ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತರತ್ನದ ಮೌಲ್ಯವನ್ನು ಕುಂದಿಸುತ್ತಿರುವ ಕೀಳು ವಾಕ್ಸಮರ

Srinivasa Murthy VN
Updated On : 22 Nov 2013, 11:38 am

ದೇಶದ ಘನತೆ, ಗೌರವದ ಪ್ರತೀಕವಾಗಿರುವ ಇಂತಹ ವಿಚಾರಗಳ ಬಗ್ಗೆಯಾದರೂ ಮೌಲಿಕ ವಿಚಾರಗಳೊಂದಿಗೆ ಗಂಭೀರ ಚರ್ಚೆಗಿಳಿಯದೆ ಪರಸ್ಪರ ಕೆಸರೆರಚಾಟಕ್ಕೆ ತೊಡಗುತ್ತಿರುವುದು ಆತಂಕಕಾರಿ. ವಿವೇಚನಾಹೀನವಾದ ಹೇಳಿಕೆಗಳು ನಿಜಕ್ಕೂ ಮರುಕ ಹುಟ್ಟಿಸುತ್ತವೆ.

ಗುರುತರ ಸಾಧನೆಗೈದವರನ್ನು ಗೌರವಿಸುವ ಉದ್ದೇಶದಿಂದ ನಮ್ಮಲ್ಲಿ ಹಲವಾರು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಹಾಗೆಯೇ ಅಂತಹ ಪ್ರಶಸ್ತಿಗಳ ಬಗ್ಗೆ ಉಂಟಾಗುವ ವಿವಾದಗಳು, ಅಪಸ್ವರಗಳು ನಮ್ಮ ದೇಶದ ಮಟ್ಟಿಗೆ ಹೊಸದೇನಲ್ಲ. ಆದರೆ ದೇಶದ ಪರಮೋಚ್ಚ ಪ್ರಶಸ್ತಿಯಾದ ಭಾರತರತ್ನ ಪುರಸ್ಕಾರವೂ ಕೂಡಾ ಅಂತಹದೊಂದು ಕಳಂಕದಿಂದ ಮುಕ್ತವಾಗಿಲ್ಲ ಎಂಬ ವಿಚಾರ ಮಾತ್ರ ಕೊಂಚ ಕಸಿವಿಸಿಗೊಳಿಸುತ್ತದೆ. ಕಳೆದ ಕೆಲವು ದಿನಗಳಿಂದ ಸಚಿನ್ ತೆಂಡೂಲ್ಕರ್‌ರನ್ನು ಭಾರತರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ಬಗ್ಗೆ ಕ್ಯಾತೆ ತೆಗೆದು ವಿವಾದದ ಹೊಗೆ ಎಬ್ಬಿಸಲಾಗುತ್ತಿದೆ.
ಸಚಿನ್ ಆ ಪುರಸ್ಕಾರಕ್ಕೆ ಈಗಲೇ ಅರ್ಹರಲ್ಲ ಎಂಬ ವಾದವಾಗಲೀ, ಧ್ಯಾನ್‌ಚಂದ್, ಅಟಲ್ ಬಿಹಾರಿ ವಾಜಪೇಯಿಯವರಿಗೆ ನೀಡಬೇಕಿತ್ತೆಂಬ ಕೋರಿಕೆಯಾಗಲಿ ಏಕಾಏಕೀ ತಳ್ಳಿ ಹಾಕುವಂತಿಲ್ಲ. ಅಂತಹ ಅಭಿಪ್ರಾಯಗಳ ಆಳದಲ್ಲಿ ಒಂದಷ್ಟು ಸಾದರವಾಗುವ ಅಂಶಗಳೂ ಇದ್ದಿರಬಹುದು. ಆದರೆ ಅವುಗಳನ್ನು ಚರ್ಚಿಸುವ ವೈಖರಿ ಗಾಂಭೀರ್ಯತೆ, ವಿವೇಕ ಹಾಗೂ ಅರ್ಥಪೂರ್ಣತೆಯಿಂದ ಕೂಡಿರಬೇಕಷ್ಟೇ. "ಸಚಿನ್ ಏನು ಇಷ್ಟು ವರ್ಷ ಬಿಟ್ಟಿಯಾಗಿ ಆಡಿಲ್ಲ, ಹಣ ಪಡೆದಿದ್ದಾರೆ" ಎಂಬ ಹೇಳಿಕೆಗಳು ಶುದ್ಧ ಅಸಂಬದ್ದವಲ್ಲವೇ? ಹಾಗಾದರೆ ಈವರೆಗೆ ಪ್ರಶಸ್ತಿಗಳೆಲ್ಲವೂ ಯಾವುದೇ ರೂಪದಲ್ಲೂ ಹಣ ಪಡೆಯದೆ ಕೇವಲ ದೇಶ ಸೇವೆಯನ್ನೇ ಮಾಡಿದವರ ಪಾಲಾಗಿವೆಯೇ? ಇಲ್ಲತಾನೆ? ಅಲ್ಲದೆ ಅಂತಹುದೊಂದು ನಿರೀಕ್ಷೆ ಕೂಡಾ ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಕೇಳಬೇಕಾಗಿದೆ.  ಈ ನೆಲೆಗಟ್ಟಿನಲ್ಲಿ ಆರಂಭವಾದ ವಿವಾದವೊಂದು ಕ್ರಮೇಣ ಭಾರತರತ್ನದ ಮೌಲ್ಯವನ್ನೇ ಕುಂದಿಸುವಂತಹ ಕೀಳುಮಟ್ಟದ ವಾಕ್ಸಮರದ ರೂಪ ಪಡೆದುಕೊಂಡಿದೆ.
