ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹಳೇ ರೋಗಿಯೊಬ್ಬನ ಪ್ರಲಾಪವಿದು

Srinivasa Murthy VN
Updated On : 20 Nov 2013, 11:49 am

ನವೆಂಬರ್ 7ರ ಕನ್ನಡಪ್ರಭದಲ್ಲಿ ವೈದ್ಯರೊಬ್ಬರ ಲೇಖನವೊಂದು ಪ್ರಕಟವಾಗಿತ್ತು. ಪ್ರಾಯಶಃ ತಮ್ಮ ಪದವಿಗಾಗಿ ಅವರು ತುಂಬಾ ಖರ್ಚು ಮಾಡಿರಬೇಕು. ಅದಕ್ಕೆ ತಕ್ಕಂತೆ ಬೆಂಗಳೂರಿನಂಥ ಸಿಟಿಯಲ್ಲೇ ತಮ್ಮ ವೃತ್ತಿಯನ್ನು ಪ್ರಾರಂಭ ಮಾಡಬೇಕೆಂಬ ಹಠವು ಮತ್ತು ಅಲ್ಲಿನ ನೊಣ ಹೊಡೆಯಬೇಕಾದ ಪರಿಸ್ಥಿತಿಯೂ ಸೇರಿ ಆಕ್ರೋಶಿತರಾಗಿ ಲೇಖನ ಬರೆದಿದ್ದಿರಬಹುದು. ಹೀಗಾಗಿ ಈ ಪ್ರತಿಕ್ರಿಯೆ. ರೋಗಿಗಳು ತಮ್ಮನ್ನು ಯಮನಂತೆ ಬಿಂಬಿಸುತ್ತಿದ್ದೇವೆ ಎಂದು ಲೇಖನದ ಶೀರ್ಷಿಕೆಯಲ್ಲಿಯೇ ಕಳಕಳಿಯನ್ನು ವ್ಯಕ್ತಪಡಿಸಿದ್ದೀರಿ. ಆದರೆ ತಮ್ಮ ಈ ಕಳಕಳಿಯು ತುಂಬಾ ಅಸಾಧುವಾದುದು. ಯಾಕೆ ಗೊತ್ತೆ? ಯಾವ ರೋಗಿಯೂ ತಮ್ಮನ್ನು ಆ ಬಡ, ಯಬಡ ಯಮನಿಗೆ ಹೋಲಿಸುವುದಿಲ್ಲ. ಏಕೆಂದರೆ, ಅವರ ದೃಷ್ಟಿಯಲ್ಲಿ ತಾವು ಅವನಿಗಿಂತೂ ಮಿಗಿಲು. ತಾವು ಯಮನಲ್ಲ, ಯಮನ ಅಣ್ಣ. ತಮ್ಮ ಲೇಖನದಿಂದ ತಾವು ಸಂಸ್ಕೃತದಲ್ಲೂ ಪರಿಣತರಿದ್ದೀರಿ ಎಂಬುದು ವ್ಯಕ್ತವಾಗುವುದು. ಆದ್ದರಿಂದ, ಕೆಳಗಿನ ಶ್ಲೋಕವನ್ನು ಪರಾಂಬರಿಸಿ-

ವೈದ್ಯರಾಜ ನಮಸ್ತುಭ್ಯಂ॥ ಯಮರಾಜ ಸಹೋದರ॥
ಯಮಸ್ತು ಹರತಿ ಪ್ರಾಣಾನ್‌॥ ವೈದ್ಯಃ ಪ್ರಾಣಾನ್ ಧನಾನಿ ಚ॥

(ಯಮರಾಜನ ಅಣ್ಣನಾದ ವೈದ್ಯನೇ, ನಿನಗೆ ನಮಸ್ಕಾರ. ಯಮರಾಜನು ರೋಗಿಗಳ ಪ್ರಾಣವನ್ನಷ್ಟೇ ಕೊಂಡೊಯ್ಯುತ್ತಾನೆ. ತಾವಾದರೊ, ರೋಗಿಗಳ ಪ್ರಾಣದ ಜೊತೆಗೆ ಅವರ ಹಣವನ್ನು ಕೊಂಡೊಯ್ಯುತ್ತೀರಿ!)

ಈಗ ನೀವೇ ನಿರ್ಧರಿಸಿ ವೈದ್ಯನೇ ಮಿಗಿಲಲ್ಲವೇ, ಯಮನಿಗಿಂತ?
ಈಗ ನಿಮಗೇ ಸಂಬಂಧಪಟ್ಟ ಈ ಶ್ಲೋಕವನ್ನೂ ಪರಾಂಬರಿಸಿ

ಚಿತಾಂ ಪ್ರಜ್ವಲಿತಾಂ ದೃಷ್ಟ್ವಾ॥ ವೈದ್ಯೋ ವಿಸ್ಮಯಮಾಗತಃ॥
ನಾಹಂಗತೋ ನಮೇ ಭ್ರಾತಾ॥ ಕಸ್ಯೇದೇ ಹಸ್ತಲಾಘವಂ॥

( ಈ ಊರಿನಲ್ಲಿ ಇದ್ದುದೇ ಇಬ್ಬರು ವೈದ್ಯರು. ಆ ದಿನ (ರೋಗಿಗಳ ಅದೃಷ್ಟದಿಂದ) ಇಬ್ಬರೂ ಊರಲ್ಲಿರಲಿಲ್ಲ. ಅವರಲ್ಲೊಬ್ಬ ರಾತ್ರಿ ಊರಿಗೆ ವಾಪಸ್ಸಾಗುತ್ತಿದ್ದಾಗ ಊರ ಹೊರಗಿನ ಸ್ಮಶಾನದಲ್ಲಿ ಚಿತೆಯೊಂದು ಉರಿಯುತ್ತಿದ್ದನ್ನು ಕಂಡ ಆತ ಆಶ್ಚರ್ಯದಿಂದ ಉದ್ಗರಿಸಿದ-'ಅರೇ! ನಾನೂ, ಇನ್ನೊಬ್ಬ ವೈದ್ಯನೂ (ನಮ್ಮಣ್ಣ) ಇಬ್ಬರೂ ಇಂದು ಊರಲ್ಲೇ ಇರಲಿಲ್ಲ. ಆದರೂ ಒಬ್ಬ (ಳು) ಸತ್ತಿದ್ದಾನೆ/ಳೆ ಎಂದರೆ, ಏನಥ? ಯಾರ ಕೈ ಚಳಕವಿರಬಹುದು ಇದು?')
ವೈದ್ಯರಾಜರ ಯಡವಟ್ಟುಗಳ ಹೊರತಾಗಿಯೂ ನಾನು ಇಂದೂ (70 ವರ್ಷ ನನಗೆ) ಜೀವಂತ ಇದ್ದೇನೆಂದರೆ, ತಮಗೇ ಏನು, ಸಾಮಾನ್ಯ ಜನರಿಗೂ ಆಶ್ಚರ್ಯವಾಗುತ್ತಲ್ಲವೇ? ಆದರೆ, ನಿಜ. ಅಂಥ ಒಂದು ಯಡವಟ್ಟಿನ ಉದಾಹರಣೆಯನ್ನು ತಮ್ಮ ಘನ ಅವಗಾಹನೆಗೆ ತರಲು ಇಚ್ಛಿಸುತ್ತೇನೆ.
1995 ನೇ ಇಸ್ವಿ ಫೆಬ್ರವರಿಯಲ್ಲಿ ನನ್ನ ಹೃದಯದ ಪಕ್ಕದಲ್ಲೇ ಇರುತ್ತದೆ ಎನ್ನಲಾದ ಪೆರಿ ಕಾರ್ದಿಯಂ ಎಂಬ ಅಂಗ, ಶ್ಲೇಷ್ಮದಿಂದ ಆವೃತ್ತವಾಗಿ, ಹೃದಯದ ಚಲಾವಣೆಗೇ ಅದರಿಂದ ಧಕ್ಕೆ ಬಂದಿತ್ತು. ಆ ಶ್ಲೇಷ್ಮವನ್ನು ಹೆರೆದು ತೆಗೆದ ನಂತರವಷ್ಟೇ ನಾನು ನಿರಾಳವಾಗಿ ಉಸಿರಾಡುವುದು ಸಾಧ್ಯವೆಂದು ಕಂಡುಕೊಂಡ ವೈದ್ಯರೊಬ್ಬರು, ಬೆಂಗಳೂರಿನ ಖಾಸಗಿ ಆಸ್ಪತ್ರೆ ಒಬ್ಬರು ತಮಗೆ ಪರಿಚಿತರೆಂದೂ, ಆದಷ್ಟು ಬೇಗ ನಾನು ಅವರಿಂದ ಆಪರೇಷನಿತನಾಗುವುದೇ ವಿಹಿತ ಎಂದೂ ಅಪ್ಪಣೆ ಕೊಡಿಸಿದರು. ಅಂತೆಯೇ ಅವರ ಪರಿಚಯ ಪತ್ರದೊಡನೆ ನಾನು ಬೆಂಗಳೂರಿನ ಆ ಪರಿಣತರನ್ನು ಭೇಟಿ ಮಾಡಿದಾಗ, ಆ ದೇವತಾ ಸದೃಶ್ಯರಾದ ವೈದ್ಯರು-" ಈಗ ತಾವು ಆಪರೇಷನ್ ಮುಂತಾದ ಕ್ಷುಲ್ಲಕ ಕರ್ಮದಲ್ಲಿ ತೊಡಗಲು ಸಾಧ್ಯವಿಲ್ಲ. ಏಕೆಂದರೆ, ಅದೇ ಮಾರ್ಚ್ ಮೊದಲ ವಾರ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾರ್ಡಿಯಾಲಜಿಸ್ಟ್ ಕಾನ್‌ಫರೆನ್ಸ್ ನಡೆಸಲು ತಾವು  ಬದ್ಧ' ಎಂದು ಹೇಳಿ ಕೈ ತೊಳೆದುಕೊಂಡರು. ನಂತರ ನಾನು ಗುರುತಿನವರೊಬ್ಬರ ಸಹಾಯದಿಂದ ಸಂತನೊಬ್ಬನ ಆಸ್ಪತ್ರೆಯಲ್ಲಿ ದಾಖಲಾದೆ. ಅಲ್ಲಿನ ಡಾಕ್ಟರು ತಪಾಸಣೆ ನಂತರ , "ಸದ್ಯ, ಸರಿಯಾದ ಸಮಯಕ್ಕೆ ಬಂದಿದಿರಿ. ಇಲ್ಲವಾದಲ್ಲಿ... (ನನ್ನ ಬಂಧುಗಳು ನನ್ನ ಬೊಜ್ಜವನ್ನು ಮಾಡಬೇಕಿತ್ತು) ಎನ್ನುತ್ತ, ಮಾರ್ಚ್ 1ನೇ ತಾರೀಖಿನಂದು ನನ್ನ ಆಪರೇಷನ್, ಅಲ್ಲಿಯವರೆಗೆ ನಾನು ಆಸ್ಪತ್ರೆಯಲ್ಲಿ'in patient' ಆಗಿದ್ದು ದೈನಂದಿನ ಮಾತ್ರೆಗಳು, ಟಾನಿಕ್ ಔಷಧಿಗಳನ್ನು ತೆಗೆದುಕೊಳ್ಳುವುದು ಆಪರೇಷನ್ನಿನ ತಯಾರಿಗೆ ಅತ್ಯವಶ್ಯ ಎಂದರು. ಇದಕ್ಕೆ ನಾನು ಒಪ್ಪಿದೆ.
ಅದೇ ವೈದ್ಯಭಾನು ಫೆಬ್ರವರಿ ತಾ. 28ರಂದು ನನ್ನ ಹತ್ತಿರ ಬಂದು "ಶಾಸ್ತ್ರಿ, ನಿಮ್ಮ ಆಪರೇಷನ್ನು ನಾಳೆಯೇ ಮಾಡಿದರೆ ಹೇಗೆ?" ಎಂದು ಕೇಳಿದರು. ನಾನು ಮನೆಯವರನ್ನು ಫೋನ್ ಮೂಲಕ ಸಂವಹಿಸಿ ಅವರಿಗೆ ವಿಷಯ ತಿಳಿಸಿದೆ. ಆಗಲೂ ನನ್ನ ಕಪಿ ಬುದ್ಧಿಯನ್ನು ಬಿಡದೇ 'ಅಲ್ಲಾ ಡಾಕ್ಟರೇ, ನನ್ನ 'ತಯಾರಿ'ಗಾಗಿ ಒಂದನೇ ತಾರೀಖಿನವರೆಗೂ ಔಷಧಿ ಇತ್ಯಾದಿ..." ಎಂದು ಪ್ರಶ್ನಿಸಿದೆ. ವೈದ್ಯರು Dont worry  ನಾವು  ಅದಕ್ಕೆಲ್ಲಾ ಏರ್ಪಾಡು ಮಾಡುತ್ತೇವೆ" ಎಂದರು. (ಯಾವುದರ ಏರ್ಪಾಡು?) ಆದರೆ, ಶ್ರೀರಾಮಪುರದಿಂದ ನನ್ನ ಮಕ್ಕಳು ಬರುವಷ್ಟರಲ್ಲಿ, ಪುನಃ ನನ್ನನ್ನು ಭೇಟಿ ಮಾಡಿದ ಡಾಕ್ಟರು- 'ಶಾಸ್ತ್ರಿಗಳೇ. ನಿಮ್ಮ ಆಪರೇಷನ್ ಮಾರ್ಚ್ 1ಕ್ಕೆ ಇರಲಿ. ನೀವು ಚೆನ್ನಾಗಿ ತಯಾರಿ ತಗೋಬೇಕಲ್ಲ' ಎಂದು ಹೇಳಿ ನಕ್ಕರು.
ನಿಜವಾಗಿ ನಡೆದಿದ್ದಿಷ್ಟು. ಕಾರ್ಡಿಯಾಲಜಿ ವಿಭಾಗದಲ್ಲಿ ಪ್ರತಿನಿತ್ಯ ನಡೆಯಬೇಕಾದ ಆಪರೇಷನ್‌ಗಳ ಒಂದು ಚಾರ್ಟ್ ಇರುತ್ತದೆ. 29ನೇ ತಾರೀಖು ಆಪರೇಷನ್‌ಗೆ ನಿಗದಿಯಾದ ರೋಗಿಯು ಕಾರಣಾಂತರದಿಂದ ಆಸ್ಪತ್ರೆ ಬಿಟ್ಟಿದ್ದರಿಂದ (ಅಥವಾ...) ಆ ತಾರೀಖು ಖಾಲಿ ಬಿತ್ತು. ಅದಕ್ಕೆ ಬೇರೆ ಮಿಕವನ್ನು ಹುಡುಕಬೇಕಾದಾಗ ನಾನು ಸಿಕ್ಕಿ ಬಿದ್ದಿದ್ದೆ. ಆದರೆ, ನನ್ನ ಮಕ್ಕಳು ಶ್ರೀರಾಂಪುರದಿಂದ ಆ ಆಸ್ಪತ್ರೆಗೆ ಬರಲು ತಡವಾದ್ದರಿಂದ, ಅದೇ ಅವಧಿಯಲ್ಲಿ ಇನ್ನೊಂದು ಮಿಕವನ್ನು ಹಿಡಿಯುವುದರಲ್ಲಿ ಯಶಸ್ವಿಯಾದರು. ಹೀಗಾಗಿ ನನ್ನ ಆಪರೇಷನ್ ಮಾರ್ಚ್ 1ರಂದೇ ಆಯ್ತು ಮತ್ತು ಫೆಬ್ರವರಿ ಕೊನೆಯ ವಾರ ನಾನು   'in Patient'ಆಗಿಯೇ ಉಳಿದು ಅವರು ವಿಧಿಸಿದ ದೈನಂದಿನ 29 ಮಾತ್ರೆ, ಔಷಧಿ, ಟಾನಿಕ್‌ಗಳನ್ನು ಸೇವಿಸುವುದರ ಮೂಲಕ ಆಪರೇಷನ್‌ಗೆ 'ತಯಾರಾದೆ' ಮತ್ತು ಆಸ್ಪತ್ರೆಯವರು ನಿರೀಕ್ಷಿಸಿದ್ದ ಹಣ ಪೀಕಿದೆ.
ಇಷ್ಟೇ ಅಲ್ಲ, ಈ ಮಧ್ಯೆ ಒಬ್ಬ ವೈದ್ಯ ನನ್ನನ್ನು ಒಂದು ದಿನ ಭೇಟಿ ಮಾಡಿ ಹೇಳಿದರು- "ಶಾಸ್ತ್ರಿ, ಈ ಆಪರೇಷನ್‌ಗಾಗಿ ನಾವು ಹೇಗೂ ನಿಮ್ಮ ಹೃದಯವನ್ನು ಬಿಚ್ಚಲೇ ಬೇಕಾಗುತ್ತದೆ. ಆ ಸಂದರ್ಭದಲ್ಲಿಯೇ ನೀವೇಕೆ ಹೃದಯದ ನಾಲ್ಕು ಕವಾಟಗಳನ್ನು ಪರೀಕ್ಷಿಸಿಕೊಂಡು ಬಿಡಬಾರದು?ಆಗ ನಾವು ವಿಧಿಸುವ ತಪಾಸಣಾ ಛಾರ್ಜು ತುಂಬ ಕಡಿಮೆಯಾಗಿ ಕೇವಲ ಕೆಲವೇ ಸಾವಿರ ರೂ.ಗಳಾಗುತ್ತವೆ". ಆದರೆ ನಾನು ಇದಕ್ಕೆ ಬಿಲ್‌ಕುಲ್ ಒಪ್ಪದೇ ಇದ್ದುದರಿಂದ ಆಸ್ಪತ್ರೆಯವರಿಗೆ ನಿರಾಸೆಯಾಯಿತು. ಆದರೆ ನೋಡಿ. ಹೃದಯದ ಕವಾಟಗಳ ಪರೀಕ್ಷೆಯೇ ಇಲ್ಲದೆಯೇ ನಾನು ಇಂದಿನವರೆಗೂ (1995ರಿಂದ 2013ರವರೆಗೂ) ಜೀವಿಸಿದ್ದೇನೆ ಮತ್ತು ಇಂದು ನನ್ನ ದೇಹ ಸ್ಥಿತಿಗಿಂತ ನಮ್ಮ  ದೇಶಸ್ಥಿತಿಯು ತುಂಬಾ ನಾಜೂಕಾಗಿರುವುದರಿಂದ, ನಾನು ಹೆಚ್ಚು ಕಾಲ ಜೀವಿಸಲು ಇಚ್ಛಿಸದ ಹಂತ ತಲುಪಿದ್ದೇನೆ.
----
ನಮ್ಮ ಸಂಸ್ಕೃತ ಕವಿ ತಮ್ಮನ್ನು ಯಮರಾಜ ಸಹೋದರ ಎಂದು ಕರೆದದ್ದು ಅರ್ಥಹೀನವೇ. ನೀವೇ ಹೇಳಿ ವೈದ್ಯರಾಜರೇ!
ಮೈಸೂರು- ಬೆಂಗಳೂರು ಶಹರಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ದರ್ಶನವನ್ನೂ ಮಾಡಿ ಬಂದಿರುವ ನನ್ನ ಸಹೋದರರ ಅಭಿಪ್ರಾಯವೂ ಇದೇ ಆಗಿದೆ. ಅಷ್ಟೇ ಅಲ್ಲ. ನನ್ನ ಗುರುತಿನ ಅನೇಕ ಸ್ನೇಹಿತರ ಅನುಭವ ಮತ್ತು ಅಭಿಪ್ರಾಯಗಳು ಇದೇ ಆಗಿರುವುದರಿಂದ, ನಾನು ಧೈರ್ಯವಾಗಿ ಈ ಲೇಖನವನ್ನು ಬರೆದಿದ್ದೇನೆ.
ಹಾಗಂತ ನನಗೆ ಸಿಕ್ಕಿದ ವೈದ್ಯರೆಲ್ಲರೂ ಯಮರಾಜ ಸಹೋದರರೇ ಎಂದು ಹೇಳಿದರೇ ನನ್ನಿಂದ ಅಪರಾಧವಾಗುತ್ತದೆ. ಏಕೆಂದರೆ, ಸಾಕ್ಷಾತ್ ದೇವರಂಥ ವೈದ್ಯರನ್ನೂ ಕಂಡಿರುವ ಭಾಗ್ಯ ನನ್ನದಾಗಿದೆ. ಬಲು ಹಿಂದೆ, ನಾವು ಬೇಲೂರಿನಲ್ಲಿದ್ದಾಗ, ಅಲ್ಲಿನ ಒಬ್ಬ ವೈದ್ಯ, ಬಿ.ಎ. ಪ್ರಭು ಎಂಬುವವರು (ಕೇವಲ L.M.P. ಪಾಸ್ ಮಾಡಿದ ವೈದ್ಯರಿವರು) ನನ್ನ ತಾಯಿಯವರ ಹೆರಿಗೆಯೊಂದನ್ನೂ ಸಫಲವಾಗಿ ನಿರ್ವಹಿಸಿಕೊಟ್ಟಿದ್ದನ್ನು ಹೇಗೆ ತಾನೇ ಮರೆಯಲಿ? ಹಾಗೆಯೇ ರೋಗಿಯು ಹೇಳಿದ್ದನ್ನು ಸಂಪೂರ್ಣವಾಗಿ ಆಲಿಸುವ ಗುಣ ಇರುವ ಹಾಸನದ ಡಾ॥ ರಾಂ ಪ್ರಕಾಶ್ ಅವರನ್ನೂ ಮರೆಯುವುದು ಸಾಧ್ಯವಿಲ್ಲ. ಹಾಗೆಯೇ ಹಣವೇ ಪ್ರಧಾನವಾಗಿರುವ ಇಂದಿನ ದಿನಗಳಲ್ಲಿ ತಮ್ಮ ಫೀಸಿನ ಒಂದು ಕಾಸನ್ನೂ ತೆಗೆದುಕೊಳ್ಳದ ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯ ಡಾ॥ ರಿಚರ್ಡ್ ಕೂಡಾ ಪ್ರಾತಃಸ್ಮರಣೀಯರು. ಇವರೇ ನನ್ನ ಹೃದಯದ ಆಪರೇಷನ್ ಮಾಡಿದ್ದು. ಅಂಥವರ ಸಂತತಿ ಸಾವಿರವಾಗಲಿ.
ಆದರೆ, ಇಂದಿನ ಯಮರಾಜ ಸಹೋದರರ ಆಧಿಕ್ಯದಿಂದಾಗಿ ನಾನು ಹೆಸರಿಸಿದಂಥ ವೈದ್ಯರನ್ನು ಹಗಲಿನಲ್ಲೂ ಬಿಟ್ಟು ದುರ್ಬೀನು ಹಾಕಿ ಹುಡುಕಿದರೂ ಸಿಕ್ಕುವುದು ಕಷ್ಟವಾದ್ದರಿಂದ ನಾನು ಇಂದಿನ ವೈದ್ಯಭಾನುಗಳ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ. ತತ್ಪರಿಣಾಮವಾಗಿ ಮೂಡಿ ಬಂದುದು ಈ ಬರಹ.
ನಮ್ಮ ಹಳೇ ವೈದ್ಯರಲ್ಲೊಬ್ಬರಾದ ಡಾ॥ ರಾಶಿ ಅವರ ಜೋಕ್‌ನಿಂದ ಈ ಬರಹವನ್ನು ಮುಗಿಸುತ್ತೇನೆ- ಸಣ್ಣ ಪುಟ್ಟ ಕಾಯಿಲೆಗೂ ನಾವು ವೈದ್ಯರಿಂದ ಔಷಧಿ ತರಲೇ ಬೇಕು. ಪಾಪ ಅವರು ಬದುಕಬೇಡವೇ? ಹಾಗೆ ತಂದ ಔಷಧಿಯನ್ನು ಮನೆಯ ಬಚ್ಚಲಿನಲ್ಲಿ ಸುರಿಯಲೂಬೇಕು... ನಾವೂ ಬದುಕಬೇಡವೇ?
Laughter is the best medicine ಅಲ್ಲವೇ, ವೈದ್ಯರೇ?

- ಜಿ. ಎಂ. ಶಾಸ್ತ್ರಿ, ಕುಮುಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement