ಅಂಕಣಗಳು

ನಿರ್ಮಲ ಗ್ರಾಮ ನಿರ್ಮಾಣಕ್ಕೆ ಹೀಗೊಂದು 'ರಾಕಿಟೆಕ್‌'!

ಆಗಷ್ಟೇ ಪರಿಚಯಗೊಂಡ ರಾಕೇಶ್ ನಿರರ್ಗಳ ಹರಟತೊಡಗಿದ. ಸಿಕ್ಕಾಪಟ್ಟೆ ಉತ್ಸಾಹಿ...

ಆಗಷ್ಟೇ ಪರಿಚಯಗೊಂಡ ರಾಕೇಶ್ ನಿರರ್ಗಳ ಹರಟತೊಡಗಿದ. ಸಿಕ್ಕಾಪಟ್ಟೆ ಉತ್ಸಾಹಿ. ತಲೆಯಲ್ಲಿ ಏನೇನೋ ಕನಸುಗಳನ್ನು ತುಂಬಿಕೊಂಡು ಓಡಾಡುತ್ತಲೇ ಇರುವ ಮೈಸೂರಿನ ಯುವಕ. ಮಾತಿನಂತೆಯೇ ಮನಸ್ಸೂ ನಿಷ್ಕಲ್ಮಶ. ರಾಕೇಶ್ ಹೇಳಿದ ಆ ಘಟನೆ ನನ್ನ ಮನಸ್ಸನ್ನು ಕದಡಿ ಬಿಟ್ಟಿತು.
ನಾಲ್ಕಾರು ತಿಂಗಳ ಹಿಂದೆ. ಅದೊಂದು ಮುಂಜಾವು ರಾಕೇಶ್ ತಾಯಿ ಮನೆಗೆಲಸದವಳ ಗೋಳನ್ನು ಕೇಳುತ್ತ ಮರುಗುತ್ತಿದ್ದರು. ರಾಕೇಶ್ ಕುತೂಹಲ ಕೆರಳಿದ್ದು 'ಬಯಲಕಡೆ' ಎಂಬ ಪದದಿಂದ. ಆಕೆಯ ಮನೆಯಿರುವುದು ಊರ ಹೊರವಲಯದಲ್ಲಿ. ಮನೆಯಲ್ಲಿ ಬೆಳೆದು ನಿಂತ ಮಗಳು ಇದ್ದಾಳೆ, ಶೌಚಾಲಯ ಇಲ್ಲ. ಆ ಊರಲ್ಲಿ ಎಷ್ಟೇ ಅವಸರವಾದರೂ ಮಹಿಳೆಯರು ಕತ್ತಲಾಗುವವರೆಗೆ ಕಾಯುವುದು ಅನಿವಾರ್ಯ. ಅವತ್ತು ಕೆಲಸದವಳ ಮಗಳೂ ಹೀಗೆಯೇ ತಡೆದುಕೊಂಡಿದ್ದಳು. ಆದರೆ ಪ್ರಕೃತಿ ಕರೆಯನ್ನು ಎಷ್ಟು ತಡೆಯಲಾದೀತು? ತುಸು ದೂರದ ಬೆಟ್ಟದತ್ತ ದೌಡಾಯಿಸಿದಳು. ಅಲ್ಲಿ ದನಗಾಹಿಗಳು, ಕಟ್ಟಿಗೆಗೆಂದು ಬಂದವರು ಓಡಾಡುತ್ತಲೇ ಇದ್ದರು. ತುಂಬ ದೂರ ಒಬ್ಬಳೇ ಹೋಗಲು ಭಯ. ಆಕೆ ನಿಂತಲ್ಲೇ ದಿಕ್ಕುಗಾಣದೇ ನಿಂತಳು. ಅದು ನಿಲ್ಲಲಿಲ್ಲ. ಎಲ್ಲರೆದುರಿಗೆ ಅವಮಾನ ತಾಳದೇ ಜುಗುಪ್ಸೆಗೊಳಗಾದಳು... ಕೆಲಸದಾಕೆಯ ಗೋಳಾಟ ಕೊನೆಗೆ ಸರಕಾರದ ಸೌಲಭ್ಯ, ಕೇಳುವವರಿಲ್ಲದ ಬಡವರ ಬದುಕು, ತಮ್ಮ ದುರದೃಷ್ಟ ಇತ್ಯಾದಿಗಳೆಡೆಗೆ ಹೊರಳಿ ಅಮ್ಮನ ಅನುಕಂಪಕ್ಕೆ ಕಾರಣವಾಗಿತ್ತು. ರಾಕೇಶ್ ಯುವಮನಸ್ಸು ಇಂಥದಕ್ಕೆ ಪರಿಹಾರ ಕಲ್ಪಿಸಲೇಬೇಕೆಂದು ತಹತಹಿಸಿತು. ಹುಡುಕಾಟ ಆರಂಭ... ರಾಕೇಶ್ ಕಥೆ ಅಷ್ಟಕ್ಕೇ ನಿಂತಿರಲಿ.
***
ಆತನ ಹೆಸರು ಐಸ್ಯಾಕ್ ಮ್ಯಾಂಟಿಲ್ಲ. ಸರಿ ಸುಮಾರು 60ರ ಆಸುಪಾಸಿನವ. ಕಕ್ಕಸ್ಸು ಗುಂಡಿಯ ಮೇಲೇ ಮನೆಯನ್ನು ಕಟ್ಟಿಕೊಂಡು ವಾಸಿಸುತ್ತಿರುವವ. ಪೆರು ಎಂಬ ಆತಿ ಪುಟ್ಟ ದೇಶದ ಅಭಿವೃದ್ಧಿಯ ದೃಢ ಸಂಕಲ್ಪದ ಹಿಂದೆ ಐಸಾಕ್‌ನಂಥ ನೂರಾರು ಪ್ರಜ್ಞಾವಂತರು ಇದ್ದಾರೆ. ಐಸ್ಯಾಕ್ ವಾಸಿಸುತ್ತಿರುವುದು ಪೆರುವಿನ ಲೋಮಾಸ್ ಡೆ ಜಾಪಲ್ಲಲ್ ಎಂಬ ಅತಿ ಪುಟ್ಟ ನಗರದಲ್ಲಿ. ಪೆರುವಿನ ಬಹುತೇಕ ಕಡೆ ಸರೋವರಗಳು, ಹಿನ್ನೀರು ಆಕ್ರಮಿಸಿಕೊಂಡಿರುವುದರಿಂದ ಐಸ್ಯಾಕ್‌ನಂತೆ ಕಕ್ಕಸ್ಸು ಗುಂಡಿಗಳ ಮೇಲೆ ಮನೆ ಕಟ್ಟಿಕೊಳ್ಳುವುದು ಅಲ್ಲಿ ಅನಿವಾರ್ಯ. ವಾಸ್ತವವನ್ನರಿತು ಅವರು ಎಚ್ಚೆತ್ತುಕೊಂಡಿದ್ದಾರೆ.
ಅಲ್ಲಿನ 2.8 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿಗೆ ಒಳಚರಂಡಿ ವ್ಯವಸ್ಥೆ ಇಲ್ಲ. ಏಷ್ಯಾ, ಆಫ್ರಿಕಾದ ಬಹುತೇಕ ಬಡರಾಷ್ಟ್ರಗಳಂತೆ ಪೆರುವಿಯನ್ನರಿಗೂ ಶುದ್ಧ ನೀರು ಮರೀಚಿಕೆಯಾಗಿದೆ. ಈ ನಿಟ್ಟಿನಲ್ಲಿ ಅವರು ಜಾಗೃತರಾಗಿದ್ದಾರೆ. ವಿಶ್ವಸಂಸ್ಥೆಯ ಮಿಲೇನಿಯಂ ಘೋಷಣೆಯಾದ 2015ರೊಳಗೆ ಎಲ್ಲರಿಗೂ ಶುದ್ಧ ಹಾಗೂ ಸುರಕ್ಷಿತ ನೀರು ಪೂರೈಕೆಯ ಗುರಿ ಮುಟ್ಟುವ ದಿಸೆಯಲ್ಲಿ ಐಸಾಕ್‌ನಂಥವರ ಅಳಿಲು ಸೇವೆ ಪೆರುಗೆ ವಿಶ್ವಾಸವನ್ನಿತ್ತಿದೆ. ದುರದೃಷ್ಟವಾಶತ್ ಪೆರುವಿನ ಎಷ್ಟೋ ಪಟ್ಟು ದೊಡ್ಡ ದೇಶದವರಾದ ನಾವು-ಭಾರತೀಯರಿಗೆ ಶುದ್ಧ ನೀರು, ಪರಿಸರಕ್ಕಾಗಿ ಶೌಚಾಲಯ ಬಳಕೆ ಅನಿವಾರ್ಯ ಎಂದೆನಿಸಿಲ್ಲ. ನಮ್ಮ ಸರಕಾರಗಳ ಅಭಿವೃದ್ಧಿಯ ಮಾನದಂಡ ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು ಇತ್ಯಾದಿಗಳಿಂದ ಸ್ವಚ್ಛ, ಶುದ್ಧ ನೀರು ಪೂರೈಕೆಯಂಥ ಕ್ಷೇತ್ರಗಳಿಗೆ ಸ್ಥಳಾಂತರಗೊಂಡಿಲ್ಲ. ಖಂಡಿತಾ ಇದು ನಮ್ಮ ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿಯ ಕೊರತೆಯ ಪರಿಣಾಮ.
***
ಹೀಗೆ ಆಡಳಿತಗಾರರನ್ನು, ಸರಕಾರವನ್ನು ದೂಷಿಸಲು ಮುಂದಾದರೆ ನಮ್ಮ ಗ್ರಾಮೀಣಾಭಿವೃದ್ಧಿ ಸಚಿವ, ರಾಜ್ಯದ ಕೆಲವೇ ಪ್ರಜ್ಞಾವಂತ ರಾಜಕಾರಣಿಗಳಲ್ಲಿ ಒಬ್ಬರಾದ ಎಚ್ಕೆ ಪಾಟೀಲರು ಬೇಸರಿಸಿಕೊಂಡಾರು. ಒಂದು ರುಪಾಯಿಗೆ ಶುದ್ಧ ಕುಡಿಯುವ ನೀರೊದಗಿಸುವ ಮಹತ್ತರ ಯೋಜನೆ ಅನುಷ್ಠಾನಗೊಳಿಸಿದ ಕ್ರಿಯಾಶೀಲರವರು. ಅಧಿಕಾರದಲ್ಲಿರದ ಕಾಲದಲ್ಲೇ ಉತ್ತರ ಕರ್ನಾಟಕದಲ್ಲಿ ಇಂಥ ಕ್ರಾಂತಿ ಮಾಡಿದ್ದವರು. ಈಗಂತೂ ಅವರ ಬಳಿ ಅಧಿಕಾರವಿದೆ. ಅಂದ ಮೇಲೆ ಸುಮ್ಮನೆ ಹೇಗೆ ಕುಳಿತಾರು? ಅವರ ಆದ್ಯತೆ ಈಗ ಶುದ್ಧ ಹಳ್ಳಿಗಳು. ಹಾಗಂತಲೇ ಪ್ರತಿ ಮನೆಗೊಂದು ಶೌಚಾಲಯವನ್ನು ಕಲ್ಪಿಸಲೇಬೇಕೆಂದು ಕಟಿಬದ್ಧರಾಗಿ ಹೊರಟಿದ್ದಾರೆ. ಅದಕ್ಕಾಗಿ ಅತ್ಯಪೂರ್ವ ಯೋಜನೆ ರೂಪಿಸಿ ಅನುಷ್ಠಾನದ ನಿಟ್ಟಿನಲ್ಲಿ ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ನಿಧನರಾದ, ನನ್ನ ಪತ್ರಿಕೋದ್ಯಮದ ಮೊದಲ ಗುರು, ಸಂಯುಕ್ತ ಕರ್ನಾಟಕದ ಮಾಜಿ ಸಂಪಾದಕ ಎನ್.ವಿ.ಜೋಶಿಯವರ ಅಂತಿಮ ಸಂಸ್ಕಾರದ ಸ್ಥಳದಲ್ಲಿ ಸಚಿವರು ಒಂದಷ್ಟು ಹೊತ್ತು ಮಾತಿಗೆ ಸಿಕ್ಕರು. ನಮ್ಮಿಬ್ಬರ ನಡುವೆ ನಿರೀಕ್ಷಿಸಿದಂತೆಯೇ ಮಾತು ಶುದ್ಧ ಕುಡಿಯುವ ನೀರು, ಗ್ರಾಮೀಣ ನೈರ್ಮಲ್ಯದೆಡೆಗೆ ಹರಿಯಿತು. ರಾಜ್ಯಾದ್ಯಂತ ಹಮ್ಮಿಕೊಂಡಿರುವ ಉದ್ದೇಶಿತ ಶೌಚಾಲಯ ಕ್ರಾಂತಿಯ ಬಗ್ಗೆ ಸಚಿವರು ವಿವರಿಸುತ್ತಿದ್ದರೆ, ಹೆಮ್ಮೆಯ ನೋಟ ಬಿಟ್ಟು ಬೇರೇ ಏನೂ ನನ್ನೊಳಗೆ ಉಳಿದಿರಲಿಲ್ಲ. ರಾಜ್ಯದ ಆಡಳಿತಗಾರರ ಆದ್ಯತೆ ಇದಕ್ಕಿಂತ ಬೇರಿನ್ನೇನೂ ಇರಲು ಸಾಧ್ಯವೇ ಇಲ್ಲ ಎನಿಸಿತು. ಗ್ರಾಮೀಣ ಕರ್ನಾಟಕವನ್ನು ಅದರಲ್ಲೂ ರಾಜ್ಯದ ಉತ್ತರ ಭಾಗವನ್ನು ಬಾಧಿಸುತ್ತಿರುವ ಅತಿ ಗಂಭೀರ ಸಮಸ್ಯೆ ಇದು.
***
ಈ ಸನ್ನಿವೇಶದಲ್ಲಿ ಪಶ್ಚಿಮ ಬಂಗಾಳ ಮೂಲದ ನೀರು ಮತ್ತು ಶೌಚಾಲಯ ವ್ಯವಸ್ಥೆಯ ತಜ್ಞ ಡಾ. ಅಶೋಕ್ ಚಟರ್ಜಿ ಮಾತು ನೆನಪಾಗುತ್ತಿದೆ. ಶೌಚಾಲಯ ಸಮಸ್ಯೆ ಎನ್ನುವುದು ನಿಜವಾಗಿ ನಮ್ಮನ್ನು ಬಾಧಿಸುತ್ತಿರುವ 'ಆಂತರಿಕ ಭಯೋತ್ಪಾದನೆ'ಯ ಪ್ರತಿರೂಪ ಎನ್ನುವುದು ಅವರ ಅಭಿಮತ. ಕರಗಬಲ್ಲ ನೂರಾರು ಘನ ವಸ್ತುಗಳು ನೀರಿನಲ್ಲಿ ಬೆರೆಯುತ್ತಿವೆ. ಪರಿಣಾಮ ಅಪಾರ ಅಣು ಜೀವಿಗಳು ನೀರನ್ನು ಆಕ್ರಮಿಸಿಕೊಂಡಿವೆ. ಇದಲ್ಲದೇ ಅಂತರ್ಜಲದ ಕುಸಿತ ಆರ್ಸೆನಿಕ್, ಫ್ಲೋರೈಡ್ ಅಂಶಗಳೊಂದಿಗೆ ಮಾಲಿನ್ಯವನ್ನು ಹುಟ್ಟು ಹಾಕಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರ ಸಂಕೋಚದ ಸ್ವಭಾವ, ಶೌಚಾಲಯದ ಸಂಸ್ಕೃತಿಯ ಬಗೆಗಿನ ಮಾಹಿತಿ ಹಾಗೂ ಅರಿವಿನ ಕೊರತೆ, ಸೂಕ್ತ ಸ್ಥಳೀಯ ಮನೋಭಾವಕ್ಕೆ ಹೊಂದಾಣಿಕೆಯಾಗದ ತಂತ್ರಜ್ಞಾನಗಳ ಅಳವಡಿಕೆಯಲ್ಲಿನ ನಿರ್ಲಕ್ಷ್ಯ ಇವು ನಮ್ಮ ನೈರ್ಮಲ್ಯ ರಕ್ಷಣೆಯ ಗುರಿ ಮುಟ್ಟಲು ಇರುವ ಬಹು ದೊಡ್ಡ ಅಡ್ಡಿಗಳು. ಗ್ರಾಮೀಣ ಭಾಗದಲ್ಲಿ ಇಂದಿಗೂ ಶೌಚಾಲಯಗಳೆಂದರೆ ಅದು 'ಆರೋಗ್ಯದ ಪ್ರಶ್ನೆ' ಎಂದು ಅನ್ನಿಸಲೇ ಇಲ್ಲ. ಬದಲಾಗಿ ಅದನ್ನು ಖಾಸಗಿತನದ ಹಾಗೂ ರಕ್ಷಣೆಯ ಮನೋಭಾವದಿಂದಲೇ ನೋಡಲಾಗುತ್ತಿದೆ ಎಂಬುದು ಡಾ. ಚಟರ್ಜಿ ಅವರ ಅನುಭವದ ಮಾತು.
ಇದಕ್ಕಿರುವ ಪರಿಹಾರವೆಂದರೆ ನೀರು ಪೂರೈಕೆ ಹಾಗೂ ಶೌಚಾಲಯ, ಒಳಚರಂಡಿ ವ್ಯವಸ್ಥೆಗಳನ್ನು ಪ್ರತ್ಯೇಕಿಸದೇ ಪರಸ್ಪರ ಪೂರಕ ಅಂಶಗಳೆಂಬುದನ್ನು ಸರಕಾರ ಹಾಗೂ ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟು ಜತೆ ಜತೆಯೆ ನಿರ್ವಹಣೆಗೆ ಒಳಪಡುವಂತೆ ಮಾಡಬೇಕು. ಇದರೊಂದಿಗೆ ಇಡೀ ವ್ಯವಸ್ಥೆಯನ್ನು ಮಹಿಳೆಯರ ಕೈಗೆ ಒಪ್ಪಿಸಬೇಕು. ನೀರು ಅಥವಾ ಶುಚಿತ್ವ ಸಮಸ್ಯೆ ಇವೆರಡ ಮೊದಲ ಸಂತ್ರಸ್ತರು ಮಹಿಳೆಯರೇ ಆಗಿರುತ್ತಾರೆಂಬುದು ಚಟರ್ಜಿ ಅವರ ವಾದ. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಎಲ್ಲ ವ್ಯವಸ್ಥೆಗೆ ಮಹಿಳೆಯರನ್ನೇ ಆಯಕಟ್ಟಿನ ಸ್ಥಳಗಳಲ್ಲಿ ನೇಮಿಸಲಾಗಿದೆ. ಅಲ್ಲಿನ ಗಣ್ಯರಿಗೆ, ಜನಪ್ರತಿನಿಧಿಗಳಿಗೆ ಸಹ ಶೌಚಾಲಯಗಳ ಉದ್ಘಾಟನೆ ಮುಜುಗರದ ಸಂಗತಿ ಅಲ್ಲ. ಅಲ್ಲಿನ ಸಚಿವರು ಶೌಚಾಲಯ ಉದ್ಘಾಟಿಸಿ ತೆಗೆಸಿಕೊಂಡ ಫೋಟೊಗಳು ಪತ್ರಿಕೆಗಳಲ್ಲಿ ಅಚ್ಚಾಗುತ್ತವೆ. ತಿರುಚ್ಚಿಯ ಸ್ಲಂಗಳಲ್ಲಿ ಗ್ರಾಮಾಲಯದ ವತಿಯಿಂದ ಶೌಚಾಲಯದ ಕ್ರಾಂತಿಯನ್ನೇ ಮಾಡಲಾಗಿದೆ. ಇಲ್ಲಿನ ಎಲ್ಲ ಶೌಚಾಲಯಗಳ ನಿರ್ವಹಣೆ ಮಹಿಳೆಯರದ್ದೇ. ಭಾರತೀಯರಲ್ಲಿನ ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಶುಚಿತ್ವದ ಕಲ್ಪನೆಯ ಕೊರತೆ.
ನೀರು ಮಾಲಿನ್ಯ ತಡೆ, ಶುಚಿತ್ವ ಶಿಕ್ಷಣದ ಪ್ರಾಥಮಿಕ ಅಂಶವಾಗಬೇಕೆನ್ನುವ ಡಾ. ಚಟರ್ಜಿ, ನಮ್ಮ ಬಹುತೇಕ ಶಾಲೆಗಳಲ್ಲಿ ಶೌಚಾಲಯ ಸೌಲಭ್ಯವೇ ಇಲ್ಲದಿರುವ ಬಗ್ಗೆ ವಿಷಾದಿಸುತ್ತಾರೆ. ಗುಜರಾತ್‌ನಲ್ಲಿ ಶೇ. 80ರಷ್ಟು ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸುತ್ತಿರುವುದಕ್ಕೆ ಶೌಚಾಲಯದ ಕೊರತೆಯೇ ಕಾರಣ. ನಮ್ಮಲ್ಲೂ ಈ ಪ್ರಮಾಣ ಕಡಿಮೆ ಏನಿಲ್ಲ. ಮಧ್ಯಾಹ್ನದ ಬಿಸಿಯೂಟದಂಥ ಯೋಜನೆಗಳಿಗಿಂತ, ಮಕ್ಕಳಿಗೆ ಹಾಲು-ಮೊಟ್ಟೆ ಪೂರೈಸುವ ಮೊದಲು ಶಾಲೆಯ ಎಲ್ಲ ಮಕ್ಕಳಿಗೆ ಶೇ.100ರಷ್ಟು ಸುರಕ್ಷಿತ ನೀರು ಪೂರೈಕೆ ಹಾಗೂ ಶೌಚಾಲಯ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಆಗಬೇಕು. ಶುಚಿತ್ವದ ಶಿಕ್ಷಣ, ನೀರು ಹಾಗೂ ಶೌಚಾಲಯಗಳ ವಿಕೇಂದ್ರೀಕರಣ, ಶೌಚಾಲಯ ಸೌಲಭ್ಯ ಈ ವ್ಯವಸ್ಥೆಯ ಉಸ್ತುವಾರಿ ನಿರ್ವಹಣೆಗೆ ಮಹಿಳೆಯರ ನೇಮಕ ಹಾಗೂ ಶುದ್ಧ ನೀರು ಪೂರೈಕೆ-ಇವುಗಳು ನಮ್ಮ ಆದ್ಯತಾ ಪಟ್ಟಿಯ ಅನುಕ್ರಮಣಿಕೆಯಲ್ಲಿ ಒಳಗೊಳ್ಳಬೇಕು. ಆಗ ಮಾತ್ರ  ಸ್ವಚ್ಛ ಗ್ರಾಮ ನಿಜವಾದ ಅರ್ಥದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯ.
***
ಮತ್ತೆ ರಾಕೇಶ್ (ಮೊಬೈಲ್: 9844945678)ಕಥೆಗೆ ಬರೋಣ. ರಾಜ್ಯದಲ್ಲಿ 'ಶೌಚಾಲಯ' ಸುದ್ದಿ ಮಾಡುತ್ತಿರುವ ಸನ್ನಿವೇಶದಲ್ಲಿ ಮೈಸೂರಿನ ಯುವಕ ರಾಕೇಶ್ ಕಾಳಜಿ ಗಮನ ಸೆಳೆಯುತ್ತದೆ.
ಮನೆಗೆಲಸದವಳ ಅಳಲು ರಾಕೇಶ್ ಮನಸ್ಸು ತಟ್ಟುತ್ತದೆ. ಮನಸ್ಸು ಶೌಚಾಲಯದ ಸುತ್ತಲೇ ಗಿರಕಿ ಹೊಡೆಯುತ್ತದೆ. ಕಡಿಮೆ ವೆಚ್ಚದಲ್ಲಿ, ಅತ್ಯಲ್ಪ ಅವಧಿಯಲ್ಲಿ ನಿರ್ಮಿಸಬಹುದಾದ, ಸುಲಭ ಬಳಕೆ ಮತ್ತು ಎಲ್ಲೆಂದರಲ್ಲಿ ಸಾಗಿಸಲು ಸಾಧ್ಯವಿರುವಂಥ ಶೌಚಾಲಯಗಳ ನಿರ್ಮಾಣ ಸಾಧ್ಯವಿಲ್ಲವೆ ಎನ್ನುವ ಕುರಿತು ಅವರ ಚಿಂತನೆ ಆರಂಭವಾಗುತ್ತದೆ. ಸತತ ಆಲೋಚನೆ, ಒಂದಷ್ಟು ವಿನ್ಯಾಸಗಳ ಪ್ರಯೋಗದ ಬಳಿಕ ಅಂತಿಮ ರೂಪ ಪಡೆಯುತ್ತದೆ ನೋಡಿ 'ರಾಕಿಟೆಕ್‌'!
ರಾಕಿಟೆಕ್ ಕಿಟ್‌ನಲ್ಲಿ ಶೌಚಾಲಯಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳು ಸಿಗುತ್ತವೆ. ಕೇವಲ 30 ನಿಮಿಷದಲ್ಲಿ ಶೌಚಾಲಯವನ್ನು ಸಿದ್ಧಪಡಿಸಬಹುದು. ಇದನ್ನು ಜೋಡಿಸಲು ಒಬ್ಬ ಸಾಕು. ನಿರ್ಮಾಣಗೊಂಡ ತತ್‌ಕ್ಷಣದಿಂದ ಉಪಯೋಗಕ್ಕೆ ಲಭ್ಯ. ಗೋಡೆಯಾಗಿ ಜಿಐ ಶೀಟ್ ಬಳಸುವುದರಿಂದ ಬಳಕೆ ಮಾಡಿರುವ ಕಬ್ಬಿಣಗಳು ಬೇಗನೆ ತುಕ್ಕು ಹಿಡಿಯುವುದಿಲ್ಲ. ಸುಮಾರು 20 ರಿಂದ 25 ವರ್ಷ ಬಳಸಬಹುದಾದ ಸಿಂಪಲ್ ಶೌಚಾಲಯ.
ಇದಕ್ಕೆ ತಳಹದಿ ಬೆಡ್ಡಿಂಗ್ ಬೇಕೆಂದಿಲ್ಲ. ಗೋಡೆ ಕಟ್ಟುವ ಅಗತ್ಯವಿಲ್ಲ. ಬಾಗಿಲು, ರೂಫ್ ಎಲ್ಲವೂ ರಾಕಿಟೆಕ್‌ನಲ್ಲೇ ಲಭ್ಯ.
ಇಂಥ ಸರಳ ಶೌಚಾಲಯದ ಕಿಟ್‌ಗೆ ತಗಲುವ ವೆಚ್ಚವಾದರೂ ಎಷ್ಟು ಗೊತ್ತೆ? ಕೇವಲ 6,700 ರುಪಾಯಿ! ಒಂದು ತಿಂಗಳಲ್ಲಿ ಇಂಥ 50 ಸಾವಿರ ಶೌಚಾಲಯಗಳನ್ನು ನಿರ್ಮಿಸಬಹುದು ಎನ್ನುವುದು ರಾಕೇಶ್ ಅಭಿಪ್ರಾಯ. ಮೈಸೂರು ಜಿಲ್ಲಾ ಪಂಚಾಯಿತಿ ಈ 'ರಾಕಿಟೆಕ್‌' ಕಿಟ್ ಬಳಸಲು ಒಪ್ಪಿಗೆ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 50 ಸಾವಿರ ಇಂಥ ಶೌಚಾಲಯ ನಿರ್ಮಿಸಲು ಉದ್ದೇಶಿಸಿದೆ. ಸದ್ಯ ಶೌಚಾಲಯ ನಿರ್ಮಾಣಕ್ಕೆ ಸಿಗುತ್ತಿರುವ ಸರ್ಕಾರದ ಸಹಾಯಧನ 9200 ರುಪಾಯಿ. ಅದನ್ನು ವಿವಿಧ ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಪ್ರತಿ ಹಂತದಲ್ಲಿಯೂ ಸಂಬಂಧಿಸಿದ ಅಧಿಕಾರಿ, ನೌಕರರ ಕೈ ಬೆಚ್ಚಗೆ ಮಾಡುವುದು ಅನಿವಾರ್ಯ. ಎಲ್ಲಾ ಕಳೆದು ಫಲಾನುಭವಿಗೆ ಸಿಗುವ ಮೊತ್ತದಲ್ಲಿ ಶೌಚಾಲಯದ ಪಾಯ ಕಟ್ಟಲೂ ಸಾಧ್ಯ ಆಗುವುದಿಲ್ಲ. ಇದರಿಂದ ದಾಖಲೆಗಳ ಪ್ರಕಾರ ಯೋಜನೆ ಎಲ್ಲರನ್ನೂ ತಲುಪಿದರೂ ಶೌಚಾಲಯಗಳು ಮಾತ್ರ ನಿರ್ಮಾಣವಾಗುವುದಿಲ್ಲ, ಮೂಲ ಸಮಸ್ಯೆ ಹಾಗೆಯೇ ಉಳಿಯುತ್ತದೆ. 'ರಾಕಿಟೆಕ್‌'ನಲ್ಲಿ ಮಿಗಿಲಾಗಿ ಒಂದೇ ಹಂತದಲ್ಲಿ ಶೌಚಾಲಯ ಸಿದ್ಧವಾಗುವುದರಿಂದ ವಿವಿಧ ಹಂತಗಳಲ್ಲಿ ಸಹಾಯಧನ ಬಿಡುಗಡೆ ಮಾಡುವ ಅಗತ್ಯವಿಲ್ಲ. ಫಲಾನುಭವಿ ಪೂರ್ಣ ಮೊತ್ತವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕಿಟ್ ವೆಚ್ಚ ಹೊರತುಪಡಿಸಿ ಉಳಿದ ಹಣವನ್ನು ಶೌಚಾಲಯದ ಗುಂಡಿ ತೋಡಲು ಬಳಸಿಕೊಳ್ಳಬಹುದು. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದರೆ ಎಚ್ಕೆ ಪಾಟೀಲರ ಕನಸು ನನಸಾಗಲು ಹೆಚ್ಚು ದಿನ ಬೇಕಿಲ್ಲ.
***
2015ರಲ್ಲಿನ ವಿಶ್ವಸಂಸ್ಥೆಯ ಮಿಲೇನಿಯಂ ಗುರಿ ತಲುಪಲು ಸಾಧ್ಯವೆನ್ನುವುದು ಚಟರ್ಜಿಯವರ ಖಚಿತ ನುಡಿ. ಈಗ ನೀವೇ ಹೇಳಿ. ಈ ನಿಟ್ಟಿನಲ್ಲಿ ಪೆರುವೆಂಬ ಪುಟ್ಟನಾಡಿನ ಹಿರಿಯ ಜೀವ ಐಸಾಕ್, ನಮ್ಮ ರಾಕೇಶ್ ಅಂಥವರು ಮಾದರಿಯಾಗುತ್ತಾರೆ ಅಲ್ಲವೇ?


- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!