ಅಂಕಣಗಳು

ಸಿದ್ದು 'ಕೋಳಿ' ಊಟಕ್ಕೆ ಕಾಂಗ್ರೆಸ್, ಬಿಜೆಪಿ ಜಗಳ!

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜಪೆಗೆ ಬಂದು ನಾರಾಯಣಗುರು ಸಭಾಭವನ ಉದ್ಘಾಟನೆ ಮಾಡಿದಾಗ ಬಿಲ್ಲವ ಮುಖಂಡರೊಳಗಿರುವ ಕೈ..

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜಪೆಗೆ ಬಂದು ನಾರಾಯಣಗುರು ಸಭಾಭವನ ಉದ್ಘಾಟನೆ ಮಾಡಿದಾಗ ಬಿಲ್ಲವ ಮುಖಂಡರೊಳಗಿರುವ ಕೈ, ಕಮಲ ನಾಯಕರು ಬ್ಯಾನರ್‌ನಲ್ಲಿಯೂ ರಾಜಕೀಯ ಮಾಡಿದ್ದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಾಳಯದ್ದೇ ಕೈ ಮೇಲಾಗಿತ್ತು. ಮೋದಿ ಕಟು ಟೀಕಾಕಾರ ಜನಾರ್ದನ ಪೂಜಾರಿ ಇದ್ದರೂ ವೇದಿಕೆ ವಿರುದ್ಧ ದಿಕ್ಕಿನಲ್ಲಿ ಮೋದಿ ಕಟೌಟ್ ಹಾಕುವಲ್ಲಿ ಬಿಜೆಪಿ ಮುಖಂಡರು ಯಶಸ್ವಿಯಾಗಿದ್ದರು. ಮೋದಿ ಕಟೌಟ್ ತೆಗೆಯುವ ಸಚಿವರ ಪ್ರಯತ್ನವೂ ವಿಫಲವಾಗಿತ್ತು. ಮಧ್ಯಾಹ್ನ ಸಿದ್ದರಾಮಯ್ಯ ಕೋಳಿ ಊಟದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖರ ನಡುವೆ ಕೋಳಿ ಜಗಳವೂ ನಡೆಯಿತು. ಬಿಜೆಪಿ ಮುಖಂಡ ಎಲ್.ವಿ. ಅಮೀನ್ ಮನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಳಿ ಊಟ ಸಿದ್ಧಪಡಿಸಲಾಗಿತ್ತು. ಅಮೀನ್ ಮನೆಗೆ ಮುಖ್ಯಮಂತ್ರಿ ಭದ್ರತೆ ವಿಭಾಗದವರು 3-4 ಬಾರಿ ಭೇಟಿ ನೀಡಿ ತಪಾಸಣೆ ನಡೆಸಿಯೂ ಆಗಿತ್ತು. ಆದರೆ ಬಿಜೆಪಿ ಮುಖಂಡನ ಮನೆಯಲ್ಲಿ ಸಿಎಂ ಊಟ ಮಾಡಿದರೆ ಕಪ್ಪು ಪಟ್ಟಿ ಪ್ರದರ್ಶಿಸುತ್ತೇವೆ, ಕಾಂಗ್ರೆಸ್ ಮುಖಂಡರ ಮನೆಯಲ್ಲಿಯೇ ಊಟ ಮಾಡಬೇಕು ಎಂದು ಪಟ್ಟು ಹಿಡಿದರು. ಇಬ್ಬರ ಉಸಾಬರಿಯೇ ಬೇಡ ಎಂದು ಸಿದ್ದರಾಮಯ್ಯ ಪೆರ್ಮುದೆಯ ಉದ್ಯಮಿ ಮನೆಗೆ ತೆರಳಿ ಗಡದ್ದಾಗಿ ಕೋಳಿ ಊಟ ಉಂಡರು!

ಕೈಪಿಡಿ ಬಿಡುಗಡೆ ಸುದ್ದಿ ಪ್ರಚಾರಕ್ಕೆಶೆಟ್ಟರ್ ಕರೆದ ಸಂಘಟಕರು!
ನರೇಂದ್ರ ಮೋದಿ ರ್ಯಾಲಿಯ ಹಿನ್ನೆಲೆಯಲ್ಲಿ ಮೈಸೂರಿನಿಂದ ಬಿಜೆಪಿಯ ನೂರಾರು ಕಾರ್ಯಕರ್ತರು ಮಾಜಿ ಸಚಿವ ಎಸ್.ಎ. ರಾಮದಾಸ್ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹೊರಡುವವರಿದ್ದರು. ಪಾದಯಾತ್ರೆ ಸಂಬಂಧ ಹೊರತಂದಿದ್ದ ಕೈಪಿಡಿ ಬಿಡುಗಡೆ ಹಾಗೂ ಕಾರ್ಯಕರ್ತರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಇತ್ತು. ಕೈಪಿಡಿ ಬಿಡುಗಡೆ, ಗುರುತಿನ ಚೀಟಿ ವಿತರಣೆ ಎಂದರೇ ಎಲೆಕ್ಟ್ರಾನಿಕ್ ಮಾಧ್ಯಮದವರು ಬರುವುದಿಲ್ಲ ಎಂಬುದು ಮುಖಂಡರಿಗೆ ಗೊತ್ತಿತ್ತು. ಹೀಗಾಗಿ ಅವರು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಸುದ್ದಿಗೋಷ್ಠಿ ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಏನಾದರೂ ಬ್ರೇಕಿಂಗ್ ನ್ಯೂಸ್ ಸಿಗಬಹುದು ಎಂದು ಎಲೆಕ್ಟ್ರಾನಿಕ್ ಮಾಧ್ಯಮದವರು ಲೋಗೋ, ಟ್ರೈಪ್ಯಾಡ್, ಕ್ಯಾಮರಾಗಳೊಂದಿಗೆ ಹಾಜರಾದರು. ಸುದ್ದಿಗೋಷ್ಠಿ ಏನೋ ಆರಂಭವಾಯಿತು. ಶೆಟ್ಟರ್ ಔಪಚಾರಿಕವಾಗಿ ಮಾತನಾಡಿದ ನಂತರ ಪತ್ರಕರ್ತರು ಪ್ರಶ್ನೆ ಕೇಳಲು ಮುಂದಾದರು. ಪ್ರಶ್ನೆ ಕೇಳಿದ ನಂತರ ಇವರು ಇರುವುದಿಲ್ಲ ಎಂಬುದು ಸಂಘಟಕರಿಗೂ ಗೊತ್ತಿತ್ತು. ಹೀಗಾಗಿ ಅವರು ಟಿವಿಗಳಲ್ಲಿ ಹೇಳುವಂತೆ ಈಗ ಒಂದು ಬ್ರೇಕ್, ಪುಟ್ಟ ಕಾರ್ಯಕ್ರಮ ಎಂದು ಕೈಪಿಡಿ ಬಿಡುಗಡೆ, ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ನಡೆಸಿದರು. ಎಲೆಕ್ಟ್ರಾನಿಕ್ ಮಾಧ್ಯಮದವರು ಅನಿವಾರ್ಯವಾಗಿ ಚಿತ್ರೀಕರಿಸಿಕೊಳ್ಳಬೇಕಾಯಿತು. ನಂತರವೇ ಶೆಟ್ಟರ್ ಅವರಿಗೆ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಡಲಾಯಿತು. ಒಟ್ಟಾರೆ ಬ್ರೇಕಿಂಗ್ ನ್ಯೂಸ್ ಸಿಗುತ್ತದೆ ಎಂದು ಬಂದವರಿಗೆ ಬ್ರೇಕ್ ನೀಡಿದವರು ಸಂಘಟಕರು. ಹೇಗಿದೆ ಐಡಿಯಾ...?

ಎಂಜಿನಿಯರ್‌ಗಳು ಹೀಗೂ ಇರ್ತಾರಾ?
ಎಂಜಿನಿಯರ್‌ಗಳೆಂದ ತಕ್ಷಣ ಕಣ್ಮುಂದೆ ಬರುವುದು ಬಿಲ್ಡಿಂಗ್! ಆದರೆ, ಅವರು ಗೋಲ್‌ಮಾಲ್ ಮಾಡುವುದರಲ್ಲೂ ಎತ್ತಿದ ಕೈ. ಈ ಸತ್ಯ ಹೊರ ಹಾಕಿದ್ದು ವಸತಿ ಸಚಿವ ಅಂಬರೀಷ್. ಇತ್ತೀಚೆಗೆ ಮಂಡ್ಯದಲ್ಲಿ ಕೆಡಿಪಿ ಸಭೆ ನಡೆದಿತ್ತು. ಆಗ ಅಂಬಿ ಕಥೆ ಹೇಳ್ತಿನಿ ಕೇಳಿ ಎಂದು ಶುರು ಮಾಡಿದರು. ಸರ್ಕಾರ ಒಬ್ಬ ಎಂಜಿನಿಯರ್‌ಗೆ ಬಿಲ್ಡಿಂಗ್ ನಿರ್ಮಾಣ ಮಾಡು ಅಂತ ಹೇಳುತ್ತದೆ. ಈ ಎಂಜಿನಿಯರ್ ತರಾತುರಿಯಲ್ಲಿ ಕೆಲಸ ಮಾಡಿ ಬಿಲ್ಡಿಂಗ್ ಕಟ್ಟಿ ಬಿಲ್ ಎತ್ತಿಕೊಂಡು ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾನೆ. ಮತ್ತೊಬ್ಬ ಎಂಜಿನಿಯರ್ ಅದೇ ಜಾಗಕ್ಕೆ ಬರುತ್ತಾನೆ.  ಈ ಬಿಲ್ಡಿಂಗ್ ಗುಣಮಟ್ಟ ಚೆನ್ನಾಗಿಲ್ಲ. ನಾಳೆ ಹೆಚ್ಚು ಕಡಿಮೆಯಾದರೆ ನಮ್ಮ ತಲೆ ಮೇಲೆ ಬರುತ್ತದೆ. ಹೀಗಾಗಿ ಈ ಬಿಲ್ಡಿಂಗ್ ನೆಲಸಮ ಮಾಡಿದ ನಂತರ ಬಿಲ್ ಪಾಸ್ ಮಾಡಿಕೊಂಡು ಆತನೂ ಜಾಗ ಖಾಲಿ ಮಾಡಿ ಹೋಗುತ್ತಾನೆ. ಇಂಥ ಎಂಜಿನಿಯರ್‌ಗಳು ನಮಗೆ ಬೇಡ ಎಂದರು. ಸದ್ಯಕ್ಕೆ ನಮ್ಮಲ್ಲಿ ಅಂಥ ಯಾವ ಎಂಜಿನಿಯರ್‌ಗಳೂ ಇಲ್ಲ ಬಿಡಿ ಎಂದು ಸಭೆಯಲ್ಲಿ ಗುಸುಗುಸು ಮಾತಾಡಿಕೊಂಡರು!

ಮೈಸೂರು ಕಮಿಷನರ್‌ ಗಿಫ್ಟ್ ಐಡಿಯಾ ಠುಸ್!
ಇತ್ತೀಚೆಗೆ ದೀಪಾವಳಿ ಹಬ್ಬ ಆಚರಿಸಲಾಯಿತು. ಆ ಕಾಲಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಐಡಿಯಾವೊಂದು ಹೊಳೆಯಿತು. ಅದೇನೆಂದರೆ ಪತ್ರಕರ್ತರಿಗೆ ಸ್ವೀಟ್ ಹಾಗೂ ಪಟಾಕಿ ಬಾಕ್ಸ್ ಗಿಫ್ಟ್ ನೀಡುವುದು. ಇದಕ್ಕಾಗಿ ಅವರು ಎಲ್ಲಾ ಮಾಧ್ಯಮಗಳ ಮುಖ್ಯಸ್ಥರಿಗೆ ತಮ್ಮ ನಿವಾಸದ ಸ್ಥಿರ ದೂರವಾಣಿಯಿಂದ ಫೋನ್ ಮಾಡಿಸಿದರು. ಕನ್ನಡ ರಾಜ್ಯೋತ್ಸವ, ನರಕ ಚತುರ್ದಶಿ ಒಂದರ ಹಿಂದೆ ಒಂದರಂತೆ ಬಂದಿದ್ದರಿಂದ ಸ್ಥಳೀಯ ಪತ್ರಿಕೆಗಳು ಒಟ್ಟೊಟ್ಟಿಗೆ ಎರಡು ದಿನ ರಜೆ ನೀಡಿದ್ದವು. ರಾಜ್ಯ ಹಾಗೂ ರಾಷ್ಟ್ರೀಯ ಪತ್ರಿಕೆಗಳಿಗೂ ಒಂದು ದಿನ ರಜೆ ಇತ್ತು. ಹೀಗಾಗಿ ಅವರ ಕರೆಗೆ ಹೆಚ್ಚಿನ ಮಂದಿ ಸ್ಪಂದಿಸಲಿಲ್ಲ. ಅಲ್ಲದೇ ಇದೇನಿದು ಹೊಸ ಸಂಪ್ರದಾಯ? ಇದನ್ನು ಯಾವ ಫಂಡ್‌ನಲ್ಲಿ ನೀಡಲಾಗುತ್ತಿದೆ? ಸರ್ಕಾರ ಇದಕ್ಕೇನಾದರೂ ಹಣ ನೀಡಿದೆಯೇ  ಎಂದು ಕೆಲವರು ಪ್ರಶ್ನಿಸಿದರು. ಹೀಗಾಗಿ ಗಿಫ್ಟ್ ಕಾರ್ಯಕ್ರಮ ಠುಸ್ ಪಟಾಕಿಯಂತಾಯ್ತು.

ಲಿಂಬಿಕಾಯಿ ತೆಂಗಿನಕಾಯಿಂದ ಕಮಲಕ್ಕ ಜಿಗ್ಯಾಕ್ ಹೊಂಟೈತಿ!

ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕೆಜೆಪಿ ಸಂಸ್ಥಾಪಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಕೆಜೆಪಿ ಸಮಾವೇಶವೆಂದ ಮೇಲೆ ಕೇಳಬೇಕೆ? ಎಡಗಡೆ ಮೋಹನ ಲಿಂಬಿಕಾಯಿ, ಬಲಗಡೆ ಅಶೋಕ ಕಾಟವೆ ಇರಲೇಬೇಕು. ಆದರೆ, ಆಶ್ಚರ್ಯದ ಸಂಗತಿಯೆಂದರೆ ರ್ಯಾಲಿಗೆ ಲಿಂಬಿಕಾಯಿ ಗೈರಾಗಿದ್ದರು. ಹುಬ್ಬಳ್ಳಿಗೆ ಪರ ಜಿಲ್ಲೆಯಿಂದ ಬಂದ ನಾಯಕರು ಇದನ್ನು ಗಮನಿಸಿ ಲಿಂಬಿಕಾಯಿ ಸಾಹೇಬ್ರು ಎಲ್ಲಿ ಎಂದು ಪ್ರಶ್ನಿಸುತ್ತಿದ್ದರು. ಸ್ಥಳೀಯ ನಾಯಕರು ಅದು ಇದು ಸಬೂಬು ಹೇಳಿ ಸುಮ್ಮನಾಗುತ್ತಿದ್ದರು. ಈ ಮಧ್ಯೆ ಬೀದರ್‌ನಿಂದ ಬಂದ ನಾಯಕರೊಬ್ಬರು ಲಿಂಬಿಕಾಯಿ ಕಾಣವಲ್ರಲ್ಲಾ ಎಂದು ನೆರೆದಿದ್ದ ನಾಯಕರೆದುರೇ ಪ್ರಶ್ನಿಸಿದರು. ಒಂದು ಕ್ಷಣ ಎಲ್ಲರೂ ಮೌನವಾಗಿದ್ದರು. ಹಿಂದೆ ನಿಂತಿದ್ದ ಹುಬ್ಬಳ್ಳಿಯ ಕಾರ್ಯಕರ್ತರು ಸುಮ್ಮನಿರದೆ 'ಲಿಂಬಿಕಾಯಿ ತೆಂಗಿನಕಾಯಿಂದ ಕಮಲಕ್ಕ ಜಿಗಿಯೋದಕ್ಕೆ ಹೊಂಟೈತಿ' ಎಂದು ಉಸಿರಿದ್ದೇ ತಡ ಎಲ್ಲರೂ ಒಮ್ಮೆ ಗೋಳ್ ಎಂದು ನಕ್ಕರು. ಏನಾಗುತ್ತಿದೆ ಎಂದು ಯಡಿಯೂರಪ್ಪನವರು ನೆರೆದವರತ್ತ ಕಣ್ಣಾಯಿಸಿದರೆ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡರು!

- ನಂಬೀರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