ವೈದ್ಯರ ವೈಫಲ್ಯದ ಮೇಲಿನ ಆಕ್ರೋಶ ನಕಲಿ ವೈದ್ಯರ ಮೇಲಿಲ್ಲ
ನಿಯಮ, ಕಾಯಿದೆಗಳಿದ್ದಾಗ್ಯೂ ನಕಲಿ ವೈದ್ಯರನ್ನು ನಿಗ್ರಹಿಸದ ಸರ್ಕಾರಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ನಲ್ಲಿ ಪಿ.ಐ.ಎಲ್. ಸಲ್ಲಿಸಿದ್ದಕ್ಕಾಗಿ..
ನಿಯಮ, ಕಾಯಿದೆಗಳಿದ್ದಾಗ್ಯೂ ನಕಲಿ ವೈದ್ಯರನ್ನು ನಿಗ್ರಹಿಸದ ಸರ್ಕಾರಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ನಲ್ಲಿ ಪಿ.ಐ.ಎಲ್. ಸಲ್ಲಿಸಿದ್ದಕ್ಕಾಗಿ ಲಾರಿ, ಟ್ರಾಕ್ಟರ್ಗಳಲ್ಲಿ ಬಾಡಿಗೆ ಜನರನ್ನು ತುಂಬಿಕೊಂಡು ಬಂದು ಮೆರವಣಿಗೆ ನಡೆಸಿ, ಅರ್ಜಿ ಸಲ್ಲಿಸಿದವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಕಾಲಿನಿಂದ ಒದ್ದು, ಸುಟ್ಟು ಹಾಕಿದ್ದಿದೆ.
ಕರ್ತವ್ಯನಿರತ ಖಾಸಗಿ ಮತ್ತು ಸರ್ಕಾರಿ ವೈದ್ಯರ ಮೇಲೆ ಸಾರ್ವಜನಿಕರಿಂದ ಹಲ್ಲೆಗಳು ಸತತವಾಗಿ ನಡೆಯುತ್ತಿವೆ. ವೈದ್ಯಕೀಯ ವಿಜ್ಞಾನದಲ್ಲಿ ಪದವಿ, ಸ್ನಾತಕ್ಕೋತ್ತರ ಪದವಿ ಮತ್ತು ಸಾಕಷ್ಟು ಪರಿಣತಿ ಹೊಂದಿದ ವೈದ್ಯರು ರೋಗಿಗಳ ಪ್ರಾಣ ಉಳಿಸುವ ಯತ್ನದಲ್ಲಿ ವಿಫಲರಾದರೆ ಸಾಕು ರೋಗಿಗಳ ಸಂಬಂಧಿಕರು ಮಾತ್ರವಲ್ಲ, ದಾರಿಹೋಕರು ಧರ್ಮದೇಟು ನೀಡುತ್ತಾರೆ. "ವೈದ್ಯರು ಸಾವಿನೊಡನೆ ಹೋರಾಡುತ್ತಾರೆ, ಆದರೆ ಬದುಕಿಸಲಾರರು" ಎಂಬ ಮಾತಿದೆ. ರೋಗಿಯ ಸಾವಿನೊಡನೆ ಹೋರಾಡುವ ವೈದ್ಯರ ಮೇಲೆ ಸಾರ್ವಜನಿಕರು ಹೋರಾಟಕ್ಕೆ ನಿಂತರೆ ವೈದ್ಯರು ಏನು ಮಾಡಬೇಕು? ಖಾಸಗಿ ಆಸ್ಪತ್ರೆಯವರು ತಮ್ಮ ರಕ್ಷಣೆಗೆ ಗೂಂಡಾಗಳನ್ನು ಸಾಕಬೇಕೆ? ಖಾಸಗಿ ಅಂಗರಕ್ಷಕರಿಂದ ವೈದ್ಯರ ಮೇಲಿನ ಹಲ್ಲೆಗಳಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಹಲ್ಲೆಗೀಡಾದವರ ಮೇಲೆ ಮೃದು ಭಾವನೆ ತಳೆಯುತ್ತಾರೆ. ಕೆಲವು ಮಾಧ್ಯಮಗಳಂತೂ ವೈದ್ಯರನ್ನು 'ವಿಲನ್'ಗಳಂತೆ ಬಿಂಬಿಸುತ್ತವೆ.
ಇನ್ನು ಸರ್ಕಾರಿ ವೈದ್ಯರ ಪಾಡಂತೂ ಹೇಳತೀರದು. ಸರ್ಕಾರಿ ಆಸ್ಪತ್ರೆಗಳಿಗೆ ಹೇಗೆಂದರೆ ಹಾಗೆ ನುಗ್ಗುವ ಕೆಲವು ಫಟಿಂಗರು, ಸರ್ಕಾರಿ ವೈದ್ಯರು ತಮ್ಮ ಜೀತದಾಳುಗಳು ಎನ್ನುವಂತೆ ನಿಂದಿಸುತ್ತಾರೆ. ಅವರ ಕೊರಳ ಪಟ್ಟಿಯನ್ನು ಹಿಡಿದೆಳೆಯುತ್ತಾರೆ. ಠಾಣೆಯಲ್ಲಿ ದೂರು ದಾಖಲಾದ ಅಪರೂಪದ ಪ್ರಕರಣಗಳು ನ್ಯಾಯಾಲಯದಲ್ಲಿ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಗೊಳ್ಳುತ್ತವೆ.
ಇವೆಲ್ಲವುಗಳ ಮಧ್ಯೆ ವೈದ್ಯಕೀಯ ನಿರ್ಲಕ್ಷ್ಯದ ತೂಗುಗತ್ತಿ ಪದವೀಧರ ವೈದ್ಯರ ಮೇಲೆ ಸದಾ ತೂಗುತ್ತಿರುತ್ತದೆ. ಸೆಕ್ಷನ್ 304 ಬಿ ಪ್ರಕಾರ ಕೋರ್ಟಿನಲ್ಲಿ ಕ್ರಿಮಿನಲ್ ದೂರು ದಾಖಲಿಸಬಹುದಾಗಿದೆ. ಗ್ರಾಹಕರ ಕೋರ್ಟಿನಲ್ಲಿ ಸಿವಿಲ್ ಕೇಸ್ ದಾಖಲಿಸಬಹುದಾಗಿದೆ. ಭಾರತೀಯ ವೈದ್ಯಕೀಯ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.
1995ರಲ್ಲಿ ಸುಪ್ರೀಮ್ಕೋರ್ಟ್ ಭಾರತದ ಹೆಸರಾಂತ ಟೇಬಲ್ ಟೆನ್ನಿಸ್ ಆಟಗಾರ ದಿ. ವಿ. ಚಂದ್ರಶೇಖರ್ ಅವರಿಗೆ 19 ಲಕ್ಷ ಪರಿಹಾರ ನೀಡಲು ಆದೇಶಿಸಿತು. ಬೆಂಗಳೂರಿನ ಪ್ರಶಾಂತ್ ಧನಂಕಾ ಅವರಿಗೆ ಸುಪ್ರೀಮ್ಕೋರ್ಟ್ 1 ಕೋಟಿ ರು ಪರಿಹಾರಕ್ಕೆ ಆದೇಶಿಸಿದರೆ, ಅನಿವಾಸಿ ಭಾರತೀಯರಾದ ಅನುರಾಧಾ ಸಹಾ ಅವರ ಪ್ರಕರಣದಲ್ಲಿ ದಿ. 25.08.2013ರ ಆದೇಶದಲ್ಲಿ ಸುಪ್ರೀಮ್ಕೋರ್ಟ್ ಬಡ್ಡಿ ಸೇರಿದಂತೆ ಒಟ್ಟು 11 ಕೋಟಿ ರು.ಪರಿಹಾರಕ್ಕೆ ಆದೇಶಿಸಿದೆ. ವಿಶ್ವದ ಖ್ಯಾತ ಡ್ಯಾನ್ಸರ್ ಮೈಕೇಲ್ ಜಾಕ್ಸನ್ ಅವರಿಗೆ ಚಿಕಿತ್ಸೆ ನೀಡಿದ ಡಾ. ಕಾನ್ರಾಡ್ ಮರ್ರೆ ಅವರಿಗೆ ನಾಲ್ಕು ವರ್ಷ ಶಿಕ್ಷೆಯಾಗಿದೆ. ಲಂಡನ್ನಿನ ಲೆಸ್ಲಿ ಆ್ಯಶ್ಗೆ 37 ಕೋಟಿ ಪರಿಹಾರ ದೊರಕಿದೆ. ಹೀಗೆ ಸಾಕಷ್ಟು ಪ್ರಕರಣಗಳು ಇವೆ.
