ಅಂಕಣಗಳು

'ನಿಡು'ಸುಯ್ದವರಿಗೆ ನೀವು 'ಮಿಡಿ'ದಿದ್ದೆಷ್ಟು ಎಂಬುದು ಗೊತ್ತಿಲ್ಲವೇ?

ನಿಡುಮಾಮಿಡಿ ಸ್ವಾಮೀಜಿಗಳೇ, ನೀವು ಊರಿಗೆಲ್ಲ ಪಾಠ ಹೇಳುತ್ತೀರಿ...

ನಿಡುಮಾಮಿಡಿ ಸ್ವಾಮೀಜಿಗಳೇ, ನೀವು ಊರಿಗೆಲ್ಲ ಪಾಠ ಹೇಳುತ್ತೀರಿ. ಮೂಢನಂಬಿಕೆ ಪ್ರತಿಬಂಧಕ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸುತ್ತೀರಿ. ಪಾದಪೂಜೆ ಅತ್ಯಂತ ಅನಾರೋಗ್ಯಕರ ಎನ್ನುತ್ತೀರಿ. ಯಾವುದೇ ಸಂಗತಿಯಿರಲಿ ಸಮಾಜದ ಅಭಿಪ್ರಾಯದ ವಿರುದ್ಧವಾಗಿ ಮಾತನಾಡುತ್ತೀರಿ. ಸಮಾಜಕ್ಕೆ ಬುದ್ಧಿವಾದ ಹೇಳುತ್ತೀರಿ. ಇಂದು ಸಮಾಜ ತನಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ತೀರ್ಮಾನಿಸುವಷ್ಟು ವಿವೇಚನಾಯುತವಾಗಿದೆ. ಅದನ್ನು ನೀವು ಗಮನಿಸಿದಂತಿಲ್ಲ. ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಿದಂತೆಲ್ಲ ತನಗೆ ಬುದ್ಧಿ ಹೇಳುವವರು ಅಷ್ಟೇ ಅರ್ಹರಾಗಿರಬೇಕು ಎಂದು ಸಮಾಜ ಬಯಸುತ್ತಿದೆ.
ಹೀಗಾಗಿ ಸಮಾಜಕ್ಕೆ ಬುದ್ಧಿ ಹೇಳುವ ಸ್ಥಾನವನ್ನು ನೀವು ಪಡೆದುಕೊಂಡಿದ್ದೀರಾ? ಅಷ್ಟು ದೊಡ್ಡ ಅರ್ಹತೆ ನಿಮಗಿದೆಯಾ ಎಂಬುದು ಕೂಡ ಚರ್ಚಿತ ವಿಷಯ. ಅಂತಹ ಅರ್ಹತೆ ನಿಮಗಿದೆ ಎಂಬುದೇ ಆದರೆ ಈ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಮಠದ ವೃದ್ಧಾಶ್ರಮದಲ್ಲಿದ್ದ ನಂಜುಂಡಪ್ಪ ಎಂಬ 90ವರ್ಷದ ವೃದ್ಧರು ನಿಮ್ಮ ಕಾಲಿಗೆ ಬೀಳುತ್ತಿದ್ದುದನ್ನು ಮತ್ತು ನೀವು ಗಾಂಭೀರ್ಯದಿಂದ ಆಶೀರ್ವದಿಸುತ್ತಿದ್ದುದನ್ನು ಮರೆತಿದ್ದೀರಾ? ನೀವು ಮರೆತಿದ್ದರೆ ಹೇಳಿ, ಆ ಫೋಟೊ ಕಳುಹಿಸಿಕೊಡುತ್ತೇನೆ. ಆಗಲಾದರೂ ನೆನಪಾಗಬಹುದು.
ಟಿವಿ ಕಾರ್ಯಕ್ರಮಗಳಲ್ಲಿ ಬಹಳ ಸಂಭಾವಿತರಂತೆ ಮಾತನಾಡುತ್ತೀರಲ್ಲಾ, ನೀವೇನು ಕಡಿಮೆ ಕಿಲಾಡಿಗಳೇ? ಮೇಲ್ಜಾತಿಯವರು ಕೆಳಜಾತಿಯವರ ಮೇಲೆ ಶೋಷಣೆ ಮಾಡುತ್ತಾರೆ ಎನ್ನುತ್ತೀರಲ್ಲಾ. ನೀವು ಮಾಡುತ್ತಿರುವುದೇನು? ಶೋಷಣೆ ಅಲ್ಲವೇ? ನೀವು ಲಿಂಗಾಯತರಾಗಿ ಅಂದರೆ ಮೇಲ್ಜಾತಿಯವರಾಗಿ ಹಿಂದುಳಿದವರ ಮಠದ ಸ್ವಾಮೀಜಿಗಳಾಗಿ ಅವರು ಕಾಲಿಗೆ ಬೀಳುವಾಗ ಆಶೀರ್ವಾದ ಮಾಡುತ್ತ ಕೂರುವುದು ಶೋಷಣೆ ಎಂದು ನಿಮಗೆ ಅನ್ನಿಸಿಲ್ಲವೇ? ಹಿಂದುಳಿದವರ ಮಠವೊಂದಕ್ಕೆ ಮೇಲ್ಜಾತಿಯವರೇ ಸ್ವಾಮೀಜಿಯಾಗಿ, ಹಿಂದುಳಿದ ವ್ಯಕ್ತಿಯೊಬ್ಬ ಸ್ವಾಮೀಜಿಯಾಗಬಹುದಾದ ಅವಕಾಶ ತಪ್ಪಿಸುವುದು ಶೋಷಣೆಯೇ ಎಂಬುದು ನನ್ನ ಭಾವನೆ. ಮೇಲ್ಜಾತಿಯವರಾಗಿ ಹಿಂದುಳಿದ ಮಠದ ಸ್ವಾಮೀಜಿಯಾಗಿದ್ದೂ ಅಲ್ಲದೇ, ಆ ಮಠವನ್ನು ನಾಶ ಮಾಡಿದ್ದನ್ನು ನೀವು ಅವರ ಮೇಲೆ ಮಾಡಿದ ದೌರ್ಜನ್ಯ ಎಂದು ನಾನು ಹೇಳುತ್ತೇನೆ.
ನೀವು ಮಠ ಸೇರುವಾಗ ಅಡ್ಡಪಲ್ಲಕ್ಕಿ ಉತ್ಸವ, ಪಾದಪೂಜೆಗಳನ್ನು ವಿರೋಧಿಸಿದ್ದಿರಿ. ಅವುಗಳೆಲ್ಲ ಇರಬಾರದು ಎಂಬ ಶರತ್ತು ವಿಧಿಸಿಯೇ ನೀವು ಮಠಕ್ಕೆ ಬಂದಿರಿ. ಮೆಚ್ಚಬೇಕಾದ್ದೇ. ಆದರೆ ಮಠ ಸೇರಿ ಸ್ವಾಮೀಜಿಯಾದ ಮೇಲೆ ನೀವು ಮಠವನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿರಿ? ಮಠವನ್ನು ಎಷ್ಟು ಅಭಿವೃದ್ಧಿ ಮಾಡಿದಿರಿ? ಆ ಮೂಲಕ ಮಠದ ಭಕ್ತರಿಗೆ, ನಂಬಿಕೊಂಡಿರುವವರಿಗೆ ಏನು ಸಹಾಯ ಮಾಡಿದಿರಿ?
ಬಾಗೇಪಲ್ಲಿ ತಾಲೂಕಿನ ಗೂಳೂರಿನಲ್ಲಿದ್ದ ನಿಡುಮಾಮಿಡಿ ಮಠ ನೀವು ಸೇರಿದಾಗ ಹೇಗಿತ್ತು? ಈಗ ಹೇಗಿದೆ ಸ್ವಾಮೀಜಿಗಳೇ? ಅಂತಹ ಮಠ ಪಾಳುಬಿದ್ದ ಸ್ಥಿತಿಗೆ ತಲುಪಲು ಮಠಾಧಿಪತಿಯಾಗಿ ಅಂದರೆ ಅದರ ಮುಖ್ಯಸ್ಥರಾಗಿ ನೀವೇ ಹೊಣೆಯಲ್ಲವೇ? ಮಠದ ಲಕ್ಷಾಂತರ ರುಪಾಯಿ ಹಾಳುಬೀಳಲು, ಆ ಮೂಲಕ ಮಠಕ್ಕೆ ನಷ್ಟವಾಗಲು ಮಠಾಧಿಪತಿಯಾಗಿ ನೀವೇ ನೇರ ಹೊಣೆಯಲ್ಲವೇ? ಭಕ್ತರ ದುಡ್ಡನ್ನು ದುರ್ಬಳಕೆ ಮಾಡಿಕೊಂಡ ಅಥವಾ ಸರಿಯಾಗಿ ಬಳಸದೇ ಮಠಕ್ಕೆ ನಷ್ಟ ಉಂಟುಮಾಡಿದ ಕಾರಣಕ್ಕೆ ನಿಮ್ಮ ಮೇಲೂ ಪ್ರಕರಣ ದಾಖಲಿಸಬಹುದೇ? ಹಳ್ಳಿಯಲ್ಲಿರುವ ಮಠವನ್ನು ಹಾಳುಗೆಡವಿ, ಬೆಂಗಳೂರಿನ ಶಾಖಾಮಠವನ್ನು ಹೈಟೆಕ್ ರೂಪದಲ್ಲಿ ಕಟ್ಟಿಸಿದ್ದು ಯಾವ ಸಿದ್ಧಾಂತ ಎಂಬ ಪ್ರಶ್ನೆಯೂ ಕಾಡುತ್ತದೆ.
ಬೇರೆ ಮಠಗಳ ಬಗ್ಗೆ, ಜನರ ಮೂಢನಂಬಿಕೆಗಳ ಬಗ್ಗೆ, ಇನ್ನೊಂದು ಮಠದ ಅಡ್ಡಪಲ್ಲಕ್ಕಿ ಉತ್ಸವದ ಬಗ್ಗೆ ಮಾತನಾಡುವ ಮೊದಲು ಇಂತಹ ಸಂಗತಿಗಳ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು.
ಇದೆಲ್ಲ ಹೋಗಲಿ. ಇತ್ತೀಚೆಗೆ ನಿಧಿ ಇದೆ ಎಂದು ನಿಮ್ಮ ಮಠದಲ್ಲಿ 30 ಅಡಿ ಉತ್ಖನನ ಮಾಡಿದ್ದು ಯಾವ ಮೂಢನಂಬಿಕೆ ಸ್ವಾಮೀಜಿಗಳೇ? ಮೂಢನಂಬಿಕೆಗಳ ಪ್ರತಿಬಂಧಕ ಕಾನೂನು ಜಾರಿ ಆಗಬೇಕು, ಮಡೆಸ್ನಾನದಂತಹ ಪದ್ಧತಿಗಳು ನಿಲ್ಲಬೇಕು ಎಂದು ಒತ್ತಾಯಿಸುವ ನಿಮ್ಮ ಪ್ರಗತಿಪರ ಮನಸ್ಸು, ಮಠದಲ್ಲಿ ನಿಧಿ ಇದೆ ಎಂದು ನಂಬಿದ್ದಾದರೂ ಹೇಗೆ? ನೀವು ಉತ್ಖನನ ಮಾಡಿಸಿದ್ದು, ನೀವೂ ಮೂಢನಂಬಿಕೆಗೆ ಒಳಗಾಗಿದ್ದೀರಿ ಎಂಬುದರ ಸಾಕ್ಷ್ಯ. ಆಮೇಲೆ ಅದನ್ನು ಭಕ್ತರ ಮೇಲೆ ಹಾಕಿದಿರಿ. ಬೇರೆ ಮಠಗಳ ಬಗ್ಗೆ ಇಷ್ಟೆಲ್ಲ ಮಾತನಾಡುತ್ತೀರಲ್ಲ, ನಿಮ್ಮ ಮಠದ ಮೇಲೆ 90ರ ದಶಕದಲ್ಲಿ ಸಿಬಿಐ ದಾಳಿಯಾಗಿದ್ದು ಯಾಕೆ ಎಂದು ಸ್ವಲ್ಪ ಜನಕ್ಕೆ ವಿವರಿಸುತ್ತೀರಾ? ಅದಕ್ಕೂ ಮಠದಲ್ಲಿ ದೊರೆತ ನಿಧಿಯೇ  ಕಾರಣವಾಗಿತ್ತು ಎಂಬುದನ್ನು ನೀವೇ ಮರೆತಿರಬಹುದು.
ನೀವು ಅಂದು ಗೂಳೂರು ಮಠದಲ್ಲಿದ್ದ ಅಶ್ವತ್ಥಕಟ್ಟೆಯೊಂದನ್ನು ಒಡೆಸಿದ್ದಿರಿ. ಅದರಲ್ಲಿ ಚಿನ್ನದ ಗಟ್ಟಿಗಳು ಸಿಕ್ಕಿದ್ದವು ಎಂಬ ಸುದ್ದಿ ಹಬ್ಬಿತ್ತು. ಅದನ್ನು ನೋಡಿದವರೂ ಕೆಲವರಿದ್ದರು. ಇದೇ ಸುದ್ದಿ ಆಧಾರದಲ್ಲಿಯೇ ಸಿಬಿಐ ದಾಳಿ ನಡೆಸಿತ್ತು. ಸಿಬಿಐಗೆ ಏನೂ ಸಿಗಲಿಲ್ಲ ಬಿಡಿ. ಆಗ ನೀವು 'ಹೆಲಿಕಾಪ್ಟರ್‌ನಲ್ಲಿ ಹೋಗುವ ಸ್ವಾಮೀಜಿಗಳ ಮಠಕ್ಕೆ ದಾಳಿ ಮಾಡುವುದಿಲ್ಲ ಬದಲಾಗಿ, ಬಡವರ ಮಠದ ಮೇಲೆ ದಾಳಿ ನಡೆಸುತ್ತಾರೆ' ಎಂದು ಆರೋಪಿಸಿದ್ದಿರಿ. ಅದೇನೋ ಗಾಳಿಸುದ್ದಿ ನಂಬಿ ಸಿಬಿಐ ದಾಳಿಮಾಡಿತ್ತು ಅಂದುಕೊಳ್ಳೋಣ. ಆದರೆ ನೀವು ಅನಾಥಾಶ್ರಮ, ವೃದ್ಧಾಶ್ರಮ, ಕಾಲೇಜು ನಡೆಸಿದ್ದು ಸತ್ಯ ತಾನೇ? ಅವುಗಳನ್ನು ತಾವು ತುಂಬ ಅದ್ಭುತವಾಗಿ ಜಗತ್ತು ಮೆಚ್ಚಿ ಅಹುದಹುದು ಎಂಬಂತೆ ನಡೆಸಿದಿರಾ? ನಿಮ್ಮ ಕಾಲೇಜಿನ ವಿದ್ಯಾರ್ಥಿಗಳು ಸೂಕ್ತ ಶಿಕ್ಷಕರನ್ನು ನೇಮಿಸಿ ಎಂದು ಪ್ರತಿಭಟನೆ ಮಾಡಿದ್ದರು. ಆ ಮಕ್ಕಳ ಮೇಲೆ ನೀವು ಕೇಸು ಹಾಕಿದ್ದಿರಿ. ಆ ಕೇಸು ಇದ್ದ ಮಕ್ಕಳಿಗೆ ಪರೀಕ್ಷೆ ಪ್ರವೇಶಪತ್ರ ನೀಡದೇ ಸತಾಯಿಸಿದ್ದಿರಿ. ಆ ಮೇಲೆ ಆ ಮಕ್ಕಳಿಂದ ಖಾಲಿ ಬಾಂಡ್‌ಪೇಪರ್ ಮೇಲೆ ಸಹಿಪಡೆದುಕೊಂಡು ನೀವು ಅವರಿಗೆಲ್ಲ ಪರೀಕ್ಷೆ ಪ್ರವೇಶಪತ್ರ ನೀಡಿದ್ದಿರಿ. ಇದು ಸತ್ಯ ತಾನೇ?
ನೀವು ನಡೆಸುತ್ತಿದ್ದ ವೃದ್ಧಾಶ್ರಮದಲ್ಲಿದ್ದ 7-8 ಮಂದಿಯನ್ನು ನೋಡಿಕೊಳ್ಳುವವರು ಗತಿ ಇರಲಿಲ್ಲ. ಅಸ್ಪೃಶ್ಯ ವ್ಯವಸ್ಥೆ ವಿರೋಧಿಸುವ ನೀವು, ಅಂದು ವೃದ್ಧಾಶ್ರಮದಲ್ಲಿದ್ದವರಿಗೆ ದೂರದಿಂದಲೇ ಊಟ ನೀಡುವ ವ್ಯವಸ್ಥೆ ಇತ್ತು ಎಂಬುದನ್ನು ಬಹುಶಃ ಮರೆತಿರಬೇಕು. ಕೊನೇಪಕ್ಷ ಅವರಿಗೊಂದು ಗೌರವಯುತ ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆ ಇರಲಿಲ್ಲ. ಮರೆತಿದ್ದೆ, ಅಂತ್ಯ ಸಂಸ್ಕಾರ ಎಂಬುದೇ ನಿಮ್ಮ ದೃಷ್ಟಿಯಲ್ಲಿ ಮೂಢನಂಬಿಕೆ ಅಲ್ಲವೇ? ಆ ದೃಷ್ಟಿಯಿಂದ ನೀವು ಮಾಡಿದ್ದು ಸರಿಯಾಗಿದೆ ಬಿಡಿ.
ಬಹುಶಃ ನೀವು ಮರೆತಿರಬಹುದು. ಒಂದು ಅನಾಥಾಶ್ರಮವೂ ಮಠದಲ್ಲಿತ್ತು. ಅಲ್ಲಿದ್ದ ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಅದಕ್ಕಾಗಿ ಅನಾಥಾಶ್ರಮದ ತಪಾಸಣೆ ಇದ್ದಾಗ ಯಾವುದೋ ಮಕ್ಕಳನ್ನು ತಂದು ಕೂರಿಸುವ ತಂತ್ರಕ್ಕೆ ಮೊರೆಹೋಗುತ್ತಿದ್ದಿರಿ. ಮಕ್ಕಳ ಸಂಖ್ಯೆ ಹೆಚ್ಚಾಗಿ ದಾಖಲಾಗಿ ಸಾಕಷ್ಟು ಅನುದಾನ ಬರುತ್ತಿತ್ತು. ಅನಿರೀಕ್ಷಿತವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ ಸತ್ಯ ಹೊರಬಿದ್ದು, ಪೇಚಿಗೆ ಸಿಲುಕಿದ್ದಿರಿ. ಆದರೆ ಇದರಲ್ಲಿ ಯಾವುದೂ ಮೂಢನಂಬಿಕೆ ಇಲ್ಲವಲ್ಲ. ಅನಾಥ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮಾನವಧರ್ಮ. ಅದನ್ನೂ ನೀವು ಸರಿಯಾಗಿ ಮಾಡಲಿಲ್ಲವಲ್ಲ ಸ್ವಾಮೀಜಿಗಳೇ. ಹೀಗಿರುವಾಗ ದೊಡ್ಡ ದೊಡ್ಡ ಸ್ವಾಮೀಜಿಗಳ ಬಗ್ಗೆ ಮಾತನಾಡುತ್ತೀರಲ್ಲಾ, ಅವರು ಅಡ್ಡಪಲ್ಲಕ್ಕಿ ಉತ್ಸವ ಮಾಡುವುದು, ಪಾದಪೂಜೆ ಮಾಡಿಸಿಕೊಳ್ಳುವುದು ಇವೆಲ್ಲ ನಿಮ್ಮ ಕಣ್ಣಿಗೆಕಾಣುತ್ತೆ. ಆದರೆ ಅದೇ ಸ್ವಾಮೀಜಿಗಳು ಮಕ್ಕಳಿಗಾಗಿ ಶಾಲೆಗಳನ್ನು ಮಾಡಿದ್ದು, ಉಚಿತ ವಸತಿ ನಿಲಯಗಳನ್ನು ನಡೆಸುವುದು, ಅನಾಥಾಶ್ರಮಗಳನ್ನು ನಡೆಸುವುದು ಸೇರಿದಂತೆ ಅವರು ಮಾಡಿದ ಒಳ್ಳೆ ಕೆಲಸಗಳು ಯಾಕೆ ನಿಮಗೆ ಕಾಣುವುದಿಲ್ಲ?
ಅವರನ್ನು ಸದಾ ಟೀಕಿಸುವ ನೀವು, ಇತ್ತೀಚೆಗೆ ರಂಭಾಪುರಿ ಶ್ರೀಗಳು 'ಕೆಲವರು ಖಾವಿ ತ್ಯಜಿಸಲಿ' ಎಂದಿದ್ದಕ್ಕೆ ಗರಂ ಆಗಿದ್ದೇಕೆ? ಖಾವಿ ತ್ಯಾಗದ ಸಂಕೇತ ಎಂಬ ಸಮರ್ಥನೆ ಬೇರೆ. ಖಾವಿ ತ್ಯಾಗದ ಸಂಕೇತ ಎಂಬುದು ನಂಬಿಕೆಯೋ? ಮೂಢನಂಬಿಕೆಯೋ? ಯಾಕೆಂದರೆ ಯಾವ ನಂಬಿಕೆಯನ್ನೂ ಇರಿಸಿಕೊಳ್ಳದೆ, ನೀವೇ ಹೇಳುವ ದೃಷ್ಟಿಯಿಂದ ನೋಡಿದರೆ ಖಾವಿ ಎಂಬುದು ಇತರ ಬಣ್ಣದ ಬಟ್ಟೆಗಳಂತೆ ಒಂದು ಬಣ್ಣದ ಬಟ್ಟೆಯಷ್ಟೇ.
ನಿಮ್ಮದೇ ಸಿದ್ಧಾಂತದ ಪ್ರಕಾರ ಖಾವಿ ತ್ಯಾಗದ ಸಂಕೇತ ಎಂದು ಹೇಳುವುದು ಕೂಡ ಮೂಢನಂಬಿಕೆ. ಜನರಲ್ಲಿ ಆ ಮೂಢನಂಬಿಕೆಯನ್ನು ತುಂಬಿ ಆ ಮೂಲಕ ನಾನೊಬ್ಬ ತ್ಯಾಗಿ ಎಂದು ಬಿಂಬಿಸಿಕೊಳ್ಳುವ ನಿಮ್ಮ ಹವಣಿಕೆ ಕೂಡ ಶೋಷಣೆಯ ಇನ್ನೊಂದು ರೂಪದಂತೆ ಭಾಸವಾಗುತ್ತದೆ. ಈ ದೃಷ್ಟಿಯಿಂದ ರಂಭಾಪುರಿ ಶ್ರೀಗಳು ಹೇಳಿದ್ದರಲ್ಲಿ ಯಾವುದೇ ತಪ್ಪಿರಲಿಲ್ಲ. ಆದರೂ ನಿಮಗೆ ಸಿಟ್ಟುಬಂತು.
ಖಾವಿ ಧರಿಸಿದವರು ತ್ಯಾಗಿಗಳು ಎಂದಾಗಿದ್ದರೆ ಅವರು ಒಂದು ಧರ್ಮ, ಜಾತಿಯ ಮೇಲಿನ ಮತ್ಸರ, ಸಿಟ್ಟು ಇವುಗಳನ್ನೂ ತ್ಯಾಗ ಮಾಡಿರಬೇಕು. ರಂಭಾಪುರಿ ಶ್ರೀಗಳ ಮೇಲೆ ನೀವು ಮುನಿಸಿಕೊಂಡಿದ್ದು, 4 ದಿನದ ಹಿಂದೆ ಬೆಂಗಳೂರಲ್ಲಿ ನಡೆದ ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ಬೆಂಬಲದ ಸಭೆಯನ್ನು ರಂಭಾಪುರಿ ಶ್ರೀಗಳನ್ನು ಓತಪ್ರೋತವಾಗಿ ಟೀಕಿಸಲೇ ಬಳಸಿಕೊಂಡಿದ್ದು ನೋಡಿದರೆ ನೀವು ಅವುಗಳನ್ನೆಲ್ಲ ತ್ಯಾಗಮಾಡಿದ್ದೀರಿ ಎಂದು ಅನಿಸುತ್ತಿಲ್ಲ.
ಇನ್ನೂ ಒಂದು ಸಂಗತಿಯಿದೆ ಸ್ವಾಮೀಜಿಗಳೇ. ನೀವಿದ್ದ ಅಥವಾ ನಿಮ್ಮ ಮಠವಿರುವ ಗೂಳೂರು ಅತ್ಯಂತ ಸೂಕ್ಷ್ಮ ಪ್ರದೇಶ. ಮೇಲ್ಜಾತಿ ಮತ್ತು ಕೆಳಜಾತಿಯವರ ನಡುವೆ ಸಾಮರಸ್ಯವಿಲ್ಲ. ನೀವು ಪ್ರಗತಿಪರರಾಗಿ, ಒಬ್ಬ ಸ್ವಾಮೀಜಿಯಾಗಿ ಎರಡು ಪಂಗಡಗಳ ನಡುವೆ ಸಾಮರಸ್ಯ ತರಲು, ಗ್ರಾಮದಲ್ಲೊಂದು ಸೌಹಾರ್ದ ವಾತಾವರಣ ನಿರ್ಮಿಸಲು ಶ್ರಮಿಸಬಹುದಿತ್ತು. ಪ್ರಯತ್ನವನ್ನಾದರೂ ಮಾಡಬಹುದಿತ್ತು. ಆದರೆ ನೀವು ಅದನ್ನು ಮಾಡದೇ ಕೋಮುಸೌಹಾರ್ದಕ್ಕೆ ಮುಂದಾದಿರಿ. ರಾಜ್ಯದ ಪ್ರಗತಿಪರ ಸ್ವಾಮೀಜಿ ಎಂದು ಕರೆಸಿಕೊಳ್ಳಲು ಹೊರಟಿರಿ. ಈಗ ಗೂಳೂರಿನ ಮಠ, ಅದರಲ್ಲಿದ್ದ ಕಟ್ಟಡಗಳು ಇವೆಲ್ಲ ಪಾಳುಬಿದ್ದಿವೆ. ಅನಾಥಾಶ್ರಮ, ವೃದ್ಧಾಶ್ರಮ ಮುಚ್ಚಿದ್ದು, ಸಿಬಿಐ ದಾಳಿ ಮುಂತಾದವುಗಳಿಂದ ಹೆಸರು ಹಾಳಾದ ಕಾರಣ ಅಲ್ಲಿನ ಮಠವನ್ನೇ ಬಿಟ್ಟು ಈಗ ಚಿಕ್ಕಬಳ್ಳಾಪರದ ಸಮೀಪ ಸ್ಥಳಾಂತರಗೊಂಡು ಅಲ್ಲೊಂದು ಕಾಲೇಜು ಆರಂಭಿಸಿದ್ದೀರಿ.
ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ಜಾರಿ ಮಾಡಬೇಕು ಎಂಬುದು ನಿಮ್ಮ ಒತ್ತಾಯ. ಕೆಲವು ಮೂಢನಂಬಿಕೆಗಳನ್ನು ನಿಷೇಧಿಸಬೇಕು ಎಂಬುದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಎಲ್ಲ ಧರ್ಮಕ್ಕೆ ಸೇರಿದ ಮೂಢನಂಬಿಕೆಗಳನ್ನೂ ಮುಕ್ತಮನಸ್ಸಿನಿಂದ ನೋಡಿ, ಅದರಲ್ಲಿ ನಂಬಿಕೆ ಯಾವುದು, ಮೂಢನಂಬಿಕೆ ಯಾವುದು ಎಂಬುದನ್ನು ಸೂಕ್ಷ್ಮವಾಗಿ ಪರಾಮರ್ಶಿಸಿ, ಮೂಢನಂಬಿಕೆಗಳನ್ನು ಮಾತ್ರ ನಿಷೇಧಿಸಬೇಕು. ಅದುಬಿಟ್ಟು ಒಂದೇ ಧರ್ಮವನ್ನು ಗುರಿಯಾಗಿಸಿ, ಕರಡು ರೂಪಿಸಿದರೆ ಇದೇ ಆಗುವುದು. ಕೆಲವು ಅಂಶಗಳನ್ನು ಮಾತ್ರ ಬಿಂಬಿಸಲಾಗಿದೆ ಎಂದು ಹೇಳುತ್ತೀರಲ್ಲ. ನಾನು ಸಂಪೂರ್ಣ ಕರಡನ್ನು ಓದಿದ್ದೇನೆ. ಅದರಲ್ಲಿ ಬೇರೆ ಧರ್ಮದ ಯಾವ ಮೂಢನಂಬಿಕೆಗಳನ್ನು ನಿಷೇಧಿಸುವ ಪ್ರಸ್ತಾಪವಿದೆ ಸ್ವಲ್ಪ ಬಹಿರಂಗಪಡಿಸುತ್ತೀರಾ? ಎಲ್ಲೋ ಇರುವ ಒಂದು ವಾಕ್ಯವನ್ನೇ ನೀವು ಉದಾಹರಿಸುತ್ತಿದ್ದೀರಿ ಎಂಬುದು ಗೊತ್ತು.
ಆ ಕರಡಿನ ಪರವಾಗಿ ಮಾತನಾಡುತ್ತಾ ನೀವು, 'ಸರ್ಕಾರಿ ಕಾರ್ಯಕ್ರಮದಲ್ಲಿ ನಿರ್ದಿಷ್ಟ ದೇವರಪೂಜೆ ಸಲ್ಲದು' ಎಂದು ಹೇಳುತ್ತೀರಿ. ಅದೇ ಸರ್ಕಾರ ನಿರ್ದಿಷ್ಟ ಧರ್ಮ, ಜಾತಿಗಳನ್ನು ಗುರಿಯಾಗಿಸಿ ಯೋಜನೆ ಜಾರಿ ಮಾಡಬಾರದು ಎಂದು ಹೇಳುವ ಛಾತಿ ನಿಮ್ಮಲ್ಲೇಕಿಲ್ಲ? ನೀವು ನಿಜವಾಗಲೂ ನಿಷ್ಪಕ್ಷಪಾತವಾಗಿ, ಕೇವಲ ವಿಷಯ ಆಧರಿಸಿ ಮಾತನಾಡುತ್ತೀರಿ ಎಂದಾದರೆ ನಿರ್ದಿಷ್ಟ ದೇವರನ್ನು ಪೂಜಿಸಬಾರದು ಎಂದು ಹೇಳಿದಂತೆ ನಿರ್ದಿಷ್ಟ ಪಂಗಡ, ಧರ್ಮ ಗುರಿಯಾಗಿಸಿ ಯೋಜನೆ ರೂಪಿಸಿ ಸಮಾಜದ ಸ್ವಾಸ್ಥ್ಯ ಕೆಡಿಸಬಾರದು ಎಂದೂ ಹೇಳುತ್ತಿದ್ದಿರಿ. ಆದರೆ ಸಾಮಾಜಿಕ ಸ್ವಾಸ್ಥ್ಯ ನಿಮ್ಮ ಕಾಳಜಿ ಅಲ್ಲವೇ ಅಲ್ಲ. ನಿಮ್ಮ ಸಿದ್ಧಾಂತ, ನಿಮಗೆ ಸಿಗುತ್ತಿರುವ ಗೌರವ, ವೇದಿಕೆಯಲ್ಲಿ ಸಿಗುತ್ತಿರುವ ಸ್ಥಾನ ಮುಖ್ಯ. ನೀವು ಹಾಗೆ, ಅವರಿಗೆ ಬೇಕಾದಂತೆ ಮಾತನಾಡಿದರೆ ಮಾತ್ರ ಅಲ್ಲಿ ಸ್ಥಾನ. ಒಂದು ಯೋಜನೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದಿದ್ದರೆ ನಿಮಗದು ಮುಖ್ಯವಾಗುವುದಿಲ್ಲ.
ಸಮಾಜಸೇವೆ ಮಾಡಬೇಕು, ಸಮಾಜಕ್ಕೆ ಕೊಡುಗೆ ನೀಡಬೇಕು, ಸಮಾಜದಲ್ಲೊಂದು ಬದಲಾವಣೆ ತರಬೇಕು ಎಂದಾದರೆ ಖಾವಿ ಯಾಕೆ ಬೇಕು? ಪೀಠ ಯಾಕೆ ಬೇಕು? ಬಾಬಾ ಅಮ್ಟೆ, ಮದರ್ ಥೆರೇಸಾ, ರಾಜಸ್ಥಾನದಲ್ಲಿ ನೀರಿನ ಕ್ರಾಂತಿ ಮಾಡಿದ ರಾಜೇಂದ್ರ ಸಿಂಗ್ ಅವರಿಗೆಲ್ಲ ಯಾವ ಮಠವೂ ಇರಲಿಲ್ಲ. ಮಠ, ಖಾವಿ ಇಲ್ಲದೆಯೂ ಸಮಾಜದಲ್ಲಿ ಅಪಾರ ಬದಲಾವಣೆ ತರಬಹುದು ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಅದೇ ಮಾರ್ಗದಲ್ಲಿ ನೀವು ಮುಂದುವರಿಯಬಹುದು. ಪೂರ್ವಾಗ್ರಹ, ಸಿದ್ಧಾಂತಗಳಿಲ್ಲದೇ ಸಮಾಜವನ್ನು ತಿದ್ದಲು ಮುಂದಾಗಿ. ಸಮಾಜವೂ ನಿಮ್ಮನ್ನು ಮುಕ್ತಮನಸ್ಸಿನಿಂದ ಸ್ವಾಗತಿಸುತ್ತದೆ.

- ವಿನಾಯಕ ಭಟ್ಟ ಮೂರೂರು
vakradanta@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!