ಈ ವ್ಯಕ್ತಿ ಯಾರು? ನರೇಂದ್ರ ಮೋದಿ?? ನಾನು ಬಹಳ ವರ್ಷಗಳ ಕಾಲ ಈ ವ್ಯಕ್ತಿಗೆ ಕಿಂಚಿತ್ತು ಗಮನವನ್ನೂ ಕೊಡಲೊಪ್ಪಲಿಲ್ಲ. ಇಷ್ಟಕ್ಕೂ ನಾನು ನೂರಕ್ಕೆ ನೂರರಷ್ಟು ಗಾಂಧೀ ವಾದದಲ್ಲಿ ನಂಬಿಕೆ ಇಟ್ಟವ! Ummm.... ಅಂದರೆ ಮಹಾತ್ಮ ಗಾಂಧಿ ಮತ್ತು ಅದರ ಅನುಯಾಯಿ ಕಾಂಗ್ರೆಸ್‌ನಲ್ಲಿ!! ಆದರೆ ಕೊನೆ ಕೊನೆಗೆ ನರೇಂದ್ರ ಮೋದಿ ಎಂಬ ಅವತಾರದತ್ತ ನನ್ನನ್ನು ವಸ್ತುಶಃ ತಳ್ಳಿದ್ದೇ ಈ ಮಾಧ್ಯಮಗಳು. ಮೋದಿಯ ಕ್ರಿಮಿನಲ್ ಹಿನ್ನೆಲೆ, ಮುನ್ನೆಲೆ ಬಗ್ಗೆ ಓದಲಾರಂಭಿಸಿದೆ. ಅಧಿಕಾರದ ಕುರ್ಚಿಯನ್ನು ಉಳಿಸಿಕೊಳ್ಳಲು ಏನನ್ನೂ ಮಾಡಬಲ್ಲ ರಾಜಕಾರಣಿಗಳಲ್ಲಿ ಈ ಮೋದಿಯೂ ಒಬ್ಬ ಎಂದು ನಾನು ಅವರನ್ನು ಅಲಕ್ಷಿಸಲು, ನಿರ್ಲಕ್ಷಿಸಲು ಪ್ರಯತ್ನಿಸಿದರೂ ಮಾಧ್ಯಮಗಳು ಮಾತ್ರ ಅವರನ್ನು ಮತ್ತೆ ಮತ್ತೆ ಎಳೆದು ತರುತ್ತಿದ್ದವು. ಹೀಗೆ ನಾನು ಮಾಧ್ಯಮ ದೊರೆಗಳ ಅಬ್ಬರಕ್ಕೆ ಶರಣಾಗಲೇಬೇಕಾಯಿತು. ನನಗೆ ಬೇರೆ ದಾರಿಯೂ ಇರಲಿಲ್ಲ. ಈ ಮೋದಿ ಯಾರು, ಆತನ ನಿಜರೂಪ ಏನು ಎಂಬುದನ್ನು ತಿಳಿದುಕೊಳ್ಳಲೇಬೇಕಾಯಿತು. ಈತ ನನ್ನ ದೇಶವನ್ನು ಅಸ್ಥಿರಗೊಳಿಸಲು, ಭಾರತದ ಮುಸ್ಲಿಮರನ್ನೆಲ್ಲ ಕೊಲ್ಲಲು ಹೊರಟಿದ್ದಾನೋ ಏನೋ?! ಪ್ರತಿದಿನ ಸುದ್ದಿ ಪತ್ರಿಕೆಗಳಲ್ಲಿ ಬರುವುದೆಲ್ಲ ನಿಜವೆಂದು ಸಂಪೂರ್ಣವಾಗಿ ನಂಬುವಷ್ಟು ಮುಗ್ಧ ನಾನೇನಲ್ಲ. ಹಾಗಾಗಿ, ಸತ್ಯಾಸತ್ಯತೆಯನ್ನು ಪರಾಮರ್ಶಿಸಲು ನನ್ನದೇ ಆದ ತಪಾಸಣೆಯನ್ನು ಮಾಡಲು ಸಮಯವನ್ನು ಮೀಸಲಿಡಬೇಕಾದ ಅಗತ್ಯವಿತ್ತು.
ಆದರೂ...
ಈ ಮನುಷ್ಯನನ್ನು ಕ್ರಿಮಿನಲ್ ಎಂದು ತೀರ್ಪು ನೀಡುವುದಕ್ಕೆ ನನ್ನ ಮನಸ್ಸು, ಬುದ್ಧಿ ಮಾತ್ರ ಅದಾಗಲೇ ಸಂಪೂರ್ಣವಾಗಿ ಸಿದ್ಧವಾಗಿದ್ದವು, ತವಕಿಸುತ್ತಿದ್ದವು! ನನ್ನ ತಲೆಯಲ್ಲಾಗಲೇ ಈತನನ್ನು ಪೈಶಾಚಿಕ ಹತ್ಯೆ, ಕೊಲೆಗಳ ಜತೆ ಜೋಡಿಸಿದ್ದೆ. ಅಷ್ಟು ಮಾತ್ರವಲ್ಲ, ಹೊಟ್ಟೆಯಲ್ಲಿ ಮಗುವನ್ನು ತುಂಬಿಕೊಂಡಿರುವ ಮಹಿಳೆಯನ್ನೂ ಕೊಲ್ಲಬಲ್ಲ ನಿರ್ದಯಿ ರಾಜಕಾರಣಿ ಎಂಬುದನ್ನೂ ನಾನಾಗಲೇ ಗಮನಿಸಿದ್ದೆ. ನನ್ನ ತಲೆಯಲ್ಲಿ ಇವುಗಳೇ ತುಂಬಿದ್ದವು. ಗುಜರಾತ್‌ನಲ್ಲಿದ್ದ ನನ್ನ ಸೋದರ ಸಂಬಂಧಿಗೆ ಕರೆ ಮಾಡಿದೆ, ಅಂಥ ಭೀಕರ ರಾಜ್ಯ ಹಾಗೂ ಪೈಶಾಚಿಕ ವ್ಯಕ್ತಿಯಿಂದ ಆತನನ್ನು ಹೊರತರಲು ಹಾಗೂ ಆತನಿಗೆ ರಕ್ಷಣೆ ನೀಡುವುದಕ್ಕಾಗಿ! ದಿನ ಉರುಳಿದಂತೆ ಗುಜರಾತ್ ವಿಧಾನಸಭೆ ಚುನಾವಣೆ ಬಂತು. ಮೋದಿ ಎಂಬ ಸೈತಾನನನ್ನು ಮತದಾರರು ಮನೆಗೆ ಕಳುಹಿಸುತ್ತಾರೆ ಎಂದು ನನ್ನ ಮನಸ್ಸಿಗೆ ಖಾತ್ರಿಯಾಯಿತು. ಆದರೆ ನಾನು ಕಾದೇ ಕಾದೆ... ನನಗೆ ಆಶ್ಚರ್ಯ, ಆಘಾತವುಂಟು ಮಾಡುವಂತೆ ಆತ ಹಿಂದೆಂದಿಗಿಂತಲೂ ಹೆಚ್ಚು ಸೀಟು ಗೆದ್ದು ಬಿಟ್ಟ! ಆಗ ನಾನು ಸಂಪೂರ್ಣವಾಗಿ ಮೋದಿಯನ್ನು ಆವಾಹಿಸಿಕೊಂಡೆ. ಆ ವ್ಯಕ್ತಿ ಇನ್ನೂ ಮೂರು ಬಾರಿ ಗೆದ್ದ!! ಹಾಗಾದರೆ ಗುಜರಾತ್ ರಾಜ್ಯ ಮೂರ್ಖರಿಂದಲೇ ತುಂಬಿ ತುಳುಕುತ್ತಿದೆಯೇ? ಬಹುಶಃ ಆ ರಾಜ್ಯ ಅನಕ್ಷರಸ್ಥರಿಂದ ತುಂಬಿರಬೇಕು, ಭಾರತದ ಅತ್ಯಂತ ಬಡರಾಜ್ಯ ಅದಾಗಿರಬೇಕು ಎಂದುಕೊಂಡೆ. "ಇಲ್ಲಾ ಮೈ ಡಿಯರ್! ಭಾರತದ ಅರ್ಥವ್ಯವಸ್ಥೆಗೆ ಅತಿಹೆಚ್ಚು ಕೊಡುಗೆ ನೀಡುವುದೇ ಗುಜರಾತಿಗಳು" ಎಂದರು ನನ್ನ ಅಂಕಲ್. ಓಹ್, ಅದ್ಹೇಗೆ ಸಾಧ್ಯ?! ಅಂಕಲ್, ಏನು ನಡೆಯುತ್ತಿದೆ ಎಂದು ದಯವಿಟ್ಟು ಹೇಳುತ್ತೀರಾ? ಅದೇ ಸೈತಾನ ಸಿಎಂನನ್ನು ಪ್ರಧಾನಿಯಾಗಬೇಕೆನ್ನುತ್ತಿದ್ದಾರೆ ರತನ್ ಟಾಟಾ, ಲಕ್ಷ್ಮೀ ಮಿತ್ತಲ್, ಅಂಬಾನಿ ಸಹೋದರರು! ನಾನು ನಿಜಕ್ಕೂ ಗೊಂದಲದ ಗೂಡಾಗಿ ಬಿಟ್ಟಿದ್ದೆ. ಈ ಉದ್ಯಮಿಗಳಿಗೇನಾಗಿದೆ? ಅವರಿಗೂ ಲಂಚ ತಿನ್ನಿಸಿದ್ದಾರಾ ಮೋದಿ? ಮತ್ತೆ ಗೊಂದಲ! ಈ ದೇಶದಲ್ಲಿ ಏನು ಬೇಕಾದರೂ ಆಗಬಹುದು, ಇಷ್ಟಕ್ಕೂ ಹಿಂದೊಮ್ಮೆ 250 ಕೋಟಿ ಹಗರಣದ 14 ಸಾಕ್ಷಿಗಳು ರಾತ್ರಿ ಬೆಳಗಾಗುವಷ್ಟರಲ್ಲಿ ಕಣ್ಮರೆಯಾಗಿ ಬಿಟ್ಟಿದ್ದರು, ಹೆಚ್ಚಿನವರು ರೈಲು ಹಳಿಗಳ ಮೇಲೆ ಸತ್ತು ಬಿದ್ದಿದ್ದರು!
ಆ ಬಳಿಕ...
ಗುಜರಾತ್ ಬಗ್ಗೆ ವರ್ಣರಂಜಿತ ಮಾತುಗಳು ನನ್ನ ಕಿವಿಗೆ ಬೀಳಲಾರಂಭಿಸಿದವು. ಅತ್ಯುತ್ತಮ ರಸ್ತೆಗಳು, ಅತಿ ಹೆಚ್ಚು ಬಂಡವಾಳ ಹೂಡಿಕೆ, ಅತ್ಯಂತ ಸುಧಾರಿತ ಹಾಗೂ ಪ್ರಗತಿಪರ ಕೃಷಿ ಚಟುವಟಿಕೆ, ಅತಿ ಹೆಚ್ಚು ಮಹಿಳಾ ಸಶಕ್ತೀಕರಣ, ಮಕ್ಕಳ ಶಿಕ್ಷಣದ ಬಗ್ಗೆ ಗಮನ, ಅತಿ ಹೆಚ್ಚು ಹಾಲು ಉತ್ಪಾದನೆ, ಅತಿ ಹೆಚ್ಚು ವಿದ್ಯುತ್ ಉತ್ಪಾದನೆ... ಹೀಗೆ ಪಟ್ಟಿ ಬೆಳೆಯತೊಡಗಿತು...
ಹೇ, ನಿಲ್ಲು...
ಇದೆಲ್ಲ ಈಗ ಎಲ್ಲಿಂದ ಬಂತು? ಕ್ರಿಮಿನಲ್ ಪ್ರಕರಣದ ಬಗ್ಗೆ ನನಗೆ ಮನವರಿಕೆಯಾಗುವವರೆಗೂ ಯಾವುದೇ ಹೊಗಳಿಕೆಯನ್ನು ಕೇಳಿಸಿಕೊಳ್ಳಲು ನಾನು ಸಿದ್ಧವಿಲ್ಲ ಎಂದೆ. ಹಿಟ್ಲರ್ ಕೂಡ ಜರ್ಮನಿಗೆ ಒಳ್ಳೆಯದ್ದನ್ನೇ ಮಾಡಿದ್ದ, ಹಾಗಂತ ಅವನು ಅಮಾಯಕರನ್ನು ಕೊಲ್ಲಲಿಲ್ಲವೆ? ನರೇಂದ್ರ ಮೋದಿಯನ್ನು ಸುಮ್ಮನೆ ಬಿಡಬಾರದು ಎನ್ನುತ್ತಾ, ಆತ ನಿಜಕ್ಕೂ ಮಾಡಿದ್ದೇನು ಎಂಬುದನ್ನು ತಿಳಿದುಕೊಳ್ಳಲು ದಾಖಲೆಗಳ ಮೊರೆಹೋದೆ. ಮಾಧ್ಯಮಗಳು ನಮ್ಮ ಗಮನವನ್ನು ಒಂದೇ ಕಡೆ ನೆಡಲು ಪ್ರಯತ್ನಿಸುತ್ತಿದ್ದ ಏಕಮಾತ್ರ ವಿಷಯ ಗೋಧ್ರಾ! ಅದೇನದು? ಹಿಂಸಾಚಾರವೇ? ಬಹುಶಃ ಸಾವಿರಕ್ಕೂ ಹೆಚ್ಚು ನಮ್ಮ ಮುಸಲ್ಮಾನ ಸಹೋದರರನ್ನು ಮೋದಿ ಸ್ವತಃ ಕೊಂದುಹಾಕಿರಬಹುದು! ನೀನು ಅಂದುಕೊಂಡ ಹಾಗೇ ಅಲ್ಲ ಎನ್ನುತ್ತಾ, ಮೋದಿ ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದರು ಎಂದರು ನನ್ನ ಅಂಕಲ್. ಮತ್ತೆ ಕುತೂಹಲದಿಂದ ಕೇಳಿದೆ- "ಅವರು ಯಾರನ್ನಾದರೂ ಕೊಂದರೆ?". "ಇಲ್ಲ, ಗುಜರಾತ್ ಹಿಂಸಾಚಾರದಲ್ಲಿ ಮೋದಿ ಭಾಗಿಯಾಗಿದ್ದರು ಎಂಬುದಕ್ಕೆ ಇದುವರೆಗೂ ಯಾವುದೇ ಆಧಾರಗಳು ಸಿಕ್ಕಿಲ್ಲ". ಓಹ್, ಮೋದಿ ಯಾರನ್ನೂ ಕೊಂದಿಲ್ಲ ಎಂದು ಹೇಳುತ್ತಿದ್ದೀರಾ? ನನಗಿನ್ನೂ ನಿರ್ದಿಷ್ಟವಾಗಿ ಸ್ಪಷ್ಟವಾಗಬೇಕು. ಹೊಟ್ಟೆಯಲ್ಲಿ ಮಗುವನ್ನು ತುಂಬಿಕೊಂಡಿದ್ದ ಮಹಿಳೆಯನ್ನು ಮೋದಿ ಕೊಂದರಾ? ಎಂದು ಕೇಳಿದೆ. "ಅದೊಂದು ಹುಸಿ ಆರೋಪವೆಂಬುದು ಈ ವರ್ಷ ತಾನೇ ಕೋರ್ಟ್ ಮುಂದೆ ಬಹಿರಂಗವಾಗಿದೆ!" ಎಂದರು ಅಂಕಲ್. ಓ ದೇವರೇ, ಇದು ನಿಜಕ್ಕೂ ನಿಜವಾ? ಹಾಗಾಗಿ ಮೋದಿಯನ್ನು ಬಲಿಪಶು ಮಾಡಲಾಯಿತೆ? "ತನಿಖೆಯಲ್ಲಿ ಪತ್ತೆಯಾದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಇಂಥದ್ದೊಂದು ಕಟ್ಟುಕಥೆಯ ಸೃಷ್ಟಿಕರ್ತೆ" ಎಂಬ ಉತ್ತರ ಬಂತು.
ಓಕೆ ಮಿಸ್ಟರ್ ಮೋದಿ!
ಆದರೂ ನೀವು ಆರೋಪಗಳಿಂದ ಪಲಾಯನ ಮಾಡಲು ಸಾಧ್ಯವಿಲ್ಲ. ಬಹುಶಃ ಈ ದೇಶಕ್ಕೆ ಆಸ್ತಿಯಾಗಬಲ್ಲಂಥ ಅಥವಾ ಭವ್ಯ ಭವಿಷ್ಯ ಹೊಂದಿದ್ದ ಯುವಕರಾದ ಇಶ್ರತ್ ಜಹಾನ್ ಹಾಗೂ ಜಾವೆದ್‌ರನ್ನು ಕೊಲ್ಲುವಂತೆ ಆದೇಶ ನೀಡಿದ್ದೇಕೆ? ಹಾಡಹಗಲೇ ನಿಮ್ಮ ಪೋಲೀಸರು ಹೇಗೆತಾನೇ ಕೊಂದರು? ಎಂಬ ಪ್ರಶ್ನೆಗಳು ಒಡಮೂಡಿದವು. ಈ ವಿಷಯದಲ್ಲಾದರೂ ಮೋದಿ ಕೊಲೆಗಡುಕ ಎಂಬ ತೀರ್ಮಾನಕ್ಕೆ ಬರಲು ಸಾಕಷ್ಟು ಆಧಾರಗಳು ಸಿಕ್ಕಿದ್ದರಿಂದ ನನಗೆ ತುಂಬ ಖುಷಿಯಾಯಿತು. ಬಹಳ ನಿಶ್ಚಿಂತೆಯಿಂದ ಒಂದಷ್ಟು ಕಾಲ ನಿದ್ರೆ ಮಾಡಿದೆ. ಆದರೆ ಆ ಕನಸೂ ಹುಸಿಯಾಯಿತು. ಅಂತಾರಾಷ್ಟ್ರೀಯ ಕುಖ್ಯಾತಿ ಗಳಿಸಿದ ಭಯೋತ್ಪಾದನೆ ಪಿತೂರಿದಾರ ಡೆವಿಡ್ ಹೆಡ್ಲಿ, "ಇಶ್ರತ್ ಹಾಗೂ ಜಾವೆದ್ 'ಫಿದಾಯೀನ್'ಗಳು (ಆತ್ಮಹತ್ಯಾ ದಾಳಿಕೋರರು) ಮತ್ತು ಅವರನ್ನು ಮೋದಿಯನ್ನು ಕೊಲ್ಲಲು ಕಳುಹಿಸಲಾಗಿತ್ತು" ಎಂದುಬಿಟ್ಟ!
ಆದರೂ ಮೋದಿಯನ್ನು ಹೇಗೆ ಬಿಟ್ಟುಬಿಟ್ಟರು!! ಏಕೆ ಏಕೆ ಏಕೆ?! ಎಂದುಕೊಂಡೆ...
ಈ ಮಧ್ಯೆ, ಹಗಲೂ ರಾತ್ರಿಯೆನ್ನದೆ ಗುಜರಾತ್‌ನಲ್ಲಿ ಏಕೆ ಕೋಮು ಹಿಂಸಾಚಾರಗಳು ನಡೆಯುತ್ತವೆ ಎಂಬುದನ್ನು ತಡಕಾಡಲು ಪ್ರಯತ್ನಿಸಿದೆ. ಅದಿರಲಿ, ಭಾರತದಲ್ಲಿ ನಡೆದಿದ್ದು ಗುಜರಾತ್ ಹಿಂಸಾಚಾರವೊಂದೆಯೇ? ತಡಕಾಡುವಾಗ ತಿಳಿಯಿತು, 58 ಮಂದಿಯನ್ನು ರೈಲಿನಲ್ಲಿ ಸುಟ್ಟು ಹಾಕಿದ್ದರಿಂದಲೇ ಗುಜರಾತ್ ಹಿಂಸಾಚಾರ ನಡೆದಿತ್ತು. ಶಾಂತಂ ಪಾಪಂ! ನಾನೊಬ್ಬ "ಸೆಕ್ಯುಲರ್" ಆಗಿ ಅಂಥದ್ದನ್ನೆಲ್ಲಾ ಓದಬಾರದು ಎಂದು ಕೂಡಲೇ ವೆಬ್‌ಸೈಟ್ ಕ್ಲೋಸ್ ಮಾಡಿದೆ! 1947ರಿಂದೀಚೆಗೆ ಇಂಥ ನೂರಾರು ಕೋಮು ಹಿಂಸಾಚಾರಗಳು ನಡೆದಿದ್ದವು. ಸುಮಾರು 4 ಸಾವಿರಕ್ಕೂ ಅಮಾಯಕ ಜನರು ಪ್ರಾಣ ಕಳೆದುಕೊಂಡ ಸಿಖ್ ಹತ್ಯಾಕಾಂಡ ಕೂಡಾ ನಡೆದಿತ್ತು. ಆ ಘಟನೆಯಲ್ಲೂ ಒಬ್ಬ ಮೋದಿ ಇರುವುದನ್ನು ನಾವಿನ್ನೂ ಕಂಡು ಹುಡುಕಲಾಗಿಲ್ಲ! ಮಾಧ್ಯಮಗಳೇಕೆ ಸಿಖ್ ಹತ್ಯಾಕಾಂಡದ ಬೆನ್ನು ಬಿದ್ದಿಲ್ಲ?! ನನ್ನ ಪ್ರಶ್ನೆಗಳಿಗೆ ಯಾವ ಉತ್ತರವೂ ಇರಲಿಲ್ಲ. ಅಷ್ಟೇಕೆ, ಬೋಫೋರ್ಸ್, ಆ್ಯಂಡರ್‌ಸನ್, ಕಾಮನ್ವೆಲ್ತ್‌ಗಳಿಗೂ ಯಾವ ಉತ್ತರವಿರಲಿಲ್ಲ!!
ಇಷ್ಟಾಗಿಯೂ ನನಗೆ ಖುಷಿಯಾಗಲಿಲ್ಲ. ಏಕೆಂದರೆ ಮೋದಿಯಲ್ಲೊಬ್ಬ ಕೊಲೆಗಡುಕನನ್ನು ಹುಡುಕುವ ನನ್ನ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಕೊನೆಗೆ ನಾನು ಸೊಹ್ರಾಬುದ್ದೀನ್ ಶೇಖ್ ಎಂಬ 'ಹುತಾತ್ಮ'ನ ವಿಷಯ ತೆಗೆದುಕೊಂಡೆ. ಓಹೋ, ಇಲ್ಲಿ ಸಿಕ್ಕಿಬಿದ್ದರು ಮೋದಿ! ನಿಮ್ಮ ಗೃಹ ಸಚಿವನೇ ಸಿಕ್ಕಿಬಿದ್ದಿದ್ದಾನೆ ನೋಡಿ! ಕನಿಷ್ಠ ಈ ವಿಷಯದಲ್ಲಾದರೂ ಅಮಿತ್ ಶಾ ನುಣುಚಿಕೊಳ್ಳಲು ಸಾಧ್ಯವಿರಲಿಲ್ಲ. ಜತೆಗೆ ಸುಪ್ರೀಂಕೋರ್ಟ್ ಕೂಡಾ ತನಿಖೆಗೆ ಆದೇಶ ನೀಡಿತ್ತು. ಮತ್ತೆ ಅಂಕಲ್ ಮೊರೆಹೋದೆ, ಸುಪ್ರೀಂಕೋರ್ಟ್ ತನಿಖೆ ಏಕೆ?! "ನೋ ಮೈ ಡಿಯರ್, ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದೆ. ಏಕೆಂದರೆ 5 ರಾಜ್ಯಗಳಿಗೆ ಬೇಕಾದ ಭಯೋತ್ಪಾದಕ ಈ ಸೊಹ್ರಾಬುದ್ದೀನ್" ಝಿಛಡಿ? ಏನೂ?! ಅವನೊಬ್ಬ ಭಯೋತ್ಪಾದಕನಾ? ನನಗೆ ಆಶ್ಚರ್ಯ, ದಿಗ್ಭ್ರಮೆ ಎರಡೂ ಆದವು . ಮೋದಿಯನ್ನು ಕ್ರಿಮಿನಲ್ ಎಂದು ನಿರೂಪಿಸಲು ಇದ್ದ ಕೊನೆ ಅವಕಾಶ ಇಲ್ಲವಾಯಿತು. ಕೂಡಲೇ ಕಂಪ್ಯೂಟರ್ ಮುಂದೆ ಕುಳಿತು, ಸರ್ಚ್ ಮಾಡಲಾರಂಭಿಸಿದೆ. ಸೊಹ್ರಾಬುದ್ದೀನ್ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಹಾಗೂ ಕುಖ್ಯಾತ ಭಯೋತ್ಪಾದಕ ಎಂಬುದು ಅಮೆರಿಕ, ಭಾರತ ಹಾಗೂ ವಿಶ್ವಸಂಸ್ಥೆಯ ಮಾಹಿತಿ ಮೂಲಕ ತಿಳಿದು ಬಂತು. ಒಮ್ಮೆ 40 ಎಕೆ-47 ರೈಫಲ್‌ಗಳ ಜತೆ ಸಿಕ್ಕಿಬಿದ್ದಿದ್ದ! ಅವನನ್ನು ಪೋಲೀಸರು ಎನ್ಕೌಂಟರ್‌ನಲ್ಲಿ ಕೊಂದುಹಾಕಿದ್ದರು.
ಇದೇನೆ ಇರಲಿ...
ಕಳೆದ ಎಂಟು ವರ್ಷಗಳಿಂದ ಮೋದಿಯನ್ನು ಕ್ರಿಮಿನಲ್ ಎಂದು ಚಿತ್ರಿಸುತ್ತಾ ಬಂದಿದ್ದ ಮಾಧ್ಯಮಗಳಿಗೆ ಅದು ನಿಜವೆಂದು ನನಗೆ ಮನವರಿಕೆ ಮಾಡಿಕೊಡಲು ಮಾತ್ರ ಸಾಧ್ಯವಾಗಿರಲಿಲ್ಲ, ಅದರಲ್ಲಿ ವಿಫಲವಾಗಿದ್ದವು. ಮೋದಿಯಲ್ಲೊಬ್ಬ ಕ್ರಿಮಿನಲ್‌ನನ್ನು ಶೋಧಿಸುವ ನನ್ನ ಪ್ರಯತ್ನವನ್ನೂ ಹೆಚ್ಚೂ ಕಡಿಮೆ ಕೈಬಿಡುತ್ತಿದ್ದೇನೆ. ಆದರೆ ಯಾವ ಮಾಧ್ಯಮಗಳು ಮೋದಿಯನ್ನು ಇದುವರೆಗೂ ಕ್ರಿಮಿನಲ್ ಎಂದು ಚಿತ್ರಿಸುತ್ತಾ ಬಂದವೋ ಆ ಮಾಧ್ಯಮಗಳಿಗೆ ಮೋದಿಯೊಬ್ಬ ಕ್ರಿಮಿನಲ್ ಹಾಗೂ ಈ ದೇಶದ ಪ್ರಧಾನಿಯಾಗಲು ಅರ್ಹರಲ್ಲ ಎಂದು ಮನವರಿಕೆ ಮಾಡಿಕೊಡಬೇಕಾದ ಹೊಣೆಗಾರಿಕೆ ಮಾತ್ರ ಖಂಡಿತಾ ಇದೆ.
ಇಷ್ಟಕ್ಕೂ ನಾನೇಕೆ ಮೋದಿಯನ್ನು ದ್ವೇಷಿಸಬೇಕು ಎಂಬುದನ್ನು ಈ ದೇಶದ ಮಾಧ್ಯಮ ನನಗೆ ಹೇಳಬೇಕಲ್ಲವೆ?
***
ಇಂಥದ್ದೊಂದು ಬ್ಲಾಗ್ (Indian by heart) 2010, ಆಗಸ್ಟ್ 11ರಂದು ಪೋಸ್ಟ್ ಆಯಿತು. ಹುಸಿ ಪ್ರಚಾರಾಂದೋಲನದ ಭರಾಟೆಗೆ ಸಿಲುಕಿ ಎಂಟು ವರ್ಷಗಳ ಕಾಲ ಸತ್ಯಾಸತ್ಯತೆಯನ್ನು ಪರಾಮರ್ಶಿಸದೇ ನರೇಂದ್ರ ಮೋದಿಯವರನ್ನು ದ್ವೇಷಿಸಿದ್ದ ಬ್ಲಾಗಿಗರೊಬ್ಬರು ಕೊನೆಗೂ ಕಣ್ಣು ತೆರೆದಿದ್ದರು. ನನ್ನನ್ನು ದಾರಿತಪ್ಪಿಸಿದ ಮಾಧ್ಯಮಗಳೀಗ ಉತ್ತರ ಕೊಡಬೇಕು ಎಂದು ಹೊಣೆಗಾರಿಕೆಯನ್ನು ಕೇಳಿದ್ದರು. ದುರದೃಷ್ಟವಶಾತ್, ಇದು ಒಬ್ಬಿಬ್ಬರ ಕಥೆಯಲ್ಲ. ಅತಿ ಬುದ್ಧಿವಂತರು, ವಿದ್ಯಾವಂತರೂ ಇಂಥದ್ದೇ ಭಾವನೆಯನ್ನು ಹೊಂದಿದ್ದರು. ಇಷ್ಟಕ್ಕೂ ಇಡೀ ಭಾರತೀಯ ಮಾಧ್ಯಮ ವೃಂದವೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕಟಕಟೆಯಲ್ಲಿ ನಿಲ್ಲಿಸಲು, ಸಾಕ್ಷ್ಯವನ್ನೇ ಕೊಡದೇ ಫಾಸಿಗೆ ಕಳುಹಿಸಲು ಸತತ ಪ್ರಯತ್ನ ಮಾಡುತ್ತಾ ಬಂದಿತ್ತು!! ಈ ರೀತಿಯ ಒಂದು Disinformation campaign ಅಥವಾ ಹುಸಿ ಪ್ರಚಾರಾಂದೋಲನವನ್ನು ಮಾಧ್ಯಮಗಳು, ಮಂದಿ ಎಲ್ಲರೂ ಮಾಡುತ್ತಾ ಬಂದಿದ್ದರು. ಅಷ್ಟೇ ಅಲ್ಲ, "ಪರ್ಝಾನಿಯಾ", "ಫಿರಾಕ್" ಮುಂತಾದ ಚಲನಚಿತ್ರಗಳು, "ದಿ ಫೈನಲ್ ಸಲೂಷನ್"ನಂತಹ ಸಾಕ್ಷ್ಯಚಿತ್ರಗಳು ನಿರ್ಮಾಣಗೊಂಡಿದ್ದವು!``The Gujarat Carnage", "The Black Book of Gujarat'' ಮತ್ತು ``Gujarat, the Making of a Tragedy'' ಇನ್ನೂ ಮುಂತಾದ ಪುಸ್ತಕಗಳು ಬಂದಿದ್ದವು. ಕೊನೆ ಕೊನೆಗೆ ಯಾವ ರೀತಿಯ ಪರಿಸ್ಥಿತಿ ಸೃಷ್ಟಿಯಾಯಿತೆಂದರೆ ಗುಜರಾತ್ ಹಿಂಸಾಚಾರದ ಬಗ್ಗೆ ಮಾತನಾಡುವುದೆಂದರೆ ಗುಜರಾತಿ ಹಿಂದುಗಳು ಹಾಗೂ ನರೇಂದ್ರ ಮೋದಿಯನ್ನು ಬೈಯ್ಯದೆ ಬದುಕುಳಿಯುವಂತಿರಲಿಲ್ಲ! ಗುಜರಾತ್ ಹಿಂಸಾಚಾರದ ಬಗ್ಗೆ ನಡೆಯುತ್ತಿರುವ ಪ್ರಚಾರಾಂದೋಲನವನ್ನು ತುಸು ಪ್ರಶ್ನಿಸಿದರೆ, ಅನುಮಾನಿಸಿದರೆ ಉಳಿಗಾಲವಿಲ್ಲದಂತಾಯಿತು!! ಅಷ್ಟೇಕೆ, ನರೇಂದ್ರ ಮೋದಿಯವರ ಜತೆ ಕುಳಿತು ಮಾತನಾಡಿದರೂ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೂ, ಕನಿಷ್ಠ ಅವರನ್ನು ಭೇಟಿಯಾಗಿ ಹಸ್ತಲಾಘವ ಕೊಟ್ಟರೂ ಹೀನಾತಿಹೀನ ಪದಗಳಲ್ಲಿ ನಿಂದನೆಗೆ ಒಳಗಾಗಬೇಕಾಯಿತು. ಗುಜರಾತ್‌ನ ಯಾವೊಂದು ವಿಚಾರಗಳ ಜತೆಯೂ ಗುರುತಿಸಿಕೊಳ್ಳುವುದು ಸೆಕ್ಯುಲರ್ ಸಿದ್ಧಾಂತಕ್ಕೆ ಬಗೆದ ದ್ರೋಹವೆಂಬಂತೆ ಕಾಣತೊಡಗಿದರು. ಗುಜರಾತ್ ಪ್ರವಾಸೋದ್ಯಮದ ಜಾಹೀರಾತಿಗೆ ರಾಯಭಾರಿಯಾದ ಬಾಲಿವುಡ್‌ನ ಜೀವಂತ ದಂತಕಥೆ ಅಮಿತಾಭ್ ಬಚ್ಚನ್ ಕೂಡ ತೀವ್ರ ನಿಂದನೆಗೆ ಗುರಿಯಾದರು. ನರೇಂದ್ರ ಮೋದಿಯವರನ್ನು ಭೇಟಿಯಾದ, ಅವರ ಅಭಿವೃದ್ಧಿ ಕಾರ್ಯದ ಬಗ್ಗೆ ಒಂದೊಳ್ಳೆ ಮಾತನಾಡಿದ ಏಕಮಾತ್ರ ಕಾರಣಕ್ಕೆ ಇತರ ಖ್ಯಾತ ಬಾಲಿವುಡ್ ನಟರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್, ಐಶ್ವರ್ಯಾ ರೈ ಕೂಡ ತೀವ್ರ ಟೀಕೆಗೆ, ದೂಷಣೆಗೆ ಗುರಿಯಾದರು. ಗುಜರಾತ್ ಹಿಂಸಾಚಾರದ ಬಗ್ಗೆ, ಅದರಲ್ಲಿ ಮೋದಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ, ಅದರ ಪ್ರಾರಂಭಿಕ ವರದಿಗಳು ಹೊರಬೀಳುವವರೆಗೂ ಜನ ನರೇಂದ್ರ ಮೋದಿಯವರ ಬಗ್ಗೆ ಸಾರ್ವಜನಿಕವಾಗಿ ಸಣ್ಣ ಮೆಚ್ಚುಗೆ ವ್ಯಕ್ತಪಡಿಸುವುದಕ್ಕೂ ಅಂಜುತ್ತಿದ್ದರು, ಹೆದರುತ್ತಿದ್ದರು. ಅಣಕವೆಂದರೆ ಕಳ್ಳರು, ಸುಳ್ಳರು, ಲಫಂಗರು, ಮಾಜಿ ಕೊಲೆಗಡುಕರೂ ಕೂಡ ಮೋದಿಯವರನ್ನು ದೂಷಣೆ ಮಾಡಿ ತಾವು ಸುಭಗರೆಂದು ಸಾಬೀತು ಮಾಡಿಕೊಳ್ಳಲು ಯತ್ನಿಸಿದರು ಹಾಗೂ ಅವರ ಯೋಗ್ಯಾಯೋಗ್ಯತೆಯನ್ನು ಯಾರೂ ಪ್ರಶ್ನಿಸಲಿಲ್ಲ. ಇಂಥದ್ದರ ಮಧ್ಯೆ, 2009ರಲ್ಲಿ ನರೇಂದ್ರ ಮೋದಿಯವರನ್ನು ಸ್ವತಃ ಮುಸ್ಲಿಮರಾಗಿದ್ದರೂ ಶ್ಲಾಘಿಸುವ ಧೈರ್ಯ ತೋರಿದ ಕೇರಳದ ಕಣ್ಣೂರಿನ ಸಿಪಿಐ(ಎಂ) ಸಂಸದ ಎ.ಪಿ. ಅಬ್ದುಲ್ಲಾ ಕುಟ್ಟಿಯನ್ನು ಒಂದೇ ವಾರದಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿಬಿಟ್ಟರು. ಆನಂತರವೂ ತುಸು ಧೈರ್ಯ ಮಾಡಿದ ಗುಜರಾತಿಯೇ ಆದ ಮೌಲಾನಾ ಗುಲಾಂ ಮೊಹಮದ್ ವಾಸ್ತಾನ್ವಿ ಮೋದಿಯನ್ನು ಹೊಗಳಿದ ಮರು ಗಳಿಗೆಯಲ್ಲೇ ದಾರುಲ್ ಉಲೂಮ್ ದೇವಬಂದ್‌ನ ಉಪಕುಲಪತಿ ಸ್ಥಾನಕ್ಕೆ ಕಂಟಕ ತಂದುಕೊಂಡರು "Those who aren't investing in Gujarat are stupid '' ಎಂದ ಖ್ಯಾತ ಉದ್ಯಮಿ ರತನ್ ಟಾಟಾ ಅವರ ನಿಷ್ಠೆಯನ್ನೇ ಪ್ರಶ್ನಿಸಲಾಯಿತು! 2012, ಏಪ್ರಿಲ್‌ನಲ್ಲಿ ಭ್ರಷ್ಟಾಚಾರದ ವಿರುದ್ಧದ ರಾಷ್ಟ್ರವ್ಯಾಪಿ ಆಂದೋಲನದ ಅಂಗವಾಗಿ ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಮೊಟ್ಟಮೊದಲಿಗೆ ಉಪವಾಸ ಕುಳಿತಿದ್ದ ಅಣ್ಣಾ ಹಜಾರೆ, ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡುವಾಗ ಬಿಹಾರದ ಜತೆ ಗುಜರಾತನ್ನು ಹೊಗಳಿದಾಗ ಅಂಥ ಅಣ್ಣನ ಮೇಲೆಯೇ ಹೇಗೆ ಎರಗಿದರೆಂದರೆ ಮರುದಿನವೇ ಅಣ್ಣಾ ಹಜಾರೆ ಮೋದಿಯನ್ನು ಟೀಕಿಸಿ ಹೇಳಿಕೆ ನೀಡಬೇಕಾಗಿ ಬಂತು.
ನರೇಂದ್ರ ಮೋದಿಯವರ ಮೇಲಿನ ದ್ವೇಷದ ಪ್ರಚಾರಾಂದೋಲನದ ತೀವ್ರತೆ ಹಾಗಿತ್ತು ನೋಡಿ....!!
ಹಾಗಾದರೆ ನರೇಂದ್ರ ಮೋದಿ ನಿಜಕ್ಕೂ ಮುಸ್ಲಿಂ ವಿರೋಧಿಯೇ ಅವರು ತಮ್ಮ ಎದೆಯಲ್ಲಿ ಮುಸ್ಲಿಂ ದ್ವೇಷವನ್ನು ತುಂಬಿಕೊಂಡಿದ್ದಾರೆಯೇ? ಗುಜರಾತ್ ಹಿಂಸಾಚಾರಕ್ಕೆ ಮೋದಿಯವರೇ ಕಾರಣವೇ ಅಥವಾ ಅದರಲ್ಲಿ ಮೋದಿಯವರ ಪಾತ್ರವೂ ಇದೆಯೇ? ಅದು State Orchestrated ಅಥವಾ ಸರ್ಕಾರಿ ಪ್ರಾಯೋಜಿತ ಅಥವಾ ಸರ್ಕಾರವೇ ಖುದ್ದು ನಡೆಸಿದ ಹಿಂಸಾಚಾರವೇ? ಗುಜರಾತ್ ಹಿಂಸಾಚಾರವನ್ನು ತಡೆಗಟ್ಟಲು ಮೋದಿ ಏನನ್ನೂ ಮಾಡಲಿಲ್ಲವೆ? ಸೇನೆಯನ್ನು ಕರೆಸುವಲ್ಲಿ ವಿಳಂಬ ಮಾಡಿದರೇ? ನಿಜ ಏನಿರಬಹುದು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ "ಮೋದಿ, ಮುಸ್ಲಿಂ ವಿರೋಧಿಯೇ?" ಎಂಬ ಪುಸ್ತಕವನ್ನು ಹೊರತಂದಿದ್ದೇನೆ. ಓದಿ..
- ಪ್ರತಾಪ್ ಸಿಂಹ
mepratap@gmail.com