ಆದರೆ ಇದ್ಯಾವ ಕಾನೂನುಗಳು, ನಿಯಮಗಳು ನಕಲಿ ವೈದ್ಯರಿಗೆ ಅನ್ವಯಿಸುವುದಿಲ್ಲ. ಅವರು ರೋಗಿಗಳ ಆರೋಗ್ಯವನ್ನು ಹದಗೆಡಿಸಿ, ಹಣ ಲೂಟಿ ಮಾಡಿ, ದೇಹದ ಅಂಗಾಂಗಳನ್ನು ಹಾಳು ಮಾಡಿ ಸಾವಿನಂಚಿಗೆ ನೂಕಿದರೂ, ಸಾವಿಗೀಡಾದರೂ ದೂರು ಸಲ್ಲಿಸುವವರಿಲ್ಲ. ಇಂತಹವರ ಮೇಲೆ ದೂರು ಸಲ್ಲಿಸಿದರೆ ಚಿಕಿತ್ಸೆ ನೀಡಿದವನಿಗೆ ಒಂದಿಷ್ಟು ತೊಂದರೆಯಾಗಬಹುದೇ ಹೊರತು, ಪರಿಹಾರ ದೊರೆಯುವುದಿಲ್ಲ. ಅಸಲಿ ವೈದ್ಯರ ಮೇಲೆ ದಾವೆ ಹಾಕಿ, ಪರಿಹಾರದೊಂದಿಗೆ ಪ್ರಚಾರ ಗಿಟ್ಟಿಸುವುದು ಅವ್ಯಾಹತವಾಗಿ ನಡೆಯುತ್ತಿದೆ. ಆದರೆ ನಕಲಿ ವೈದ್ಯರ ಮೇಲೆ ದೂರು ಸಲ್ಲಿಸುವವರಿಲ್ಲ. ಸಲ್ಲಿಸಿದರೂ ಅಪಪ್ರಚಾರ ಮಾಡುವವರೇ ಹೆಚ್ಚು. ಕೆಲವು ಮಾಧ್ಯಮಗಳು ಇಂತಹ ನಕಲಿ ವೈದ್ಯರ ಮೇಲೆ ಕಾರ್ಯಾಚರಣೆ ನಡೆಸಿ ವರದಿ ಮಾಡಿದರೂ ಕಾನೂನು ಪಾಲಕರು ಎಚ್ಚರಗೊಳ್ಳುತ್ತಿಲ್ಲ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ 196 ಜನ ನಕಲಿ ವೈದ್ಯರಿದ್ದಾರೆಂದು ತಾಲ್ಲೂಕು ವೈದ್ಯಾಧಿಕಾರಿ ನೀಡಿದ ಮಾಹಿತಿ ಆಧಾರದ ಮೇಲೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿನ ಅರ್ಜಿ (ಪಿ.ಪಿ.ಎಲ್.) ಸಲ್ಲಿಸಲಾಗಿತ್ತು. ಈ ಬಗ್ಗೆ ದಿ. 25.09.2012ರಂದು ಆದೇಶ ಹೊರಡಿಸಿದ್ದಾಗಿ ಸಂಬಂಧಿಸಿದ ಅಧಿಕಾರಿಗಳು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ, ತಮ್ಮ ಕರ್ತವ್ಯ ಮುಗಿಯಿತೆಂದುಕೊಂಡರು. ಕೆಲವು ದಿನಗಳ ನಂತರ ಪೊಲೀಸರು ಕುದೂರಿಗೆ ಬಿ. ಫೈನಲ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣಕ್ಕೆ ತೆರೆ ಎಳೆದರು. ಆದರೆ ಅಧಿಕಾರಿಗಳು ಮಾತ್ರ ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎಂದು ಸಚಿವರಿಗೆ, ಮೇಲಾಧಿಕಾರಿಗಳಿಗೆ, ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ.
ನಿಯಮ, ಕಾಯಿದೆಗಳಿದ್ದಾಗ್ಯೂ ನಕಲಿ ವೈದ್ಯರನ್ನು ನಿಗ್ರಹಿಸದ ಸರ್ಕಾರಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ನಲ್ಲಿ ಪಿ.ಐ.ಎಲ್. ಸಲ್ಲಿಸಿದ್ದಕ್ಕಾಗಿ ಲಾರಿ, ಟ್ರಾಕ್ಟರ್ಗಳಲ್ಲಿ ಬಾಡಿಗೆ ಜನರನ್ನು ತುಂಬಿಕೊಂಡು ಬಂದು ಮೆರವಣಿಗೆ ನಡೆಸಿ, ಅರ್ಜಿ ಸಲ್ಲಿಸಿದವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಕಾಲಿನಿಂದ ಒದ್ದು, ಸುಟ್ಟು ಹಾಕಿ ವಿಕೃತ ಆನಂದಪಟ್ಟ ನಕಲಿ ವೈದ್ಯರ ಜೊತೆ ಪುಢಾರಿಗಳು ಸೇರಿ ಹೈಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದರೂ ಯಾವುದ್ಯಾವುದೋ ಕಾರಣಕ್ಕೆ ಕೋರ್ಟ್ ಕಲಾಪವನ್ನು ಬಹಿಷ್ಕರಿಸುವ ನ್ಯಾಯವಾದಿಗಳು ತುಟಿ ಎರಡು ಮಾಡಲಿಲ್ಲ. ಸ್ಥಳೀಯ ಮಾಧ್ಯಮದವರು ಬಾಯಿಗೆ ಬಂದದ್ದನ್ನು ಮಾತಾಡಿದ ಹಗಲು ಕುಡುಕರ ಹೇಳಿಕೆಗಳನ್ನು ಯಾವ ಸೆನ್ಸಾರು ಇಲ್ಲದೆ ಪ್ರಸಾರ ಮಾಡಿದವು.
ವೈದ್ಯ ವಿಜ್ಞಾನ ಪದವೀಧರರು ಸರ್ಕಾರಿ ಸೇವೆಗೆ ಬರುತ್ತಿಲ್ಲ ಎಂದು ಬೊಬ್ಬೆ ಇಡುವ ಸರ್ಕಾರ ವೈದ್ಯರಿಗೆ ಮತ್ತು ಯು.ಜಿ.ಸಿ. ಪ್ರಕಾರ ಸಂಬಳ ಪಡೆಯುವ ಉಪನ್ಯಾಸಕರಿಗೆ ಇರುವ ವೇತನದ ವ್ಯತ್ಯಾಸವನ್ನೊಮ್ಮೆ ಪರಿಶೀಲಿಸಲಿ. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಾಕಷ್ಟು ಅಂಕಗಳನ್ನು ಸಿ.ಇ.ಟಿ.ಯಲ್ಲಿ ರ್ಯಾಂಕ್ ಗಳಿಸುವ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ನೀಡುವ ಸರ್ಕಾರ, ಅವರು ಶ್ರಮಪಟ್ಟು ಪದವಿ ಗಳಿಸಿದ್ದನ್ನು ಅಧಿಕೃತಗೊಳಿಸಿಕೊಳ್ಳಲು ಎರಡು ವರ್ಷ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಸರ್ಕಾರಿ ಆಸ್ಪತ್ರೆಗೆ ನೇಮಕಗೊಂಡ ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ ಎಂದರೆ ಒಪ್ಪಬಹುದು.
ಸರ್ಕಾರಿ ವೈದ್ಯರು ತಮ್ಮ ಕರ್ತವ್ಯದ ಅವಧಿ ಮುಗಿದ ನಂತರ ಖಾಸಗಿಯಾಗಿ ಚಿಕಿತ್ಸೆ ನೀಡುವಂತಿಲ್ಲ ಎನ್ನಲಾಗುತ್ತಿದೆ. ಕರ್ತವ್ಯದ ನಂತರ ತುರ್ತು ಚಿಕಿತ್ಸೆಗಾಗಿ ರೋಗಿಗಳು ವೈದ್ಯರ ನಿವಾಸಕ್ಕೆ ಹೋದರೆ ಚಿಕಿತ್ಸೆಯನ್ನು ನಿರಾಕರಿಸಲು ಸಾಧ್ಯವೆ? ಈ ರೀತಿ ರೋಗಿಗಳು ನಿವಾಸಕ್ಕೆ ಬರತೊಡಗಿದಾಗ ತಮ್ಮ ಖಾಸಗಿ ಬದುಕಿಗೆ ತೊಂದರೆಯಾಗದಿರಲೆಂದು ನಿಗದಿತ ಸ್ಥಳವೊಂದರಲ್ಲಿ ಚಿಕಿತ್ಸೆ ನೀಡುವುದು ತಪ್ಪೆ? ಮೊದಲೇ ವೈದ್ಯರ ಕೊರತೆ ಇರುವಾಗ ಅವರ ಹೆಚ್ಚಿನ ಸೇವೆಯನ್ನು ತಡೆಯುವುದು ಯಾವ ನ್ಯಾಯ? ಯಾವ ವೈದ್ಯರೇ ಇರಲಿ, ಯಾವುದೇ ಸಮಯದಲ್ಲಾದರೂ ಸೈ ಚಿಕಿತ್ಸೆ ನಿರಾಕರಿಸಲಾಗದು.
ಗ್ರಾಮೀಣ ಸೇವೆ ಎನ್ನುವ ಸರ್ಕಾರ ಅಲ್ಲಿನ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆಯೆ? ರೋಗಿಗಳ ಶುಶ್ರೂಶೆಗೆ ಸಮಯ ಸಿಗದಂತೆ ವೈದ್ಯರನ್ನು ಆಡಳಿತಾತ್ಮಕ ಕೆಲಸಕ್ಕೆ ಈಡು ಮಾಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಜಿಲ್ಲಾ ಸರ್ಜನ್, ಟಿ.ಬಿ. ಆಫೀಸರ್, ತಾಲೂಕು ವೈದ್ಯಾಧಿಕಾರಿ, ಆಡಳಿತ ವೈದ್ಯಾಧಿಕಾರಿ ಎಂದು ಪದಾಧಿಕಾರವನ್ನು ಕೊಟ್ಟು ಅವರನ್ನು ಕಡತಗಳ ವಿಲೇವಾರಿಗೆ ಹಚ್ಚಲಾಗಿದೆ. ಸಭೆ-ಸಮಾರಂಭಗಳಲ್ಲಿಯೂ ವೈದ್ಯರು ಹಾಜರಿರಬೇಕು. ಆಡಳಿತಾತ್ಮಕ ಕೆಲಸಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವವರಿಗೆ ಸರ್ಕಾರಿ ವೈದ್ಯರಿಂದ ನಿರೀಕ್ಷಿತ ಸೇವೆ ಅಸಾಧ್ಯ!
ಇಂಗ್ಲೆಂಡ್ ನಂತಹ ದೇಶದಲ್ಲಿಯೂ ಸಹ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನರ್ಸ್ಗಳೇ ಶುಶ್ರೂಶೆ ಮಾಡುತ್ತಾರೆ. ಆ ನಂತರದ ಸರದಿ ವೈದ್ಯರದ್ದಾಗಿರುತ್ತದೆ. ಆದರೆ ನಮ್ಮ ದೇಶದಲ್ಲಿ ಎಲ್ಲವೂ ತದ್ವಿರುದ್ಧ. ವೈದ್ಯರ ಕೊರತೆ ಎಂದು ಗೊಣಗುವ ಬದಲು ಸರ್ಕಾರ ಭಾರತೀಯ ವೈದ್ಯಕೀಯ ಪದ್ಧತಿ ಹಾಗೂ ಹೋಮಿಯೋ ಪದವಿ ಪಡೆದ ವೈದ್ಯರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಿಸಿಕೊಳ್ಳಲಿ.
- ಅಶೋಕ ಸ್ವಾಮಿ, ಹೇರೂರು,
ಸಂಪಾದಕರು, ಔಷಧೀಯ ವಾರ್ತೆ ಮಾಸಪತ್ರಿಕೆ