ಪುರುಷ ಸಿಂಹದೊಂದಿಗೆ ಕಳೆದ ಆ ನಲವತ್ತೆರಡು ನಿಮಿಷ...
ಅಕ್ಟೋಬರ್ 27. ಪಾಟ್ನಾದ ಗಾಂಧಿ ಮೈದಾನದಲ್ಲಿ ಐದು ಲಕ್ಷಕ್ಕೂ ಮಿಕ್ಕಿದ...
ಅಕ್ಟೋಬರ್ 27. ಪಾಟ್ನಾದ ಗಾಂಧಿ ಮೈದಾನದಲ್ಲಿ ಐದು ಲಕ್ಷಕ್ಕೂ ಮಿಕ್ಕಿದ ಜನಸ್ತೋಮ. ಬಾಂಬ್ ಸ್ಫೋಟವನ್ನು ಪಟಾಕಿಗೆ ಸಮನಾಗಿ ತೆಗೆದುಕೊಂಡು ಜಗ್ಗದೆ ಕುಗ್ಗದೆ -ಮೋದಿ ಭಾಷಣಕ್ಕೆ ಕಾಯುತ್ತಿರುವ ಜನಗಳು. ಮಧ್ಯಾಹ್ನ ಒಂದು ಮುಕ್ಕಾಲು ಗಂಟೆಗೆ ಪ್ರಾರಂಭವಾದ ಮೋದಿ ಭಾಷಣ. ಅದು ಭಾಷಣವಲ್ಲ, ಸಿಂಹ ಘರ್ಜನೆ. ಜನಪರ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಪ್ರಹಾರ ಎಲ್ಲವೂ ಅದರಲ್ಲಿ ವ್ಯಕ್ತವಾಗುತ್ತಿದ್ದವು.
ದೇಶದ್ರೋಹಿ ಶಕ್ತಿಗಳೆಲ್ಲವೂ ಸೇರಿ ಮೋದಿಯನ್ನು ಮುಗಿಸಲು ನಡೆಸಿದ ಪ್ರಯತ್ನ ಪರಮಾತ್ಮನ ಕೃಪೆಯಿಂದ ಹುಸಿಯಾಯ್ತು. ನಾಯಕತ್ವ ವಹಿಸುವವನು ಧೀರನೂ, ಶೂರನೂ ಆಗಿರಬೇಕು. ಪ್ರಾಯಶಃ ಇದೇ ಪರಿಸ್ಥಿತಿ ಬೇರೆ ನಾಯಕರಿಗೆ ಒದಗಿದ್ದರೆ ಅವರು ಎಷ್ಟು ರ್ಯಾಲಿಗಳನ್ನು ಮುಂದೂಡುತ್ತಿದ್ದರೋ, ಎಷ್ಟು ವಿಶ್ರಾಂತಿ ಪಡೆಯುತ್ತಿದ್ದರೋ, ಎಷ್ಟು ತೀರ್ಥ ಕ್ಷೇತ್ರಗಳಿಗೆ ಹೋಗಿ ಬರುತ್ತಿದ್ದರೋ ಹೇಳುವುದು ಕಷ್ಟ. ಆದರೆ ಮೋದಿ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಮತ್ತೆ ಬಿಹಾರಕ್ಕೆ ಹೋಗಿ ಸ್ಫೋಟದಲ್ಲಿ ಸಾವಿಗೀಡಾದವರ ಬಂಧುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ಕೊಟ್ಟು ಬಂದಿದ್ದಾರೆ.
