ಅಂಕಣಗಳು

ರಾವ್ ಜತೆ ಭಾಭಾಗೂ ಕೊಟ್ಟಿದ್ದರೆ ಖುಷಿ ಇಮ್ಮಡಿಯಾಗುತ್ತಿತ್ತು!

ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಈ ಪುರಸ್ಕಾರಗಳ ಬಗ್ಗೆ ಯಾರೂ ಅಷ್ಟೊಂದು...

ಪದ್ಮವಿಭೂಷಣ
ಪದ್ಮಭೂಷಣ
ಪದ್ಮಶ್ರೀ
ಈ ಪುರಸ್ಕಾರಗಳ ಬಗ್ಗೆ ಯಾರೂ ಅಷ್ಟೊಂದು ನಿರೀಕ್ಷೆ ಇಟ್ಟುಕೊಂಡಿಲ್ಲ, ಅಷ್ಟಾಗಿ ಕಿಮ್ಮತ್ತನ್ನೂ ಕೊಡುವುದಿಲ್ಲ ಬಿಡಿ. ಅದರಲ್ಲೂ ಪದ್ಮಶ್ರೀಯಂತೂ ಕಾಳಸಂತೆಯಲ್ಲಿ ಸಿಗುವ ಡಾಕ್ಟರೇಟ್ ಪದವಿಯಂತಾಗಿ ಬಿಟ್ಟಿದೆ. ಆದರೆ ಸಾಕಷ್ಟು ಅಪಾತ್ರರಿಗೆ ಸಂದಿದ್ದರೂ "ಭಾರತ ರತ್ನ"ಕ್ಕೆ ಮಾತ್ರ ಇಂದಿಗೂ ಅಪಾರವಾದ ಗೌರವವಿದೆ. ಹಾಗಾಗಿ ಪ್ರತಿ ವರ್ಷ ನವೆಂಬರ್, ಡಿಸೆಂಬರ್ ಬಂತೆಂದರೆ "ಭಾರತ ರತ್ನ"ವನ್ನು ಈ ವರ್ಷವಾದರೂ ಕೊಡಲಾಗುತ್ತದೆಯೇ, ಕೊಟ್ಟರೂ ಯಾರಿಗೆ ಕೊಡಬಹುದು ಎಂಬ ನಿರೀಕ್ಷೆ ಸೃಷ್ಟಿಯಾಗುತ್ತದೆ. ಅದು 2011, ಡಿಸೆಂಬರ್. ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿ ಆಡುತ್ತಿರುವಾಗಲೇ ದಂತಕಥೆಯಾದ ಏಕೈಕ ತಾರೆ ಸಚಿನ್ ತೆಂಡೂಲ್ಕರ್ ಸದ್ಯದಲ್ಲೇ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂಬ ನಿರೀಕ್ಷೆಯಿತ್ತು. ಹಾಗಾಗಿ ಭಾರತ ರತ್ನ ಕೊಡಬೇಕೆಂಬ ಕೂಗು ಮೊದಲ ಬಾರಿಗೆ ಬಲವಾಗಿ ಎದ್ದಿತ್ತು. ಆ ಸಂದರ್ಭದಲ್ಲೂ ಪ್ರೊ. ಸಿಎನ್‌ಆರ್ ರಾವ್ ಪ್ರಧಾನಿಯವರ ವೈಜ್ಞಾನಿಕ ಸಲಹೆಗಾರರಾಗಿದ್ದರು. 2011, ಡಿಸೆಂಬರ್ 19ರಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್‌ಸಿ) ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಾವ್, "ಭಾರತ ರತ್ನ ಕೊಡುವುದಾದರೆ ಭಾರತದ ಅಣು ವಿಜ್ಞಾನಿ ಹೋಮಿ ಜಹಾಂಗಿರ್ ಭಾಭಾಗೆ ಮೊದಲು ನೀಡಬೇಕು. ನಮ್ಮ ದೇಶದಲ್ಲಿ ವಿಜ್ಞಾನಕ್ಕಿಂತ ಕ್ರಿಕೆಟ್‌ಗೇ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ಸಚಿನ್ ತೆಂಡೂಲ್ಕರ್‌ಗೆ ಈಗಾಗಲೇ ಪದ್ಮಶ್ರೀ, ಪದ್ಮವಿಭೂಷಣ ನೀಡುವ ಮೂಲಕ ಆತನ ಸಾಧನೆಗೆ ಮನ್ನಣೆ ನೀಡಲಾಗಿದೆ. ಹಾಗಂತ ಅವರಿಗೆ ಭಾರತ ರತ್ನ ಕೊಡುವುದು ಬೇಡವೆಂದಲ್ಲ. ಹೋಮಿ ಭಾಭಾ ಕೂಡ ಅರ್ಹ ವ್ಯಕ್ತಿ" ಎಂದಿದ್ದರು.
