ಚುನಾವಣೆ ಸಮೀಪಿಸಿದಂತೆಲ್ಲ ಬೆಳೆಯುತ್ತಿರುವ ಬಯ್ಗುಳ ಪದಕೋಶ!
ಥಿಯೇಟರ್ಗಳಲ್ಲಿ ಕಥೆಯ ತಿರುಳೇ ಪ್ರಮುಖವಾಗುತ್ತದೆ. ಗ್ಯಾಲರಿಯಲ್ಲಿ ಕುಳಿತವರಿಂದ ಸಿಗುವುದು ಚಪ್ಪಾಳೆಯೋ ಅಥವಾ ನಿರಾಸೆಯ ಉದ್ಗಾರಗಳೋ ಎಂಬುದನ್ನು ಈ ಥೀಮ್ ನಿರ್ಧರಿಸುತ್ತದೆ. ಎಲ್ಲ ನಾಟಕಗಳಿಗೆ ಒಂದು ಥೀಮ್ ಇದ್ದಂತೆ ಎಲ್ಲ ಚುನಾವಣೆಗಳಿಗೂ ಥೀಮ್ ಎಂಬುದು ಇರುತ್ತದೆ. ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರದ ಹೆಮ್ಮೆಯ ಭಾವವೇ ಥೀಮ್ ಆಗಿತ್ತು. ದಶಕಗಳು ಉರುಳಿದಂತೆ ಆ ಜಾಗವನ್ನು ಬೇರೆ ಬೇರೆ ಥೀಮ್ಗಳು ತುಂಬಿದವು. 1970ರಲ್ಲಿ ಬಡತನ ಮತ್ತು ಯುದ್ಧವೇ ಚುನಾವಣೆ ಸೆಣೆಸಾಟದ ಮುಖ್ಯ ತಿರುಳು. 1980ರಲ್ಲಿ ರಾಜಕೀಯ ಹತ್ಯೆ ಹಾಗೂ ಭ್ರಷ್ಟಾಚಾರದ ವಿಷಯಗಳು ಮುಖ್ಯ ತಿರುಳಾಗಿದ್ದವು. 1990ರಲ್ಲಿ ಧರ್ಮವೇ ಚುನಾವಣೆಯ ಕಣದಲ್ಲಿ ಅನುರಣಿಸಿತು. ನಂತರದ ದಿನಗಳಲ್ಲಿ ಅಭಿವೃದ್ಧಿ ಎಂಬುದು ಚುನಾವಣಾ ಕಣದಲ್ಲಿ ಪ್ರಸ್ತಾಪಿತವಾದ ಮುಖ್ಯ ವಿಷಯವಾಗಿತ್ತು.
ಈಗ ಸಿದ್ಧವಾಗುತ್ತಿರುವ ಚುನಾವಣಾ ಕಣ ಏನೆಲ್ಲ ವಿಷಯಗಳಿಂದ ಸುತ್ತುವರಿದಿದೆ? ಕಾಂಗ್ರೆಸ್ ಪಕ್ಷ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಹೋರಾಟ ನಡೆಸಿದೆ. ನರೇಂದ್ರ ಮೋದಿ ದೆಹಲಿ ದರ್ಬಾರಿಗೆ ಬಿರುಸಿನಿಂದ ತಯಾರಾಗುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳು ಬೇಲಿಯ ಮೇಲೆ ಕುಳಿತು ತಮಗೆ ಹೆಚ್ಚಿನ ಭೋಜನ ಯಾವ ಕಡೆಯಿಂದ ಸಿಗಬಹುದು ಎಂಬ ಲೆಕ್ಕಾಚಾರಗಳಲ್ಲಿ ತೊಡಗಿಸಿಕೊಂಡಿವೆ. ಹೊರಬೀಳುತ್ತಿರುವುದು ಮಾತ್ರ ಎಲ್ಲೆ ಮೀರಿದ ಅಸಭ್ಯ ಮಾತುಗಳು.
ವ್ಯಂಗ್ಯವೇ ಇಲ್ಲದ ರಾಜಕೀಯ ಎಂದರೆ ಮೇಕಪ್ ಇಲ್ಲದ ರಾಮ್ಲೀಲಾದಂತೆ. ಮಾತಿನಲ್ಲಿ ವ್ಯಂಗ್ಯ ಅವಶ್ಯ. ಅದು ಚುನಾವಣೆಯನ್ನು ರಂಗೇರಿಸುತ್ತದೆ. ವೀಕ್ಷಕರನ್ನು ಸೆಳೆದು, ನಾಯಕನ ಶಾಣ್ಯಾತನದ ಪರಿಚಯವನ್ನೂ ಮಾಡಿಕೊಡುತ್ತದೆ. ಆದರೆ ವ್ಯಂಗ್ಯವು ಅವಹೇಳನಕ್ಕೆ ಹಾಗೂ ಅವಹೇಳನವು ತುಚ್ಛ ಬಯ್ದಾಟಕ್ಕೆ ದಾರಿಮಾಡಿಕೊಡುವುದು ಮಾತ್ರ ದುರಂತ. ಈ ಬಗೆಯ ವರ್ತನೆಗಳು ಸಂಸ್ಕೃತಿಯನ್ನು ಜಾಹೀರುಗೊಳಿಸುತ್ತವೆ. 'ಡಿಸ್ಹಾನರೇಬಲ್ ಇನ್ಸಲ್ಟ್ಸ್' ಎಂಬ ಪುಸ್ತಕದ ಮುನ್ನುಡಿಯಲ್ಲಿ ಬ್ರಿಟಿಷ್ ಸಂಸದ ಗ್ರೆಗ್ ನೈಟ್ ಬರೆಯುತ್ತಾರೆ- 'ತೀಕ್ಷ್ಣ ನುಡಿ, ಅವಮಾನಿಸುವಿಕೆ, ಧಾರ್ಷ್ಟ್ಯ ಇವೆಲ್ಲವೂ ಉತ್ತಮ ಚರ್ಚಾಪಟುವಿನ ಬತ್ತಳಿಕೆಯ ಅಸ್ತ್ರಗಳೇ' ಎಂದು. ಬಹುಷಃ ಇಂಥ ನಾಡಿನೊಂದಿಗೆ ಇರುವ ಸಂಬಂಧ ನೆನಪಿಸಿಕೊಳ್ಳಲೋ ಎಂಬಂತೆ ಸೋನಿಯಾ ಗಾಂಧಿಯವರು 2007ರಲ್ಲಿ 'ಮರ್ಚೆಂಟ್ ಆಫ್ ವೆನಿಸ್'ನ ಸ್ಫೂರ್ತಿ ಪಡೆದರು. ನರೇಂದ್ರ ಮೋದಿಯವರನ್ನು 'ಸಾವಿನ ವ್ಯಾಪಾರಿ' ಎಂದು ಜರೆದರು. 2013ರಲ್ಲಿ ಮೋದಿಯವರಿಂದ ಅದಕ್ಕೆ ಉತ್ತರ ಬಂದಂತಿದೆ. ಅವರು ಕಾಂಗ್ರೆಸ್ ಚಿಹ್ನೆಯಾದ ಹಸ್ತವನ್ನು 'ಕೊಲೆಗಾರನ ಕೈ' ಎಂದು ಹೇಳಿದ್ದಾರೆ.
ಭಾರತೀಯ ರಾಜಕಾರಣದಲ್ಲಿ ವ್ಯಂಗ್ಯವೆಂಬುದು ಭಾರಿ ಮೇಲ್ಮಟ್ಟವನ್ನು ಕಾಯ್ದುಕೊಂಡಿದ್ದ ದಿನಗಳಿದ್ದವು. ಇಂದಿರಾ ಗಾಂಧಿ ಅಂಥ ಪರಿಷ್ಕೃತ ವ್ಯಂಗ್ಯವನ್ನು ಬಳಸಿಕೊಳ್ಳುತ್ತ ಹೀಗೆ ಹೇಳಿದ್ದರು- 'ನನ್ನ ಅಜ್ಜ ನನಗೊಮ್ಮೆ ಹೇಳಿದ್ದ. ಈ ಜಗತ್ತಿನಲ್ಲಿ ಎರಡು ಬಗೆಯ ಜನರಿದ್ದಾರಂತೆ. ಒಬ್ಬರು ಕೆಲಸ ಮಾಡುವವರು ಹಾಗೂ ಇನ್ನೊಬ್ಬರು ಆ ಕೆಲಸಕ್ಕೆ ಶ್ರೇಯಸ್ಸನ್ನು ಪಡೆದುಕೊಳ್ಳುವವರು. ಆತ ನನಗೆ ಹೇಳಿದ್ದ-ನೀನು ಯಾವಾಗಲೂ ಮೊದಲ ಗುಂಪಿನಲ್ಲಿರು, ಏಕೆಂದರೆ ಅಲ್ಲಿ ಸ್ಪರ್ಧೆ ಕಡಿಮೆ ಎಂದು!'