ಸಚಿನ್‌ಗೆ ಭಾರತರತ್ನ ನೀಡಬಾರದಿತ್ತೆಂಬ ಆರ್.ಜೆ.ಡಿ ಯ ಅಭಿಪ್ರಾಯಕ್ಕೆ ಪ್ರತಿಯಾಗಿ ಶಿವಸೇನ ಪಕ್ಷವು "ಹಾಗಾದರೆ ಭಾರತ ರತ್ನವನ್ನು ಲಾಲೂ ಪ್ರಸಾದ್‌ಗೆ ನೀಡಬೇಕೇ?" ಎಂದು ತಿರುಗೇಟು ನೀಡಿತು. ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರೊಬ್ಬರು "ಅಟಲ್ ಭಾರತರತ್ನ ಪ್ರಶಸ್ತಿಗೆ ಅರ್ಹರಲ್ಲ" ಎಂಬ ತಮ್ಮ ವಾದಮಂಡನೆಯ ಸಮರ್ಥನೆಗೆ "ಅಟಲ್ ಸ್ವಾತಂತ್ರ್ಯ ಹೋರಾಟದ ವಿರೋಧಿಯಾಗಿದ್ದರು" ಎಂದರು. ವಾಜಪೇಯಿ ಎಂತಹ ನಾಯಕರೆಂಬುದು ಕಾಂಗ್ರೆಸ್‌ಗೂ ಅರಿವಿರುವಂತಹದ್ದೇ. ಅದು ಒತ್ತಟ್ಟಿಗಿರಲಿ, ತಮ್ಮ ವಾದಸರಣಿಯನ್ನು ಮುಂದುವರಿಸುತ್ತಾ ಒಂದೊಮ್ಮೆ ಬಿ.ಜೆ.ಪಿ ಅಧಿಕಾರಕ್ಕೆ ಬಂದರೆ ನಾಥೂರಾಮ್ ಗೋಡ್ಸೆಯಂಥವರಿಗೆ 'ಭಾರತರತ್ನ' ಸಿಗುತ್ತದೆ ಎಂದು ಹೇಳಿದರು. ದೇಶದ ಮಹಾನ್ ಗೌರವವಾದ ಭಾರತ ರತ್ನವನ್ನು ಭ್ರಷ್ಟಾಚಾರಿ ಲಾಲು, ಹಂತಕ ಗೋಡ್ಸೆಯಂತಹವರ ಹೆಸರಿನ ಜೊತೆ ಬಳಸಿಕೊಂಡು ಹೋಲಿಕೆಗಿಳಿಯುವುದು ಅಕ್ಷಮ್ಯ ಹಾಗೂ ಅದು ಭಾರತರತ್ನವನ್ನು ಅಪಮಾನಿಸಿದಂತಲ್ಲವೇ? ವಿವೇಚನಾಹೀನವಾದ ಇಂತಹ ಹೇಳಿಕೆಗಳು ನಿಜಕ್ಕೂ ಮರುಕ ಹುಟ್ಟಿಸುತ್ತವೆ.
ಸ್ವಾತಂತ್ರ್ಯ ಹೋರಾಟದ ವಿರೋಧಿಯಗಿದ್ದ ಅಟಲ್‌ಗೇಕೆ ಭಾರತರತ್ನ ನೀಡಬೇಕೆಂದು ಪ್ರಶ್ನಿಸಿದ ನಾಯಕರು ಪ್ರತಿನಿಧಿಸುವ ಕಾಂಗ್ರೆಸ್, ಸರ್ದಾರ್ ಪಟೇಲರಿಗೂ ಮುಂಚಿತವಾಗಿ ಇಂದಿರಾ, ರಾಜೀವ್‌ರಿಗೆ ಭಾರತರತ್ನ ನೀಡಿತ್ತಲ್ಲ? ಅವರು ಅದ್ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಜೀವ ಸವೆಸಿದ್ದರು? ಇನ್ನು, ಬಿ.ಜೆ.ಪಿ ಅಧಿಕಾರಕ್ಕೆ ಬಂದರೆ ನಾಥೂರಾಮ್ ಸಂತತಿಗೆ 'ಭಾರತರತ್ನ' ನೀಡುತ್ತದೆ ಎಂಬ ಆರೋಪ ಯಾರೂ ಒಪ್ಪರು. ಅಲ್ಲದೇ, ಹಾಗಾದರೆ ಕಾಂಗ್ರೆಸ್ ಕೂಡಾ ತನ್ನ ಅವಧಿಯಲ್ಲಿ ತನಗೆ ಬೇಕಾದವರಿಗೆ ಇಂತಹ ಪ್ರಶಸ್ತಿಗಳನ್ನು ಹಂಚಿದೆಯೋ ಎಂಬ ಸೂಚ್ಯ ಪ್ರಶ್ನೆಯೊಂದರ ಉದ್ಭವಕ್ಕೂ ಕಾರಣವಾಗಬಲ್ಲದು.
ದೇಶದ ಪರಮೋಚ್ಚ ಪ್ರಶಸ್ತಿಯ ಹೆಸರಲ್ಲಿ ನಡೆದಿರುವ ಇಂತಹದೊಂದು ಅಹಿತಕರ ಚರ್ಚೆ, ಕೀಳು ಮಟ್ಟದ ಹೋಲಿಕೆಗಳು, ಸಂಕುಚಿತ ಮನೋಭಾವದ ಅಸಹಜ ಅಂಶಗಳ ಸಮರ್ಥನೆಗಳು ಅಂತಿಮವಾಗಿ ರಾಜಕೀಯ ಹಿತಾಸಕ್ತಿಯ ವ್ಯವಸ್ಥಿತ ಹುನ್ನಾರವನ್ನು ಹೊಂದಿವೆ. ದೇಶದ ಘನತೆ, ಗೌರವದ ಪ್ರತೀಕವಾಗಿರುವ ಇಂತಹ ವಿಚಾರಗಳ ಬಗ್ಗೆಯಾದರೂ ಮೌಲಿಕ ವಿಚಾರಗಳೊಂದಿಗೆ ಗಂಭೀರ ಚರ್ಚೆಗಿಳಿಯದೆ ಪರಸ್ಪರ ಕೆಸರೆರಚಾಟಕ್ಕೆ ತೊಡಗುತ್ತಿರುವುದು ಆತಂಕಕಾರಿ. ಟೀಕೆ ಮಾಡುವುದಕ್ಕೂ ಸಂವಿಧಾನದಲ್ಲಿ ಅಭಿವ್ಯಕ್ತಿ ಹಕ್ಕಿನಡಿಯಲ್ಲಿ ಆಸ್ಪದವಿದೆ. ಆದರೆ ಅದನ್ನು ಉಪಯೋಗಿಸುವವರಿಗೆ ಅಗತ್ಯ ವಿವೇಚನೆ ಹಾಗೂ ವಿವೇಕದ ಲಂಗು ಲಗಾಮಿರಬೇಕಾದುದು ಅಷ್ಟೇ ಅವಶ್ಯ. ಪ್ರಶಸ್ತಿ-ಪುರಸ್ಕಾರಗಳ ವಿಚಾರವಾಗಿ ನಿರಂತರವಾಗಿ ಸೃಷ್ಟಿಯಾಗುವ ಉಪದ್ವಾಪಗಳ ಹಿಂದೆ ರಾಜಕೀಯದ ದಟ್ಟ  ಕೈವಾಡವಿದೆ. ಇಂತಹ ಚರ್ವಿತಚರ್ವಣ ವಾದ ಪ್ರತಿವಾದಗಳ ಮೂಲಕ ಪ್ರಶಸ್ತಿಗಳ ಮೌಲ್ಯಕ್ಕೆ ಕುಂದುಂಟು ಮಾಡುತ್ತಿರುವ ಕೆಲವು ನಾಯಕರುಗಳ ಬಗ್ಗೆ ರೇಜಿಗೆ ಹುಟ್ಟುತ್ತದೆ. ಭಾರತರತ್ನವನ್ನು ಅಪಮಾನಿಸುವುದು ಪರೋಕ್ಷವಾಗಿ ದೇಶದ ಪ್ರತಿಷ್ಠೆ ಹಾಗೂ ಗೌರವವನ್ನು ಅವಮಾನಿಸಿದಂತೆ. ಆ ಅರಿವು ನಮ್ಮ ನಾಯಕರಲ್ಲಿ ಮೂಡಬೇಕಾಗಿದೆ.

- ಕಾಳಜಿ, ಸಂದೇಶ್. ಎಚ್. ನಾಯ್ಕ, ಕುಂದಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement