ಬುದ್ಧಿಜೀವಿಗಳ ಹಿಂದೆ ನಿಂತು ಪ್ರಹಾರ ಮಾಡುವ ಕಾಂಗ್ರೆಸ್
ದಿನೇ ದಿನೇ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಕಾಂಗ್ರೆಸ್ ಪಾಳಯದಲ್ಲಿ ನಡುಕ ಶುರುವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಹಲವಾರು ದಿನಗಳಿಂದ ವಿವಿಧ ಕ್ಷೇತ್ರಗಳ ಜನರು ಮೋದಿಯ ಪರ ಹಾಗು ವಿರೋಧವಾಗಿ ಮತನಾಡುತ್ತಲೇ ಇದ್ದಾರೆ. ಅಮರ್ತ್ಯ ಸೇನ್, ಜಾವೇದ್ ಅಖ್ತರ್, ಕುಮಾರ್ ಕೇತ್ಕರ್, ವಿನೋದ್ ರಾಯ್ ಹಾಗೂ ಯು.ರ್. ಅನಂತಮೂರ್ತಿಯಂಥರು ನರೇಂದ್ರ ಮೋದಿಯನ್ನು ಹೀಯಾಳಿಸಿದರೆ, ಅದೇ ಇನ್ನೊಂದೆದೆ ನಿವೃತ್ತ ಗುಜರಾತ್ ಡಿಜಿ ಕೆ.ಪಿ.ಎಸ್. ಗಿಲ್, ಲತಾ ಮಂಗೇಶ್ಕರ್, ಅಬ್ದುಲ್ ಕಲಾಂ, ರಾಮ್ದೇವ್ ಬಾಬಾರಂಥವರು "ನರೇಂದ್ರ ಮೋದಿ ಪ್ರಧಾನಿ ಆಗುವ ಎಲ್ಲ ಅರ್ಹತೆ ಹೊಂದಿದ್ದಾರೆ" ಎಂದು ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಕಾಂಗ್ರೆಸ್ಸಿಗರು, ರಾಜಕೀಯಕ್ಕೆ ಸಂಬಂಧ ಇಲ್ಲದವರು ರಾಜಕೀಯ ವಿಷಗಯಗಳಿಂದ ದೂರ ಉಳಿಯುವುದೆ ಒಳ್ಳೆಯದು ಎನ್ನುವ ಉಪದೇಶ ಮಾಡುತ್ತಾರೆ. ಆದರೆ ಇನ್ನೊಂದೆಡೆ ಮೋದಿಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರ ವಿರುದ್ಧ ತುಟಿಪಿಟಕ್ ಎನ್ನುವುದಿಲ್ಲ. ಮೋದಿ ಪರ ಮಾತನಾಡುವುದು ತಪ್ಪು, ವಿರೋಧಿಸುವುದು ವಾಕ್ ಸ್ವಾತಂತ್ರ್ಯ ಎಂದು ಅವರು ಭಾವಿಸಿದ್ದಾರಾ? ಇದು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ವಿಕೃತ ಮನಸ್ಥಿತಿಯನ್ನು ತೋರಿಸುವುದಿಲ್ಲವೇ?
