ಬೆಳಕಿನ ಸಂಭ್ರಮ
ಚಳಿಗಾಲವು ತನ್ನೊಡನೆ ಬೆಳಕಿನ ಹಬ್ಬವನ್ನೂ ತರುತ್ತದೆ. ಭಾರತದಾದ್ಯಂತ ಆಚರಿಸಲಾಗುವ ಅತೀ ಪ್ರಸಿದ್ಧ ಹಬ್ಬವೇ ದೀಪಾವಳಿ. ಹೆಸರೇ ಸೂಚಿಸುವಂತೆ ದೀಪಾವಳಿಯು ಬೆಳಕಿನ ಹಬ್ಬ. ದೀಪಾವಳಿಯನ್ನು ಭಾರತದಾದ್ಯಂತ ಆಚರಿಸಿದರೂ, ವಿವಿಧ ಭಾಗಗಳಲ್ಲಿ ವಿವಿಧ ಕಾರಣಗಳಿಗಾಗಿ ಆಚರಿಸುತ್ತಾರೆ.
ದಕ್ಷಿಣ ಭಾರತದಲ್ಲಿ ನರಕಾಸುರನನ್ನು ಕೃಷ್ಣನು ಸೋಲಿಸಿದ್ದನ್ನು ಆಚರಿಸಲು ದೀಪಾವಳಿಯನ್ನು ನರಕ ಚತುರ್ದಶಿಯಾಗಿ ಆಚರಿಸುತ್ತಾರೆ. ಅಯೋಧ್ಯೆಯ ರಾಜನಾದ ರಾಮನು ರಾಕ್ಷಸನಾದ ರಾವಣನನ್ನು ಸೋಲಿಸಿ, ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಬಂದ ನಂತರ ಪಟ್ಟಾಭಿಷಿಕ್ತನಾದನು. ರಾಮನ ಪಟ್ಟಾಭಿಷೇಕದ ನೆನಪಲ್ಲಿ ದೀಪಾವಳಿಯನ್ನು ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಪಶ್ಚಿಮ ಭಾರತದಲ್ಲಿ, ಪಾರಂಪರಿಕವಾದ ವರ್ತಕರ ಕುಟುಂಬಗಳಲ್ಲಿ ನವೀನ ಲೆಕ್ಕಗಳ, ಆರ್ಥಿಕ ವರ್ಷದ ಪ್ರಾರಂಭವನ್ನು ಸೂಚಿಸಲು ದೀಪಾವಳಿಯಂದು ಪ್ರಮುಖವಾಗಿ ಲಕ್ಷ್ಮೀ ಪೂಜೆಯನ್ನು ಆಚರಿಸಲಾಗುತ್ತದೆ. ಹೀಗೆ ಇತರ ಭಾಗಗಳಲ್ಲಿ ದೀಪಾವಳಿಯನ್ನು ಒಂದೊಂದು ವಿಶಿಷ್ಟ ಕಾರಣಕ್ಕಾಗಿ ಆಚರಿಸಲಾಗುತ್ತದೆ. ಕಾರಣಗಳು ಹಲವಾರು ಇದ್ದರೂ ದೀಪಾವಳಿಯನ್ನು ದೀಪದ ಹಬ್ಬವಾಗಿ ಸಾಮಾನ್ಯವಾಗಿ ಆಚರಿಸಲಾಗುತ್ತದೆ. ಭಾರತದ ಪಂಚಾಂಗದ ಪ್ರಕಾರ ದೀಪಾವಳಿಯು ನವರಾತ್ರಿ ಹಬ್ಬದ ಮೂರು ವಾರಗಳ ನಂತರ ಬರುತ್ತದೆ. ಇದು ಚಳಿಗಾಲದ ಪ್ರಾರಂಭವನ್ನು ಸೂಚಿಸುತ್ತದೆ. ಸಂಜೆಯು ಇನ್ನೂ ಇರುವಾಗಲೇ ಪ್ರತಿದಿನ ಬೇಗನೆ ಕತ್ತಲಾಗುತ್ತದೆ. ಆಗ ನಮಗೆ ಬೆಳಕು ಅವಶ್ಯಕವಾಗುತ್ತದೆ. ನಮ್ಮ ಜೀವನವನ್ನು ಉದ್ದೀಪಿಸಲು, ಎಲ್ಲರೂ ರಾತ್ರಿ ಮಲಗುವ ಮೊದಲು ನಮ್ಮ ಮನೆಗಳನ್ನು ಬೆಳಗಲು ದೀಪಗಳ ಸಾಲು ಬೇಕಾಗುತ್ತದೆ. ಆದ್ದರಿಂದ ಕತ್ತಲು ಮೂಡುವ ಕಾರಣದಿಂದ ಈ ಕಾಲದಲ್ಲಿ ಬೆಳಕು ಅವಶ್ಯಕವಾಗುತ್ತದೆ.
ಹಿಂದಿನ ಕಾಲದಲ್ಲಿ ಇದು ಕೇವಲ ಒಂದು ದಿನದ ಹಬ್ಬವಾಗಿರಲಿಲ್ಲ, ಒಂದು ತಿಂಗಳ ಅವಧಿಯ ಹಬ್ಬವಾಗಿತ್ತು. ಈ ತಿಂಗಳಲ್ಲಿ ಗಾಳಿಯ ಚಲನೆ ಹೆಚ್ಚಾಗಿರುವುದಿಲ್ಲ. ನೈಋತ್ಯದ ಮುಂಗಾರು ಮಳೆ ಆಗ ತಾನೆ ನಿಂತಿರುತ್ತದೆ ಮತ್ತು ಈಶಾನ್ಯದ ಹಿಂಗಾರು ಮಳೆ ಇನ್ನೂ ಪ್ರಾರಂಭವಾಗಿರುವುದಿಲ್ಲ. ಆದ್ದರಿಂದ ಗಾಳಿಯ ಚಲನೆ ಅಷ್ಟೇನು ಹೆಚ್ಚಾಗಿರುವುದಿಲ್ಲ. ದೀಪವು ಪ್ರಜ್ವಲವಾಗಿ ಬೆಳಗಲು ಗಾಳಿಯು ಸ್ತಬ್ಧವಾಗಿರಬೇಕು. ಹಿಂದಿನ ಕಾಲದಲ್ಲಿ ಈ ಒಂದು ತಿಂಗಳ ಹಬ್ಬವನ್ನು ಕೌಮುದಿ ಮಹೋತ್ಸವ ಎಂದು ಕರೆಯಲಾಗುತ್ತಿತ್ತು. ದೀಪಾವಳಿಯಲ್ಲದೆ ದೀಪಗಳೊಡನೆ ಈ ಅವಧಿಯಲ್ಲಿ ಆಚರಿಸಲಾಗುವ ಇತರ ಹಬ್ಬಗಳೆಂದರೆ ದಕ್ಷಿಣ ಭಾರತದ ಕಾರ್ತಿಕ ದೀಪ ಮತ್ತು ಒಡಿಶಾದ ಬಲಿ ಜಾತ್ರೆ.
ಇಂದಿಗೂ ಸಹ ದಕ್ಷಿಣ ಭಾರತದಲ್ಲಿ ಮತ್ತು ಪೂರ್ವ ಭಾರತದಲ್ಲಿ ಕಾರ್ತೀಕ ಮಾಸದಲ್ಲಿ ಜನರು ಸಂಜೆಯ ವೇಳೆ ತಮ್ಮ ಮನೆಯ ಬಾಗಿಲುಗಳ ಮುಂದೆ ದೀಪಗಳನ್ನು ಬೆಳಗಿಸುತ್ತಾರೆ. ಇಡೀ ತಿಂಗಳು ದೀಪವನ್ನು ಬೆಳಗಿಸುತ್ತಾರೆ. ಈ ಕಾಲದಲ್ಲಿ ದಕ್ಷಿಣ ಭಾರತದ ಅನೇಕ ದೇವಸ್ಥಾನಗಳಲ್ಲಿ ತೆಪ್ಪೋತ್ಸವವನ್ನು ಆಚರಿಸಲಾಗುತ್ತದೆ. ಭಗವಂತನ ವಿಗ್ರಹವನ್ನು ಒಂದು ತೆಪ್ಪದ ಮೇಲೆ ನಿಲ್ಲಿಸಿ ದೇವಸ್ಥಾನದ ಕಲ್ಯಾಣಿಯಲ್ಲಿ ತೇಲಿಬಿಡುತ್ತಾರೆ. ಇಡೀ ಕಲ್ಯಾಣಿಯ ಸ್ಥಳದಲ್ಲಿ ದೀಪಗಳನ್ನು ಹಚ್ಚುತ್ತಾರೆ ಮತ್ತು ಸಿಂಗರಿಸಲಾಗಿರುವ ಕಲ್ಯಾಣಿಯನ್ನು, ಭಗವಂತನ ವಿಗ್ರಹವನ್ನು, ದೀಪಗಳನ್ನು ನೋಡಲು ಅನೇಕ ಜನರು ಸೇರುತ್ತಾರೆ.
ಈ ಕಾಲದಲ್ಲಿ ಒಡಿಸ್ಸಾದಲ್ಲಿ ಜನರು ತಮ್ಮ ಹಡಗುಗಳಲ್ಲಿ ಪೂರ್ವ ದಿಕ್ಕಿನೆಡೆಗೆ ಸಮುದ್ರದ ಪ್ರಯಾಣವನ್ನು ಆರಂಭಿಸುತ್ತಿದ್ದರು. ಅವರು ಸಾಮಾನ್ಯವಾಗಿ ಹೋಗುತ್ತಿದ್ದ ಸ್ಥಳವೆಂದರೆ ಇಂಡೋನೇಷಿಯಾದ ಬಾಲಿ ಪ್ರದೇಶ. ಆದ್ದರಿಂದ ಈ ಪ್ರಯಾಣದ ಆರಂಭವನ್ನು ಬಾಲಿ ಜಾತ್ರೆ ಹಬ್ಬವಾಗಿ ಆಚರಿಸಲಾಗುತ್ತಿತ್ತು ಮತ್ತು ಇದು ಇಂದಿನ ದಿನದವರೆಗೂ ಮುಂದುವರೆದಿದೆ. ಹಳ್ಳಿಗಳ ಕೆರೆಗಳಲ್ಲಿ, ಕೊಳಗಳಲ್ಲಿ, ನದಿಗಳಲ್ಲಿ, ಝರಿಗಳಲ್ಲಿ ಸಣ್ಣ ದೀಪಗಳನ್ನು ಹರಿದು ಬಿಡುತ್ತಾರೆ. ಭಾರತದ ಇತರ ಭಾಗಗಳಲ್ಲಿ, ತಮಿಳು ನಾಡಿನಲ್ಲಿ ಈ ಕಾಲವನ್ನು ದೇವತೆಗಳ ರಾಜನಾದ ಇಂದ್ರನ ಮಹೋತ್ಸವವಾಗಿ ಆಚರಿಸುತ್ತಾರೆ. ಬೆಳಕಿನ ಹಬ್ಬವು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದೇ ಸಮಯದಲ್ಲಿ ಥಾಯ್ಲ್ಯಾಂಡಿನಲ್ಲಿ ಈ ಹಬ್ಬವನ್ನು ಲಾಯ್ ಕ್ರುಥಾಂಗ್ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಸಂಜೆಯ ವೇಳೆ ನೀರಿನಲ್ಲಿ ಸುಂದರವಾದ ದೀಪಗಳನ್ನು ಹರಿದು ಬಿಡುತ್ತಾರೆ. ಜ್ಯೂ ಪದ್ಧತಿಯ ಪ್ರಕಾರ ನವೆಂಬರ್ ತಿಂಗಳಲ್ಲಿ ದೀಪಗಳ ಹಬ್ಬವನ್ನು ಹನುಕ್ಕಾ ಹಬ್ಬವಾಗಿ ಆಚರಿಸಲಾಗುತ್ತದೆ. ಏಳು ದಿನಗಳ ಕಾಲ ಜ್ಯೂ ಜನರು ಕ್ಯಾಂಡೆಲ್‌ಗಳನ್ನು ಬೆಳಗುತ್ತಾರೆ. ಮಧ್ಯ ಯುರೋಪಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 'ಕ್ಯಾರಿಯಿಂಗ್ ಮೆನೊರಾಹ್' ಎಂಬ ದೀಪಗಳ ಹಬ್ಬವನ್ನು 2000 ವರ್ಷಗಳಿಗಿಂತಲೂ ಹಿಂದಿನಿಂದ ಆಚರಿಸಲಾಗುತ್ತಿದೆ. ಹಿಂದಿನ ದಿನಗಳಲ್ಲಿ ಈ ಎಲ್ಲಾ ಹಬ್ಬಗಳನ್ನೂ ಒಂದು ತಿಂಗಳವರೆಗೆ ಆಚರಿಸಲಾಗುತ್ತಿತ್ತು. ಆದರೆ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಚುಟುಕಾಗಿದೆ ಮತ್ತು ದೀಪಾವಳಿಯೂ ಸಹ ಒಂದು ರಾತ್ರಿಯ ಹಬ್ಬವಾಗಿ ಚುಟುಕಾಗಿದೆ. ಕಗ್ಗತ್ತಲಿನ ಚಳಿಗಾಲದಲ್ಲಿ ತಮ್ಮ ಜೀವನಗಳಲ್ಲಿ ಬೆಳಕನ್ನು ತರಲು ಜಗತ್ತಿನಾದ್ಯಂತದ ಜನರು ದೀಪಗಳ ಹಬ್ಬವನ್ನು ವಿವಿಧ ಕಾರಣಗಳಿಗಾಗಿ ಆಚರಿಸುತ್ತಾ ಬಂದರು. ಅದಲ್ಲದೆ ಕಗ್ಗತ್ತಲಿನ ಚಳಿಗಾಲದಲ್ಲಿ ಮಾತ್ರ ದೀಪಗಳ ಪೂರ್ಣ ಸೌಂದರ್ಯ ಎದ್ದು ಕಾಣಿಸಲು ಸಾಧ್ಯ.
- ಡಿ.ಕೆ. ಹರಿ ಮತ್ತು ಡಿ.ಕೆ. ಹೇಮ ಹರಿ
ಆರ್ಟ್ ಆಫ್ ಲೀವಿಂಗ್‌ನೊಡನೆ
ಸಂಯೋಜಿತವಾದ ಭಾರತ್ ಗ್ಯಾನ್‌ನ ಸಂಸ್ಥಾಪಕರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.