ಅಂಕಣಗಳು

ಮೂರು ಮುಖ, ನೂರು ಭರವಸೆ!

ಯಾವುದೇ ತಂಡದಲ್ಲಿ ಯಾವುದೇ ಆಟಗಾರ ಅಥವಾ ಸಮರ್ಥ ಆಟಗಾರರ ಸಮೂಹ...

ಭಾರತದ ಯುವ ಶಕ್ತಿಯ ವಿರಾಟ ದರ್ಶನ
ಸಚಿನ್ ಪರಂಪರೆಗೆ ಕೊಹ್ಲಿ ವಾರಸುದಾರ
ಕೊನೆಗೂ ತನ್ನ ಪ್ರತಿಭೆಯ ಅಗಾಧತೆ ಅರಿತುಕೊಂಡ ರೋಹಿತ್
ಯಾವುದೇ ಸವಾಲಿಗೆ ಅಂಜದ ಧೀರ ಧವನ್

ಇವೇ ಮುಂತಾದ ಶೀರ್ಷಿಕೆಗಳು ಇತ್ತೀಚಿನ ದಿನಗಳಲ್ಲಿ, ಅದರಲ್ಲಿಯೂ ಮೊನ್ನೆಯಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಸಂದರ್ಭದಲ್ಲಿ ಮೂಡಿಬಂದವು. ಘಟಾನುಘಟಿ ಆಟಗಾರರ ನಿವೃತ್ತಿಯ ಭಾರ, ಯುವ ಆಟಗಾರರು ಇನ್ನೂ ತಳವೂರದ ಒತ್ತಡ, ಇವೆಲ್ಲವುದರ ನಡುವೆಯೇ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅದೇ ಯುವ ಆಟಗಾರರು ತೋರಿದ ಛಲದ ಪ್ರದರ್ಶನ ನಾಳೆಗಳ ಬಗ್ಗೆ ನೆಮ್ಮದಿ ಮೂಡಿಸುವಂತಹ ವಾತಾವರಣ ಸೃಷ್ಟಿಸಿದೆ. ಯಾವುದೇ ತಂಡದಲ್ಲಿ ಯಾವುದೇ ಆಟಗಾರ ಅಥವಾ ಸಮರ್ಥ ಆಟಗಾರರ ಸಮೂಹ ಎಂದಿಗೂ ಶಾಶ್ವತ ಅಲ್ಲ. ಒಂದು ತಲೆಮಾರಿನ ಆಟಗಾರರು ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಮತ್ತೊಂದು ತಲೆಮಾರು ಸಿದ್ಧವಾಗಬೇಕು. ಈ ಸಂಕ್ರಮಣಕ್ಕೆ ತಂಡಗಳು ಹೇಗೆ ಸ್ಪಂದಿಸುತ್ತವೆ ಎಂಬುದರ ಮೇಲೆ ಅವುಗಳ ಭವಿಷ್ಯ ಅಡಗಿರುತ್ತದೆ. ಎರಡು ದಶಕಗಳ ಹಿಂದೆ ಆಗಿನ ಕಾಲದ ದೈತ್ಯ ತಂಡ ಎಂದೇ ಹೆಸರಾಗಿದ್ದ ವೆಸ್ಟ್ಇಂಡೀಸ್ ಈ ಸಂಕ್ರಮಣಕ್ಕೆ ಸೂಕ್ತ ರೀತಿಯಲ್ಲಿ ಅಣಿಯಾಗದೆ ಹೇಗೆ ಇಂದಿಗೂ ಒದ್ದಾಡುತ್ತಿದೆ ಎಂಬುದು ತಿಳಿದೇ ಇದೆ. ಅದೇ ಆಸ್ಟ್ರೇಲಿಯಾ ತಂಡ ಇಂತಹ ಸಂಕ್ರಮಣವನ್ನು ನಿಭಾಯಿಸಿಕೊಂಡು ಜಗತ್ತನ್ನಾಳಿತು ಎಂಬುದು ಸಹ ಇತಿಹಾಸ. ಒಂದು ತಂಡ ಉಚ್ಛ್ರಾಯದಲ್ಲಿದ್ದಾಗಲೇ ಮುಂದಿನ ಪೀಳಿಗೆಯನ್ನು ಅಣಿಮಾಡುತ್ತದೆ. ತನ್ನ ಛಿಜಝ್ಛಿ ಡಡ್ಠಿಜಟ್ಜಿಝಿ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಪರೀಕ್ಷಿಸುತ್ತದೆ. ಯಾವುದೇ ಕಾರಣಕ್ಕೂ ಈ ಪೂರಕ ಶಕ್ತಿ ಕಳೆಗುಂದದಂತೆ ಎಚ್ಚರ ವಹಿಸುತ್ತದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. 2000ದ ದಶಕದ ಆರಂಭಿಕ ಪರ್ವದಲ್ಲಿ ಸೌರವ್ ಗಂಗೂಲಿ ನಾಯಕತ್ವ ಹಾಗೂ ಜಾನ್ರೈಟ್ (ಕೋಚ್) ಮಾರ್ಗದರ್ಶನದಲ್ಲಿ ಮುಂದಿನ ತಲೆಮಾರಿನ ಆಟಗಾರರನ್ನು ಗುರುತಿಸುವ, ಗುರುತಿಸಿ ರೂಪಿಸುವ ಹಾಗೂ ಅವರನ್ನು ಅಗ್ನಿಪರೀಕ್ಷೆಗೆ ಗುರಿಪಡಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿತು. ಇದರ ಫಲವಾಗಿ ಅನೇಕ ಯುವ ಆಟಗಾರರು ತಂಡದ ಭಾಗವಾದರು. ನಾನಾ ಅವಕಾಶಗಳನ್ನು ಪಡೆದರು. ಒಂದೆರಡು ಬಾರಿ ಮಿಂಚಿದರು. ಹಲವರು ಮಿಂಚಿ ಮರೆಯಾದರು. ಕೆಲವರು ತೋರಿದ ಭರವಸೆ ಈಡೇರಿಸಸಲಾಗದೆ ಸೊರಗಿದರು. ಇನ್ನುಳಿದವರು ದೇಶೀಯ ಕ್ರಿಕೆಟ್ಟಿಗಷ್ಟೇ ಸೀಮಿತರಾದರು. ಇದೆಲ್ಲದರ ನಡುವೆ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಗಟ್ಟಿ ಕಾಳುಗಳಂತೆ ನಿಂತಿದ್ದಾರೆ. ರೋಹಿತ್ ಮತ್ತು ಶಿಖರ್ ಧವನ್ ಸಹ ಕಳೆದುಹೋಗುವ ಭೀತಿ ಇತ್ತು. ಆದರೆ ಕೊಹ್ಲಿ ಮಾತ್ರ ತಂಡಕ್ಕೆ ಬಂದ ದಿನದಿಂದಲೇ ಅದರ ಜೊತೆಗೇ ಬೆಳೆದಿದ್ದಾರೆ. ಈ ಮೂವರೂ ಸಹ ಅವರ ಓರಗೆಯ ಹಲವರಂತೆ ಮಾಸಬಹುದಿತ್ತು. ಒಂದೆರಡು ಅವಕಾಶಗಳಲ್ಲೇ ಬಣ್ಣ ಕಳೆದುಕೊಳ್ಳಬಹುದಿತ್ತು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಹೀಗೆ ಬಂದು ಹಾಗೆ ಹೋಗಬಹುದಿತ್ತು. ಆಯ್ಕೆದಾರರ ಕೈಯಲ್ಲಿ ಪಗಡೆಯ ದಾಳವಾಗಿ ಸೊರಗಿ ಹೋಗಬಹುದಿತ್ತು. ಹಾಗಾಗದಂತೆಇವರನ್ನು ತಡೆದು ನಿಲ್ಲಿಸಿರುವುದು ಆಟದ ಬಗೆಗಿನ ಇವರ ವ್ಯಾಮೋಹವಷ್ಟೇ.
2006ರ ಮಾತು. ದಿಲ್ಲಿ ಮತ್ತು ಕರ್ನಾಟಕ ತಂಡಗಳ ನಡುವೆ ಮಹತ್ವದ ರಣಜಿ ಪಂದ್ಯ ದಿಲ್ಲಿಯ ಫಿರೋಜ್ಶಾ ಕೋಟ್ಲಾ ಮೈದಾನದಲ್ಲಿ ನಡೆದಿತ್ತು. ಆವರೆಗಿನ ದಿಲ್ಲಿ ವಲಯ, ವಿಭಾಗ ಮತ್ತು ವಯೋವುತಿಯ ಪಂದ್ಯಗಳಲ್ಲಿನ ಪ್ರದರ್ಶನದ ಆಧಾರದ ಮೇಲೆ ಆಗ 18ರ ಪ್ರಾಯದ ವಿರಾಟ್ ಕೊಹ್ಲಿ ತಂಡಕ್ಕೆ ಆಯ್ಕೆಯಾಗಿದ್ದರು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಾನ್ನೂರು ಚಿಲ್ಲರೆ ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ದಿಲ್ಲಿ ಅಲ್ಪ ಸ್ಕೋರಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಮತ್ತೊಂದು ತುದಿಯಲ್ಲಿದ್ದ ಹಿರಿಯ ಆಟಗಾರನಿಗೆ ಹೆಗಲು ಕೊಟ್ಟು ಗಟ್ಟಿ ಜೊತೆಯಾಟ ನಿಭಾಯಿಸುವ ಹೊಣೆ ಕೊಹ್ಲಿಗೆ ಬಿತ್ತು. ಆರಂಭದಲ್ಲಿ ತಡಕಾಡಿದರೂ ಕರ್ನಾಟಕ ಬೌಲರುಗಳು ಒಡ್ಡಿದ ಸವಾಲನ್ನು ಹಿಮ್ಮೆಟ್ಟಿಸುವಲ್ಲಿ ಕೊಹ್ಲಿ ಎದೆಗುಂದಲಿಲ್ಲ. ದಿನಾಂತ್ಯಕ್ಕೆ 40ರನ್ ಮಾಡಿ ಅಜೇಯನಾಗಿ ಉಳಿದಿದ್ದೇ ಅಲ್ಲದೇ ಆರನೇ ವಿಕೆಟ್ಗೆ ಉತ್ತಮ ಜೊತೆಯಾಟದ ಬೀಜವನ್ನೂ ಬಿತ್ತಿದ್ದ. ಮಾರನೆಯ ದಿನ ಅದಕ್ಕೆ ನೀರೆರೆದು ಪೋಷಿಸಿ ತಕ್ಕ ಫಲ ಪಡೆಯುವ ಕನಸನ್ನು ಮನದಮೂಲೆಯಲ್ಲಿ ಹರವಿಟ್ಟು, ಆ ಹರವಿನಲ್ಲೇ ಮನಸ್ಸನ್ನು ಹರಿಯಬಿಟ್ಟು ಇರುಳಿಗೆ ಸ್ವಾಗತ ಕೋರಿದ್ದ. ಮಾರನೆಯ ದಿನದ ನಿರೀಕ್ಷೆಯಲ್ಲಿಯೇ ದಿಂಬಿಗೆ ತಲೆ ನೀಡಿದ್ದ. ಆದರೆ ಎರಡು ಜಾವ ಕಳೆಯುತ್ತಿದ್ದಂತೆಯೇ ವಿಧಿಯ ವಾಸ್ತವ ಆತನ ಕಪಾಳಕ್ಕೆ ಹೊಡೆದು ಎಬ್ಬಿಸಿತು. ಎಳವೆಯಿಂದ ತನ್ನ ಕನಸುಗಳ ಬೆನ್ನಿಗಿದ್ದ, ಕನಸು ಕಾಣುವಂತೆ ಪ್ರೇರೇಪಿಸಿದ್ದ, ಅಲೆಮಾರಿ ಮನಸ್ಸನ್ನು ಕ್ರಿಕೆಟ್ನ ಬ್ಯಾಟಿನಲ್ಲಿ ಸುತ್ತಿಡಲು ದಾರಿದೀಪವಾಗಿದ್ದ ಆತನ ತಂದೆ ಜಾವ ಜಾರುವ ಮುನ್ನ ಚಿರನಿದ್ರೆಗೆ ಜಾರಿದ್ದರು. ಒಂದು ಕಡೆ ಕನಸುಗಳ ಕಾಮನಬಿಲ್ಲು, ಮತ್ತೊಂದೆಡೆ ಕರ್ತವ್ಯದ ಕುಟುಕು. ದೂರದೂರಿನಲ್ಲಿದ್ದ ಕೋಚ್ಗೆ ಫೋನಾಯಿಸಿದಾಗ ಆತ ಹೇಳಿದ್ದು, "ಇದು ಕರ್ಮದ ಫಲ ಎಂದು ಭಾವಿಸು. ಈ ಕರ್ಮದ ಮೂಟೆಯ ಭಾರ ನಿನ್ನ ನಾಳೆಯ ಕನಸುಗಳಿಗೆ ಹೊರೆಯಾಗದಂತೆ ನೋಡಿಕೋ. ಜೀವನದಲ್ಲಿ ಅವಕಾಶಗಳು ಬೇಕೆಂದಾಗ ಬರವು. ಬಂದಾಗ ಅದನ್ನು ಬರಸೆಳೆದು ಬಿಗಿದಪ್ಪಿಕೊಳ್ಳಬೇಕು. ಅವಕಾಶ ಕಳೆದುಕೊಳ್ಳಬೇಡ" ಎಂದರು. ಈ ದ್ವಂದ್ವದಲ್ಲಿಯೇ ಕೊಹ್ಲಿ ಮತ್ತೆ ಮಾರನೆಯ ದಿನ ಪ್ಯಾಡ್ ಕಟ್ಟಿದಾಗ ಇಡೀ ದಿಲ್ಲಿ ತಂಡ, ಅಷ್ಟೇಕೆ ಕರ್ನಾಟಕದ ಆಟಗಾರರು ಸಹ ಕೊಹ್ಲಿಗೆ ಸಾಂತ್ವನ ಹೇಳಿದರು. ನೀನು ಕಣಕ್ಕಿಳಿಯದಿದ್ದರೂ ಪರವಾಗಿಲ್ಲ, ಹೊರಡು. ಮತ್ತೆ ನಿನಗೆ ಅವಕಾಶ ನೀಡುತ್ತೇವೆ ಎಂದು ದಿಲ್ಲಿ ತಂಡದ ನಾಯಕ ಮಿಥುನ್ ಮನ್ಹಾಸ್ ಹಾಗೂ ಕೋಚ್ ಚೇತನ್ ಚೌಹಾಣ್ ಅಭಯ ನೀಡಿದರು. ಆದರೆ ಕೊಹ್ಲಿ ಹೊರಟಿದ್ದು ಮನೆಗಲ್ಲ, ಕ್ರೀಸಿಗೆ. ಮುಂದಿನ ಎರಡು ಗಂಟೆಯ ಕಾಲ ಮನಸ್ಸಿನ ಭಾವನೆಗಳ ಮೇಲೆ ಜೀವನದ ಗುರಿ ಸವಾರಿ ಮಾಡಿತು. ಭೋಜನ ಕಾಲಕ್ಕೆ ಕೆಲವೇ ನಿಮಿಷಗಳ ಮುನ್ನ ಅಂಪೈರ್ ಬೆರಳು ಮುಗಿಲು ತೋರಿದಾಗ ಕೊಹ್ಲಿ 90ರನ್ ಹೊಡೆದಿದ್ದ. ಉಭಯ ತಂಡಗಳ ಆಟಗಾರರ, ಮೈದಾನದಲ್ಲಿ ನೆರೆದಿದ್ದ ಕೆಲವೇ ಪ್ರೇಕ್ಷಕರ ಚಪ್ಪಾಳೆಯನ್ನು ಹೇಗೆ ಸ್ವೀಕರಿಸಬೇಕೆಂದು ತಿಳಿಯದೆ ಭಾರದ ಹೆಜ್ಜೆಗಳನ್ನಿಡುತ್ತ ಪೆವಿಲಿಯನ್ಗೆ ಬಂದವನೇ ಪೆವಿಲಿಯನ್ನಲ್ಲಿ ಟಿವಿ ಮುಂದೆ ಕುಳಿತು ಅಂಪೈರ್ ನೀಡಿದ ತೀರ್ಪು ತಪ್ಪಾಗಿತ್ತು ಎಂಬುದನ್ನು ಖಾತ್ರಿಪಡಿಸಿಕೊಂಡು ನೇರ ಅಪ್ಪನ ಅಪರಕರ್ಮಕ್ಕೆ ತೆರಳಿದ. ಅಲ್ಲಿಯವರೆಗೆ ಚೆಲ್ಲು ಚೆಲ್ಲು ಸ್ವಭಾವದವನಾಗಿದ್ದ ಕೊಹ್ಲಿ ಆ ಒಂದು ರಾತ್ರಿಯಲ್ಲಿ ಛಲ್ಲಿಲಗಾರನಾಗಿ ರೂಪಾಂತರಗೊಂಡಿದ್ದ. ಅದಾಗಿ ಎರಡು ವರ್ಷಗಳಲ್ಲಿ ಮಲೇಷ್ಯಾದಲ್ಲಿ ನಡೆದ ಜೂನಿಯರ್ ವಿಶ್ವಕಪ್ನಲ್ಲಿ ತಂಡದ ನಾಯಕತ್ವ ವಹಿಸಿದ್ದೇ ಅಲ್ಲದೆ ಟ್ರೋಫಿ ಗೆದ್ದು ಕೊಹ್ಲಿ ತನ್ನ ಆಗಮನ ಸಾರಿದ. ಇದರ ಬೆನ್ನಿಗೇ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವೂ ಒದಗಿಬಂತು. ಈ ಕಳೆದ ಐದು ವರ್ಷಗಳಲ್ಲಿ ಆಟಗಾರನಾಗಿ ಕೊಹ್ಲಿ ಬೆಳವಣಿಗೆ ಬಹುಮುಖಿಯಾಗಿದೆ. ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಕೆಲ ಸಮಯ ಹಿಡಿಯಿತಾದರೂ ಹಿರಿಯ ಆಟಗಾರರ ನಿರ್ಗಮನ ಕೊಹ್ಲಿ ಮೇಲೆ ಹೆಚ್ಚಿನ ಜವಾಬ್ದಾರಿಯನ್ನೂ ವಹಿಸಿತು.
ಏಕದಿನ ಕ್ರಿಕೆಟ್ನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ತಂಡದ ಜಯಕ್ಕೆ ಕೈಗೂಡಿಸುತ್ತಾರೆ. ಆದರೆ ಅಧಿಪತ್ಯ ಸ್ಥಾಪಿಸುವ ಯಾವುದೇ ತಂಡಕ್ಕೆ ಬಹುಮುಖ್ಯವಾಗಿ ಬೇಕಿರುವುದು ಜಯದ ಗೆರೆದಾಟಿಸಬಲ್ಲ ಒಬ್ಬ ಸಮರ್ಥ ಫಿನಿಶರ್. 1990ರ ದಶಕದಲ್ಲಿ ಆಸ್ಟ್ರೇಲಿಯಾ ತಂಡ ಹಲವಾರು ಪಂದ್ಯಗಳನ್ನು ಪವಾಡಸದೃಶ ರೀತಿಯಲ್ಲಿ ಗೆಲ್ಲಲು ನೆರವಾಗಿದ್ದ ಮೈಕೆಲ್ ಬೆವನ್ನಿಂದಲೇ ಈ ಫಿನಿಶರ್ ಪರಂಪರೆ ಹುಟ್ಟಿದ್ದು. ಬೆವನ್ ಸಾವಿರಾರು ರನ್ ಸಿಡಿಸಲಿಲ್ಲ,  ಆದರೆ ಗಳಿಸಿದ ಒಂದೊಂದೂ ರನ್ ತಂಡದ ಜಯದ ಬೇಟೆಗೆ ಅತಿ ಪ್ರಮುಖ ಅಸ್ತ್ರವಾಗಿದ್ದವು. ಅದರಲ್ಲೂ ಮುಖ್ಯವಾಗಿ ಚೇಸಿಂಗ್ನಲ್ಲಿ ಬೆವನ್ ಕಾಣಿಕೆ ಹೆಚ್ಚಿತ್ತು. ಇದಾದ ಬಳಿಕ ಅನೇಕರು ಬಂದು ಹೋದರೂ ಅತ್ಯುತ್ತಮ ಫಿನಿಶರ್ ಎನಿಸಿದ್ದು ಮಹೇಂದ್ರಸಿಂಗ್ ಧೋನಿ. ಕಳೆದ ದಶಕದ ಮಧ್ಯಭಾಗದಲ್ಲಿ ಭಾರತ, ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಒಂದಾದ ಮೇಲೊಂದರಂತೆ ದಾಖಲೆಯ 17 ಏಕದಿನ ಪಂದ್ಯಗಳನ್ನು, ಅದೂ ಎಲ್ಲವೂ ಚೇಸಿಂಗ್ನಲ್ಲಿ, ಗೆದ್ದಾಗ ಬಹುತೇಕ ಎಲ್ಲದರಲ್ಲೂ ಧೋನಿಯ ಧಮಾಕ ಪ್ರಮುಖವಾಗಿತ್ತು. ಈಗ ಧೋನಿ ನಾಯಕತ್ವದಲ್ಲಿ ಕೊಹ್ಲಿ ಹೆಗಲಿಗೆ ಆ ಹೊಣೆಗಾರಿಕೆ ಜಾರಿದೆ. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಸಿಬಿ ಸರಣಿ ಏಕದಿನ ಪಂದ್ಯದಲ್ಲಿ 321ರನ್ಗಳ ಸವಾಲನ್ನು ಭಾರತ ಮೆಟ್ಟಿ ನಿಂತಾಗ ಅದರಲ್ಲಿ ಮಿಂಚಿದ್ದು ಇದೇ ಕೊಹ್ಲಿ. ಈಗಷ್ಟೇ ಮುಗಿದ ಸರಣಿಯಲ್ಲಿಯೂ ಭಾರತ ಎರಡು ಬಾರಿ 300 ಚಿಲ್ಲರೆ ರನ್ ಬೆನ್ನತ್ತಿದಾಗಲೂ ಎರಡರಲ್ಲೂ ಶತಕ ಸಿಡಿಸಿ ತಂಡವನ್ನು ಜಯದ ರೇಖೆ ದಾಟಿಸಿದ್ದು ಇದೇ ಕೊಹ್ಲಿ. ಭಾರತ ಚೇಸ್ ಮಾಡುವಾಗ ಕೊಹ್ಲಿ ಶತಕ ಗಳಿಸಿರುವ ನಾಲ್ಕು ಪಂದ್ಯಗಳಲ್ಲಿ ಭಾರತ ಜಯಿಸಿದೆ. 25ರ ವಯಸ್ಸಿನಲ್ಲಿಯೇ ಕೊಹ್ಲಿ ಠಜಛ್ಞ ತಲುಪಿದ್ದಾರೆ.
"Rohit Sharma is just like god. We all know god exists, we just do not see him perform.'
"Rohit Sharma is the world's most talented batsman, it's just that he is out of form since long"
 ಇವೇ ಮುಂತಾದ ಜೋಕುಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹರಿದಾಡುತ್ತಲೇ ಇವೆ. ರೋಹಿತ್ ಶರ್ಮಾ ರನ್ ಗಳಿಸಲಿ, ಬಿಡಲಿ ಆತನ ಕುರಿತಾದ ವ್ಯಂಗ್ಯೋಕ್ತಿಗಳಿಗೆ ಕೊನೆಯೇ ಇಲ್ಲ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಕೊಹ್ಲಿ ಜೊತೆಜೊತೆಗೇ ಪ್ರಥಮ ದರ್ಜೆ ಕ್ರಿಕೆಟ್ಗೆ ಕಾಲಿಟ್ಟ ಶರ್ಮಾ ಪಶ್ಚಿಮ ವಲಯದ ಪರ ಮೊದಲ ಪಂದ್ಯದಲ್ಲಿಯೇ ಶತಕ ಬಾರಿಸಿ ಗಮನ ಸೆಳೆದ ಆಟಗಾರ. ಕೊಹ್ಲಿಗಿಂತ ಮುಂಚೆಯೇ ಭಾರತದ ಪರ ಆಡಿದ ಆಟಗಾರ. ರಣಜಿಯಲ್ಲಿ 60ರ ಸರಾಸರಿಯಲ್ಲಿ ರನ್ಗಳಿಸಿ ಐಪಿಎಲ್ನಲ್ಲಿ ಮುಂಬೈ ಪರ ಸಿಡಿದಬ್ಬರಿಸಿರುವ ಕ್ರಿಕೆಟಿಗ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಮೊದಲ ಗೇರ್ನಿಂದ ಕದಲುವುದೇ ಕಷ್ಟ. ಇತ್ತೀಚಿನ ದಿನಗಳಲ್ಲಿ ಪ್ರಾಯಶಃ ಈತನಿಗೆ ಸಿಕ್ಕಷ್ಟು ಅವಕಾಶ ಭಾರತದ ಮತ್ತಾವ ಆಟಗಾರನಿಗೂ ಸಿಕ್ಕಿಲ್ಲ. ಈತನ ಆಟದಲ್ಲಿ ಕೊರತೆ ಕಡಿಮೆ, ಅದಿರುವುದು ಮನೋಭಾವದಲ್ಲಿ. ಒಂದು ಎಸೆತಕ್ಕೆ ನಾಲ್ಕು ಹೊಡೆತ ಬಾರಿಸಬಲ್ಲ ಪ್ರತಿಭೆ ಇದೆ, ಆದರೆ ಯಾವುದನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವಷ್ಟರಲ್ಲಿ ವಿಕೆಟ್ ಹಾರಿಹೋಗಿರುತ್ತದೆ. ಇಷ್ಟಾದರೂ ಇಂದು ರೋಹಿತ್ ತಂಡದಲ್ಲಿ ಉಳಿದು ಈಗ ಆರಂಭ ಆಟಗಾರನ ಸ್ಥಾನ ಖಾತರಿಪಡಿಸಿಕೊಂಡಿದ್ದರೆ. ಅದಕ್ಕೆ ಧೋನಿ ಕಾರಣ. ಈತನ ಪ್ರತಿಭೆಯ ಮೇಲೆ ಧೋನಿಗಿರುವ ಅಪಾರ ನಂಬಿಕೆ ಕಾರಣ. ಆಸ್ಟ್ರೇಲಿಯಾ ಸರಣಿಯಲ್ಲಂತೂ ರೋಹಿತ್ ನಾಯಕನ ನಂಬಿಕೆ ಉಳಿಸಿದ್ದಾರೆ. ಕ್ರೀಸ್ಗೆ ಬಂದಾಕ್ಷಣ ತನ್ನ ತಲೆಯನ್ನು ಆವರಿಸುವ ಭೂತಗಳಿಂದ ಮುಕ್ತಿಪಡೆದವರಂತೆ ಕಾಣಿಸುತ್ತಿದ್ದಾರೆ.
