ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೃಷ್ಣ ದೇಗುಲ ವಶದ ಪ್ರಸ್ತಾಪ ಹಿಡಿಯಲಿರುವ ಮಾರ್ಗ ಏನಿರಬಹುದು?

Srinivasa Murthy VN
Updated On : 25 May 2013, 10:06 am

ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಉಡುಪಿ ಕೃಷ್ಣ ದೇವಾಲಯಕ್ಕೆ ಸೀಮಿತವಾಗದೆ ಸರ್ಕಾರದಿಂದ ಕೈಬಿಟ್ಟ 110 ದೇವಾಲಯಗಳು ಸಾರ್ವಜನಿಕರ ದೇವಾಲಯಗಳೆಂದು ಸಾಬೀತುಪಡಿಸಲು ಹೋದರೆ ತಾಂತ್ರಿಕವಾಗಿ ಸರಿ ಎನ್ನಿಸಿಕೊಳ್ಳುತ್ತಾರೆ.

ಚುನಾವಣೆಗೂ ಮೊದಲು ಕಾಂಗ್ರೆಸ್‌ನ ಸಂಭಾವ್ಯ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡಿದ್ದ ಸಿದ್ದರಾಮಯ್ಯನವರು ಕಳೆದ ಫೆಬ್ರವರಿಯಲ್ಲಿ ಯುವ ಕಾಂಗ್ರೆಸ್ ಪಡೆಯೊಂದಿಗೆ ಮಲ್ಪೆ ಪಾದಯಾತ್ರೆಯಲ್ಲಿ ಕರಾವಳಿಯ ಜನ ಬೆಚ್ಚಿಬೀಳುವಂಥ ಒಂದು ಶಪಥ ಮಾಡಿದರು. ಅದು ಉಡುಪಿ ಕಡಗೋಲು ಕೃಷ್ಣ ದೇವಾಲಯಕ್ಕೆ ಸಂಬಂಧಿಸಿದಂತೆ. 'ನಾನು ಸಿ.ಎಂ.ಆದರೆ ಮೊದಲು ಕೃಷ್ಣ ದೇವಾಲಯವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳುತ್ತೇನೆ' ಎಂದು. ಆಗ ಉಡುಪಿಯ ಅಷ್ಟಮಠಾಧೀಶರು, ಅರ್ಘ್ಯಪಾದ್ಯ ಆಚಮನಗಳನ್ನು ನಿಲ್ಲಿಸಿ ಒಂದು ನಿಮಿಷ ಸ್ಥಂಬಿಸಿದರೂ ಕೃಷ್ಣ-ಕೃಷ್ಣ ಎಂಬ ಉದ್ಗಾರದೊಂದಿಗೆ ಪ್ರಮುಖ ಮಠಾಧೀಶರು ಸಮಾಲೋಚನೆಗೆ ಕುಳಿತರು. ಮಾರ್ಚ್ ತಿಂಗಳಲ್ಲಿ ಅಷ್ಟ ಮಂಗಲ ಕಾರ್ಯವನ್ನು ನಡೆಸಿದರು. ಅಷ್ಟಮಂಗಲ ಎಂಬುದೊಂದು ದೇವಾಲಯಗಳ ಆಡಳಿತ ಮಂಡಳಿಗಳ ಆತ್ಮಾವಲೋಕನ. ಅಷ್ಟಮಂಗಲದಲ್ಲಿ ಎಲ್ಲವೂ ಶಕುನಗಳೆ. ಬಾಗಿಲ ತೋರಣ, ದೇವರ ಮುಂದಿರುವ ದೀಪ, ದೇವರಿಗೆ ಮುಡಿಸಿರುವ ಹೂವು, ತುಳಸಿ, ಗಡಿಯಾರದ ಮುಳ್ಳು ಮತ್ತು ಅಷ್ಟಮಂಗಲದಲ್ಲಿ ಪಾಲ್ಗೊಂಡಿರುವವರ ಚಲನವಲನ, ಅಲ್ಲಿರುವವರ ಅಂಗಚೇಷ್ಟೆ, ಪ್ರಶ್ನೆ ಕೇಳಿದ ಸಮಯ, ಲಗ್ನ -ತಿಥಿ -ಕರಣ, ಮುಖ್ಯವಾಗಿ ಅವರು ಯಾವ ದಿಕ್ಕಿನಲ್ಲಿ ಮುಖ ಮಾಡಿ ಪ್ರಶ್ನೆ ಕೇಳುತ್ತಿದ್ದಾರೆಇನ್ನೂ ಮುಂತಾದ ಹಲವು ಅಂಶಗಳೆಲ್ಲ ಈ ಧಾರ್ಮಿಕ ವಿಧಿಯಲ್ಲಿ ಪರಿಗಣನೆಗೆ ಬರುತ್ತವೆ.
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು- ಮೇ ತಿಂಗಳ ಹದಿಮೂರರಂದು ಒಂದು ಕಂಟಕವಿದೆ ಎಂದು. ಆದರೂ ಅದಕ್ಕೊಂದು ಪರಿಹಾರವನ್ನು ಕಂಡುಕೊಂಡಿದ್ದರು. ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತದೆ. ಬಿಜೆಪಿ ಆಡಳಿತದ ಸರ್ಕಾರ ಹೋದರೆ ಕಾಂಗ್ರೆಸ್ ಸರ್ಕಾರ ಬರುತ್ತದೆ. ಅದಕ್ಕೆ ಬಹುಮತ ಬಂದುಬಿಟ್ಟರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಖಚಿತ. ಆಗ ಈ ಸಂಭವನೀಯತೆಗೂ ಸಿದ್ದರಾಮಯ್ಯನವರು ಫೆಬ್ರವರಿಯ ಮಲ್ಪೆ ಪಾದಯಾತ್ರೆಯ ವೇಳೆಯಲ್ಲಿ ಉಡುಪಿ ಕೃಷ್ಣ ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯುವುದಾಗಿ ಘೋಷಿಸಿದ್ದಕ್ಕೂ ತಾಳೆಯಾಗುತ್ತಿತ್ತು.  ಇದರ ಬೆನ್ನಲ್ಲೆ ಫೆಬ್ರವರಿ 26ರಂದು ಕೇರಳದ ಪುದುವಾಳ್ ಕುಟುಂಬದ ನೇತೃತ್ವದಲ್ಲಿ ಮಹಾಕೋಬಾರ, ಶ್ರೀ ಮದನಂತೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ- ದೇವಾಲಯಕ್ಕೆ ಭಕ್ತರು ತರುವ ಕೃಷ್ಣನ ವಿಗ್ರಹಗಳ ಪೈಕಿ ದೇವಾಲಯದಲ್ಲಿ ಎಲ್ಲವನ್ನೂ ಪೂಜಿಸಲು ಸಾಧ್ಯವಿಲ್ಲವಾದ್ದರಿಂದ ಅವುಗಳಿಂದ ತೊಂದರೆಯಾಗಬಹುದು ಎಂದು ಯೋಚಿಸಲಾಯಿತು. ಆದ್ದರಿಂದ ಆ ಮೂರ್ತಿಗಳನ್ನು ಭಕ್ತರೆ ಅವರ ಮನೆಗಳಲ್ಲಿ ಪೂಜಿಸಿಕೊಳ್ಳುವಂತೆ ನಿರ್ದೇಶನ ನೀಡುವುದು ಮತ್ತು ದೇವಾಲಯಕ್ಕೆ ಹೊಂದಿಕೊಂಡಿರುವ ಮಠದ ಶೌಚಾಲಯವನ್ನು ಬೇರೆಕಡೆಗೆ ಸ್ಥಳಾಂತರಿಸುವುದು ಮತ್ತು ದೇವಾಲಯದಲ್ಲಿರುವ ಮುಖ್ಯಪ್ರಾಣ ದೇವರು, ಕಡಗೋಲು ಕೃಷ್ಣ ಹೊರತುಪಡಿಸಿ ಮತ್ತೊಂದು ವಿಗ್ರಹ ಎಣ್ಣೆ ಕೃಷ್ಣನಿಗೆ ಸರಿಯಾಗಿ ಪೂಜೆ ನಡೆಯುತ್ತಿಲ್ಲ ಎಂಬುದು ವ್ಯಕ್ತವಾಯಿತು. ಈ ಎಲ್ಲಾ ಅಡೆ-ತಡೆಗಳಿಗೆ ಅಷ್ಟಮಂಗಲದ ಜವಾಬ್ದಾರಿ ಹೊತ್ತಿದ್ದ ಪುದುವಾಳ್ ಕುಟುಂಬದವರ ಪರಿಹಾರಗಳನ್ನು ಸೂಚಿಸಿದ್ದು ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸಲು ಅಷ್ಟಮಠಾಧೀಶರು ಟೊಂಕ ಕಟ್ಟಿದ್ದಾರೆ.
ಆದರೆ ಮೇ 13ರಿಂದ ಕಂಟಕ ಇದೆ ಎಂಬ ಅನುಮಾನ ಅಷ್ಟಮಂಗಲದಲ್ಲಿ ವ್ಯಕ್ತವಾಗಿದ್ದು ಅದು ರಾಜಕೀಯದ ಕಂಟಕ. ಸದ್ಯಕ್ಕೆ ಮೇ 13ಕ್ಕೆ ಯಾವುದೇ ಕಂಟಕ ಎದುರಾಗಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರವು ರಾಜ್ಯ ಹೈಕೋರ್ಟ್ ತೀರ್ಪಿನಂತೆ ಮತ್ತು ರಾಜ್ಯ ಧಾರ್ಮಿಕ ಪರಿಷತ್‌ನ ಅನುಮೋದನೆಯಂತೆ, ಉಡುಪಿ ಕೃಷ್ಣ ದೇವಾಲಯವನ್ನು ಸೇರಿದಂತೆ ರಾಜ್ಯದ ಪ್ರತಿಷ್ಠಿತ 110(ನೂರಾಹತ್ತು) ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಹೊರತುಪಡಿಸಿದೆ. ಇದೇ ಅಂತಿಮವೂ ಅಲ್ಲ. ಈ ಹಿಂದೆ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪು ಉಡುಪಿ ಕೃಷ್ಣ ದೇವಾಲಯವು ಸಾರ್ವಜನಿಕ ದೇವಾಲಯವಾಗಿದ್ದರಿಂದ ಸಾರ್ವಜನಿಕರ ಸ್ವತ್ತು ಎಂದು ತೀರ್ಮಾನಿಸಿತ್ತು. ಇದೇ ವಿಚಾರದಲ್ಲಿ 1961ರಲ್ಲಿ ಸುಪ್ರೀಂ ಕೋರ್ಟ್ ಸಹ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಕಾನೂನು ರೀತಿಯಲ್ಲಿ ದೇವಾಲಯದ ನಿತ್ಯ ಪೂಜೆ, ರಥೋತ್ಸವಾದಿಗಳ ಪರ್ಯಾಯಗಳು ಶತ-ಶತಮಾನಗಳ ಕಾಲದಿಂದಲೂ ನಡೆದುಕೊಂಡು ಬರುತ್ತಿವೆ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಉಡುಪಿ ಕೃಷ್ಣ ದೇವಾಲಯಕ್ಕೆ ಸೀಮಿತವಾಗದೆ ಸರ್ಕಾರದಿಂದ ಕೈಬಿಟ್ಟ 110 ದೇವಾಲಯಗಳು ಸಾರ್ವಜನಿಕರ ದೇವಾಲಯಗಳೆಂದು ಸಾಬೀತುಪಡಿಸಲು ಹೋದರೆ ತಾಂತ್ರಿಕವಾಗಿ ಸರಿ ಎನ್ನಿಸಿಕೊಳ್ಳುತ್ತಾರೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ, ಉಡುಪಿಯ ಕೃಷ್ಣ ದೇವಾಲಯಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ತೀರ್ಪಿನಂತೆ ಸುಪ್ರೀಂ ಕೋರ್ಟ್‌ಗೆ ಹೋಗಿ ಕೃಷ್ಣ ದೇವಾಲಯವು ಸಾರ್ವಜನಿಕರ ದೇವಾಲಯವಾದ್ದರಿಂದ ಮುಜರಾಯಿ ಇಲಾಖೆಯ ವಶಕ್ಕೆ ಪಡೆಯಬೇಕೆಂದು ಹಠ ಹಿಡಿದಿದ್ದೇ ಆದರೆ ನ್ಯಾಯಾಲಯದಲ್ಲಿ ಗೆಲ್ಲಬಹುದು.
ಇಷ್ಟೆಲ್ಲ ಸಾಧ್ಯವಾದರೂ ಈ ನಡೆಯಿಂದ ರಾಜ್ಯದಲ್ಲಿ ಮಠಾಧೀಶರ ಸಮೂಹದ ಕೆಂಗಣ್ಣಿಗೆ ಗುರಿಯಾಗುವುದರಲ್ಲಿ ಅನುಮಾನವಿಲ್ಲ. ಕರಾವಳಿಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಹೊಡೆದು ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆದಿದೆ. ಈ ಸಂದರ್ಭದಲ್ಲಿ ಕರಾವಳಿಯ ಮತದಾರರು ಮತ್ತು ಶಾಸಕರು ವಿರೋಧ ವ್ಯಕ್ತಪಡಿಸಬಹುದು. ಇದೆಲ್ಲವನ್ನೂ ಮೀರಿ ಕಾನೂನು ಸಮರ ನಡೆಸಿ, ಗೆಲ್ಲಲೇಬೇಕೆಂದು ಸಿದ್ದರಾಮಯ್ಯನವರು ಹಠಮಾಡಿದ್ದೇ ಆದರೆ, ಕೇಂದ್ರದ ನಾಯಕರಾರೂ ಕರ್ನಾಟಕದ ಮಠಾಧೀಶರ ವಿರೋಧ ಕಟ್ಟಿಕೊಳ್ಳುವುದಿಲ್ಲ. ಹಲವಾರು ದಶಕಗಳಿಂದ ನಮ್ಮ ದೇಶದ ರಾಷ್ಟ್ರಪತಿಗಳು ಸೇರಿದಂತೆ ಕಾಂಗ್ರೆಸ್‌ನ ನೆಹರು ಕುಟುಂಬದ ಎಲ್ಲರೂ ಉಡುಪಿ ಕೃಷ್ಣನ ಮೊರೆ ಹೋಗಿರುವವರೆ. ಇನ್ನು ಬಿಜೆಪಿ ಪಕ್ಷದ ಹಿರಿಯ ಧುರೀಣ ಅಟಲ್ ಬಿಹಾರಿ ವಾಜಿಪೇಯಿ, ಎಲ್.ಕೆ. ಆಡ್ವಾಣಿಯಿಂದ ಸಾಮಾನ್ಯ ಕಾರ್ಯಕರ್ತರವರಿಗೆ ಮಠಾಧೀಶರ ಬಗ್ಗೆ ಅಪಾರ ಗೌರವವಿದೆ.
ಈಗಾಗಲೇ ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಧಾರ್ಮಿಕ ಪರಿಷತ್ ಜಾರಿಯಲ್ಲಿದೆ. ರಾಜ್ಯ ಧಾರ್ಮಿಕ ಪರಿಷತ್‌ನ ಬಹುತೇಕ ಸದಸ್ಯರೆಲ್ಲರೂ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದವರು. ಇವರ್ಯಾರೂ ಉಡುಪಿ ಕೃಷ್ಣ ದೇವಾಲಯವನ್ನು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡಿಸುವುದಕ್ಕೆ ಒಪ್ಪುವುದಿಲ್ಲ. ಈ ಧಾರ್ಮಿಕ ಪರಿಷತ್ ಅನ್ನು ವಿಸರ್ಜಿಸಿ ಹೊಸ ಧಾರ್ಮಿಕ ಪರಿಷತ್ ರಚಿಸಿ ಮುಜರಾಯಿ ಖಾತೆಯನ್ನು ಮುಖ್ಯಮಂತ್ರಿಗಳೆ ಉಳಿಸಿಕೊಂಡು ಕಾನೂನು ಸಮರ ನಡೆಸಿದರೆ, ಆಗಲೂ ಮಠಾಧೀಶರು ಎಐಸಿಸಿ ಅಧ್ಯಕ್ಷರ ಮನೆ ಬಾಗಿಲು ತಟ್ಟಬಹುದು. ಇವರಿಗೆ ಬೆಂಬಲ ನೀಡಲು ಬಿಜೆಪಿಯ ಧುರೀಣರಿಂದಲೂ ಒತ್ತಡ ಹೇರಿ ಸೋನಿಯಾ ಗಾಂಧಿಯವರಿಂದಲೇ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಬಹುದು. ಕಾಂಗ್ರೆಸ್‌ನ ಮುಖ್ಯಮಂತ್ರಿಯಾಗಿ ಹೈಕಮಾಂಡ್‌ನ ವಿರೋಧ ಕಟ್ಟಿಕೊಳ್ಳುವುದು ಸಾಧ್ಯವಿಲ್ಲ.
ಆದರೆ ಸಿದ್ದರಾಮಯ್ಯನವರು ಉಡುಪಿ ಶ್ರೀಕೃಷ್ಣ ದೇವಾಲಯದ ವಿಚಾರವಾಗಿ ತಾವು ಘೋಷಿಸಿದ ಮಾತು ಹಿಂಪಡೆಯುವಂತೆಯೂ ಇಲ್ಲ. ಮುಖ್ಯಮಂತ್ರಿಯಾಗುವ ಮುಂಚೆಯೇ ನೀಡಿದ ವಿವಾದದ ಹೇಳಿಕೆಯ ಭಾರ ಕಳಚಿಕೊಳ್ಳುವುದಕ್ಕೆ ಈಗಿನ ಮುಜರಾಯಿ ಸಚಿವರಾದ ಪ್ರಕಾಶ್ ಹುಕ್ಕೇರಿಯವರ ಮೇಲೆ ಜವಾಬ್ದಾರಿಯನ್ನು ಹೊರಿಸಿ ನುಣುಚಿಕೊಳ್ಳಬೇಕಾಗುತ್ತದೆ. ಕಳೆದ ಫೆಬ್ರವರಿಯಲ್ಲಿ ಮಲ್ಪೆಯಲ್ಲಿ ನಡೆದ ಕಾಂಗ್ರೆಸ್‌ನ ಯುವಜನ ವೇದಿಕೆಯ ಪಾದಯಾತ್ರೆಯ ಸಮಯದಲ್ಲಿ ಹೇಳಿದ ಹೇಳಿಕೆಯನ್ನು ಹಿಂಪಡೆಯಬಹುದು. ಕನಕನ ಗೋಪುರದ ವಿಚಾರದಲ್ಲಾದ ಕೋಪಕ್ಕೆ ಉಡುಪಿ ಕೃಷ್ಣನ ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆಯುತ್ತಾರೋ ಅಥವಾ ಹೈಕಮಾಂಡ್ ಒತ್ತಡಕ್ಕೆ ಮಣಿಯಬೇಕಾಗುವುದೋ ಮುಂಬರುವ ದಿನಗಳಲ್ಲಿ ಅನಾವರಣವಾಗಬೇಕಿದೆಯಷ್ಟೆ.

-ಬಿ. ಎಲ್. ರಾಜಗೋಪಾಲಾಚಾರ್, ಸಂಪಾದಕರು
'ಮುಜರಾಯಿ ಪತ್ರಿಕೆ' ಮಾಸಿಕ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement