ಅಂಕಣಗಳು

ಇಷ್ಟಕ್ಕೂ ರಾವ್ ಹೇಳಿದ್ದರಲ್ಲಿ ತಪ್ಪು ಏನಿದೆ?

'ಈ ಮೂರ್ಖರು ವಿಜ್ಞಾನ ಮತ್ತು ಸಂಶೋಧನೆಗೆ ಎಲ್ಲಿಂದ ಹಣ ನೀಡುತ್ತಾರೆ?...

'ಈ ಮೂರ್ಖರು ವಿಜ್ಞಾನ ಮತ್ತು ಸಂಶೋಧನೆಗೆ ಎಲ್ಲಿಂದ ಹಣ ನೀಡುತ್ತಾರೆ? ಇವರಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ?'
ಕೇಂದ್ರ ಸರ್ಕಾರ 'ಭಾರತ ರತ್ನ' ಗೌರವ ನೀಡಿದ 24 ಗಂಟೆಗಳಲ್ಲಿ ಹಿರಿಯ ವಿಜ್ಞಾನಿ ಸಿ.ಎನ್.ಆರ್. ರಾವ್ ಆಡಿದ ಮಾತುಗಳಿವು! ಸ್ವತಂತ್ರ ಭಾರತದ 67 ವರ್ಷಗಳ ಇತಿಹಾಸದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಕೇವಲ ಇಬ್ಬರು ಭಾರತ ರತ್ನಗಳು (ರಾವ್ ಎರಡನೆಯವರು) ಉದಯಿಸಿರುವುದನ್ನು ಗಮನಿಸಿದಾಗ, ಈ ಕ್ಷೇತ್ರದ ಬಗ್ಗೆ ದಿಲ್ಲಿ ಸರ್ಕಾರಗಳು ಅವಗಣನೆ ಮಾಡಿವೆ ಎಂಬ ಅನುಮಾನ ಮೂಡದೇ ಇರದು. ಯಾವುದೇ ದೇಶ, ಸಮುದಾಯದ ಏಳಿಗೆಗೆ ವೈಜ್ಞಾನಿಕ ಸಂಶೋಧನೆ ಅತ್ಯವಶ್ಯ ಎಂಬುದರ ಬಗ್ಗೆ ಎರಡು ಮಾತಿಲ್ಲ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ವೈಜ್ಞಾನಿಕ ಆವಿಷ್ಕಾರ, ಸಂಶೋಧನೆ, ಪ್ರಗತಿಗೆ ಇನ್ನಿಲ್ಲದಂತೆ ಆದ್ಯತೆ ನೀಡಿವೆ. ಪ್ರತಿ ವರ್ಷ ಪ್ರಕಟವಾಗುವ ನೊಬೆಲ್ ಪ್ರಶಸ್ತಿಗಳನ್ನು ಗಮನಿಸಿದರೆ ಇದೇ ದೇಶಗಳ ವಿಜ್ಞಾನಿಗಳ ಹೆಸರು ರಾರಾಜಿಸುತ್ತವೆ. ಹಾಗಾದರೆ ಭಾರತದಲ್ಲಿ ವಿಜ್ಞಾನಕ್ಕೆ ಬೆಲೆಯೇ ಇಲ್ಲವೇ? 20ನೇ ಶತಮಾನದ ಆದಿಭಾಗ ಜಾಗತಿಕ ಮಟ್ಟದಲ್ಲಿ ವಿಜ್ಞಾನ ಮುಂಚೂಣಿಗೆ ಬಂದ ಕಾಲ. ಹೊಸ ಹೊಸ ವೈಜ್ಞಾನಿಕ ಸಂಶೋಧನೆಗಳು ಮನುಕುಲದ ದಿಕ್ಕನ್ನೇ ಬದಲಿಸಿದ ಪರ್ವ ಕಾಲ. ಭಾರತ ಸಹ ಹಿಂದೆ ಬೀಳಲಿಲ್ಲ. ವಿಜ್ಞಾನಿಗಳಿಗೆ ಮಣೆ ಹಾಕಲು ಹಿಂಜರಿಯಲಿಲ್ಲ. ಸ್ವಾತಂತ್ರ್ಯ ಬಂದ ಮೊದಲ ದಶಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಆದ್ಯ ಪ್ರಾಶಸ್ತ್ಯವೂ ಲಭಿಸಿತು. ವಿಜ್ಞಾನಿಗಳು ಸಮಾಜದಲ್ಲಿ ಪ್ರತಿಷ್ಠಿತರ ಸಾಲಿನಲ್ಲಿ ನಿಲ್ಲುವಂತಾಯಿತು. ಇದಕ್ಕೂ ಮೊದಲೇ ಉದ್ಯಮಿ ಮತ್ತು ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದ ಜೆ.ಆರ್.ಡಿ. ಟಾಟಾ ವಿಜ್ಞಾನ ಮತ್ತು ವಿಜ್ಞಾನಿಗಳಿಗೆಂದೇ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸ್ಥಾಪಿಸಿದ್ದರು. ಇಲ್ಲಿ ಅನೇಕ ವೈಜ್ಞಾನಿಕ ಸಂಶೋಧನೆಗಳು ಕೈಗೂಡಿದವು. ನಂತರ ಸ್ಥಾಪನೆಗೊಂಡ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಈ ಕ್ಷೇತ್ರದ ವಿಸ್ತಾರವನ್ನು ಹಿಗ್ಗಿಸಿದವು. ವಿಜ್ಞಾನ ಮತ್ತು ಸಂಶೋಧನೆ ಎಂಬುದು ಗೌರವದ ಸಂಕೇತಗಳಾದವು. ಆದರೆ, ಸಮಾಜವಾದಿ ಚಿಂತನೆಯ ಆರ್ಥಿಕ ನೀತಿಗಳು ಭಾರತದ ಅಭಿವೃದ್ಧಿಯ ವೇಗಕ್ಕೆ ಲಗಾಮು ಹಾಕಿದಂತೆಲ್ಲ ಅದರ ಬಿಸಿ ವೈಜ್ಞಾನಿಕ ಕ್ಷೇತ್ರಕ್ಕೂ ತಟ್ಟಿತು. 1980ರ ದಶಕದ ವೇಳೆಗೆ ಈ ಕ್ಷೇತ್ರ ನಿಂತ ನೀರಂತಾಯಿತು. ವಿಜ್ಞಾನ ತನ್ನ ಹೊಳಪು ಕಳೆದುಕೊಂಡಿತು. ತಪ್ಪದಂತೆ ತಿಂಗಳ ಪಗಾರ ತರುವ ಸರ್ಕಾರಿ ಕೆಲಸ, ಬ್ಯಾಂಕು ಮುಂತಾದ ನೌಕರಿ ಆಧಾರಿತ ಕಲಿಕೆಗೆ ಸಮುದಾಯ ಮುಂದಾಯಿತು. ಹೀಗಾಗಿ ಸಂಶೋಧನೆ ಸೊರಗಿತು. ವಿಜ್ಞಾನ ಆದ್ಯತೆಯ ಕಲಿಕಾ ಕ್ಷೇತ್ರವಾಗಲಿಲ್ಲ. ಇನ್ನು 1990ರ ದಶಕದ ಆರ್ಥಿಕ ಉದಾರೀಕರಣ ಈ ಕ್ಷೇತ್ರಕ್ಕೆ ಮರುಜೀವ ನೀಡುವ ಭರವಸೆ ಮೂಡಿಸಿತ್ತು. ಆದರೆ, ಉದಾರೀಕರಣದ ಬೆನ್ನಿಗೇ ಬಂದ ಐಟಿ ಕ್ರಾಂತಿ ಪರೋಕ್ಷವಾಗಿ ವೈಜ್ಞಾನಿಕ ಕ್ಷೇತ್ರದ ಮೇಲೆ ಗದಾ ಪ್ರಹಾರ ಮಾಡಿತು. ಈ ಮಾಹಿತಿ ತಂತ್ರಜ್ಞಾನದ ಭರಾಟೆ, ಅದು ತರುವ ಥೈಲಿಯ ಮುಂದೆ ವೈಜ್ಞಾನಿಕ ಸಂಶೋಧನೆ ಸೂತ್ರ ಹರಿದ ಗಾಳಿಪಟದಂತಾಯಿತು. ಒಂದು ಕಾಲಕ್ಕೆ ಇಡೀ ಏಷ್ಯಾದಲ್ಲಿಯೇ ವೈಜ್ಞಾನಿಕ ಕ್ಷೇತ್ರದಲ್ಲಿ ಮುಂದಿದ್ದ ದೇಶ ಇತರ ರಂಗಗಳಂತೆ ಇಲ್ಲೂ ತನ್ನ ಸ್ಥಾನ ಕಳೆದುಕೊಂಡಿತು. ಬಂಡವಾಳ ತರುವ ಐಟಿ ಕಂಪನಿಗಳಿಗೆ ರತ್ನಗಂಬಳಿ ಹಾಸಿ ತೆರಿಗೆ ರಜೆ ಘೋಷಿಸಿದ ಸರ್ಕಾರಗಳು, ವಿಜ್ಞಾನ ಮತ್ತು ಸಂಶೋಧನೆಯತ್ತ ತಿರುಗಿ ನೋಡಲೇ ಇಲ್ಲ. ಜಾಗತಿಕ ಮಟ್ಟದಲ್ಲಿ ಹೊಸ ಸಂಶೋಧನೆ, ಆವಿಷ್ಕಾರಗಳನ್ನು ಗುರುತಿಸುವ ಸೂಚ್ಯಂಕದಲ್ಲಿ ಭಾರತ 65ನೇ ಸ್ಥಾನ (125 ದೇಶಗಳು)ದಲ್ಲಿದೆ. ಅದಕ್ಕಿಂತ ಮುಖ್ಯವಾಗಿ ಮಾರಿಷಸ್, ಸೌದಿ ಅರೇಬಿಯಾ ಮತ್ತು ಗಯಾನಾಗಳಿಗಿಂತ ಹಿಂದಿದೆ ಎಂದರೆ, ವಿಜ್ಞಾನದ ಬಗ್ಗೆ ಯಾವ ಪರಿಯ ನಿರ್ಲಕ್ಷ್ಯ ತೋರಿದ್ದೇವೆ ಎಂಬುದು ಮನದಟ್ಟಾಗುತ್ತದೆ.
ಭಾರತ ವಿಜ್ಞಾನಕ್ಕೆ ಆದ್ಯತೆ ನೀಡುವುದನ್ನು ಕಡೆಗಣಿಸಿದ ಸಂದರ್ಭದಲ್ಲಿಯೇ ಚೀನಾ ವೈಜ್ಞಾನಿಕ ಸಂಶೋಧನೆಯನ್ನು ಅಪ್ಪಿಕೊಂಡಿತು. ಭವಿಷ್ಯ ರೂಪಿಸುವ ರಂಗಗಳಲ್ಲಿ ಇದೂ ಒಂದು ಎಂದು ಗುರುತಿಸಿತು. ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ನಿರ್ಮಿಸಲು ಮುಂದಾಯಿತು. ಯಾವುದೇ ಕಾರಣಕ್ಕೂ ಇದಕ್ಕೆ ಹಣಕಾಸಿನ ಅಡಚಣೆ ಉಂಟಾಗದಂತೆ ಎಚ್ಚರ ವಹಿಸಿತು. ಶಾಲಾ ಮಟ್ಟದಲ್ಲಿ ವಿಜ್ಞಾನ ವಿಷಯ ಕಲಿಯುವಂತೆ ಮಕ್ಕಳನ್ನು ಪ್ರೋತ್ಸಾಹಿಸಿತು. ಅದಕ್ಕಾಗಿ ವಿಶೇಷ ಕ್ರಮಗಳನ್ನು ಅನುಸರಿಸಿತು. ಇದೆಲ್ಲದರ ಫಲವಾಗಿ ಇಂದು ಚೀನಾ ಈ ಕ್ಷೇತ್ರದಲ್ಲಿ ಮುಂಚೂಣಿಯ ದೇಶಗಳ ಸಾಲಿನಲ್ಲಿ ನಿಂತಿದೆ. 1990ರ ದಶಕದಲ್ಲಂತೂ ಚೀನಾ ವೈಜ್ಞಾನಿಕ ಸಂಶೋಧನೆಗೆ ಅತಿ ಹೆಚ್ಚಿನ ಆದ್ಯತೆ ನೀಡಿತು. ಹೇರಳವಾಗಿ ಹಣ ಹರಿಸಿತು. ಖಾಸಗಿ ಬಂಡವಾಳವನ್ನೂ ಆಕರ್ಷಿಸಿತು. ಇಂದು ಚೀನಾದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಶೇ.1.54ರಷ್ಟು ವಿಜ್ಞಾನ ಕ್ಷೇತ್ರಕ್ಕೆ ಮೀಸಲಿರಿಸಿದೆ. ಅಲ್ಲದೆ ಮುಂದಿನ 10 ವರ್ಷಗಳಲ್ಲಿ ಈ ಪ್ರಮಾಣವನ್ನು ಶೇ.3ಕ್ಕೆ ಹೆಚ್ಚಿಸುವ ಹೆಗ್ಗುರಿ ಹೊಂದಿದೆ. ಇದೆಲ್ಲದರ ಪರಿಣಾಮ ಚೀನಾದ ಒಟ್ಟಾರೆ ಅಭ್ಯುದಯದಲ್ಲಿ ಪ್ರಧಾನವಾಗಿ ಕಾಣುತ್ತಿದೆ. ಅಷ್ಟೇ ಅಲ್ಲ ಚೀನಾ ಇದೇ ವೇಗದಲ್ಲಿ ಮುಂದುವರಿದರೆ 2023ರ ವೇಳೆಗೆ ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿನ ಹೂಡಿಕೆಯಲ್ಲಿ ಅಮೆರಿಕವನ್ನೂ ಹಿಂದಿಕ್ಕಿ ಜಗತ್ತಿಗೇ ಮೊದಲಿಗನಾಗಲಿದೆ. ಸಂಶೋಧನಾ ಕೇಂದ್ರಗಳು, ಸಂಶೋಧನೆಗೆ ಪೂರಕವಾದ ತರಬೇತಿ ಕೇಂದ್ರಗಳು ಚೀನಾದಲ್ಲಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿವೆ. ಸಾಮುದಾಯಿಕ ವಿಷಯಗಳಿಂದ ಹಿಡಿದು ಬಾಹ್ಯಾಕಾಶ, ಮಿಲಿಟರಿ ಕ್ಷೇತ್ರಗಳವರೆಗೆ ಚೀನಾ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಸಂಶೋಧನೆಗೆ ಅಗಾಧವಾದ ಹೂಡಿಕೆ ಮಾಡಿದೆ.
ವೈಜ್ಞಾನಿಕ ಜರ್ನಲ್‌ಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಲು ವಿಜ್ಞಾನಿಗಳಿಗೆ ವಿಫುಲ ಅವಕಾಶಗಳನ್ನು ಕಲ್ಪಿಸಿದೆ. ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ವಿಶೇಷ ವಿತ್ತ ವಲಯಗಳ ಮಾದರಿಯಲ್ಲಿ ವಿಶೇಷ ತಂತ್ರಜ್ಞಾನ ಅಭಿವೃದ್ಧಿ ವಲಯಗಳನ್ನು ಸ್ಥಾಪಿಸಿದೆ. ಈ ವಲಯಗಳಲ್ಲಿ ಬೃಹತ್ ವಿದೇಶಿ ಬಂಡವಾಳ ಹೂಡಿಕೆಗೆ ಬೇಕಾದ ಉಪಕ್ರಮಗಳನ್ನು ಜಾರಿಗೆ ತಂದಿದೆ. ಚೀನಾದಾದ್ಯಂತ ಇಂತಹ 54 ವಿಶೇಷ ವಲಯಗಳು ಕಾರ್ಯಾಚರಿಸುತ್ತಿವೆ. ಇನ್ನು ದಕ್ಷಿಣ ಕೊರಿಯಾ ಇಂದು ಜಗತ್ತಿನ ತಂತ್ರಜ್ಞಾನ ್ಡಛಿ (ಕೇಂದ್ರ) ಆಗುವತ್ತ ದಾಪುಗಾಲು ಇಡುತ್ತಿದೆ ಎಂದರೆ ಅದಕ್ಕೆ ಕಾರಣ ವೈಜ್ಞಾನಿಕ ಸಂಶೋಧನೆಯ ಮಹತ್ವವನ್ನು ಅದು ಅರಿತು ಗುರುತಿಸಿರುವುದು. 1999ರಷ್ಟು ಹಿಂದೆಯೇ 25 ವರ್ಷಗಳ ವೈಜ್ಞಾನಿಕ ಸಂಶೋಧನೆಯ ರೂಪುರೇಷೆ (vision document) ಪ್ರಸ್ತುತಪಡಿಸಿದ ಕೊರಿಯಾ ಆಡಳಿತ, ಆ ಹಾದಿಯಲ್ಲಿ ಒಂದೂ ತಪ್ಪು ಹೆಜ್ಜೆ ಇಡದಂತೆ ಮುನ್ನಡೆದಿದೆ. ಇದಕ್ಕಾಗಿ ನಾನಾ ಕ್ಷೇತ್ರಗಳಲ್ಲಿ 23 ಯೋಜನೆಗಳನ್ನು ಹಮ್ಮಿಕೊಂಡು ಅದಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿದೆ. ಅಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಯಾವ ಮಟ್ಟಕ್ಕೆ ಇದೆ ಎಂದರೆ ಮುಂದುವರಿದ ದೇಶಗಳ ಆಟೊಮೊಬೈಲ್ ಕಂಪನಿಗಳನ್ನು ಮಕಾಡೆ ಮಲಗಿಸಿದೆ.
ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಜಗತ್ತನ್ನೇ ಆಳುತ್ತಿದೆ. ಇದಕ್ಕೆ ಸರ್ಕಾರಿ ಅನುದಾನದ ಒಟ್ಟು ಶೇ.50ರಷ್ಟು ಬಂಡವಾಳವನ್ನು ಒದಗಿಸಿದೆ. ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಗೆಂದೇ ದಕ್ಷಿಣ ಕೊರಿಯಾವು ಕಳೆದ ವರ್ಷ ತನ್ನ ಬೊಕ್ಕಸದಿಂದ 2850 ಕೋಟಿ ಡಾಲರ್ ವ್ಯಯ ಮಾಡಿದೆ. ಈ ರಂಗದಲ್ಲಿ ಇದುವರೆಗೂ ಏಷ್ಯಾದಲ್ಲಿ ಪಾರಮ್ಯ ಹೊಂದಿದ್ದ ಜಪಾನ್‌ಗಿಂತ ಹೆಚ್ಚು ಹಣವನ್ನು ಕೊರಿಯಾ ಸಂಶೋಧನಾ ವಲಯಕ್ಕೆ ಹರಿಸಿದೆ. ಕಳೆದ 10 ವರ್ಷಗಳಲ್ಲಿ ಅದು 7016 ಪೇಟೆಂಟ್‌ಗಳನ್ನು ನೋಂದಾಯಿಸಿದೆ. ಬ್ರಿಟನ್, ಚೀನಾ ಮತ್ತು ಫ್ರಾನ್ಸ್ ದೇಶಗಳನ್ನು ಹಿಮ್ಮೆಟ್ಟಿಸಿ ಜಗತ್ತಿನ ನಾಲ್ಕನೇ ಅತಿ ಹೆಚ್ಚು ಪೇಟೆಂಟ್ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. ಅಲ್ಲಿನ ವೈಜ್ಞಾನಿಕ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಈವರೆಗೆ ಜಾಗತಿಕ ವಿಜ್ಞಾನ ಜರ್ನಲ್‌ಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಮೂಲಭೂತ ವಿಜ್ಞಾನದಲ್ಲಿ ಸಂಶೋಧನೆಗೆಂದೇ ಕೊರಿಯಾ ತನ್ನ ಒಟ್ಟು ವಾರ್ಷಿಕ ಅನುದಾನದ ಕಾಲು ಭಾಗದಷ್ಟು ಹಣವನ್ನು ತೆಗೆದಿರಿಸಿದೆ. ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳು ನಾನಾ ಸಂಶೋಧನೆಗಳಲ್ಲಿ ತೊಡಗಿದ್ದಾರೆ.
