ಕಳೆದ ವಾರ ನೊಬೆಲ್ ವಾರ. ಸೋಮವಾರದಿಂದ ಶುಕ್ರವಾರದವರೆಗೆ, ಮತ್ತೆ ನಂತರದ ಸೋಮವಾರ ನಾನಾ ಕ್ಷೇತ್ರಗಳ ಉನ್ನತ ಸಾಧಕರಿಗೆ ಅತಿ ನಿರೀಕ್ಷಿತ ನೊಬೆಲ್ ಪ್ರಶಸ್ತಿ ನಿಯಮಿತವಾಗಿ ಘೋಷಣೆಯಾಗುತ್ತದೆ. ಈ ಬಾರಿ ಭೌತಶಾಸ್ತ್ರ ಕುರಿತಾದ ನೊಬೆಲ್ ಪ್ರಶಸ್ತಿ ಯಾರ ಪಾಲಾಗಬಹುದು ಎಂಬ ಕುತೂಹಲ ಇತ್ತು. ಜೊತೆಗೆ ಒಂದು ನಿರೀಕ್ಷೆಯೂ ಇತ್ತು. ಕೊನೆಗೂ ನಾರ್ವೆಯ ಪ್ರಶಸ್ತಿ ಸಮಿತಿ ಪ್ರಶಸ್ತಿ ಘೋಷಿಸಿದಾಗ ನಿರೀಕ್ಷೆ ಹುಸಿಯಾಗಲಿಲ್ಲ. ಭೂಮಿಯ ಹುಟ್ಟಿನ ರಹಸ್ಯ ಭೇದಿಸುವ ನಿಟ್ಟಿನಲ್ಲಿ ಸಾಕಷ್ಟು ಉಪಯೋಗವಾಗಬಲ್ಲ ಸಂಶೋಧನೆ ಭಾರೀ ಪ್ರಚಾರದ ನಡುವೆ ಕಳೆದ ವರ್ಷ ಯಶಸ್ವಿಯಾದಾಗಲೇ ಅದಕ್ಕೆ ನೊಬೆಲ್ ಗರಿ ಸಿಗಬಹುದು ಎಂಬ ಎಣಿಕೆ ಇತ್ತು. ಅದರಂತೆ ಈ ಬಾರಿ ಫ್ರಾಂಕೊ ಎಂಗ್ಲರ್ಟ್ ಮತ್ತು ಪೀಟರ್ ಹಿಗ್ಸ್ ಎಂಬ ಇಬ್ಬರು ಭೌತ ವಿಜ್ಞಾನಿಗಳಿಗೆ ನೊಬೆಲ್ ಗರಿ ಲಭಿಸಿತು. ಇವರು ಸಂಶೋಧಿಸಿದ್ದಾದರೂ ಏನು? ದೇವಕಣ! (GOD PARTICLE). ಭೂಮಿಯ ಹುಟ್ಟಿನ ಬಗೆಗೆ ವಿಜ್ಞಾನ ಖಚಿತವಾಗಿ ಏನೂ ಹೇಳಲಾಗದೆ ಒಂದು ರೀತಿ ಅರ್ಧ ಸತ್ಯದಂತೆ ಕಾಣುತ್ತಿದ್ದಾಗ ಕಳೆದ ವರ್ಷ ನಡೆದ ಪ್ರಯೋಗ ಹೊಸ ದಾರಿ ತೋರಿಸಿತು. ಹಲವಾರು ವರ್ಷಗಳಿಂದ ಬರೀ ಯೋಜನೆಯ ಹಂತದಲ್ಲಿಯೇ ಇದ್ದ ಈ ಪ್ರಯೋಗ ಕಳೆದ ದಶಕದಲ್ಲಿ ಚುರುಕು ಪಡೆದುಕೊಂಡು ಕೊನೆಗೂ ಜಿನೆವಾ ಸಮೀಪ ಆಲ್ಪ್ಸ್ ಬೆಟ್ಟದ ತಪ್ಪಲಲ್ಲಿ ಐರೋಪ್ಯ ಅಣು ಸಂಶೋಧನಾ ಸಂಸ್ಥೆ (CERN) ನಡೆಸಿದ ಸಂಶೋಧನೆಯಲ್ಲಿ ಈ ಪರಮಾಣು ಪತ್ತೆಯಾಗಿದೆ. ಇಂತಹ ಒಂದು ಅತಿ ಪರಮ ಅಣು ಅಸ್ವಿತ್ವದಲ್ಲಿದೆ ಎಂಬ ಥಿಯರಿ 1964ರಲ್ಲೇ ಹೊರಬಿದ್ದಿತ್ತಾದರೂ ಅದರ ಇರುವಿಕೆ ನಿರೂಪಿಸಲು ಸಾಧ್ಯವಾಗಿರಲಿಲ್ಲ. 1980ರ ದಶಕದಲ್ಲಿ ಅಮೆರಿಕವು ಮಿಲಿಯಗಟ್ಟಲೇ ಹಣ ಸುರಿದು ಈ ಕಣದ ಸಂಶೋಧನೆಗೆ ಮುಂದಾಯಿತು. ಸುಮಾರು ಒಂದು ದಶಕದ ಪ್ರಯತ್ನ ವಿಫಲವಾಗಿ ಅಮೆರಿಕದ ವಿಜ್ಞಾನಿಗಳು ಕೈಸುಟ್ಟುಕೊಂಡರು. ಆದರೆ ಐರೋಪ್ಯ ಅಣು ಸಂಶೋಧನಾ ಸಂಸ್ಥೆ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆಯಿಂದ ವಿಜ್ಞಾನಿಗಳನ್ನು ಕಲೆ ಹಾಕಿ ಈ ಕಣದ ಸಂಶೋಧನೆಗೆ ಟೊಂಕಕಟ್ಟಿ ನಿಂತಿತು. ಇದಕ್ಕಾಗಿ 17 ಮೈಲು ಉದ್ದದ ದೊಡ್ಡ Hadron collider (ಅತಿ ವೇಗದಲ್ಲಿ ಪರಮಾಣುಗಳು ಒಂದಕ್ಕೊಂದು ಸಂಘರ್ಷಿಸಲು ನೆರವಾಗುವ ಸಾಧನ) ಸ್ಥಾಪಿಸಿತು. ದುಬಾರಿ ವೆಚ್ಚದ ಈ ಸಂಶೋಧನೆ ಆರಂಭದಲ್ಲಿ ಅಂತಹ ಪರಿಣಾಮ ತೋರದಿದ್ದರೂ ಸತತ ಪ್ರಯೋಗ ಮತ್ತು ಪ್ರಯತ್ನದ ಫಲವಾಗಿ ಕಳೆದ ವರ್ಷ ಭೌತಶಾಸ್ತ್ರದ ದಿಕ್ಕನ್ನೇ ಬದಲಿಸಬಹುದಾದ, ಈ ದೇವಕಣದ ಇರುವಿಕೆಯನ್ನು ಪತ್ತೆ ಮಾಡಿತು. ಇಲ್ಲಿಗೇ ಪ್ರಯೋಗ ಮುಗಿದಿಲ್ಲ. ಇದರ ಸ್ವರೂಪ, ಸೂಕ್ಷ್ಮ ಗುಣಗಳ ಅಧ್ಯಯನ ಇನ್ನೂ ಸಾಗಿದೆ. ಈ ಸಂಶೋಧನೆಯಲ್ಲಿ ಭಾರತದ ಪಾತ್ರವೂ ಇದೆ. ಭಾರತ ನೇರವಾಗಿ ಇದಕ್ಕೆ ಹಣಕಾಸಿನ ನೆರವು ನೀಡದಿದ್ದರೂ ವಿಜ್ಞಾನಿಗಳ ದಂಡನ್ನೇ ಒದಗಿಸಿದೆ. ಮೇಲಾಗಿ ಈ ದೇವಕಣಕ್ಕೆ ಇರುವ ಹೆಸರು ಹಿಗ್ಸ್-ಬೋಸಾನ್. ಇದರಲ್ಲಿ ಹಿಗ್ಸ್ ಈಗ ನೊಬೆಲ್ ಪುರಸ್ಕೃತರಾಗಿದ್ದಾರೆ. ಹಾಗಿದ್ದರೆ ಈ ಬೋಸಾನ್ ಏನು? ಇದಕ್ಕೂ ಭಾರತಕ್ಕೂ ಏನು ಸಂಬಂಧ? ಈ ಬೋಸಾನ್ ಹೆಸರಿನ ಹಿಂದಿರುವ ವ್ಯಕ್ತಿ ಭೌತಶಾಸ್ತ್ರ ಸಂಶೋಧನೆಯಲ್ಲಿ ಅತಿ ಪ್ರಮುಖ ಭಾರತೀಯ. ಅವರೇ ಸತ್ಯೇಂದ್ರನಾಥ್ ಬೋಸ್.
20ನೇ ಶತಮಾನದ ಆರಂಭಿಕ ಘಟ್ಟ ವಿಜ್ಞಾನ ಸಂಶೋಧನೆಯಲ್ಲಿ ಅತಿ ಪ್ರಮುಖ ಕಾಲಘಟ್ಟ. ಭೌತ, ರಾಸಾಯನಿಕ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಅನೇಕ ಸಂಶೋಧನೆಗಳು, ಹೊಸ ಹೊಸ ಥಿಯರಿಗಳು ಮೂಡಿ ಬಂದ ಕಾಲ. ಹೊಸ ಸಾಧ್ಯತೆಗಳಿಗೆ ಪ್ರಪಂಚ ತೆರೆದುಕೊಂಡ ಅವಧಿ. ವಿಜ್ಞಾನಿಗಳು, ಸಂಶೋಧಕರಿಗೆ ಎಲ್ಲಿಲ್ಲದ ಬೆಲೆ, ಕೀರ್ತಿ ತಂದುಕೊಟ್ಟ ಕಾಲ. ಭಾರತದ ಮಟ್ಟಿಗೆ ಹೇಳುವುದಾದರೆ ಕ್ರಾಂತಿಕಾರಿಗಳಿಗೆ ಹೆಸರಾಗಿದ್ದ ಕೋಲ್ಕೊತಾ ಸಂಶೋಧಕರಿಗೂ ತವರಾಗಿತ್ತು. ಇಂತಹ ಕೋಲ್ಕೊತಾದ ಸಮೀಪ ಇರುವ ನಾಡಿಯಾ ಜಿಲ್ಲೆಯಲ್ಲಿ 1894ರ ಜ. 1 ರಂದು ಏಳು ಮಕ್ಕಳ ತುಂಬು ಕುಟುಂಬದ ಮೊದಲ ಕುಡಿಯಾಗಿ ಬೋಸ್ ಜನನ. ತಂದೆ ಸುರೇಂದ್ರನಾಥ ಈಸ್ಟ್ ಇಂಡಿಯಾ ರೈಲು ಕಂಪನಿಯಲ್ಲಿ ಸೇವೆಗಿದ್ದು ನಂತರ ಸ್ವಂತ ವ್ಯಾಪಾರಕ್ಕಿಳಿದರು. ತಾಯಿ ಆಮೋದಿನಿ ಅನ್‌ಪಡ್ ಗೃಹಸ್ಥೆ. ಬೋಸ್ ಬೆನ್ನಿಗಿದ್ದದ್ದು ಆರು ಸಹೋದರಿಯರು. ಬೋಸ್‌ಗೆ ಮೊದಲಿಂದಲೂ ಎಲ್ಲ ವಿಷಯದಲ್ಲೂ ಕುತೂಹಲ. ಅಮ್ಮ ಏನೇ ಮಾಡಿದರೂ, ಅಪ್ಪ ಏನೇ ಹೇಳಿದರೂ ಅವನ್ನೆಲ್ಲ ಅರ್ಥವಾಗದ ಕುತೂಹಲದಿಂದಲೇ ಗಮನಿಸುತ್ತಿದ್ದ. ಶಾಲೆಯಲ್ಲಿಯೂ ಇದೇ ಪ್ರವೃತ್ತಿ. ದಿನ ಕಳೆದಂತೆ ಈ ಪ್ರವೃತ್ತಿಯೇ ಪ್ರಧಾನವಾಯಿತು. ಪ್ರೌಢಶಾಲೆಗೆ ಬರುವ ವೇಳೆಗೆ ಈತನ ಕುತೂಹಲಗಳು, ಅವುಗಳ ಹಿಂದಿರುವ ವಿಷಯಗಳನ್ನು ಕೆದಕುವ, ಕೆದಕಿ ಅರಗಿಸಿಕೊಳ್ಳುವ ಮನೋಭಾವವೂ ಪ್ರೌಢಾವಸ್ಥೆ ತಲುಪಿತ್ತು. ಇದು ಎಷ್ಟರ ಮಟ್ಟಿಗಿತ್ತು ಎಂದರೆ ಆತನ ಶಿಕ್ಷಕರೇ ತಬ್ಬಿಬ್ಬಾಗುತ್ತಿದ್ದರು. ಪರೀಕ್ಷೆಯಲ್ಲಿ ಸಂಖ್ಯಾಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉಳಿದ ವಿದ್ಯಾರ್ಥಿಗಳು ತಲೆ ಕೆರೆದುಕೊಳ್ಳುತ್ತಿದ್ದರೆ ಬೋಸ್‌ನ ಉತ್ತರ ಪತ್ರಿಕೆ ನೋಡಿ ಮೌಲ್ಯಮಾಪಕರೇ ಏನು ಮಾಡಬೇಕೆಂದು ತೋಚದೆ ತಲೆ ಕೆರೆದುಕೊಳ್ಳುತ್ತಿದ್ದರು. ಕಾರಣ ಇಷ್ಟೆ, ಬೋಸ್ ಎಲ್ಲ ಪ್ರಶ್ನೆಗಳಿಗೂ ಸರಿ ಉತ್ತರ ಬರೆಯುವುದಷ್ಟೇ ಅಲ್ಲ, ಮೇಷ್ಟ್ರು ಹೇಳಿಕೊಟ್ಟ ರೀತಿಗಿಂತ ಭಿನ್ನವಾಗಿ, ವಿವಿಧ ರೀತಿಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂದೂ ಬರೆದಿರುತ್ತಿದ್ದ! ಆಗಲೇ ಬೋಸ್‌ಗೆ ಎಂತಹ ಉನ್ನತ ಭವಿಷ್ಯ ಇದೆ ಎಂಬುದನ್ನು ಶಿಕ್ಷಕರು ಕಂಡುಕೊಂಡರು. ಮತ್ತು ಆತನ ಕುತೂಹಲಕ್ಕೆ ಹೊಸದನ್ನು ಬಲುಬೇಗ ಇಂಗಿಸಿಕೊಳ್ಳುವ, ಅದನ್ನು ಪೋಷಿಸಿ ಅದರ ಮೇಲೆ ಹಿಡಿತ ಸಾಧಿಸುವ ಆತನ ತುಡಿತಕ್ಕೆ ನೀರೆರೆದರು.
ವಿಜ್ಞಾನದ ವಿಷಯ ಬಂದರೆ ಬೋಸ್ ಕಣ್ಣು-ಕಿವಿ ನೆಟ್ಟಗಾಗುತ್ತಿತ್ತು. ಬರೀ ಬೆರಗುಗಣ್ಣಿನಿಂದ ನೋಡುವುದಲ್ಲ, ಪ್ರಯೋಗಶೀಲತೆಗೆ ಆತ ತುಡಿಯುತ್ತಿದ್ದ. ಶಾಲೆಯಲ್ಲಿದ್ದಾಗಲೇ ಗೆಳೆಯರ ಜೊತೆಗೂಡಿ ಟೆಲಿಸ್ಕೋಪ್ ತಯಾರಿಸಿ ಸಂಭ್ರಮಿಸಿದ್ದ. ಅಲ್ಲಿಂದ ಪಯಣ ಸಾಗಿದ್ದು ಪ್ರೆಸಿಡೆನ್ಸಿ ಕಾಲೇಜಿಗೆ. ಅಲ್ಲಿ ಅದಾಗಲೇ ಖ್ಯಾತಿ ಪಡೆದಿದ್ದ ವಿಜ್ಞಾನಿಗಳಾದ ಜಗದೀಶ್‌ಚಂದ್ರ ಬೋಸ್, ಪಿ.ಸಿ. ರೇ ಮುಂತಾದವರು ಸತ್ಯೇಂದ್ರನಾಥನ ಹಸಿವನ್ನು ಪೊರೆದರು. ಶಾಲೆಯಲ್ಲಿ ಪದೋನ್ನತಿಯೂ ದೊರಕಿ 19ನೇ ವಯಸ್ಸಿಗೇ ಬಿ.