ಕೆಲವೊಮ್ಮೆ ಸಿಕ್ಕಾಪಟ್ಟೆ ಸಿಕ್ಕ ಸ್ವಾತಂತ್ರ್ಯವೂ ಉಸಿರು ಕಟ್ಟಿಸಿಬಿಡುತ್ತದೆ. ಸ್ವಾತಂತ್ರ್ಯ ಇಲ್ಲದಿದ್ದರೆ ಹೇಗೆ ಕೈಕಾಲು ಆಡುವುದಿಲ್ಲವೋ, ಅದೇ ರೀತಿ ಸ್ವಾತಂತ್ರ್ಯ ಹೆಚ್ಚಾದರೂ ಬುದ್ಧಿ ಹುಚ್ಚು ಕುದುರೆಯಂತೆ ಸಿಕ್ಕಸಿಕ್ಕ ಕಡೆ ಓಡುತ್ತದೆ. ಗಾಳಿಗೆ ಲಗಾಮು ಹಾಕಲು ಹೇಗೆ ಸಾಧ್ಯವಿಲ್ಲವೋ ಸ್ವೇಚ್ಛೆಯ ಲೇಪ ಪಡೆದ ಸ್ವಾತಂತ್ರ್ಯ ಕೂಡ ಅನೇಕ ಲೋಪಗಳನ್ನು ಸೃಷ್ಟಿಸಿಬಿಡುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕತೆಯೂ ಇದೇ ಆಗಿದೆ. ಅತ್ತ ಪಕ್ಷದ ವರಿಷ್ಠರು ಬುದ್ಧಿ ಪೂರ್ವಕವಾಗಿ, ಇತ್ತ ರಾಜ್ಯದ ಮುಖಂಡರು ಬುದ್ಧಿಗೆ ವಿರುದ್ಧವಾಗಿ ಕೊಟ್ಟಿರುವ ಸ್ವಾತಂತ್ರ್ಯದ ಜೋಡಿ ಕುದುರೆಯ ಸವಾರಿ ಮಾಡಲಾಗದೆ ಸಿದ್ದರಾಮಯ್ಯ ತಿಣುಕಾಡುತ್ತಿದ್ದಾರೆ. ತಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಎಲ್ಲಿ ಹರಿಯ ಬಿಡಬೇಕು, ಅದಕ್ಕೆಲ್ಲಿ ಕಡಿವಾಣ ಹಾಕಬೇಕು, ಹೇಗೆ ಬಳಸಿಕೊಳ್ಳಬೇಕು, ಹೇಗೆ ಬಳಸಿಕೊಳ್ಳಬಾರದು, ಯಾರಿಗೆ ಹಂಚಬೇಕು, ಯಾರಿಗೆ ಹಂಚಬಾರದು ಎಂಬ ಅರಿವಿನ ಕೊರತೆ ಅವರಿಗೆ ನಿಧಾನ ಉರುಳಾಗಿ ಪರಿಣಮಿಸುತ್ತಿದೆ.
ವಿಧಾನಸಭೆ ಚುನಾವಣೆ ಫಲಿತಾಂಶ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಗಾದಿ ತಂದು ಕೊಟ್ಟಿದ್ದೇನೋ ಸರಿ. ಆದರೆ ಆ ಗಾದಿಗೆ ಮತ್ತಷ್ಟು ಗತ್ತು ತಂದುಕೊಟ್ಟದ್ದು ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭೆ ಮರುಚುನಾವಣೆ ವಿಜಯ. ದೇಶದೆಲ್ಲೆಡೆ ನಡೆದ ಮರುಚುನಾವಣೆಯಲ್ಲಿ ಪಾತಾಳ ಕಂಡ ಕಾಂಗ್ರೆಸ್‌ಗೆ ಕರ್ನಾಟಕದ ಫಲಿತಾಂಶ ಗಗನ ತೋರಿಸಿತು. ಎಲ್ಲೆಡೆ ಕಳೆದುಕೊಂಡ ಮರ್ಯಾದೆಯನ್ನು ಕರ್ನಾಟಕದಲ್ಲಿ ಹುಡುಕಿಕೊಟ್ಟ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಪ್ರಶಂಸೆಯ ಕಿರೀಟ ತೊಡಿಸಿ, ಅದಕ್ಕೊಂದು ಮುಕ್ತ ಸ್ವಾತಂತ್ರ್ಯದ ಗರಿಯನ್ನೂ ಸಿಕ್ಕಿಸಿತು. ಆ ಸ್ವಾತಂತ್ರ್ಯದ ಕಡಲಿನಲ್ಲಿ ಮುಳುಗಿರುವ ಸಿದ್ದರಾಮಯ್ಯನವರಿಗೆ ಭೂಮಿ, ಆಕಾಶ ಎರಡೂ ಕಾಣುತ್ತಿಲ್ಲ. ತತ್ಪರಿಣಾಮವಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾಗುತ್ತಾ ಬಂದರೂ ಅದು ಟೇಕಾಫೇ ಆಗಿಲ್ಲ.
ಹಾಗಂತ ಸಂಪುಟದಲ್ಲಿರುವ ಸಚಿವರ್ಯಾರೂ ಅಸಮರ್ಥರಲ್ಲ. ಹಿರಿ-ಕಿರಿಯ ತಲೆಗಳಿಂದ ಸಮತೋಲನಗೊಂಡ ಸಂಪುಟ ಎಂದು ಆರಂಭದಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ಹಿರಿಯರ ಅನುಭವ, ಹೊಸಬರ ಉತ್ಸಾಹ, ಜತೆಗೆ ಖುದ್ದು ಸಿದ್ದರಾಮಯ್ಯನವರ ಮಾರ್ಗದರ್ಶನ ಉತ್ತಮ ಆಡಳಿತ ನೀಡಬಹುದೆಂಬ ಭಾವನೆ ನಿರ್ಮಾಣವಾಗಿತ್ತು. ಆದರೆ ಆ ಭ್ರಮೆ ಈಗ ನಿರಸನಗೊಳ್ಳುತ್ತಿದೆ. ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳಿಗೆ ಸರ್ಕಾರಿ ಅಧಿಸೂಚನೆಯಾಗಿದ್ದರೂ ಜಾರಿಯಾಗುತ್ತಿಲ್ಲ. ಅದೆಲ್ಲ ಒತ್ತಟ್ಟಿಗಿರಲಿ ಗುಂಡಿ ಬಿದ್ದ ರಸ್ತೆಗೆ ತೇಪೆ ಹಾಕುವುದಕ್ಕೂ ಸರ್ಕಾರ ಮುಂದಾಗುತ್ತಿಲ್ಲ. ಆಡಳಿತ ಯಂತ್ರ ಎಂಬುದು ಸ್ಥಬ್ಧಚಿತ್ರವಾಗಿ ಬಿಟ್ಟಿದೆ. ಸ್ಥಬ್ದಚಿತ್ರಗಳ ಮೆರವಣಿಗೆಗೆ ಚಲನಶೀಲತೆ ಇರುತ್ತದೆ. ಆದರೆ ಜಡಗೊಂಡ ಆಡಳಿತಕ್ಕೆ ಚೈತನ್ಯ ತುಂಬುವುದಕ್ಕೂ ಒಂದು ಶ್ರದ್ಧೆ ಅಗತ್ಯ.
ಆದರೆ ಸಚಿವ ಸಂಪುಟದ ಸದಸ್ಯರು ಈ ಶ್ರದ್ಧೆಯನ್ನು ಸಿದ್ದರಾಮಯ್ಯ ಅವರ ಪರವಾಗಿ ಧಾರೆ ಎರೆಯುವುದಕ್ಕೆ ಮುಂದಾಗುತ್ತಿಲ್ಲ. ಸಚಿವರ ಸ್ವಾತಂತ್ರ್ಯವನ್ನು ಪರೋಕ್ಷವಾಗಿ ಮುಖ್ಯಮಂತ್ರಿಗಳೇ ಹರಣ ಮಾಡಿರುವುದರಿಂದ, ಅವರಿಂದ ಸಹಕಾರ ನಿರೀಕ್ಷೆ ಸಾಧ್ಯವೇ ?
ಹಾಗೆ ನೋಡಿದರೆ ಸಿದ್ದರಾಮಯ್ಯನವರ ವಿರುದ್ಧ ಪ್ರದೇಶ ಕಾಂಗ್ರೆಸ್‌ನ ಕೆಲ ಮುಖಂಡರು ಹಾಗೂ ಸಂಪುಟದ ಕೆಲ ಸಹೋದ್ಯೋಗಿಗಳು ಹೈಕಮಾಂಡ್‌ಗೆ ಕೊಟ್ಟ ದೂರುಗಳ ಪಟ್ಟಿಯೇನೂ ಕಡಿಮೆ ಇಲ್ಲ. ಬಡವರಿಗೆ ರುಪಾಯಿಗೆ ಕೆಜಿ ಅಕ್ಕಿಯಿಂದ ಹಿಡಿದು ಇತ್ತೀಚಿನ ಮೂಢನಂಬಿಕೆ ಪ್ರತಿಬಂಧಕ ಕರಡು ಪ್ರಸ್ತಾವನೆ ರಚನೆವರೆಗೂ ಅನೇಕ ಏಕಮುಖ ನಿರ್ಧಾರಿತ ಕಾರ್ಯಕ್ರಮಗಳ ಬಗ್ಗೆ ದೂರುಗಳ ಸರಮಾಲೆಯೇ ಹೋಗಿದೆ. ಆದರೆ ಲೋಕಸಭೆ ಮರುಚುನಾವಣೆ ಫಲಿತಾಂಶ ಈ ಎಲ್ಲ ದೂರುಗಳನ್ನು ಬಡಿದು ಮಲಗಿಸಿದೆ. ಹೈಕಮಾಂಡ್ ರಾಜ್ಯ ಮುಖಂಡರಿಗೆ ಸ್ಪಷ್ಟವಾಗಿ ಹೇಳಿಬಿಟ್ಟಿದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಈಗಂತೂ ಡಿಸ್ಟರ್ಬ್ ಮಾಡಲು ಸಾಧ್ಯವೇ ಇಲ್ಲ. ಅವರ ವಿರುದ್ಧ ದೂರುಗಳನ್ನು ತರಬೇಡಿ. ಬದಲಿಗೆ ಅವರಿಗೆ ಸಹಕಾರ ನೀಡಿ ಎಂದು ಖಡಾಖಂಡಿತವಾಗಿ ಹೇಳಿದೆ. ಅದೂ ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಬರುವ ದೂರುಗಳನ್ನು ಸದೆಬಡಿಯಲು ಹೈಕಮಾಂಡ್ ಪ್ರತಿನಿಧಿಸುತ್ತಿರುವ ರಾಜ್ಯ ಮುಖಂಡರ ಒಂದು ತಂಡವೇ ಟೊಂಕ ಕಟ್ಟಿ ನಿಂತಿದೆ. ಹೀಗಾಗಿ ಇಲ್ಲಿಂದ ಹೋದ ದೂರುಗಳು ಸಿದ್ದರಾಮಯ್ಯ ಅವರ ಕೊರಳ ಹಾರವಾಗಿ ಮರಳುತ್ತಿವೆ. ಇದೆಲ್ಲದರ ಪರಿಣಾಮ ಸಿದ್ದರಾಮಯ್ಯ ಅವರನ್ನು ಹಿಡಿಯುವವರೇ ಇಲ್ಲವಾಗಿದೆ.
ತಪ್ಪಾಗಿರುವುದು ಇಲ್ಲೇ. ತಮ್ಮನ್ನು ಹೇಳುವವರು, ಕೇಳುವವರು ಇಲ್ಲ ಎಂಬ ಮನವರಿಕೆ ಸಿದ್ದರಾಮಯ್ಯ ಅವರಿಗೇ ತೊಡರುಗಾಲಾಗಿ ಪರಿಣಮಿಸಿದೆ. ಹೈಕಮಾಂಡ್ ಕೊಟ್ಟ ಪೂರ್ಣ ಸ್ವಾತಂತ್ರ್ಯ ಸಕಾರಾತ್ಮಕವಾಗಿ ಬಳಕೆ ಆಗುತ್ತಿಲ್ಲ. ಆಡಳಿತಾತ್ಮಕ, ನೀತಿ-ನಿರೂಪಣೆಯ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಾಗ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದವರನ್ನು ನಿರ್ಲಕ್ಷಿಸುತ್ತಿದ್ದಾರೆ. ಅದು ರುಪಾಯಿಗೆ ಕೆಜಿ ಅಕ್ಕಿ ಇರಲಿ, ಶಾದಿಭಾಗ್ಯ ಯೋಜನೆ ಇರಲಿ, ಮೂಢನಂಬಿಕೆ ಪ್ರತಿಬಂಧಕ ಕರಡು ಪ್ರಸ್ತಾವನೆ ರಚನೆ ಇರಲಿ ಪ್ರಮುಖ ತೀರ್ಮಾನದ ಸಂದರ್ಭದಲ್ಲಿ ಸಂಪುಟದ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುತ್ತಿಲ್ಲ. ಅವರ ಸಲಹೆ-ಸೂಚನೆಗಳನ್ನು ಪಡೆಯುತ್ತಿಲ್ಲ. ಹಿರಿಯ ಸಚಿವರ ಅನುಭವವನ್ನು ಬಳಸಿಕೊಳ್ಳುತ್ತಿಲ್ಲ. ಇದು ಅವರ ಬೇಸರ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಅವರ ಬದಲಿಗೆ ಜನತಾ ಪರಿವಾರದಿಂದ ತಮ್ಮೊಂದಿಗೆ ಬಂದು, ಸುತ್ತಮುತ್ತ ಅಟಕಾಯಿಸಿಕೊಂಡಿರುವ ಕೆಲವರನ್ನು ಮಾತ್ರ ಇಂಥ ಸಂದರ್ಭಗಳಲ್ಲಿ ಪರಿಗಣಿಸುತ್ತಿದ್ದಾರೆ. ಇವರನ್ನು ಬಿಟ್ಟರೆ ಅವರ ದೊಡ್ಡ ಆಸ್ತಿ ಕೆಲ ಬುದ್ಧಿಜೀವಿಗಳ ಗುಂಪು. ಆತ್ಮರತಿಯ ಅತಿರೇಕದ ಸಂಕೇತದಂತಿರುವ ಈ ಚಿಂತಕರು ತಮ್ಮ ಸಾಹಿತ್ಯ ಸಂದೇಶವನ್ನು ಆಡಳಿತದಲ್ಲಿ ತುರುಕಲು ಯತ್ನಿಸಿರುವುದು ಸಿದ್ದರಾಮಯ್ಯ ಅವರಿಗೆ ತುರಿಕೆಯಾಗಿ ಪರಿಣಮಿಸಿದೆ. ಇವರು ಕ್ರಾಂತಿ, ಪ್ರಗತಿ ಹೆಸರಲ್ಲಿ ಪುಂಖಾನುಪುಂಖವಾಗಿ ಕೊಡುತ್ತಿರುವ ಚಿಂತನೆಗಳು ಸರ್ಕಾರದ ವಿಭ್ರಾಂತಿಗೆ ಕಾರಣವಾಗಿದೆ. ಆಚಾರ ಮತ್ತು ಅನಾಚಾರಗಳ ನಡುವಣ ವ್ಯತ್ಯಾಸ ಅರಿಯದವರ ಬುದ್ದಿಗೆ ತಮ್ಮ ಅರಿವನ್ನು ಮುಡಿಪಾಗಿಟ್ಟಿರುವ ಮುಖ್ಯಮಂತ್ರಿಯವರು ಅದಕ್ಕಾಗಿ ಭಾರಿ ಬೆಲೆ ತೆರುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ, ಟೀಕೆಗೆ ಗುರಿಯಾಗಿರುವ ಸರ್ಕಾರದ ಒಂದೊಂದು ನಿರ್ಧಾರದಲ್ಲೂ ನಕರಾತ್ಮಕ ಫಲಿತಾಂಶವೇ ಹೊರ ಹೊಮ್ಮುತ್ತಿದ್ದು, ಅದರಲ್ಲಿ ಚಿಂತಕರ ಅತಿಬುದ್ಧಿವಂತಿಕೆ ಪ್ರತಿಫಲಿಸುತ್ತಿದೆ.
ಸಿದ್ದರಾಮಯ್ಯನವರು ಏಕಮುಖವಾಗಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿನ ಮೇಲೆ ಬೀರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಅವರ ಸಂಪುಟ ಸಹೋದ್ಯೋಗಿಗಳಿಗೆ ಗೊತ್ತಿಲ್ಲದೇ ಏನಿಲ್ಲ. ಆದರೂ ಅವರೆಲ್ಲ ಹೈಕಮಾಂಡ್ ಇಂಗಿತ ಅರಿತು ಬಾಯಿ ಮುಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ತಮಗೆ ಸಿಕ್ಕಿರುವ ಸ್ವಾತಂತ್ರ್ಯದ ನೆಪದಲ್ಲಿ ಮಾಡುತ್ತಿರುವ ತಪ್ಪುಗಳನ್ನು ಕುತೂಹಲ ಮತ್ತು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ. ಅವು ತಪ್ಪು ಎಂದು ಗೊತ್ತಿದ್ದರೂ ಇನ್ನಷ್ಟು ತಪ್ಪುಗಳಾಗಲಿ, ತಪ್ಪುಗಳ ಮೂಟೆ ಸೃಷ್ಟಿಯಾಗಲಿ ಎಂದೇ ಬಯಸುತ್ತಿದ್ದಾರೆ. ಸಂಪುಟದಲ್ಲಿ ಎಂತೆಂಥ ಅನುಭವಿ ಸಚಿವರಿದ್ದರೂ ಸಿದ್ದರಾಮಯ್ಯ ತಪ್ಪು ನಿರ್ಧಾರಗಳ ಬಗ್ಗೆ ಯಾರೋಬ್ಬರೂ ಚಕಾರ ಎತ್ತುತ್ತಿಲ್ಲ. ಬದಲಿಗೆ ಉಸಿರು ಬಿಗಿ ಹಿಡಿದುಕೊಂಡು ಸಮಯಕ್ಕಾಗಿ ಕಾಯುತ್ತಿದ್ದಾರೆ.
ಹಾಗೆ ನೋಡಿದರೆ ಸಿದ್ದರಾಮಯ್ಯನವರ ಶಾದಿಭಾಗ್ಯ, ಮೂಢನಂಬಿಕೆ ಪ್ರತಿಬಂಧಕ ಕರಡು ಪ್ರಸ್ತಾವನೆ ಬಗ್ಗೆ ವ್ಯಾಪಕ ವಿರೋಧ, ಪ್ರತಿಕ್ರಿಯೆಗಳು ವ್ಯಕ್ತವಾದರೂ ಸಂಪುಟ ಸಹೋದ್ಯೋಗಿಗಳು ಯಾರೊಬ್ಬರೂ ನೆರವಿಗೆ ಬರಲಿಲ್ಲ. ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಳ್ಳಲಿಲ್ಲ. ಗಣಿ ಅಕ್ರಮ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಯವರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಏಕವಚನದಲ್ಲಿ ಬಾಯಿಗೆ ಬಂದಂತೆ ನಿಂದಿಸಿದರೂ ಯಾರೊಬ್ಬರೂ ನೆರವಿಗೆ ಬರಲಿಲ್ಲ. ಪತ್ರಿಕೆಗಳಲ್ಲಿ ಈ ಬಗ್ಗೆ ಟೀಕೆಗಳು ಬಂದ ಮೇಲಷ್ಟೇ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ಶಾಸ್ತ್ರ ಮುಗಿಸಿದರು. ಅಷ್ಟೆಲ್ಲ ಏಕೆ, ಸಿದ್ದರಾಮಯ್ಯ ಪ್ರತಿನಿಧಿಸುವ ಕುರುಬ ಸಮುದಾಯದ ಮುಖಂಡರೂ ಈ ಬಗ್ಗೆ ಮಾತಾಡಲಿಲ್ಲ. ಮುಖ್ಯಮಂತ್ರಿಯವರು ಇನ್ಯಾರಿಗೋ ಆದ್ಯತೆ ನೀಡುತ್ತಿರುವಾಗ ತಾವೇಕೆ ಅವರ ರಕ್ಷಣೆಗೆ ಮುಂದಾಗಬೇಕು ಎಂಬ ಕೋಪ-ತಾಪ ಈ ವರ್ತನೆ ಹಿಂದೆ ಆಡಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಾತಂತ್ರ್ಯದ ಹಮ್ಮಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಎಡವಟ್ಟಾದಾಗಲೆಲ್ಲ ಅವರ ಪರವಹಿಸಿ ಯಾರೂ 'ಸ್ವರ ಸಂಯೋಜನೆ' ಮಾಡುತ್ತಿಲ್ಲ. ಇದರಿಂದ ಮುಖ್ಯಮಂತ್ರಿಯಾಗಿದ್ದರೂ ಸರ್ಕಾರದಲ್ಲಿ ಸಿದ್ದರಾಮಯ್ಯ ಒಂಟಿಯಾಗಿದ್ದಾರೆ ಎಂಬ ಸಾರ್ವಜನಿಕ ಅಭಿಪ್ರಾಯ ಗಾಢವಾಗಿ ಮೂಡುವುದಕ್ಕೆ ಕಾರಣವಾಗಿದೆ.
ಅದೇ ಕಾಲಕ್ಕೆ ಸಿದ್ದರಾಮಯ್ಯ ಅವರು ಜನರಿಂದ ದೂರ ಸರಿಯುತ್ತಿದ್ದಾರೆಯೇ ? ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗುತ್ತಿದೆ. ಅಧಿಕಾರಕ್ಕೆ ಬಂದ ಆರಂಭಿಕ ದಿನದಲ್ಲಿ ತಿಂಗಳಿಗೆ ಎರಡು ಬಾರಿ ಅವರು ಸಜನಸ್ಪಂದನಸಭೆ ನಡೆಸುತ್ತಿದ್ದರು. ಸಾರ್ವಜನಿಕರ ದೂರು, ದುಮ್ಮಾನಗಳಿಗೆ ಸ್ಪಂದಿಸುವ ಉತ್ಸಾಹವನ್ನು ತೋರಿದ್ದರು. ಮನವಿ ಹೊತ್ತು ತಂದ ಜನರ ಸಂಖ್ಯೆಎಷ್ಟೇ ಇದ್ದರೂ ತಾವೇ ಪಟ್ಟಾಗಿ ಕುಳಿತು ಅದಕ್ಕೆ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸುತ್ತಿದ್ದರು. ಇದರಿಂದ ಅವರು ಜನರಿಗೆ ಹತ್ತಿರವಾಗಿ ಆಡಳಿತ ನಡೆಸಬಲ್ಲರು ಎಂಬ ವಿಶ್ವಾಸ ಮೂಡಿತ್ತು.
ಆದರೆ ಬರಬರುತ್ತಾ ಸಿದ್ದರಾಮಯ್ಯ ಆ ನಂಬಿಕೆಯನ್ನೂ ಕಳೆದುಕೊಳ್ಳಲಾರಂಭಿಸಿದ್ದಾರೆ. 'ಸ್ವಾತಂತ್ರ್ಯದ ಓಟ' ಅವರನ್ನು ಏಕಾಂಗಿಯಾಗಿಸಿದೆ. ಹೀಗಾಗಿ ಜನರ ಜತೆ ಬೆರೆಯುವುದಕ್ಕೂ ಸಮಯ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಜನರೊಡನೆ ಅನುಸಂಧಾನ ನಡೆಸುವುದಕ್ಕೆ ಇರುವ ಮಾರ್ಗಗಳು ಮುಚ್ಚುತ್ತಾ ಸಾಗುತ್ತಿವೆ. ತಮ್ಮ ಆಪ್ತರು ಮತ್ತು ಬುದ್ಧಿಜೀವಿ ವರ್ಗದ ಗಾಳಿಗೋಪುರದೊಳಗೆ ಕುಳಿತು ಬಾಗಿಲು ಭದ್ರಪಡಿಸಿಕೊಂಡಿರುವ ಅವರು, ಜನರ ಜತೆಗೆ ಬೆರೆಯುವುದಕ್ಕೆ ಇರುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಸ್ವಘೋಷಿತ ಬುದ್ಧಿಜೀವಿಗಳು ಇ-ಮೇಲ್ ಐಡಿ ಹೊಂದಿ, ಅಂತರ್ಜಾಲದಲ್ಲಿ ಸಿದ್ದರಾಮಯ್ಯ ಬ್ರಿಗೇಡ್ ರಚಿಸಿ ಎಂದಾಗ ಸಮ್ಮತಿಸುವ ಸಿದ್ದರಾಮಯ್ಯನವರಿಗೆ ರಸ್ತೆ ಗುಂಡಿ ಬಿದ್ದಿದೆ ಸ್ವಾಮಿ ಎನ್ನುವ ಜನಸಾಮಾನ್ಯನ ಕೂಗು ಕೇಳುತ್ತಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ಬುಲೆಟ್ ಟ್ರೈನ್ ಆರಂಭಿಸುವ ಕನಸು ಕಟ್ಟುವ ಅವರಿಗೆ ಶಾಸಕರ ನಿಧಿಗೆ ಸಮರ್ಪಕವಾಗಿ ಹಣ ಬಿಡುಗಡೆಯಾಗಿಲ್ಲ ಎಂಬ ಶಾಸಕರ ಬೊಬ್ಬೆ ಕೇಳಿಸುತ್ತಿಲ್ಲ.
