ಏನ್ ಲಾಲೂ ಪ್ರಸಾದ್ ಅವ್ರೇ, ಪುಣ್ಯಕೋಟಿ ಹೆಸರಲ್ಲಿ ಕೋಟಿ ಕೋಟಿ ತಿಂದ್ರಲ್ಲ, ಈಗೇನಂತೀರಾ?
ಹುಟ್ಟಿಸಿದ್ ದೇವ್ರು ಹುಲ್ಲು ಮೇಯಿಸ್ದೇ ಇರ್ತಾನಾ ಅಂದ್ಕೊಂಡ್ ತಿಂದೆ. ಆದ್ರೆ, ಹಾಲು ಕುಡಿದ ಮಕ್ಕಳು ಬದುಕೋದೇ ಕಷ್ಟ, ಇನ್ನು ಹುಲ್ಲು ತಿನ್ನೋ ಮಕ್ಕಳು ಬದುಕ್ತಾರಾ? ಹುಲ್ಲು ತಿಂದಿದ್ದಕ್ಕೆ ಗಲ್ಲು ಶಿಕ್ಷೆ ಕೊಡಲಿಲ್ಲ ಪುಣ್ಯ. ಜೈಲಲ್ಲಿ ಕಲ್ಲು ಕುಟ್ಟಿದ್ರೆ ಸಾಕು ಅಂದ್ಕೊಂಡಿದೀನಿ.
- ಅಂತೂ ಕೊಟ್ಟಿಗೆಯಲ್ಲೂ ಕೋಟಿ ದುಡೀಬಹುದು ಅಂತ ತೋರಿಸಿ 'ಫಾಡರ್' ಆಫ್ ದಿ ನೇಶನ್' ಅಂತ ಹೆಸರು ಮಾಡಿಬಿಟ್ರಿ. ಸರಿ ನೀವು ಹುಲ್ಲು ದೋಚ್ತಾ ಮೇವಿನ ಹಾಡು ಹಾಡುವಾಗ ನಿಮ್ಮ ಮನೆಯವ್ರು ಎಚ್ಚರಿಕೆ ಕೊಡಲಿಲ್ವಾ?
ಅಯ್ಯೋ, ಅವರೇ ಇದಕ್ಕೆಲ್ಲ ಕುಮ್ಮಕ್ಕು ಕೊಟ್ಟಿದ್ದು..ಹೆಸರೇ 'ರಾಬರಿ' ದೇವಿ..
- ಸರಿ, ಈ ಮೇವು ಹಗರಣದಲ್ಲಿ ನಿಮ್ಮ ಪಾಲಿನ ಒಟ್ಟು 'ಗ್ರಾಸ್' ಕಲೆಕ್ಷನ್ ಎಷ್ಟ್ ಸಿಕ್ಕಿತ್ತು?
ಎಷ್ಟ್ ಸಿಕ್ರೆ ಏನು ಬಂತು. ಹಸು ಎಮ್ಮೆ ವಿಷ್ಯದಲ್ಲಿ 'ಮೇಯೋ' ಹಾಲ್' ನಲ್ಲಿ ಹೋದ ಮಾನ ಆನೆ ಕೊಟ್ರೂ ಬರಲ್ಲ ಬಿಡಿ.
-ಏನೇ ಆದ್ರೂ ನಿಮ್ಮಂಥವ್ರಿಗೆ ಏನು ಕಷ್ಟ ಆಗಲ್ಲ ಬಿಡಿ, ಜೈಲಿಗೂ ಹುಲ್ಲಿನ ಹಾಸಿಗೆ ಮೇಲೆ ನಡೆಸಿಕೊಂಡೇ ಕರ್‌ಕೊಂಡ್ ಹೋಗ್ತಾರೆ ಅಲ್ವಾ?
ರೀ ಸ್ವಾಮಿ..ಇನ್ನೊಂದ್ ಸಲ ಆ ಹುಲ್ಲಿನ್ ಬಗ್ಗೆ ಮಾತ್ರ ದಯವಿಟ್ಟು ಮಾತಾಡ್‌ಬೇಡಿ, ಸಾಕು..
- ಹೋಗ್ಲಿ, ಬಿಹಾರದಲ್ಲಿ ಏಕ'ಮೇವಾ'ಧಿಪತಿ ಅಂದ್ಕೊಂಡಿದ್ದ ನಿಮ್ಮ ಸದ್ಯದ ಪರಿಸ್ಥಿತಿ ನೋಡಿ ಜನ ಏನಂತಿದಾರೆ?
ನನ್ ಹಳೇ ಡೈಲಾಗ್‌ನ ಸ್ವಲ್ಪ ಬದಲಾಯಿಸಿಕೊಂಡು ನನ್ನನ್ನೇ ಆಡ್ಕೊತಿದಾರೆ 'ಜಬ್ ತಕ್ ರಹೇಗಾ ಸಮೋಸೇ ಮೇ ಆಲೂ, ತಬ್ ತಕ್ ರಹೇಗಾ 'ತಿಹಾರ್' ಮೆ ಲಾಲೂ'...
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ದಿನಕ್ಕೊಂದು ಆ್ಯಪ್ ಸಿಗುತ್ತವೆ. ಆದರೆ ಯಾವುದು ಹೇಗಿದೆ ಎಂದು ತಿಳಿದುಕೊಳ್ಳದೆ ಮೊಬೈಲ್‌ನಲ್ಲಿರುವ ಮೆಮೊರಿ ಮತ್ತು ನಿಮ್ಮ ಸಮಯ ಎರಡನ್ನೂ ಹಾಳು ಮಾಡಿಕೊಳ್ಳುವುದರ ಬದಲು ಇಲ್ಲಿರುವ ಕೆಲವು ವೆಬ್‌ಸೈಟ್‌ಗಳನ್ನು ನೋಡಿದರೆ ಅಲ್ಲಿ ಅತ್ಯುತ್ತಮ ಮತ್ತು ಇತ್ತೀಚಿಗೆ ಬಿಡುಗಡೆಯಾದ ಕೆಲವು ಹೊಸ ಅಪ್ಲಿಕೇಶನ್‌ಗಳ ಬಗ್ಗೆ ತಿಳಿದುಕೊಳ್ಳಬಹುದು.
bit.ly/15Sggno
cnet.co/JIBZYf
bit.ly/15yMeVJ
bit.ly/U13osk
bit.ly/nLcT2T
ಹರಿ-ಕಥೆ
ಒಬ್ಬ ಪೊಲೀಸ್ ಆಫೀಸರ್ ಹಳ್ಳಿಯಲ್ಲಿದ್ದ ಖೇಮುವಿನ ಮನೆಗೆ ಹೋದ. ಖೇಮುವನ್ನು ಕರೆದು 'ನಾನು ಪೊಲೀಸ್ ಆಫೀಸರ್. ನಿಮ್ಮ ಹೊಲದಲ್ಲಿ ಗಾಂಜಾ ಬೆಳಿತಾ ಇದ್ದೀರ ಅಂತ ನಮಗೆ ದೂರು ಬಂದಿದೆ. ಚೆಕ್ ಮಾಡ್‌ಬೇಕು' ಅಂದ. ಖೇಮು ಪೊಲೀಸ್ ಆಫೀಸರ್‌ನನ್ನು ಕರೆದುಕೊಂಡು ತನ್ನ ವಿಶಾಲವಾದ ಹೊಲಕ್ಕೆ ಕರೆದುಕೊಂಡು ಹೋಗಿ 'ಸರಿ ಅದೇನ್ ಬೇಕೋ ಚೆಕ್ ಮಾಡಿ ಸರ್. ಆದ್ರೆ ದಯವಿಟ್ಟು ಹೊಲದ ಕೊನೆಯಲ್ಲಿರೋ ಹಳ್ಳದ ಕಡೆಗೆ ಮಾತ್ರ ಹೋಗಬೇಡಿ' ಅಂದ. ಪೊಲೀಸ್ ಆಫೀಸರ್ ಕಳ್ಳ ಸಿಕ್ಕಾಕ್ಕೊಂಡ ಎನ್ನುವ ಹುಮ್ಮಸ್ಸಿನಲ್ಲಿ, 'ನಂಗೆ ಅಲ್ಲಿಗೆ ಹೋಗ್‌ಬೇಡ, ಇಲ್ಲಿಗೆ ಹೋಗ್‌ಬೇಡ ಅಂತ ಹೇಳೋಕೆ ನೀನ್ಯಾರೋ. ನಾನು ಪೊಲೀಸ್ ಆಫೀಸರ್, ಇಲ್ ನೋಡು ನನ್ನ ಐಡೆಂಟಿಟಿ ಕಾರ್ಡ್. ನಂಗೆ ಎಲ್ಲಿಗ್ ಬೇಕಾದ್ರೂ ಹೋಗೋಕೆ ಅಧಿಕಾರ ಇದೆ. ಯಾರೂ ದೂಸ್‌ರಾ ಮಾತಾಡಂಗಿಲ್ಲ' ಎಂದು ಅಬ್ಬರಿಸಿದ. ತಪ್ಪಾಯ್ತು ಸರ್ ಎಂದ ಖೇಮು 'ಹೋಗಿ ಎಲ್ ಬೇಕಾದ್ರೂ ಚೆಕ್ ಮಾಡ್ಕೊಳಿ' ಅಂತ ಕಳಿಸಿದ. ಸ್ವಲ್ಪ ಹೊತ್ತು ಕಳೆದ ಮೇಲೆ ಆ ಪೊಲೀಸ್ ಆಫೀಸರ್ ಹೋದ ದಾರಿಯಲ್ಲಿ ಒಂದೇ ಉಸಿರಲ್ಲಿ ಓಡ್ತಾ ವಾಪಸ್ ಬರ್ತಾ ಇದ್ದ. ಆ ರಸ್ತೆ ಪಕ್ಕದ ಮೇಲಿನ ದಿನ್ನೆ ಮೇಲೆ ಕೂತಿದ್ದ ಖೇಮುವನ್ನು ನೋಡಿ, 'ಅಯ್ಯೋ ಕೊನೇಲಿರೋ ಆ ಹಳ್ಳದ ಕಡೆಗೆ ಹೋಗಿದ್ದೆ, ಅಲ್ಲಿದ್ದ ಭಯಂಕರ ಗೂಳಿ ನನ್ನ ಅಟ್ಟಿಸಿಕೊಂಡ್ ಬರ್ತಿದೆ. ಪ್ಲೀಸ್ ಹೆಲ್ಪ್ ಮಾಡು' ಅಂತ ಅಂಗಲಾಚಿಕೊಂಡ. ಅದಕ್ಕೆ ಖೇಮು ದಿನ್ನೆಯ ಮೇಲಿಂದನೇ ಕೂಗಿ ಹೇಳಿದ 'ಸಾರ್, ನೀವು ಪೊಲೀಸ್ ಆಫೀಸರ್ ಅಂತ ಗೂಳಿಗೆ ಗೊತ್ತಿಲ್ಲ ಅನ್ಸುತ್ತೆ, ನಿಮ್ಮತ್ರ ಐಡಿ ಕಾರ್ಡ್ ಇದ್ಯಲ್ಲ ಅದನ್ನ ತೋರ್ಸಿ, ಬೇಗ ತೋರ್ಸಿ..'
ಸ್ಕ್ಯಾಂಡಲ್‌ವುಡ್
'ಯಾರು ಏನೇ ಅನ್ಲಿ, ಜನ ಥಿಯೇಟರ್‌ಗೆ ಬರ್ತಿದಾರೆ. ನಮ್ ಸಿನಿಮಾ ನೋಡ್ತಿದಾರೆ. ದೊಡ್‌ದಾದರೇನಂತೆ ನಷ್ಟವಿಲ್ಲ' ಎನ್ನುತ್ತಾ 'ಸಿನಿಮಾದ ಅವಧಿ ಜಾಸ್ತಿ ಆಯ್ತು' ಎಂದವರಿಗೆ ಉತ್ತರ ಕೊಟ್ಟಿದ್ದ ಬೃಂದಾವನ ಚಿತ್ರತಂಡ ಅದ್ಯಾಕೋ ಈಗ ಉಲ್ಟಾ ಹೊಡೆದಿದೆ. ಮೂರು ಗಂಟೆಯ ಅವಧಿ ಇದ್ದ ಬೃಂದಾವನ ಚಿತ್ರಕ್ಕೆ ಕತ್ತರಿ ಬಿದ್ದಿದೆ. ಹಂಗಂತ ಥಿಯೇಟರ್‌ಗೆ ಜನ ಬರದೆ, ಚಿತ್ರದ ಕಲೆಕ್ಷನ್‌ಗೆ ಕತ್ತರಿ ಬಿದ್ದಿದೆ ಎಂದೇನೂ ಅರ್ಥವಲ್ಲ ಬಿಡಿ. ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ 'ನಮ್ಮ ಸಿನಿಮಾದ ನಡುವೆ ಒಂದಷ್ಟು ಬೇರೆ ಸಿನಿಮಾಗಳ ಟ್ರೈಲರ್ ಪ್ರದರ್ಶನ ಆಗ್ತಾ ಇದೆ. ಹಾಗಾಗಿ ಪ್ರೇಕ್ಷಕರಿಗೆ ಸಿನಿಮಾ ದೊಡ್ಡದಾಗಿದೆ ಎನಿಸಬಹುದು ಅಷ್ಟೆ' ಎಂದು ಸಮಜಾಯಿಷಿ ನೀಡಿದ್ದ ಚಿತ್ರತಂಡ ಈಗ ಚಿತ್ರದ ಹದಿನೈದು ನಿಮಿಷಗಳ ಭಾಗವನ್ನು ಕತ್ತರಿಸಿ ಅವಧಿಯನ್ನು ಎರಡೂಮುಕ್ಕಾಲು ಗಂಟೆಗೆ ಇಳಿಸಿದೆ. ಅದೇ ಪತ್ರಿಕಾಗೋಷ್ಠಿಯಲ್ಲಿ 'ನಮ್ ಬೃಂದಾವನ ಪಿಕ್ಚರ್ ಬುಲ್‌ಬುಲ್‌ಗಿಂತ ಒಂದ್ ಸ್ಟೆಪ್ ಜಾಸ್ತಿ ಇದೆ' ಎಂದು ಚಿತ್ರತಂಡ ಹೇಳಿಕೊಂಡಿದ್ದನ್ನು ಕೇಳಿ, ಅವರು ಪಿಕ್ಚರ್ ಬಗ್ಗೆ ಹೇಳ್ತಿದಾರಾ, ಪಿಕ್ಚರ್ ಕಲೆಕ್ಷನ್ ಬಗ್ಗೆ ಹೇಳ್ತಿದಾರಾ, ಅಥವಾ ಪಿಕ್ಚರ್‌ನ ಅವಧಿಯ ಬಗ್ಗೆ ಹೇಳ್ತಿದ್ದಾರಾ ಎಂದು ಗೊಂದಲಕ್ಕೊಳಗಾದವರಿಗೆ ಈಗಲಾದರೂ ಒಂದು ಕ್ಲಿಯರ್ ಪಿಕ್ಚರ್ ಸಿಕ್ಕಿದೆ ಎನ್ನಬಹುದು.
ಡಬ್ಕುಡಬಲ್ ತುದಾಂಡಲ್...
ಸಿಕ್ಕ ಸಿಕ್ಕ ವಸ್ತುಗಳಿಗೆಲ್ಲ ಡೆಮೋ ತೋರಿಸಿ ಅಂತ ಕೇಳುವ ವ್ಯವಸ್ಥೆ
'ಡೆಮೋ'ಕ್ರಸಿ
ನಮಗೆ ವಯಸ್ಸಾಗಿದೆ ಅಂತ ಗೊತ್ತಾಗೋದು ಯಾವಾಗ?
-ಹೊರಗೆ ಸುತ್ತಾಡಬೇಕು ಅನ್ನೋ ಆಸೆಗಿಂತ ಸೇಫ್ ಆಗಿ ಮನೆ ತಲುಪಿದರೆ ಸಾಕಪ್ಪಾ ಅನ್ನಿಸಿದಾಗ.
-ಏನು? ಯಾವಾಗ? ಅನ್ನೋ ಪದಗಳನ್ನು ನೀವು ಹೆಚ್ಚಾಗಿ ಬಳಸ್ತಿದ್ದೀರಾ ಅಂದಾಗ.
-ಪ್ರಪಂಚದಲ್ಲಿ ಸೌಂಡ್ ಪಲ್ಯೂಷನ್ ಕಡಿಮೆ ಆಗಿದೆ ಅನ್ನಿಸಿದಾಗ.
ನೀವು ಆಗಾಗ ಮೊಬೈಲ್ ಕಳೆದುಕೊಳ್ಳುತ್ತಿದ್ದರೆ
ಮುಂದಿನ ಬಾರಿ ಅತಿ ದುಬಾರಿ ಮೊಬೈಲ್ ಕೊಂಡುಕೊಳ್ಳಿ
ದುರದೃಷ್ಟದ ಪರಮಾವಧಿ
ಆ್ಯಂಬುಲೆನ್ಸ್‌ನಿಂದಲೇ ಆ್ಯಕ್ಸಿಡೆಂಟ್ ಆಗೋದು
ದೇವರಿಗೂ ಸಚಿನ್ ತೆಂಡೂಲ್ಕರ್‌ಗೂ ಏನು ವ್ಯತ್ಯಾಸ?
ದೇವರ ಅಭಿಮಾನಿಗಳು ಅವನನ್ನ 'ಸಚಿನ್
ತೆಂಡೂಲ್ಕರ್' ಅಂತ ಕರೆಯೊಲ್ಲ.
ಡಾಕ್ಟರ್ ಒಬ್ಬರ ಕಾರ್ ಅನ್ನು ಸರ್ವೀಸ್ ಮಾಡಿದ ಮೆಕ್ಯಾನಿಕ್ ಕೇಳಿದ 'ಅಲ್ಲ ಡಾಕ್ಟ್ರೇ ನೀವು ಮಾಡೋ ಕೆಲಸನೇ ನಾವೂ ಮಾಡ್ತೀವಿ. ಈಗ ನಿಮ್ಮ ಕಣ್‌ಮುಂದೆನೇ ನಿಮ್ಮ ಕಾರಿನ ಹಾರ್ಟು, ಬ್ರೈನು, ಕಿಡ್ನಿ ಎಲ್ಲ ತೆಗೆದು ಕ್ಲೀನ್ ಮಾಡಿ ಕೊಟ್ಟಿದ್ದೇನೆ. ನೀವೂ ರೋಗಿಗಳ ದೇಹಕ್ಕೆ ಇದನ್ನೇ ಅಲ್ವೇ ಮಾಡೋದು. ಆದ್ರೂ ನಮಗೆ ಕಡಿಮೆ ದುಡ್ಡು, ನಿಮಗೆ ಜಾಸ್ತಿ ದುಡ್ಡು ಯಾಕೆ?'. ಅದಕ್ಕೆ ಡಾಕ್ಟರ್ ಹೇಳಿದ 'ಸರಿ ಇಷ್ಟೊತ್ತು ಮಾಡಿದ್ಯಲ್ಲ ಅದನ್ನೆಲ್ಲ ಎಂಜಿನ್ ರನ್ನಿಂಗ್‌ನಲ್ಲಿ ಇರುವಾಗ ಮಾಡು ನೋಡೋಣ'.
ಹರಿ
harikannadaprabha@gmail.com