ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬುದ್ಧಿಜೀವಿಗಳಿಗೆ ಸಮಾಜದ ಬಗ್ಗೆ ನಿಜಕ್ಕೂ ಕಾಳಜಿಯಿದೆಯೇ?

ಬ್ರಾಹ್ಮಣರಲ್ಲೂ ಅನೇಕರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ ಎನ್ನುವುದನ್ನು ಬುದ್ಧಿಜೀವಿಗಳು ಅರ್ಥಮಾಡಿಕೊಳ್ಳುವುದೇ ಇಲ್ಲ.

Srinivasa Murthy VN
Updated On : 25 Nov 2013, 11:58 am

ವೇದಿಕೆಯ ಮೇಲೆ ನಿಂತು ಭಾಷಣ ಮಾಡುವವರಿಗೆ ಸಭಿಕರ ಚಪ್ಪಾಳೆ, ಶಿಳ್ಳೆಗಳದ್ದೇ ಕಾಳಜಿ. ಬ್ರಾಹ್ಮಣರಲ್ಲೂ ಅನೇಕರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ ಎನ್ನುವುದನ್ನು ಬುದ್ಧಿಜೀವಿಗಳು ಅರ್ಥಮಾಡಿಕೊಳ್ಳುವುದೇ ಇಲ್ಲ.

ತಿಂಗಳ ಹಿಂದೆ ಚಿತ್ರದುರ್ಗದಲ್ಲಿ ಲಂಕೇಶ ಬಳಗ ಆಯೋಜಿಸಿದ್ದ 'ಬ್ರಾಹ್ಮಣ್ಯ ಅಂದು-ಇಂದು' ಎಂಬ ಕಾರ್ಯಕ್ರಮದ ಬಗ್ಗೆ ಬಿ. ಮೊಹಿದ್ದೀನ್ ಖಾನ್ ಅವರು ದಿ. 11.10. 2013ರಂದು ಪತ್ರಿಕೆಗೆ ಪ್ರತಿಕ್ರಿಯಿಸಿದ್ದರು. ಆ ಕಾರ್ಯಕ್ರಮದ ಉದ್ದಕ್ಕೂ ಅಪ್ರಸ್ತುತ ವಿಷಯಗಳನ್ನು ಕೆದಕಿ ವೇಳೆಯನ್ನು ಹಾಳಮಾಡಲಾಯಿತು. ಹಾಗೆ ನೋಡಿದರೆ ಇಂದು ನಿಜಕ್ಕೂ ಚಿಂತಿಸಬೇಕಾದ ಅಂದು-ಇಂದುಗಳು ಬಹಳಷ್ಟಿವೆ! 'ಭಯೋತ್ಪಾದನೆ' ಅಂದು-ಇಂದು, 'ಭ್ರಷ್ಟಾಚಾರ' ಅಂದು-ಇಂದು, 'ರಾಷ್ಟ್ರಭಕ್ತಿ' ಅಂದು -ಇಂದು, 'ಬಡತನ' ಅಂದು -ಇಂದು....ಹೀಗೆ.
'ಪುರೋಹಿತರು ಕೂಲಿಗೆ ಇಳಿದಾಗ ಸಮಾನತೆ ಕಾಣಲು ಸಾಧ್ಯ' ಎನ್ನುವುದು ಮುರಾರ್ಜಿ ದೇಸಾಯಿಯವರ ಘೋಷಣೆ. ಇದನ್ನೇ ಅಂದು ಕುಂ. ವೀರಭದ್ರಪ್ಪನವರು ಉಚ್ಚರಿಸಿದರು. ಆದರೆ ಹೀಗಾದದ್ದು ಮೊದಲ ಬಾರಿಯೇನಲ್ಲ, ಕುಂವಿಯವರೂ ಇಂಥ ಮಾತನಾಡಿದವರಲ್ಲಿ ಮೊದಲಿಗರಲ್ಲ. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರನ್ನು ಬೈಯುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ವಿಚಾರವಾದಿಗಳು ಎಂದೆನಿಸಿಕೊಳ್ಳಬೇಕಾದರೆ ಬ್ರಾಹ್ಮಣರನ್ನು ಬೈಯ್ಯಬೇಕು ಎಂಬ ಅಲಿಖಿತ ನಿಯಮವೊಂದನ್ನು ಕೆಲವರು ಪಾಲಿಸುತ್ತಿದ್ದಾರೆ.
ಆದರೆ 'ಸಮಾನತೆ' ಎಂಬುದು ಎಂದೂ, ಎಲ್ಲಿಯೂ ಬರುವ ಸಾಧ್ಯತೆ ಇಲ್ಲವೇ ಇಲ್ಲ. ಎಲ್ಲ ಬಡವರು ಶ್ರೀಮಂತರಾಗಲು ಸಾಧ್ಯವಿಲ್ಲ. ವಿದ್ಯಾವಂತರೆಲ್ಲರೂ ಡಾಕ್ಟರ್ ಆಗಲ್ಲ. ರಾಜಕೀಯದಲ್ಲಿ ಬಡವರು ಶಾಸಕರು, ಸಚಿವರಾಗಲು ಸಾಧ್ಯವೆ? ಮೀಸಲು ಕ್ಷೇತ್ರದಲ್ಲೂ ಸ್ಥಿತಿವಂತರಿಗೆ ಟಿಕೆಟ್! ಎಲ್ಲಿದೆ ಸಮಾನತೆ? ಬಡವರು ಶಾಸಕರು, ಸಚಿವರಾಗಬಾರದೆ? ಶ್ರೀಮಂತ ರಾಜಕಾರಣಿಗಳೆಲ್ಲ ಬಡವರಾದರೆ 'ಸಮಾನತೆ' ಕಾಣಲು ಸಾಧ್ಯ? ಎಂದೇಕೆ ಭಾಷಣದಲ್ಲಿ ಹೇಳುವುದಿಲ್ಲ?  ಯಾವುದೇ ಜಾತಿಯ ಶ್ರೀಮಂತರು ತಮ್ಮ ಮಗಳನ್ನು ಬಡವರ ಮನೆಗೆ ಕೊಟ್ಟೋ, ಬಡವರ ಮನೆಯ ಹೆಣ್ಣನ್ನು ತಮ್ಮ ಮಗನಿಗೆ ತಂದುಕೊಂಡೊ ಸಮಾನತೆ ಕಂಡುಕೊಳ್ಳುವ ಪ್ರಯತ್ನವನ್ನಾದರೂ ಮಾಡಿದ್ದಾರಾ? ಕನ್ನಡದ ಬಗ್ಗೆ ಭಾಷಣ ಮಾಡುವವರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲಿ ಓದಿಸಿದ ಹಾಗೆ! ನಮ್ಮನ್ನು ಸೃಷ್ಟಿಸಿದ ಆ ಭಗವಂತನೇ ನಮ್ಮಲ್ಲಿ ಒಂದೇ ರೀತಿಯ ಜ್ಞಾನವನ್ನು ಕರುಣಿಸಿಲಿಲ್ಲ. ಏಕೆ ಎಲ್ಲರನ್ನೂ ಸಾಹಿತಿಗಳನ್ನಾಗಿ ಮಾಡಲಿಲ್ಲ?
ಪುರೋಹಿತರಾಗಲಿ, ಜ್ಯೋತಿಷಿಗಳಾಗಲಿ, (ಬ್ರಾಹ್ಮಣರಷ್ಟೇ ಜ್ಯೋತಿಷ್ಯ ಹೇಳುತ್ತಿಲ್ಲ. ಎಲ್ಲ ಜಾತಿಯವರೂ ಜ್ಯೋತಿಷ್ಯ ಹೇಳುತ್ತಿದ್ದಾರೆ. ಐಯಂಗಾರ್ ಬೇಕರಿ ಎಂಬ ಬೋರ್ಡ್ ಕೆಳಗಿನ ಅಂಗಡಿಯ ಹಾಗೆ!) ಯಾರನ್ನು ಮನೆಯಿಂದ ಎಳೆದು ತಂದಾಗಲಿ, ಮನೆ ಹೊಕ್ಕಾಗಲಿ, ದಬ್ಬಾಳಿಕೆಯಿಂದಾಗಲಿ, ಪುರೋಹಿತ್ಯ, ಜ್ಯೋತಿಷ್ಯ (ಹೇರುತ್ತಿಲ್ಲ). ಸಮಾಜದಲ್ಲಿನ ಅನಕ್ಷರಸ್ಥರು, ಅಕ್ಷರಸ್ಥ ಸ್ವಜಾತಿಯವರಿಂದಲೇ ಮೋಸಕ್ಕೆ ಬಲಿಯಾಗಿರುವ ಎಷ್ಟೋ ಪ್ರಸಂಗಗಳಿವೆ. ನಮ್ಮ ಮೈಸೂರಿನಲ್ಲಿ ಪ್ರೊ. ಭಗವಾನ್ ಇದ್ದಾರೆ. ಅವರು ಹೇಳುತ್ತಾರೆ, 'ಹಿಂದೂ ಧರ್ಮದ ನಾಶಕ್ಕೆ ಬ್ರಾಹ್ಮಣರೇ ಕಾರಣ'! ಅವರಿಗೆ ಪ್ರತಿ ಹೇಳಿಕೆ ನೀಡಿದ ಗ್ರಾಮ ಪಂಚಾಯತಿ ಸದಸ್ಯರಾದ ಅರುಣ ಕುಮಾರ್ ಎನ್ನುವವರು ಆಧಾರವಿಲ್ಲದೇ ಹೇಳಿಕೆಗಳನ್ನು ನೀಡುತ್ತಿರುವ ಭಗವಾನ್‌ರನ್ನು ಗಡಿಪಾರು ಮಾಡಬೇಕೆಂದರು. ಸಾಲದ್ದಕ್ಕೆ, ತಮ್ಮ ಕುಟುಂಬದ ಒಬ್ಬರನ್ನು ದಲಿತರಿಗೆ ವಿವಾಹ ಮಾಡಿ ಕೊಡಿ ಎಂದು ಸವಾಲು ಹಾಕಿದರು. ಇದು ಬೇಕಿತ್ತೆ?
ಇನ್ನೊಬ್ಬ ಮೈಸೂರಿನ ಪ್ರಖ್ಯಾತ ಪತ್ರಕರ್ತರು ತಮ್ಮ ಭಾಷಣದಲ್ಲಿ 'ಬ್ರಾಹ್ಮಣರು ದೇಶ ಬಿಟ್ಟು ಹೋಗಿ' ಎಂದಿದ್ದಾರೆ. ಈ ದೇಶ ಒಬ್ಬರ ಸ್ವತ್ತಲ್ಲ. ಈ ದೇಶಕ್ಕೆ ಹೊರಗಿನಿಂದ ಬಂದು ಸೇರುತ್ತಿದ್ದಾರಲ್ಲ. (ಅಸ್ಸಾಂಗೆ ಬಾಂಗ್ಲಾದವರು) ಅವರನ್ನು ಮೊದಲು ಹೊರಹಾಕಿ. ನಿಮ್ಮಲ್ಲಿ ಅನೇಕರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ನಮ್ಮ ಪರವಾಗಿ ಕಾನೂನು ಇದೆ ಎಂಬ ಕಾರಣಕ್ಕೆ ಯಾರೊಬ್ಬರನ್ನೂ ಹಗುರವಾಗಿ ಕಾಣುವುದು ಸಮಂಜಸವಲ್ಲ.
ಕ.ಪ್ರ. ದಿ. 8.10.2013ರಂದು 'ದಲಿತ ನಾಯಕರಿಗೆ ದಲಿತರ ಮೇಲೇಕಿಲ್ಲ ಕಾಳಜಿ?' ಎಂಬ ತಮ್ಮ ಲೇಖನದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳು  ದಲಿತರ ಮೇಲಿನ ದೌರ್ಜನ್ಯ, ಕೊಲೆ, ಮಾನಭಂಗ, ಮನೆಗಳಿಗೆ ಬೆಂಕಿ ಹಚ್ಚಿರುವ ಪ್ರಕರಣಗಳ ಬಗ್ಗೆ ಅಂಕಿ-ಅಂಶಗಳೊಂದಿಗೆ ಪ್ರಸ್ತಾಪಿಸಿದ್ದಾರೆ. ಇದನ್ನು ದಲಿತರ ಪರವಾದ ಕಾಳಜಿ ಎನ್ನಬಹುದು. ಅವರ ಲೇಖನದಲ್ಲಿನ ಪ್ರೌಢಿಮೆ ನೋಡಿ, 'ಮೇಲ್ವರ್ಗದಿಂದ', 'ಮೇಲ್ಜಾತಿಗಳಿಂದ' ಎಂಬ ಶಬ್ದಗಳ ಪ್ರಯೋಗ ಮಾಡಿದ್ದಾರೆಯೇ ಹೊರತು ಒಂದೇ ಜಾತಿಯನ್ನೂ ಹೆಸರಿಸಿಲ್ಲ ಮತ್ತು ಅದೇ ವಾಸ್ತವ ಕೂಡ. ಅವರು ಹೇಳಿರುವಂತೆ, ಎಷ್ಟೋ ಹಳ್ಳಿಗಳಲ್ಲಿ ದಲಿತರ ಸ್ಥಿತಿ ಚಿಂತಾಜನಕವಾಗಿದೆ. ಸ್ವಾಮೀಜಿಯವರ ಲೇಖನ ಮನಕಲಕುವಂಥದ್ದು. ಇದರಲ್ಲಿ ದಲಿತರಿಂದ ಶಹಬ್ಬಾಸ್‌ಗಿರಿ-ಗಿಟ್ಟಿಸುವಂಥ ಢೋಂಗಿತನವಂತೂ ಇಲ್ಲ.  ಎಲ್ಲರೂ ಸಮಾನರಾಗಿಲ ಮೊಹಿದ್ದೀನ್‌ಖಾನ್ ಚಿತ್ರದುರ್ಗ, ಯುವ ಬರಹಗಾರ ಮೊಹಮ್ಮದ್ ಮುಸ್ತಾಫಾ ಆತೂರ ಅಲ್ಲದೆ ಡ್ಯಾನಿ ಪೆರೆರಾ ಅವರನ್ನೇ ತೆಗೆದುಕೊಳ್ಳಿ. ಎಷ್ಟೊಂದು ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ ಅವರ ಲೇಖನಗಳಲ್ಲಿ. ಇದನ್ನೇ ರಾಷ್ಟ್ರಪ್ರೇಮ, ಪರಧರ್ಮ ಸಹಿಷ್ಣುತೆ, ಜಾತ್ಯತೀತತೆ ಎನ್ನುತ್ತೇವೆ.
ಒಂದು ಲೇಖನದಲ್ಲಿ ಡ್ಯಾನಿ ಪೆರೆರಾ ಬರೆಯುತ್ತಾರೆ-"ಅಲ್ಪಸಂಖ್ಯಾತ ಬಹುಸಂಖ್ಯಾತ, ಜಾತ್ಯತೀತತೆಯ ಹೆಸರಿನಲ್ಲಿ ಈ ದೇಶವನ್ನು ಸ್ಪಷ್ಟವಾಗಿ ಒಡೆಯುತ್ತಿರುವುದು, ಈ ದೇಶವನ್ನು ಒಂದು ರಾಷ್ಟ್ರವಾಗಿ ಪ್ರೀತಿಸುವ ನನ್ನಂಥವರಿಗೆ ಅತ್ಯಂತ ನೋವಿನ ಸಂಗತಿ." ಎಂದು ಹೇಳುತ್ತಾರೆ. ಅನ್ಯ ಧರ್ಮೀಯರೇ, ಹಿಂದೂ ಧರ್ಮದ ಬಗ್ಗೆ, ಹಿಂದೂಗಳ ಬಗ್ಗೆ ಅಪ್ಯಾಯತೆ, ಆದರ, ಅಭಿಮಾನ ತೋರುತ್ತಿರುವಾಗ, ಹಿಂದೂಗಳೇ ಸಮಾನತೆಯ ಹೆಸರಿನಲ್ಲಿ ಉನ್ನತಿಯನ್ನು ಅಸೂಯೆಯಿಂದ ನೋಡುತ್ತಾ, ಕಾಲೆಳೆಯುವುದನ್ನು ಬಿಟ್ಟು, 'ನಾವು ನಮ್ಮ ಉನ್ನತಿಗಾಗಿ ಶ್ರಮಿಸೋಣ, ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ದಲಿತರಲ್ಲಿ ಅತ್ಯಂತ ದಲಿತರವರೆಗೆ ಮುಟ್ಟಿಸೋಣ', "ಕೂಲಿಯಿಂದ ಮೇಲೆದ್ದು ಕುಲಪತಿಗಳಾಗೋಣ" ಎಂಬ ಸಂಕಲ್ಪವನ್ನೇಕೆ ಮಾಡಬಾರದು?
ಕೂಲಿಯೊಬ್ಬನು ತನ್ನಂತೆ ತನ್ನ ಮಗ ಕೂಲಿಯಾಗುವುದನ್ನು ಬಯಸುವುದಿಲ್ಲ. ಬೇರೆಯವರು ಕೂಲಿಗಳಾಗಲಿ ಎಂದೂ ಬಯಸುವುದಿಲ್ಲ. ನನ್ನ ಕಷ್ಟ ಬೇರೆಯವರಿಗೆ ಬೇಡಾ ಎನ್ನುತ್ತಾನೆ. ವೇದಿಕೆಯ ಮೇಲೆ ನಿಂತು ಭಾಷಣ ಮಾಡುವವರಿಗೆ ಸಭಿಕರ ಚಪ್ಪಾಳೆ, ಶಿಳ್ಳೆಗಳದ್ದೇ ಕಾಳಜಿ. ಬ್ರಾಹ್ಮಣರಲ್ಲೂ ಅನೇಕರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ನನ್ನ ದಲಿತ ಸ್ನೇಹಿತರು ಬ್ರಾಹ್ಮಣರ ಪರಿಸ್ಥಿತಿ ಕಂಡು ಮಮ್ಮಲ ಮರಗುತ್ತಾರೆ. ನಮಗೆ ಸರ್ಕಾರಿ ಕೇಸುಗಳಲ್ಲಿ ಜೊತೆಯಲ್ಲಿ ಬಂದು ಸಹಕರಿಸುತ್ತಾರೆ. ಎಲ್ಲರೂ ಭೇದ ಮರೆತು ಒಂದಾಗಿ ಬೆರೆಯುತ್ತಿದ್ದಾರೆ. ಆದರೆ, ಬುದ್ಧಿಜೀವಿಗಳೆನಿಸಿಕೊಂಡವರು ಸಮಾಜದಲ್ಲಿ ವಿಷಬೀಜ ಬಿತ್ತುತ್ತಾ ತಮಗೆ ಬೇಕಾದ ಬೆಳೆಯನ್ನೇ ಪಡೆಯುತ್ತಿದ್ದಾರೆ.
ಸಮಾಜದಲ್ಲಿನ ಎಲ್ಲ ಜಾತಿ, ಧರ್ಮಗಳಲ್ಲಿ ಬಡವರು, ಶ್ರೀಮಂತರು ಇದ್ದಾರೆ. 'ಸಮಾನತೆ' ಬರಬೇಕೆಂದರೆ ಎಲ್ಲರೂ ಶ್ರೀಮಂತರಾಗಬೇಕು! ಎಲ್ಲ ಜಾತಿ ಧರ್ಮಗಳಲ್ಲಿನ ಬಡವರಿಗೆ ಮೀಸಲಾತಿ ಸಿಕ್ಕಾಗ ಮಾತ್ರ ಸಮಾನತೆ ಕಾಣಲು ಸಾಧ್ಯವಾಗಬಹುದು. ಜಾತಿವಾರು ಮೀಸಲಾತಿಯಿಂದಲೂ ಸಮಾನತೆ ಸಾಧ್ಯವಿಲ್ಲ.

- ಜಿ.ಎಂ. ಕುಲಕರ್ಣಿ, ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement