ವೈದ್ಯರ ಮೇಲೇಕೆ ಈ ಪರಿ ದಾಳಿ?
ಗುರುವಾರದಂದು ಪ್ರಕಟವಾದ 'ಹಳೇ ರೋಗಿಯೊಬ್ಬನ ಪ್ರಲಾಪವಿದು' ಲೇಖನದಲ್ಲಿ ಲೇಖಕರು ತಮ್ಮ ಸ್ವಾನುಭವವನ್ನು ಮತ್ತು ಕೆಲವರ ಅನಿಸಿಕೆಗಳನ್ನು ಸರ್ವಾನುಭವವೆಂದು ತಿಳಿದು ಮತ್ತು ಮೂಲ ಲೇಖನವನ್ನು ತಪ್ಪಾಗಿ ಅರ್ಥೈಸಿ, ವೈದ್ಯಲೋಕವನ್ನು, ವೈದ್ಯರನ್ನು ಮನಸಾರೆ ಟೀಕಿಸಿದ್ದಾರೆ! ಮೂಲ ಲೇಖನದಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸುವಾಗ ವೈದ್ಯರು, ತಮ್ಮ ವೃತ್ತಿಯಲ್ಲಿ ಬರುವ ಅತಂಕ, ತಡೆ, ಕುಂದು ಕೊರತೆ ಮತ್ತು ಅಸಹಾಯಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಎಲ್ಲಾ ವೃತ್ತಿಯಂತೆ ವೈದ್ಯ ವೃತ್ತಿಯಲ್ಲೂ ತಪ್ಪುಗಳಾಗುತ್ತವೆ. ಗ್ರಾಮಲೆಕ್ಕಿಗ ಮಾಡಿದ ತಪ್ಪಿಗಾಗಿ ಅತ್ಯುಚ್ಚ ನ್ಯಾಲಯದವರೆಗೆ ಅಲೆದಾಡಿದ ಮತ್ತು ಜಮೀನು ಕಳೆಕೊಂಡ, ವಕೀಲ ಮಾಡಿದ ತಪ್ಪಿಗೆ ಕೇಸ್ ಕಳೆದುಕೊಂಡ ಮತ್ತು ಅರ್ಕಿಟೆಕ್ಟ್ ಮಾಡಿದ ತಪ್ಪಿಗೆ ತಲೆ ಮೇಲೆ ಮನೆ ಬೀಳಿಸಿಕೊಂಡವರ ಉದಾಹರಣೆಗಳಿಲ್ಲವೇ? ಇದು ಎಂದೂ ಉದ್ದೇಶ ಪೂರ್ವಕವಾಗಿರುವದಿಲ್ಲ. ಬೇರೆ ವೃತ್ತಿಯಲ್ಲಿ ತಪ್ಪಾದರೆ ಅದನ್ನು ಸ್ವಲ್ಪ ಹೆಚ್ಚು ಕಡಿಮೆ ಸರಿಪಡಿಸಬಹುದು. ಹಣದ ಮೂಲಕ ಬಾಯಿ ಮುಚ್ಚಿಸಬಹುದು. ಅದರೆ, ವೈದ್ಯ ವೃತ್ತಿಯಲ್ಲಿ ಸ್ವಲ್ಪ ತಪ್ಪಾದರೂ ಅದನ್ನು ಸರಿಪಡಿಸಲಾಗದು. ಅಂತೆಯೇ ವೈದ್ಯರೂ ಕೂಡ ಈ ವಿಷಯವನ್ನು ತಲೆಯಲ್ಲಿಟ್ಟುಕೊಂಡು ಜಾಗರೂಕರಾಗಿರುತ್ತಾರೆ.
