ಇಪ್ಪತ್ತು ವರ್ಷಗಳ ಹಿಂದೆಯೂ ಪುಟ್ಟ ಮಕ್ಕಳಿಗೆಲ್ಲ ಅಚ್ಚುಮೆಚ್ಚು ಎಂಬಂತಿದ್ದ ಪತ್ರಿಕೆ ಚಂದಮಾಮ. 72 ಪುಟಗಳ ಆ ಮಾಸಿಕದಲ್ಲಿ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಹಿನ್ನೆಲೆಯ ಕಥೆಗಳಿರುತ್ತಿದ್ದವು. ಪ್ರತಿ ಪುಟದಲ್ಲೂ ಇರುತ್ತಿದ್ದ ಮುದ್ದಾದ ಚಿತ್ರಗಳು ಚಂದಮಾಮದ ಸೊಬಗನ್ನು ಹೆಚ್ಚಿಸಿದ್ದವು. ಆ ಪುಸ್ತಕದ ಅತಿ ಪ್ರಮುಖ ಆಕರ್ಷಣೆಯೆಂದರೆ ಬೇತಾಳ ಕಥೆಗಳು! ಆ ಕಥೆಯನ್ನು ಒಳಗೊಂಡಿದ್ದ ಪುಟದಲ್ಲೇ ಒಂದು ಬೆರಗಿತ್ತು. ಅದು ಹೀಗೆ: ಒಂದು ಸ್ಮಶಾನ. ಅಲ್ಲಿ ಹತ್ತಾರು ಬಿಳಿಲುಗಳಿಂದ ಕೂಡಿದ್ದ ಮರ. ಅದರ ಮಧ್ಯೆ ಮಧ್ಯೆ ಕಾಣುತ್ತಿದ್ದ ತಲೆಬುರುಡೆಗಳು, ಅವುಗಳನ್ನು ದಿವ್ಯ ನಿರ್ಲಕ್ಷ್ಯದಿಂದ ನೋಡುತ್ತ ನಿಂತ ತೇಜಸ್ವಿ ಯುವಕ ವಿಕ್ರಮಾದಿತ್ಯ! ಹೊಳಪು ಕಂಗಳ, ಚೂಪು ಮೀಸೆಯ ಅವನು ಬಿಚ್ಚುಗತ್ತಿಯೊಂದಿಗೆ ಶವವನ್ನು ಹೆಗಲಮೇಲಿರಿಸಿಕೊಂಡು ಸ್ಮಶಾನದತ್ತ ಹೊರಡುತ್ತಿದ್ದ. ಅವನು ಎರಡು ಹೆಜ್ಜೆ ಮುಂದಿಡುವ ಮೊದಲೇ ಅದ್ಯಾವ ಮಾಯದಲ್ಲೋ ಬೇತಾಳವು ಅವನ ಹೆಗಲ ಮೇಲೆ ಕೂತು ಬಿಡುತ್ತಿತ್ತು. ನಂತರ -'ಮಿತ್ರಾ, ಮಾರ್ಗಾಯಾಸ ತಿಳಿಯದಂತಾಗಲು ನಿನಗೆ ಕತೆಯೊಂದನ್ನು ಹೇಳುತ್ತೇನೆ. ಅದನ್ನು ಕೇಳುತ್ತಾ ಮುಂದೆ ಸಾಗು' ಎಂದು ಆರಂಭಿಸಿಯೇ ಬಿಡುತ್ತಿತ್ತು.
ಹೀಗೆ ಶುರುವಾಗುವ ಬೇತಾಳ ಕಥೆಗಳ ಒಂದು ಸ್ಯಾಂಪಲ್ ಇಲ್ಲಿದೆ:
ಒಂದು ಊರಿನಲ್ಲಿ ಅಪಾರ ಪ್ರಾಮಾಣಿಕನೂ, ಧರ್ಮಬೀರುವೂ ಆದ ವ್ಯಕ್ತಿಯೊಬ್ಬನಿದ್ದ. ಅವನ ಪ್ರಾಮಾಣಿಕತೆಯನ್ನು ಯಾರೊಬ್ಬರೂ ಅನುಮಾನಿಸುತ್ತಿರಲಿಲ್ಲ. ಈ ಧರ್ಮಬೀರುವಿನ ನೆರೆ ಮನೆಯಲ್ಲಿದ್ದ ಶ್ರೀಮಂತ, ತೀರ್ಥಯಾತ್ರೆ ಹೊರಡಬೇಕಾಗಿ ಬಂತು. ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಸಂರಕ್ಷಿಸುವುದು ಹೇಗೆ ಎಂದು ಯೋಚಿಸಿದಾಗ, ಶ್ರೀಮಂತನ ಕಣ್ಮುಂದೆ ಸುಳಿದದ್ದು ಧರ್ಮಬೀರುವಿನ ಹೆಸರು. ಆತ ತಕ್ಷಣವೇ ತನ್ನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಒಂದು ಪೆಟ್ಟಿಗೆಯಲ್ಲಿ ತುಂಬಿ, ಅದರೊಂದಿಗೆ ಧರ್ಮಬೀರುವಿನ ಮನೆಗೆ ಬಂದ. ಪೆಟ್ಟಿಗೆಯಲ್ಲಿದ್ದುದ್ದನ್ನು ತೋರಿಸಿ, ನಾನು ಹಿಂದಿರುಗುವವರೆಗೆ ಇವು ನಿಮ್ಮಲ್ಲಿರಲಿ ಎಂದು ವಿನಂತಿಸಿದ. ಈ ಧರ್ಮಬೀರು- ಆ ಅಮೂಲ್ಯ ಆಭರಣಗಳನ್ನು ತುಂಬ ಎಚ್ಚರಿಕೆಯಿಂದ ಕಾಪಾಡುವುದಾಗಿ ದೇವರ ಮೇಲೆ ಪ್ರಮಾಣ ಮಾಡಿದ.
ಈ ಧರ್ಮಬೀರುವಿಗೆ ಒಬ್ಬ ಪುಂಡ ಮಗನಿದ್ದ. ಅವನು, ಶ್ರೀಮಂತ ನೀಡಿದ್ದ ಪೆಟ್ಟಿಗೆಯ ಬೀಗ ಒಡೆದು ಒಂದೊಂದೇ ಒಡವೆಯನ್ನು ಕದ್ದು ಮಾರಿಕೊಂಡ. ಇದನ್ನು ಗಮನಿಸಿದ ಹಳ್ಳಿಯ ಇತರರು, ಈ ವಿಷಯವನ್ನು ಧರ್ಮಬೀರುವಿಗೆ ತಿಳಿಸಿ, ನಿನ್ನ ಮಗನನ್ನು ಹದ್ದುಬಸ್ತಿನಲ್ಲಿಡು ಎಂದರು. ಧರ್ಮಬೀರು, ತಕ್ಷಣವೇ ಮಗನನ್ನು ಕರೆದು-'ಹೀಗೆಲ್ಲಾ ಮಾಡ್ತೀದಿಯಂತೆ. ಹೌದಾ? ಮನೆತನದ ಮರ್ಯಾದೆ ಕೆಡಿಸುವ ಕೆಲಸ ಮಾಡಬೇಡ' ಎಂದು ಎಚ್ಚರಿಸಿದ. ಆಗ ಆ ಪುಂಡ-'ಅಪ್ಪಾ, ಹೊಟ್ಟೆಕಿಚ್ಚಿನಿಂದ ಜನ ಏನೇನೋ ಚಾಡಿ ಹೇಳ್ತಾರೆ. ಅದನ್ನೆಲ್ಲಾ ನೀನು ನಂಬಬೇಡ' ಅನ್ನಲು ಧರ್ಮಬೀರು ಹಾಗೆಯೇ ಮಾಡಿದ. ಮುಂದೆ ಆತ ಮಗನ ಮೇಲೆ ನಿಗಾ ಇಡುವುದನ್ನೇ ಮರೆತ.
ಹೀಗೇ ಎರಡು ವರ್ಷ ಕಳೆದವು. ತೀರ್ಥಯಾತ್ರೆ ಹೋಗಿದ್ದ ಶ್ರೀಮಂತ ಊರಿಗೆ ಹಿಂದಿರುಗಿದ. ಮೊದಲೇ ಮಾತು ಕೊಟ್ಟಿದ್ದಂತೆ, ಆಭರಣಗಳಿದ್ದ ಪೆಟ್ಟಿಗೆಯನ್ನು ಶ್ರೀಮಂತನಿಗೆ ಹಿಂತಿರುಗಿಸಲಾಯಿತು. ಮನೆಗೆ ಹೋಗಿ ಪೆಟ್ಟಿಗೆ ತೆರೆದ ಶ್ರೀಮಂತ ಕಂಗಾಲಾಗಿ ಹೋದ. ಕಾರಣ, ಪೆಟ್ಟಿಗೆಯ ತುಂಬಾ ನಕಲಿ ಆಭರಣಗಳಿದ್ದವು. ಆತ ತಕ್ಷಣವೇ ನ್ಯಾಯಕ್ಕಾಗಿ ಆಗ್ರಹಿಸಿ ರಾಜನಿಗೆ ದೂರು ಕೊಟ್ಟ.