ಎಂಥ ಕಾಕತಾಳೀಯ ನೋಡಿ.. ಭಾಭಾ ಪರ ಧ್ವನಿಯೆತ್ತಿದ್ದ ಸಿಎನ್‌ಆರ್ ರಾವ್ ಅವರಿಗೇ ಸಚಿನ್ ಜತೆ ಭಾರತ ರತ್ನವನ್ನು ಸರ್ಕಾರ ಘೋಷಣೆ ಮಾಡಿದೆ! ಖಂಡಿತ ಇಬ್ಬರೂ ಅರ್ಹರೇ. ಹಾಗಂತ ಸ್ವಂತ ಖುಷಿಯಲ್ಲಿ ರಾವ್, ಭಾಭಾ ಅವರನ್ನು ಮರೆಯಲಿಲ್ಲ. "ನಾನು ಬೆಂಗಳೂರಿಗೆ ಬರಲು ಕೇರಳದ ತಿರುವನಂತರಪುರದ ಏರ್‌ಪೋರ್ಟ್‌ನಲ್ಲಿರುವಾಗ ನನಗೆ ಭಾರತ ರತ್ನ ನೀಡುವ ಸುದ್ದಿ ತಿಳಿಯಿತು. ಕೂಡಲೇ ಪ್ರಧಾನಿಗೆ ಕರೆ ಮಾಡಿ ಧನ್ಯವಾದ ಹೇಳಿದೆ. ಆದರೆ ಈ ದೇಶದ ಮುಂಚೂಣಿ ಅಣು ವಿಜ್ಞಾನಿ ಹೋಮಿ ಭಾಭಾಗೆ ಕೂಡ ಭಾರತ ರತ್ನ ಕೊಡಬೇಕು. ಭಾಭಾ ಹಾಗೂ ಇತರ ಉನ್ನತ ಸಂಶೋಧಕರಿಗೆ ಭಾರತ ರತ್ನ ಸಲ್ಲಬೇಕು ಎಂದು ನಾನು ಈ ಹಿಂದೆ ಕೂಡ ಹೇಳಿದ್ದೆ" ಎಂದರು!
ಭಾರತದ ಅನರ್ಘ್ಯ ರತ್ನ ಹೋಮಿ ಭಾಭಾ ಬಗ್ಗೆ ಇದೇ ಅಂಕಣದಲ್ಲಿ ಹಿಂದೆ ಕೂಡ ಬರೆದಿದ್ದು ನಿಮಗೆ ನೆನಪಿರಬಹುದು. ಇಷ್ಟಕ್ಕೂ ಈ ಹೋಮಿ ಭಾಭಾ ಯಾರೆಂದುಕೊಂಡಿರಿ? ಅವರ ಸಾಧನೆಯಾದರೂ ಏನು? ಸಿ.ಎನ್.ಆರ್. ರಾವ್ ಹೇಳಿದಂತೆ ಅವರು ನಿಜಕ್ಕೂ ಭಾರತರತ್ನಕ್ಕೆ ಅರ್ಹರಾ?
ನೀವೇಕೆ ಮದುವೆ ಆಗಲೇ ಇಲ್ಲ?
ಅಂತ ಕೇಳಿದರೆ I​ am​ ma‌r‌r‌ied​ t‌o​ ‌c‌rea​t‌i​v‌i​ty​ ಎನ್ನುತ್ತಿದ್ದರು ಭಾಭಾ. ಸುಖದ ಸುಪ್ಪತ್ತಿಗೆಯಲ್ಲಿ ಜನಿಸಿದ ವ್ಯಕ್ತಿಯ ಬಾಯಿಂದ ಬರುವ, ಬರಬೇಕಾದ ಮಾತುಗಳು ಅವಾಗಿರಲಿಲ್ಲ. ಅಪ್ಪ ಜಹಾಂಗೀರ್ ಹರ್ಮುಸ್ಜಿ ಭಾಭಾ ಬ್ರಿಟನ್‌ನ ಆಕ್ಸ್‌ಫರ್ಡ್‌ನಲ್ಲಿ ಕಲಿತ ಖ್ಯಾತ ವಕೀಲ. ಅಜ್ಜ ಹರ್ಮುಸ್ಜಿ ಭಾಭಾ ಮೈಸೂರು ರಾಜ್ಯದ ಶಿಕ್ಷಣ ಇಲಾಖೆಯ ಮುಖ್ಯಸ್ಥ. ಅಮ್ಮ ಮೆಹರ್‌ಬಾಯಿ ಜಗದ್ವಿಖ್ಯಾತ ಟಾಟಾ ಕುಟುಂಬದ ಸಂಬಂಧಿ. ಜತೆಗೆ ಪಾರ್ಸಿಗಳು ಆ ಕಾಲಕ್ಕೆ ತೀರಾ  Westernized ಆಗಿದ್ದರು. ಇಂತಹ ಹಿನ್ನೆಲೆಯೊಂದಿಗೆ 1909, ಅಕ್ಟೋಬರ್ 30ರಂದು ಜನಿಸಿದವರೇ ಹೋಮಿ ಜಹಾಂಗೀರ್ ಭಾಭಾ. ಅವರು ಬಾಲ್ಯದಲ್ಲಿ ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಚಿಂತಿತರಾದ ಅಪ್ಪ-ಅಮ್ಮ ಬಹಳ ಜನ ಹೆಸರಾಂತ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದರು. ಆದರೆ ಹೋಮಿ ಭಾಭಾಗೇಕೆ ನಿದ್ರೆ ಬರುತ್ತಿಲ್ಲ ಅಥವಾ ಹೋಮಿ ಭಾಭಾ ಏಕೆ ಸರಿಯಾಗಿ ನಿದ್ರೆ ಮಾಡುತ್ತಿಲ್ಲ ಎಂಬುದು ಮಾತ್ರ ತಿಳಿಯಲಿಲ್ಲ. ಎಲ್ಲ ವಿಧದ ಪರೀಕ್ಷೆಗಳಿಗೂ ಒಳಪಡಿಸಿದ ವೈದ್ಯರು, ಈತ ಆರೋಗ್ಯದಿಂದಿದ್ದಾನೆ, ಭಯಪಡಬೇಕಾದ ಅಗತ್ಯವಿಲ್ಲ ಎಂದು ಧೈರ್ಯ ಹೇಳಿ ಕಳುಹಿಸಿದರು. ನಿಜ ಸಂಗತಿಯೇನೆಂದರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗಾಢ ಚಿಂತನೆಯಲ್ಲಿ ತೊಡಗಿದ್ದುದು ನಿದ್ರಾಹೀನತೆಗೆ ಕಾರಣವಾಗಿತ್ತು. 1916ರಲ್ಲಿ ಬಾಂಬೆಯ ಹೆಸರಾಂತ ಕೆಥೆಡ್ರಲ್ ಸ್ಕೂಲ್ ಸೇರಿದ ಭಾಭಾ ವ್ಯಾಸಂಗ ಆರಂಭಿಸಿದರು. ಆನಂತರ 1922ರಲ್ಲಿ ಜಾನ್ ಕ್ಯಾನನ್ ಸ್ಕೂಲ್ ಸೇರಿದ ಅವರು, 15ನೇ ವಯಸ್ಸಿಗೆ ಎಲ್ಫಿನ್‌ಸ್ಟನ್ ಕಾಲೇಜು ಮೆಟ್ಟಿಲೇರಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಡೆಸುವ ಪ್ರತಿಭಾ ಪರೀಕ್ಷೆಯಲ್ಲಿ ಪಾಸಾದ ಭಾಭಾಗೆ ವಿದ್ಯಾರ್ಥಿ ವೇತನ ದೊರೆಯಲಾರಂಭಿಸಿತು. ವಿಜ್ಞಾನಿಯಾಗುವ ಕನಸು ಕಾಣಲಾರಂಭಿಸಿದರು. ಆದರೆ ಅಪ್ಪ ಹಾಗೂ ಅಂಕಲ್ ಸರ್ ದೊರಾಬ್ಜಿ ಜೆ. ಟಾಟಾ ಅವರ ಯೋಚನೆ ಇನ್ನೇನೋ ಆಗಿತ್ತು. ಮಗನನ್ನು ಎಂಜಿನಿಯರಿಂಗ್ ಓದಿಸಿ ಜೆಮ್‌ಷೆಡ್‌ಪುರದಲ್ಲಿರುವ ಟಾಟಾ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೆಲಸಕ್ಕೆ ಸೇರಿಸುವ ತವಕ ಅವರದ್ದು. ಕುಪಿತರಾದ ಹೋಮಿ ಭಾಭಾ ಅಪ್ಪನಿಗೆ ಪತ್ರವೊಂದನ್ನು ಬರೆಯುತ್ತಾರೆ.
"ನಾನು ಬಹಳ ಗಂಭೀರವಾಗಿ ನಿಮಗೆ ಹೇಳುತ್ತಿದ್ದೇನೆ. ಈ ಉದ್ಯಮ ಅಥವಾ ಎಂಜಿನಿಯರಿಂಗ್ ನನಗೆ ಹಿಡಿಸುವ ವಿಚಾರವಲ್ಲ. ನನ್ನ ಮನಸ್ಥಿತಿಗೂ ಈ ವಿಚಾರಗಳಿಗೂ ಹೋಲಿಕೆಯೇ ಆಗುವುದಿಲ್ಲ. ಭೌತಶಾಸ್ತ್ರವೇ ನನ್ನ ಕ್ಷೇತ್ರ. ಈ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬಲ್ಲೆ ಎಂದು ನನಗೆ ಗೊತ್ತು. ಪ್ರತಿಯೊಬ್ಬ ಮನುಷ್ಯನೂ ಆತ ಇಷ್ಟಪಡುವ ಕ್ಷೇತ್ರದಲ್ಲಿ ಮಾತ್ರ ಅಮೋಘ ಸಾಧನೆ ಮಾಡಲು ಸಾಧ್ಯ. ಆತ ಹುಟ್ಟಿದ್ದು ಆ ಕಾರಣಕ್ಕಾಗಿಯೇ ಹಾಗೂ ವಿಧಿ ಬರೆದಿರುವುದೂ ಅದನ್ನೇ. ಅವನು, ಇವನು, ಯಾವನೋ ಹೇಳಿದ್ದರ ಮೇಲೆ ನನ್ನ ಭವಿಷ್ಯ ಅವಲಂಬಿತವಾಗುವುದಿಲ್ಲ. ನನ್ನ ಕ್ಷೇತ್ರದಲ್ಲಿ ಪರಿಶ್ರಮದ ಮೇಲೆ ಯಶಸ್ಸು ಅವಲಂಬಿತವಾಗಿರುತ್ತದೆ. ಅದೂ ಅಲ್ಲದೆ ವಿಜ್ಞಾನಕ್ಕೆ ಒಲ್ಲದ ಜಾಗ ಭಾರತವೆಂದೇನೂ ಅಲ್ಲ. ಭೌತಶಾಸ್ತ್ರದ ಬಗ್ಗೆ ನನ್ನಲ್ಲಿ ಉತ್ಕಟ ತುಡಿತವಿದೆ. ನಾನು ಅದನ್ನೇ ಓದುತ್ತೇನೆ, ಅದೇ ನನ್ನ ಮಹತ್ವಾಕಾಂಕ್ಷೆ. ಒಂದು ದೊಡ್ಡ ಕಂಪನಿಯ ಯಶಸ್ವಿ ಮುಖ್ಯಸ್ಥನಾಗುವ ಯಾವ ಆಸೆಗಳೂ ನನ್ನಲ್ಲಿಲ್ಲ. ನೀನು ವಿಜ್ಞಾನಿಯಾಗಬೇಕೆಂದು ಬೀಥೋವನ್‌ಗೆ, ನೀನು ಎಂಜಿನಿಯರ್ ಆಗು ಅದು ಬುದ್ಧಿವಂತರು ಮಾಡುವ ಕೆಲಸ ಎಂದು ಸಾಕ್ರೆಟಿಸ್‌ಗೆ ಹೇಳಿದ್ದರೆ ಹೇಗೆ ಯಾವ ಉಪಯೋಗವೂ ಆಗುತ್ತಿರಲಿಲ್ಲವೋ, ಕೆಲವು ಬುದ್ಧಿವಂತರೂ ಹಾಗೆಯೇ ಇರುತ್ತಾರೆ. ಅವರನ್ನು ಹಾಗೆಯೇ ಬಿಡಿ ಎಂದು ನಿಮ್ಮನ್ನು ವಿನೀತನಾಗಿ ಕೇಳಿಕೊಳ್ಳುತ್ತೇನೆ, ಭೌತಶಾಸ್ತ್ರವನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡಿ".
