ ಸ್ಕೀಂ  ಬಗೆಗಿರಲಿ. ಇನ್ನೂ ಹೆಚ್ಚೆಂದರೆ ಕಳಸಾ ಬಂಡೂರಿ, ನೇತ್ರವತಿ ತಿರುವು ಮತ್ತಿತರ ವಿಷಯದ ಬಗ್ಗೆ ಭರವಸೆಗಳನ್ನು ಹರಿಸುತ್ತಿರಿ.
ಆದರೆ, ಅಸಲಿ ಸಂಗತಿ ಏನೆಂದರೆ ಕಾವೇರಿ ಅಚ್ಚುಕಟ್ಟಿನ, ಜಲಾನಯನ ಪ್ರದೇಶದ ಅಂತರ್ಜಲವನ್ನು ಪರಿಗಣಿಸಿದರೆ ರಾಜ್ಯದ ಪಾಲಿಗೆ ಯಾವತ್ತೂ ಇದೊಂದು ಸಮಸ್ಯೆ, ವಿವಾದವೇ ಅಲ್ಲ. ಕುಶಾಗ್ರಮತಿಗಳಾದ ನಿಮಗೆ ಇದು ತಿಳಿಯದ್ದೇನಲ್ಲ. ನಿಜಕ್ಕೂ ನಿಮಗೆ ಇಚ್ಛಾಶಕ್ತಿ ಇದ್ದದ್ದೇ ಆದರೆ ಈ ಬಗ್ಗೆ ಗಮನ ಹರಿಸಿ. ಕಾವೇರಿಯ ವಿಚಾರದಲ್ಲಿ ರಾಜಕೀಯವನ್ನು ಬದಿಗಿಟ್ಟು ವಾಸ್ತವ ಚಿಂತನೆಗಳ ಅನುಷ್ಠಾನ ನಿಮ್ಮ ಕಾಲದಲ್ಲಿ ಆರಂಭಗೊಳ್ಳಲಿ. ಜನ ಕೊನೆಯವರೆಗೆ ನಿಮ್ಮನ್ನು ನೆನಪಿನಲ್ಲಿಡುತ್ತಾರೆ. ಬೆಂಗಳೂರಿನ ನೀರಿನ ಸಮಸ್ಯೆ ಪರಿಹಾರಕ್ಕಂತೂ ಅತ್ಯಂತ ಸುಲಭದ ಪರಿಹಾರವಿದೆ. ಮಹಾನಗರಕ್ಕೆ ಅಗತ್ಯವಿರುವುದು ಸದ್ಯಕ್ಕೆ 15 ರಿಂದ 20 ಟಿಎಂಸಿಯಷ್ಟು ನೀರು ಮಾತ್ರ. ಆದರೆ ಲೆಕ್ಕದಲ್ಲಿರುವುದು 90 ಟಿಎಂಸಿಯಷ್ಟು. ಏಕಿಷ್ಟು ವ್ಯತ್ಯಾಸ ಎಂದು ಅಧಿಕಾರಿಗಳನ್ನು ಕೇಳಿ ನೋಡಿ. ಅನುಮಾನವೇ ಇಲ್ಲ 'ಸೋರಿಕೆ' ಎಂಬ ಸಿದ್ಧ ಉತ್ತರ ಬರುತ್ತದೆ. ಸರಿ ಸುಮಾರು ಶೇ. 40ರಷ್ಟು ನೀರು ಸೋರಿಕೆಯಾಗುತ್ತದೆ ಎಂಬುದು ಹೇಳಿಕೊಂಡು ಬರುತ್ತಲೇ ಇರುವ ಸಂಗತಿ. ಸನ್ಯಾನ್ಮ ಸಚಿವರೇ, ನನಗೆ ಈ ವರೆಗೆ ಅರ್ಥವಾಗದ ಒಂದು ಸಂಗತಿ ಏನೆಂದರೆ ಐವತ್ತು ಟಿಎಂಸಿಯಷ್ಟು ನೀರು ಸೋರಿಕೆಯೇ ಆಗುತ್ತಿರುವುದಾದಲ್ಲಿ ಬೆಂಗಳೂರು- ಮೈಸೂರು ನಡುವಣ ಪ್ರದೇಶ ಪ್ರತಿದಿನವೂ ಪ್ರವಾಹದಲ್ಲಿಯೇ ಮುಳುಗಿರಬೇಕಿತ್ತಲ್ಲವೇ? ಸೋರಿಕೆಗೂ ಕಳ್ಳತನಕ್ಕೂ ವ್ಯತ್ಯಾಸವನ್ನು ಗುರುತಿಸದಷ್ಟು ಪ್ರಜ್ಞಾಹೀನರಾಗಿದ್ದೇವೆಯೇ ನಾವು? ಕೆ.ಆರ್.ಎಸ್‌ನಲ್ಲಿ ನೀರು ತಳ ಕಂಡಿದ್ದರೂ ಮುಂದಿನ ಮಳೆ ಕಾಣುವವರೆಗೆ ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸಿಕೊಳ್ಳುವುದು ಹೇಗೆಂಬುದನ್ನು ಮತ್ತೆ ಹೇಳಬೇಕಾಗಿಲ್ಲ. ಇಲ್ಲಿ ಇನ್ನೂ ಒಂದು ಗಮನಾರ್ಹ ಸಂಗತಿಯೆಂದರೆ ಕೈಗಾರಿಕೆಗಳ ನೀರಿನ ಬೇಡಿಕೆ. ಬೆಂಗಳೂರು 'ಬೆಳೆಯುತ್ತಿರುವುದರಲ್ಲಿ'  ಕೈಗಾರಿಕೆ ಪಾತ್ರ ಏನಿದೆ ಎಂಬುದು ಗೊತ್ತೇ ಇದೆ. ಆ ಹಿನ್ನೆಲೆಯಲ್ಲಿ ಕುಡಿಯುವ ನೀರು ಹಾಗೂ ಕೈಗಾರಿಕೆಗಳಲ್ಲಿ ಆದ್ಯತೆ ಏನಾಗಬೇಕೆಂಬುದನ್ನು ನಿರ್ಧರಿಸಬೇಕಿದೆ.
ಮಾಧ್ಯಮಗಳೆದುರು ನೀವು ಹೋಗಿ ನಿಂತಾಕ್ಷಣ ಎದುರಾಗುವ ಪ್ರಶ್ನೆಗಳೇನೆಂಬುದು ನಿಮಗೆ ಅರ್ಥವಾಗಿರಬಹುದು. ಇನ್ನು ರಾಜಕೀಯ ವಲಯಕ್ಕೆ ಬಂದರೆ, ನಿಮ್ಮ, ನಿಮ್ಮ ಪಕ್ಷದ ಹಿಂಬಾಲಕರು ನಿಮಗೆ ದುಂಬಾಲು ಬೀಳಲಾರಂಭಿಸಿದ್ದರೆ ಅದು ನಿಗಮ-ಮಂಡಳಿಗಳು, ವಿವಿಧ ಕಾಡಾಗಳ ಹುದ್ದೆಗಾಗಿ. ಈ ಕಾಡಾಗಳೆಂದರೆ ಪಕ್ಕಾ ಪುನರ್ವಸತಿ ಕೇಂದ್ರಗಳೆಂಬುದನ್ನು ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಿಂದ ಹೊರತಾಗಿ ಕಾಡಾಗಳಿಂದ ಯಾವ ಮಹತ್ತರ ಉದ್ದೇಶವೂ ಸಾಧನೆಯಾಗುತ್ತಿಲ್ಲ. ಅಚ್ಚುಕಟ್ಟು ಪ್ರದೇಶದ ಬಳಕೆದಾರರ ಸಂಘಟನಯಾಗಲೀ, ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಲೀ, ನೀರೆಚ್ಚರದ ಕಾರ್ಯಗಳಾಗಲೀ, ನದಿ ಸಂರಕ್ಷಣೆ, ಅಂತರ್ಜಲ ವೃದ್ಧಿ, ಅರಣ್ಯ, ನದಿ ಪ್ರದೇಶದ ಒತ್ತುವರಿಯ ತಡೆ, ಜಲಮೂಲ ಪುನಶ್ಚೇತನ, ಸ್ಥಳೀಯರ ವಿಶ್ವಾಸ ವೃದ್ಧಿ, ಕಾಲುವೆಗಳ ದುರಸ್ಥಿ, ಸಮಾನ ನೀರು ಹಂಚಿಕೆ ಇತ್ಯಾದಿ ಯಾವೊಂದೂ ಕಾಡಾದ ಕಡತಗಳಲ್ಲಿರುವ ಉದ್ದೇಶಗಳ ಅನುಷ್ಠಾನ ಆಗುತ್ತಲೇ ಇಲ್ಲ. ಇವತ್ತಿಗೂ ರೈತರಲ್ಲಿ ನಿತ್ಯ ನೀರಿಗಾಗಿ ಪೈಪೋಟಿ, ಹೊಡೆದಾಟ, ಮೊಕದ್ದಮೆಗಳು ನಡೆಯುತ್ತಲೇ ಇವೆ. ರಾಜ್ಯದ ಕಾಲುವೆಗಳ ಸ್ಥಿತಿಯಂತೂ ದೇವರಿಗೇ ಪ್ರೀತಿ. ಆರ್ಥಿಕ ಸದೃಢ ರೈತರು ನೀರನ್ನೂ ದೋಚುತ್ತಲೇ ಇದ್ದಾರೆ. ಕಾಲುವೆಗಳಿಗೇ ನೇರವಾಗಿ ಪಂಪ್‌ಸೆಟ್‌ಗಳನ್ನು ಜೋಡಿಸಿ ನೀರನ್ನೂ ರಾಜಾರೋಷವಾಗಿ ಕೊಂಡೊಯ್ಯೂವ ದೃಶ್ಯ ರಾಜ್ಯದಲ್ಲಿ ಸರ್ವೇ ಸಾಮಾನ್ಯ. ಇದರ ವಿರುದ್ಧ ದನಿ ಎತ್ತುವ ರಾಜಕೀಯ ಇಚ್ಛಾಶಕ್ತಿ ಈವರೆಗೆ ತೋರಿಲ್ಲ. ಕಾಡಾಗಳು ಕಾಡುವ ಸಂಸ್ಥೆಗಳಾಗದಿರಲಿ.
ಇವೆಲ್ಲದರಿಂದ ಹೊರತಾಗಿ ನಿಜವಾಗಿ ರಾಜ್ಯದಲ್ಲಿ ಆಗಬೇಕಿರುವ, ನೆನೆಗುದಿಗೆ ಬಿದ್ದಿರುವ ಬಹಳಷ್ಟು ನೀರಾವರಿ ಯೋಜನೆಗಳಿವೆ. ರಾಜ್ಯವನ್ನು ನಿಜಕ್ಕೂ ಅಭಿವೃದ್ಧಿ ಪಥದಲ್ಲಿ ಒಯ್ಯಲು ಸಮರ್ಥವಾಗಿರುವ, ಅಗತ್ಯ ಇಂಥ ಯೋಜನೆಗಳು ನಿಮ್ಮ ಆದ್ಯತೆಯಲ್ಲಿರುತ್ತವೆ ಎಂಬುದು ಆಶಯ. ರಾಜ್ಯದಲ್ಲಿ ನಂಜೇಗೌಡ, ನಾಗೇಗೌಡ, ಎಚ್. ಕೆ.ಪಾಟೀಲರಂಥ ಸಜ್ಜನ ರಾಜಕಾರಣಿಗಳು ನಿರ್ವಹಿಸಿದ ಮಹತ್ವದ ಖಾತೆಗೆ ಉತ್ತರಾಧಿಕಾರಿಯಾಗಿ ನೀವು ಬಂದಿದ್ದೀರಿ. ನೀರಾವರಿಯ ವಿಚಾರದಲ್ಲಿ ಅವರ ಕೊಡುಗೆ ಅತ್ಯಂತ ಗಮನಾರ್ಹ. ಆ ಸಾಲಿಗೆ ಮತ್ತೊಂದು ಹೆಸರಾಗಿ ನೀವು ಸೇರ್ಪಡೆಯಾಗುವುದು ಕಷ್ಟವೇನಲ್ಲ. ಏಕೆಂದರೆ ನಮ್ಮ ಜಲಸಂಪನ್ಮೂಲ ಇಲಾಖೆ ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಏಷ್ಯಾದಲ್ಲೇ ಅತ್ಯುತ್ತಮ ಕಾರ್ಯ ನಿರ್ವಹಣೆಯ ಹೆಗ್ಗಳಿಕೆಯನ್ನು ಹೊಂದಿದೆ. ಉತ್ತಮ ಅಧಿಕಾರಿ ವರ್ಗವಿದೆ. ನದಿ ಮಾಲಿನ್ಯ ತಡೆ, ಜಲ ಸಂಸ್ಕರಣೆ, ಸಣ್ಣ ಸಣ್ಣ ಯೋಜನೆಗಳ ಮೂಲಕ ಸಂಪನ್ಮೂಲ ವೃದ್ಧಿ ಕಣ್ಮರೆಯಾಗಿರುವ ನದಿಗಳ ಪುನಶ್ಚೇತನದಂಥ ಕಾರ್ಯಗಳು ತಕ್ಷಣಕ್ಕೆ ಆಗಬೇಕಾಗಿದೆ. ಒಂದೊ ಕಾಲದಲ್ಲಿ ಸಮೃದ್ಧವಾಗಿದ್ದ ಅರ್ಕಾವತಿಯಂಥ ಅದೆಷ್ಟೋ ನದಿಗಳ ಒಡಲನ್ನು ತುಂಬಿಸಬೇಕಿದೆ. ರಾಜಾಸ್ಥಾನದಲ್ಲಿ ರಾಜೇಂದ್ರ ಸಿಂಗ್ ನೇತೃತ್ವದಲ್ಲಿ ಆಗಿರುವುದು ನಮ್ಮ ಮಳೆ ಸರಾಸರಿಯಲ್ಲಿ ಖಂಡಿತಾ ಸಾಧ್ಯವಿದೆ. ಇನ್ನು ವೃಷಭಾವತಿಯಂಥ ನದಿ ಮಾಲಿನ್ಯ ರಾಜ್ಯದ ಎಲ್ಲ ನಗರಗಳ ಸಮಸ್ಯೆಯಾಗುತ್ತಿದೆ. ಮಲೇಷ್ಯಾ ಈ ನಿಟ್ಟಿನಲ್ಲಿ ವಿಶ್ವಕ್ಕೇ ಮಾದರಿಯಾಗುವಂಥ ಕಾರ್ಯ ಮಾಡಿದೆ. ಲಂಡನ್‌ನ ಥೇಮ್ಸ್ ಸಹ ನದಿ ಮಾಲಿನ್ಯ ತಡೆಗೆ ಅತ್ಯತ್ತಮ ಉದಾಹರಣೆ. ಇಂಥ ಅಧ್ಯಯನಗಳ ಮೂಲಕ, ಅಲ್ಲಿನ ಮಾದರಿಗಳನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸುವ ಚಿಂತನೆ ಆಗಬೇಕಿದೆ. ರಾಜಕಾರಣಿಗಳು, ಅಧಿಕಾರಿಗಳ ನಡುವೆಯೇ ಕಳೆದು ಹೋಗದೆ ರಾಜ್ಯದಲ್ಲಿ ಲಭ್ಯವಿರುವ ತಜ್ಞರ ಸೇವೆಯನ್ನು ಬಳಸಿಕೊಳ್ಳಿ. ಸಾಂಸ್ಥಿಕವಾಗಿಯೂ ಐಐಟಿ, ಐಐಎಂಬಿ, ಡಬ್ಲ್ಯುಟಿಟಯಂಥವುಗಳನ್ನು ಒಳಗೊಳ್ಳುವುದು ಜಾಣ್ಮೆಯ ನಡೆ ಎನಿಸುತ್ತದೆ.
ಇನ್ನು ಯೋಜನೆಗಳ ವಿಚಾರಕ್ಕೆ ಬಂದರೆ ಬೃಹತ್ ಗ್ರಂಥವೇ ಆಗಬಹುದು. ಐದು ವರ್ಷಗಳಲ್ಲಿ ಏನಾಗುತ್ತದೋ, ಬಿಡುತ್ತೋ. ಆದರೆ ಶುಭಾರಂಭ ನಿಮ್ಮಿಂದ ಆಗಲಿ. ಆಲ್ ದಿ ಬೆಸ್ಟ್.

ಹೇಮಾವತಿ
ಹಾಸನ ಜಿಲ್ಲೆಯ ಜೀವ ನದಿ ಹೇಮಾವತಿ ಯೋಜನೆ ವ್ಯಾಪ್ತಿಯಲ್ಲಿ 24 ಏತ ನೀರಾವರಿ ಯೋಜನೆಗಳು ಮಂಜೂರಾಗಿದ್ದರೂ ಈ ತನಕ ಕಾರ್ಯಗತಗೊಂಡಿರುವುದು ಐದು ಮಾತ್ರ. ಬಹಳ ವರ್ಷಗಳಿಂದ ಬಾಕಿ ಇರುವ ಹಳೇಬೀಡು- ಮಾದಿಹಳ್ಳಿ ಹೋಬಳಿ ನೀರಾವರಿ ಯೋಜನೆ ಆರಂಭವಾಗಬೇಕಿದೆ. ಅರಸೀಕೆರೆ ತಾಲೂಕಿಗೆ ನೀರಾವರಿ ಯೋಜನೆ ಆಗಬೇಕಾಗಿದೆ.

ಆಲಮಟ್ಟಿ
ಬಾಗಲಕೋಟ- ವಿಜಾಪುರ ಅವಳಿ ಜಿಲ್ಲೆಗಳಿಗೆ ವಿಶ್ವವಿಖ್ಯಾತ ಆಲಮಟ್ಟಿ ಜಲಾಶಯದ ಮೂಲಕ ಸಮಗ್ರ ನೀರಾವರಿಯಾಗಬೇಕಿತ್ತು. ಆದರೆ ಕೃಷ್ಣಾ ನದಿಯ ಗರಿಷ್ಠ ನೀರು ಬಳಸಿಕೊಳ್ಳುವ ಯೋಜನೆ ಪೂರ್ಣಗೊಂಡಿಲ್ಲ.
ಜಿಲ್ಲೆಯ ಅಂದಾಜು 8.20 ಲಕ್ಷ ಹೆಕ್ಟೇರ್ ಕೃಷಿಭೂಮಿಯ ಪೈಕಿ 6 ಲಕ್ಷ ಹೆಕ್ಟೇರ್‌ಗೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ನೀರುಣಿಸಬಹುದಾದ ಯಾವೊಂದು ಯೋಜನೆಯೂ ಪೂರ್ಣಗೊಂಡಿಲ್ಲ. ಮುಳವಾಡ, ಚಿಮ್ಮಲಗಿ, ಗುತ್ತಿಬಸವಣ್ಣ ಏತ ನೀರಾವರಿ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆ ಯೋಜನೆಗಳು ನನೆಗುದಿಗೆ ಬಿದ್ದಿವೆ. ಅಷ್ಟಾಗಿಯೂ ಕೃಷ್ಣಾ 'ಬಿ' ಸ್ಕೀಂ ನೀರು ಕರ್ನಾಟಕದ ಪಾಲಿಗೆ ಕನ್ನಡಿಯೊಳಗಿನ ಗಂಟು. ಬಾಗಲಕೋಟ ಜಿಲ್ಲೆಯ ಮರೋಳ ಏತ ನೀರಾವರಿ ಯೋಜನೆಯೂ ಪೂರ್ಣಗೊಳ್ಳಬೇಕಿದೆ. ಪ್ರವಾಹದ ನೀರನ್ನು ಕೆರೆ ತುಂಬುವ ಯೋಜನೆಯನ್ನು ನೀವೇ ನಿಮ್ಮ ಜಿಲ್ಲೆಯಲ್ಲಿ ಮಾದರಿಯಾಗಿ ಆರಂಭಿಸಿದ್ದೀರಿ. ರಾಜ್ಯಾದ್ಯಂತ ಅದು ಸಮರ್ಥವಾಗಿ ಅನುಷ್ಠಾನಗೊಳ್ಳಬೇಕಿದೆ.

ಕಾವೇರಿ ಕಣಿವೆ
ಕಾವೇರಿ ಕಣಿವೆಯ ಮೈಸೂರು, ಮಂಡ್ಯ ಸೇರಿದಂತೆ ಮೂರ್ನಾಲ್ಕು ಜಿಲ್ಲೆಗಳ ರೈತಾಪಿ ಜನ ಒಂದಿಷ್ಟಾದರೂ ನೆಮ್ಮದಿ ಕಂಡುಕೊಂಡಿದ್ದಾರೆ. ಆದರೆ, ಇದೇ ಮಾತನ್ನು ಕಪಿಲಾ ನದಿ, ಲಕ್ಷ್ಮಣ ತೀರ್ಥ ತಾರಕ ಹೊಳೆ ಹರಿಯುವ ಇದೇ ಕಣಿವೆಯ ಅಚ್ಚುಕಟ್ಟು ಪ್ರದೇಶದ ರೈತರ ಕುರಿತು ಹೇಳುವಂತಿಲ್ಲ. ಸಾವಿರಾರು ಕ್ಯೂಸೆಕ್ ನೀರು ಹರಿದರೂ, ಆಡಳಿತಗಾರರು ಅದನ್ನು ಬಳಸಿಕೊಳ್ಳತ್ತಿಲ್ಲ.

ತುರ್ತಾಗಿ ಗಮನ ನೀಡಬೇಕಾದವು
- ಚಾಮರಾಜನಗರ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯ ಸುಮಾರು 1.25 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುವ ಕಬಿನಿ 2ನೇ ಹಂತ ಯೋಜನೆ ದಾಖಲೆಗಳಲ್ಲಿ ಜನ್ಮತಾಳಿ ಎರಡೂವರೆ ದಶಕವಾಯಿತು. ಇನ್ನೂ ಜಾರಿಯಾಗಿಲ್ಲ.
-  ಕಬಿನಿ ವ್ಯಾಪ್ತಿಯ ತಾರಕ ಏತ ನೀರಾವರಿ ಯೋಜನೆ ಕಾಮಗಾರಿ ಮೂರು ದಶಕದಿಂದ ಪ್ರಗತಿಯಲ್ಲಿದೆ. ಬೀರಂಬಳ್ಳಿ ಏತ ನೀರಾವರಿ ಯೋಜನೆ ಮುಗಿದಿದ್ದರೂ ಪೂರ್ಣ ಬಳಕೆಯಾಗುತ್ತಿಲ್ಲ. ನುಗು ಕೂಡ ಇದೇ ಸ್ಥಿತಿಯಲ್ಲಿದೆ. ಬದನವಾಳು ಯೋಜನೆಗೂ ಮುಕ್ತಿ ಸಿಕ್ಕಿಲ್ಲ.
-  ಪಿರಿಯಾಪಟ್ಟಣ ಹಾಗೂ ಅರಕಲಗೂಡು ತಾಲೂಕಿನ 30 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಕರಡಿ ಲಕ್ಕನಕೆರೆ ಯೋಜನೆ ಆರಂಭವಾಗಬೇಕು. ಕೊಡಗಿನ 865 ಎಕರೆ ಪ್ರದೇಶಕ್ಕೆ ನೀರುಣಿಸುವ ಚಿಕ್ಲಿಹೊಳೆ ಅಣೆಕಟ್ಟು ಯೋಜನೆಯೂ ಪೂರ್ಣಗೊಳ್ಳಬೇಕಿದೆ. ನೆಲ್ಲಿಹುದಿಕೇರಿ ಏತ ನೀರಾವರಿ ಯೋಜನೆ 2003ರಲ್ಲಿ ಪ್ರಾರಂಭಗೊಂಡಿತ್ತು. ಪೂರ್ಣಗೊಂಡಿಲ್ಲ.
-  ಕೆಆರ್‌ಎಸ್ ವಿಸ್ತರಣೆ ಯೋಜನೆ ನಡೆಯಬೇಕಿದೆ. ವಿಶ್ವೇಶ್ವರಯ್ಯ, ವರುಣಾ ನಾಲೆಯ ಕಾಮಗಾರಿ ಆಧುನೀಕರಣ, ನಾಲೆ ಕಡೆ ಪ್ರದೇಶಕ್ಕೆ ನೀರು ಸಾಗಿಸುವ ಕೆಲಸವೂ ತುರ್ತಾಗಿ ಆಗಬೇಕಿದೆ.
- ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಹೇಮಾವತಿ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಹಾಗೆಯೇ ಜಿಲ್ಲೆಯ ಲೋಕಪಾವನಿ, ಪೂರಿಗಾಲಿ ಏತನೀರಾವರಿ ಯೋಜನೆಗಳೂ ಒಪ್ಪಿಗೆಗೆ ಕಾದು ಕುಳಿತಿವೆ.
- ಚಾ.ನಗರ ಜಿಲ್ಲೆಯ ಗುಂಡಾಲ್ ಜಲಾಶಯವನ್ನು 1979-80ನೇ ಸಾಲಿನಲ್ಲಿ 469 ಲಕ್ಷ ರು. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಯಿತು. ಈ ಜಲಾಶಯದ ವ್ಯಾಪ್ತಿಗೆ 15,100 ಎಕರೆ ಅಚ್ಚುಕಟ್ಟು ಪ್ರದೇಶ ಒಳಪಡುತ್ತದೆ. ಆದರೆ ಜಲಾಶಯ ನಂಬಿಕೊಂಡು ಇಷ್ಟೂ ವ್ಯಾಪ್ತಿಯ ರೈತರು ಆರಂಭದಿಂದ ಈವರೆಗೆ ಒಮ್ಮೆಯೂ ಪೂರ್ಣ ಪ್ರಮಾಣದಲ್ಲಿ ನೀರಾವರಿ ಪಡೆಯಲಾಗಲಿಲ್ಲ. ಸುವರ್ಣಾವತಿ ಜಲಾಶಯದ ಕಥೆಯೂ ಇದೇ. ಇದಕ್ಕೆ ಕಾರಣ- ಮಳೆಯ ಕೊರತೆ.

ತುಂಗಾ ತಟ, ಭದ್ರಾ ಬದುಕು
ಕಳೆದ ಎರಡೂವರೆ ದಶಕಗಳಲ್ಲಿ ಐದು ತಜ್ಞರ ಸಮಿತಿ ವರದಿ ಮತ್ತು ಶಿಫಾರಸುಗಳು. ಕಾಲುವೆ ಒಡೆಯುವುದರಲ್ಲಿ ವಿಶ್ವದಾಖಲೆ, ಜಲಾಶಯ ನಿರ್ಮಾಣಕ್ಕಿಂತ ಒಡೆದ ಕಾಲುವೆಗಳ ರಿಪೇರಿಗೆ ಸಾವಿರಪಟ್ಟು ಖರ್ಚು. ಜಲಾಶಯದಲ್ಲಿ ತುಂಬಿ ನಿಂತ ಹೂಳು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಚಿತ್ರಣವಿದು. ಎಡ ಹಾಗೂ ಬಲದಂಡೆ ನಾಲೆಗಳು ರೈತರ ಜೀವನಾಡಿಯಾಗುವ ಬದಲು ಜೀವ ಹಿಂಡುವ ವಾಹಿನಿಗಳಾಗಿವೆ. ದಿ. ಗುಂಡೂರಾಯರಿಂದ ಆರಂಭಿಸಿ ಧರ್ಮಸಿಂಗ್ ಆಳ್ವಿಕೆ ತನಕ ತಜ್ಞರ ವರದಿ ಪರಿಶೀಲನೆಯಾಗಿವೆ. ಕೆ.ಸಿ.ರೆಡ್ಡಿ, ಟಾರ್ ಸ್ಟೀಲ್ ಫೌಂಡೇಷನ್ ತಜ್ಞರು, ಕ್ಯಾಪ್ಟನ್ ರಾಜಾರಾವ್ ಸಮಿತಿ ವರದಿಗಳು ಸರಕಾರದ ಮುಂದಿವೆ.
ಸಕಾಲಕ್ಕೆ ಅನುಷ್ಠಾನಕ್ಕೆ ಬಾರದ ಕಾರಣ ಹೊಸ ವರದಿ ತರಿಸಿಕೊಳ್ಳಲು ತಜ್ಞ ಚಿನಿವಾಲ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಈ ಸಮಿತಿ ವರದಿ ಸಲ್ಲಿಸಿದ ಕೆಲ ತಿಂಗಳಲ್ಲಿ ಧರ್ಮಸಿಂಗ್ ನೇತೃತ್ವದ ಸರಕಾರ ಉರುಳಿಬಿತ್ತು. ನಂತರ ಬಂದ ಕುಮಾರಸ್ವಾಮಿ ಸರಕಾರ ಈ ವರದಿಯತ್ತ ಕಣ್ಣೆತ್ತಿಯೂ ನೋಡಲಿಲ್ಲ. ಬಿಜೆಪಿ ಆಡಳಿತದಲ್ಲಿ ಏನಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಒಟ್ಟಾರೆ 840 ಕೋಟಿ ರು. ವಿನಿಯೋಗಿಸಿ 4 ವರ್ಷಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಮಗ್ರ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಜ್ಞರು ಶಿಫಾರಸು ಮಾಡಿ ವರ್ಷಗಳಾದವು. ಎಡ, ಬಲ ಹಾಗೂ ಬಲ ಭಾಗದ ಕೆಳದಂಡೆ ಮುಖ್ಯ ಕಾಲುವೆಗಳ ಒಳ ಮೈ ಬಲವರ್ಧನೆ. ಜೊಂಡುಗಟ್ಟಿದ, ಆಪು ಬೆಳೆದ, ಹೂಳು ತುಂಬಿದ ವಿತರಣೆ, ಉಪ ಕಾಲುವೆಗಳು ಹಾಗೂ ತೂಬುಗಳ ಆಧುನೀಕರಣ, ಹೊಲಗಾಲುವೆಗಳನ್ನು ಸರಿಪಡಿಸಿ ಪ್ರತಿ ವರ್ಷ ಪೋಲಾಗುವ 25 ಟಿಎಂಸಿ ಅಡಿ ನೀರು ಸದ್ಬಳಕೆ, ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ಪ್ರದೇಶದ ಕೆಳ ಮತ್ತು ಮೇಲ್ಭಾಗವೆಂಬ ತಾರತಮ್ಯದ ಜಗ್ಗಾಟಕ್ಕೆ ತೆರೆ ಎಳೆಯವುದು... ಇವು ತುರ್ತಾಗಿ ಆಗಬೇಕಿರುವುದು.

'ಪ್ರಭಾ' ವಳಿ
ಮಲಪ್ರಭಾ, ಘಟಪ್ರಭಾ, ಹಿಪ್ಪರಗಿ, ದೂಧಗಂಗಾ, ಹರಿನಾಲಾ, ಕಳಸಾ-ಬಂಡೂರಿ ನಾಲಾ ತಿರುವು ಮತ್ತು ಮಾರ್ಕಂಡೇಯ ನೀರಾವರಿ ಯೋಜನೆಗಳು ಅತಿ ಪ್ರಮುಖವಾಗಿವೆ. ಹಿರಣ್ಯಕೇಶಿ, ಬಳ್ಳಾರಿ ನಾಲಾ, ಶ್ರೀ ರಾಮೇಶ್ವರ ಮತ್ತು ಜವಳುಹಳ್ಳ ಏತ ನೀರಾವರಿಗಳು ಇನ್ನಿತರ. ಆದರೆ ಕೈಗೆತ್ತಿಕೊಂಡ ಯೋಜನೆಗಳಲ್ಲಿ ಇದುವರೆಗೆ ಯಾವುದೂ ಪೂರ್ಣಗೊಂಡಿಲ್ಲ.
ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಈ ನಾಲಾಗಳ ನೀರು ಸದ್ಬಳಕೆ ಆಗಲೇ ಬೇಕಿದೆ. ಇವುಗಳು ಸೇರುವ ಮಹಾದಾಯಿ ನದಿ ಕೊಳ್ಳದಲ್ಲಿ 200 ಟಿಎಂಸಿ ನೀರಿದೆ. ಈವರೆಗೆ ಹನಿ ನೀರೂ ಉಪಯೋಗವಾಗದಿರಲು ಕಾರಣ ಗೋವಾದ ತಗಾದೆ ಮತ್ತು ಕರ್ನಾಟಕದ ಇಚ್ಛಾಶಕ್ತಿಯ ಕೊರತೆ. ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ನವಲಗುಂದ, ನರಗುಂದ, ಬದಾಮಿ ಒಳಗೊಂಡು ನೂರಾರು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈ ಯೋಜನೆಗಳ ಸದ್ಬಳಕೆ ಅಗತ್ಯ. ಎಚ್.ಕೆ.ಪಾಟೀಲರ ಕಾಲದಲ್ಲಿ ಒಂದು ಹಂತದಲ್ಲಿ ಭರವಸೆ ಮೂಡಿದ್ದ ಯೋಜನೆ ಕೊನೆಗೆ ಹಳ್ಳಹಿಡಿಯಿತು.
4.4. ಕಿಮೀ ಉದ್ದದ ಕಳಸಾ ನಾಲೆಯಿಂದ 3 ಟಿಎಂಸಿ ನೀರು ಸಿಗಲಿದೆ. ಇದಕ್ಕಾಗಿ 44.78 ಕೋಟಿ ರು. ವೆಚ್ಚವಾಗಲಿವೆ. 4.9 ಕಿಮೀ ಉದ್ದದ ಬಂಡೂರಿ ನಾಲಾ ಜೋಡಣೆಯಿಂದ 3.56 ಟಿಎಂಸಿ ನೀರು ದೊರೆಯುತ್ತದೆ. ಇದಕ್ಕಾಗಿ 49.20 ಕೋಟಿ ರು. ವೆಚ್ಚವಾಗಲಿದೆ. ಯೋಜನೆ ಅನುಷ್ಠಾನಗೊಂಡರೆ ಬೆಳಗಾವಿ, ಸವದತ್ತಿ, ಬೈಲಹೊಂಗಲ, ರಾಮದುರ್ಗ, ಹುಬ್ಬಳ್ಳಿ-ಧಾರವಾಡ, ನವಲಗುಂದ, ನರಗುಂದ, ಬದಾಮಿ ಒಳಗೊಂಡು ನಾಲ್ಕು ಜಿಲ್ಲೆಗಳ 12 ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.

ಸಿಂಗಟಾಲೂರು
ಮುಂಡರಗಿ ಹಾಗೂ ಗದಗ, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ, ಕೊಪ್ಪಳ ತಾಲೂಕುಗಳ 1.18 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ದಶಕಗಳು ಕಳೆದರೂ ಕುಂಟುತ್ತಾ ಸಾಗಿದೆ. 75ರಷ್ಟು ಕಾಮಗಾರಿ ಮುಗಿದ್ದು, ಉಳಿದ ಭಾಗದ ಕಾಮಗಾರಿಗೆ ತಟಸ್ಥವಾಗಿದೆ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾರಣ.
63 ಕೋಟಿ ರು. ವೆಚ್ಚದಲ್ಲಿ 1992ರಲ್ಲಿ ಪ್ರಾರಂಭವಾದ ಯೋಜನೆಗೆ 2003ರಲ್ಲಿ 200 ಕೋಟಿ ರೂ. ಪರಿಷ್ಕೃತ ಹಣ ಬಿಡುಗಡೆಯಾದರೂ ಕಾಮಗಾರಿ ಇನ್ನೂ ಅಪೂರ್ಣ. ಯೋಜನೆಯಿಂದ ಅಂದಾಜು 1,500 ಎಕರೆ ಕೃಷಿಭೂಮಿ, ಗುಮ್ಮಗೋಳ, ಬಿದರಳ್ಳಿ, ಅಲ್ಲಿಪುರ, ಮಾಗಳ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಲಿದ್ದು, ರೈತರಿಗೆ ಪರಿಹಾರಧನ ಹಾಗೂ ನವಗ್ರಾಮ ನಿರ್ಮಾಣ ಬೇಡಿಕೆ ಈಡೇರಿಲ್ಲ.

ದಂಡೆ ಹತ್ತಿಲ್ಲ
ದಶಕ ಕಳೆದರೂ ದಡ ಹತ್ತದ ತುಂಗಾ ಮೇಲ್ದಂಡೆ ಯೋಜನೆ ಜಾರಿ ಬಗ್ಗೆ ಅನುಮಾನಗಳು ಹುಟ್ಟುವಂತಾಗಿದೆ. ಯೋಜನೆಯಿಂದ ಜಿಲ್ಲೆಯ 90 ಸಾವಿರ ಎಕರೆಗೂ ಹೆಚ್ಚು ಭೂಮಿ ನೀರಾವರಿಗೆ ಒಳಪಡಲಿದೆ. ಹೀಗೆ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಯೋಜನೆ, ಹಾನಗಲ್ಲನ ಬಸಾಪುರ ಏತ ನೀರಾವರಿ ಯೋಜನೆ, ಶಿಗ್ಗಾವಿಯ ನಾಗನೂರು ಕೆರೆ ನೀರಾವರಿ ಯೋಜನೆ, ಸವಣೂರಿನ ಮೋತಿ ತಲಾಬ ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ಸೌಭಾಗ್ಯ ಸಂಜೀವಿನಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 14 ಪ್ರಮುಖ ನದಿಗಳನ್ನು ಜೋಡಿಸುವ ಸೌಭಾಗ್ಯ ಸಂಜೀವಿನಿ ಯೋಜನೆ ಕಳೆದ 22 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದು ರಾಜ್ಯದ ಮೂರನೇ ಹಣಕಾಸು ಆಯೋಗದ ಅಧ್ಯಕ್ಷ ಎ. ಜಿ. ಕೊಡ್ಗಿಯವರ ಕನಸಿನ ಕೂಸು.
ಪ್ರತಿ ವರ್ಷ ಇಲ್ಲಿ 29,561 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಮುದ್ರ ಸೇರುತ್ತಿದ್ದು ಇದರಲ್ಲಿ ಆಂಶಿಕ ಭಾಗವನ್ನು, ಬಹುವಿಧ ಸೌಲಭ್ಯಗಳಿಗೆ ಬಳಸಿಕೊಳ್ಳುವುದೇ ಈ ಯೋಜನೆಯ ಉದ್ದೇಶ. ಉತ್ತರ ತುದಿಯ ಉಡುಪಿ ಜಿಲ್ಲೆಯ ಸೌಪರ್ಣಿಕಾ ನದಿಯಿಂದ ಆರಂಭಿಸಿ ದಕ್ಷಿಣ ಕನ್ನಡದ ದಕ್ಷಿಣದ ಪಯಸ್ವಿನಿ ನದಿ ತನಕ ಎಲ್ಲ ನದಿಗಳ ಉಗಮ ಸ್ಥಾನ ಪಶ್ಚಿಮ ಘಟ್ಟ. ಇವೆಲ್ಲ 80 ಮೀ. ತಗ್ಗಿನಲ್ಲಿರುವ ಅರಬ್ಬಿ ಸಮುದ್ರ ಸೇರುತ್ತವೆ. ಎತ್ತರದ ಸಮಪಾತಳಿಯಲ್ಲಿ 300 ಕಿ.ಮೀ. ಉದ್ದದ ಕಾಲುವೆ ತೋಡಿ ನೀರು ಬಳಸುವುದಕ್ಕೆ ಉದ್ದೇಶಿಸಲಾಗಿದೆ. ಪ್ರಸ್ತಾವವನ್ನು ಕೇಂದ್ರ ಯೋಜನಾ ಆಯೋಗಕ್ಕೆ ಕಳುಹಿಸಿದ್ದು, ಲೋಕಸಭೆಯಲ್ಲೂ ಪ್ರಸ್ತಾಪವಾಗಿತ್ತು. ವರದಿ ಸಲ್ಲಿಸಲು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಕೆ.ಸಿ.ರೆಡ್ಡಿ ನೇತೃತ್ವದ ಸಮಿತಿ ರಚಿಸಿತ್ತಾದರೂ, ಈವರೆಗೆ ಏನೂ ಆಗಿಲ್ಲ.