ಇದೀಗ ಮೋದಿಯನ್ನು ಬಯ್ಯುವುದು ಕಾಂಗ್ರೆಸ್ ಭಟ್ಟಂಗಿ ಪಡೆಯ ನಿತ್ಯಕರ್ಮವಾಗಿದೆ. ಸೋನಿಯಾ ಅವರ ಸಾವಿನ ವ್ಯಾಪಾರಿ ಎಂಬ ಹೋಲಿಕೆಯನ್ನು ಇನ್ನಷ್ಟು ಹುರಿಗೊಳಿಸಿದಂತೆ, ಕಾಂಗ್ರೆಸ್ ವಕ್ತಾರ ರಶೀದ್ ಆಳ್ವಿ ಅವರು ಮೋದಿಯವರನ್ನು 'ಕೋಣನ ಮೇಲೆ ಕುಳಿತಿರುವ ಯಮರಾಜ' ಎಂದು ಬಯ್ದರು. ಅಹಮದಾಬಾದ್ನ ಒಂದು ಭೇಟಿಯ ವೇಳೆ ಅಲ್ಲಿನ ಮೋದಿ ಪ್ರಭೆಯನ್ನು ಕಂಡು ಬೆಚ್ಚಿಬಿದ್ದರೋ ಎಂಬಂತೆ ದಿಗ್ವಿಜಯ್ ಸಿಂಗ್ ಅವರು ನರೇಂದ್ರ ಮೋದಿಯವರನ್ನು ರಾವಣನಿಗೆ ಹೋಲಿಸಿದರು. ಮೋದಿ ಬಯ್ಯುವ ಸ್ಪರ್ಧೆಯಲ್ಲಿ ಎಲ್ಲರೂ ಪುರಾಣ ಪಾತ್ರಗಳಿಗೆ ಮೊರೆ ಹೋಗುತ್ತಿರುವ ಸಂಪ್ರದಾಯವನ್ನು ಮುರಿಯಲಿಕ್ಕೋ ಎಂಬಂತೆ ಕಾಂಗ್ರೆಸ್ನ ಸಲ್ಮಾನ್ ಖುರ್ಷಿದ್ ಮೋದಿಯವರನ್ನು 'ಮಂಗ್ಯಾ' ಅಂತ ಕರೆದರು. ಗಾಂಧಿ ಕುಟುಂಬದ ವೃಕ್ಷದಲ್ಲಿ ಲಾಗಾಯ್ತಿನಿಂದ ಕುಪ್ಪಳಿಸಿಕೊಂಡಿದ್ದ ಮಣಿಶಂಕರ್ ಅಯ್ಯರ್ ಅವರಿಗೆ ತಾವು ಈ ಸ್ಪರ್ಧಾಪ್ರಪಂಚದಿಂದ ಹೊರಗೆ ಉಳಿದು ಬಿಟ್ಟಿರುವ ಅಸುರಕ್ಷತಾಭಾವ ಕಾಡತೊಡಗಿತು. ಅವರು ಈ ನಿಟ್ಟಿನಲ್ಲಿ ಜೀವಶಾಸ್ತ್ರಗಳ ಪದಗುಚ್ಛದ ಮೊರೆ ಹೋದರು. ಮೋದಿಯವರನ್ನು ಹಾವು ಮತ್ತು ಚೇಳು ಎಂದು ಕುಟುಕಿದರು. ಅನುಕರಣೆ ಮಾಡುವ ಮೂಲಕ ತಮ್ಮ ಮೇಲಿನವರನ್ನು ಪ್ರಶಂಸಿಸಬಹುದು ಎಂಬ ಸತ್ಯವನ್ನು ಅರ್ಥಮಾಡಿಕೊಂಡಿರುವ ಮಣಿಶಂಕರ್, ಮುಂದುವರಿದು ಸೋನಿಯಾ ಧಾಟಿಯನ್ನೇ ಅನುಸರಿಸಿಕೊಂಡು ಮೋದಿ 'ಅಸತ್ಯ ಕಾ ಸೌದಾಗರ್' (ಸುಳ್ಳನ್ನು ಮಾರುವವರು) ಅಂತ ಕೂಗಿಕೊಂಡರು. ನಂತರದಲ್ಲಿ ಕಾಂಗ್ರೆಸ್ಸಿಗರು ಬಯ್ಗುಳ ಪದಕೋಶವನ್ನು ನಿರ್ಮಿಸುವುದಕ್ಕೆ ಪುರಾಣ- ಇತಿಹಾಸಗಳನ್ನೆಲ್ಲ ತಡಕಾಡಿ ಬಿಜೆಪಿಯ ಎದುರಾಳಿಯನ್ನು 'ಭಸ್ಮಾಸುರ', 'ಖಳನಾಯಕ' ಎಂದೆಲ್ಲ ವರ್ಣಿಸಿದರು.
ಬಯ್ಗುಳ ಪದಪ್ರಪಂಚವನ್ನು ಕಟ್ಟುವ ಉತ್ಸಾಹದಲ್ಲಿ ಪ್ರಾಣಿಗಳ ಸಾಮ್ರಾಜ್ಯವನ್ನೂ ಹೊಕ್ಕು ಬರಲಾಯಿತು. ಕಾಂಗ್ರೆಸ್ ಸಂಸದ ಹುಸೇನ್ ದಳವಾಯಿ ಅವರ ಕಣ್ಣಿಗೆ ಮೋದಿ ಇಲಿಯಾಗಿ ಕಂಡರು. ಬೇಣಿ ಪ್ರಸಾದ್ ವರ್ಮರು ಮೋದಿಯವರನ್ನು ನಾಯಿಯೆಂದು ಜರೆದರು. ಮನೀಶ್ ತಿವಾರಿ ಮೋದಿಯವರನ್ನು ದಾವೂದ್ ಇಬ್ರಾಹಿಮ್ಗೆ ಹೋಲಿಸಿದರೆ, ಕಾಂಗ್ರೆಸ್ ಸಂಸದ ಶಾಂತಾರಾಮ್ ನಾಯಕ್ರು ಮೋದಿ ಹಿಟ್ಲರ್ ಎಂದರಲ್ಲದೇ ಕಮ್ಯುನಿಸ್ಟ್ ವ್ಯಕ್ತಿ ಪಾಲ್ಪಾಟ್ಗೂ ಹೋಲಿಸಿದರು. ನರೇಂದ್ರ ಮೋದಿಯವರನ್ನು 'ನಮೊನಿಟಿಸ್ ವೈರಸ್' ಎನ್ನುವುದರ ಮೂಲಕ ಕಾಂಗ್ರೆಸ್ನ ರೇಣುಕಾ ಚೌಧರಿ ಅವರು ತಮ್ಮ ವೈದ್ಯಕೀಯ ಜ್ಞಾನವನ್ನು ಜಗತ್ತಿಗೆ ಸಾರಿದರು. ಮೋದಿಯವರ ಪಾಲಕರು ಹಾಗೂ ವೈವಾಹಿಕ ಮಾಹಿತಿ ಏನು ಎಂದೆಲ್ಲ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ತನ್ನ ಅತ್ಯಂತ ಹತಾಶ ಸ್ಥಿತಿಯನ್ನು ಪ್ರಕಾಶಪಡಿಸಿದೆ.
ಯಾವಾಗ ಒಬ್ಬ ನಾಯಕ ಬಲಗೊಳ್ಳುತ್ತಾನೋ ಆಗ ಪ್ರತಿಸ್ಪರ್ಧಿ ರಾಜಕೀಯ ನೇತಾರರೆಲ್ಲ ಘನತೆ ಮರೆತು ಗೂಳಿಯಂತೆ ಹೂಂಕರಿಸಿ ನುಗ್ಗುವುದನ್ನು ಕಾಣಬಹುದು. ಆಂಧ್ರಪ್ರದೇಶದಲ್ಲಿ ಜಗನ್ಮೋಹನ ರೆಡ್ಡಿಯವರನ್ನು ಕಾಂಗ್ರೆಸ್ ಲೂಟಿಕೋರ, ಡಕಾಯಿತ, ಪಿಕ್ಪಾಕೆಟರ್ ಎಂದೆಲ್ಲ ಕರೆದು ತಾನು ಪುನೀತವಾಯಿತು! ಹೆಚ್ಚಿನ ಎಲ್ಲ ರಾಜಕೀಯ ಪಕ್ಷಗಳೂ ಟೀಕೆಯನ್ನು ವೈಯಕ್ತಿಕ ಬಯ್ಗುಳದ ಮಟ್ಟಕ್ಕೆ ಇಳಿಸಿವೆ. ತಮ್ಮ ಎದುರಾಳಿಗಳನ್ನು ಹೆಂಡ ಕುಡಿದ ಕೋತಿಗಳೆನ್ನುವುದು, ಮತಿಗೆಟ್ಟ ಕುಡುಕರೆನ್ನುವುದು ಮಾಮೂಲಾಗಿಬಿಟ್ಟಿದೆ. ಕರ್ನಾಟಕ ಬಿಜೆಪಿಯ ನೇತಾರ ಈಶ್ವರಪ್ಪನವರು ಮನಮೋಹನ ಸಿಂಗ್ ಅವರನ್ನು ಹಿಜಡಾ ಎಂದು ಕರೆದಿದ್ದೂ ಆಗಿದೆ.
ಟಿವಿ ಹಾಗೂ ಸಮೂಹ ಮಾಧ್ಯಮ ಪ್ರಖರವಾಗುತ್ತಿದ್ದಂತೆ ತಮ್ಮೊಳಗಿನ ವಿಕೃತಿ ಹೊರಹಾಕುವುದಕ್ಕೆ ರಾಜಕಾರಣಿಗಳು ಹೆದರುತ್ತಿದ್ದಾರೆ ಎಂದು ಜಾಗತಿಕ ಮಟ್ಟದಲ್ಲಿ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಆದರೆ ಭಾರತದ ರಾಜಕಾರಣಿಗಳಿಗೆ ಮಾತ್ರ ಈ ಭಯ ಲಾಗೂ ಆಗುವುದಿಲ್ಲ. ಲಿಂಕನ್ರಂಥವರೂ ಈ ಹಿಂದೆ ನಿಂದನೆಯ ಭಾಷೆ ಬಳಸಿದ್ದಿದೆ. 1863ರಲ್ಲಿ ಜೋ ಹುಕರ್ ವಿರುದ್ಧ ಸೋತಾಗ, 'ಈ ಹುಕರ್ ಜತೆಗಿನ ಸಮಸ್ಯೆ ಏನೆಂದರೆ ಈತನಿಗೆ ಮುಖ್ಯ ಕಚೇರಿ (ಮಿದುಳು) ಇರುವುದು ಪೃಷ್ಠದ ಭಾಗದಲ್ಲಿ' ಎಂದಿದ್ದರು. ಆದರೆ ಇಂಥ ನಿಂದನೆಗಳಿಗಿಂತ ಉದಾಸೀನದ ಹೇಳಿಕೆ ಪರಿಣಾಮಕಾರಿ ಎಂದು ಅರ್ಥ ಮಾಡಿಕೊಂಡಿದ್ದ ಬ್ರಿಟಿಷ್ ಮುತ್ಸದ್ಧಿ ಎಡ್ಮಂಡ್ ಬರ್ಕ್, 'ನನ್ನ ಎದುರಾಳಿಗಳು ತಮ್ಮ ವಂಶವಾಹಿಯನ್ನು ಸಮರ್ಥಿಸಿಕೊಂಡಂತೆಯೇ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ' ಎಂದಿದ್ದರು.
ಭಾರತೀಯ ರಾಜಕಾರಣವಂತೂ ತನ್ನ ವಂಶವಾಹಿ ಗುಣವನ್ನು ಮರೆತಿದೆ. ಸ್ವಾತಂತ್ರ್ಯಪೂರ್ವ ನಾಯಕರು ಕೆಸೆರೆರಚಾಟಕ್ಕಿಂತ ಗಂಭೀರ ಸಂವಾದವನ್ನು ಇಷ್ಟಪಡುತ್ತಿದ್ದರು. ಬೆಂಜಮಿನ್ ಡಿಸ್ರೆಲಿ ಹೇಳಿದ್ದ ಮಾತು- ನಾವು ಶಬ್ದಗಳ ಮೂಲಕವೇ ವ್ಯಕ್ತಿಗಳನ್ನು ಆಳುತ್ತೇವೆ. ಮೋದಿ ಚರ್ಚೆಯ ಕೇಂದ್ರಬಿಂದು ಆಗುತ್ತಿರುವುದನ್ನು, ವ್ಯಕ್ತವಾಗುತ್ತಿರುವ ಬೆಂಬಲದ ಅಲೆಯನ್ನೂ ನೋಡಿ ಅಧೀರರಾದಂತಿರುವ ಎದುರಾಳಿಗಳು ನಿಂದನೆಯ ಮೊರೆ ಹೋಗಿದ್ದಾರೆ. ಆ ಮೂಲಕವೇ ಮತ್ತೊಮ್ಮೆ ಆಳುವ ಕನಸಿನಲ್ಲಿದ್ದಾರೆ.
- ರವಿಶಂಕರ್
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್