ಇಂತಹ ಪತ್ರವನ್ನು ಓದಿದ ಹರ್ಮುಸ್ಜಿಗೆ ಮಗನ ತುಡಿತ ಅರ್ಥವಾಯಿತು. ಹಾಗಂತ ಪಟ್ಟು ಸಡಿಸಲಿಲ್ಲ. ಒಂದು ವೇಳೆ ನೀನು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿದರೆ ಥಿಯರಿಟಿಕಲ್ ಫಿಸಿಕ್ಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಡುವುದಾಗಿ ಪೂರ್ವ ಷರತ್ತು ಹಾಕಿದರು. ಅಪ್ಪನ ಆಸೆಯಂತೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ಗೆ ಸೇರಿದ ಹೋಮಿ ಭಾಭಾ, 1930ರಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿಯನ್ನು ಪೂರೈಸಿದರು. ಆದರೆ ಭೌತಶಾಸ್ತ್ರದ ವ್ಯಾಮೋಹ ಹೊರಟು ಹೋಗಿರಲಿಲ್ಲ. ಅಪ್ಪನ ಮಾತಿನಂತೆ ನಡೆದುಕೊಂಡರು, ಭಾಭಾಗೆ ತನಿಗಿಷ್ಟಬಂದ ವಿಷಯವನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿತು. ಮೊದಲಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲೇ ಗಣಿತಶಾಸ್ತ್ರದ ಅಧ್ಯಯನವನ್ನು ಆರಂಭಿಸಿದರು. ರಾಸ್ ಬಾಲ್ ಪ್ರವಾಸಿ ವಿದ್ಯಾರ್ಥಿ ವೇತನ ದೊರೆಯಿತು. ಯುರೋಪ್ ಪ್ರವಾಸ ಮಾಡಿ, ವುಲ್ಫ್‌ಗ್ಯಾಂಗ್ ಪೌಲಿ, ಎನ್ರಿಕೋ ಫೆರ್ಮಿ ಮುಂತಾದವರ ಜತೆ ಅಧ್ಯಯನ ನಡೆಸುವ ಅವಕಾಶ ಸಿಕ್ಕಿತು. ಮುಂದೆ ನೊಬೆಲ್ ಪುರಸ್ಕಾರ ಪಡೆದ ಪಾಲ್ ಆಡ್ರಿಯನ್ ಮಾರಿಸ್ ಡಿರಾಕ್ ಅವರ ಕೈಕೆಳಗೆ 1932ರಿಂದ 34ರವರೆಗೂ ಎರಡು ವರ್ಷ ಗಣಿತವನ್ನು ಅಧ್ಯಯನ ಮಾಡಿದ ಭಾಭಾ ಅಲ್ಲೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಈ ಮಧ್ಯೆ, 1933ರಲ್ಲಿ ಪ್ರಕಟವಾದ ಭಾಭಾ ಅವರ ಮೊಟ್ಟಮೊದಲ ಸಂಶೋಧನಾ ಪ್ರಬಂಧಕ್ಕೆ ಐಸಾಕ್ ನ್ಯೂಟನ್ ಸ್ಟುಡೆಂಟ್‌ಷಿಪ್ ಸಿಕ್ಕಿತು. ಕೂಪನ್‌ಹೇಗನ್‌ನಲ್ಲಿ ನೀಲ್ ಬೋರ್ ಜತೆ ಸಂಶೋಧನೆ ಮಾಡುವ ಅವಕಾಶವೂ ಲಭ್ಯವಾಯಿತು. ಪ್ರಖ್ಯಾತ ಕ್ಯಾವೆಂಡಿಶ್ ಪ್ರಯೋಗಾಲಯ ಸೇರಿದ ಭಾಭಾ, ಅಣು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರು. 1937ರಲ್ಲಿ ಹೀತ್ಲರ್ ಜತೆ ಸೇರಿ ಮಂಡಿಸಿದ Cas‌c​ade​ T‌he‌o‌ry​ ‌of​ Ele‌ct‌r‌on​  ಮಹಾಪ್ರಬಂಧ, ಅಂತಿಮವಾಗಿ B‌hab‌ha-​He‌it​le‌r​ Cas‌c​ade​ T‌he‌o‌ry​ ಎಂದೇ ಪ್ರಸಿದ್ಧಿ ಪಡೆಯಿತು. ಹೀಗೆ ರುದರ್‌ಫೋರ್ಡ್, ಹೀತ್ಲರ್, ನೀಲ್ ಬೋರ್, ಡಿರಾಕ್ ಜತೆ ಕಳೆದ ಸಮಯ, ನಡೆಸಿದ ಸಂಶೋಧನೆ ಭಾಭಾ ಅವರ ಜೀವನ ಹಾಗೂ ಯೋಚನೆಯ ದಿಕ್ಕನ್ನೇ ಬದಲಾಯಿಸಿ ಬಿಟ್ಟವು. ಮದುವೆಯ ಆಸೆಯನ್ನೇ ಬಿಟ್ಟು, ಸಂಶೋಧನೆಯನ್ನೇ ಕೈಹಿಡಿದರು!
ಮನುಕುಲ ಕಂಡ ಮಹಾಪಾಪಿ ಅಡಾಲ್ಫ್ ಹಿಟ್ಲರ್‌ಗೂ ಕೆಲವೊಮ್ಮೆ ಥ್ಯಾಂಕ್ಸ್ ಹೇಳಬೇಕೆನಿಸಿಬಿಡುತ್ತದೆ, ಏಕೆ ಗೊತ್ತಾ?!
ಒಂದೆಡೆ ಬ್ರಿಟನ್‌ನಲ್ಲಿ ಸಂಶೋಧನೆ ಮಾಡಿಕೊಂಡಿದ್ದ ಭಾಭಾ ಒಂದಿಷ್ಟು ದಿನಗಳಿಗಾಗಿ ರಜೆ ಕಳೆಯಲು 1939ರಲ್ಲಿ ಭಾರತಕ್ಕೆ ಬಂದಿದ್ದರು. ಇನ್ನೊಂದೆಡೆ ಭೌತಶಾಸ್ತ್ರದಲ್ಲಿಯೇ ಪದವಿ ಪೂರೈಸಿ, ಕ್ಲೌಡ್ ಚೇಂಬರ್ ಸಂಶೋಧಕ ಸಿ.ಟಿ.ಆರ್. ವಿಲ್ಸನ್ ಕೈಕೆಳಗೆ ಕ್ಯಾವೆಂಡಿಶ್ ಪ್ರಯೋಗಾಲಯದಲ್ಲಿಯೇ ಸಂಶೋಧನೆ ನಡೆಸಲು ತಯಾರಿ ಮಾಡಿಕೊಂಡಿದ್ದ ಪ್ರಶಾಂತ್‌ಚಂದ್ರ ಮಹಲನೋಬಿಸ್ ಕೂಡ ರಜೆ ಕಳೆಯಲು ಅದೇ ಸಮಯಕ್ಕೆ ಭಾರತಕ್ಕೆ ಆಗಮಿಸಿದ್ದರು. ಎರಡನೇ ಮಹಾಯುದ್ಧ ಆರಂಭವಾಯಿತು ಬ್ರಿಟನ್‌ನಲ್ಲಿದ್ದ ವಿಜ್ಞಾನಿಗಳೂ ಕೂಡ ಯುದ್ಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕೇಂಬ್ರಿಡ್ಜ್‌ನಲ್ಲಿ ಸಂಶೋಧನೆಯನ್ನು ಮುಂದುವರಿಸಬೇಕೆಂದುಕೊಂಡಿದ್ದ ಭಾಭಾ ತಮ್ಮ ಉದ್ದೇಶವನ್ನೇ ಕೈಬಿಡಬೇಕಾಗಿ ಬಂತು. ಅಂದು ಹಿಟ್ಲರ್ ಆರಂಭಿಸಿದ ಯುದ್ಧ ತಂದಿಟ್ಟ ಅನಿವಾರ್ಯತೆಯಿಂದಾಗಿ ಭಾಭಾ ಹಾಗೂ ಮಹಲನೋಬಿಸ್ ಭಾರತದಲ್ಲೇ ಉಳಿದುಕೊಳ್ಳುವ ನಿರ್ಧಾರ ಕೈಗೊಂಡರು. ಅದರಿಂದ ನಮ್ಮ ದೇಶದ ಭವಿಷ್ಯವೇ ಬದಲಾಗುವಂತಾಯಿತು. 1940ರಲ್ಲಿ ಹೋಮಿ ಭಾಭಾ ಅವರ ಸಲುವಾಗಿಯೇ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಭಾರತೀಯ ವಿಜ್ಞಾನ ಮಂದಿರ-ಐಐಎಸ್‌ಸಿ)ನಲ್ಲಿ ಥಿಯೋರಿಟಿಕಲ್ ಸೈನ್ಸ್ ಎಂಬ ವಿಭಾಗ ತೆರೆದು, ರೀಡರ್ ಹುದ್ದೆಯನ್ನು ಸೃಷ್ಟಿಸಿಕೊಟ್ಟರು. ಆಗ ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕರಾಗಿದ್ದವರು ಮತ್ತಾರೂ ಅಲ್ಲ ಸಿ.ವಿ. ರಾಮನ್! ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹರೆನಿಸಿಕೊಂಡ ವಿಕ್ರಂ ಸಾರಾಭಾಯಿ ಕೂಡ ಅಲ್ಲೇ ಅಧ್ಯಯನ ನಡೆಸುತ್ತಿದ್ದರು. ಅತಿರಥಮಹಾರಥ ವಿಜ್ಞಾನಿಗಳ ಆಗಮನದಿಂದಾಗಿ ಐಐಎಸ್‌ಸಿ ರಂಗೇರಿತು. ಭಾಭಾ ಮಾರ್ಗದರ್ಶನದಲ್ಲಿ ಕಾಸ್ಮಿಕ್ ರೇ(ವಿಶ್ವಕಿರಣ) ಸಂಶೋಧನೆ ಆರಂಭವಾಯಿತು. ಐಐಎಸ್‌ಸಿಯಲ್ಲಿ ಕೆಲವು ವರ್ಷಗಳನ್ನು ಕಳೆದ ಭಾಭಾ, ಯುದ್ಧದ ನಂತರ ಇಂಗ್ಲೆಂಡ್‌ಗೆ ತೆರಳುವ ಆಲೋಚನೆಯನ್ನೇ ಕೈಬಿಟ್ಟರು. ನಾವು, ನಮ್ಮ ದೇಶ ಎಂಬ ಭಾವನೆ ಅವರೊಳಗೆ ಆಳವಾಗಿ ಬೇರೂರಲು ಆರಂಭವಾಯಿತು. ತಾಯ್ನಾಡಿನ ಶ್ರೇಯೋಭಿವೃದ್ಧಿ ಮಾಡಬೇಕಾದ ಜವಾಬ್ದಾರಿಯ ಅರಿವಾಗತೊಡಗಿತು. ಭಾರತದ ಬಡತನ ಹಾಗೂ ಪ್ರಗತಿಗೆ ವಿಜ್ಞಾನವೇ ಮದ್ದು ಎನಿಸತೊಡಗಿತು.
1944, ಮಾರ್ಚ್ 12ರಂದು ಭಾಭಾ ಮತ್ತೆ ಪತ್ರ ಬರೆದರು. ಆದರೆ ಈ ಬಾರಿ ಅಪ್ಪನ ಬದಲು ಅಂಕಲ್ ಸರ್ ದೊರಾಬ್ಜಿ ಜೆ. ಟಾಟಾ ಟ್ರಸ್ಟ್‌ಗೆ ಪತ್ರ ಬರೆದಿದ್ದರು. ಈ ಬಾರಿ ಬರೆದ ಪತ್ರದಲ್ಲಿ ದೇಶದ ಉಜ್ವಲ ಭವಿಷ್ಯದ ಬಗೆಗಿನ ಕನಸುಗಳೇ ತುಂಬಿದ್ದವು!
"ಈ ಕ್ಷಣದಲ್ಲಿ ಭೌತಶಾಸ್ತ್ರದ ಮೂಲ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುವಂತಹ ಪ್ರಯೋಗಾಲಯಗಳೇ ನಮ್ಮ ದೇಶದಲ್ಲಿಲ್ಲ. ನಮ್ಮಲ್ಲಿ ಸಣ್ಣ ಪುಟ್ಟ ಸಂಶೋಧನೆಗಳು ನಡೆಯುತ್ತಿದ್ದರೂ ಅವು ದೇಶಾದ್ಯಂತ ಹಂಚಿಹೋಗಿವೆ. ಆದರೆ ಎಲ್ಲ ವಿಜ್ಞಾನಿಗಳನ್ನೂ ಒಂದೇ ಸೂರಿನಡಿ ತಂದು ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಇನ್ನು ಒಂದೆರಡು ದಶಕಗಳಲ್ಲಿ ಅಣುಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ವಿನಿಯೋಗಿಸುವಂತಹ ತಂತ್ರಜ್ಞಾನವನ್ನು ರೂಪಿಸುವಲ್ಲಿ ಜಗತ್ತಿನ ವಿಜ್ಞಾನಿಗಳು ಯಶಸ್ವಿಯಾಗಬಹುದು. ಒಂದು ವೇಳೆ, ನಾವು ಉನ್ನತ ಸಂಶೋಧನಾ ಸಂಸ್ಥೆಯೊಂದನ್ನು ತೆರೆದು, ಇಂದಿನಿಂದಲೇ ಕಾರ್ಯಪ್ರವೃತ್ತರಾದರೆ ಮುಂದೆ ಭಾರತ ಪರಿಣತರಿಗಾಗಿ ವಿದೇಶಗಳತ್ತ ಮುಖ ಮಾಡಬೇಕಾದ ಅಗತ್ಯ ಎದುರಾಗುವುದಿಲ್ಲ. ಇತರ ದೇಶಗಳಲ್ಲಿ ಕಂಡುಬರುತ್ತಿರುವ ವೈಜ್ಞಾನಿಕ ಅಭಿವೃದ್ಧಿಯ ಬಗ್ಗೆ ಅರಿವಿರುವ ಯಾರೂ ನಾನು ಪ್ರಸ್ತಾಪಿಸುತ್ತಿರುವ ಸಂಶೋಧನಾ ಸಂಸ್ಥೆಯ ಅಗತ್ಯ ಭಾರತಕ್ಕಿದೆ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ".
1942ರಲ್ಲಿ ಅಮೆರಿಕ ವಿಶ್ವದ ಮೊದಲ ಅಣುಪರೀಕ್ಷೆಯನ್ನು ನಡೆಸಿತ್ತು. ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಣು ಬಾಂಬ್‌ಗಳಿನ್ನೂ ಬಿದ್ದಿರಲಿಲ್ಲ. ಇತ್ತ ಭಾರತಕ್ಕಂತೂ ಸ್ವಾತಂತ್ರ್ಯವೇ ಬಂದಿರಲಿಲ್ಲ. ಅಂತಹ ಸಂದರ್ಭದಲ್ಲೂ ಭಾಭಾ ನಮ್ಮ ದೇಶದ ಭವಿಷ್ಯದ ವೈಜ್ಞಾನಿಕ ಪ್ರಗತಿ ಬಗ್ಗೆ ಯೋಚಿಸುತ್ತಿದ್ದರು. ಈ ದೇಶ ಕಟ್ಟಿದ ಟಾಟಾ ಕಂಪನಿ, ಭಾಭಾ ಅವರ ಆಸೆಗೆ ಕಲ್ಲು ಹಾಕಲಿಲ್ಲ. 1945ರಲ್ಲಿ ಬಾಂಬೆಯಲ್ಲಿ (ಟ್ರಾಂಬೆ) ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸ್ಥಾಪನೆ ಮಾಡಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಹೋಮಿ ಭಾಭಾ,  "Ret‌u‌rn​ t‌o​ T‌r‌om​b​ay​ ‌ret‌u‌rn​ t‌o​ t‌he​ m‌ot‌h​e‌r​land'' ಎಂದು ಕರೆಕೊಟ್ಟರು. ತಾಯ್ನಾಡಿಗೆ ಮರಳಿ ಅಥವಾ ತಾಯ್ನಾಡಲ್ಲೇ ಉಳಿದುಕೊಂಡು, ಯುರೇನಿಯಂ ಸಂಸ್ಕರಣೆ ನಡೆಸುತ್ತಿರುವ ಇತರ ದೇಶಗಳಲ್ಲಿರುವ ಸಂಶೋಧನಾ ಸಂಸ್ಥೆಗಳಿಗೆ ಸಮನಾದ ಸಂಸ್ಥೆಗಳನ್ನು ನಿರ್ಮಾಣ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂಬ ಅವರ ಕರೆಗೆ ಓಗೊಟ್ಟು ದೇಶ, ವಿದೇಶಗಳಿಂದೆಲ್ಲ ಯುವ ಭಾರತೀಯ ವಿಜ್ಞಾನಿಗಳು ಆಗಮಿಸಿದರು. ಪಿ.ಕೆ. ಅಯ್ಯಂಗಾರ್, ಬಿ.ವಿ. ಶ್ರೀಕಂಠನ್ ಮುಂತಾದ ಖ್ಯಾತ ವಿಜ್ಞಾನಿಗಳಿಗೆ ಭಾಭಾ ಕರೆಯೇ ಪ್ರೇರಣೆಯಾಗಿತ್ತು. ಭಾಭಾ ಸ್ವತಃ ವಿಜ್ಞಾನಿಗಳ ಯೋಗಕ್ಷೇವುದ ವ್ಯವಸ್ಥೆ ಮಾಡಿಸಿದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಇಲಾಖೆ(DSIR) ಸ್ಥಾಪನೆ ಮಾಡಬೇಕೆಂದು ಪ್ರಧಾನಿ ನೆಹರು ಮುಂದೆ ಪ್ರಸ್ತಾಪವನ್ನಿಟ್ಟರು, ಭಾರತೀಯ ಅಣುಶಕ್ತಿ ಕಾಯಿದೆಯನ್ನು ಜಾರಿಗೆ ತರಬೇಕೆಂದು ಸಲಹೆ ನೀಡಿದರು. ಎಲ್ಲವೂ ಅವರು ಹೇಳಿದಂತೆಯೇ ಆಯಿತು. 1947ರಲ್ಲಿ ಕಾಯಿದೆ ಬಂತು, 1948ರಲ್ಲಿ ಅಣುಶಕ್ತಿ ಆಯೋಗ ರಚನೆಯಾಯಿತು.
ಇವೇನು ಸಾಮಾನ್ಯ ಸಾಧನೆಗಳಲ್ಲ.
ಅವತ್ತು ಭಾರತ ವಿಶ್ವಸಂಸ್ಥೆಯಿಂದ ಗೋಧಿ ಪಡೆದು ಊಟ ಮಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ಶೀಘ್ರ ಫಲಿತಾಂಶವನ್ನೇ ನೀಡದ ಅಣುವಿಜ್ಞಾನದಂತಹ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಭಾಭಾ ಅವರು ಸಂಸತ್ತಿನ ಮನವೊಲಿಸಿದ್ದು ಅದೆಂತಹ ಸಾಧನೆ ಇರಬಹುದೆಂಬುದನ್ನು ಊಹಿಸಿಕೊಳ್ಳಿ? ಅದರಲ್ಲೂ ಅನ್ನ, ಬಟ್ಟೆ, ವಸತಿ, ಪ್ರಾಥಮಿಕ ಶಿಕ್ಷಣವೇ ಪರಮ ಧ್ಯೇಯವೆಂದುಕೊಂಡಿದ್ದ ಸೋಷಿಯಲಿಸ್ಟ್ ಸರ್ಕಾರದ ಮನವೊಲಿಸುವುದು ಸಾಮಾನ್ಯ ಮಾತೇ? ಎಲ್ಲರನ್ನೂ ಎಸ್ಸೆಸ್ಸೆಲ್ಸಿವರೆಗೂ ಓದಿಸಿ ಅಕ್ಷರಸ್ಥರನ್ನಾಗಿ ಮಾಡುತ್ತೇವೆ ಎಂದಂದುಕೊಂಡಿದ್ದರೆ ಭಾರತ ಲೇಬರ್ ಫ್ಯಾಕ್ಟರಿ ಆಗುತ್ತಿತ್ತು. ಆದರೆ ಭಾಭಾ ಅವರು, ತಾಂತ್ರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಅಗತ್ಯವನ್ನು ಮನಗಂಡು, ಟಾಟಾ ಕಂಪನಿಯ ಸಹಾಯ ಪಡೆದು ಅವುಗಳನ್ನು ಸ್ಥಾಪನೆ ಮಾಡಿದರು, ಸರ್ಕಾರದ ಮನವೊಲಿಸುವ ಮೂಲಕ ಅಂತಹ ಹೆಚ್ಚಿನ ಸಂಸ್ಥೆಗಳು ಹೊರಹೊಮ್ಮಲು ಕಾರಣರಾದರು. ಅದರ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ, 1974ರಲ್ಲಿ ನಡೆಸಿದ ಅಣುಪರೀಕ್ಷೆಯ ಹಿಂದಿರುವ ದೂರದೃಷ್ಟಿ, ಪರಿಶ್ರಮವೂ ಭಾಭಾ ಅವರದ್ದೇ. ಅವರೇ ನಮ್ಮ ದೇಶದ ಅಣುವಿಜ್ಞಾನದ ಪಿತಾಮಹ. ನಮ್ಮ ದೇಶವನ್ನು ಸುರಕ್ಷಿತವಾಗಿಟ್ಟಿರುವ ಅಣುಬಾಂಬ್ ಭಾಭಾ ಪರಿಶ್ರಮದ ಫಲಶ್ರುತಿ. 1955ರಲ್ಲಿ ಜಿನೀವಾದಲ್ಲಿ ನಡೆದ ಅಣುಶಕ್ತಿಯ ಶಾಂತಿಯುತ ಬಳಕೆ ಮೇಲಿನ ವಿಶ್ವಶೃಂಗದ ಅಧ್ಯಕ್ಷರಾಗಿದ್ದ ಹೋಮಿ ಭಾಭಾ, ಭಾರತದಲ್ಲೊಂದು ರಿಯಾಕ್ಟರ್ ನಿರ್ಮಿಸಿಕೊಡುವಂತೆ ಕೆನಡಾಕ್ಕೆ ಮನವಿ ಮಾಡಿಕೊಂಡಿದ್ದರು. ಸ್ಥಳದಲ್ಲಿಯೇ ಕೆನಡಾ ಒಪ್ಪಿಕೊಂಡ ಕಾರಣ, ಕೂಡಲೇ ನೆಹರು ಅವರಿಗೆ ಟೆಲಿಗ್ರಾಂ ಮಾಡಿದ ಭಾಭಾ ಮೂರೇ ದಿನಗಳಲ್ಲಿ ಪ್ರಧಾನಿಯವರ ಒಪ್ಪಿಗೆ ಪಡೆದುಕೊಂಡಿದ್ದರು. ಅವರ ಮಾತಿಗೆ ಅಂತಹ ಬೆಲೆಯಿತ್ತು. ಅದರ ಫಲವೇ ಭಾರತದ ಮೊಟ್ಟಮೊದಲ ಅಣುರಿಯಾಕ್ಟರ್ "ಅಪ್ಸರಾ" ನಿರ್ಮಾಣ.
1974, ಮೇ 18ರಂದು ಮೊದಲ ಅಣು ಪರೀಕ್ಷೆ ನಡೆಸಿದ ಭಾರತ, ಅಣ್ವಸ್ತ್ರ ಹೊಂದಿರುವ ಐದು ರಾಷ್ಟ್ರಗಳ ಪ್ರತಿಷ್ಠಿತ ಸಾಲಿಗೆ ಸೇರಿಕೊಂಡಿತು. ಆದರೆ ವೈಜ್ಞಾನಿಕ ಕ್ಷೇತ್ರದಲ್ಲಿ ಅಮೋಘ ವೈಯಕ್ತಿಕ ಸಾಧನೆಯ ಅವಕಾಶವನ್ನು ಬದಿಗಿಟ್ಟು 1939ರಿಂದ 65ರವರೆಗೂ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ಪರ್ವವನ್ನು ಸೃಷ್ಟಿಸಿದ ಅಣುಶಕ್ತಿಯ ಜನಕ ಭಾಭಾ ಮಾತ್ರ ತಮ್ಮ ಕನಸು ಸಾಕಾರಗೊಳ್ಳುತ್ತಿರುವುದನ್ನು ನೋಡಲು ಇರಲಿಲ್ಲ! ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಭಾಭಾ 1966, ಜನವರಿ 24ರಂದು ಸ್ವಿಜರ್‌ಲೆಂಡ್‌ನ ಮೌಂಟ್ ಬ್ಲಾಂಕ್ ಎಂಬಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ತೀರಿಕೊಂಡಿದ್ದರು. ​ Y‌o‌u​ ‌can​ ‌g‌ive​ a​ new​ d‌i‌re‌ct‌i‌on​ t‌o​ ev​e‌r​yt‌h‌in‌g​ ‌in​ l‌ife,​​ e‌x‌ce​pt​ deat‌h​  ಎನ್ನುತ್ತಿದ್ದ ಭಾಭಾ ಅವರನ್ನು ಐವತ್ತಾರು ವರ್ಷಕ್ಕೇ ಸಾವು ಕಿತ್ತುಕೊಂಡಿತು.
1954ರಲ್ಲಿ ಆರಂಭವಾದ ಭಾರತರತ್ನ ಪುರಸ್ಕಾರವನ್ನು ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಸಾರ್ವಜನಿಕ ಸೇವೆ ಈ ನಾಲ್ಕು ಕ್ಷೇತ್ರಗಳಲ್ಲಿನ ಸಾಧಕರಿಗೆ ಮಾತ್ರ ನೀಡಲಾಗುತ್ತಿತ್ತು.  ಈ ನಿಯಮಕ್ಕೆ 2011ರಲ್ಲಿ ತಿದ್ದುಪಡಿ ತಂದು ಇತರ ಕ್ಷೇತ್ರಗಳ ಸಾಧಕರಿಗೂ, ಅದರಲ್ಲೂ ಸಚಿನ್ ತೆಂಡೂಲ್ಕರ್‌ಗೆ 'ಭಾರತ ರತ್ನ' ನೀಡಲು ಯುಪಿಎ ಸರ್ಕಾರ ಸೂಕ್ತ ತಯಾರಿ ಮಾಡಿಕೊಂಡಿತು. ಸಚಿನ್‌ಗೆ ಭಾರತ ರತ್ನ ಕೊಡಬಾರದೆಂದು ಯಾರೂ ಹೇಳಲು ಸಾಧ್ಯವಿಲ್ಲ. ಆದರೆ ಭಾರತ ಇವತ್ತು ತಾನೊಂದು ಅಣ್ವಸ್ತ್ರ ಹೊಂದಿದ ರಾಷ್ಟ್ರವೆಂದು ಜಗತ್ತಿನೆದುರು ಬೀಗುತ್ತಿದ್ದರೆ, ಅಣ್ವಸ್ತ್ರದಿಂದಾಗಿಯೇ ಭಾರತದ ಘನತೆ ಜಗತ್ತಿನೆದುರು ಹೆಚ್ಚಾಗಿದ್ದರೆ, ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿದ್ದರೆ ಅದಕ್ಕೆ ಮೂಲ ಕಾರಣ ಹೋಮಿ ಜಹಾಂಗೀರ್ ಭಾಭಾ. ಇಂಥ ಅನರ್ಘ್ಯ ರತ್ನಕ್ಕೂ ಭಾರತ ರತ್ನ ಕೊಟ್ಟಿದ್ದರೆ ಪ್ರೊ. ಸಿಎನ್‌ಆರ್ ರಾವ್ ಹಾಗೂ ದೇಶವಾಸಿಗಳ ಖುಷಿ ಇಮ್ಮಡಿಯಾಗುತ್ತಿತ್ತು, ಅಲ್ಲವೆ?

- ಪ್ರತಾಪ್ ಸಿಂಹ
mepratap@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!