ಕರಾವಳಿಯ 10 ನಗರಗಳಲ್ಲಿ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲ ಸೌಲಭ್ಯ ಅಭಿವೃದ್ಧಿಪಡಿಸುವುದಕ್ಕಾಗಿರುವ ಕುಡ್ಸೆಂಪ್ ಯೋಜನೆ ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲೇ ಇದೆ.

ಇನ್ನೂ ಅಭದ್ರ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಸರಿಗೆ ಪಂಚ ನದಿಗಳು ಹುಟ್ಟಿ ಮೈದುಂಬಿ ಹರಿಯುತ್ತವೆ. ಆದರೆ, ಅವುಗಳ ಉಪಯೋಗ ಮಾತ್ರ ಹೊರ ಜಿಲ್ಲೆಗಳಿಗೆ. 'ಸಮುದ್ರದ ನಂಟಸ್ಥಿಕೆ ಉಪ್ಪಿಗೆ ಬರ'  ಎಂಬಂತಾಗಿದೆ ಚಿಕ್ಕಮಗಳೂರು ಜಿಲ್ಲೆಯ ನೀರಾವರಿ ಸ್ಥಿತಿ.
ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ಹಾಸನ ಜಿಲ್ಲೆಯ ಬರದಿಂದ ಬಿರಿದ 5.37 ಲಕ್ಷ ಎಕರೆ ಭೂಮಿಗೆ ನೀರು ಹರಿಸುವ 'ಭದ್ರಾ ಮೇಲ್ದಂಡೆ ಯೋಜನೆ' ರೂಪ ತಾಳಿ ಮೂರು ದಶಕ ಕಳೆದಿವೆ. ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ ಮತ್ತು ತೇಗೂರು ಗುಡ್ಡದಲ್ಲಿ ಅಣೆಕಟ್ಟು ಕಟ್ಟುವುದು, ದಟ್ಟ ಅರಣ್ಯದೊಳಗೆ ವೇದಾವತಿ ಕಣಿವೆಯವರೆಗೆ 265 ಕಿಮೀ ಉದ್ದದ ಕಾಲುವೆ, 60 ಕಿಮೀ ಉದ್ದದ ಸುರಂಗ ಮಾರ್ಗದ ಮೂಲಕ ನೀರು ಹರಿಸುವುದು ಉದ್ದೇಶ. ಪ್ರಾರಂಭದಲ್ಲಿ 126 ಕೋಟಿ, 1980ರಲ್ಲಿ 260 ಕೋಟಿ ಅಂದಾಜು ಮಾಡಿದ್ದರೆ ಈಗ ಅದರ ವೆಚ್ಚ ಐದು ಸಾವಿರ ಕೋಟಿ.
ನಿಜಲಿಂಗಪ್ಪ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ರೂಪಗೊಂಡ ಈ ಯೋಜನೆಗೆ ಎರಡು ದಶಕಗಳ ಹಿಂದೆ ಮಾಗುಂಡಿ ಬಳಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಬಯಲು ಸೀಮೆ ಜನರು ನೀರಿನ ದಾಹ ಇಂಗಿಸಲು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದ್ದರೆ, ಪರಿಸರಕ್ಕೆ ಮಾರಕ ಎಂದು ಒಂದು ವರ್ಗದ ವಿರೋಧ ಬಂದಿತ್ತು. ಕೆ.ಸಿ.ರೆಡ್ಡಿ ನೇತೃತ್ವದ ತಾಂತ್ರಿಕ ಸಮಿತಿ ಸರಕಾರಕ್ಕೆ ವರದಿ ನೀಡಿ ವರ್ಷಗಳು ಕಳೆದಿವೆ. ಆದರೆ, ಸರಕಾರ ತನ್ನ ನಿಲುವು ಪ್ರಕಟಿಸಿಲ್ಲ.

ಕಾಲ್ಮುರಿದ ಯೋಜನೆಗಳು
ನೀರಾವರಿ ವಿಷಯದಲ್ಲಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ವಂಚನೆಯಾಗಿದೆ. ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ಬಚಾವತ್ ಎ ಸ್ಕೀನಲ್ಲಿ ನೀರು ಹರಿಸಿ ಶಾಶ್ವತ ನೀರಾವರಿ ಕಲ್ಪಿಸಬೇಕು ಎನ್ನುವುದು ಈ ಭಾಗದ ಜನರ ದಶಕಗಳ ಆಗ್ರಹ. ಹಿರಿಯೂರು ತಾಲೂಕಿನ ಧರ್ಮಪುರ ಕೆರೆಗೆ ಫೀಡರ್ ಚಾನಲ್ ನಿರ್ಮಿಸಿ 'ಸುವರ್ಣಮುಖಿ' ನದಿಯಿಂದ ನೀರು ಹರಿಸಿ ನೀರಾವರಿ ಕಲ್ಪಿಸಿ. ಈ ಬರಡು ಭೂಮಿಯಲ್ಲಿ ಹಸಿರು ಉಕ್ಕುತ್ತದೆ.
ಉಡುವಳ್ಳಿ ಕೆರೆಯ ಪೂರಕನಾಲೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. 22 ಕೆರೆ ಏತ ನೀರಾವರಿ, ಚನ್ನಗಿರಿ ತಾಲೂಕಿನ ಉಬ್ರಾಣಿ ಏತ ನೀರಾವರಿ ಹಾಗೂ ಹರಪನಹಳ್ಳಿ ತಾಲೂಕಿನ ಗರ್ಭಗುಡಿ ಬ್ಯಾರೇಜ್ ಯೋಜನೆ ಪೂರ್ಣಗೊಂಡರೆ ದಾವಣಗೆರೆ ಜಿಲ್ಲೆ ಸುಭಿಕ್ಷವಾಗುತ್ತದೆ. ದಾವಣಗೆರೆ, ಹರಪನಹಳ್ಳಿ ಹಾಗೂ ಜಗಳೂರು ತಾಲೂಕಿನ 22 ಕೆರೆಗಳಿಗೆ ಭದ್ರಾ ನದಿಯಿಂದ ನೀರುಣಿಸುವ ಕಾಮಗಾರಿಗೆ 100 ಕೋಟಿ ರು. ನಿಗದಿಪಡಿಸಲಾಗಿದೆ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಅವಧಿಯಲ್ಲಿ ಆಡಳಿತಾತ್ಮಕ ಮಂಜೂರಿ ದೊರೆತಿದ್ದು, ಕಾಮಗಾರಿ ಆರಂಭದಲ್ಲೇ ಸರಕಾರ ಮುಗ್ಗರಿಸಿತು. ಚನ್ನಗಿರಿ ತಾಲೂಕಿನ 93 ಕೋಟಿ ರು. ವೆಚ್ಚದ ಉಬ್ರಾಣಿ ಏತ ನೀರಾವರಿ ಕಾಮಗಾರಿ ಕುಂಟುತ್ತಿದೆ. ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.
