ಮೌಢ್ಯ ಕಾಯ್ದೆ ಹಾದಿಯ ಕೆಲ ಆತಂಕಗಳು
ಮೌಢ್ಯತೆಯನ್ನು ಹತ್ತಿಕ್ಕಲು ಕಾನೂನು ತರಲು ಸಜ್ಜಾಗಿರುವ ಕರಡಿನ ಬಗ್ಗೆ ತಾವು ಎರಡೂ ದೃಷ್ಟಿಯ ಅಭಿಪ್ರಾಯಗಳನ್ನು ಓದುಗರ ಮುಂದಿಟ್ಟು ಪ್ರತಿಕ್ರಿಯೆ ಕೋರಿರುವುದು ಸ್ವಾಗತಾರ್ಹ ವಿಚಾರ.
ಐತಿಹಾಸಿಕವಾಗಿ ನೋಡಿದರೆ ಬ್ರಿಟಿಷ್ ಪ್ರಭುಗಳು ಸತಿ ಪದ್ಧತಿಯ ವಿರುದ್ಧ ಕಾನೂನು ಮಾಡಿದಾಗ ಸಮಾಜದಲ್ಲಿ ಹೇಳಿಕೊಳ್ಳುವಂತಹ ವಿರೋಧ ಎದುರಾಗಲಿಲ್ಲ, ಕಾರಣ, ಈ ಕಾನೂನು ಮಾನವೀಯ ಕಳಕಳಿ ಹೊಂದಿದ್ದು, ಶಿಕ್ಷಿತ ಹಾಗೂ ಸಮಾಜ ಸುಧಾರಕ ವರ್ಗಗಳ ಬೆಂಬಲ ಗಳಿಸಿತ್ತು.
ಈ ದೃಷ್ಟಿಯಿಂದ ನೋಡಿದರೆ, ಈಗಿನ ಕಾನೂನು ಕರಡಿಗೆ, ಪುಟ್ಟಪರ್ತಿ ಸಾಯಿಬಾಬಾ ನಿಧನದ ನಂತರ ನೆಲೆ ಕಳೆದುಕೊಂಡಿರುವ ವಿಚಾರವಾದಿಗಳು ಹಾಗೂ ಜನಪ್ರಿಯತೆಗಾಗಿ ಪೈಪೋಟಿಯಲ್ಲಿರುವ ದೃಶ್ಯ ಮಾಧ್ಯಮಗಳಿಗೆ ನೆಲೆ ಒದಗಿಸುವುದು ಬಿಟ್ಟು, ಬೇರೆ ಯಾವುದೇ ರೀತಿಯ ಪ್ರಾಮಾಣಿಕ ಉದ್ದೇಶ ಹಾಗೂ ಮಾನವೀಯ ಕಳಕಳಿ ಇದ್ದ ಹಾಗೆ ಕಾಣುವುದಿಲ್ಲ.
ಮೊದಲಾಗಿ ಜನರು ಮೌಢ್ಯಕ್ಕೆ ಏಕೆ ಶರಣಾಗುತ್ತಾರೆ ಎನ್ನುವ ಬಗ್ಗೆ ಯಾವುದೇ ಉನ್ನತ ಮಟ್ಟದ ಸಂಶೋಧನೆಯೇ ನಡೆದ ಹಾಗೆ ಕಾಣುವುದಿಲ್ಲ. ನಾನು ಕಂಡಂತೆ ಬಹುತೇಕ ಜನರು ಸ್ವಭಾವತಃ ವಿಚಾರವಾದಿಗಳು. ಆದರೆ ತಮ್ಮ ಕಷ್ಟ ಹಾಗೂ ಸಂಕಟಗಳಿಗೆ ವೈಚಾರಿಕ ಪರಿಹಾರದ ದಾರಿ ಕಾಣದಾದಾಗ ಮೌಢ್ಯತೆಯ ದಾರಿ ಹಿಡಿಯುತ್ತಾರೆ. ಮಕ್ಕಳು ಹಾಗೂ ಸೇವಕ ವರ್ಗದ ಜನರು ಮೌಢ್ಯತೆಯಿಂದ ಪರಿಹಾರ ಸಿಕ್ಕರೆ ತಾನಾಗಿ ಹೇರಳ ಪ್ರಚಾರ ಮಾಡುತ್ತಾರೆ.
ಮೌಢ್ಯತೆಯ ಹೆಸರಿನಲ್ಲಿ ಶೋಷಣೆ ಮಾಡುವವರಿಗೆ ಇಂತಹ ಪ್ರಚಾರ ವರವಾಗುತ್ತದೆ. ಅಕಸ್ಮಾತ್ ಆಗಿ ಕಂಡು ಬರುವ ವಿರೋಧಿ ಪ್ರಚಾರವನ್ನು ತಮ್ಮ ಕೌಶಲ್ಯದ ಮಾತುಗಳಿಂದ ಶೋಷಕರು ಹೊಡೆದು ಹಾಕುತ್ತಾರೆ. ಹೀಗೆ ಹಣ ಮಾಡಲು, ಬೆದರಿಸಲು, ಹಿಂಸಿಸಲು, ಭಯಪಡಿಸಲು ಇತ್ಯಾದಿ ಕಾರ್ಯಗಳಿಗೆ ಶೋಷಕರ ನೆಟ್ವರ್ಕ್ ಹಳ್ಳಿಯಿಂದ ದಿಲ್ಲಿವರೆಗೆ ಹರಡಿದೆ. ಇವರನ್ನು ಮಟ್ಟ ಹಾಕಲು ಪೊಲೀಸರ ಬಳಿ ಈಗ ಸದ್ಯ ಯಾವುದೇ ಕಾನೂನಿಲ್ಲ. ಈ ದೃಷ್ಟಿಯಿಂದ ಈಗಿನ ಕರಡು ಐತಿಹಾಸಿಕವೆಂದು ಧಾರಾಳವಾಗಿ ಹೇಳಬಹುದು.
ಆದರೆ ಒಂದು ಅಪಾಯ ಖಂಡಿತ ಇದೆ. ಧಾರ್ಮಿಕ ಹಾಗೂ ಮೌಢ್ಯತೆಯ ನಡುವೆ ಇರುವುದು ತೆಳುವಾದ ಗೆರೆ ಮಾತ್ರ. ಒಂದು ನಂಬಿಕೆಯನ್ನು ಧಾರ್ಮಿಕ ಅಥವಾ ಮೌಢ್ಯ ಎಂದು ಪ್ರತ್ಯೇಕಿಸುವ ತಜ್ಞರು ನಮ್ಮ ನಡುವೆ ಇಲ್ಲ ಹಾಗೂ ಒಂದು ನಂಬಿಕೆ ವೈಜ್ಞಾನಿಕವಲ್ಲ ಎಂದು ಸಾಬೀತುಪಡಿಸುವ ಪ್ರಚಂಡ ವಿಜ್ಞಾನಿಗಳೂ ನಮ್ಮ ಸಮಾಜದಲ್ಲಿ ಇಲ್ಲ. ಇಂತಹ ಸನ್ನಿವೇಶದಲ್ಲಿ ಈ ಕಾನೂನು ಭಾರಿ ಮಿತಿಯೊಳಗೆ ಕೆಲಸ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಜನರ ಧಾರ್ಮಿಕ ಹಾಗೂ ನಂಬಿಕೆಯ ಹಕ್ಕುಗಳಿಗೆ ಚ್ಯುತಿ ಬಂದು ಇನ್ನೊಂದು 'ಅಯೋಧ್ಯೆ' ಹುಟ್ಟುವುದರಲ್ಲಿ ಸಂಶಯವಿಲ್ಲ.
ಕೊನೆಯದಾಗಿ ಒಂದು ಮಾತು; ಮೌಢ್ಯತೆ ಪ್ರಕರಣಗಳು ಕೋರ್ಟ್ ಮೆಟ್ಟಲೇರಿದಾಗ ವಿಚಾರವಾದಿಗಳಿಗೆ ಜಯ ಶತಸಿದ್ಧ ಎನ್ನುವ ಮೂಢನಂಬಿಕೆಯನ್ನು ಈ ಕಾನೂನು ಕರಡು ಹೊಂದಿರುವ ಸಾಧ್ಯತೆ ಇದೆ. ಅಕಸ್ಮಾತ್ ವಿಚಾರವಾದಿಗಳು ಸೋತರೆ ಆಗುವ ಅನಾಹುತವನ್ನು ನೀವೇ ಊಹಿಸಿಕೊಳ್ಳಿ.
-ಪ್ರಕಾಶ್ ಕೆ., ಶಿಕ್ಷಕರು