ಅಂಕಣಗಳು

ಪ್ರೀತಿಯನ್ನು ಕಾಪಾಡಿದ್ದು ಯಾರು?

ಗೀಗ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಧಗೆಯೇನೂ ಕಡಿಮೆ ಆಗಿಲ್ಲ. ಮೇ ಮುಗಿಯುತ್ತಲೇ..

ಆಗೀಗ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಧಗೆಯೇನೂ ಕಡಿಮೆ ಆಗಿಲ್ಲ. ಮೇ ಮುಗಿಯುತ್ತಲೇ ಮುಂಗಾರು ಕಚ್ಚಿಕೊಳ್ಳಬಹುದು ಎಂಬ ಉಮೇದು. ಆದಷ್ಟು ಬೇಗ ಜೀವ ತಂಪಾಗಲಿ ಎಂಬ ತಹತಹ. ಇಂಥ ಸನ್ನಿವೇಶದಲ್ಲಿ ನಿಮ್ಮ ಭಾವ ತಂಪು ಮಾಡಬಹುದಾದ ಇಂಟರ್ನೆಟ್ ಕತೆಗಳನ್ನು ಹೆಕ್ಕಿ ಇಟ್ಟಿದ್ದೇನೆ...
ಸಂತೋಷ, ಸಂಕಟ, ಆಡಂಬರ, ಕ್ರೋಧ, ಪ್ರೀತಿ... ಇತ್ಯಾದಿಗಳೆಲ್ಲ ಪ್ರತಿ ಜೀವಿಗಳಲ್ಲೂ ಇರುವ ಭಾವನೆಗಳು.
ಒಂದಾನೊಂದು ಕಾಲದಲ್ಲಿ ಏನಾಯಿತೆಂದರೆ, ರಜೆಯ ಮಜ ಅನುಭವಿಸುವ ಉದ್ದೇಶದಿಂದ ಈ ಎಲ್ಲ ಭಾವನೆಗಳೂ ಸಮುದ್ರ ತೀರಕ್ಕೆ ತೆರಳಿದ್ದವು. ಕಡಲ ಕಿನಾರೆಯಲ್ಲಿ ಭರ್ತಿ ಒಂದು ವಾರ ಎಂಜಾಯ್ ಮಾಡಬೇಕೆಂಬುದು ಅವುಗಳ ನಿರ್ಧಾರವಾಗಿತ್ತು.
ಆದರೆ, ಇವೆಲ್ಲಾ ಸಮುದ್ರ ತಟಕ್ಕೆ ಬಂದು ಮೋಜು ಮಸ್ತಿಯಲ್ಲಿ ಎರಡು ದಿನ ಕಳೆಯುವಷ್ಟರಲ್ಲಿ ಬಿರುಗಾಳಿ ಶುರುವಾಯಿತು. ಚಂಡಮಾರುತ ಏಳುವ ಸೂಚನೆಗಳೂ ಕಂಡುಬಂದವು. ನಂತರದ ಕೆಲವೇ ಕ್ಷಣಗಳಲ್ಲಿ ಈ ಸಂಬಂಧವಾಗಿ ಅಧಿಕೃತ ಘೋಷಣೆಯೂ ಹೊರಬಿತ್ತು. ಚಂಡಮಾರುತ ಏಳುವ ಸಾಧ್ಯತೆ ಇರುವುದರಿಂದ ಕಡಲ ತೀರದಲ್ಲಿರುವ ಎಲ್ಲರೂ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಹೋಗಬೇಕೆಂದು ತಿಳಿಸಲಾಯಿತು.
ಯಾವ ಸಂದರ್ಭದಲ್ಲಿ ಬೇಕಾದರೂ ಚಂಡಮಾರುತ ಏಳಬಹುದು ಎಂದು ಘೋಷಿಸಿದ್ದರಿಂದ, ಎಲ್ಲರೂ ತರಾತುರಿಯಲ್ಲಿ ಹೊರಟು ನಿಂತರು. ತೀರದಲ್ಲಿ ನಿಂತಿದ್ದ ದೋಣಿಗಳು ಕೆಲವೇ ನಿಮಿಷಗಳಲ್ಲಿ ಖಾಲಿಯಾದವು.
ಸ್ವಲ್ಪ ದೂರ ಕ್ರಮಿಸಿದ ನಂತರ ಬಿರುಗಾಳಿಯೆದ್ದರೆ, ಆ ಸಂದರ್ಭದಲ್ಲಿ ದೋಣಿಯೊಳಗೆ ಹೆಚ್ಚು ಜನರಿದ್ದರೆ, ದೋಣಿ ಮುಳುಗಿ ಬಿಡಬಹುದು ಎಂಬ ಭೀತಿಯಿಂದ ಒಂದೊಂದು ದೋಣಿಗೆ ಇಬ್ಬರನ್ನು ಅಥವಾ ಮೂವರನ್ನು ಮಾತ್ರ ಹತ್ತಿಸಿಕೊಳ್ಳಲಾಯಿತು. ಕಡಲ ತೀರದಲ್ಲಿದ್ದ ಎಲ್ಲರನ್ನೂ ರಕ್ಷಿಸಬೇಕೆಂಬ ಸದಾಶಯದಿಂದ ಕೆಟ್ಟು ಹೋಗಿದ್ದ ದೋಣಿಗಳನ್ನು ತರಾತುರಿಯಿಂದ ರಿಪೇರಿ ಮಾಡಿ ಅವುಗಳನ್ನೂ ಓಡಿಸಲಾಯಿತು.
ಯಾತ್ರೆಗೆಂದು ಬಂದಿದ್ದ ಎಲ್ಲ 'ಭಾವನೆಗಳೂ' ತುಂಬ ಅವಸರದಿಂದಲೇ ದೋಣಿ ಹತ್ತಿದವು. ಇದೇ ವೇಳೆಗೆ, ಆಗಸದಲ್ಲಿ ಕಪ್ಪು ಮೋಡಗಳು ದಟ್ಟೈಸತೊಡಗಿದವು. ಈಗಲೋ ಆಗಲೋ ದಿಢೀರನೆ ಮಳೆ ಶುರುವಾಗಬಹುದು ಎಂಬಂಥ ವಾತಾವರಣ ಸೃಷ್ಟಿಯಾಯಿತು. ಅದುವರೆಗೂ ಒಂದೆರಡು ನಿಮಿಷದ ನಂತರ ಹೊರಡೋಣ ಎಂದು ಸಮಯ ನೂಕುತ್ತಿದ್ದ 'ಪ್ರೀತಿ'ಯೂ ಕ್ಷಣಕ್ಷಣಕ್ಕೂ ವಾತಾವರಣ ಬದಲಾಗುತ್ತಿರುವುದನ್ನು ಗಮನಿಸಿಅಲ್ಲಿಂದ ಎದ್ದು ಹೋಗುವ ನಿರ್ಧಾರಕ್ಕೆ ಬಂತು. ಆದರೆ, ಸಮುದ್ರ ಪ್ರಯಾಣಕ್ಕೆ ಅಗತ್ಯವಿದ್ದ ದೋಣಿಗಳೇ ಇರಲಿಲ್ಲ.
'ಅಯ್ಯಯ್ಯೋ, ಎಡವಟ್ಟಾಗಿ ಹೋಯ್ತಲ್ಲ, ಹೇಗಾದ್ರೂ ಮಾಡಿ ಬೇಗ ಸುರಕ್ಷಿತ ಜಾಗಕ್ಕೆ ಹೋಗಲೇಬೇಕು. ಹೇಗೆ ಹೋಗುವುದು ಎಂದು 'ಪ್ರೀತಿ' ಚಡಪಡಿಸುತ್ತಿರುವಾಗಲೇ, ಹವಾನಿಯಂತ್ರಿತ ದೋಣಿಯೊಂದರಲ್ಲಿ 'ಸಮೃದ್ಧಿ' ಹೋಗುತ್ತಿರುವುದು ಕಾಣಿಸಿತು. ತಕ್ಷಣವೇ 'ಪ್ರೀತಿ' ಜೋರಾಗಿ ಕೂಗಿ ಹೇಳಿತು: 'ಗೆಳೆಯಾ, ನಾನೂ ಆ ಕಡೆಗೆ ಹೋಗಲೇಬೇಕಿದೆ. ಆದರೆ ಪ್ರತ್ಯೇಕ ದೋಣಿಯಿಲ್ಲ, ದಯವಿಟ್ಟು ನನಗೆ ಡ್ರಾಪ್ ಕೊಡ್ತೀಯಾ?'
'ಸಾರಿ ಫ್ರೆಂಡ್. ನಾನಿರುವ ದೋಣಿಯ ತುಂಬಾ ಭಾರೀ ಬೆಲೆ ಬಾಳುವ ಮುತ್ತು, ರತ್ನ, ಪಚ್ಚೆ, ಹವಳದ ಆಭರಣಗಳು ತುಂಬಿಹೋಗಿವೆ. ಹಾಗಾಗಿ ನಿನಗೆ ಇಲ್ಲಿ ಜಾಗವಿಲ್ಲ - ಎಂದು ಹೇಳಿ ಹೋಗಿಯೋ ಬಿಟ್ಟಿತು ಸಮೃದ್ಧಿ.
ನಾಲ್ಕು ನಿಮಿಷ ಕಳೆಯುತ್ತಿದ್ದಂತೆ, ಅದೇ ಮಾರ್ಗದಲ್ಲಿ ಇನ್ನೊಂದು ಸುಂದರ ದೋಣಿ ಬಂತು. ಅದರಲ್ಲಿ 'ಆಡಂಬರ'ವು ಆರಾಮಾಸನದಲ್ಲಿ ಕೂತು ಪ್ರಯಾಣಿಸುತ್ತಿತ್ತು. ಅದನ್ನು ಕಂಡ 'ಪ್ರೀತಿ'ಯು-'ಓ ಗೆಳೆಯಾ, ನಾನು ತೊಂದರೇಲಿದೀನಿ. ದಯವಿಟ್ಟು ನನ್ನನ್ನು ಜೊತೇಲಿ ಕರ್ಕೋಂಡ್ ಹೋಗ್ತಿಯ, ಪ್ಲೀಸ್... ' ಎಂದು ಪ್ರಾರ್ಥಿಸಿತು.
'ಈ ದೋಣಿಯನ್ನು ವಿಶೇಷವಾಗಿ ಅಲಂಕರಿಸಿಕೊಂಡು ನಾನು ಪ್ರಯಾಣ ಮಾಡ್ತಾ ಇದೀನಿ. ಇದರೊಳಕ್ಕೆ ನಿನ್ನನ್ನು ಹತ್ತಿಸಿಕೊಂಡ್ರೆ ಇಡೀ ದೋಣಿಯೇ ಕೊಳಕಾಗಿ ಕಾಣಬಹುದು. ಸಾರಿ...' ಎನ್ನುತ್ತಾ 'ಆಡಂಬರ'ವು ಸರಸರನೆ ಹೊರಟು ಹೋಯಿತು.
ಸಮಯ ಸರಿದಂತೆಲ್ಲ ವಾತಾವರಣ ಹದಗೆಡುತ್ತಾ ಹೋಯಿತು. ಹಾಗಾಗಿ ನಿರ್ಲಕ್ಷ್ಯ ಮಾಡುವಂತೆಯೇ ಇರಲಿಲ್ಲ. ಇಲ್ಲಿಂದ ಹೇಗಾದರೂ ಪಾರಾದರೆ ಸಾಕು ಎಂದು 'ಪ್ರೀತಿ' ಯೋಚಿಸುತ್ತಲೇ ಇತ್ತು. ಅದೇ ಸಮಯಕ್ಕೆ ಹ್ಯಾಪು ಮೋರೆ ಹಾಕಿಕೊಂಡ 'ಸಂಕಟ'ವು ದೋಣಿಯೊಂದರಲ್ಲಿ ಹೋಗುತ್ತಿರುವುದು ಕಾಣಿಸಿತು. 'ಗೆಳೆಯಾ, ಪ್ಲೀಸ್ ದೋಣಿ ನಿಲ್ಲಿಸು. ಡ್ರಾಪ್ ಕೊಡು. ಎಕ್ಸ್ ಟ್ರಾ ದೋಣಿ ಇಲ್ಲದ ಕಾರಣ ನಾನು ಕಷ್ಟಕ್ಕೆ ಸಿಕ್ಕಿಕೊಂಡಿದ್ದೇನೆ' ಎಂದು ಮತ್ತೆ ಪ್ರಾರ್ಥಿಸಿತು 'ಪ್ರೀತಿ'. 'ನೋ ನೋ, ನಾನು ಬಹಳ ದುಃಖದಲ್ಲಿದ್ದೀನಿ. ಹಾಗಾಗಿ ಯಾರನ್ನೂ ಜೊತೆಗೆ ಒಯ್ಯಲಾರೆ ಎಂದು ಹೇಳಿ 'ಸಂಕಟ'ವೂ ಹೊರಟು ಹೋಯಿತು.
'ಛೆ, ನಿಧಾನವಾಗಿ ಹೋದರಾಯ್ತು ಎಂದುಕೊಂಡು ತಪ್ಪು ಮಾಡಿದೆ. ನಾನೂ ಮೊದಲೇ ಹೋಗಿ ಬಿಡಬೇಕಿತ್ತು. ಈಗ ಟೈಂ ಆಗಿದೆ. ಡ್ರಾಪ್ ಕೊಡುವವರು ಯಾರೂ ಕಾಣಿಸ್ತಾ ಇಲ್ಲ. ಏನು ಮಾಡಲಿ ಎಂದು 'ಪ್ರೀತಿ' ಕಂಗಾಲಾಗಿ ನಿಂತಿದ್ದಾಗಲೇ, 'ಸಂತೋಷ' ವಿದ್ದ ದೋಣಿ ಅದೇ ಮಾರ್ಗವಾಗಿ ಬಂತು. ತಕ್ಷಣವೇ ಪ್ರೀತಿಯು-'ಗೆಳೆಯಾ, ನನಗೆ ಡ್ರಾಪ್ ಬೇಕು. ಪ್ಲೀಸ್, ಪ್ಲೀಸ್ ಹೆಲ್ಪ್ ಮಾಡು' ಎಂದು ಜೋರಾಗಿ ಕೂಗಿ ಹೇಳಿತು. ಉಹುಂ, ತನ್ನದೇ ಲಹರಿಯಲ್ಲಿ ಮೈಮರೆತಿದ್ದ 'ಸಂತೋಷ'ಕ್ಕೆ ಪ್ರೀತಿಯ ಮಾತುಗಳು ಕೇಳಿಸಲೇ ಇಲ್ಲ. ಅದು ಕತ್ತೆತ್ತಿಯೂ ನೋಡದೆ ಪ್ರಯಾಣ ಮುಂದುವರಿಸಿತು.
ಮುಂದೇನು ಮಾಡಬೇಕೆಂದು ತೋಚದೆ 'ಪ್ರೀತಿ' ಕೈ ಕೈ ಹಿಸುಕುತ್ತಾ ನಿಂತಿದ್ದಾಗಲೇ ಅಲ್ಲೊಂದು ದೋಣಿ ಕಾಣಿಸಿತು. 'ಗೆಳೆಯಾ, ದಯವಿಟ್ಟು ಬಾ. ನಾನು ನಿನ್ನನ್ನು ಕರೆದೊಯ್ಯುವೆ' ಎಂದು ಯಾರೋ ಅಕ್ಕರೆಯಿಂದ ಕರೆದಂತಾಯಿತು. ಇಂಥ ಮಾತಿಗಾಗಿಯೇ ಕಾದು ನಿಂತಿದ್ದ 'ಪ್ರೀತಿ' ಕರೆದವರು ಯಾರು ಎಂಬುದನ್ನು ಗಮನಿಸದೆ ಒಂದೇ ನೆಗೆತಕ್ಕೆ ದೋಣಿಯನ್ನು ಸೇರಿಕೊಂಡಿತು.
ಎರಡು ನಿಮಿಷಗಳ ನಂತರ, ಸುತ್ತಲೂ ಯಾರ್ಯಾರು ಇದ್ದಾರೆ ಎಂದು ನೋಡುವಾಗ, ಎದುರಿಗೆ 'ಜ್ಞಾನ' ನಿಂತಿರುವುದು ಕಾಣಿಸಿತು. 'ಗೆಳೆಯಾ, ನಮಸ್ಕಾರ. ದಿಕ್ಕು ತೋಚದೆ ನಿಂತಿದ್ದ ನಿನ್ನನ್ನು ಕಕ್ಕುಲತೆಯಿಂದ ಕರೆದವರು ಯಾರು?' ಎಂದು ಪ್ರಶ್ನಿಸಿತು ಪ್ರೀತಿ.
'ಓಹ್, ಗೊತ್ತಾಗ್ಲಿಲ್ವಾ? ಅದು 'ಕಾಲ' ಎಂದಿತು ಜ್ಞಾನ.
'ಹೌದಾ, ಥ್ಯಾಂಕ್ಸ್. ಆದ್ರೆ ನನ್ನನ್ನು ಕಾಪಾಡುವಂಥ ಅಗತ್ಯ ಕಾಲನಿಗಾದರೂ ಏನಿತ್ತು?' ಅನುಮಾನದಿಂದಲೇ ಪ್ರಶ್ನಿಸಿತು ಪ್ರೀತಿ.
'ನೀನು ಅಂದ್ರೆ ಏನು, ನಿನ್ನ ಮಹತ್ವವೇನು ಎಂಬುದು 'ಕಾಲ' ನಿಗೆ ಚೆನ್ನಾಗಿ ಗೊತ್ತು. ಈ ಜಗತ್ತಿನಲ್ಲಿ ಶಾಂತಿ ನೆಲಸಬೇಕೆಂದರೆ ಅದು 'ಪ್ರೀತಿ'ಯ ಸಹಕಾರದಿಂದ ಮಾತ್ರ ಸಾಧ್ಯ ಎಂಬುದು 'ಕಾಲ'ನ ಗಟ್ಟಿ ನಂಬಿಕೆ. ಈ ಕಾರಣದಿಂದಲೇ ಆತ ನಿನ್ನನ್ನು ಜೋಪಾನವಾಗಿ ಕರೆತಂದ' ಎಂದಿತು.
---
'ಕಥೆ' ಇಲ್ಲಿಗೆ ಮುಗಿಯುತ್ತದೆ. ಆದರೆ, ಈ ಕತೆಯ ನೆಪದಲ್ಲಿ ನಾವೆಲ್ಲಾ ಕಲಿಯಲೇಬೇಕಾದ ಪಾಠವೊಂದಿದೆ. ಏನೆಂದರೆ, ಆಡಂಬರವೆಂಬುದು ಬದುಕಲ್ಲಿ ಜೊತೆಯಾದಾಗ ನಾವು 'ಪ್ರೀತಿ'ಯನ್ನು, ಪರಸ್ಪರ ಪ್ರೀತಿಸುವುದನ್ನು ಮರೆಯುತ್ತೇವೆ. ಸಮೃದ್ಧಿಯೆಂಬುದು ಕೈ ಹಿಡಿದಾಗ ನಮ್ಮಲ್ಲಿ ಯಾರೊಬ್ಬರಿಗೂ 'ಪ್ರೀತಿ'ಯ ನೆನಪೇ ಬರುವುದಿಲ್ಲ. ಸಂತೋಷ ಮತ್ತು ಸಂಕಟಗಳು ಜೊತೆಯಾದ ಸಂದರ್ಭದಲ್ಲಿಯೂ ಅಷ್ಟೆ. ಜನ ತಮಾಷೆಗೂ 'ಪ್ರೀತಿ'ಯ ಮಹತ್ವದ ಬಗ್ಗೆ ಯೋಚಿಸುವುದಿಲ್ಲ. ಆದರೆ, ಕಡೆಗೂ ಅದೊಂದು ದಿನ ಬಂದೇ ಬರುತ್ತದೆ. 'ಕಾಲಚಕ್ರ'ವೆಂಬುದು ಒಂದು ರೌಂಡ್ ಗಿರ್ರನೆ ತಿರುಗಿ 'ಪ್ರೀತಿ'ಯ ಮಹತ್ವವೇನು ಎಂಬುದನ್ನು ಎಲ್ಲರಿಗೂ ತಿಳಿಸಿ ಕೊಡುತ್ತದೆ!
'ಕಾಲಚಕ್ರ'ದ ಎಚ್ಚರಿಕೆಯ ಹೊಡೆತ ತಿಂದು ಪ್ರೀತಿಯ ಮಹತ್ವ ತಿಳಿಯುವ ದುರ್ದೆಸೆ ನಮಗೆ ಬಾರದಿರಲಿ.
ಟಿಕ್ ಟಿಕ್ ಶಾಂತಿಪಾಠ
ರೈತನೊಬ್ಬ ತನ್ನ ವಾಚನ್ನು ಕಣಜದಲ್ಲಿ ಕಳೆದುಕೊಂಡುಬಿಟ್ಟ. ಅದು ಅಷ್ಟೇನೂ ಬೆಳೆಬಾಳುವ ವಾಚ್ ಅಲ್ಲದಿದ್ದರೂ, ಅದರೊಂದಿಗೆ ಆತನಿಗೆ ಭಾವನಾತ್ಮಕ ನಂಟಿತ್ತು.
ಕಣಜದಲ್ಲಿ ಆತ ಎಷ್ಟೋ ಹೊತ್ತು ಹುಡುಕಾಡಿದ, ಎಷ್ಟು ಹುಡುಕಿದರೂ ಅದು ಸಿಗಲೊಲ್ಲದು. ಕಡೆಗೆ ಹತ್ತಿರದಲ್ಲೇ ಆಟವಾಡುತ್ತಿದ್ದ ಹುಡುಗರನ್ನು ಸಹಾಯಕ್ಕಾಗಿ ಕೂಗಿದ. ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುವುದಾಗಿಯೂ ಹೇಳಿದ. ಮಕ್ಕಳು ಕಣಜದ ತುಂಬೆಲ್ಲ ಓಡಾಡಿದವು. ಒಣಹುಲ್ಲನ್ನೆಲ್ಲ ಸರಿಸಿ ನೋಡಿದವು.
'ಇನ್ನು ಅದು ಸಿಕ್ಕಂತೆಯೇ!' ಅಂದುಕೊಂಡ ರೈತ, ಅವರನ್ನೆಲ್ಲ ವಾಪಸ್ ಕಳಿಸಿ ಮನೆಯತ್ತ ಹೆಜ್ಜೆ ಹಾಕಿದ. ಅಷ್ಟರಲ್ಲಿ ಒಬ್ಬ ಪುಟ್ಟ ಹುಡುಗ ಅವನತ್ತ ಓಡಿ ಬಂದು ಕೈ ಜಗ್ಗಿ ಕೇಳಿದ: 'ನನಗೆ ಇನ್ನೊಂದು ಚಾನ್ಸ್ ಕೊಡ್ತೀರಾ? ಖಂಡಿತ ಹುಡುಕಿ ಕೊಡ್ತೀನಿ...'
'ಆಗಲಿ' ಎಂದು ಒಪ್ಪಿಗೆ ನೀಡಿದ ರೈತ ನಿಟ್ಟುಸಿರು ಬಿಡುತ್ತಾ ಮನೆಗೆ ನಡೆದ. ಹುಡುಗ ವಾಚು ಹುಡುಕಲು ಕಣಜದತ್ತ ಓಡಿದ.
ಹತ್ತು ನಿಮಿಷದಲ್ಲಿಯೇ ರೈತನ ಮನೆಗೆ ಓಡಿಬಂದ ಹುಡುಗ ಕಿಸೆಯಿಂದ ವಾಚು ತೆಗೆದುಕೊಟ್ಟ. ರೈತನಿಗೆ ಸಂತೋಷದ ಜೊತೆಗೆ ಆಶ್ಚರ್ಯವೂ ಆಯಿತು. 'ಅದ್ಹೇಗೆ ಈ ವಾಚು ನಿನಗೆ ಅಷ್ಟು ಸುಲಭವಾಗಿ ಸಿಕ್ತು?' ಎಂದು ಕೇಳಿದ.
ಅದಕ್ಕೆ ಆ ಹುಡುಗ- 'ನಾನೇನೂ ಮಾಡಲಿಲ್ಲ. ಅಲ್ಲಿ ಹೋಗಿ ಸುಮ್ಮನೆ ಕುಳಿತು ಕಣ್ಣು ಮುಚ್ಚಿಕೊಂಡು ಆಲಿಸತೊಡಗಿದೆ. ಮೆಲ್ಲಗೆ ವಾಚಿನ ಮುಳ್ಳಿನ ಶಬ್ದ ಕಿವಿಗೆ ಬೀಳತೊಡಗಿತು. ಶಬ್ದ ಬಂದ ದಿಕ್ಕಿನತ್ತ ಹೋದೆ...ಅಲ್ಲಿತ್ತು!'
ನೀತಿ: ಶಾಂತಿಯುತ ಮನಸ್ಸು ಸ್ವಷ್ಟ ಯೋಚನೆ ಮಾಡಬಲ್ಲದು. ಕಠಿಣ ಸನ್ನಿವೇಶಗಳು ಎದುರಾದಾಗಲೆಲ್ಲ, ನಿಮ್ಮ ಮಿದುಳಿಗೆ ಸ್ವಲ್ಪ ವಿಶ್ರಾಂತಿ ನೀಡಿ. ಸ್ವಲ್ಪ ಹೊತ್ತು ಶಾಂತವಾಗಿರಿ. ಪರಿಹಾರಗಳು ಎಷ್ಟೊಂದು ಸುಲಭವಾಗಿ ಸಿಗುತ್ತದೋ ನೀವೇ ನೋಡುತ್ತೀರಂತೆ!

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!