ಪ್ರತಿಯೊಂದು ರೋಗವನ್ನು, ಪ್ರತಿಯೊಬ್ಬ ರೋಗಿಯನ್ನು ಒಬ್ಬೊಬ್ಬ ವೈದ್ಯರು ನೋಡುವ ದೃಷ್ಟಿಕೋನ ಭಿನ್ನವಾಗಿರುತ್ತದೆ. ಹಾಗೆಯೇ ಅವರು ಕೊಡುವ ಚಿಕಿತ್ಸಾ ವಿಧಾನ ಕೂಡಾ ಬೇರೆಯದಾಗಿರುತ್ತದೆ. ಇಂಥ ರೋಗಕ್ಕೆ ಇಂಥ ಚಿಕಿತ್ಸೆಯನ್ನೇ ಕೊಡಬೇಕೆನ್ನುವ ಕಟ್ಟುಪಾಡಿರುವುದಿಲ್ಲ. ಕೆಲವರು ಶೀಘ್ರ ಗುಣಮುಖರಾಗುವ ಪದ್ಧತಿ ಅನುಸರಿಸಿದರೆ, ಇನ್ನೂ ಕೆಲವರು 'ಸ್ಲೋ ಆ್ಯಂಡ್ ಸ್ಟೆಡಿ' ಎನ್ನುವ ಹಾದಿ ತುಳಿಯುತ್ತಾರೆ. ಕೆಲವು ವೈದ್ಯರು ಪ್ರಬಲ ಔಷಧಗಳನ್ನು ಕೊಟ್ಟರೆ, ಇನ್ನೂ ಕೆಲವರು ಮೈಲ್ಡ್ ಔಷಧ ಕೊಟ್ಟು ಗುಣಪಡಿಸುತ್ತಾರೆ. ಕೆಲವು ವೈದ್ಯರು ರೋಗಿಗೆ ಚಿಕಿತ್ಸೆ ಕೊಡುವಾಗ ಇನ್ನೇನಾದರೂ ತೊಂದರೆ ಇದೆಯೇ ಎಂದು ಸಮಗ್ರವಾಗಿ ವಿಚಾರಿಸಿ, ಆಸ್ಪತ್ರೆಗೆ ಬಂದಾಗಲೇ ಚಿಕಿತ್ಸೆ ಕೊಡಲು ಮುಂದಾಗುತ್ತಾರೆ. ಒಮ್ಮೆ ಹೀಗೆ ಮಾಡದಿದ್ದರೆ "ನೀವು ಆಗಲೇ ನೋಡಿ ಹೇಳಬಹುದಿತ್ತಲ್ಲ?" ಎನ್ನುವ ದೂರು ಕೇಳಬೇಕಾಗುತ್ತದೆ. ಇವುಗಳನ್ನೇ 'ವೈದ್ಯರು ರೋಗಿಗಳಿಂದ ಹೆಚ್ಚಿನ ಹಣ ಪೀಕಲು ಮಾಡುವ ತಂತ್ರಗಳೆಂದು' ಷರಾ ಬರೆದು ಬಿಡುವುದು ತೀರಾ ಬಾಲಿಶ ಮತ್ತು ಸಣ್ಣತನ.