ಇದಕ್ಕೆ ಹೋಲಿಸಿದರೆ ಭಾರತದ ಪರಿಸ್ಥಿತಿ ತೀರಾ ಭಿನ್ನ. ಕಳೆದೆರಡು ದಶಕಗಳಲ್ಲಿ ವೈಜ್ಞಾನಿಕ ಸಂಶೋಧನೆಗೆ ಭಾರತ ತನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ.1 ಭಾಗವನ್ನು ವ್ಯಯ ಮಾಡಲೂ ಹಿಂದೇಟು ಹಾಕಿದೆ. 1950ರ ದಶಕದಲ್ಲಿ ನಾಲ್ಕು ಐಐಟಿಗಳನ್ನು ಸ್ಥಾಪಿಸಿದ ನಂತರ ಮತ್ತಷ್ಟು ತಂತ್ರಜ್ಞಾನ ಸಂಸ್ಥೆಗಳನ್ನು ತೆರೆಯಲು 50 ವರ್ಷಗಳೇ ಬೇಕಾಯಿತು. ಭಾರತದ ವಿಜ್ಞಾನಿಗಳು ಇಂತಹ ಪರಿಸ್ಥಿತಿಯಲ್ಲಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂಬುದು ಬೇರೆ ಮಾತು. ಆದರೆ, ಸರ್ಕಾರಗಳಿಂದ ಅವರಿಗೆ ಅಗತ್ಯ ನೆರವು, ಪ್ರೋತ್ಸಾಹ ದೊರೆಯುತ್ತಿಲ್ಲ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಖಾಸಗಿ ವಲಯದಲ್ಲಿ ಕೆಲವು ಸಂಶೋಧನಾ ಮತ್ತು ಅಭಿವೃದ್ಧಿ (R and D) ಕೇಂದ್ರಗಳು ಇರುವುದನ್ನು ಬಿಟ್ಟರೆ ಸರ್ಕಾರದ ಪಾಲು ಶೂನ್ಯ. ಕಳೆದ ದಶಕದಲ್ಲಿ ಯುಪಿಎ ಮೊದಲ ಅವತರಣಿಕೆಯ ಸರ್ಕಾರ ಮೈಕೊಡವಿಕೊಂಡು ಎದ್ದು ವೈಜ್ಞಾನಿಕ ಸಂಶೋಧನೆಗೆ ಅನುದಾನ ಬಿಡುಗಡೆ ಮಾಡುವುದರಲ್ಲಿ ಕೊಂಚ ಧಾರಾಳತನ ತೋರಿತು.
ಭಾರತ ರತ್ನ ಸಿ.ಎನ್.ಆರ್. ರಾವ್ ಅವರೇ ಅಧ್ಯಕ್ಷರಾಗಿರುವ ರಾಷ್ಟ್ರೀಯ ವೈಜ್ಞಾನಿಕ ಸಲಹೆ ಮಂಡಳಿ 2010ರಲ್ಲಿ ವೈಜ್ಞಾನಿಕ ಕ್ಷೇತ್ರದ ಅಗತ್ಯಗಳನ್ನು ಪಟ್ಟಿ ಮಾಡಿ ತುರ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದರಲ್ಲಿ ಯುವಕರನ್ನು ಆಕರ್ಷಿಸಲು ಹೆಚ್ಚು ಹೆಚ್ಚು ಸಂಶೋಧನಾ ಅಕಾಡೆಮಿಗಳ ಸ್ಥಾಪನೆ, ಸಂಶೋಧನೆಯನ್ನು ವಿಕೇಂದ್ರಿಕರಣಗೊಳಿಸುವ ಮತ್ತು ಯುವ ಸಂಶೋಧಕರಿಗೆ ಪ್ರೋತ್ಸಾಹ ನೀಡುವ ಹಲವಾರು ಚಿಂತನೆಗಳನ್ನು ಹರಿಯಬಿಟ್ಟಿತ್ತು. ವಿಪರ್ಯಾಸವೆಂದರೆ ಕುತ್ತಿಗೆವರೆಗೆ ಅಕ್ರಮಗಳನ್ನು ಅಂಟಿಸಿಕೊಂಡು, ಮತ ಲೆಕ್ಕಾಚಾರಕ್ಕಷ್ಟೇ ಪ್ರಾಶಸ್ತ್ಯ ನೀಡುತ್ತಿರುವ ಈ ಯುಪಿಎ ಸರ್ಕಾರ ಸಲಹಾ ಮಂಡಳಿಯ ಶಿಫಾರಸಿನಂತೆ ನಡೆದುಕೊಳ್ಳುವುದು ಹಾಗಿರಲಿ, ಕಳೆದೆರಡು ವರ್ಷಗಳಲ್ಲಿ ಮಿತವ್ಯಯದ ಹೆಸರಿನಲ್ಲಿ ಅನುದಾನವನ್ನು ಕಡಿತಗೊಳಿಸಿದೆ. 2017ರ ವೇಳೆಗೆ ಜಿಡಿಪಿಯ ಶೇ.20ರಷ್ಟನ್ನಾದರೂ ಸಂಶೋಧನೆಗೆ ಕೊಡಿ ಎಂದು ಸಲಹಾ ಮಂಡಳಿ ಹೇಳಿದ್ದೇ ಬಂತು. ಇಂದಿಗೂ ಆ ನಿಟ್ಟಿನಲ್ಲಿ ಯಾವುದೇ ಕೆಲಸ ಆಗಿಲ್ಲ. ಇದೆಲ್ಲದರ ನಡುವೆಯೂ ಇಸ್ರೊ ಚಂದ್ರ, ಮಂಗಳನನ್ನು ಸುತ್ತಿದೆ; ರಾಕೆಟ್‌ಗಳು ನಭವನ್ನು ಭೇದಿಸಿ ಬಾಹ್ಯಾಕಾಶವನ್ನು ಪ್ರದಕ್ಷಿಣೆ ಹಾಕಿವೆ. ದೇವಕಣದ ಇರುವಿಕೆ ಪತ್ತೆ ಹಚ್ಚುವಲ್ಲಿ ನಮ್ಮ ವಿಜ್ಞಾನಿ ಸಮುದಾಯ ಮಹತ್ವದ ಪಾತ್ರ ವಹಿಸಿದೆ. ಇದು ನಮ್ಮಲ್ಲಿರುವ ಸಾಮರ್ಥ್ಯ (potential)ದ ಪರಿಚಯ ಮಾಡಿಕೊಡುತ್ತದೆ. ಆದರೆ, ಅದನ್ನು ಪೋಷಿಸುವ ಮನಸ್ಸು ಸರ್ಕಾರಗಳಿಗೆ ಇರದಿದ್ದರೆ ಭಾರತ ನಿಜವಾದ ಅರ್ಥದಲ್ಲಿ ಹೊಸತನದ ಹರಿಕಾರನಾಗಲು ಸಾಧ್ಯವಿಲ್ಲ. ನಮ್ಮಲ್ಲೇ ಹೇರಳವಾದ ವಿ'ಜ್ಞಾನ'ವಿದ್ದರೂ ಆಮದು 'ಜ್ಞಾನ'ವನ್ನು ನಂಬಿ ಕುಳಿತುಕೊಳ್ಳುವ ಮೂರ್ಖತನ ನಮ್ಮದಾಗಿದೆ. ಈಗ ಹೇಳಿ ಭಾರತ ರತ್ನ ರಾವ್ ಹೇಳಿದ್ದರಲ್ಲಿ ತಪ್ಪು ಏನಿದೆ?

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!