ಮುಂಬೈ ದಾಳಿಯನ್ನು ತಡೆಯುವುದಕ್ಕೆ ಸಾಧ್ಯವಿತ್ತೇ?
ಭಾರತದ ರಕ್ಷಣಾ ಸಾಮರ್ಥ್ಯವನ್ನು ಬೆತ್ತಲೆಗೊಳಿಸಿದ ಆ ಘಟನೆಯನ್ನು ಅಷ್ಟು ಸುಲಭವಾಗಿ ಮರೆಯುವುದಕ್ಕೆ ಸಾಧ್ಯವೇ?
ಸಿನೆಮಾ ನಗರಿ ಮುಂಬೈಯಲ್ಲಿ ಸಿನಿಮೀಯ ರೀತಿಯಲ್ಲಿ ನಡೆದು ಹೋದ ಆ ಘಟನೆ ಇಡೀ ಭಾರತದ ಎದೆಯನ್ನು 68 ಗಂಟೆಗಳ ಕಾಲ ನಡುಗಿಸಿದ್ದು ಸುಳ್ಳಲ್ಲ. 26/11 ಮುಂಬೈ ದಾಳಿ ನಡೆದು ಇಂದಿಗೆ 5 ವರ್ಷಗಳಾದವು. ಆ ಸುದ್ದಿ ಈಗ ಟಿಆರ್ಪಿಗೆ ಪೂರಕವಾಗದು ಎನ್ನುವುದನ್ನು ಮನಗಂಡ ಮಾಧ್ಯಮಗಳು, ಹೊಸ ಬ್ರೇಕಿಂಗ್ ನ್ಯೂಸ್ಗಳ ಬೆನ್ನತ್ತಿವೆ. ಆದರೆ ಭಾರತದ ರಕ್ಷಣಾ ಸಾಮರ್ಥ್ಯವನ್ನು ಬೆತ್ತಲೆಗೊಳಿಸಿದ ಆ ಘಟನೆಯನ್ನು ಅಷ್ಟು ಸುಲಭವಾಗಿ ಮರೆಯುವುದಕ್ಕೆ ಸಾಧ್ಯವೇ?
ಆ ದಾಳಿಯನ್ನು ತಡೆಯುವುದಕ್ಕೆ ನಮ್ಮ ರಕ್ಷಣಾ ವ್ಯವಸ್ಥೆಗೆ ಸಾಧ್ಯವಿತ್ತೆ? ಮುಂಬೈ ಮೇಲೆ ಉಗ್ರರು ದಾಳಿಮಾಡಲಿದ್ದಾರೆ ಎನ್ನುವುದು ಕೇಂದ್ರ ಸರ್ಕಾರಕ್ಕೆ ಮುಂಚಿತವಾಗಿಯೇ ತಿಳಿದಿತ್ತೆ?
ಹೌದು, ಪಾಕಿಸ್ತಾನದಿಂದ ಉಗ್ರರ ತಂಡವೊಂದು ಮುಂಬೈಗೆ ಬರಲಿದೆ, ಅದು ಯಾವ ಸ್ಥಳಗಳಲ್ಲಿ ದಾಳಿ ಮಾಡಬೇಕೆಂದು ಯೋಜನೆ ರೂಪಿಸಿದೆ, ಆ ತಂಡದಲ್ಲಿ ಎಷ್ಟು ಜನರಿರಬಹುದು ಎಂಬ ಬಗೆಗಿನ ಸ್ಪಷ್ಟ ಮಾಹಿತಿ ಭಾರತಕ್ಕೆ ಮೊದಲೇ ದೊರಕಿತ್ತು. ಅದೂ ಒಂದು ಬಾರಿಯಲ್ಲ! ಫಿದಾಯಿನ್ಗಳನ್ನು ಬಳಸಿ ಭಾರತದ ವಾಣಿಜ್ಯ ನಗರದಲ್ಲಿ ರಕ್ತಪಾತ ನಡೆಸುವ ಹೊಂಚನ್ನು ಲಷ್ಕರ್ ರೂಪಿಸಿದೆ ಎನ್ನುವ ಮೊದಲ ಮಾಹಿತಿ 2006ರಲ್ಲೇ ದೊರಕಿತ್ತು! ಸಮುದ್ರ ಮಾರ್ಗದ ಮೂಲಕ ಉಗ್ರರು ಬರಲಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿದ್ದವು 6 ಮಾಹಿತಿಗಳು. ಇದಾದ ನಂತರ ತಾಜ್ ಮತ್ತು ಇನ್ನುಳಿದ ಪಂಚತಾರಾ ಹೊಟೆಲ್ಗಳ ಮೇಲೆ ದಾಳಿ ನಡೆಯಬಹುದಾದ ಸಾಧ್ಯತೆ ಇದೆ ಎಂದು ಗುಪ್ತಚರ ದಳಕ್ಕೆ ಎರಡು ಎಚ್ಚರಿಕೆಗಳು ಬಂದಿದ್ದವು. ಮೇ 24 ಮತ್ತು ಆಗಸ್ಟ್ 11 ದಾಳಿಗೆ ಸಂಭಾವ್ಯ ದಿನ ಎನ್ನುವ ಮಾಹಿತಿಯನ್ನೂ ಸಿಐಎ ಭಾರತಕ್ಕೆ ರವಾನಿಸಿತ್ತು. ಅಂದರೆ ಅಮೆರಿಕದ ಸಿಐಎ ಸೇರಿದಂತೆ ಒಟ್ಟು 26 ಗುಪ್ತಚರ ಎಚ್ಚರಿಕೆಗಳು ಭಾರತಕ್ಕೆ ದೊರಕಿದ್ದವು. ಆ ಮಾಹಿತಿಗಳು ಎಷ್ಟು ನಿಖರವಾಗಿದ್ದವೆಂದರೆ, 32ವರ್ಷದ ಮುಂಬೈ ದಕ್ಷಿಣದ ಪೊಲೀಸ್ ಉಪಆಯುಕ್ತ ವಿಶ್ವಾಸ್ ನಾಂಗ್ರೇ ಪಾಟೀಲ್ ಕೂಡಲೇ ಎಚ್ಚೆತ್ತುಕೊಂಡರು. ಹೇಗೆ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಬಹುದು ಎನ್ನುವ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿದರು. ಆದರೆ ಅಷ್ಟೆಲ್ಲಾ ಭದ್ರತೆಯನ್ನು ಒದಗಿಸಲು ಇಲಾಖೆಯ ಬಳಿ ಹಣವಿಲ್ಲ ಎಂಬ ಉತ್ತರ ಅವರಿಗೆ ಎದುರಾಯಿತು! ಆದರೂ ಅವರು ಸುಮ್ಮನಾಗಲಿಲ್ಲ. ತಕ್ಷಣ ನೌಕಾ ಪಡೆಯ ಕಮಾಂಡೆಂಟ್ಗಳಿಗೆ ಸಮುದ್ರ ಮಾರ್ಗವಾಗಿ ಉಗ್ರರು ಬರುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದಿರುವಂತೆ ಇ-ಮೇಲ್ ಕಳುಹಿಸಿದರು. ಅಲ್ಲಿಂದಲೂ ಅಸಡ್ಡೆಯೇ ಅವರಿಗೆ ಎದುರಾಯಿತು.
