ಒಬ್ಬ ಪತ್ರಕರ್ತನಾಗಿ ಅದು ನಿಜಕ್ಕೂ ಮರೆಯಲಾಗದ ಅನುಭವ. ಹದಿನೈದು ದಿನಗಳ ಕಾಲ ಉತ್ತರಾಖಂಡದ ಪ್ರವಾಹ ಸಂತ್ರಸ್ತ ಹಳ್ಳಹಳ್ಳಿಗಳಲ್ಲಿ ತಿರುಗಿದಾಗ, ಕೇದಾರದ ನೆತ್ತಿಯ ಮೇಲೆ ನಿಂತು ನಿರಕಿಸಿದಾಗ, 'ಅಬ್ಬಾ! ಒಂದೊಮ್ಮೆ ಇಲ್ಲಿಗೆ ಬರದೇ ಇರುತ್ತಿದ್ದರೆ ನಿಜಕ್ಕೂ ಜೀವನದಲ್ಲಿ ಒಂದು ಅತ್ಯಮೂಲ್ಯ ಅನುಭವವನ್ನು ಕಳೆದುಕೊಂಡುಬಿಡುತ್ತಿದ್ದೆ' ಎಂದೆನಿಸಿದ್ದು ಸುಳ್ಳಲ್ಲ. ಆದರೆ ಒಬ್ಬ ಮನುಷ್ಯನಾಗಿ ಮಾನವೀಯ ದೃಷ್ಟಿಯಲ್ಲಿ ಅನಿಸಿದ್ದು ಅತ್ಯಂತ ಕೆಟ್ಟ ಅನುಭವ. ಭೂಮಿಯ ಮೇಲೇ ಸೃಷ್ಟಿಯಾದ ಇಂಥ ನರಕವನ್ನು ನಾನೇಕೆ ನೋಡಲು ಬಂದೆ ಎಂದು ಅನಿಸಿದ್ದರೆ ಅದು ಮನುಷ್ಯನಾದವನ ಸಹಜ ಭಾವನೆ.
ಅನುಮಾನವೇ ಇಲ್ಲ. ಅದು ಖಂಡಿತಾ ನಿಸರ್ಗ ವಿಕೋಪ ಅಲ್ಲವೇ ಅಲ್ಲ. ಖಂಡಿತವಾಗಿಯೂ ಅದು ಸ್ವಯಂಕೃತ ಅಪರಾಧ. ಅಭಿವೃದ್ಧಿಯ ಹುಚ್ಚು ಓಗಕ್ಕೆ, ನಮ್ಮೊಳಗಿನ ಬೃಹತ್ ಯೋಜನೆಗಳ ಭ್ರಮೆಗೆ, ಕೊನೆಯಿಲ್ಲದ ದೌರ್ಜನ್ಯಕ್ಕೆ ನಿಸರ್ಗ ನಮಗೆ ಕೊಟ್ಟ ದಿಟ್ಟ ಉತ್ತರವದು.
ಉತ್ತರಾಖಂಡದ ಹಿಮಾಲಯ ಶ್ರೇಣಿಯ ಮೇಲೆ ಪ್ರಕೃತಿಯು ತನ್ನ ಕೋಪವನ್ನು ರಾಚಿ ಐದು ತಿಂಗಳು ಕಳೆದಿವೆ. ಈಗಲೂ ಅಲ್ಲಿ ಸಂಭವಿಸಿದ ದುರಂತದಲ್ಲಿ ಆಗಿರಬಹುದಾದ ನಷ್ಟವನ್ನು ನಿಖರವಾಗಿ ಊಹಿಸಲು ಸಾಧ್ಯವೇ ಆಗಿಲ್ಲ. ರಾಜ್ಯ ಸರ್ಕಾರದ ಲೆಕ್ಕದ ಪ್ರಕಾರ ಹತ್ತಿಪ್ಪತ್ತು ಸಾವಿರ ಮಂದಿ ಮೃತಪಟ್ಟಿದ್ದಾರೆ. 3 ಸಾವಿರದಷ್ಟು ಜನರು ಈಗಲೂ ಕಾಣಿಯಾಗಿದ್ದಾರೆ ಮತ್ತು 2 ಸಾವಿರದಷ್ಟು ಹಳ್ಳಿಗಳು ಛಿದ್ರವಾಗಿವೆ. ಆದರೆ ಅಸಲಿ ಸಂಗತಿ ಬೇರೆಯದೇ ಇದೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಅಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ. ವಿಶ್ವ ಸಂಸ್ಥ್ಥೆಯ ಅಂದಾಜಿನ ಪ್ರಕಾರವೇ ಕಾಣೆಯಾದವರು 11,000ಕ್ಕೂ ಹೆಚ್ಚು. ಕೇದಾರ ಕಣಿವೆಯಲ್ಲೇ ತೆಗೆದುಕೊಂಡರೆ, 500ಕ್ಕಿಂತ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ಮತ್ತು ಸಂಪರ್ಕ ಸಾಧನಗಳಿರಲಿಲ್ಲ. ಅಲ್ಲಿನ ಸ್ಥಿತಿ ನಿಜಕ್ಕೂ ಶೋಚನೀಯ. ರಾಜ್ಯವನ್ನು ಮತ್ತೊಮ್ಮೆ ಮೊದಲಿನಂತೆ ಕಟ್ಟುವ ಕ್ರಮ ಸಣ್ಣದೇನಲ್ಲ. ಬದುಕನ್ನೇ (ಪ್ರಾಣವನ್ನಲ್ಲ) ಕಳೆದುಕೊಂಡವರು ಅಪಾರ ಸಂಖ್ಯೆಯಲ್ಲಿದ್ದಾರೆ. ಅವರ ಗಾಯದ ಮೇಲೆ ಕೆಟ್ಟ ಹವಾಮಾನ ಪರಿಸ್ಥಿತಿ, ಭೂಕುಸಿತಗಳು ಹುಳಿ ಹಿಂಡುತ್ತಲೇ ಇದ್ದವು. ಪ್ರಮುಖ ಸಂಗತಿಯೆಂದರೆ, ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ಪ್ರದೇಶ ಸಾಮಾನ್ಯ ಸ್ಥಿತಿಗೆ ಮರಳಲು ಕನಿಷ್ಠ 2 ವರ್ಷವಾದರೂ ಬೇಕು. ಆದರೆ ಸರಕಾರ ಇದನ್ನೆಲ್ಲಾ ಮುಚ್ಚಿಟ್ಟು, ಕೇದಾರ ದೇಗುಲದ ಒಳ ಆವರಣವನ್ನಷ್ಟೇ ಸ್ವಚ್ಛಗೊಳಿಸಿ ಯಾತ್ರಾರ್ಥಿಗಳಿಗೆ ಅದನ್ನು ಮುಕ್ತಗೊಳಿಸಿ ಮುಖ ಉಳಿಸಿಕೊಳ್ಳಲು ಹೊರಟಿದೆ. ಅದು ಸರಕಾರಕ್ಕೆ ಈ ಹಂತದಲ್ಲಿ ಅನಿವಾರ್ಯ ರಾಜಕೀಯ ಕ್ರಮವಾಗಿ ಕಂಡಿರಲಿಕ್ಕೂ ಸಾಕು.
ಏಕೆಂದರೆ ದುರಂತದಿಂದಾಗಿ ಚಾರ್‌ಧಾಮ್ ಯಾತ್ರೆಗೆ ಪೂರ್ಣವಿರಾಮ ಬಿದ್ದಿತ್ತು (ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ). ಇವು ಉತ್ತರಾಖಂಡ ಸರ್ಕಾರಕ್ಕೆ ಆದಾಯದ ಪ್ರಮುಖ ಮೂಲಗಳಾಗಿದ್ದವು. ಇವು ಹೆಚ್ಚೂ ಕಡಿಮೆ 12,000 ಕೋಟಿ ರು. ವಾರ್ಷಿಕ ಆದಾಯ ತರುತ್ತಿದ್ದವು. ಸ್ಥಳೀಯ ವಾಣಿಜ್ಯ ಮಂಡಳಿಯ ಅಂದಾಜಿನ ಪ್ರಕಾರ ಆರು ಲಕ್ಷ ಜನರು ನೇರವಾಗಿ, ಪರೋಕ್ಷವಾಗಿ ಈ ಯಾತ್ರೆಯಿಂದ ಜೀವನೋಪಾಯ ಕಂಡುಕೊಂಡಿದ್ದರು. ಹೋಟೆಲ್‌ನ ಜನರು, ರೆಸ್ಟೋರೆಂಟ್ಸ್, ಟ್ರಾವೆಲ್ಸ್ ಏಜೆಂಟ್ಸ್, ಅಂಗಡಿಯವರು, ಸೆಕ್ಯುರಿಟಿ ಗಾರ್ಡ್, ಗೋಡಾವಾಲಾಗಳು, ಜೋಲಿ ಹೊರುವವರು, ಹಲವಾರು ದೇವಾಲಯಗಳಲ್ಲಿರುವ ಪೂಜಾರಿ ವರ್ಗ ಇತ್ಯಾದಿ ಎಲ್ಲರಿಗೂ ಈಗ ತಮ್ಮ ಜೀವನೋಪಾಯದ ಸಮಸ್ಯೆ ಎದುರಾಗಿದೆ. ದುರಂತದ ಹೊಡೆತಕ್ಕೆ ಪ್ರಬಲವಾಗಿ ಒಳಗಾದ ಜಿಲ್ಲೆಗಳೆಂದರೆ, ರುದ್ರಪ್ರಯಾಗ, ಚಮೋಲಿ, ಉತ್ತರಕಾಶಿ, ಪಿಥೊರಾಗಹರ್. ಏನಿಲ್ಲವೆಂದರೂ ಒಂದು ಸಾವಿರ ಪ್ರಮುಖ ರಸ್ತೆಗಳನ್ನು ಈ ಜಿಲ್ಲೆಗಳಲ್ಲಿ ಈಗಲೂ ಮುಚ್ಚಲಾಗಿದೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಅಲ್ಲಿನ ರೆಸಾರ್ಟ್ಸ್, ಹೋಟೆಲ್ಸ್, ಲಾಡ್ಜಸ್ ಮತ್ತು ಲಘು ಉಪಹಾರ ಸ್ಥಳಗಳ ಸಂಖ್ಯೆಯೇ ಅಂದಾಜು ಐದು ಸಾವಿರದಷ್ಟು. ಹಾಗೆಂದು ಇದು ಹರಿದ್ವಾರ ಮತ್ತು ಋಶಿಕೇಷ ಮತ್ತು ಡೆಹ್ರಾಡೂನ್‌ನ ಹೋಟೆಲ್‌ಗಳನ್ನು ಒಳಗೊಂಡಿಲ್ಲ. ಇನ್ನು ಕೇದಾರದ ಕಣಿಯ ಸಾವಿರಾರು ಕುಟುಂಬಗಳು ಮನೆಯನ್ನು ಕಳೆದುಕೊಂಡಿವೆ, ಅನ್ನಕ್ಕಾಗಿ ಬರ ಬಂದಿದೆ. ಕೃಷಿ ಭೂಮಿ ಕೊಚ್ಚಿ ಹೋಗಿದೆ. ಬದುಕಿನ ಮೂಲಾಧಾರವಾಗಿದ್ದ ಉದ್ಯೋಗವೇ ಕಳೆದುಹೋಗಿದೆ. ಈ ಜಿಲ್ಲೆಗಳ ಜೀವನವೇ ದುರಂತದ ಪಾಲಾಗಿದೆ.
ಉತ್ತರಾಖಂಡ ಸರ್ಕಾರವು ಸಂತ್ರಸ್ತರಿಗಾಗಿ, ಹಲವಾರು ಪುನರ್ವಸತಿ ಕ್ರಮಗಳನ್ನು ಕೈಗೊಂಡಿದೆ ನಿಜ. ಆದರೆ ಅದು ತಾತ್ಕಾಲಿಕ ಕ್ರಮಗಳಾಗುವ ಅಪಾಯಗಳಿವೆ. ಅಭಿವೃದ್ಧಿ ಹಾಗೂ ಪರಿಸರ ಎರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ನೂರು ವರ್ಷಗಳಿಗೆ ಅನ್ವಯವಾಗುವ ರೀತಿಯಲ್ಲಿ ಸಂಪರ್ಕ ಸೇರಿದಂತೆ ಎಲ್ಲ ರೀತಿಯ ಕ್ರಾಂತಿಯನ್ನೇ ನಡೆಸಬೇಕಿದೆ. ಹಿಮಾಲಯದ ಸೂಕ್ಷ್ಮ ಪರಿಸರವನ್ನು ಗಮನದಲ್ಲಿಟ್ಟುಕೊಂಡು, ಸುಸ್ಥಿರ ಅಭಿವೃದ್ಧಿ ಸಾಧನೆ ಸಣ್ಣ ಮಾತಲ್ಲ. ನಷ್ಟಕ್ಕೊಳಗಾದ ಸ್ಥಳದಲ್ಲಿನ ವಿದ್ಯುಚ್ಛಕ್ತಿ, ನೀರು ಪೂರೈಕೆ, ಆಹಾರ, ವಸತಿ, ಉದ್ಯೋಗ, ಸಂಪರ್ಕ ಸೇರಿದಂತೆ ವಾಣಿಜ್ಯ ಸಂಸ್ಥೆಗಳಿಗೆ ಪರಿಹಾರ ಒದಗಿಸುವುದು ಒಂದೆರಡು ದಿನಗಳಲ್ಲಿ ಹೇಗೆ ಸಾಧ್ಯ? ಏಕೆಂದರೆ ಇವೆಲ್ಲವೂ ನಡೆಯಬೇಕಿರುವುದು ಭಾರತದ ರಾಜಕೀಯ, ಅಧಿಕಾರಶಾಹಿ ವ್ಯವಸ್ಥೆಯ ಪ್ರಹಸನದಡಿಯಲ್ಲಿ ಎಂಬುದು ಅತ್ಯಂತ ಮುಖ್ಯ. ಆ ರಾಜ್ಯದ ಭೌಗೋಳಿಕ ಸ್ಥಿತಿಯ ಅರಿವಿಲ್ಲದೇ, ರಾಜ್ಯದ ಜನತೆಯ ಅಗತ್ಯಗಳು ಗೊತ್ತಿಲ್ಲದೇ ಏನನ್ನು ಮಾಡಿದರೂ ಅದು ವ್ಯರ್ಥ. ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದಾಗ ಕೇದಾರ ಮಂದಿರದ ಯಾತ್ರೆ ಆರಂಭವಾಗಿದೆ ಎಂದ ಮಾತ್ರಕ್ಕೆ ಉತ್ತರಾಖಂಡದಲ್ಲಿ ಎಲ್ಲವು ಸರಿ ಆಗಿದೆ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವೇ ಇಲ್ಲ.
ಬೆಳಕಿನ ಸ್ವಾವಲಂಬನೆ ಹಿಮಾಲಯನ್ ಸಾಮ್ರಾಜ್ಯಗಳ ಆಡಳಿತವನ್ನು ಕುರುಡಾಗಿಸಿದ್ದಂತೂ ನಿಜ. ಯಾವಾಗ ದೇಶದ ಉದ್ಯಮಿಗಳು ಉತ್ತರಾಖಂಡದ ಹಸಿರಾಚ್ಛಾದಿತ ಗಿರಿಶಿಖರಗಳ ಶ್ರೇಣಿಯಲ್ಲಿ ಓಡಾಡಿ ಹೋದರೋ ಆಗಲೇ ಇಂಥದ್ದೊಂದು ದುರಂತಕ್ಕೆ ಮುನ್ನುಡಿ ಬರೆದಾಗಿ ಹೋಗಿತ್ತು. ವಿದ್ಯುತ್ ಉತ್ಪಾದನೆಯನ್ನೇ ಗುರಿಯಾಗಿಸಿಕೊಂಡು ಯೋಜಿಸಿರುವ ವಿದ್ಯುತ್ ಯೋಜನೆಗಳು, ಅದಕ್ಕಾಗಿ ಉದ್ದೇಶಿಸಲಾದ ಒಡ್ಡುಗಳ ಸರಣಿಯ ಬಗ್ಗೆ ಸರಕಾರ ಪುನರ್‌ಚಿಂತನೆಗೆ ಇದು ಸಕಾಲವಾಗಿದೆ. ಮೊಂಡುತನಕ್ಕೆ ಬಿದ್ದು ಅತ್ಯಂತ ಸೂಕ್ಷ್ಮ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬೃಹತ್ ಯೋಜನೆಗಳನ್ನು ಮುಂದುವರಿಸಿದ್ದೇ ಆದರೆ ಇಂಥ ಅನಾಹುತಗಳು ಅಲ್ಲಿನ ನಿತ್ಯದ ಮಾತಾಗುವುದರಲ್ಲಿ ಅನುಮಾನವೇ ಇಲ್ಲ. ಆಳುವವರಿಗೆ ಇದು ಅರ್ಥವಾಗಬೇಕಿದೆ.
ಹಿಮಾಲಯ ಪರ್ವತ ಶ್ರೇಣಿಗಳೆಂದರೆ ಅವಿನ್ನೂ ಹೆಜ್ಜೆಯಿಡಲು ಕಲಿಯುತ್ತಿರುವ, ದೃಢವಾಗಿ ನಿಲ್ಲಲಾರದ ಹಸುಳೆಯಿದ್ದಂತೆ. ಸಮುದ್ರತಳದಲ್ಲಿ ಭೂ ಫಲಗಳ ಚಲನೆಯಿಂದ ದಕ್ಷಿಣದ ಪ್ರದೇಶಗಳು ಒತ್ತಡಕ್ಕೆ ಒಳಗಾಗಿ ಉತ್ತರದಲ್ಲಿ ತಲೆ ಎತ್ತಿ ಸಾವಿರಾರು ವರ್ಷಗಳ ಹಿಂದೆ ಸೃಷ್ಟಿಗೊಂಡ ಹಿಮಾಲಯ ಗಟ್ಟಿ ಪದರಗಳಿಂದ ಆದದ್ದಲ್ಲ. ಅಲ್ಲಿನ ಉನ್ನತ ಗಿರಿಶಿಖರಗಳು ಸುಭದ್ರ ಹಿಡಿತವನ್ನು ಹೊಂದಿಲ್ಲ. ಸರಕಾರ ಅಲ್ಲಿನ ನಿಸರ್ಗ ಸೌಂದರ್ಯವನ್ನೇ ಬಂಡವಾಳವಾಗಿಸಿಕೊಡು ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ಹವಣಿಸಿತು. ಕಳೆದ ನಾಲ್ಕೈದು ವರ್ಷಗಳಲ್ಲಿ ಕೇದಾರ ಮತ್ತು ಬದರಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯ ಹೆಚ್ಚಳಗೊಂಡಿದೆ. ಹೀಗಾಗಿ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಮುಂದಾಯಿತು. ಬೆಟ್ಟಗಳನ್ನು ಸೀಳಿ ರಸ್ತೆ ನಿರ್ಮಿಸಲಾಯಿತು. ಇದಕ್ಕಾಗಿ ಬಂಡೆಗಳನ್ನು ಬುಡಮೇಲು ಮಾಡಲಾಯಿತು. ಮರಗಳನ್ನು ಕಡಿದುರುಳಿಸಲಾಯಿತು. ರಸ್ತೆ ಇದ್ದ ಮೇಲೆ ವಾಹನಗಳು ಹೆಚ್ಚುವುದು ಸಹಜ. ಐದು ವರ್ಷದ ಹಿಂದಷ್ಟೇ ಉತ್ತರಾಖಂಡದಲ್ಲಿ 83 ಸಾವಿರ ವಾಹನಗಳು ನೋಂದಣಿಗೊಂಡಿದ್ದವು. ಕಳೆದ ವರ್ಷ ಇದು 1,80,000ಕ್ಕೆ ಏರಿಕೆಯಾಗಿದೆ. ವಾಹನಗಳ ಭರಾಟೆ ಹೆಚ್ಚಿದಂತೆಲ್ಲ ಬೆಟ್ಟಗಳ ಬುಡ ಅಭದ್ರಗೊಂಡಿತು. ಭೂ ಕುಸಿತ ಹೆಚ್ಚಿತು. ವಾಯು ಮಾಲಿನ್ಯದ ಪ್ರಮಾಣ ಹೆಚ್ಚುತ್ತಾ ಸಾಗಿ ವಾತಾವರಣದ ಬಿಸಿ ಏರಿತು. ಹೆಲಿಕಾಪ್ಟರ್‌ಗಳ ಓಡಾಟವೂ ವಾಯುಮಂಡಲಕ್ಕೆ ಇಂಗಾಲಾಮ್ಲದ ಕೊಡುಗೆಯನ್ನು ಯಥೇಚ್ಛ ನೀಡಿತು. ಹಿಮದ ಪದರಗಳು ಅಲುಗಿ ಕಂಗಾಲಾದವು. ಬಿಸಿಯೇರಿ ಮಂಜು ಕರಗಿ ನದಿಯಲ್ಲಿ ಪ್ರವಾಹ ಸೃಷ್ಟಿಸಿದರೆ ಅದು ಪ್ರಕೃತಿಯ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ಎಲ್ಲಕ್ಕಿಂತ ದೊಡ್ಡ ಶಾಪವಾದದ್ದು ನಗರೀಕರಣ. ಕಣಿವೆಯುದ್ದಕ್ಕೂ ಒತ್ತುವರಿ ಎಗ್ಗಿಲ್ಲದೇ ಸಾಗಿತ್ತು. ಒಂದೆಡೆ ಪರ್ವತಗಳ ಉದ್ದಕ್ಕೂ ಕೃಷಿ ಭೂಮಿಗಳು ನಿರ್ಮಾಣಗೊಂಡವು. ಕೃಷಿಗಾಗಿ ಭೂಮಿಯನ್ನು ಉಳುಮೆಗೆ ಒಳಪಡಿಸುತ್ತಿದ್ದಂತೆಯೇ ಭದ್ರವಾಗಿ ನಿಂತಿದ್ದ ಗುಡ್ಡಗಳು ಏಕಾಏಕಿ ಕುಸಿಯಲು ಆರಂಭಿಸಿದವು. ಇನ್ನೊಂದೆಡೆ ನದಿಯ ಇಕ್ಕೆಲಗಳಲ್ಲೂ ಒತ್ತುವರಿ ಹೆಚ್ಚಿ ಅಲ್ಲೆಲ್ಲಾ ಮನೆಗಳು, ಕಟ್ಟಡಗಳು ನಿರ್ಮಾಣಗೊಂಡವು. ಪಟ್ಟಣಗಳು ಮಿತಿ ಮೀರಿ ಬೆಳೆಯತೊಡಗಿದವು. ನದಿ ಪಾತ್ರದ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣಕ್ಕೆ ನಿಷೇಧವಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 2012ರಲ್ಲಿ ಭಾಗೀರಥಿ ನದಿ ಪಾತ್ರವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಸರಕಾರ ಘೋಷಿಸಿತ್ತು. ಇದನ್ನು ರಾಜ್ಯ ಸರಕಾರವೇ ವಿರೋಧಿಸಿತು. ಪರಿಸರ ಇಲಾಖೆಯ ಸಮ್ಮತಿಯೂ ಇಲ್ಲದೇ ಕಟ್ಟಡಗಳು ಎದ್ದವು. ಸ್ಥಿರವಿಲ್ಲದ ಬೆಟ್ಟವನ್ನು ಇಂಥ ಅಕ್ರಮ ನಿರ್ಮಾಣ ಮತ್ತಷ್ಟು ದುರ್ಬಲಗೊಳಿಸಿತು. ನದಿಯ ಹರಿವಿನ ತಾಣವನ್ನು ಕಿರುದಾಗಿಸಿತ್ತು. ಇದೀಗ ಪ್ರವಾಹ ಇವೆಲ್ಲವನ್ನೂ ನಾಶಗೊಳಿಸಿದೆ.
ಇನ್ನು ಗಣಿಗಾರಿಕೆ, ವಿದ್ಯುತ್ ಯೋಜನೆಗಳಿಂದಾದ ಅರಣ್ಯ ನಾಶವನ್ನು ಪರಿಗಣಿಸಿದರೆ ಹಿಮಾಲಯ ಕಣಿವೆ ಉಳಿದಿರುವುದೇ ಅಚ್ಚರಿಯ ಸಂಗತಿ. ಪ್ರಮುಖ 14 ಕಣಿವೆಗಳಲ್ಲಿ ವೃಕ್ಷ ಹನನ ನಿರಂತರವೆಂಬಂತಾಗಿ ದಶಕಗಳಾದವು. ಸಿಐಜಿ ವರದಿ ಘರವಾಲ್ ವ್ಯಾಪ್ತಿಯಲ್ಲಿ ನಡೆದ ಮರಗಳ ಮಾರಣಹೋಮಗಳ ಪರಿಣಾಮ ಭೀಕರ ಅವಘಡದ ಸಾಧ್ಯತೆಯಿದೆ ಎಂದು ಮೂರು ವರ್ಷಗಳ ಹಿಂದೆಯೇ ಎಚ್ಚರಿಸಿತ್ತು. ಆದರೂ ಅದಕ್ಕೆ ಸರಕಾರ ಕಿವಿಗೊಡಲಿಲ್ಲ. ದೇಶದ ಜನ ಇಂಥ ಬೇಜವಾಬ್ದಾರಿತನದ ವಿರುದ್ಧ ಸಿಡಿದೆದ್ದು ಮೊಟಕಿದಾಗ ಮಾತ್ರವೇ ಸರಕಾರಕ್ಕೆ ವಾಸ್ತವವನ್ನು ಅರ್ಥ ಮಾಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜನರಲ್ಲಿ ಉತ್ತರಾಖಂಡದ ವಾಸ್ತವದ ಬಗೆಗಿನ ಅರಿವು ಮೂಡಿಸುವ ಪ್ರಯತ್ನವಾಗಿ ಅಂಕಿ- ಅಂಶಗಳ ಸಹಿತ ಪ್ರತ್ಯಕ್ಷ ವರದಿಯನ್ನು ಸಂಗ್ರಹಿಸಿ ಕೊಡುವ ಪ್ರಯತ್ನವನ್ನು 'ದೇವನೆಲದಲ್ಲಿ ರುದ್ರಭೂಮಿ' ಎಂಬ ಹೊತ್ತಗೆಯಲ್ಲಿ ಮಾಡಿದ್ದೇನೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರ ತಂದಿರುವ ಹೊತ್ತಗೆ ಕಳೆದ ವಾರವಷ್ಟೇ ಮಾರುಕಟ್ಟೆಗೆ ಕಾಲಿಟ್ಟಿದೆ. ಒಂದೇ ವಾರದಲ್ಲಿ ಓದುಗರಿಂದ ಅತ್ಯಪೂರ್ವ ಪ್ರತಿಕ್ರಿಯೆ ದೊರೆತಿದೆ. ನೀವೊಮ್ಮೆ ಓದಿ ಪ್ರತಿಕ್ರಿಯಿಸುತ್ತೀರಲ್ಲಾ?
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in