ಎಸ್ಸಿ ಪದವೀಧರನಾದ. ಅದರ ಬೆನ್ನಿಗೇ ಮಾಸ್ಟರ್ಸ್ ಡಿಗ್ರಿಯೂ ಹೆಗಲೇರಿತು. ಆಗ ಕೋಲ್ಕೊತಾ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ ವ್ಯಾಸಂಗ ಇರಲಿಲ್ಲ. ಆದರೆ ಗಣಿತಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಬೋಸ್ ತನ್ನಿಬ್ಬರು ಗೆಳೆಯರ ಜೊತೆಗೂಡಿ ಗಣಿತದಲ್ಲಿ ಎಂ.ಎಸ್ಸಿ ವ್ಯಾಸಂಗ ತೆರೆಯುವಂತೆ ವಿವಿಯ ಮೇಲೆ ಒತ್ತಡ ಹೇರಿದ. ಮರು ವರ್ಷವೇ ವಿವಿ ಇವರ ಕೋರಿಕೆ ಮನ್ನಿಸಿತು. ಇದಾದ ಬಳಿಕ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಬೋಸ್ ಸಂಶೋಧನೆ ಎಗ್ಗಿಲ್ಲದೆ ಸಾಗಿತು. ಅದು ಪರಿಮಾಣ ಥಿಯರಿ (Quantum theory) ಬಹುವಾಗಿ ಚಾಲ್ತಿಯಲ್ಲಿದ್ದ ಸಮಯ. ಸಹಜವಾಗಿಯೇ ಭೌತ ಮತ್ತು ಗಣಿತ ಶಾಸ್ತ್ರದಲ್ಲಿ ಈ ಪರಿಮಾಣ ಆಯೋಜನೆಯ ಸವಿಸ್ತಾರ ಸಾಧ್ಯತೆಗಳನ್ನು ತಡಕಾಡಲು, ಹೊಸ ಪರಿಧಿಗಳನ್ನು ನಿಗದಿ ಮಾಡಲು, ಹಿಂದಿನ ಸಿದ್ಧಾಂತಗಳಿಗೆ, ಸ್ಪಷ್ಟ ಪರಿಹಾರ ಕಂಡು ಹಿಡಿಯಲು ಬೋಸ್ ಮುಂದಾದರು. ಆ ಸಂದರ್ಭದಲ್ಲಿ ಪರಿಮಾಣ ಥಿಯರಿ ಜೊತೆಗೆ ಐನ್‌ಸ್ಟೀನ್‌ರ ಸಾಪೇಕ್ಷತಾವಾದ ಬಹು ಚರ್ಚಿತ ವಿಷಯಗಳಾಗಿದ್ದವು. ಆದರೆ ಇದು ಜರ್ಮನ್ ಭಾಷೆಯಲ್ಲಿತ್ತು. ಹೀಗಾಗಿ ಅದನ್ನು ತರ್ಜುಮೆ ಮಾಡಿಸಿಕೊಂಡು ಭಾರತದಲ್ಲಿ ಪ್ರಕಟಿಸಲು ಮತ್ತು ಅಧ್ಯಯನ ಮಾಡಲೆಂದು ಬೋಸ್ ಸ್ವತಃ ಐನ್‌ಸ್ಟೀನ್‌ರನ್ನು ಸಂಪರ್ಕಿಸಿದ್ದೇ ಅಲ್ಲದೇ ಅವರಿಂದ ಅನುಮತಿಯನ್ನು ಪಡೆದರು. ಈ ಸಮಯದಲ್ಲಿ ವಿಕಿರಣವನ್ನು ಸಂಪೂರ್ಣವಾಗಿ ಹೀರಿಕೊಳ್ಳುವ ