ಅಂಕಣಗಳು

ಯಾರನ್ನೂ ಬಿಡಲ್ಲ ಅಂದವರು ಮಾಡಿದ್ದೇನು?

"ಡಿಯರ್ ಪ್ರೈಮ್ ಮಿನಿಸ್ಟರ್, ನಾನೊಬ್ಬ ಮುಂಬೈನ ಹುಲುಮಾನವ. 100 ಜನರು..

ಮುಂಬೈ ದಾಳಿಯ ಪಿತೂರಿದಾರರಾಗಿರುವ ಹಫೀಜ್ ಸಯೀದ್ ಹಾಗೂ ದಾವೂದ್ ಇಬ್ರಾಹಿಂ ಇಂದಿಗೂ ಪಾಕಿಸ್ತಾನದಲ್ಲಿ ಖುಲ್ಲಂಖುಲ್ಲ ಓಡಾಡಿಕೊಂಡಿದ್ದಾರೆ. ಅವರನ್ನು ರಾಜತಾಂತ್ರಿಕ ಕ್ರಮಗಳ ಮೂಲಕ ಮಟ್ಟ ಹಾಕಲು ಸಾಧ್ಯವಿಲ್ಲ ಎಂದಾದರೆ ಈ್ಟಢಜ್ಠಡಿ ಕಠಜ್ಠಛಡ್ಝ್ಟಿಟಿ ಮೂಲಕ ಮುಗಿಸಬಹುದಿತ್ತಲ್ಲವೇ? ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ನೇಪಾಳದ ಸಂಸದ ಮಿರ್ಜಾ ದಿಲ್ಷಾದ್ ಬೇಗ್‌ನನ್ನು 1998ರಲ್ಲಿ ಎನ್‌ಡಿಎ ಸರ್ಕಾರ ಪರಿಸಮಾಪ್ತಿಗೊಳಿಸಿದ ಉದಾಹರಣೆ ನಮ್ಮ ಮುಂದಿಲ್ಲವೇ?

"ಡಿಯರ್ ಪ್ರೈಮ್ ಮಿನಿಸ್ಟರ್,
ನಾನೊಬ್ಬ ಮುಂಬೈನ ಹುಲುಮಾನವ. 100 ಜನರು ಪ್ರಯಾಣಿಸಬಹುದಾದ ರೈಲ್ವೇ ಬೋಗಿಯಲ್ಲಿ ಇಲಿಗಳಂತೆ 500 ಜನ ತುರುಕಿಕೊಂಡು ಪ್ರಯಾಣ ಮಾಡುತ್ತೇವೆ. ಇಲಿಗಳು ಕನಿಷ್ಠ ಕೀ...ಕೀ... ಎಂದಾದರೂ ಚೀರಾಡುತ್ತವೆ. ನಮಗೆ ಧ್ವನಿಯೂ ಉಡುಗಿಹೋಗಿದೆ.
2008, ನವೆಂಬರ್ 26ರಂದು ನಡೆದ ಮುಂಬೈ ದಾಳಿಯ ಮರುದಿನ ನೀವು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಕೇಳಿದೆ. 'Nobody Would Be Spared'(ಯಾರನ್ನೂ ಬಿಡುವುದಿಲ್ಲ) ಎಂದು ಸಾರಿದಿರಿ. ಆದರೆ ಮುಂಬೈ ಸರಣಿ ಬಾಂಬ್ ಸ್ಫೋಟ ನಡೆಸಿ ಎರಡು ದಶಕಗಳೇ ಕಳೆದುಹೋದವು ಎನ್ನುವುದನ್ನು ನಿಮಗೆ ನೆನಪಿಸಿಕೊಡಲು ಬಯಸುತ್ತೇನೆ. ಆ ಸ್ಫೋಟದ ಮುಖ್ಯ ಪಿತೂರಿದಾರ ದಾವೂದ್ ಇಬ್ರಾಹಿಂನನ್ನು 20 ವರ್ಷಗಳು ಕಳೆದರೂ ಬಂಧಿಸಲು ಸಾಧ್ಯವಾಗಿಲ್ಲ. ನಮ್ಮ ಎಲ್ಲಾ ಬಾಲಿವುಡ್ ನಟರು, ದೊಡ್ಡ ದೊಡ್ಡ ಬಿಲ್ಡರ್‌ಗಳು ಹಾಗೂ ಗುಟ್ಕಾ ದೊರೆಗಳು ದಾವೂದ್‌ನನ್ನು ಭೇಟಿ ಮಾಡಿ ಬರುತ್ತಾರೆ. ಆದರೆ ನಿಮ್ಮ ಸರ್ಕಾರಕ್ಕೆ ಆತನನ್ನು ಬಂಧಿಸುವುದಕ್ಕಾಗುವುದಿಲ್ಲ- ಕಾರಣ ಬಹಳ ಸರಳ. ನಿಮ್ಮ ಎಲ್ಲ ಮಂತ್ರಿವರ್ಯರೂ ಆತನ ಕೈ ಜೋಡಿಸಿದ್ದಾರೆ. ಒಂದು ವೇಳೆ, ಆತನನ್ನು ಹಿಡಿಯುವ ಪ್ರಯತ್ನ ಮಾಡಿದರೆ ಸಿಕ್ಕಿಬೀಳುವುದು ಮಾತ್ರ ಉಳಿದವರು. ಅವರ ನಿಜಬಣ್ಣ ಬಯಲಾಗುತ್ತದೆ. "ಯಾರನ್ನೂ ಬಿಡುವುದಿಲ್ಲ" ಎಂಬ ನಿಮ್ಮ ಹೇಳಿಕೆ ನತದೃಷ್ಟ ಭಾರತೀಯರ ಪಾಲಿಗೆ ಒಂದು ಕ್ರೂರ ಜೋಕು ಸ್ವಾಮಿ.
Enough is enough!
ಒಂದು ಡಜನ್ ಭಯೋತ್ಪಾದಕರು ಮುಂಬೈ ಮೇಲೆ ನಡೆಸಿದ ದಾಳಿಯನ್ನು ನೋಡಿದ ನಂತರ, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಉಗ್ರರು ವಾಯುದಾಳಿ ಮಾಡಿ ನಮ್ಮ ಅಣ್ವಸ್ತ್ರ ಸ್ಥಾವರಗಳನ್ನು ಸ್ಫೋಟಿಸುವ ದಿನಗಳು ದೂರವಿಲ್ಲ ಎಂದನಿಸುತ್ತಿದೆ. ಸಾಮಾನ್ಯ ಜನರಾದ ನಮ್ಮ ಮುಂದೆ ಇರುವುದೊಂದೇ ಮಂತ್ರ. Womb to Bomb to Tomb! ಭ್ರೂಣದಿಂದ ಬಾಂಬ್‌ನವರೆಗೆ, ಬಾಂಬ್‌ನಿಂದ ಗೋರಿಗೆ. ಅಷ್ಟಕ್ಕೂ ಮುಂಬೈ ಅನ್ನು ಶಾಂಘೈ ಮಾಡುವುದಾಗಿ ಭರವಸೆ ನೀಡಿದ್ದ ನೀವು ಮಾಡಿದ್ದು ಮಾತ್ರ ಜಲಿಯನ್ ವಾಲಾಬಾಗ್!
ಈಗಷ್ಟೇ ನಿಮ್ಮ ಗೃಹಸಚಿವ ರಾಜಿನಾಮೆ ನೀಡಿದರು. ಆ ಜೋಕರ್‌ನನ್ನು ಹೊರಹಾಕಲು ನಿಮಗೆ ಇಷ್ಟು ಕಾಲವೇಕೆ ಬೇಕಾಯಿತು? ಶಿವರಾಜ್ ಪಾಟೀಲ್ ಅವರು ಗಾಂಧೀ ಕುಟುಂಬಕ್ಕೆ ನಿಷ್ಠರಾಗಿದ್ದುದೇ ಇದಕ್ಕೆ ಕಾರಣ. ಅಂದರೆ ಅಮಾಯಕ ಜನರ ರಕ್ತಕ್ಕಿಂತ ಗಾಂಧೀ ಕುಟುಂಬಕ್ಕೆ ತೋರುವ ನಿಷ್ಠೆಯ ಬೆಲೆಯೇ ಹೆಚ್ಚು ಅಲ್ಲವೇ?
ನಾನು ಹುಟ್ಟಿ ಬೆಳೆದದ್ದು ಮತ್ತು ಕಳೆದ 58 ವರ್ಷಗಳಿಂದ ಉಸಿರಾಡುತ್ತಿರುವುದು ಮುಂಬೈನಲ್ಲಿ. ನನ್ನ ಮಾತನ್ನು ನಂಬಿ- ಭ್ರಷ್ಟಾಚಾರದ ವಿಷಯದಲ್ಲಿ ಬಿಹಾರಕ್ಕಿಂತ ಮಹಾರಾಷ್ಟ್ರವೇ ಕೀಳು. ಶರದ್ ಪವಾರ್, ನಾರಾಯಣ ರಾಣೆ, ಬಾಳ್ ಠಾಕ್ರೆ, ಗೋಪಿನಾಥ್ ಮುಂಡೆ, ವಿಲಾಸ್ ರಾವ್ ದೇಶಮುಖ್ ಮುಂತಾದ ನಮ್ಮ ರಾಜಕಾರಣಿಗಳನ್ನು ನೋಡಿ. ಎಲ್ಲರೂ ದುಡ್ಡಿನ ಮೇಲೇ ಹೊರಳಾಡುತ್ತಿದ್ದಾರೆ. ಅದರಲ್ಲೂ ನಾನು ಕಂಡ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಎಂದರೆ ವಿಲಾಸ್‌ರಾವ್ ದೇಶಮುಖ್. ಮುಂಬೈನ ಇಂಚಿಂಚು ಜಾಗದಲ್ಲೂ ಕಟ್ಟಡ ಕಟ್ಟಲು ಅನುಮತಿ ನೀಡುವುದೇ ಅವರ ನಿತ್ಯ ದಂಧೆ. ಹಾಗೆ ಗಳಿಸಿದ ಹಣವನ್ನೆಲ್ಲ ದಿಲ್ಲಿಗೆ ಕಳುಹಿಸುತ್ತಾರೆ. ಮುಂದಿನ ಚುನಾವಣಾ ಸಮಯದಲ್ಲಿ ಸುರಿದು ಓಟು ಗಳಿಸುವುದಕ್ಕಾಗಿ! ಈ ಮೂರ್ಖ ಮುಖ್ಯಮಂತ್ರಿ ದೇಶಮುಖ್ ಸಮುದ್ರದ ಮೇಲೆ ಮನೆ ಕಟ್ಟಿಕೊಳ್ಳಿ ಎಂದು ಬೆಸ್ತರಿಗೆ ಅನುಮತಿ ಕೊಟ್ಟು ಅವರಿಂದಲೂ ಕಾಸು ಮಾಡಿಕೊಳ್ಳಬಲ್ಲ. ಮುಂದಿನ ಬಾರಿ ಭಯೋತ್ಪಾದಕರು ಬಂದಾಗ ಆ ಮನೆಗಳಲ್ಲಿ ಹಾಯಾಗಿದ್ದು, ಸಮುದ್ರದ ಸೌಂದರ್ಯವನ್ನು ಸವಿದು, ಮನಸ್ಸಿಗೆ ಬಂದಾಗಲೆಲ್ಲ ಮುಂಬೈನ ಮೇಲೆ ದಾಳಿ ಮಾಡಬಹುದು.  
ಇತ್ತೀಚೆಗೆ ನಾನೊಂದು ಮನೆ ಖರೀದಿಸಬೇಕಾಗಿತ್ತು. ಸುಮಾರು ಒಂದು ಡಜನ್ ಬಿಲ್ಡರ್‌ಗಳನ್ನು ಭೇಟಿಮಾಡಿದೆ. ಎಲ್ಲರೂ ಮೂವತ್ತು ಪರ್ಸೆಂಟ್ ದುಡ್ಡನ್ನು ಕಪ್ಪು ಹಣದ ರೂಪದಲ್ಲಿ ಕೊಡಬೇಕೆಂದು ಡಿಮಾಂಡ್  ಮಾಡಿದರು. ಒಬ್ಬ ಸಾಮಾನ್ಯ ವ್ಯಕ್ತಿಯಾದ ನನಗೇ ಈ ಸತ್ಯ ಗೊತ್ತು. ಇನ್ನು ಗೂಢಚರ ಸಂಸ್ಥೆ ಮತ್ತು ಸಿಬಿಐ ಅನ್ನು ಕಿಸೆಯಲ್ಲಿಟ್ಟುಕೊಂಡಿರುವ ನಿಮಗೆ ಗೊತ್ತಿರುವುದಿಲ್ಲವೇ? ಆ ಕಪ್ಪು ಹಣ ಎಲ್ಲಿಗೆ ಹೋಗುತ್ತದೆ? ಭೂಗತ ಜಗತ್ತಿನ ದೊರೆಗಳ ಖಜಾನೆಗಲ್ಲವೇ?
ದುರಂತವನ್ನು ನೋಡಿ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲರೂ ನಾವಾಗಿದ್ದೇವೆ. ಬೇಸರದ ವಿಷಯವೆಂದರೆ ನಾವ್ಯಾರೂ ಭಾರತೀಯರಾಗಿಲ್ಲ! ರಾಜಕಾರಣಿಗಳಾದ ನೀವು ಒಡೆದು ಆಳುವ ನೀತಿಯ ಮೂಲಕ ಭಾರತ ಮಾತೆಯ ಮೇಲೆ ಇಂಚಿಂಚೂ ಬಿಡದೆ ಅತ್ಯಾಚಾರವೆಸಗಿದ್ದೀರಿ.
ಪ್ರಧಾನಿಗಳೇ ನೀವೊಬ್ಬ ಅತಿ ಬುದ್ಧಿವಂತ ಹಾಗೂ ಸುಶಿಕ್ಷಿತ ವ್ಯಕ್ತಿ. ಎದ್ದೇಳಿ, ನಿಜವಾದ ಸರ್ದಾರ್ ಆಗಿ. ಜೋಕುಗಳಲ್ಲಿ ಬರುವ ಸರ್ದಾರ್ಜಿ ಆಗಬೇಡಿ. ಮೊದಲನೆಯದಾಗಿ ಎಲ್ಲಾ ರಾಜಕಾರಣಿಗಳನ್ನು ಬೆತ್ತಲು ಮಾಡಿ. ಸ್ವಿಸ್ ಬ್ಯಾಂಕಿನಲ್ಲಿ ಯಾರ್ಯಾರ ಅಕೌಂಟ್ ಇದೆಯೋ ಅವರೆಲ್ಲರ ಹೆಸರು ಹೊರಬರುವಂತೆ ಮಾಡಿ. ಯಾವುದೇ ಭೀತಿಯಿಲ್ಲದೆ ಪ್ರಾಮಾಣಿಕವಾಗಿ ಕೆಲಸ ಮಾಡುವಂಥ ಶಾಂತ, ಸುರಕ್ಷಿತ ವಾತಾವರಣವನ್ನು ಕಲ್ಪಿಸಿ. ಕಾನೂನಿನ ಆಡಳಿತ ನಡೆಯಲಿ, ಉಳಿದದ್ದೆಲ್ಲ ಸರಿಹೋಗುತ್ತದೆ. ಆಯ್ಕೆ ನಿಮ್ಮದು ಪ್ರಧಾನಿಗಳೇ, ನಿಮ್ಮನ್ನು ಒಬ್ಬಾಕೆ ಮುನ್ನಡೆಸಬೇಕೋ ಅಥವಾ ನೀವು ನೂರು ಕೋಟಿ ಜನರನ್ನು ಮುನ್ನಡೆಸುತ್ತೀರೋ?"
-ಪ್ರಕಾಶ್.ಬಿ

ಐದು ವರ್ಷಗಳ ಹಿಂದೆ ಇಂಥದ್ದೊಂದು ಮನಮುಟ್ಟುವ ಪತ್ರ ಇಂಟರ್ನೆಟ್‌ನಲ್ಲಿ ಹರಿದಾಡಿತ್ತು. ಅದನ್ನು ಬರೆದಾತ ವಾಸ್ತವದಲ್ಲಿ ಯಾರು, ಆತನ ಮೂಲವೇನು ಎನ್ನುವುದು ಖಂಡಿತ ಗೊತ್ತಾಗಲಿಲ್ಲ. ಆದರೆ ಆತ ಎತ್ತಿದ್ದ  ವಿಚಾರ ಮತ್ತು ಪ್ರಶ್ನೆಗಳು ಮಾತ್ರ ನಮ್ಮೆಲ್ಲರ ಭಾವನೆಗಳ ಪ್ರತಿಫಲನದಂತಿದ್ದವು ಹಾಗೂ ಅವು ಇಂದಿಗೂ ಪ್ರಸ್ತುತವೆನಿಸುತ್ತವೆ.
ಇಷ್ಟಕ್ಕೂ ಕಳೆದ ಐದು ವರ್ಷಗಳಲ್ಲಿ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವ, ಭಯೋತ್ಪಾದಕರನ್ನು ಹೆಡೆಮುರಿಕಟ್ಟುವ, ಭಯೋತ್ಪಾದಕರಿಗೆ ತರಬೇತಿ ಕೊಟ್ಟು ಗಡಿಯೊಳಕ್ಕೆ ನುಗ್ಗಿಸುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಾಡಿದ್ದಾದರೂ ಏನು ಹೇಳಿ? 2008, ನವೆಂಬರ್ 26ರಂದು ರಾತ್ರಿ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿದಾಗ ಬೆಳಗಾಗುವ ವೇಳೆಗೇ ಸತ್ತವರ ಸಂಖ್ಯೆ 100 ದಾಟಿತ್ತು. ಒಟ್ಟು 166 ಜನ ಪ್ರಾಣ ಕಳೆದುಕೊಂಡರು. ಇಡೀ ದೇಶವೇ ದಿಗ್ಭ್ರಮೆಗೊಳಗಾಯಿತು. ಪರಿಸ್ಥಿತಿಯನ್ನು ಸರಿಯಾಗಿಯೇ ಅರ್ಥಮಾಡಿಕೊಂಡ ಪ್ರಧಾನಿ ಮನಮೋಹನ್ ಸಿಂಗ್ ನವೆಂಬರ್ 27ರಂದೇ ದೇಶವನ್ನುದ್ದೇಶಿಸಿ ಮಾತನಾಡಿದರು. 'Nobody Would Be Spared' ಎಂದು ಬಡಾಯಿ ಕೊಚ್ಚಿಕೊಂಡರು. ಆದರೆ ಐದು ವರ್ಷ ಮುಂದೆ ಬಂದು ಅವರು ಅಂದು ಆಡಿದ್ದ ಮಾತು ಹಾಗೂ ತದನಂತರ ತೆಗೆದುಕೊಂಡ ನಡೆಯ ನಡುವಿನ ವ್ಯತ್ಯಾಸವನ್ನು ಗಮನಿಸಿದರೆ 'Nobody Would Be Spared' ಎಂಬ ಅವರ ಮಾತಿನಲ್ಲಿ 'ಭಯೋತ್ಪಾದಕರು ಯಾರನ್ನೂ ಬಿಡುವುದಿಲ್ಲ' ಎಂಬ ಸಂದೇಶವಿತ್ತು ಎಂಬಂತೆ ಭಾಸವಾಗುವುದಿಲ್ಲವೇ? ಕಳೆದ ಐದು ವರ್ಷಗಳಲ್ಲಿ ಜನ ಮುಂಬೈ ದಾಳಿಯನ್ನು ಮರೆತಿದ್ದು ಬಿಟ್ಟರೆ ಸರ್ಕಾರ ಮುಂದೆ ಅಂತಹ ಆಕ್ರಮಣಗಳು ನಡೆಯದಂತೆ ತೆಗೆದುಕೊಂಡ ಕ್ರಮಗಳಾದರೂ ಯಾವುದಿವೆ ಹೇಳಿ?
ಮುಂಬೈ ದಾಳಿಯ ನಂತರ ಟಿ.ವಿ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮಾಜಿ ನಟಿ ಸಿಮಿ ಗ್ರೇವಾಲ್, 'ಎಲ್ಲೆಲ್ಲಿ ಭಯೋತ್ಪಾದಕರ ತರಬೇತಿ ಶಿಬಿರಗಳಿವೆಯೋ ಅವುಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಧೈರ್ಯದಿಂದ ಹೇಳುವ ತಾಕತ್ತು ನಮ್ಮ ಪ್ರಧಾನಿಗೇಕಿಲ್ಲ?' ಎಂದು ಕೇಳಿದ್ದರು. ಅಲ್ಲ, ನಮ್ಮ ರಾಜಕಾರಣಿಗಳ ರಕ್ತದಲ್ಲಿ ಆಕ್ರೋಶವೇ ಇಲ್ಲವೇ? ಒಬ್ಬ ಸಾಮಾನ್ಯ ಭಾರತೀಯನಲ್ಲಿ ಕಾಣಿಸುತ್ತಿರುವ ಧಾಡಸಿತನ ನಮ್ಮ ಪ್ರಧಾನಿಯಲ್ಲೇಕಿಲ್ಲ? ಈ ದೇಶವಾಸಿಗಳ ಬೆವರಿಗಂತೂ ಬೆಲೆಯಿಲ್ಲ, ರಕ್ತಕ್ಕೂ ಬೆಲೆಯಿಲ್ಲವಾಯಿತೇ?
ಛತ್ರಪತಿ ಶಿವಾಜಿ ಟರ್ಮಿನಲ್‌ನಲ್ಲಿ ಭಯೋತ್ಪಾದಕ ಕಸಬ್‌ನ ಗುಂಡಿಗೆ ಕೆಚ್ಚೆದೆಯಿಂದ ಎದೆಯೊಡ್ಡಿದ ತುಕಾರಾಮ್ ಓಂಬ್ಳೆ, ಎದೆಗಾರಿಕೆಯೇನೆಂಬುದನ್ನು ತೋರಿಸಿದರು. ಮೇಜರ್ ಸಂದೀಪ್ ಪ್ರಾಣಕೊಟ್ಟು ಉಗ್ರರನ್ನು ಮಟ್ಟಹಾಕಿದರು. "ಸೆ. 11ರ ದಾಳಿ ನಮ್ಮ ಕಣ್ಣು ತೆರೆಸಿತು, ಪಾಕಿಸ್ತಾನ ಜಗತ್ತಿನ ತಲೆಬೇನೆ' ಎಂದು ಅಮೆರಿಕ ಹೇಳಿತು. 'ಸಾಕ್ಷ್ಯಾಧಾರವಿದ್ದರೆ ದಾಳಿ ಮಾಡುವ ಹಕ್ಕು ಭಾರತಕ್ಕಿದೆ" ಎಂದು ಅಧ್ಯಕ್ಷ ಒಬಾಮಾ ಕೂಡ ಹೇಳಿದ್ದರು. ಆದರೆ ಭಾರತ ಮಾಡಿದ್ದೇನು? ಐವತ್ತು ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡಿದ್ದನ್ನು ಬಿಟ್ಟರೆ ಹಾಲಿ ಕೇಂದ್ರ ಸರ್ಕಾರ ಬೇರಾವ ಕೆಲಸ ಮಾಡಿದೆ? ಕನಿಷ್ಠಪಕ್ಷ ರಾಜತಾಂತ್ರಿಕ ಕ್ರಮಗಳ ಮೂಲಕ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡುವುದಕ್ಕೂ ಏಕೆ ಪ್ರಯತ್ನಿಸಲಿಲ್ಲ? ಮುಂಬೈ ದಾಳಿಗೆ ಪ್ರಮುಖ ಕಾರಣರೆನಿಸಿಕೊಂಡಿರುವ ಹಾಗೂ ಪಿತೂರಿದಾರರಾಗಿರುವ ಹಫೀಜ್ ಸಯೀದ್ ಹಾಗೂ ದಾವೂದ್ ಇಬ್ರಾಹಿಂ ಇಂದಿಗೂ ಪಾಕಿಸ್ತಾನದಲ್ಲಿ ಖುಲ್ಲಂಖುಲ್ಲ ಓಡಾಡಿಕೊಂಡಿದ್ದಾರೆ. ಭಾರತ ವಿರೋಧಿ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರನ್ನು ರಾಜತಾಂತ್ರಿಕ ಕ್ರಮಗಳ ಮೂಲಕ ಮಟ್ಟ ಹಾಕಲು ಸಾಧ್ಯವಿಲ್ಲ ಎಂದಾದರೆ Covert Operation ಮೂಲಕ ಮುಗಿಸಬಹುದಿತ್ತಲ್ಲವೇ? ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ನೇಪಾಳದ ಸಂಸದ ಮಿರ್ಜಾ ದಿಲ್ಶಾದ್ ಬೇಗ್‌ನನ್ನು 1998ರಲ್ಲಿ ಎನ್‌ಡಿಎ ಸರ್ಕಾರ ಪರಿಸಮಾಪ್ತಿಗೊಳಿಸಿದ ಉದಾಹರಣೆ ನಮ್ಮ ಮುಂದಿಲ್ಲವೇ?
ಅಂದು ಪಾಕಿಸ್ತಾನದಿಂದ ಬಂದು ಮುಂಬೈನಲ್ಲಿ ನಡೆಸಿದ ಭಯೋತ್ಪಾದಕ ಆಕ್ರಮಣದಲ್ಲಿ 4 ಇಸ್ರೇಲಿಯರೂ ಬಲಿಯಾಗಿದ್ದರು. ಅವರ ದೇಹಗಳನ್ನು ಇಸ್ರೇಲಿ ವಿಮಾನದಲ್ಲಿ ಜೆರೂಸಲೇಮ್‌ಗೆ ಕೊಂಡೊಯ್ದಾಗ 10 ಸಾವಿರ ಜನ ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹಾಗೆ ಪಾರ್ಥೀವ ಶರೀರಗಳನ್ನು ಕೊಂಡೊಯ್ಯುತ್ತಿರುವಾಗ ರಸ್ತೆಯ ಬದಿಗಳಲ್ಲಿ May God Avenge Them (ಭಯೋತ್ಪಾದಕರನ್ನು ದೇವರೇ ಶಿಕ್ಷಿಸಲಿ) ಎಂಬ ಬ್ಯಾನರ್‌ಗಳು ಕಾಣುತ್ತಿದ್ದವು! ಏಕೆಂದರೆ ತಪ್ಪಿತಸ್ಥರನ್ನು ಶಿಕ್ಷಿಸುವ ಹಾಗೂ ಭಯೋತ್ಪಾದಕರನ್ನು ಉತ್ಪತ್ತಿ ಮಾಡುವ ಪಾಕಿಸ್ತಾನವನ್ನು ಮಟ್ಟ ಹಾಕುವ ತಾಕತ್ತಾಗಲಿ, ಎದೆಗಾರಿಕೆಯಾಗಲಿ ಭಾರತದ ರಾಜಕಾರಣಿಗಳಲ್ಲಿ ಇಲ್ಲ ಎಂಬುದು ಬಹುಶಃ ಇಸ್ರೇಲಿಗಳಿಗೂ ಗೊತ್ತಾಗಿತ್ತು!
ದುರದೃಷ್ಟವಶಾತ್ ಮುಂಬೈ ದಾಳಿಗೆ ಐದು ವರ್ಷ ತುಂಬಿದ ನಂತರವೂ ಹಾಗೇ ಹೇಳಬೇಕಾಗಿದೆ. ಇಷ್ಟಕ್ಕೂ ಕಸಬ್ ಎಂಬ ಬಂಧಿತ ಬಾಡಿಗೆ ಭಯೋತ್ಪಾದಕನನ್ನು ನಾಲ್ಕು ವರ್ಷಗಳ ನಂತರ ಗಲ್ಲಿಗೆ ಹಾಕಿದ್ದನ್ನು ಬಿಟ್ಟರೆ ಬೇರಾವ ಕೆಲಸವನ್ನು ಈ ಸರ್ಕಾರ ಮಾಡಿದೆ ಹೇಳಿ?
ಇಂದು ನಾವು ಎಂಥ ಪುಕ್ಕಲರು, ರಣಹೇಡಿಗಳಾಗಿದ್ದೇವೆ ಅಂದ್ರೆ ಸತತ ಮೂರುದಿನ ಇಡೀ ದೇಶವನ್ನೇ ಒತ್ತೆಯಾಳಾಗಿಸಿಕೊಂಡಿದ್ದ ಯಕಃಶ್ಚಿತ ಭಯೋತ್ಪಾದಕರನ್ನು ಕಳಿಸಿದ ಪಾಕಿಸ್ತಾನದ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳಲು ಸಾಧ್ಯವಾಗಿಲ್ಲ. ಪಾಕ್ ಮತ್ತೊಂದು ದಾಳಿ ಮಾಡಿದರೂ ನಮ್ಮ ಪ್ರಧಾನಿ Nobody would be spared ಅಂತಾನೇ ಭಾಷಣ ಮಾಡುತ್ತಾರೆ.
ಇಂಥ ನಾಚಿಕೆಗೇಡಿನ ಸಂಗತಿ ಮತ್ತೊಂದಿದೆಯಾ? ಸುಡುತ್ತಿರುವ ಐದು ವರ್ಷದ ಅವಮಾನ, ಹತಾಶೆಯನ್ನು ಶಮನಗೊಳಿಸುವವರು ಯಾರು? ಉತ್ತರಬೇಕು.

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