ಕೊನೆಗೆ ತಾಜ್ ಹೊಟೆಲ್ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನುವ ಮಾಹಿತಿ ದೊರೆತಿದ್ದರಿಂದ ತಾವೇ ಮುತುವರ್ಜಿ ವಹಿಸಿ ತಾಜ್ನ ಭದ್ರತಾ ಮುಖ್ಯಸ್ಥ ಸುನಿಲ್ ಕುಡಿಯಾಡಿ ಅವರೊಂದಿಗೆ ಭದ್ರತೆಯ ವಿಷಯ ಚರ್ಚಿಸಿದರು. ತಾಜ್ನ ಭದ್ರತಾ ಸಿಬ್ಬಂದಿಯ ಜೊತೆಗೆ ಅಕ್ಟೋಬರ್ನಲ್ಲಿ (ದಾಳಿಗೂ ಒಂದು ತಿಂಗಳ ಹಿಂದೆಯೇ) ಭದ್ರತಾ ಕವಾಯತೂ ನಡೆಸಿದ್ದರು. ಆದರೆ ಭದ್ರತೆಗಾಗಿ ನಿಯೋಜನೆಗೊಂಡ ಹೆಚ್ಚುವರಿ ಕಾವಲುಗಾರರು ಮತ್ತು ತಾಜ್ ಹೊಟೆಲ್ನ ನಡುವೆ ಕೆಲವೇ ದಿನಗಳಲ್ಲಿ ಸಣ್ಣ ಕಾರಣವೊಂದಕ್ಕೆ ಜಗಳ ನಡೆದುಹೋಯಿತು. ಯಾವ ಕಾರಣಕ್ಕೆಂದುಕೊಂಡಿರಿ? ಕಾವಲುಪಡೆಗೆ ಆಹಾರ ಒದಗಿಸಲು ತಾಜ್ನ ಆಡಳಿತ ಮಂಡಳಿ ಒಪ್ಪಲಿಲ್ಲ ಎನ್ನುವುದಕ್ಕೆ! ಈ ನಡುವೆಯೇ ವಿಶ್ವಾಸ್ ನಾಂಗ್ರೇ ಕೆಲವು ದಿನ ರಜೆ ಹಾಕಿದ್ದರು. ಇದೇ ಸಮಯದಲ್ಲೇ ತಾಜ್ ಎಲ್ಲಾ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಖಾಸಗಿ ಕಾವಲು ಪಡೆಗಳನ್ನು ಹಿಂದಕ್ಕೆ ಕಳುಹಿಸಿಬಿಟ್ಟಿತು!
ಇಲ್ಲಿ ವೈಫಲ್ಯ ಕೇವಲ ತಾಜ್ ಮತ್ತು ಗುಪ್ತಚರ ದಳಗಳದ್ದಷ್ಟೇ ಅಲ್ಲ. ಆ ದಾಳಿ ನಡೆದ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ, ಅಂದರೆ ನವೆಂಬರ್ 26ರ ರಾತ್ರಿ 10.05 ನಿಮಿಷಕ್ಕೆ(ಮುಂಬೈನಲ್ಲಿ ಮೊದಲ ಗುಂಡು ಹಾರಿದ 22 ನಿಮಿಷಗಳಲ್ಲಿ) ರಾಷ್ಟ್ರೀಯ ಭದ್ರತಾ ಪಡೆಯನ್ನು (ಎನ್ಎಸ್ಜಿ) ಅನಧಿಕೃತವಾಗಿ ಕಾರ್ಯಾಚರಣೆಗೆ ಸಿದ್ಧಗೊಳಿಸಲಾಗಿತ್ತು. ಆದರೆ ಅದಾದ 70 ನಿಮಿಷಗಳ ನಂತರ, ಕ್ಯಾಬಿನೆಟ್ ಕಾರ್ಯದರ್ಶಿ ಕೆ.ಎಮ್. ಚಂದ್ರಶೇಖರ್ ಮತ್ತು ಜಂಟಿ ಕಾರ್ಯದರ್ಶಿ(ಆಂತರಿಕ ಭದ್ರತೆ)ಗಳು "ಆದೇಶವಿಲ್ಲದೇ ಕಾರ್ಯಾಚರಣೆಗೆ ಸಿದ್ಧಗೊಂಡಿದ್ದಕ್ಕೆ" ಎನ್ಎಸ್ಜಿಯನ್ನು ತರಾಟೆಗೆ ತೆಗೆದುಕೊಂಡರು! ಮಧ್ಯರಾತ್ರಿ 12:34ಕ್ಕೆ ಅಂದಿನ ಗೃಹ ಕಾರ್ಯದರ್ಶಿ ಮಧುಕರ ಗುಪ್ತಾ, ಎನ್ಎಸ್ಜಿ ಮುಖ್ಯಸ್ಥ ಜ್ಯೋತಿ ದತ್ತಾ ಅವರಿಗೆ ಕರೆ ಮಾಡಿ ಕಾರ್ಯಾಚರಣೆಗೆ ಮುನ್ನುಗ್ಗಲು ಹೇಳಿದರು.
ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ಎನ್ಎಸ್ಜಿ ಪಡೆಗಳಿಗೆ ವಿಮಾನ ಬರುವುದು ತಡವಾಗಬಹುದು, ಅದಿನ್ನೂ ಚಂಡೀಗಢದಲ್ಲಿದೆ(156 ಮೈಲಿ ದೂರ) ಎನ್ನುವುದು ತಿಳಿಯಿತು. ಕೂಡಲೇ ಜ್ಯೋತಿ ದತ್ತಾ ಅವರು 'ರಾ'ಗೆ ಕರೆ ಮಾಡಿ ಇಲ್ಯುಶಿನ್-76 ವಿಮಾನವನ್ನು ಕಳುಹಿಸಬೇಕೆಂದು ಮೊರೆಯಿಟ್ಟರು. ಆದರೆ ಆ ವಿಮಾನದಲ್ಲಿ ಇಂಧನವಿರಲೇ ಇಲ್ಲ!
ಏನು ಮಾಡಬೇಕೋ ತೋಚದೆ ದತ್ತಾ ಅವರು ರಾತ್ರಿ 1 ಗಂಟೆಗೆ ಗೃಹ ಕಾರ್ಯದರ್ಶಿಗಳಿಗೆ ಕರೆ ಮಾಡಿದಾಗ, ಪಾಕಿಸ್ತಾನಕ್ಕೆ ಮಾತುಕತೆಗಾಗಿ ಹೋದ ಅವರು ಅಲ್ಲೇ ಸಿಕ್ಕಿಬಿದ್ದಿದ್ದಾರೆ ಎನ್ನುವುದು ತಿಳಿಯಿತು. ಇಷ್ಟೆಲ್ಲಾ ಆಗಿ, ಕೊನೆಗೆ ದೆಹಲಿಯಿಂದ ಎನ್ಎಸ್ಜಿ ಪಡೆ ಮುಂಬೈಗೆ ಬಂದಿಳಿದಿದ್ದು ನಸುಕಿನ ಜಾವ 5.30ಕ್ಕೆ. ಆದರೆ ಎನ್ಎಸ್ಜಿ ಪಡೆ ಕಾರ್ಯಾಚರಣೆಗಿಳಿಯುವ ವೇಳೆಗಾಗಲೇ ಉಗ್ರರು ಮುಂಬೈನ ಮೇಲೆ ಹಿಡಿತ ಸಾಧಿಸಿ ಬಿಟ್ಟಿದ್ದರು!
ಭಾರತೀಯ ಮಾಧ್ಯಮಗಳಿಗೆ ತಿಳಿಯದೇ (ತೋರಿಸದೇ?) ಹೋದ ಇಂಥ ರಹಸ್ಯಗಳನ್ನೆಲ್ಲ ಝಿಜ ಡ್ಝಜ್ಜಜ: 68 ಏ್ಟ್ಡ್ಠಡ ಐಟಿಡ್ಝಜಜ ಝಿಜ ಖಿಛಞ ಏ್ಟಡಿಜಟ ಎನ್ನುವ ಪುಸ್ತಕದಲ್ಲಿ ಬ್ರಿಟನ್ನ ಲೇಖಕರಾದ ಅಡ್ರಿಯಾನ್ ಲೇವಿ ಮತ್ತು ಕ್ಯಾಥಿ ಸ್ಕಾಟ್ ಕ್ಲಾರ್ಕ್ ಹೊರಹಾಕಿದ್ದಾರೆ. ನಾಲ್ಕು ವರ್ಷಗಳ ಕಾಲ ಇದಕ್ಕಾಗಿ ಸಂಶೋಧನೆ ನಡೆಸಿರುವ ಈ ಜೋಡಿ, "ಭಾರತದ ಪೊಲೀಸ್ ವ್ಯವಸ್ಥೆ, ಗುಪ್ತಚರ ದಳಗಳನ್ನು ನೋಡಿದರೆ ಮತ್ತೆ ಅವು ತೊಂದರೆಗೆ ಸಿಲುಕಿ, ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಲಿರುವುದು ನಿಶ್ಚಿತ" ಎನ್ನುತ್ತದೆ.
