ಬೌದ್ಧರನ್ನು ಕೊಂದವರಾರು?
ಶಂಕರಾಚಾರ್ಯರೇ? ಇಸ್ಲಾಮಿಯ ಔರಂಗಜೇಬನೇ? ಮತಾಂಧರು ಯಾರು? ಸತ್ಯದ ಇತಿಹಾಸವೇನು? ಹಿಂದೆ "ವಿಚಾರವಾದದ" ಹೆಸರಲ್ಲಿ ಹಿಂದೂ ತೇಜೋವಧೆಯಾಗುತ್ತಿತ್ತು. ಈಗ "ಅಪಪ್ರಚಾರವು" ಉಪಕರಣವಾಗಿದೆ. ಬ್ರಾಹ್ಮಣ ದ್ವೇಷ, ಹಿಂದೂ ದ್ವೇಷದ, ಅನೇಕ ಬೇರುಗಳಲ್ಲಿ ತಮಿಳುನಾಡಿನ "ಜಸ್ಟಿಸ್ ಪಾರ್ಟಿ" ಆಮೇಲೆ ಶ್ರೀ ರಾಮಸ್ವಾಮಿ ನಾಯ್ಕರ ದ್ರಾವಿಡ ಕಳಗಂ, ಅಮೇಲಿನ ದ್ರಾವಿಡ ಚಳವಳಿಗಳು ಹುಟ್ಟಿದ್ದು ಬ್ರಿಟಿಷರ ಕೃಪಾಶ್ರಯದಿಂದ. ಅಂಥ ಒಂದು, ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲೂ ತಲೆ ಎತ್ತಿ, ದಿವಾನ್ ವಿಶ್ವೇಶ್ವರಯ್ಯನವರ ಕಾಲದಲ್ಲಿ "ನಾನ್-ಬ್ರಾಮಿನ್" ಚಳವಳಿಯಾಗಿ, ಅವರು ಅಧಿಕಾರ ತ್ಯಜಿಸುವಂತೆ ಆಯ್ತು. ಆಗ ಅಪ್ಪಾಜಿಗೌಡರು ಮುಂದಾಳು, ಈಗ ಅಲ್ಲೇ ಒಬ್ಬರು ಶಂಕರ ಜಯಂತಿ ಪ್ರಸಂಗದಲ್ಲಿ "ಶಂಕರಾಚಾರ್ಯರು ಸಹಸ್ರಾರು ಬೌದ್ಧರ ಕೊಲೆ ಮಾಡಿದ್ದು, ಗುಜರಾತಿನ ಮೋದಿಗಿಂತ ಹೆಚ್ಚು ಕ್ರೂರರಾಗಿ ವರ್ತಿಸಿದರು" ಎಂದು "ಅಪ್ಪಣೆ" ಕೊಡಿಸಿದ್ದು, ಮಂಗಳೂರಿನ ಪತ್ರಿಕೆಯೊಂದರಲ್ಲಿ ವರದಿಯಾಗಿ ನನ್ನ ಗಮನಕ್ಕೆ ಬಂತು. ದ್ವೇಷಕ್ಕೆ, ಸುಳ್ಳಿಗೆ, ಮಾತ್ಸರ್ಯಕ್ಕೆ, ಮದ್ದಿಲ್ಲ ಎನ್ನುತ್ತಾರೆ, ಹಿರಿಯರು. ಮದ್ದು ಇದೆ. ಅದು ಉಲ್ಬಣಾವಸ್ಥೆಯಲ್ಲಿ ರೋಗಿಗೆ ಹಿಡಿಸದಿದ್ದರೆ ಔಷಧದ ತಪ್ಪಲ್ಲ. ಸತ್ಯ ಹೀಗಿದೆ. ಶ್ರೀಶಂಕರರು ಪ್ರತಿಪಾದಿಸಿದ್ದು ನಿರಾಕರಿಸಿದ್ದು ಮುಖ್ಯವಾಗಿ ಗೊಡ್ಡುಯಾಜ್ಞಿಕರೆಂಬ ಪೂರ್ವಮೀಮಾಂಸಕರ ದೈವನಿರಾಕರಣ ಮತ್ತು ಶುಷ್ಕಕರ್ಮಠತ್ವದ ವಿರುದ್ಧವಾಗಿ. ಶಂಕರರು ಪ್ರಚಂಡ ವಾಗ್ಮಿ ಇದ್ದು ಬೌದ್ಧರ ಕುತರ್ಕಗಳನ್ನು ಸಂಯುಕ್ತವಾಗಿ ನಿವಾರಿಸಿ, ದಾರಿಬಿಟ್ಟು ಬೌದ್ಧರಾಗಿದ್ದ ಬ್ರಾಹ್ಮಣರನ್ನು ವೇದದ ಸನಾತನ ಶ್ರದ್ಧಾವಾಹಿನಿಗೆ ತಂದರು. ಹಾಗೆ ಮಾಡುವಾಗ ಅನೇಕ, ತಮಗೆ ಸರಿಕಂಡ ಬೌದ್ಧಾಂಶಗಳನ್ನು ವೇದಾಂತದೊಳಗೇ ತಂದವರಾದ್ದರಿಂದ ಅವರನ್ನು ಕೆಲವರು "ಪ್ರಚ್ಛನ್ನ ಬೌದ್ಧ"ರೆಂದರು. ಬೌದ್ಧರನ್ನು ಕೊಲ್ಲುವ ಪ್ರಶ್ನೆ, ಪ್ರಸಂಗ, ಎಲ್ಲಿ ಬಂತು? "ದೇವರಲ್ಲಿ, ಆತ್ಮವಿಲ್ಲ, ಮಾಯಾ ಕಲ್ಪಿತ, ದುಃಖ ಒಂದೇ ಸತ್ಯ" ಎಂಬುದು ಬುದ್ಧನ ಪ್ರಧಾನ ಬೋಧೆ. ಶಂಕರರು "ಬ್ರಹ್ಮಿ" ಸತ್ಯತ್ವ, ನಿತ್ಯತ್ವವನ್ನೂ, ಸರ್ವಗತತ್ವವನ್ನೂ, ಸ್ವಯಂಪ್ರಕಾಶ ತತ್ವವನ್ನು ಎತ್ತಿ ಹಿಡಿದು, ಉಳಿದುದೆಲ್ಲ "ಅನಿತ್ಯ" ಎಂಬರ್ಥದಲ್ಲಿ "ಮಿಥ್ಯಾ" ಎಂದರು. ಬುದ್ಧ ಇದನ್ನೇ ನಿರಾಕರಿಸಿದ್ದು. "ದುಃಖವು ಶಾಶ್ವತ" ಎಂಬ ನಾಲ್ಕು ಪರಮ ಸತ್ಯಗಳಲ್ಲಿ, ಬುದ್ಧನ ಪ್ರಕಾರ ಇದು ಯಾರಿಗೆ? ಇಲ್ಲದ ಆತ್ಮನಿಗೇ? ಇದೆಯೆಂಬ ಭ್ರಾಂತಿಕಲ್ಪಿತ ಜೀವನಿಗೋ? ಇಂದಿಗೂ ಬೌದ್ಧರು ಉತ್ತರಿಸುತ್ತಿಲ್ಲ. ಶಂಕರರು ಯಾರನ್ನೂ "ಕೊಲ್ಲಲಿಲ್ಲ". ಬೌದ್ಧಿಕ ಪರಾಕಾಷ್ಠೆಯಲ್ಲಿ ಅವರು ವಾದಿಪ್ರತಿವಾದಿಗಳನ್ನು ನಿವಾರಿಸಿ ಸನಾತನ ಧರ್ಮವನ್ನು ಸಮರ್ಥಿಸಿದರು. ಪ್ರಸ್ಥಾನತ್ರಯವನ್ನು - ವೇದ, ಗೀತೆ, ಬ್ರಹ್ಮಪಾತ್ರ -ಗಳ ಸಮನ್ವಯ ಮಾಡಿದರು. ಅವರ ರೀತಿ ಅನೇಕರಿಗೆ ಒಪ್ಪಿಗೆಯಾಗಿಲ್ಲದಿದ್ದರೇನಾಯ್ತು? ಬೌದ್ಧರ "ಮತವನ್ನು" ರಾಮಾನುಜರೂ ಮಧ್ವ, ನಿಂಬಾರ್ಕ, ವಲ್ಲಭರಾದಿ ಎಲ್ಲ ಸನಾತನಿಗಳೂ ನಿರಾಕರಿಸಿದ್ದಾರಷ್ಟೆ?
ದೇವರ ಹೆಸರಲ್ಲೇ ಕಾಲಭೈರವೋಪಾಸಕರ ನರಬಲಿಯನ್ನೂ, ಶಾಕ್ತರ ದುರಾಚಾರಗಳನ್ನು, ನಾನಾ ಬಗೆಯ ಮೂಢ ಆಚರಣೆಗಳನ್ನೂ ಶಂಕರರು ನಿವಾರಿಸಿ, ಸನಾತನ ಧರ್ಮ ಶ್ರದ್ಧೆಯನ್ನು ಅದರ ಶುದ್ಧಾವಸ್ಥೆಯಲ್ಲಿ ಪ್ರತಿಷ್ಠಿಸಲು ದೇಶಾದ್ಯಂತ ಸಂಚರಿಸಿದರು. ಬೌದ್ಧರಲ್ಲಿ ಆಗಲೂ ಇತ್ತು ಮಾಂಸಾಹಾರ. ಈಗಲೂ ಇದೆ. ಮುಂಡಗೋಡಕ್ಕೆ ಭೇಟಿಯಿತ್ತ ದಲೈಲಾಮ ತಮ್ಮ ಅನುಯಾಯಿಗಳಿಗೆ ಹೇಳಿದ್ದು- "ಸನಾತನಿಗಳಿಗೆ ಗೋವು ಪೂಜ್ಯ. ಗೋಮಾಂಸ ಬಿಟ್ಟು ಬೇರೇನನ್ನಾದರೂ ತಿನ್ನಿರಿ" ಎಂದದ್ದು ಪತ್ರಿಕೆಗಳಲ್ಲೇ ಬಂತು. ಶುದ್ಧ ಅಹಿಂಸಾವಾದಿಗಳು, ಆಚಾರಶೀಲರು ಜೈನರು. ಎರಡೂ ಮತ ಒಂದೇ ಅಲ್ಲ, ಇಲ್ಲೇ ನವಬೌದ್ಧರಿಗೆ ಗೊಂದಲವಿರುವುದು. ಆದುದರಿಂದ ಬೌದ್ಧಮತ ಇಲ್ಲಿ ಕಾಲ್ತೆಗೆಯಲು ಶಂಕರರ ಪ್ರಬಲವಾದ ವಾಹಿನಿ, ವಿಚಾರಸರಣಿ ಸುಧಾರಣೆ ಕಾರಣ ಆಯ್ತು. ಶಾಸ್ತ್ರಗ್ರಂಥಗಳಲ್ಲಿ ಇದು ಪ್ರಕಟವಾಗಿ ಕಾಣಬರಬಹುದು. ಶಂಕರರು ಮರಳುಗಾಡಿನ ಪ್ರವಾದಿಗಳಂತೆ ಸೇನೆ ಕಟ್ಟಲಲ್ಲಿ, ಹಿಂಸಾಚಾರಕ್ಕೆ ಕರೆ ಕೊಡಲಿಲ್ಲ. ಅದನ್ನು ಮಾಡಿದವನು ಔರಂಗಜೇಬ. 17ನೇ ಶತಮಾನದವರೆಗೆ ಬೌದ್ಧ ಮತ ಇಲ್ಲಿ ಸಾಂಸ್ಥಿಕವಾಗಿ ಇದ್ದೇ ಇತ್ತು. ನಾಳಂದಾ ವಿಶ್ವವಿದ್ಯಾಲಯ, ಇತ್ಯಾದಿ ಕಡೆಗಳಲ್ಲಿ. ಅದನ್ನು ಸುಟ್ಟು ಸಾವಿರಾರು ಬೌದ್ಧಸನ್ಯಾಸಿಯರನ್ನು ನಿರ್ದಯವಾಗಿ ಔರಂಗಜೇಬ ಕೊಲ್ಲಿಸಿದ್ದು ಇತಿಹಾಸ. ಭಾರತೀಯ ವಿದ್ಯಾಭವನದ ಭಾರತೀಯ ಇತಿಹಾಸ ಸಂಪುಟಗಳಲ್ಲಿ ಔರಂಗಜೇಬನ ಕುರಿತ ದಾಖಲೆಗಳಲ್ಲಿ ಇದನ್ನೇ ಕಾಣಬಹುದು. ಆ ಹೊತ್ತಿಗೆ ಬೌದ್ಧರ "ಸಂಘಶಕ್ತಿ" "ಮತಾಂತರಶಕ್ತಿ" "ವಿಚಾರಶಕ್ತಿ", ಕ್ಷೀಣವಾಗಿರಲು ಸಾಕು. ನಮ್ಮ ಕಾಲದಲ್ಲೇ ಆಫ್ಘಾನಿಸ್ತಾನದ ಬಾಮಿಯಾ ಪ್ರದೇಶದ ಗುಹಾಂತರ್ಗತ ಬೌದ್ಧ ವಿಗ್ರಹಗಳನ್ನು ನಾಶ ಮಾಡಿದವರು ತಾಲಿಬಾನ್ ಸೇನೆಯೇ? ಶಂಕರಾಚಾರ್ಯರೋ? "ಬುಟ್‌ಶಿಕಾ" ಶಬ್ದ ಅವರಲ್ಲಿ ಬಂದ ಬಗೆಗೆ ಸೀತಾರಾಂ ಗೋಯಂಕ ಗ್ರಂಥ ಓದಿ, "ಬುಟ್" ಎಂಬುದು "ಬುದ್ಧ" ಶಬ್ದದ ಅರಾಬಿಕ್ ರೂಪ. "ಬುದ್ಧ ವಿಗ್ರಹ ನಾಶ" ಎಂಬುದು ಅದರ ಅರ್ಥ, ಇದು ಶಂಕರಾಚಾರ್ಯರ ಸೃಷ್ಟಿಯೇ? ತಲೆ ತಿರುಕರ ಅಪಲಾಪವೇ? ಚಾರಿತ್ರಿಕ ಸತ್ಯವೇ? ಬೌದ್ಧಮತ ಆಂಧ್ರದಲ್ಲಿ ಚೆನ್ನಾಗಿದ್ದುದು ಏಕೆ ಹಾಳಾಯ್ತು? ನಾಗಚಂದ್ರ ನಾಗಸೇನ, ನಾಗಾರ್ಜುನ, ನಾಗವರ್ಮ, ಇತ್ಯಾದಿ "ನಾಗ"ರ ಮೂಲ ಯಾವುದು? ಎಲ್ಲಿಯವರು? ಕರ್ನಾಟಕದಲ್ಲಿ ಏಕೆ ಬೌದ್ಧರು ಸಾಹಿತ್ಯ ಬರೆಯಲಿಲ್ಲ? ತಮಿಳುನಾಡಿನಲ್ಲಿ ಸರಸ್ವತಿಗೆ ಹುಚ್ಚು ಹಿಡಿದ ಕಥೆ ಏಕೆ "ಕಾಂಚೀಮಾಹ್ಮಾತ್ಯ"ದಲ್ಲಿದೆ? ಬೌದ್ಧ ಕಾಂಚಿ, ಶೈವ ಕಾಂಚಿ, ಜೈನ ಕಾಂಚೀ, ವೈಷ್ಣುಕಾಂಚಿ, ಶಕ್ರಕಾಂಚಿಗಳು ಅಲ್ಲಿ ಏಕೆ ತರೆವಿದ್ದು ಕೋಲಾಹಲ ಮಾಡಿದವು. ಕಾಂಚೀ ಶಂಕರಮಠ ಇರುವಲ್ಲಿ ಮುಂಚೆ ಬೌದ್ಧರ ಪೀಠ ಇತ್ತೆ? ಕಾಮಾಕ್ಷಿ ದೇವಾಲಯವು ಶಾಕ್ತವೇರವೇ? ಇದೆಲ್ಲ ಇತಿಹಾಸದ ಸಮಾಲೋಚನೆಗೆ ಸವಾಲಾಗಿ ಇರುವಾಗ ನಿಷ್ಪಾಪಿ ಶಂಕರಾಚಾರ್ಯರ ತೇಜೋವಧೆ ಈಗ ಏಕೆ? ಪ್ರಚಾರಪ್ರಿಯರಿಗೆ ಬೇರೆ ಕೆಲಸವಿಲ್ಲ! ದ್ವೇಷ ಬೆಳೆಯುತ್ತದೆ. ರೋಗ, ಕ್ಯಾನ್ಸರ್‌ನಂತೆ ಬೆಳೆದಾಗ, ಸಾವು ನಿಶ್ಚಿತವಾದಾಗ, ಇದೆಲ್ಲ ಮಾಮೂಲು.
ಈಗ "ಮೋದಿ" ಪ್ರಸ್ತಾವಕ್ಕೆ ಬನ್ನಿ. ಗೋಧ್ರಾ ರೈಲು ಹಿಂಸಾಚಾರದ ಬಗ್ಗೆ ಅಪಪ್ರಚಾರಕರು ಬರೆಯುವುದೇ ಇಲ್ಲ. ಅದು ಕಾಂಗ್ರೆಸ್ ಮೆದುಳು, ಎಡಪಂಥೀಯರ ಮೃತ್ಯುಸಮಾನ ಸಂಗತಿ, ಗೋಧ್ರೋತ್ತರ ಹಿಂಸಾಚಾರ ದಿಢೀರನೆ ಎದ್ದ ಪ್ರತಿಕ್ರಿಯೆ. ಮೋದಿ ಆಗ ತಾನೇ ಮುಖ್ಯಮಂತ್ರಿಯಾಗಿ ಬಂದಿದ್ದರು. ಅವರಿದ್ದುದರಿಂದ ಹಿಂಸಾಚಾರ ಬೇಗ ಹದಕ್ಕೆ ಬಂತು. "ಅವರ ಪಾತ್ರವಿಲ್ಲ" ಎಂದು 3 ಆಯೋಗಗಳು ಹೇಳಿದ ಬಳಿಕ ಮತ್ತವರ ತಕರಾರೇನು? ಪ್ರಶ್ನೆ ಅದಲ್ಲ. "ಮೋದಿ ಸಮದರ್ಶಿ, ತುಷ್ಟೀಕರಣ ನೀತಿ ಹಿಡಿಯದೇ ಗುಜರಾತಿನಲ್ಲಿ ಸರ್ವರಿಗೂ ನ್ಯಾಯ ಒದಗಿಸಿ ಶಾಂತಿ ತಂದ ಸಮರ್ಥ ಆಡಳಿತಗಾರ! ಇವರೇ ಪ್ರಧಾನಿಯಾಗುವುದು ಖಚಿತ. ಅದು ಆಗಬಾರದೆಂದು ಕಾಂಗ್ರೆಸ್ಸಿಗೆ ಚಿಂತೆ, ಭಯ. ಅವರ ಹಿಂದೆ ಮತಾಂಧ ಶಕ್ತಿಗಳೂ, ದಾರಿಬಿಟ್ಟ ಮಂದಮತಿಗಳೂ, ಹಲವು ದಲಿತರೂ, ಏಡಪಂಥೀಯರೂ ಸೇರಿ, ಈ ಬಗೆಯ ಹಿಂದುತ್ವದ ಶಕ್ತಿಗಳ ತೇಜೋವಧೆಗೆ ಸದಾ ಮಂದೆ ನಿಂತಿರುತ್ತಾರೆ. ಈಗ ಇದು ಸವಕಳಿ ನಾಣ್ಯ. ಮಾನ್ಯ ತಲೆತಿರುಕರಿಗೆ ಧೈರ್ಯ, ಮೆದುಳು ಇದ್ದರೆ, "ಬೌದ್ಧರನ್ನು ಕೊಂದವರು ಇಸ್ಲಾಮಿಯರು" ಎಂದು ಒಮ್ಮೆ ಹೇಳಿ ನೋಡಲಿ. ಇಸ್ಲಾಂ ಚರಿತ್ರೆಯಲ್ಲಿ ಕೊಲ್ಲಲ್ಪಟ್ಟು ಸತ್ತವರ ಬೇರೆ ಕುಲಗಳೂ ಬುಡಕಟ್ಟುಗಳೂ ತಿಳಿಯಬೇಕಾದರೆ ಅನೇಕ ಇತಿಹಾಸ ಗ್ರಂಥಗಳಿವೆ. ಬೇಕೆಂದರೆ ಹೆಸರು, ದೊರೆಯುವ ವಿಳಾಸಗಳನ್ನು ನಾನೇ ತಿಳಿಸುತ್ತೇನೆ. ಅದು ಬಿಟ್ಟು ಯಾರೋ ಮಾಡಿದ್ದನ್ನು ಹಿಂದೂ ಸಂತರಿಗೆ ಆರೋಪಿಸುವವರು ಸಂಸ್ಕೃತಿ ದ್ವೇಷಿಗಳು. ಭಾರತ ಸಂವಿಧಾನ, ಭಾರತ ಇತಿಹಾಸ, ಧ್ವಜ, ರಾಷ್ಟ್ರಗೀತೆ, ಭಾರತ/ಸಂಸ್ಕೃತಿಯ ಮಹಾಗ್ರಂಥಗಳು, ಮಹಾಪುರುಷರು - ಈ ಯಾರನ್ನೂ ದ್ವೇಷಿಸಿ ಭಾಷಣ ಮಾಡುವವರನ್ನು ದೇಶದ್ರೋಹಿ ಎನ್ನಬೇಕಾಗುತ್ತದೆ. ಒಮ್ಮೆ ಕಾಯ್ದೆಯಡಿಯಲ್ಲಿ ಇಂಥವರನ್ನು ತಂದು ಅಪರಾಧ ನಿರೂಪಿಸಿ ಜೈಲಿಗೆ ಹಾಕದ ಹೊರತು ಈ ಹುಚ್ಚು ನಿಲ್ಲಲಾರದು.
ಗೋವಿಂದ, ಅನಂತ, ಗಿರೀಶ, ಕೇಶವ, ಭಗವಾನ್, ರಾಮ ಇವೆಲ್ಲ ಹಿಂದೂ ದೇವರ ಹೆಸರುಗಳು, ಇಂಥ ತೆರೆಯ ಹಿಂದೆ ಭಾರತ ಸಂಸ್ಕೃತಿ ದ್ವೇಷಿಗಳು ಆಶ್ರಯ ಪಡೆದು, ತಾಳ್ಮೆಯ ಜನಾಂಗವನ್ನು ಕೆದಕುವುದು ಈಗಿರುವ ಸರ್ಕಾರಕ್ಕೂ ತೊಂದರೆ ತಂದೀತು. ಔರಂಗಜೇಬನನ್ನೇ ಜೀರ್ಣಿಸಿಕೊಂಡ ಜನ ಸಮುದಾಯಕ್ಕೆ ಇಲ್ಲಿಯ ನಾಯಿ ಕೊಡೆಗಳು ಹಿರಿದಲ್ಲ. ಸೊಳ್ಳೆ ಎಷ್ಟು ಹೊತ್ತು ಕಚ್ಚೀತು? ಕನ್ನಡದ ಸಾಹಿತಿಗಳೆನಿಸಿದವರಲ್ಲೇ ಅನೇಕರಿಗೆ ಈ ರೋಗ ಪಸರಿಸುತ್ತಿರುವಂತಿದೆ. "ಪಂಪನನ್ನು ಬ್ರಾಹ್ಮಣರು ಕೊಂದರು" ಎಂದೊಬ್ಬರು ಹಿಂದೆ ಪ್ರಮಾಣವಿಲ್ಲದೆ ಹೇಳಿ, ಬರೆದರು. ತಿದ್ದಿಕೊಳ್ಳಲಿಲ್ಲ. ಬೌದ್ಧರ ಉಪದೇಶ ತಿಳಿಯಲು ಬೇಕಾದಷ್ಟು ಗ್ರಂಥಗಳಿವೆ ಸಂಸ್ಕೃತ ಬಾರದೆ, ವೇದೋಪನಿಷತ್ತು, ಆಚಾರ್ಯತ್ರಯರ ಭಾಷ್ಯ ಏನನ್ನು ಓದದೆ ತಿಳಿಗೇಡಿಗಳು ಈ "ಆಕಾರನರ್ತನ" ಮಾಡುವುದು ನಿಲ್ಲಲೇಬೇಕಾಗಿದೆ. ಸಮಗ್ರ ಕರ್ನಾಟಕ ಏಕೀಕೃತ ಸಂಸ್ಕೃತಿಗೆ ಗಂಡಾಂತರವಿದೆ, ದ್ವೇಷಕ್ಕೆ ಒಗ್ಗೂಡಿಸುವ ಶಕ್ತಿ ಇಲ್ಲ. ಪ್ರೇಮಕ್ಕೆ ಇದೆ. ಅದೇ ಹಿಂದೂ ಶ್ರದ್ಧೆ.
-ಡಾ.ಕೆ.ಎಸ್. ನಾರಾಯಣಾಚಾರ್ಯ, ಖ್ಯಾತ ವಿದ್ವಾಂಸರು