ಅಂಕಣಗಳು

ನೀರಿನಿಂದ ಹೊರಬಿದ್ದ ಮೀನಾಗಿರುವ ಕಾಡು ಕುರುಬರು

ನಾಗರಿಕತೆಯಿಂದ ಬಹು ದೂರ ಉಳಿದಿದ್ದ ಈ ಮಂದಿಗೆ ಅಂದು ಅರಣ್ಯವೇ ಅರಮನೆಯಾಗಿತ್ತು.

ನಾಗರಿಕತೆಯಿಂದ ಬಹು ದೂರ ಉಳಿದಿದ್ದ ಈ ಮಂದಿಗೆ ಅಂದು ಅರಣ್ಯವೇ ಅರಮನೆಯಾಗಿತ್ತು. ಅಲ್ಲಿನ ಗಿಡ-ಮರಗಳೇ ಆರಾಧ್ಯ ದೈವವಾಗಿದ್ದವು. ದಟ್ಟ ಕಾನನದ ನಡುವೆ ಬದುಕು ಕಟ್ಟಿಕೊಂಡಿದ್ದ ಇವರಿಗೆ ಹೊರಗಿನ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಲಿಲ್ಲ. ನಾಡಿನ ಜನರೇನಾದರೂ ಕಾಡಿಗೆ ಬಂದರೆ ಅವರನ್ನು ನೋಡಿ, ಹೆದರಿ ಓಡುತ್ತಿದ್ದರು.
ಅರಣ್ಯ ಕಾಯಿದೆ ಜಾರಿಗೆ ಬಂದ ಬಳಿಕ ಇವರೆಲ್ಲ ಊರಿನ ಕಡೆ ಮುಖ ಮಾಡಿದ್ದಾರೆ. ಇದರಿಂದ ಪರಿಸ್ಥಿತಿ ನೀರಿನಿಂದ ಹೊರಬಿದ್ದ ಮೀನಿನಂತೆ ಆಗಿದೆ. ಕಾಡಿನ ಜೀವನಕ್ಕೆ ಹೊಂದಿಕೊಂಡಿದ್ದವರಿಗೆ ಊರು, ಕೇರಿ ಹಿಡಿಸುತ್ತಿಲ್ಲ. ಜೊತೆಗೆ ಸರ್ಕಾರವೂ ಸಮರ್ಪಕವಾಗಿ ಮೂಲಭೂತ ಸೌಕರ್ಯ ಒದಗಿಸದ ಪರಿಣಾಮ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.  
-ಇದು ಬೆಟ್ಟ ಕುರುಬರ ಹಿನ್ನೆಲೆ. ನೂರಾರು ವರ್ಷಗಳಿಂದ ಕಾಡನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಜನ ಇವರು. ಅಂದಹಾಗೆ ಬೆಟ್ಟ ಕುರುಬರ ಹೆಸರು ಬದಲಾಗಿದೆ. 1980ರ ಬಳಿಕ ಇವರು ಕಾಡು ಕುರುಬರಾಗಿದ್ದಾರೆ. ಬದಲಾದ ಹೆಸರೂ ಇವರ ಪಾಲಿಗೆ ನಾನಾ ಸಮಸ್ಯೆಗಳನ್ನು ತಂದೊಡ್ಡಿದೆ.
ಪಲ್ಲವ ಸಾಮ್ರಾಜ್ಯ ಕಟ್ಟಿದವರು
ಈ ಕಾಡು ಕುರುಬರು ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತಿಹಾಸದ ಪ್ರಕಾರ ಇವರು ಪಲ್ಲವ ಸಾಮ್ರಾಜ್ಯವನ್ನು ಕಟ್ಟಿ ಆಳ್ವಿಕೆ ನಡೆಸಿದವರು. ಆ ಸಾಮ್ರಾಜ್ಯ ಪತನವಾದ ನಂತರ ಶತ್ರುಗಳಿಂದ ಪಾರಾಗಲು ಕಾಡಿಗೆ ಬಂದು ಆಶ್ರಯ ಪಡೆದರು ಎನ್ನುತ್ತಾರೆ ಇತಿಹಾಸ ತಜ್ಞರು. ಇನ್ನೂ ಕೆಲವರ ಪ್ರಕಾರ, ಕಾಡು ಕುರುಬರು ಮೂಲತ: ಕೇರಳದ ನೀಲಿಗಿರಿಯವರು. ರಾಜರ ಆಳ್ವಿಕೆ ಸಂದರ್ಭದಲ್ಲಿ ಯುದ್ಧವಾದಾಗ ಸೇನೆ ಸೇರಬೇಕಾಗುತ್ತದೆ ಎಂದು ಹೆದರಿ ಬಂದವರು.
ಮತ್ತೊಂದು ದಾಖಲೆಯಂತೆ ಕಾಡು ಕುರುಬರು ಬಲಶಾಲಿಗಳು. ಪಲ್ಲವ ವಂಶಕ್ಕೆ ಸೇರಿದ ಇವರು ಕೊಂಗ, ಚೋಳ ಮತ್ತು ಚಾಲುಕ್ಯರ ದಾಳಿಯಿಂದ ಅವನತಿ ಹೊಂದಿದರು ಬಳಿಕ ಬೆಟ್ಟಗುಡ್ಡಗಳಿಂದ ಆವೃತವಾದ ಮಲಬಾರ್, ನೀಲಗಿರಿ, ಕೊಡಗು, ವೈನಾಡು ಮತ್ತು ಅವಿಭಜಿತ ಮೈಸೂರು ಜಿಲ್ಲೆಯ ಕಾಡುಗಳನ್ನು ಸೇರಿಕೊಂಡರು. ಜನಸಂಪರ್ಕವಿಲ್ಲದೆ ಅರಣ್ಯದಲ್ಲೇ ವಾಸ ಮಾಡಿಕೊಂಡಿದ್ದರು. ನಂಜನಗೂಡು, ಗಂಡ್ಲುಪೇಟೆ, ಪಿರಿಯಾಪಟ್ಟಣ, ಹುಣಸೂರು ಮತ್ತು ಹೆಗ್ಗಡೆದೇವನಕೋಟೆಯಲ್ಲಿ ಇಂದಿಗೂ ಕಾಡು ಕುರುಬರು ಇದ್ದಾರೆ.  
ಹೆದರಿ ಓಡುತ್ತಿದ್ದರು
ಕಾಡು ಕುರುಬರು, ಜೇನು ಕುರುಬರು ಸೇರಿದಂತೆ ಗಿರಿಜನರ ಏಳಿಗೆಗೆ ದುಡಿಯುತ್ತಿರುವ ಹೆಗ್ಗಡದೇವನ ಕೋಟೆಯ ವಿಕಾಸ ಸಂಸ್ಥೆ ಅಧ್ಯಕ್ಷ ಸೋಮಣ್ಣ ಅವರು ಹೇಳುವ ಪ್ರಕಾರ, ಕಾಡು ಕುರುಬರು ತೀರಾ ಆಮಾಯಕರು. ಅವರಿಗೆ ನಿರ್ದಿಷ್ಟ ಭಾಷೆ ಎಂಬುದೇ ಇರಲಿಲ್ಲ. ಕನ್ನಡ, ತೆಲುಗು, ಮಲೆಯಾಳ, ತಮಿಳು ಸೇರಿಸಿ ಅದನ್ನೇ ಆಡುಭಾಷೆಯನ್ನಾಗಿ ಮಾಡಿಕೊಂಡಿದ್ದರಂತೆ. ಈ ಜನ ಎಂಥಹ ಮುಗ್ಧರು ಎಂದರೆ ಊರಿನ ಜನ ಏನಾದರೂ ಕಾಡಿಗೆ ಹೋದರೆ ಅವರನ್ನು ಕಂಡು ಹೆದರಿ ಓಡುತ್ತಿದ್ದರಂತೆ. ನಾಗರಿಕತೆಯ ನೆರಳೂ ಬೀಳದಂತೆ ಬೆಳೆದವರು.
ಕಾಡು ಕುರುಬರ ಉಡುಗೆ ತೊಡುಗೆ ಸಹ ವಿಶಿಷ್ಟವಾದದ್ದು. ಅವರು ಬಟ್ಟೆ ಧರಿಸುತ್ತಿದ್ದುದು ಮಂಡಿ ವರೆಗೆ ಮಾತ್ರ. ಹೆಂಗಸರಿಗೆ ರವಿಕೆ ನಿಷಿದ್ಧವಾಗಿತ್ತು. ಕಾಡಿನಲ್ಲಿ ಆಹಾರ ಸಂಗ್ರಹಣೆ ಮಾಡುವುದು, ಭೇಟೆಯಾಡುವುದು ಮತ್ತು ಬಿದಿರಿನ ಬೆತ್ತ ಬಳಸಿ ಬುಟ್ಟಿ, ತೊಟ್ಟಿಲು, ಮರ ಹೆಣೆಯುವುದು ಕುಲ ಕಸುಬಾಗಿತ್ತು. ಕಾಡು ಕುರುಬರು ಬೇಸಾಯವನ್ನೂ ಮಾಡುತ್ತಿದ್ದರು.
ವ್ಯವಸಾಯದಲ್ಲಿ ವಿಶೇಷತೆ
ಅವರ ವ್ಯವಸಾಯದಲ್ಲೂ ಒಂದು ವಿಶೇಷತೆ ಇತ್ತು. ಯುಗಾದಿ ಹಬ್ಬದ ಸಂದರ್ಭದಲ್ಲಿ ಇವರ ಕೃಷಿ ಚಟುವಟಿಕೆ ಆರಂಭವಾಗುತ್ತಿತ್ತು. ಅದಕ್ಕೂ ಮುನ್ನ ಕಾಡು ಕುರುಬರು ತಮ್ಮ ಹಾಡಿಯ ಯಜಮಾನನ್ನು ಕರೆಯಿಸುತ್ತಿದ್ದರು. ಜೊತೆಗೆ ದೇವರ ಮಾತು ಕೇಳುತ್ತಿದ್ದರು. ಆ ಯಜಮಾನ ಐದು ಕುಂಬಳಕಾಯಿ ಒಡೆದು ಅದರ ಬೀಜ ನೆಡುತ್ತಿದ್ದ. ಬೀಜ ಮೊಳಕೆಯೊಡೆದು ಫಸಲು ಚೆನ್ನಾಗಿ ಬಂದರೆ ಈ ಬಾರಿ ಎಲ್ಲ ಬೆಳೆಗಳ ಇಳುವರಿ ಉತ್ತಮವಾಗಿರುತ್ತದೆ ಎಂದು ನಂಬುತ್ತಿದ್ದರು. ಬಳಿಕ ಯಜಮಾನ ಎಲ್ಲರ ಜಮೀನುಗಳಿಗೆ ಹೋಗಿ ಬೀಜ ಎರಚಿ ಬರುತ್ತಿದ್ದ. ಬಳಿಕ ಬಿತ್ತನೆ ಶುರುವಾಗುತ್ತಿತ್ತು.
ಬೇಸಾಯವೆಲ್ಲ ಮುಗಿದು ಬೆಳೆಗಳು ಕೈಗೆ ಬಂದರೂ ಅದನ್ನು ಗೌರಿ ಹಬ್ಬದ ವರೆಗೆ ಮುಟ್ಟುವಂತಿರಲಿಲ್ಲ. ಹಬ್ಬದ ದಿನ ಬೆಳೆದದ್ದನ್ನು ಎಲ್ಲರೂ ಒಂದೆಡೆ ರಾಶಿ ಹಾಕಿ ಪೂಜೆ ಮಾಡುತ್ತಿದ್ದರು. ಹಬ್ಬ ಆಚರಿಸುತ್ತಿದ್ದರು. ಬಳಿಕ ದೇವರಿಗೆ ಮತ್ತು ಸತ್ತ ಹಿರಿಯರಿಗೆ ನೈವೇದ್ಯ ಇಡುತ್ತಿದ್ದರು. ಆನಂತರೆ ಬೆಳೆದಿದ್ದನ್ನು ಉಣ್ಣಲು ಶುರು ಮಾಡುತ್ತಿದ್ದರು. ಬೊಮ್ಮ ದೇವರು, ಗಂಗಾಸ್ಥಾನದ ದೇವರು, ಮುದ್ದಪ್ಪ, ಮೂಗಪ್ಪಾಜಿ, ಮಾದಪ್ಪ, ನೂರಳೆಯ್ಯ, ಚಿಕ್ಕದೇವಮ್ಮ, ಮಾರಮ್ಮ, ಗುಡ್ಡದ ಒಡತಿ, ಗುಡ್ಡದ ತಾಯಿ, ಕುಮಾರ ದೇವರು ಸೇರಿದಂತೆ ಇನ್ನೂ ಹಲವಾರು ದೇವರುಗಳನ್ನು ಕಾಡು ಕುರುಬರು ಪೂಜಿಸುತ್ತಾರೆ. ದೇವರ ಅಪ್ಪಣೆ ಇಲ್ಲದೆ ಇವರು ಯಾವುದೇ ಕೆಲಸ ಮಾಡುವುದಿಲ್ಲ. ಪೂಜಾರಿಯನ್ನು ಕರೆಯಿಸಿದಾಗ ಆತನ ಮೈಮೇಲೆ ಬರುವ ದೇವರು ಹೇಳಿದಂತೆ ಕೇಳುತ್ತಿದ್ದವರು ಮತ್ತು ಅದನ್ನೇ ನಿಜ ಎಂದು ನಂಬುತ್ತಿದ್ದವರು ಇವರು.  
ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ
ಕಾಡು ಕುರುಬರು ಮುಗ್ಧರಾಗಿದ್ದವರು. ಕಾಡಿನಲ್ಲಿದ್ದಾಗ ಅವರು ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ. ಅಪರಿಚಿತರು ಕಂಡರೆ ಸಾಕು ಹೆದರಿ ಓಡುತ್ತಿದ್ದರು. ಇನ್ನು ಅರಣ್ಯ ಪ್ರದೇಶದಲ್ಲಿ ನಿಶ್ಯಬ್ದವೇ ಹೆಚ್ಚು. ಹೀಗಾಗಿ ಸದ್ದು ಎಂದರೆ ಇವರಿಗೆ ಆಗುತ್ತಿರಲಿಲ್ಲ. ಇನ್ನು ಹಾಡಿಯ ಯಾವುದೇ ಮನೆಯಲ್ಲಿ ಮಗುವಿನ ಜನನವಾದರೂ ಚವಡಿ ಆಚರಣೆ ಮಾಡುತ್ತಿದ್ದರು. ಹಾಡಿಯ ಯಜಮಾನ ಮತ್ತು ಯಜಮಾನತಿಯನ್ನು ಕರೆಯಿಸಿ, ದೇವರು ಮತ್ತು ಹಿರಿಯರ ಆತ್ಮಗಳನ್ನು ಆಹ್ವಾನಿಸುತ್ತಿದ್ದರು. ಹಿರಿಯರು ಸೂಚಿಸಿದ ಹೆಸರನ್ನಡುತ್ತಿದ್ದರು ಎಂದು ವಿವರಿಸುತ್ತಾರೆ ಸೋಮಣ್ಣ.
ಆದರೆ, ಈಗ ಕಾಡು ಕುರುಬರ ಬದುಕು ಬದಲಾಗಿದೆ. ಏಕೆಂದರೆ, ಅರಣ್ಯ ಕಾಯಿದೆ ಜಾರಿಗೆ ಬಂದ ಬಳಿಕ ಸರ್ಕಾರ ಇವರನ್ನು ಏಕಾಏಕಿ ಕಾಡಿನಿಂದ ಎತ್ತಂಗಡಿ ಮಾಡಿಸಿ ಊರಿನೊಳಕ್ಕೆ ತಂದುಬಿಟ್ಟಿತ್ತು. ಇದರಿಂದ ಆ ಜನರಿಗೆ ಕುತ್ತಿಗೆ ಹಿಚುಕಿದ ಅನುಭವ ಆಯಿತು. ಏಕೆಂದರೆ ನಾಗರಿಕತೆಯ ನೆರಳು ಸೋಕದಂತೆ ಜೀವನ ನಡೆಸಿದ ಕಾಡು ಕುರುಬರು ಹೊರಗಿನ ಜಗತ್ತಿಗೆ ಹೊಂದಿಕೊಳ್ಳಲು ಭಾರಿ ಕಷ್ಟ ಪಡಬೇಕಾಯಿತು. ಅರಣ್ಯವೇ ತಮ್ಮ ಪಾಲಿಗೆ ಮನೆ ಎಂದುಕೊಂಡು ಇದ್ದ ಇವರಿಗೆ ಹೊರಗಡೆ ಏನೇನೂ ತಿಳಿದಿರಲಿಲ್ಲ. ಮೂಲ ಕಸುಬು ಬಿಟ್ಟು ಬೇರೆ ಉದ್ಯೋಗವೂ ತಿಳಿದಿರಲಿಲ್ಲ. ಆಗ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಈ ಹಂತದಲ್ಲಿ ಜೀವನ ನಡೆಸುವುದು ಕಷ್ಟವಾದಾಗ ಅನೇಕರು ವ್ಯವಸಾಯಸ್ಥರ ಮನೆಗಳಲ್ಲಿ ಜೀತಕ್ಕೆ ಸೇರಿದರು.
ನಾಡಿನ ಜೀವನಕ್ಕೆ ಹೊಂದಿಕೊಳ್ಳಲಾಗದೆ ಹಲವರು ರೋಗರುಜಿನಗಳಿಗೆ ತುತ್ತಾದರು. ಮಹಿಳೆಯರು, ಪುರುಷರು ಹಣದಾಸೆಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಇದರಿಂದ ಜನಸಂಖ್ಯೆ ಸಹ ಕಡಿಮೆ ಆಯಿತು. ಇನ್ನು ಕಾಡಿನಲ್ಲಿ ಆಚರಿಸುತ್ತಿದ್ದ ಸಂಪ್ರದಾಯಗಳು ಸಹ ಕೊಂಚ ಕೊಂಚವಾಗಿ ಕಡಿಮೆ ಆಗುತ್ತಿದೆ.
ಈ ಮಧ್ಯೆ 1980ರಲ್ಲಿ ಬೆಟ್ಟ ಕುರುಬರು ಕಾಡು ಕುರುಬರಾಗಿ ಬದಲಾದರು. ಅಂದರೆ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಾಡು ಕುರುಬರ ಹೆಸರಲ್ಲಿ ನುಂಗಿ ನೀರು ಕುಡಿಯಲು ಕೆಲವರು ದಾಖಲೆಗಳನ್ನು ತಿರುಚಿದರು. ಹೀಗಾಗಿ ಬೆಟ್ಟ ಕುರುಬ ಎಂಬ ಜಾತಿಯೇ ಈಗ ಸರ್ಕಾರದ ದಾಖಲೆಗಳಲ್ಲಿ ಇಲ್ಲವಾಗಿದೆ. ಸೇವಾ ಸಂಸ್ಥೆಗಳು ಎಚ್ಚೆತ್ತು ಇವರ ಪರವಾಗಿ ಹೋರಾಟ ಆರಂಭಿಸಿದ ಬಳಿಕ ಪರಿಸ್ಥಿತಿ ಕೊಂಚ ಸುಧಾರಿಸಿತು. ಜೊತೆಗೆ ಕಾಡು ಕುರುಬರಲ್ಲೂ ಅರಿವು ಮೂಡತೊಡಗಿತು. ಹೀಗಾಗಿ ಕೆಲವರು ಶಿಕ್ಷಣದ ಕಡೆ ಮುಖ ಮಾಡಿದರು. ಇದರಿಂದ ಸಮುದಾಯದಲ್ಲಿ ಈಗ ಪದವೀಧರರನ್ನು ಕಾಣುವಂತಾಗಿದೆ. ಆದರೂ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಮರು ವಸತಿ ಸೌಕರ್ಯ ಕಲ್ಪಿಸಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯ ಇದಾಗಿದೆ.

-ಕೆ.ವಿ.ಪ್ರಭಾಕರ
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