ವೈದ್ಯರ ಸಂಸ್ಕೃತ ಭಾಷೆಯ ಮೇಲಿನ ಪರಿಣಿತಿಯನ್ನು ಅಕ್ಷೇಪಾರ್ಹ ರೀತಿಯಲ್ಲಿ ಛೇಡಿಸಿರುವುದು ವಿಷಾದಕರ. ಸಂಸ್ಕೃತ ಭಾಷೆ ಯಾರೊಬ್ಬರ ಸ್ವತ್ತೂ ಅಲ್ಲ! ಅದರ ಗುತ್ತಿಗೆಯನ್ನು ಯಾರೂ ಪಡೆದಿಲ್ಲ. ಈ ಸುಂದರ, ಪ್ರಾಚೀನ ದೇವಭಾಷೆ ಪ್ರತಿಯೊಬ್ಬ ಭಾರತೀಯನ ಆಸ್ತಿ. ಇದನ್ನು ಕಲಿಯಲು, ಇದರಲ್ಲಿ ಪರಿಣತಿ ಪಡೆಯಲು ಮತ್ತು ಸಂದರ್ಭ ಬಂದಾಗ ಇದನ್ನು ಉಪಯೋಗಿಸಿಕೊಳ್ಳಲು ಪ್ರತಿಯೊಬ್ಬ ಭಾರತೀಯನೂ ಸ್ವತಂತ್ರ. "ವೈದ್ಯರು ಪ್ರಾಣದೊಂದಿಗೆ ಹಣವನ್ನೂ ಕೊಂಡೊಯ್ಯುತ್ತಾರೆ" ಎನ್ನುವ ಅರ್ಥದ ಶ್ಲೋಕ ಇಲ್ಲಿ ಅಪ್ರಸ್ತುತ. ಈ ದೇಶದಲ್ಲಿ ಯಾವ ಸೇವೆಯೂ ಉಚಿತವಾಗಿ ದೊರಕುವುದಿಲ್ಲ. ರೋಗಿ ಸತ್ತರೆ ವೈದ್ಯ ತನ್ನ ಫೀಸನ್ನು ಹಿಂತಿರುಗಿಸಬೇಕೇ? ಇದು ಯಾವ ನ್ಯಾಯ ಸ್ವಾಮಿ? ವೈದ್ಯರ ನಿರ್ಲಕ್ಷದಿಂದ, ತಪ್ಪು ಚಿಕಿತ್ಸೆಯಿಂದ ಕೆಲವು ಅನಾಹುತಗಳಾಗಿರಬಹುದು. ಕೆಲವು ಹಣ ಪಿಪಾಸಿ ವೈದ್ಯರಿರಬಹುದು. ಆದರೆ ಒಂದು ವೃತ್ತಿಗೆ ಕಪ್ಪು ಚುಕ್ಕಿ ಬಳಿಯಲು ಇವು ಸಾಧನಗಳಾಗಬಾರದು. ಮಾನದಂಡಗಳಾಗಬಾರದು. ಉದಾಹರಣೆಗಳಾಗಬಾರದು. ಅದರ ಬದಲಿಗೆ ಲೇಖಕರು ಹೇಳಿದಂತೆ 'ಡಾ. ರಿಚರ್ಡ್‌ರಂಥ ವೈದ್ಯರ ಆದರ್ಶಗಳ ಮೇಲೆ' ನಮ್ಮ ಅಭಿಪ್ರಾಯವನ್ನು ರೂಪಿಸಿಕೊಳ್ಳಬೇಕು. ವೈದ್ಯರುಗಳ ಮೇಲೆ ನಡೆದಂಥ ದಾಳಿ, ಅದನ್ನು ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಬೆಂಬಲಿಸಬಾರದು. ಪ್ರತಿಯೊಬ್ಬ ವ್ಯಕ್ತಿಯ ವ್ಯತಿರಿಕ್ತ ಅಭಿಪ್ರಾಯದ ಹಿಂದೆ ನೋವಿನ ಕಥೆ ಇರುತ್ತದೆ. ಆದರೆ ಇದನ್ನೇ ಸರ್ವ ಸಮ್ಮತ ಅಭಿಪ್ರಾಯವೆಂದು ಮಂಡಿಸಲಾಗದು. ಸತ್ಯವನ್ನು ಹೇಳಲು ಮತ್ತು ಮನದಾಳದ ಇಂಗಿತವನ್ನು ಹೊರಹಾಕಲು, ಒಬ್ಬ ವ್ಯಕ್ತಿಗೆ ಆ ಸ್ಥಾನಕ್ಕೆ ಬರಲು ಖರ್ಚು ಮಾಡಿದ ಹಣ ಮುಖ್ಯವಲ್ಲ. ಕಂಡದ್ದು, ಕೇಳಿದ್ದು ಮತ್ತು ಅಪ್ತರು ಹೇಳಿದ್ದೇ ಸಾಕು!
- ರಮಾನಂದ ಶರ್ಮಾ, ಬೆಂಗಳೂರು