ತಂತ್ರಜ್ಞಾನದ ಬಳಕೆಯಿಂದ ಶರವೇಗದಲ್ಲಿ ಅಭಿವೃದ್ಧಿ ಸಾಧ್ಯ
ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಒಂದು ಸವಾಲೇ ಆಗಿದೆ.
ಇದುವರೆಗೆ ನನಗೆ ಹಲವಾರು ಜಿಲ್ಲೆಗಳು ಮತ್ತು ಹಲವಾರು ಇಲಾಖೆಗಳ ಅನುಭವ ಇದ್ದರೂ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಒಂದು ಸವಾಲೇ ಆಗಿದೆ.
ಪ್ರಾದೇಶಿಕ ಆಯುಕ್ತ ಹುದ್ದೆಯಲ್ಲಿ ನಾನು ನಿಯಂತ್ರಣದ ಕೆಲಸಗಳಲ್ಲಿ ಬಿಡುವಿಲ್ಲದೆ ಕಾರ್ಯಮಗ್ನಳಾದರೂ, ಆ ಭಾಗಕ್ಕೆ ಬೇಕಾಗಿರುವ ಅಭಿವೃದ್ಧಿಯ ಬಗ್ಗೆ ಗಮನ ಹಾಗೂ ಸಮಯ ಕೊಡಲು ಸಾಧ್ಯವಿರಲಿಲ್ಲ. ಆದುದರಿಂದ ನಾನು ಮುಖ್ಯ ಕಾರ್ಯದರ್ಶಿಗಳಿಗೆ ಹಾಗು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯರ್ಶಿಗಳೊಂದಿಗೆ 'ನನ್ನನ್ನು ಪ್ರಾದೇಶಿಕ ಆಯುಕ್ತರ ಬದಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಮತ್ತು ನನ್ನ ಪತಿ ರಜನೀಶ್ರನ್ನು ಪ್ರಾದೇಶಿಕ ಆಯುಕ್ತರಾಗಿಯೂ ನೇಮಿಸಲು ಕೋರಿದೆ. ಅಂತೆಯೇ ರಜನೀಶ್ರವರು ಮತ್ತು ನಾನು ಅಧಿಕಾರ ಸ್ವೀಕರಿಸಿದೆವು. ಈಗ ನನ್ನ ಹೊಸ ಹುದ್ದೆಯ ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ.
ಹಿಂದುಳಿದ ಪ್ರದೇಶವಾದರೂ ಹೃದಯವಂತ ಜನರು ಹೈದ್ರಾಬಾದ್ ಕರ್ನಾಟಕದಲ್ಲಿದ್ದಾರೆ. ಮೊಟ್ಟ ಮೊದಲನೆಯದಾಗಿ ಈ ಪ್ರದೇಶಗಳು ಇಂದಿಗೂ ಏಕೆ ಹಿಂದುಳಿದಿವೆ ಎಂಬುದನ್ನು ಅಧ್ಯಯನ ಮಾಡಿದಾಗ ನಮ್ಮ ಮೇಲೆ ನಮಗೇ ಕೋಪ ಬರುತ್ತದೆ. ಏಕೆಂದರೆ, ಈ ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯ, ಶಿಕ್ಷಣದ ಕೊರತೆ ಮತ್ತು ಅವಕಾಶಗಳ ಕೊರತೆ, ಹಿಂದುಳಿರುವುದಕ್ಕೆ ಮುಖ್ಯ ಕಾರಣಗಳೆಂದು ಹೇಳಬಹುದು.
1956ನೇ ಇಸವಿಯಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದ ನಂತರ ಹಳೆಯ ಮುಂಬಯಿ ಪ್ರಾಂತ, ಹೈದ್ರಾಬಾದ್ ಕರ್ನಾಟಕ ಪ್ರಾಂತ ಮತ್ತು ಇನ್ನುಳಿದ ಗಡಿ ಪ್ರದೇಶದ ಜನತೆ, ಹಳೆ ಮೈಸೂರು ರಾಜ್ಯದ ತಾಲೂಕುಗಳ ಮತ್ತು ಮೈಸೂರು ರಾಜ್ಯದಲ್ಲಿ ಸೇರ್ಪಡೆಯಾದ ಪ್ರದೇಶದಲ್ಲಿ ಗೋಚರಿಸಿರುವ ಅಸಮತೋಲನದ ಬಗ್ಗೆ ಚರ್ಚೆ ಮತ್ತು ಚಿಂತನೆ ನಡೆಯುತ್ತಲೇ ಇತ್ತು.
ಹೈದ್ರಾಬಾದಿನ ನಿಜಾಮರ ಆಳ್ವಿಕೆಯನ್ನು ಕೊನೆಗೊಳಿಸಿದ ನಂತರ ಮರಾಠವಾಡ ಮತ್ತು ತೆಲಂಗಾಣ ಕ್ಷೇತ್ರಗಳಿಗೆ ಸಂವಿಧಾನ ಪರಿಚ್ಛೇಧ 371 ಅಡಿಯಲ್ಲಿ ಹಿಂದುಳಿದ ಪ್ರದೇಶಗಳೆಂದು ವಿಶೇಷ ಸ್ಥಾನಮಾನಗಳನ್ನು ಕೇಂದ್ರ ಸರ್ಕಾರ ನೀಡಿತು. ಅಲ್ಲದೆ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅಲ್ಲಿನ ಜನರಿಗೆ ವಿಶೇಷ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಆದರೆ ಅದೇ ಭಾಗದ ಗುಲ್ಬರ್ಗಾ, ಯಾದಗೀರ್, ರಾಯಚೂರು, ಬೀದರ್, ಕೊಪ್ಪಳ ಜಿಲ್ಲೆಗಳಿಗೆ ಯಾವುದೇ ನೆರವು ಕೇಂದ್ರ ಸರ್ಕಾರದಿಂದ ಸಿಕ್ಕಿರಲಿಲ್ಲ. ಈ ಬಗ್ಗೆ ಸ್ಥಳೀಯ ಜನರಿಗೆ ತುಂಬಾ ಅಸಮಾಧಾನವಿತ್ತು.
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅತಿ ಹಿಂದೆ ಉಳಿಯುವಿಕೆಯ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ಧರ್ಮಸಿಂಗ್ ಅವರ ನೇತೃತ್ವದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ ಸಮಿತಿಯನ್ನು 1980ರಲ್ಲಿ ರಚಿಸಲಾಯಿತು. ಅವಿರತ ಚರ್ಚೆ ಮತ್ತು ಚಿಂತನೆಗಳ ಫಲವಾಗಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಕರ್ನಾಟಕ ರಾಜ್ಯ ಸರ್ಕಾರವು 10 ಡಿಸೆಂಬರ್ 1991 ರಂದು ಕಾಯಿದೆಯ ರೂಪದಲ್ಲಿ ರಚಿಸಿತು. ಧರ್ಮಸಿಂಗ್ ನೇತೃತ್ವದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಅತಿ ಹಿಂದುಳಿದ ಪ್ರದೇಶಗಳಾದ ಗುಲ್ಬರ್ಗಾ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಸಾಮಾಜಿಕ ಮತ್ತು ಆರ್ಥಿಕ ಮೂಲಭೂತ ಸೌಕರ್ಯಗಳಾದ ರಸ್ತೆಗಳು, ಸೇತುವೆಗಳು, ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು, ಸಣ್ಣ ನೀರಾವರಿ ಯೋಜನೆಗಳು, ಪಶು ವೈದ್ಯಕೀಯ ಬೇಸಾಯ, ರೇಷ್ಮೆ ವ್ಯವಸಾಯಕ್ಕೆ ಉತ್ತೇಜನ ನೀಡುವುದು, ಕಾಡು ಪ್ರದೇಶದ ಬೆಳವಣಿಗೆ ಮತ್ತು ನಗರಾಭಿವೃದ್ಧಿಯನ್ನು ಕೈಗೊಳ್ಳುವ ಸಲುವಾಗಿ 10 ಮಾರ್ಚ್ 1992 ರಂದು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ತನ್ನ ಕಾರ್ಯಗಳನ್ನು ಆರಂಭ ಮಾಡಿತು. ಆರು ಜಿಲ್ಲೆಗಳ ಶಾಸಕರು ಹಾಗೂ ಸಂಸತ್ ಸದಸ್ಯರು ಈ ಮಂಡಳಿಯ ಸದಸ್ಯರಾಗಿರುತ್ತಾರೆ. ರ್ಸ್ಕಾರದ ವತಿಯಿಂದ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ನಾನು ಕಾರ್ಯಭಾರವನ್ನು ತೆಗೆದುಕೊಳ್ಳುವಾಗ ಅಧ್ಯಕ್ಷರ ನೇಮಕ ಆಗಿರಲಿಲ್ಲ ಹಾಗೂ ತುಂಬಾ ಸಮಯದಿಂದ ಮಂಡಳಿಯ ಸಭೆಯೂ ಸಹ ಜರುಗಿರಲಿಲ್ಲ. ಆದುದರಿಂದ ಕರಡು ಆಯವ್ಯಯದ ಪ್ರಸ್ತಾವನೆಗಳನ್ನು ತಯಾರಿಸಿ ಇಲಾಖೆಗೆ ಸಲ್ಲಿಸಿದೆ.
ನನ್ನ ಅವಧಿಯ ಆರಂಭದಲ್ಲಿಯೇ ದಾ ಛಾಯ ದೇಗಂಕರ ಎಂಬ ಉನ್ನತ ಪ್ರೋಫೆಸರ್ ಒಬ್ಬರು ನನ್ನ ಸಪರ್ಕ ಕ್ಕೆ ಬಂದರು. ಅವರೊಂದಿಗೆ ಒಂದು ವಿನೂತನ ಯೋಜನೆ ತಯಾರಿಸಿ ಸರಕಾರದ ಅನುಮೋದನೆ ಕೋರಿದೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ನವೆಂಬರ್ 2008 ರಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಕೇಂದ್ರವು ಸ್ಥಾಪನೆಯಾಗಿದ್ದು ಒಂದು ಮೈಲಿಗಲ್ಲೆಂದೇ ಹೇಳಬಹುದು. ಇದರ ಕಾರ್ಯಚಟುವಟಿಕೆಗಳಿಗಾಗಿ ಸರ್ಕಾರ ಐವತ್ತು ಲಕ್ಷ ರುಪಾಯಿಗಳನ್ನು ವಿಶ್ವವಿದ್ಯಾಲಯಕ್ಕೆ ನೀಡಲು ಅನುಮೋದಿಸಿತು. ಕೇಂದ್ರದ ಮೂಲ ಉದ್ದೇಶಗಳು ಹೀಗಿದ್ದವು:
"ಸರಕಾರಿ ಹಾಗೂ ಸರಕಾರೇತರ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಈ ಭಾಗದ ಅಭಿವೃದ್ಧಿ ಸೂಚಕಗಳನ್ನು ಏರಿಸುವದು. ಮಾನವ ಸಂಪನ್ಮೂಲಗಳ ಗುಣ ಮಟ್ಟವನ್ನು ಹೆಚ್ಚಿಸಲು ಮಹಿಳೆಯರು, ರೈತರು, ಯುವಕರು ಇನ್ನಿತರೇ ಸಂಘಗಳ ರಚನೆ ಮಾಡುವದು. ಹೊಸ ತಾಂತ್ರಿಕ ಜ್ಞಾನವನ್ನು ಜನರೊಂದಿಗೆ ಹಂಚಿಕೊಳ್ಳುವದು.
ಸರ್ಕಾರದ ಯೋಜನೆಗಳು ಸೂಕ್ತ ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಬಗ್ಗೆ ಅಧ್ಯಯನ ನಡೆಸುವದು." ಕಾರ್ಯಾಚರಣೆಗಾಗಿ ಸರ್ಕಾರದ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳನ್ನೊಳಗೊಂಡ ಒಂದು ಕೋರ್ ಸಮಿತಿಯನ್ನು ರಚಿಸಲಾಯಿತು. ಇದಲ್ಲದೆ ಕೇಂದ್ರದ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹಾಗೂ ಮಾರ್ಗದರ್ಶನ ನೀಡಲು ನಿಪುಣರು, ವಿಶ್ವವಿದ್ಯಾಲಯ ಪ್ರಾಧ್ಯಾಪಕರು, ಸರಕಾರೇತರ ಸಂಘ ಸಂಸ್ಥೆಗಳು, ನಿವೃತ್ತ ಸರಕಾರಿ ನೌಕರರು ಹಾಗೂ ಮಹಿಳಾ ಸಂಘಗಳನ್ನೊಳಗೊಂಡ ಒಂದು ಸಲಹಾ ಸಮಿತಿ ಕೂಡಾ ರಚಿಸಲಾಯಿತು. ಸದರಿ ಕೇಂದ್ರದಡಿಯಲ್ಲಿ ಈ ಕೆಳಕಂಡ ಘಟಕಗಳನ್ನು ರೂಪಿಸಲಾಯಿತು.
"ಉದ್ಯಮ ಶೀಲತೆ ಹಾಗೂ ಕೌಶಲ್ಯ ತರಬೇತಿ, ಮಾರುಕಟ್ಟೆ ವ್ಯವಸ್ಥೆ, ಗುಣಮಟ್ಟದ ಶಿಕ್ಷಣ, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಪೌಷ್ಟಿಕತೆ, ಮಾಹಿತಿಗಳ ದಾಖಲೀಕರಣ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಉಸ್ತುವಾರಿ ಹಾಗೂ ಮೌಲ್ಯಮಾಪನ"
ಬಡತನಕ್ಕೆ ಮುಖ್ಯ ಕಾರಣ ಮಾನವ ಹಾಗೂ ಪ್ರಕೃತಿ ಸಂಪನ್ಮೂಲಗಳ ಉತ್ಪಾದಕತೆಯ ಕೊರತೆ. ನಮ್ಮ ಮುಖ್ಯ ಉದ್ದೇಶ ಈ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಿ ಆದಾಯ ಹೆಚ್ಚಿಸುವುದಾಗಿತ್ತು. ಬಡ ಕುಟುಂಬದಲ್ಲಿ ಆಸ್ತಿ ಅಥವಾ ಭೂಮಿಯ ಕೊರತೆ ಹಾಗೂ ಹಣ ಗಳಿಸಲು ಯಾವುದೇ ಸಾಮರ್ಥ್ಯ ಇಲ್ಲದೆ ಇರುವುದರಿಂದ ಬಡತನ ರೇಖೆಯನ್ನು ದಾಟಲು ಆಗುತ್ತಿಲ್ಲವೆಂಬುದು ಮನಗಾಣುತ್ತಿತ್ತು. ಯಾರ ಹತ್ತಿರ ಭೂಮಿ ಇದೆಯೋ ಅದು ಬಂಜರು ಭೂಮಿಯಾಗಿರಬಹುದು ಅಥವಾ ನೀರಾವರಿ ಲಭ್ಯವಿಲ್ಲದೆ ಇರುವುದರಿಂದ ಹೆಚ್ಚು ಉತ್ಪಾದನೆ ಮಾಡಲಾಗದೆ ಆದಾಯ ಇಲ್ಲದಿರಬಹುದು. ಒಂದು ಊರಿನ ಆದಾಯ ಹೆಚ್ಚಿಸಬೇಕಾದರೆ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಾಗುತ್ತದೆ. ಸಮಗ್ರ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಆಡಳಿತವು ಸಾರ್ವಜನಿಕ ಸಂಪನ್ಮೂಲಗಳನ್ನು ಸೃಷ್ಟಿಸಿ ಅದರ ಸದುಪಯೋಗವನ್ನು ಮಾಡಬೇಕಾಗುತ್ತದೆ. ಇದರಿಂದ ಮುಖ್ಯವಾಗಿ ಬಡ ಜನರಿಗೆ ಅನುಕೂಲವಾಗಬೇಕು. ಈ ಕಾರ್ಯಕ್ರಮ ಯಶ್ವಸಿಗೊಳಿಸಬೇಕಾದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಂಘ/ಸಂಸ್ಥೆಗಳು ಕೈ ಜೋಡಿಸಬೇಕಾಗುತ್ತದೆ.
ಈಗಾಗಲೇ ಉದ್ಯೋಗ ಖಾತರಿಯಲ್ಲಿ ಇದಕ್ಕೆ ಬೇಕಾದಷ್ಟು ಅನುದಾನ ಲಭ್ಯವಿರುವುದನ್ನು ಕಂಡೆ. ಆದರೆ ಗ್ರಾಮಗಳಲ್ಲಿ ಮಾನವ ಹಾಗೂ ತಂತ್ರಜ್ಞಾನದ ಅಭಾವ ಇರುವುದನ್ನೂ ಕಂಡೆ. ಜೊತೆಗೆ ಅಭಿವೃದ್ಧಿಗೊಳಿಸಬೇಕಾದ ಪ್ರದೇಶ ವಿಶಾಲವಾಗಿರುವುದರಿಂದ ಅದನ್ನು ಉಸ್ತುವಾರಿ ವಹಿಸಿ ಅನುಷ್ಠಾನಗೊಳಿಸುವುದು ಕಷ್ಟವಾಗಿರುವುದನ್ನೂ ಗಮನಿಸಿದೆ. ಆದ್ದರಿಂದ ಗ್ರಾಮ ಪಂಚಾಯತ್ನ ಯೋಜನೆಗಳು ಯಶಸ್ವಿಯಾಗುತ್ತಿಲ್ಲ ಎಂಬುದು ನನಗೆ ಅರ್ಥವಾಯಿತು. ಅಲ್ಲಿನ ಜನರು ಯಾವುದೇ ಕೆಲಸ ಮಾಡಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ತಂತ್ರಜ್ಞಾನದ ನೆರವನ್ನು ಸಂಪೂರ್ಣವಾಗಿ ಬಳಸಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ಮಾಡಿದ ಮೊಟ್ಟ ಮೊದಲ ಕೆಲಸವೆಂದರೆ ಗುಲ್ಬರ್ಗಾದಲ್ಲಿ ದೂರ ಸಂವೇದಿ ಸಂಪರ್ಕ ಉಪಕೇಂದ್ರವನ್ನು ಸ್ಥಾಪಿಸಿದ್ದು. ಗುಲ್ಬರ್ಗಾ ವಿಶ್ವವಿದ್ಯಾಲಯವು ತನ್ನ ಆವರಣದಲ್ಲಿ ಐದು ಎಕರೆ ಜಮೀನನ್ನು ನೀಡಿ, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸರ್ಕಾರದ ಅನುಮೋದನೆಯನ್ನು ಪಡೆದು ಒಂದು ಕೋಟಿ ಮೊತ್ತವನ್ನು ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ನೀಡಿ, ಕರ್ನಾಟಕ ದೂರ ಸಂವೇದಿ ಉಪಕೇಂದ್ರವನ್ನು ಸ್ಥಾಪಿಸಲಾಯಿತು. ಸದರಿ ಕೇಂದ್ರದಿಂದ ಈ ಭಾಗದ ಅಭಿವೃದ್ಧಿಗಾಗಿ ಉಪಗ್ರಹ ಆಧಾರದಿಂದ ಮಾಹಿತಿಯನ್ನು ಪಡೆದು ಅನುಷ್ಠಾನಗೂಳಿಸಲು ಯೋಚಿಸಿದೆ.
ಈ ನಿಟ್ಟಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದ ದೂರ ಸಂವೇದಿ ಸಂಪರ್ಕ ಉಪಕೇಂದ್ರ ಹಾಗೂ ಇಸ್ರೋದಿಂದ ಪಡೆಯಲಾದ ಉಪಗ್ರಹ ಆಧಾರಿತ ನಕಾಶೆಗಳನ್ನು ಉಪಯೋಗಿಸಿ ಹೈದ್ರಬಾದ್ ಕರ್ನಾಟಕ ಪ್ರದೇಶದ ಉತ್ತಮ ನಿರ್ವಹಣೆಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಯೋಜನೆಗಳನ್ನು ನಿರ್ವಹಿಸಲು ಅತಿ ಸುಲಭವಾಗಬಹುದು ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಇರುವ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಬಳಸಿ, ಜನರ ಸಹಭಾಗಿತ್ವದೊಂದಿಗೆ ಸರ್ಕಾರದ ಯೋಜನೆಗಳ ಯಶಸ್ವಿ ಅನುಷ್ಠಾನ ಮಾಡಿದರೆ ಈ ಪ್ರದೇಶಗಳು ಬೆಂಗಳೂರಿನಂಥ ಮುಂದುವರೆದ ಪ್ರದೇಶಗಳಂತೆ ಆಗಲು ಸಾಧ್ಯ ಎಂದನಿಸಿತು.
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com