ಇನ್ನು ಶಿಖರ್ ಧವನ್. ವೃತ್ತಿಯಲ್ಲಿ ಮತ್ತು ವಯಸ್ಸಿನಲ್ಲಿ ಈತ ಕೊಹ್ಲಿ ಮತ್ತು ರೋಹಿತ್ಗಿಂತಲೂ ಸೀನಿಯರ್. 2004ರಲ್ಲೇ ದಿಲ್ಲಿ ಪರ ಪ್ರಥಮ ದರ್ಜೆಗೆ ಕಾಲಿಟ್ಟ ಶಿಖರ್ ಅದೇ ವರ್ಷ ನಡೆದ ಜೂನಿಯರ್ ವಿಶ್ವಕಪ್ನಲ್ಲಿ 500ಕ್ಕೂ ಹೆಚ್ಚು ರನ್ಗಳಿಸಿ ದಾಖಲೆ ಬರೆದಿದ್ದುಂಟು. ಸೀನಿಯರ್ ತಂಡದಲ್ಲೂ ಅತಿಥಿ ನಟರಂತೆ ಬಂದು ಹೋಗಿದ್ದೂ ಇದೆ. ಬಳಿಕ 2010ರ ತನಕ ಅಜ್ಞಾತ. ಈ ಕಳೆದ ಮೂರು ವರ್ಷದಲ್ಲಿ ಧವನ್ ಹೊಸ ಶಿಖರಗಳನ್ನೇರಿದ್ದಾನೆ. ಸೆಹವಾಗ್ ಮತ್ತು ಗಂಭೀರ್ ಸೇವೆ ತಂಡಕ್ಕೆ ಅಗತ್ಯವಿಲ್ಲ ಎಂದು ಆಯ್ಕೆದಾರರು ನಿರ್ಧರಿಸಿದಾಗ ಕಣ್ಣಿಗೆ ಬಿದ್ದದ್ದೇ ಧವನ್. ಅದಕ್ಕೆ ಪೂರಕವಾಗಿ ಕಳೆದ ವರ್ಷ ರಣಜಿಯಲ್ಲಿ ಹೆಚ್ಚು ರನ್ಗಳಿಸಿ ಅವಕಾಶಕ್ಕಾಗಿ ಕಾದುಕುಳಿತಿದ್ದ. ಇದೇ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ನಲ್ಲಿಯೇ 187ರನ್ ಸಿಡಿಸಿ ದಾಖಲೆ ಬರೆದಿದ್ದೂ ಆಯಿತು. ನಂತರ ಏಕದಿನದ ಪಂದ್ಯಗಳಲ್ಲಿಯೇ ಶತಕಗಳ ಹಾರ ಪೋಣಿಸಿ ನೆಲೆಯೂರಿದ್ದಾನೆ. ದ್ರಾವಿಡ್ ಆಯ್ತು, ಲಕ್ಷ್ಮಣ್ ಆಯ್ತು, ಈಗ ಸಚಿನ್ ಸಹ ಬ್ಯಾಟ್ ನೇತುಹಾಕಲಿದ್ದಾರೆ. ಅವರ ಸ್ಥಾನ ತುಂಬುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಈ ಮೂವರು ಆಟಗಾರರು ಭರವಸೆ ಮೂಡಿಸಿದ್ದಾರೆ. ತಂಡದ ಭವಿಷ್ಯ ಇವರ ಬ್ಯಾಟುಗಳಲ್ಲಿ ಅಡಗಿದೆ. ಕಾದು ನೋಡಬೇಕಷ್ಟೆ!

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!