ಗುಪ್ತಚರದಳದೊಂದಿಗೆ ಕೆಲಸ ಮಾಡಲು 'ರಾ' ಸಂಸ್ಥೆ(ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ಮೆರೆದ ನಿಷ್ಕಾಳಜಿ, ಪ್ರತಿಯೊಂದು ಸನ್ನಿವೇಶವನ್ನೂ ಉಗ್ರರಿಗೆ ಸಹಾಯಕವಾಗುವ ಹಾಗೆ ಬಿತ್ತರಿಸಿದ ಭಾರತೀಯ ಮಾಧ್ಯಮಗಳ ಬಾಲಿಶತನವನ್ನೆಲ್ಲ ಈ ಪುಸ್ತಕ ಅನಾವರಣಗೊಳಿಸಿದೆ.
ಈ ಕಾರ್ಯಾಚರಣೆಯಲ್ಲಿ ವಿಶ್ವಾಸ್ ನಾಂಗ್ರೇ ಕೂಡ ಕೂದಲೆಳೆಯಂತರದಿಂದ ಬದುಕುಳಿದಿದ್ದರು. 68 ಗಂಟೆಗಳ ನಂತರ ಮುಂಬೈಯನ್ನು ಮಂಡಿಯೂರಿ ಕೂರುವಂತೆ ಮಾಡಿದ ಆ ಹತ್ತು ಉಗ್ರರು ಕೊನೆಗೆ ರಕ್ತದಲ್ಲಿ ಮಲಗಿದ್ದರು. ಒಂದೊಮ್ಮೆ ತನ್ನ ರಂಗಿನಿಂದ ಆಕರ್ಷಿಸುತ್ತಿದ್ದ ತಾಜ್, ಮೂರು ದಿನದಲ್ಲೇ ಇದ್ದಲಿನಂತೆ ಕರಕಲಾಗಿತ್ತು. ಕ್ರೌರ್ಯದ ಅಟ್ಟಹಾಸಗಳೆಲ್ಲ ಅಡಗಿ ಮನಕರಗಿಸುವ ಮೌನವೊಂದೇ ಅದರ ಸುತ್ತ ಮಡುಗಟ್ಟಿತ್ತು!
ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳಷ್ಟೇ ಅಲ್ಲದೆ ಸಾಮಾನ್ಯ ನಾಗರಿಕರೂ ಶೌರ್ಯ ಮೆರೆದಿದ್ದರು. ಈ ಬಗ್ಗೆ ಆಡ್ರಿಯಾನ್ ಲೆವಿ ಹೇಳುತ್ತಾರೆ- "ತಾಜ್ನ ವೇಟರ್ ಥಾಮಸ್ ವರ್ಗೀಸ್ ಮತ್ತು ಇಂಜಿನಿಯರ್ ರಾಜನ್ ಕಾಂಬ್ಳೆ ಮಾನವ ಕವಚವನ್ನು ನಿರ್ಮಿಸಿ ಅತಿಥಿಗಳನ್ನು ರಕ್ಷಿಸಿದರು. ಕಾಫಿ ಶಾಪ್ನ ಮ್ಯಾನೇಜರ್ ಅಮಿತ್ ಪೇಶ್ವೆ ಎನ್ನುವವರು ತಪ್ಪಿಸಿಕೊಂಡಿದ್ದ ಯಾರದ್ದೋ ಮಗುವನ್ನು ಹುಡುಕುತ್ತಿದ್ದಾಗ ಉಗ್ರರ ಗುಂಡಿಗೆ ಬಲಿಯಾದರು. ಹತ್ತಾರು ಜನರನ್ನು ರಕ್ಷಿಸಿದ ಅಮೆರಿಕದ ನೌಕಾಪಡೆಯ ಯೋಧನೊಬ್ಬನಿಗೆ ಕೊನೆಗೆ ಬಚಾವಾಗುವ ಅವಕಾಶವೇ ಸಿಗಲಿಲ್ಲ!"
ಕಸಬ್ ಎಷ್ಟು ಮುಗ್ಧ, ಪರಿಸ್ಥಿತಿಗೆ ಬಲಿಯಾಗಿ ಹೇಗೆ ಅವನು ಉಗ್ರವಾದಿಯಾದ ಎನ್ನುವ ಬಗ್ಗೆ ಗಂಟೆಗಟ್ಟಲೆ ಕಾರ್ಯಕ್ರಮ ರೂಪಿಸುವ ಭಾರತೀಯ ಮಾಧ್ಯಮಗಳು ಇಂಥವರ ಬಗ್ಗೆ ಒಂದು ಸಣ್ಣ ಸುದ್ದಿಯನ್ನೂ ಪ್ರಕಟಿಸುವುದಿಲ್ಲ. ಒಂದು ಜೀವವನ್ನು ಉಳಿಸುವುದೇ ಸ್ವರ್ಗ ಎಂದು ಭಾವಿಸಿ ಇವರೆಲ್ಲ ಬಲಿಯಾದರು. ಉಗ್ರರಂತೆ ಸ್ವರ್ಗದಲ್ಲಿ ಕನ್ಯೆಯರ ಜತೆ ಕಾಮಕೇಳಿ ನಡೆಸುವ ಆಸೆಗೆ ಬಿದ್ದು ಇನ್ನೊಬ್ಬರ ಬಲಿ ಪಡೆಯಲಿಲ್ಲ!
ಈ ದಾಳಿಯ ರೂವಾರಿ ಹಫೀಜ್ ಸಯೀದ್ ಈಗಲೂ ಪಾಕಿಸ್ತಾನದಲ್ಲಿ ನಿಶ್ಚಿಂತೆಯಿಂದ ಅಡ್ಡಾಡಿಕೊಂಡಿದ್ದಾನೆ. ಸ್ಕಾಟ್ ಮತ್ತು ಲೆವಿ ಲಷ್ಕರ್ನ ತರಬೇತಿ ಶಿಬಿರಕ್ಕೆ ಹೋಗಿ ಸಯೀದ್ನೊಂದಿಗೆ ಮಾತನಾಡಿದಾಗ, ಆತ ಮುಂಬೈ ದಾಳಿಯಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಅಣುಕಿಸುವ ರೀತಿಯಲ್ಲಿ ಹೇಳಿದನಂತೆ. ಸಾವಿರಾರು ಕಸಬ್ಗಳು ಸೇರಿದ್ದ ಮೈದಾನದಲ್ಲಿ ಆತ ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿದಾಗ, ಆ ಹುಡುಗರೆಲ್ಲ "ಅಲ್ಲಾಹು ಅಕ್ಬರ್" ಎಂದು ಒಕ್ಕೊರಲಿನಿಂದ ಕೂಗಿ ಕೇಕೆ ಹಾಕಿದರಂತೆ!
ಮುಂಬೈ ದಾಳಿಯಲ್ಲಿ ಸತ್ತ ಉಗ್ರರಿಗೆ ತರಬೇತಿ ನೀಡುವಾಗ, "ಸತ್ತಾಗ ನಿಮ್ಮ ಮುಖ ಚಂದ್ರನಂತೆ ಹೊಳೆಯುತ್ತದೆ, ನಿಮ್ಮ ದೇಹದಿಂದ ಸುಗಂಧ ಹೊರಹೊಮ್ಮುತ್ತದೆ, ನೀವು ನೇರವಾಗಿ ಸ್ವರ್ಗಕ್ಕೆ ಹೋಗುತ್ತೀರಿ" ಎಂದು ಹೇಳಲಾಗಿತ್ತಂತೆ. ಆದರೆ ಛಿದ್ರವಾದ ಅವರ ವಿಕೃತ ದೇಹಗಳಿಂದ ಹೊರಹೊಮ್ಮಿದ್ದು ಅವರ ಮತಾಂಧತೆಯ ಮತ್ತು ನಮ್ಮ ದೇಶದ ನಿಷ್ಕಾಳಜಿಯ ದುರ್ನಾತವೊಂದೇ!
- ರಾಘವೇಂದ್ರ ಆಚಾರ್ಯ
Raghu.bioastra@gmail.com