ವಿಚಾರಣೆ ಆರಂಭವಾದಾಗ ಧರ್ಮಬೀರು -'ಮಹಾ ಪ್ರಭೂ, ಈ ಶ್ರೀಮಂತ ಒಡವೆಗಳಿಗೆ ಪೆಟ್ಟಿಗೆಯನ್ನು ನೀಡಿದ್ದು ನಿಜ. ಅವುಗಳನ್ನು ಕಾಪಾಡುವ ಹೊಣೆಯನ್ನು ನಾನು ಹೊತ್ತುಕೊಂಡಿದ್ದೂ ನಿಜ. ಶ್ರೀಮಂತನು ತೀರ್ಥಯಾತ್ರೆಗೆ ಹೋದ ನಂತರ ನನ್ನ ಮಗನ ಮೇಲೆ ಆಭರಣಗಳ ದುರ್ಬಳಕೆಗೆ ಸಂಬಂಧಿಸಿದಂತೆ ದೂರುಗಳು ಬಂದದ್ದೂ ನಿಜ. ಆ ಸಂದರ್ಭದಲ್ಲಿಯೇ ನಾನು ಮಗನನ್ನು ಎಚ್ಚರಿಸಿದೆ. ಆತ, ತಾನು ತಪ್ಪು ಮಾಡಿಲ್ಲ ಎಂದೇ ವಾದಿಸಿದ. ಅವನನ್ನು ನಂಬಿದೆ. ಮುಂದೆ ಶ್ರೀಮಂತ ಮರಳಿ ಬಂದಾಗ, ಆತನ ಆಭರಣಗಳ ಪೆಟ್ಟಿಗೆಯನ್ನು ಹಿಂದಿರುಗಿಸಿದ್ದೇನೆ. ಹಾಗಾಗಿ ನಾನು ನಿರಪರಾಧಿ. ಅಪರಾಧ ಎಸಗಿರುವ ನನ್ನ ಮಗನಿಗೆ ಶಿಕ್ಷೆ ಕೊಡಿ' ಅನ್ನುತ್ತಾನೆ. ಈ ಮಾತುಗಳನ್ನು ಒಪ್ಪುವ ದೊರೆ, ಧರ್ಮಬೀರುವಿನ ಮಗನನ್ನು ಜೈಲಿಗೆ ತಳ್ಳಿ, ಈ ಪ್ರಕರಣ ಮುಗೀತು ಅಂದು ಬಿಡುತ್ತಾನೆ.
ಆಗ ಶ್ರೀಮಂತ, ಸ್ವಾಮೀ, ನನಗೆ ನ್ಯಾಯ ಸಿಕ್ಕಿಲ್ಲ. ನಿಜವಾಗಿ ಶಿಕ್ಷೆ ಆಗಬೇಕಿರುವುದು ಧರ್ಮಬೀರುವಿಗೆ. ಏಕೆಂದರೆ, ಆಭರಣಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತೇನೆಂದು ಆತ ದೇವರ ಹೆಸರಲ್ಲಿ ಆಣೆ ಪ್ರಮಾಣ ಮಾಡಿದ್ದ. ಆತನನ್ನು ನಂಬಿಯೇ ನಾನೀಗ ಪಾಪರ್ ಆಗಿದ್ದೇನೆ. ಈಗ ನೀವು ನೀಡಿರುವ ತೀರ್ಪಿನಿಂದ ನನಗೆ ತೃಪ್ತಿಯಿಲ್ಲ. ಎಲ್ಲ ಅನಾಹುತಕ್ಕೂ ಧರ್ಮಬೀರುವಿನ ನಿರ್ಲಕ್ಷ್ಯವೇ ಕಾರಣ. ಅವನನ್ನು ಶಿಕ್ಷಿಸಿ ಎನ್ನುತ್ತಾನೆ.
ಬೇತಾಳವು ಇಲ್ಲಿಗೆ ಕತೆ ನಿಲ್ಲಿಸಿ ಕೇಳುತ್ತದೆ. 'ಅಯ್ಯಾ ವಿಕ್ರಮಾದಿತ್ಯ, ಮಹಾರಾಜನ ತೀರ್ಪು ಏನಿರುತ್ತದೆ ಎಂದು ಹೇಳು. ಉತ್ತರ ಗೊತ್ತಿದ್ದೂ ನೀನು ಹೇಳದೇ ಹೋದರೆ ನಿನ್ನ ತಲೆ ಸಾವಿರ ಹೋಳಾಗಿ ಸಿಡಿದು ಹೋಗುತ್ತದೆ. ನೆನಪಿರಲಿ!'
ವಿಕ್ರಮಾದಿತ್ಯ ಒಮ್ಮೆ ನಸು ನಕ್ಕು ಹೇಳುತ್ತಾನೆ: 'ಆಭರಣಗಳನ್ನು ಜೋಪಾನ ಮಾಡುವುದಾಗಿ ಮಾತು ಕೊಡುವ ಧರ್ಮಬೀರು ಆನಂತರದಲ್ಲಿ ತನ್ನ ಜವಾಬ್ದಾರಿ ಮರೆಯುತ್ತಾನೆ. ಮಗ ತಪ್ಪು ಮಾಡುತ್ತಿರುವುದು ಗೊತ್ತಾದರೂ ಸುಮ್ಮನಿರುತ್ತಾನೆ. ಆ ಮೂಲಕ ಪರೋಕ್ಷವಾಗಿ ಎಲ್ಲ ಅನಾಹುತಕ್ಕೂ ತಾನೇ ಕಾರಣನಾಗುತ್ತಾನೆ. ಈ ಕಾರಣದಿಂದ ಇಡೀ ಪ್ರಕರಣದಲ್ಲಿ ಧರ್ಮಬೀರುವೇ ಪ್ರಮುಖ ಆರೋಪಿ ಎಂದು ರಾಜನು ತೀರ್ಪು ನೀಡುತ್ತಾನೆ!'
ಈ ಉತ್ತರದಿಂದ ಬೇತಾಳಕ್ಕೆ ಸಮಾಧಾನವಾಯಿತು. ಸ್ಮಶಾನ ಸಮೀಪಿಸುತ್ತಿದ್ದಂತೆಯೇ ಅದು ಕ್ಷಣಾರ್ಧದಲ್ಲಿ ಎತ್ತಲೋ ಹಾರಿಹೋಯಿತು.
----
ಬೇತಾಳ ಕಥೆಗಳು ಮುಗಿಯುತ್ತಿದ್ದುದು ಮತ್ತು ಮುಗಿಯುವುದು ಹೀಗೆ. ಈ ಮೊದಲು, ಆ ಕಥೆಗಳನ್ನು ಓದಿದವರೆಲ್ಲ ಒಂದೆಡೆ ಸೇರಿದಾಗ ಬೇತಾಳ ನಿಜಕ್ಕೂ ಇದೆಯಾ ಎಂದು ಚರ್ಚಿಸುತ್ತಿದ್ದರು. ಪ್ರತಿ ಬಾರಿ ಕತೆ ಓದುವಾಗಲೂ ಈ ಬಾರಿ ಏನಾದರೂ ವಿಕ್ರಮಾದಿತ್ಯನಿಗೆ ಉತ್ತರ ಹೊಳೆಯದೆ ಅವನ ತಲೆ ಸಿಡಿದು ಹೋಗುವುದೇನೋ ಎಂದು ಕಾಯುತ್ತಿದ್ದರು. ಉಹುಂ, ಅಂಥದೊಂದು ಬ್ರೇಕಿಂಗ್ ನ್ಯೂಸ್‌ಗೆ ಆ ಪುಣ್ಯಾತ್ಮ ವಿಕ್ರಮಾದಿತ್ಯ ಅವಕಾಶವನ್ನೇ ಕೊಡಲಿಲ್ಲ.
ಚಂದಮಾಮದ ಹೊಸ ಸಂಚಿಕೆಯನ್ನು ನಿನ್ನೆ ಇಡಿಯಾಗಿ ಓದಿದ ನಂತರ ಇದನ್ನೆಲ್ಲ ಹೇಳಬೇಕು ಅನ್ನಿಸ್ತು.
- ನಾನು ಪ್ರಣತಿ