ಮೊನ್ನೆ ಲತಾ ಮಂಗೇಶ್ಕರ್ ನರೇಂದ್ರ ಮೋದಿಯವರೊಡನೆ ಸಾರ್ವಜನಿಕ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಾಗ "ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದನ್ನು ನಾನು ನೋಡಲು ಬಯಸುತ್ತೇನೆ" ಎಂದಿದ್ದೇ ತಡ, "ಲತಾ ಮಂಗೇಶ್ಕರ್ ಇಂತಹ ರಾಜಕೀಯ ಮಾತುಗಳನ್ನು ಆಡುವುದು ಬಿಟ್ಟು ಸಂಗೀತದ ಕಡೆ ಗಮನ ಕೊಡುವುದು ಒಳ್ಳೆಯದು" ಎಂದು ಕಾಂಗ್ರೆಸ್ಸಿಗರು ಹುಕುಂ ಕೊಡುವುದಕ್ಕೆ ಹೋದರು! ಮಹಾರಾಷ್ಟ್ರದ ಕಾಂಗ್ರೆಸ್ ನಾಯಕನೊಬ್ಬನಂತೂ ಈ ತರಹದ ಹೇಳಿಕೆ ಕೊಟ್ಟ ಲತಾ ಮಂಗೇಶ್ಕರ ಅವರಿಂದ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು! ಅಲ್ಲ ಸ್ವಾಮೀ, ಲತಾ ಮಂಗೇಶ್ಕರ್ಗೆ 'ಭಾರತ ರತ್ನ' ಸಿಕ್ಕಿದ್ದು ಸಂಗೀತ ಲೋಕಕ್ಕೆ ಅವರ ಕೊಡಿಗೆಯಿಂದ, ಅಷ್ಟಕ್ಕೂ ಅವರ ಈ ಹೇಳಿಕೆಯಿಂದ ಸಂಗೀತ ಲೋಕಕ್ಕೆ ಏನಾದರು ಕೆಟ್ಟದಾಗಿದೆಯಾ? ಗಾಯಕಿಯೊಬ್ಬರು ರಾಜಕೀಯ ನಾಯಕನನ್ನು ಬೆಂಬಲಿಸಬಾರದು ಎಂದು ಸಂವಿಧಾನದಲ್ಲಿ ಬರೆದಿದೆಯೇ? ಬೆಳಗಾದರೆ ರಾಹುಲ್ ಗಾಂಧಿಯ ಬಗ್ಗೆ ಹೊಗಳುವ 'ದೊಡ್ಡ' ಲೇಖಕರು, ಬುದ್ಧಿಜೀವಿಗಳು, ಪತ್ರಕರ್ತರು ಹಾಗೂ ಮಾಧ್ಯಮದವರನ್ನು ಕಾಂಗ್ರೆಸ್ ಸಾಕಿ ಸಲಹುತ್ತಿದೆ.
ದೇಶದ ಅರ್ಥಿಕ ವಿಷಯದಲ್ಲಿ ಸಂಶೋಧನೆ ನಡೆಸುತ್ತಿರುವ "ಗೋಲ್ಡ್ಮನ್ ಸ್ಯಾಕ್ಸ್" ಸಂಸ್ಥೆ "ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾದರೆ ಭಾರತದ ಅರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಹಾಗೂ ಷೇರು ಮಾರುಕಟ್ಟೆಯಲ್ಲಿ ಕಾನ್ಫಿಡೆನ್ಸ್ ಹೆಚ್ಚುತ್ತದೆ" ಎಂದು ಹೇಳಿದ್ದೆ ತಡ, ಕಾಂಗ್ರೆಸ್ ಸಚಿವ ಆನಂದ್ ಶರ್ಮಾ ಹಾಗೂ ಸುಳ್ಳು ಮಾತುಗಳ ದಿಗ್ಗಜ ದಿಗ್ವಿಜಯ್ ಸಿಂಗ್, "ಗೋಲ್ಡ್ಮನ್ ಸ್ಯಾಕ್ಸ್" ತನ್ನ ಅಭಿಪ್ರಾಯಗಳನ್ನು ಅರ್ಥಿಕ ಪರಿಸ್ಥಿತಿಯ ಬಗ್ಗೆ ಮಾತ್ರ ಸೀಮಿತ ಇಡುವುದು ಒಳ್ಳೆಯದು ಎಂದು ಗುಡುಗಿದ್ದಾರೆ. ಏಕೆಂದರೆ, ಗೋಲ್ಡ್ಮನ್ ಸ್ಯಾಕ್ಸ್ನ ಈ ಹೇಳಿಕೆಯ ಹಿಂದೆ ಇನ್ನೊಂದು ಅರ್ಥವಿದೆ. ಅದು 'ಕಾಂಗ್ರೆಸ್ಸಿನ ಮೇಲೆ ವ್ಯಾಪಾರಿಗಳಿಗೆ ಹಾಗೂ ಷೇರು ಮಾರುಕಟ್ಟೆಗೆ ನಂಬಿಕೆ ಇಲ್ಲ' ಎನ್ನುವುದು. ಕಾಂಗ್ರೆಸ್ಗೆ ಕೇಳಿಸಿರುವುದೂ ಇದೇ!
ಸಾಹಿತಿ ಅನಂತಮೂರ್ತಿಯವರು ವರ್ಷಗಳಿಂದ ಮೋದಿಯವರ ವಿರುದ್ಧ ವಿಷಕಾರುತ್ತಲೇ ಬಂದಿದ್ದಾರೆ. ಅಲ್ಲದೆ ಈಗಂತೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಗಳುತ್ತಲೇ ಇರುತ್ತಾರೆ. ಇದರಿಂದಲೇ ಅವರಿಗೆ ರಾಜಕೀಯ ಆಸಕ್ತಿ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ಇವರ ವಿಷಯದಲ್ಲಿ ಮಾತ್ರ ಕಾಂಗ್ರೆಸ್ ಒಂದು ಹೇಳಿಕೆಯೂ ನೀಡಲಿಲ್ಲ, ಬದಲಾಗಿ ಮೋದಿ ಪರ ಮಾತನಾಡಿದವರ ಬಾಯಿ ಮುಚ್ಚಿಸಲು ಹೊರಟಿದೆ. ಭ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ಕಾಂಗ್ರೆಸ್ ತನಗೆ ನೇರವಾಗಿ ನರೇಂದ್ರ ಮೋದಿಯವರ ಮೇಲೆ ದಾಳಿ ಮಾಡಲು ಶಕ್ತಿಯಿಲ್ಲ. ಹಾಗಾಗೇ ಢೋಂಗಿ ಬುದ್ಧಿಜೀವಿಗಳ ಒಂದು ದೊಡ್ಡ ಗುಂಪನ್ನೇ ದೇಶದಲ್ಲಿ ಬೆಳೆಸಿದೆ. ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡುವ ಇವರಲ್ಲಿ ಸಾಹಿತಿಗಳು, ಪತ್ರಕರ್ತರು, ನಿವೃತ್ತ ಅಧಿಕಾರಿಗಳು, ಮಹಿಳಾ ಹೋರಾಟಗಾರರು, ಭಾಷಾ ಹೋರಾಟಗಾರರು ಹಾಗೂ ಇನ್ನು ಅನೇಕರು ಸೇರಿಕೊಂಡಿದ್ದಾರೆ. ಇವರು ತಮ್ಮ ಮೂಲ ಕೆಲಸಬೇರೆನೋ ಎಂದು ತೋರಿಸಿಕೊಂಡರೂ ಮಾಡುವುದು ಮಾತ್ರ ಕಾಂಗ್ರೆಸ್ಸಿನ ಗುಣಗಾನ. ಮೊನ್ನೆ ಬೆಂಗಳೂರಿನಲ್ಲಿ ಮೋದಿಯವರ 'ಭಾರತ ಗೆಲ್ಲಿಸಿ' ಸಮಾವೇಶ ನಡೆದಾಗ ಇಂಥದ್ದೇ ಒಂದು ಗುಂಪು "ಕೋಮು ಸೌಹಾರ್ದ ವೇದಿಕೆ" ಎನ್ನುವ ಹೆಸರಿನಲ್ಲಿ ಗುಂಪು ಗೂಡಿ ಮೋದಿಯನ್ನು ಸೋಲಿಸಬೇಕು ಎಂಬ ಬಗ್ಗೆ ಭಾಷಣ ಬಿಗಿದವು. ನರೇಂದ್ರ ಮೋದಿಯವರನ್ನು ಬೆಂಬಲಿಸಿದರು ಎನ್ನುವ ಏಕೈಕ ಕಾರಣಕ್ಕಾಗಿ ಅವರಿಗೆ ಒಂದಲ್ಲ ಒಂದು ರೀತಿಯಿಂದ ಕಾಟ ಕೊಡುವುದು, ಅವರ ಮೇಲೆ ಸುಳ್ಳು ಕೇಸ್ ಹಾಕುವುದು, ರಾತ್ರೋ ರಾತ್ರಿ ಅವರ ಹೆಸರನ್ನು ಕೆಡಿಸಲು ಪ್ರಯತ್ನಿಸುವುದು, ಅವರ ಮೇಲೆ ಐಟಿ ದಾಳಿ ಮಾಡಿಸುವುದು ಮತ್ತು ಈ ಬುದ್ಧಿಜೀವಿಗಳ ಸೈನ್ಯದ ಮೂಲಕ ಅವರ ವಿರುದ್ಧ ಹೋರಾಟ ನಡೆಸುವುದು...ಇದೆಲ್ಲದರ ಹಿಂದೆ ಕಾಂಗ್ರೆಸ್ ಇದೆ. ಅಷ್ಟೇ ಯಾಕೆ ಇವರ ಈ ದ್ವಂದ್ವ ನೀತಿ ಸಾಮಾಜಿಕ ತಾಣಗಳಿಗೂ ಹಬ್ಬಿದೆ.
ಮೋದಿ ವಿರೋಧಿ ಬುದ್ಧಿಜೀವಿಗಳ ಸೈನ್ಯ, ಅವರು ಪ್ರಧಾನಿಯಾಗುವ ಸೂಚನೆ ಸಿಕ್ಕಮೇಲಂತೂ ಕಾಶ್ಮೀರದಿಂದ ಕನ್ಯಾಕುಮಾರಿಯವರಗೆ ಸಾರ್ವಜನಿಕ ವೇದಿಕೆಗಳಲ್ಲಿ, ಪತ್ರಿಕೆಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಹಾಗು ದೂರದರ್ಶನದಲ್ಲಿ ವಿಷ ಕಾರುವ ಕೆಲಸವನ್ನು ವೇಗದಿಂದ ಮಾಡುತ್ತಿದೆ.
ಗುಜರಾತಿನಲ್ಲಿ ನರೇಂದ್ರ ಮೋದಿ ಮಾಡಿ ತೋರಿಸಿರುವ ಕೆಲಸ ಮೆಚ್ಚಿ ಜನ ಅವರಿಗೆ ಪ್ರಧಾನಿ ಆಗಲು ಅವಕಾಶ ಕೊಡಬೇಕೆನ್ನುವ ಕೂಗು ಒಂದೆಡೆ ಹೆಚ್ಚಾದರೆ, ಭಷ್ಟಾಚಾರದ ಸುಳಿಯಲ್ಲಿ ಸಿಕ್ಕ ಕಾಂಗ್ರೆಸ್ಸನ್ನು ಕಿತ್ತ್ತು ಹಾಕಲೇಬೇಕೆನ್ನುವ ಕೂಗು ಕಾಂಗ್ರೆಸ್ಸಿಗರ ನಿದ್ದೆ ಕೆಡಿಸಿದೆ. ನರೇಂದ್ರ ಮೋದಿಯವರ ವಿರುದ್ಧ ವಿಕಾಸದ ಬಗ್ಗೆ ಮಾತನಾಡಲು ಅಂಶಗಳು ಇರದ ಕಾರಣ ಇಂತಹ ಬುದ್ಧಿಜೀವಿಗಳ ಹಿಂದೆ ನಿಂತು ಪ್ರಹಾರ ಮಾಡುತ್ತದೆ ಕಾಂಗ್ರೆಸ್. ಡಿವಿಸಿವ್(ಒಡೆದು ಆಳುವ ನಾಯಕ), ಇನ್ನೊಮ್ಮೆ ಹಿಟ್ಲರ್ , ಕೇಸರೀಕರಣ, ಮೌತ್ ಕಾ ಸೌದಾಗರ್ ಅನ್ನುವ ಕೀಳು ಭಾಷೆಯನ್ನು ಬಳಸುವ ಕೀಳು ಮಟ್ಟಕ್ಕೆ ಬಂದು ನಿಂತಿದೆ ಕಾಂಗ್ರೆಸ್ಸಿನ ರಾಜಕೀಯ ತಂತ್ರ. 2014ರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ಸಿನಲ್ಲಿ ಬುದ್ಧಿಜೀವಿಗಳ ಸಂಖ್ಯೆ ಹೆಚುತ್ತಲೇ ಇದೆ. ದೇಶದ ಜನ ಕಾಂಗ್ರೆಸ್ಸಿಗಷ್ಟೇ ಅಲ್ಲ 2014ರ ಚುನಾವಣೆಯಲ್ಲಿ ಈ ಬುದ್ಧಿಜೀವಿಗಳನ್ನು ಸೋಲಿಸುತ್ತಾರಾ ಎಂದು ನೋಡಬೇಕಾಗಿದೆ.
- ಅನಿಲ್ ಚಳಗೇರಿ
anil.chalageri@gmail.com