ಇದಕ್ಕೆ ಕಾರಣ ಹೈಕಮಾಂಡ್ ಶ್ರೀರಕ್ಷೆ ತನಗಿದೆ ಎಂಬ ಅವರ ಆತ್ಮವಿಶ್ವಾಸ. ಆದರೆ ಇದು ಹೇಳಿ ಕೇಳಿ ಚುನಾವಣಾ ಕಾಲ. ಕೇಂದ್ರದ ಯುಪಿಎ ಸರ್ಕಾರಕ್ಕೆ ಮಾಡು ಇಲ್ಲವೇ ಮಡಿ ಸನ್ನಿವೇಶ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದೊಂದು ಮತವೂ ಅಮೂಲ್ಯ. ಪ್ರತಿ ಲೋಕಸಭಾ ಕ್ಷೇತ್ರವೂ ನಿರ್ಣಾಯಕ. ಆದರೆ ಸಿದ್ದರಾಮಯ್ಯ ಅವರು ಇತ್ತೀಚಿನ ದಿನಗಳಲ್ಲಿ ತೆಗೆದುಕೊಳ್ಳುತ್ತಿರುವ ಪ್ರತಿ ನಿರ್ಧಾರವೂ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಸೃಷ್ಟಿಸುತ್ತಾ ಸಾಗುತ್ತಿವೆ. ಮಾತ್ರವಲ್ಲ ಪಕ್ಷದ ಇತರೆ ನಾಯಕರು ಹಾಗೂ ಸಂಪುಟ ಸಹೋದ್ಯೋಗಿಗಳ ಮೌನ ಬೇರೆಯದ್ದೇ ಆದ ಸಂದೇಶಗಳನ್ನು ರವಾನಿಸುತ್ತಿವೆ.
ಆದರೂ ಸಿದ್ದರಾಮಯ್ಯ ಮತ್ತು ಅವರ ಸುತ್ತ ಸೃಷ್ಟಿಯಾಗಿರುವ ವರ್ಗ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ರಾಜ್ಯ ನಾಯಕರ ದೂರನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸದೇ ಇರುವುದೇ ಇದಕ್ಕೆ ಕಾರಣ. ಮೇಲಾಗಿ ಸೋನಿಯಾ ಗಾಂಧಿಯವರು ಎಐಸಿಸಿ ಅಧ್ಯಕ್ಷರಾದ ನಂತರ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದ ಯಾವುದೇ ಮುಖ್ಯಮಂತ್ರಿಯನ್ನು ಚಾಡಿ ಮಾತನ್ನು ನಂಬಿ ಬದಲಾಯಿಸಿಲ್ಲ. ಹೀಗಾಗಿ ನಿಮ್ಮ ವಿರುದ್ಧ ಹೈಕಮಾಂಡ್ ಬಾಗಿಲು ತಲುಪುವ ಮೂಗರ್ಜಿಗಳಿಗೆ ವಿಶೇಷ ಮನ್ನಣೆ ಸಿಗುವುದಿಲ್ಲ ಎಂಬ ಬಲವಾದ ನಂಬಿಕೆಯನ್ನು ಬಿತ್ತಿದ್ದಾರೆ. ಆದರೆ ಕಾಂಗ್ರೆಸ್ ರಾಜಕೀಯದ ಮರ್ಮವೇ ಬೇರೆ. ಇಲ್ಲಿ ಎಲ್ಲೋ ಗುರಿಯಿಟ್ಟು ಹೊಡೆದ ಕಲ್ಲು, ಇನ್ನೆಲ್ಲೋ ಹಣ್ಣನ್ನು ಬೀಳಿಸುತ್ತದೆ.
ಲಗೋರಿ : ಮೆಟ್ಟಿಲು ಹತ್ತುವಾಗ ಎಡವಿದರೆ ಬೆಟ್ಟ ಹತ್ತುವುದೂ ಕಷ್ಟ.
- ಪಿ. ತ್ಯಾಗರಾಜ್
thyagarjun@gmail.com