ಮೋದಿ ಹಸಿವು , ಬಡತನದ ರುಚಿಯನ್ನುಂಡವರು. ದೇಶಾದ್ಯಂತ ಸಾಮಾನ್ಯ ಕಾರ್ಯಕರ್ತನಾಗಿ ಓಡಾಡಿ ಅನುಭವಿಯಾದವರು. ಕ್ರಮಬದ್ಧ ಜೀವನದಿಂದ ಆತ್ಮದ ತೇಜಸ್ಸನ್ನು ವೃದ್ಧಿಸಿಕೊಂಡವರು. ಇಂಥ ನಾಯಕನನ್ನು ಒಮ್ಮೆ ಖುದ್ದಾಗಿ ಭೇಟಿಯಾಗಬೇಕು, ಅವರೊಡನೆ ಮಾತನಾಡಬೇಕು ಎಂಬ ಆಸೆ 2008 ರಿಂದಲೂ ಗುಪ್ತವಾಗಿಯೇ ನನ್ನೊಳಗೆ ಕೆಲಸ ಮಾಡುತ್ತಿತ್ತು. ಅಂಕಣಕಾರ ಪ್ರತಾಪ್ಸಿಂಹ ಅವರು ಬರೆದ "ನರೇಂದ್ರ ಮೋದಿ, ಯಾರೂ ತುಳಿಯದ ಹಾದಿ" ಪುಸ್ತಕವನ್ನು ಓದಿ, ಮಾಧ್ಯಮಗಳಲ್ಲಿ ಮೋದಿಯವರ ಮಾತುಗಳನ್ನು ಕೇಳಿ ಪ್ರಭಾವಿತನಾಗಿದ್ದೆ. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿಯೇ ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುತ್ತಿಲ್ಲವಲ್ಲ ಎಂದು ನನ್ನ ಮನಸ್ಸು ಚಡಪಡಿಸುತ್ತಿತ್ತು. ಆಡ್ವಾಣಿಯವರ ಹಠ, ಸುತ್ತಮುತ್ತಲಿನವರ ತೆರೆಮರೆಯ ಕುತಂತ್ರ ನೋಡಿ, ಕೇಳಿ ಬೇಸರವಾಗುತ್ತಿತ್ತು. ಆದರೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ಸಿಂಗ್ರ ಸಮಯೋಚಿತ ದೃಢ ನಿರ್ಧಾರದಿಂದ ಅವರನ್ನೀಗ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಈ ಘೋಷಣೆಗೆ ಮುನ್ನವೇ, ಅಂದರೆ ಜುಲೈ 9ರಂದು ಗಾಂಧಿ ನಗರದ ಮುಖ್ಯಮಂತ್ರಿ ಕಚೇರಿಯಲ್ಲಿ ಮೋದಿಯವರನ್ನು ಭೇಟಿಯಾಗುವ ಸುವರ್ಣಾವಕಾಶ ಒದಗಿ ಬಂತು. ಸತತ 2 ತಿಂಗಳ ಪ್ರಯತ್ನದಿಂದ ಈ ಸಮಯ ಒದಗಿ ಬಂದಿತ್ತು. ನನ್ನೊಡನೆ ಇನ್ನೂ ಏಳು ಜನರನ್ನು ಕರೆದುಕೊಂಡು ಹೋಗಿದ್ದೆ. ಅನಿವಾರ್ಯ ಕಾರಣಗಳಿಂದಾಗಿ ಎರಡು ಸಾರಿ ನಿಗದಿಯಾಗಿದ್ದ ಸಮಯ ಮುಂದೂಡಲ್ಪಟ್ಟಿತ್ತು. ಅದೇ ಸಂದರ್ಭಕ್ಕೆ ಉತ್ತರಾಖಂಡದಲ್ಲಿ ಮಳೆಯ ದುರಂತ ಸಂಭವಿಸಿತು. ಸಂತ್ರಸ್ತರಾದವರನ್ನು ಮೋದಿ ಪಾರು ಮಾಡಲು ತೊಡಗಿದ್ದರು. ಇನ್ನೂ ಅನೇಕ ಕಾರಣಗಳಿಂದ ಭೇಟಿಗೆ ಅವಕಾಶ ಸಿಗುವುದು ತಡವಾಗುತ್ತಲೇ ಇತ್ತು. ಸಮಯ ನಿಗದಿ ಪಡಿಸಲು ಬಹಳ ಪ್ರಯತ್ನ ಪಡುತ್ತಿದ್ದ ಬೆಂಗಳೂರಿನ ಆರ್. ಕೃಷ್ಣಮೂರ್ತಿ ಎಂಬುವವರು ಓಡಾಡಿ ದಣಿದಿದ್ದರು. ಅಹಮದಾಬಾದಿನ ಸುಡು ಬೇಸಿಗೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿತ್ತು. ಎರಡು ದಿನ ಅಸ್ವಸ್ಥರಾಗಿ ಮಲಗೇ ಬಿಟ್ಟರು. ಶನಿವಾರ ಜೂನ್ 29ರಂದು ಸಿ.ಎಂ. ಆಫೀಸಿನಿಂದ ಅಧಿಕಾರಿಗಳು ಫೋನ್ ಮಾಡಿ ನಿಮಗೆ ಜುಲೈ 2ರಂದು ಮಧ್ಯಾಹ್ನ 3 ಗಂಟೆಗೆ ಸಮಯ ನಿಗದಿಯಾಗಿದೆ ಎಂದು ತಿಳಿಸಿದಾಗ ನಮಗೆಲ್ಲರಿಗೂ ಅತ್ಯಂತ ಸಂತೋಷವಾಯಿತು. ಆ ದಿನ ಸ್ನಾನ ಪೂಜೆ ಪ್ರಸಾದ ಮುಗಿಸಿ ಒಂದು ಗಂಟೆಗೆ ತಯಾರಾಗಿ ಕುಳಿತೆವು. ಬಾಲ್ಯದಲ್ಲಿ ಸಿದ್ದಗಂಗಾ ಮಠದ ವಿದ್ಯಾರ್ಥಿಯಾಗಿದ್ದು ಈಗ ಅಹಮದಾಬಾದಿನ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಚಂದ್ರಶೇಖರ ಎಂಬುವವರು ನಮ್ಮನ್ನು ಗಾಂಧಿ ನಗರಕ್ಕೆ ಕರೆದುಕೊಂಡು ಹೋಗಲು ವಾಹನ ಸಿದ್ಧ ಮಾಡಿಕೊಂಡು ಬಂದರು. ಮೋದಿಯವರಿಗೆ ಉಡುಗೊರೆಯಾಗಿ ಏನೇನು ಕೊಡಬೇಕೆಂದು ಮೊದಲೇ ಬಹಳ ಆಲೋಚನೆ ಮಾಡಿ ತಯಾರಿ ಮಾಡಿಕೊಂಡಿದ್ದೆವು. ಮನಗುಂಡಿಯ ಶ್ರೀ ಗುರು ಬಸವ ಮಹಾಮನೆಯಲ್ಲಿ ಮಳೆನೀರು ಕೊಯ್ಲಿನಿಂದ ಸಂಗ್ರಹಿಸಿದ ನೀರನ್ನು ಒಂದು ಟಪ್ಪರ್ ವೇರ್ ಕ್ಯಾನಿನಲ್ಲಿ ತುಂಬಿಕೊಂಡು ಒಯ್ದಿದ್ದೆವು. ಬಸವಣ್ಣನವರ ಸುಂದರವಾದ ಒಂದು ಮೂರ್ತಿ, ಉಪವಾಸದ ಸಂದರ್ಭದಲ್ಲಿ ಶಕ್ತಿ ನೀಡಲು ಬಳಸುವ ಸ್ಪಿರುಲಿನಾ ಮಾತ್ರೆಗಳ ಒಂದು ಬಾಟಲು, ಜೇನುತುಪ್ಪ, ನನ್ನ "ಉಪವಾಸ ಏನಿದರ ರಹಸ್ಯ?" ಪುಸ್ತಕದ ಹಿಂದಿ ಮತ್ತು ಇಂಗ್ಲಿಷ್ ಅನುವಾದಿತ ಪ್ರತಿ ಮತ್ತು ಮೋದಿಯವರನ್ನು ಸನ್ಮಾನಿಸಲು ಶಾಲು ಮತ್ತು ಹಾರಗಳನ್ನು ತಯಾರು ಮಾಡಿಕೊಂಡಿದ್ದೆವು.
ಒಂದೂವರೆ ಗಂಟೆಗೆ ಗಾಂಧಿನಗರವನ್ನು ತಲುಪಿದೆವು. ಸಾಮಾನ್ಯವಾಗಿ ಗುಜರಾತ್ನ ಮಳೆಗಾಲ ಪ್ರಾರಂಭವಾಗುವುದು ಜುಲೈ 15ರ ನಂತರ. ದೈವ ಲೀಲೆಯೇನೋ ಎಂಬಂತೆ 2 ನಿಮಿಷ ಮಳೆ ಸುರಿದು ನಮಗೆ ಶುಭ ಸೂಚನೆ ನೀಡಿತು. ಒಂದು ಮುಕ್ಕಾಲು ಗಂಟೆಗೆ ಮುಖ್ಯಮಂತ್ರಿ ಕಚೇರಿಯ ಬಳಿ ಇದ್ದೆವು. ಭದ್ರತೆಯ ಕಾರಣದಿಂದ ಅನೇಕ ರೀತಿಯ ಪರೀಕ್ಷೆಗಳನ್ನು ಮಾಡಿ ನಮ್ಮೆನ್ನು ಒಳಗೆ ಬಿಟ್ಟರು. ಮೋದಿಯವರ ಜೊತೆ ನಮ್ಮ ಸಂದರ್ಶನವನ್ನು ಚಿತ್ರೀಕರಿಸಲು ಇಬ್ಬರು ವಿಡಿಯೋಗ್ರಾಫರ್ಗಳನ್ನು ಕರೆದುಕೊಂಡು ಹೋಗಿದ್ದೆವು. ಆದರೆ ಮೊಬೈಲ್, ವಿಡಿಯೋ, ಕ್ಯಾಮೆರಾ ಯಾವುದನ್ನೂ ಒಳಗೆ ಬಿಡಲಿಲ್ಲ. ಎರಡೂವರೆ ಗಂಟೆ ಸುಮಾರಿಗೆ ನಾವು ಮುಖ್ಯಮಂತ್ರಿ ಕಚೇರಿಯ ಸ್ವಾಗತ ಕೊಠಡಿಯಲ್ಲಿ ಕುಳಿತುಕೊಂಡೆವು.
ಮೂರು ಗಂಟೆಗೆ ಒಳಗಡೆಯಿಂದ ಕರೆ ಬಂತು. ಎಲ್ಲರೂ ಹರ್ಷಚಿತ್ತರಾಗಿ ಕಚೇರಿ ಒಳಗಡೆ ಪ್ರವೇಶಿಸಿದೆವು. ನಮ್ಮನ್ನು ನೋಡುತ್ತಿದ್ದಂತೆ ಮೋದಿಯವರು ತಮ್ಮ ಆಸನದಿಂದ ಎದ್ದು ಬಂದು "ಆಯಿಯೇ ಸ್ವಾಮೀಜಿ ಸ್ವಾಗತ್ ಹೈ" ಎಂದು ಬಾಗಿ ನಮಸ್ಕರಿಸಿ ನಮ್ಮನ್ನೆಲ್ಲ ಕರೆದುಕೊಂಡು ಹೋದರು. ಇಡೀ ವಿಶ್ವವೇ ಗಮನಿಸುವಂಥ ಸಾಧನೆಯನ್ನು ಮಾಡಿದ ಮಹಾ ಸಾಧಕ, ಎದುರಾಳಿಗಳ ಚುಚ್ಚು ನುಡಿಗಳನ್ನು ಹೂವಿನಂತೆ ಸ್ವೀಕರಿಸಿ ದೇಶ ಸೇವೆಗಾಗಿ ಟೊಂಕ ಕಟ್ಟಿ ನಿಂತ ಧೀರ ಸೇನಾನಿ ನಮ್ಮೆಲ್ಲರನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದನ್ನು ಕಂಡು ಹೃದಯ ತುಂಬಿ ಬಂದಿತ್ತು. ಬಸವಣ್ಣನವರ ಮೂರ್ತಿಯನ್ನು ಅವರ ಕೈಗಿಡುತ್ತಾ, "ಇವರು ನಮ್ಮ ಧರ್ಮಗುರುಗಳು, ಒಂದು ರಾಜ್ಯದ ಪ್ರಧಾನ ಮಂತ್ರಿಯೂ ಆಗಿದ್ದರು. ಹಾಗೆಯೇ ತಾವೂ ಕೂಡ ನಮ್ಮ ದೇಶದ ಪ್ರಧಾನಮಂತ್ರಿ ಆಗಬೇಕೆಂಬುದು ನಮ್ಮೆಲ್ಲರ ಹಾರೈಕೆ" ಎಂದು ಹೇಳಿದೆ. ಅದಕ್ಕೆ ಮೋದಿಯವರು "ತಮ್ಮಂಥ ಸಂತರ ಆಶೀರ್ವಾದದಿಂದಲೇ ನಾನು ಈ ಸ್ಥಾನದಲ್ಲಿ ಇದ್ದೇನೆ" ಎಂದರು.
ರಕ್ಷಣಾ ಇಲಾಖೆಯಲ್ಲಿ ಸೇವೆ ಮಾಡಿ ನಿವೃತ್ತರಾಗಿರುವ ಆರ್. ಕೃಷ್ಣಮೂರ್ತಿಯವರು ನನ್ನನ್ನು ಮತ್ತು ಇತರರನ್ನು ಮೋದಿಯವರಿಗೆ ಪರಿಚಯಿಸಿದರು. ನಾನು "ಭ್ರಷ್ಟಾಚಾರ ನಿವಾರಣೆಗಾಗಿ ಬಹಳ ದೊಡ್ಡ ಹೋರಾಟವನ್ನೇ ಕೈಗೊಳ್ಳಬೇಕಾಗಿದೆ. ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲೇ ನಾವೆಲ್ಲರೂ ಇಂದು ಹೋರಾಡಬೇಕಾಗಿದೆ. ಅದಕ್ಕೆ ತಮ್ಮಂತಹವರ ನಾಯಕತ್ವ ಮತ್ತು ಮಾರ್ಗದರ್ಶನ ಬೇಕಾಗಿದೆ" ಎಂದು ಹೇಳಿದೆ. ಅದಕ್ಕವರು "ನಿಮ್ಮಂತಹ ಸಂತರು ದೇಶಸೇವೆಗಾಗಿ ತೊಡಗಿಸಿಕೊಳ್ಳಬೇಕಿದೆ. ಸ್ವಾರ್ಥಿಗಳು ದೇಶವನ್ನು ತುಂಬಾ ಕೆಡಿಸಿ ಬಿಟ್ಟಿದ್ದಾರೆ" ಎಂದು ಹೇಳಿದರು. ನಮ್ಮ ತಂಡದಲ್ಲಿ ಬಂದಿದ್ದ ಶ್ರೀ ಸಿದ್ದಬಸವ ಕಬೀರ ಸ್ವಾಮಿಗಳು ಮೋದಿಯವರ ಸಾಧನೆಯನ್ನು ಶ್ಲಾಘಿಸುತ್ತಾ ನಾನು ಮೋದಿಯವರ ಬಗ್ಗೆ ಇಟ್ಟುಕೊಂಡಿರುವ ಅಭಿಮಾನವನ್ನು ಕುರಿತು ಮಾತನಾಡಿದರು. ತಾವು ಕರ್ನಾಟಕದಲ್ಲಿ ಕಾರ್ಯಕ್ರಮಗಳನ್ನು ಇಟ್ಟುಕೊಂಡಾಗ ಹಾಸನಕ್ಕೂ ಭೇಟಿ ಕೊಡಬೇಕು. ಅಲ್ಲಿಯೂ ಒಂದು ರ್ಯಾಲಿಯನ್ನು ಆಯೋಜಿಸುತ್ತೇವೆ ಎಂದು ಹೇಳಿದೆವು. ನಮ್ಮ ಜೊತೆ ಬಂದಿದ್ದ ಶ್ರೀ ಲಿಂಗಮೂರ್ತಿ ಸ್ವಾಮೀಜಿಗಳು ತಾವು ಹಾಸನವನ್ನು ನೋಡಿದ್ದೀರಾ ಎಂದು ಕೇಳಿದರು. "ನಾವು ಕೂಲಿಕಾರರು. ಇಡೀ ದೇಶವನ್ನೇ ಸುತ್ತಾಡಿದ್ದೇವೆ. ಹಾಸನದ ಬಗ್ಗೆ ತಿಳಿದುಕೊಂಡಿದ್ದೇನೆ" ಎಂದು ಹೇಳಿದರು. ಇದಲ್ಲವೇ ದೇಶಭಕ್ತಿ?
ಸ್ಪಿರುಲಿನಾವನ್ನು ಪರಿಚಯ ಮಾಡುತ್ತಾ ಇದು ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ. ನಮ್ಮ ಮಠದಲ್ಲಿ ಇದನ್ನು ಬೆಳೆಸುತ್ತೇವೆ. ತಾವು ಇದರ ಬಗ್ಗೆ ಗಮನ ಹರಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ನಾನು ಹೇಳಿದೆ. ಅದಕ್ಕೆ ಮೋದಿಯವರು "ನಾವು 1600 ಕಿ.ಮೀ. ಕರಾವಳಿಯನ್ನು ಹೊಂದಿದ್ದೇವೆ. ಈಗಾಗಲೇ ಅನೇಕ ಮಹಿಳಾ ಸಂಘಗಳು ಇದನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ" ಎಂದು ಹೇಳಿದರು.
ಸ್ಪಿರುಲಿನಾ ಎಂದರೆ ಕರ್ನಾಟಕದಲ್ಲಿ ಅನೇಕ ಜನರಿಗೆ ಗೊತ್ತಿಲ್ಲ. ಕೆಲವರಿಗೆ ಗೊತ್ತಿದ್ದರೂ ಅದನ್ನು ಬಳಸುತ್ತಿಲ್ಲ. ನಮ್ಮ ರಾಜಕಾರಣಿಗಳಿಗಂತೂ ಅದರ ಹೆಸರೇ ಗೊತ್ತಿದ್ದಂತೆ ಕಾಣುವುದಿಲ್ಲ. ಕೆಂಪುಕೋಟೆಯ ಮೇಲಿಂದ ಭಾಷಣ ಮಾಡುತ್ತ ನಮ್ಮ ಪ್ರಧಾನಮಂತ್ರಿ "ಅಪೌಷ್ಟಿಕತೆ ಒಂದು ರಾಷ್ಟ್ರೀಯ ಅವಮಾನ" ಎಂದು ಹೇಳಿದ್ದರು. ಅವರೂ ಸಹ ಸ್ಪಿರುಲಿನಾ ಬಗ್ಗೆ ತಿಳಿದುಕೊಂಡಂತೆ ಕಾಣುವುದಿಲ್ಲ. ಆದರೆ ಮೋದಿಯವರು ಅನೇಕ ವರ್ಷಗಳಿಂದ ಇದನ್ನು ಗುಜರಾತ್ನಲ್ಲಿ ಬೆಳೆಸುತ್ತಿದ್ದಾರೆ. ಇದರ ನಡುವೇ ಗುಜರಾತ್ನಲ್ಲಿ ನಾವು ಉಳಿದುಕೊಂಡಿದ್ದು ವ್ಯವಸ್ಥೆಯೆಲ್ಲ ಹೇಗಾಯ್ತು ಎಂಬುದರ ಬಗ್ಗೆ ಮೋದಿ ವಿಚಾರಿಸಿದರು. ಬಿಡುವಿಲ್ಲದ ಕೆಲಸದ ನಡುವೆಯೂ ನಲವತ್ತರೆಡು ನಿಮಿಷ ನಮ್ಮೊಂದಿಗೆ ಯಾವುದೇ ಅವಸರಕ್ಕೆ ಆಸ್ಪದ ಕೊಡದೇ ಮಾತನಾಡಿದರು. ಕೊನೆಗೆ ನೌಕರನೊಬ್ಬನನ್ನು ಕರೆದು ಇವರ ಈ-ಮೇಲ್-ಐಡಿಯನ್ನು ತೆಗೆದುಕೊಂಡು ಫೋಟೋಗಳನ್ನು ಕಳುಹಿಸಿಕೊಡಿ ಎಂದು ಆದೇಶಿಸಿದರು. ನಾವೆಲ್ಲರೂ ಮೇಲೆದ್ದು ಅವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳಿ ಹೊರಟೆವು. ಬರುವಾಗ ಕೃಷ್ಣಮೂರ್ತಿಯವರು ಹೇಳಿದ್ದೇನೆಂದರೆ ಮೋದಿಯವರು ನಡೆದು ಬಂದ ರೀತಿ ಸಿಂಹವನ್ನು ನೆನಪಿಗೆ ತರುತ್ತಿತ್ತು. ಅವರು ಪುರುಷ ಸಿಂಹ. ಆಗ ಅರಿಸ್ಟಾಟಲ್, ಅಲೆಗ್ಸಾಂಡರನಿಗೆ ಹೇಳಿದ ಈ ಮಾತು ನೆನಪಾಯಿತು-
An army of sheeps led by a Lion
Defeats an army of Lions Led by sheep...
ನಮ್ಮ ಸೈನಿಕರು ಸಿಂಹದಂತಹ ಶಕ್ತಿ ಮತ್ತು ಕೆಚ್ಚುಳ್ಳವರೆಂಬುದನ್ನು ಇಡೀ ವಿಶ್ವವೇ ಬಲ್ಲುದು. ಆದರೆ ನಮ್ಮ ರಾಜಕಾರಣಿಗಳು ಅಧಿಕಾರದಾಸೆ, ಹಣದಾಸೆಯಿಂದ ಕುರಿಗಳ ರೀತಿಯಲ್ಲಿ ನಮ್ಮ ಸೈನಿಕರನ್ನು ಬಲಿ ಕೊಡುತ್ತಿದ್ದಾರೆ. ನಮ್ಮ ದೇಶವನ್ನು ಮುನ್ನಡೆಸಲು ಮೋದಿಯಂತಹ ಸಿಂಹದ ಧೀರತ್ವ ಹೊಂದಿದ ನಾಯಕರು ಬೇಕಾಗಿದ್ದಾರೆ. ಇದು ನಿಜವಾದರೆ ನಮ್ಮನ್ನು ಯಾವ ವೈರಿಯೂ ಕೆಣಕಲಾರರು.
- ಶ್ರೀ ಬಸವಾನಂದಸ್ವಾಮಿಗಳು, ಧಾರವಾಡ