ಅಂಕಣಗಳು

ಪಾಕ್ ಪಿಎಂ ಕಾಲಿಂಗ್ ಅವರ್ ಪಿಎಂ 'ಹಳ್ಳಿ ಹೆಂಗ್ಸು'!

ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಕಳೆದ ವಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಬರಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮೈಸೂರಿಗೆ ಬಂದಿದ್ದರು. ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಅವರಿಗೆ ಪತ್ರಕರ್ತರು ಮುಖಾಮುಖಿಯಾದರು. ಆಗ ಒಬ್ಬ ಪತ್ರಕರ್ತ, ಸಾರ್ ಒಂದ್ನಿಮಿಷ. ಪ್ರಧಾನಿ ಅವರನ್ನು ಪಾಕಿಸ್ತಾನ ಪ್ರಧಾನಿ 'ಹಳ್ಳಿ ಹೆಂಗಸು' ಎಂದು ಕರೆದಿದ್ದಾರಲ್ಲಾ ಎಂದು ಕನ್ನಡದಲ್ಲಿ ಪ್ರಶ್ನಿಸುತ್ತಿದ್ದಂತೆಯೇ ದಿಗ್ವಿಜಯ ಸಿಂಗ್, ಐ ಡೋಂಟ್ ನೋ ಕನ್ನಡ ಎಂದರು. ಆಗ ಆ ಪತ್ರಕರ್ತ ತಮ್ಮ ಇಂಗ್ಲಿಷ್ ಜ್ಞಾನ ಪ್ರದರ್ಶಿಸಲು ಮುಂದಾಗಿ, ಪಾಕ್ ಪಿಎಂ ಕಾಲಿಂಗ್ ಅವರ್ ಪಿಎಂ 'ಹಳ್ಳಿ ಹೆಂಗ್ಸು' ಅಂದ್ರು. ದಿಗ್ವಿಜಯ ಸಿಂಗ್‌ಗೆ ತಲೆಬುಡ ಅರ್ಥವಾಗಲಿಲ್ಲ. ಆಗ ಪಕ್ಕದಲ್ಲಿದ್ದ ಸಿಎಂ ಸಿದ್ದರಾಮಯ್ಯ, ನರೇಂದ್ರ ಮೋದಿ ಕಾಲ್ಡ್ ಪ್ರೈಮಿನಿಸ್ಟರ್ ಮನಮೋಹನ ಸಿಂಗ್ ಹ್ಯಾಸ್ ವಿಲೇಜ್ ವುಮನ್ ಅಂತಾ ತರ್ಜುಮೆ ಮಾಡಿದ್ರು. ಹಾಗೂ ಹೀಗೂ ಪ್ರಶ್ನೆ ಅರ್ಥ ಮಾಡಿಕೊಂಡ ದಿಗ್ವಿಜಯ ಸಿಂಗ್, ದಿಸ್ ಈಸ್ ಫಿಗ್ಮೆಂಟ್ ಆಫ್ ಇಮ್ಯಾಜಿನೇಷನ್ ಅಂತಾ ಪ್ರತಿಕ್ರಿಯೆ ಕೊಟ್ರು. ಪಾಕ್ ಪ್ರಧಾನಿ ನವಾಜ್ ಷರೀಫ್ ನಮ್ಮ ಪ್ರಧಾನಿ ಡಾ. ಮನಮೋಹನಸಿಂಗ್ ಅವರನ್ನು ಹಳ್ಳಿ ಹೆಂಗ್ಸು ಅಂತಾ ಕರೆದಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಾರೆ ಎಂದು ನರೇಂದ್ರ ಮೋದಿ ಅವರು ದೆಹಲಿಯ ಬಿಜೆಪಿ ರ್ಯಾಲಿಯಲ್ಲಿ ಹೇಳಿದ್ದರು. ಒಟ್ಟಾರೆ ಅವರವರ ಭಾವಕ್ಕೆ ತಕ್ಕಂತೆ ಅರ್ಥ ಮಾಡಿಕೊಂಡು ಪ್ರಶ್ನೆ ಕೇಳಿದ್ದು, ತರ್ಜುಮೆ  ಮಾಡಿದ್ದು ಹಾಗೂ ಉತ್ತರ ಕೊಟ್ಟಿದ್ದು 'ಟಾಕ್ ಆಫ್ ದಿ ಟೌನ್‌' ಆಗಿದೆ.

ಬಿಗ್ ಟಿಕೆಟ್ ಜನರ ಕಾರ್ಯಕ್ರಮ ನೋಡಲು ಉಚಿತ ಪ್ರವೇಶ
ಮೈಸೂರಿನಲ್ಲಿ ದಸರಾ ಮಹೋತ್ಸವ ಆರಂಭವಾಗಿದೆ. ಯುವ ದಸರೆಗೆ ಖ್ಯಾತನಾಮ ಕಲಾವಿದರನ್ನು ಕರೆಸಲಾಗುತ್ತಿದೆ. ಹೀಗಾಗಿ ಯುವ ದಸರಾ ಉಪ ಸಮಿತಿಯ ಪ್ರಮುಖರೊಬ್ಬರನ್ನು ಇಂಗ್ಲಿಷ್ ಪತ್ರಿಕೆಯ ವರದಿಗಾರರೊಬ್ಬರು ಸಂಪರ್ಕಿಸಿ, ಏನ್ ಮೇಡಂ, ಈ ಬಾರಿ ಎಲ್ಲಾ ಬಿಗ್ ಟಿಕೆಟ್ ಜನರನ್ನೇ ಕರೆಯುತ್ತಿದ್ದೀರಿ ಎಂದು ಕೇಳಿದರು. ಅವರಿಗೆ ದುಬಾರಿ ಸಂಭಾವನೆ ಪಡೆಯುವ ಜನಾಕರ್ಷಣೆಯ ವ್ಯಕ್ತಿಗಳಿಗೆ ಬಿಗ್ ಟಿಕೆಟ್ ಜನ ಎನ್ನುತ್ತಾರೆ ಎಂಬುದು ಗೊತ್ತಿರಲಿಲ್ಲ. ಹೀಗಾಗಿ ಅವರು ಹೇಳಿದ್ದು ಏನು ಗೊತ್ತೆ? 'ಇಲ್ಲ ಸಾರ್, ಯುವ ದಸರೆಗೆ ಯಾವುದೇ ಟಿಕೆಟ್ ಇಲ್ಲ. ಎಲ್ಲಾ ಫ್ರೀ ಸಾರ್, ಯಾರ್ ಬೇಕಾದ್ರು ಬರಬಹುದು' ಎಂದಾಗ ಆ ಪತ್ರಕರ್ತ ಸುಸ್ತು.

ಖಾದರ್ ಕಚೇರಿಗೆ 4 ನರ್ಸ್ ಬೇಕಂತೆ!
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ತಮ್ಮ ಕಚೇರಿಗೆ ನಾಲ್ವರು ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ. ಅವರಿಗೇನೂ ಅಂತಾ ಅನಾರೋಗ್ಯ ಬಂತು ಎಂದು ಚಿಂತೆ ಮಾಡಬೇಡಿ. ಸರ್ಕಾರದ ನೀತಿಗೆ ಬೇಸತ್ತು ಅವರು ಕಂಡುಕೊಂಡ ಹೊಸ ಐಡಿಯಾ ಇದು! ಮಂಗಳೂರಲ್ಲಿ ಇತ್ತೀಚೆಗೆ ದಾದಿಯರ ಸಮ್ಮೇಳನ ಆಯೋಜಿಸಲಾಗಿತ್ತು. ಆಗ ಮಾತಿಗೆ ನಿಂತ ಖಾದರ್ ಅವರು ನಾಲ್ವರು ನರ್ಸ್‌ಗಳನ್ನು ನನ್ನ ಕಚೇರಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದರು. ಅದ್ಯಾಕೆ ಸ್ವಾಮಿ ಎಂದು ಪತ್ರಕರ್ತರೊಬ್ಬರು ಕುತೂಹಲದಿಂದ ಕೇಳಿದರು. ಆಗ ಖಾದರ್ ಸಾಹೇಬರು, 'ನೋಡಿ ಸ್ವಾಮಿ ಆಸ್ಪತ್ರೆಗೆ ನರ್ಸ್ ಕೊರತೆ ಇದೆ ಎಂದು ಹೇಳಿದರೆ ನೇಮಕ ಆಗುತ್ತಿಲ್ಲ. ಆದರೆ ನಮ್ಮ ಕಚೇರಿಗೆ ಬೇಕು ಎಂದು ಹೇಳಿದರೆ ತಕ್ಷಣ ಮಂಜೂರಾಗುತ್ತದೆ. ಹೀಗಾಗಿ ಆರೋಗ್ಯ ಸಚಿವರ ಕಚೇರಿಗೆ ಎಂದು ನಾಲ್ವರು ನರ್ಸ್‌ಗಳನ್ನು ನೇಮಿಸಿ ಬಳಿಕ ಆಸ್ಪತ್ರೆ ಡ್ಯೂಟಿಗೆ ಕಳುಹಿಸುತ್ತೇನೆ' ಎಂದರು!

ಮೈಕ್‌ನಲ್ಲಿ ಉಪನ್ಯಾಸಕರ ಗೊರಕೆ ಸದ್ದು ರಿಬೌಂಡ್!

ಕೆನರಾ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗಳಿಗೆ ಕಾಲೇಜು ಮುಗಿದ ಬಳಿಕ ಉದ್ಯೋಗ ಗಿಟ್ಟಿಸಿಕೊಳ್ಳುವಾಗ ಎದುರಾಗುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬ ಬಗ್ಗೆ ತರಬೇತಿ ನೀಡುತ್ತಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಪ್ರಾಯೋಗಿಕವಾಗಿ ಸಂದರ್ಶನ ನಡೆಸಲು ನಿರ್ಧರಿಸಿದರು. ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ಸಮರ್ಥವಾಗಿ ತೋರಿಸುವುದು ಉಪನ್ಯಾಸಕರ ಉದ್ದೇಶವಾಗಿತ್ತು. ಸಂದರ್ಶನದಲ್ಲಿ ಉಪನ್ಯಾಸಕರೇ ಉದ್ಯೋಗ ಆಕಾಂಕ್ಷಿ, ವಿದ್ಯಾರ್ಥಿಗಳೇ ಸಂದರ್ಶಕರು. ನಿಮ್ಮ ಜೀವನದಲ್ಲಿ ಅತ್ಯಂತ ನಾಚಿಕೆ ಪಟ್ಟ ಸಂಗತಿ ಯಾವುದು ಎಂದು ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಪ್ರಶ್ನೆ ಕೇಳಿದರು. ಉದ್ಯೋಗ ಸಿಕ್ಕಿದ ಆರಂಭ, ವಿಶೇಷ ಪ್ರಬಂಧ ಮಂಡನೆಗೆ ವಿದೇಶಕ್ಕೆ ಹೋಗಿದ್ದೆ. ಅಲ್ಲಿ ಸಂಪೂರ್ಣ ಹವಾನಿಯಂತ್ರಿತ ಹಾಲ್‌ನಲ್ಲಿ ಸೆಮಿನಾರ್. ನಿದ್ದೆ ಬಂದದ್ದೇ ಗೊತ್ತಾಗಿರಲಿಲ್ಲ. ನಿದ್ದೆ ಮಧ್ಯೆ ಏನೋ ಗೊರ, ಗೊರ ಸದ್ದು ಕಿವಿಗೆ ಹೊಡೆಯುತ್ತಿತ್ತು. ರಗಳೆಯಾಗಿ ಕಣ್ಣು ಬಿಟ್ಟಾಗ ಮುಖ್ಯ ಭಾಷಣಕಾರರು ಕೆಳಗಿಳಿದು ಬಂದು ನನ್ನ ಬಾಯಿ ಮುಂದೆ ಮೈಕ್ ಹಿಡಿದು ನಿಂತಿದ್ದರು. ನನ್ನದೇ ಗೊರಕೆ ಸದ್ದು ಧ್ವನಿವರ್ಧಕದಲ್ಲಿ ರಿಬೌಂಡ್ ಆಗುತ್ತಿತ್ತು! ಅಂದೇ ಕೊನೆ ಮತ್ತೆ ನಾವು ಯಾವುದೇ ಸಮಾರಂಭದಲ್ಲಿ ನಿದ್ದೆ ಮಾಡಿಲ್ಲ. ಕ್ಲಾಸಿನಲ್ಲಿ ನಗೆಗಡಲು!

ಸಂಸದರು ಬೆಂಡೆತ್ತುವಾಗ ಡಿಸಿ ಅಣ್ಣಯ್ಯ.. ಅಣ್ಣಯ್ಯ ಅಂತಿದ್ರು!
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ನೂತನ ಸಂಸದ ಡಿ.ಕೆ .ಸುರೇಶ್ ರಾಮನಗರದಲ್ಲಿ ಕೇಂದ್ರ ಸರ್ಕಾರದ ಅನುದಾನಗಳ ಬಳಕೆಯ ಬಗ್ಗೆ ತ್ರೈಮಾಸಿಕ ಸಭೆಯಲ್ಲಿ ಗರಂ ಆಗಿದ್ದರು. ಕೃಷಿ ಇಲಾಖೆಯಲ್ಲಿ ನರೇಗಾ ಅನುದಾನ ಬಳಕೆ ಆಗದ ಬಗ್ಗೆ ಆ ಇಲಾಖೆ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈ ಹಂತದಲ್ಲಿ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಅವರು ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಅಣ್ಣಯ್ಯ... ಅಣ್ಣಯ್ಯ ಎಂದು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಡಿಸಿ ಕಡೆ ತಿರುಗಿದ ಸಂಸದರು ನಾನು ಅವರನ್ನು ಲೆಫ್ಟ್- ರೈಟ್ ಮಾಡ್ತಿದೀನಿ. ನೀವೇನು ಅಣ್ಣಯ್ಯ, ಅಣ್ಣಯ್ಯ ಅಂತ ಪ್ರೀತಿ ತೋರ್ತಿದ್ದೀರಲ್ಲಾ ಅಂದ್ರು. ಇಲ್ಲಾ ಸರ್ ಅವ್ರ ಹೆಸರೇ ಅಣ್ಣಯ್ಯ. ನಾನು ಹೆಸರಿಡಿದು ಮಾತ್ನಾಡ್ತಿದ್ದೇನಷ್ಟೇ ಎಂದು ಜಿಲ್ಲಾಧಿಕಾರಿ ಸಮಜಾಯಿಷಿ ನೀಡಿದ್ರು. ಅಷ್ಟರಲ್ಲಾಗಲೇ ನರೇಗಾ ಅನುದಾನ ಬಳಕೆಯಲ್ಲಾದ ವೈಫಲ್ಯದ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಸಹಿತ ಬಹುತೇಕ ಅಧಿಕಾರಿಗಳಿಗೆ ಸಂಸದರು ಚಾಟಿ ಬೀಸಿದ್ದರಿಂದ ನಗುವಿನ ಸನ್ನಿವೇಶವಾದ್ರೂ ಯಾವೊಬ್ಬ ಅಧಿಕಾರಿ ಮುಖದಲ್ಲೂ ನಗೆ ಮೂಡಲಿಲ್ಲ.

- ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!