ಹರಪನಹಳ್ಳಿ ತಾಲೂಕಿನ ಗರ್ಭಗುಡಿ ಬ್ಯಾರೇಜ್ ಯೋಜನೆ ನನೆಗುದಿಗೆ ಬಿದ್ದು ದಶಕ ಕಳೆದಿದೆ. ಅಂದಾಜು ವೆಚ್ಚ  8.5 ಕೋಟಿಯಿಂದ 40 ಕೋಟಿ ರು.ಗೇರಿದೆ. ಬ್ಯಾರೇಜ್ ನಿರ್ಮಿತ ಪ್ರದೇಶದ ತಳಪಾಯ ಗಟ್ಟಿಯಾಗಿಲ್ಲವೆಂದು ಯೋಜನೆ ಸ್ಥಗಿತಗೊಳಿಸಲಾಗಿದೆ. ಯೋಜನೆ ಸಾಕಾರದಿಂದ ತಾಲೂಕಿನ 6 ಸಾವಿರ ಎಕರೆಗೆ ನೀರು ದೊರೆಯಲಿದೆ. 915 ಕೋಟಿ ರು. ವೆಚ್ಚದಲ್ಲಿ ಆರಂಭಿಸಿದ ಭದ್ರಾ ಜಲಾಶಯ ನಾಲೆ ಆಧುನೀಕರಣದ ಶೇ.72 ಕಾಮಗಾರಿ ಬಾಕಿ ಇದೆ.

ಮತ್ತೇನಾಗಬೇಕು?
-    ಬಳ್ಳಾರಿ, ಕೊಪ್ಪಳ ಜಿಲ್ಲೆಗೆ ವರದಾನ, ಸಿಂಗಟಾಲೂರು ವಿಸ್ತೃತ ಏತ ನೀರಾವರಿ ಯೋಜನೆ ತ್ವರಿತ ಅನುಷ್ಠಾನ
-    ಕೃಷ್ಣಾ ಬಿ ಸ್ಕೀಮ್‌ನಡಿ ಹಂಚಿಕೆಯಾಗುವ ನೀರಿನಲ್ಲಿ ಕುಷ್ಟಗಿ, ಯಲಬುರ್ಗಾ ತಾಲೂಕುಗಳಿಗೆ ಪಾಲು
-    ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಕೂಡ್ಲಿಗಿ ತಾಲೂಕು ಗಡಿ ಹಳ್ಳಿಗಳ ಸೇರ್ಪಡೆ
-    ನಾರಾಯಣಪೂರ ಬಲದಂಡೆ ಮುಖ್ಯ ಕಾಲುವೆ 95 ರಿಂದ 157ನೇ ಕಿ.ಮೀ. ವಿಸ್ತರಣೆಗೆ ವಿಸ್ತೃತ ಯೋಜನೆ, ತಾಂತ್ರಿಕ-ಆಡಳಿತಾತ್ಮಕ ಸಮ್ಮತಿ
-    ತುಂಗಭದ್ರಾ ಎಡದಂಡೆ ಹಾಗೂ ನಾರಾಯಣಪೂರ ಬಲದಂಡೆ ಮಧ್ಯೆ ಸಂಪರ್ಕ ಕಾಲುವೆ ನಿರ್ಮಾಣ
-   ನಂದವಾಡಗಿ ಹಾಗೂ ರಾಯಚೂರು ಬೃಹತ್ ಏತ ನೀರಾವರಿ ಯೋಜನೆಗಳಿಗೆ ಚಾಲನೆ
-    ನಾರಾಯಣಪೂರ ಬಲದಂಡೆ ಮುಖ್ಯ ಕಾಲುವೆ 95 ಕಿ.ಮೀ. ತನಕ ನಿರ್ಮಾಣ ಕಾಮಗಾರಿ ತಾಂತ್ರಿಕ ತಜ್ಞರಿಂದ ತಪಾಸಣೆ ಮತ್ತು ಕ್ರಮ
-    ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಉಳೇನೂರು-ಬೆನ್ನೂರು, ವಳಬಳ್ಳಾರಿ, ಚೀಕಲಪರ್ವಿ ಬಳಿ ಬಾಂದಾರು ನಿರ್ಮಾಣ
-    ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 31 ಟಿಎಂಸಿ ಅಡಿ ಹೂಳಿಗೆ ಪರಿಹಾರ, ಪರ್ಯಾಯ ಯೋಜನೆ
-    ತುಂಗಭದ್ರಾ ಎಡ-ಬಲದಂಡೆ ವ್ಯಾಪ್ತಿಯಲ್ಲಿ ಐದು ಸಮತೋಲನ ಜಲಾಶಯಗಳ ನಿರ್ಮಾಣ
-    ತುಂಗಭದ್ರಾ ಮಂಡಳಿ ರದ್ದು, ಕರ್ನಾಟಕ-ಆಂಧ್ರದ ನೀರು ಹಂಚಿಕೆಗೆ ನೀರಾವರಿ ವರ್ಷ ಬದಲು ಹಂಗಾಮು ಮಾನದಂಡ
-    ರಾಜೋಳಿಬಂಡಾ ತಿರುವು ಯೋಜನೆ ಅಣೆಕಟ್ಟೆ ಎತ್ತರ ಹೆಚ್ಚಳ, ಆರ್‌ಡಿಎಸ್ ಅಣೆಕಟ್ಟೆ ಬಳಿ ಆಂಧ್ರಕ್ಕೆ ಹರಿದ ನೀರಿಗೆ ಲೆಕ್ಕವಿಡಲು ಮಾಪಕ ವ್ಯವಸ್ಥೆ
-   ಕೋಲಾರ ಜಿಲ್ಲೆಗೆ ನೀರು ತರುವ ಯರಗೋಳ ಯೋಜನೆ ಅನುಷ್ಠಾನ
-   ಸಕಲೇಶಪುರ ಎತ್ತಿನ ಹೊಳೆಯಿಂದ ಬರಪೀಡಿತ ಜಿಲ್ಲೆಗಳಿಗೆ ನೀರೊದಗಿಸುವ ಯೋಜನೆಯ ಜಾರಿ.
-    ಅರ್ಕಾವತಿ, ಕುಮುದ್ವತಿ ನದಿಗಳ ಪುನಶ್ಚೇತನಕ್ಕೆ ಕ್ರಮ

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!