ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಯಾವುದು ಮೌಢ್ಯ?

Vishwanath S
Updated On : 13 Nov 2013, 11:52 am

(1) ರುದ್ರಾಕ್ಷಿ, ತುಳಸೀಮಣಿಗಳು, ಅಥವಾ ಸ್ಪಟಿಕ ಇತ್ಯಾದಿ ಯಾವುದೇ ಹರಳಿನ ಸರಗಳನ್ನು ಧರಿಸುವುದರಿಂದ ನನ್ನ ಶರೀರದ ಮೇಲೆ ಯಾವುದೇ ರೀತಿಯ ದೈವಿಕ ಅಥವಾ ಆರೋಗ್ಯ ಸುಧಾರಣೆಗೆ ಕಾರಣವಾಗುವಂಥ ಜೈವಿಕ ಪರಿಣಾಮವಾದೀತು ಎಂಬ ನಂಬಿಕೆ ನನಗಿಲ್ಲ.  ಸತ್ಯ ಹೇಳಬೇಕೆಂದರೆ, ನನಗೆ ಇವು, ಇಷ್ಟವಾಗುವ ಹಾಗೂ  ಧರಿಸಿದಾಗ ಸಂತೋಷವನ್ನು ನೀಡುವಂಥಾ ಆಭರಣಗಳು. ಯಾವುದೇ ಆಭರಣಗಳನ್ನು ಧರಿಸುವ ಹಕ್ಕು ಮತ್ತು ಸ್ವಾತಂತ್ರ್ಯ ನನಗೆ ಇದೆಯೋ ಇಲ್ಲವೋ? ನನ್ನ ಈ ಹಕ್ಕನ್ನಾಗಲೀ ಸ್ವಾತಂತ್ರ್ಯವನ್ನಾಗಲೀ ಕಾಯಿದೆಯ ಮೂಲಕ ಕಸಿದುಕೊಳ್ಳುವ ಸಂವಿಧಾನದತ್ತ ಅಧಿಕಾರ ಸರ್ಕಾರಕ್ಕೆ ಇದೆಯೇ?
(2) ನಿತ್ಯ ಜೀವನದ ಜಂಜಡಗಳು ಹಾಗೂ  ದುಗುಡ ದುಮ್ಮಾನಗಳಿಂದ ಜನ ಸಾಮಾನ್ಯರು ಕೆಲವು ನಿಮಿಷಗಳ ಕಾಲವಾದರೂ ದೂರವಿದ್ದು  ಖುಶಿಪಡುವಂತೆ ಮಾಡುವ, ಜಾದೂ ಅಥವಾ ಯಕ್ಷಿಣೀ ಪ್ರಯೋಗಗಳನ್ನು  ಶಿಕ್ಷಾರ್ಹ ಮೂಢ ನಂಬಿಕೆಗಳೆಂದು  ಘೋಷಿಸುವುದು ನ್ಯಾಯ ಸಮ್ಮತವೆಂದಾದರೆ,  ಈ ಕ್ರಮವು, ಈ ವಿದ್ಯೆಯನ್ನೇ ತಮ್ಮ ಬದುಕಿಗೆ ಆಧಾರವಾಗಿರುವ ಒಂದು ವೃತ್ತಿಯನ್ನಾಗಿಸಿಕೊಂಡವರ ಮೇಲೆ ಸರ್ಕಾರವು ನಡೆಸುವ ಕಾಯಿದೆಬದ್ಧ ದೌರ್ಜನ್ಯ ಎಂದಾಗದೇ? ಈ ವಿದ್ಯೆಯನ್ನು ಒಂದು  ಹವ್ಯಾಸೀ ಕಲೆಯನ್ನಾಗಿ ಬಳಸುತ್ತಿರುವವರಿಂದ ಕೂಡಾ ಸಮಾಜಕ್ಕೆ ಇದುವರೆಗೆ ಯಾವುದೇ ಹಾನಿಯಾಗಿರುವ ದೃಷ್ಟಾಂತಗಳಿಲ್ಲದಿರುವಾಗ ಇದನ್ನೂ ಮೂಢ ನಂಬಿಕೆಗಳ ಸಾಲಿಗೆ ಸೇರಿಸುವವರ ಪರಮ ಮೌಢ್ಯವನ್ನು ಕಂಡು ನಗಬೇಕೋ ಅಳಬೇಕೋ  ತಿಳಿಯುತ್ತಿಲ್ಲ. ಇದೇ ಜಾದೂ ಅಥವಾ ಯಕ್ಷಿಣೀ ವಿದ್ಯೆಯ ಮೂಲಕವೇ ಜನರನ್ನು ಮೋಸಗೊಳಿಸಿ, ತಮ್ಮನ್ನು ಪವಾಡ ಪುರುಷರೆಂದೂ ದೇವ ಮಾನವರೆಂದೂ ಬಿಂಬಿಸಿಕೊಳ್ಳಲು ಯತ್ನಿಸಿದವರಲ್ಲಿ ಎಷ್ಟು ಜನರನ್ನು ಸರ್ಕಾರವು ಈಗಿರುವ ಕಾನೂನುಗಳ ಅಡಿಯಲ್ಲೇ ತನಿಖೆಗೆ, ದಂಡನೆಗೆ ಗುರಿಮಾಡಿದೆ?   
(3) ಕಡಗ ಅಂದರೆ ಏನು?  ಅದು ಗಾತ್ರದಲ್ಲಿ, ಆಕಾರದಲ್ಲಿ ಸ್ವಲ್ಪ ದೊಡ್ಡದಾದ ಒಂದು ಬಳೆ. ಅದನ್ನು ಯಾರೇ ಧರಿಸಲಿ, ಅದರಿಂದ ಉಳಿದವರಿಗೆ ಆಗುವ ಉಪಟಳವೇನು? ಯಾವತ್ತೋ ಒಂದು ದಿನ ಅಥವಾ ಪ್ರತಿ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂತ್ರಿಮಂಡಲದ ಸಭೆಗೆ ಬರುವಾಗ ತಮ್ಮ ಕೈಗಾಗಲೀ ಕಾಲಿಗಾಗಲೀ ಕಡಗವನ್ನು ಧರಿಸಿ ಬಂದರೆ ಅದರಿಂದ ಅವರ ಸಚಿವ ಸಹೋದ್ಯೋಗಿಗಳಿಗೆ ಅಥವಾ ಅವರ ಆಪ್ತ ಸಹಾಯಕರಿಗೆ, ಕಾರ್ಯದರ್ಶಿಗಳಿಗೆ ಏನಾದರೂ ತೊಂದರೆಯಾಗುತ್ತದೆಯಾ?  ಕಡಗವನ್ನು ನಿಷೇಧಿಸಬೇಕು ಎಂದಾದರೆ, ಎಲ್ಲಾ ಬಗೆಯ ಬಳೆಗಳನ್ನೂ ನಿಷೇಧಿಸಬೇಕಾಗುತ್ತದೆ. ಆಗ, ನಾಡಿನ ಸಮಸ್ತ ನಾರಿಯರೂ ಬಳೆಗಳನ್ನು ಧರಿಸದೇ ಬರಿಗೈಯಲ್ಲಿ ಇರಬೇಕಾಗುತ್ತದೆ.  ಇಂಥಾ ಒಂದು ಕಾನೂನು ಜಾರಿಯಾಗುವುದಾದರೆ, ಮೊದಲು ಮುಖ್ಯ ಮಂತ್ರಿಯವರ, ಎಲ್ಲಾ ಪುರುಷ ಸಚಿವರ-ಶಾಸಕರ, ಮೂಢನಂಬಿಕೆಗಳ ನಿರ್ಮೂಲನೆಗಾಗಿ ನೇಮಕಗೊಂಡ ಪುರುಷ ಮೇಧಾವಿಗಳ ಧರ್ಮಪತ್ನಿಯರು, ಸಹೋದರಿಯರು, ತಾಯಂದಿರು,  ಬಳೆಗಳನ್ನು ಧರಿಸುವ ಸಚಿವೆ-ಶಾಸಕಿಯರು ತಮ್ಮ  ಕೈಗಳಲ್ಲಿರುವ ಎಲ್ಲಾ ಬಳೆಗಳನ್ನೂ ಕಳಚಿಡುವ ಮೂಲಕವೇ  ಶುಭಾರಂಭಗೊಳ್ಳುವುದು ಒಳ್ಳೆಯದು.   
(4) ನಾನು  ಮುಖ್ಯ ಮಂತ್ರಿ  ಸಿದ್ದರಾಮಯ್ಯನವರನ್ನು ಒಬ್ಬ ಒಳ್ಳೆಯ ಹಾಗೂ ವಿವೇಕಶಾಲಿ ವ್ಯಕ್ತಿಯೆಂದು ನಂಬುತ್ತೇನೆ. ನನ್ನ ಈ ನಂಬಿಕೆಗೆ ಸಾಕ್ಷಿ ಅಥವಾ ಪುರಾವೆಗಳನ್ನು ಒದಗಿಸಲು ನನ್ನಿಂದ ಸಾಧ್ಯವಿಲ್ಲ. ನನ್ನ ನಂಬಿಕೆಯು ಸತ್ಯವೆಂದು ನಿರೂಪಿಸಲು ಯಾವ ಆಧಾರವೂ ನನ್ನ ಬಳಿ ಇಲ್ಲ. ನಾನು ನಂಬುವಂತೆ ಅವರು ಇರದೇ ಇದ್ದ ಪಕ್ಷದಲ್ಲಿ, ಅವರ ಬಗ್ಗೆ  ನನಗಿರುವುದು, ನಾನು ಹೊಂದಿರುವ ಹಲವು ಮೂಢ ನಂಬಿಕೆಗಳಲ್ಲಿ ಒಂದು ಎಂದು ಹೇಳಲಡ್ಡಿಯಿಲ್ಲ. ಆದರೆ, ನಾನು ಅವರನ್ನು ಹೀಗೆ ನಂಬುವುದರಿಂದ ಅಂದರೆ ನನ್ನ ಈ ಮೂಢ ನಂಬಿಕೆಯಿಂದ ಸಮಾಜಕ್ಕೆ ಏನೇನೂ ಹಾನಿಯಾಗುತ್ತಿಲ್ಲ.  ಯಾರಿಗೂ ತೊಂದರೆಯಾಗುತ್ತಿಲ್ಲ.  ಆದರೆ ಹೀಗೆ ನಂಬುವುದರಿಂದ ನನ್ನ ಮನಸ್ಸಿಗೆ ಅದೇನೋ ಒಂದು ಬಗೆಯ ಸಾಂತ್ವನ ಸಿಗುತ್ತಿದೆ. ಅಥವಾ ಯಾವುದೇ ಲಾಭವಿಲ್ಲದಿದ್ದರೂ, ನನಗೆ ಸಿದ್ದರಾಮಯ್ಯನವರು ಒಳ್ಳೆಯವರು ಮತ್ತು ವಿವೇಕಶಾಲಿ ಎಂದು ನಂಬಬೇಕು ಅನ್ನಿಸಿ ನಂಬುತ್ತೇನೆ ಅಷ್ಟೆ. ಹೀಗಿರುವಾಗ, ನಾನು ಸಿದ್ದರಾಮಯ್ಯನವರನ್ನು ಈ ರೀತಿ ನಂಬಲೇಬಾರದು, ನಂಬಿದರೆ ನನ್ನನ್ನು ಶಿಕ್ಷೆಗೆ ಗುರಿಪಡಿಸಲು ಅನುಕೂಲವಾಗುವಂತೆ  ಕಾಯಿದೆಯೊಂದನ್ನು ರೂಪಿಸಬೇಕು ಎಂದು, ಸರ್ಕಾರವೇ ರಚಿಸಿದ ಮೇಧಾವಿಗಳ ತಂಡವೊಂದು ಕರ್ನಾಟಕ ಸರ್ಕಾರಕ್ಕೆ  ಸಲಹೆಯನ್ನು ನೀಡಿದರೆ ಹೇಗಿರಬಹುದು? ಅದೂ ಆಗಲಿ.

- ಬೊ. ನಾ. ಕೃಷ್ಣಮೂರ್ತಿ
ಸಾಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments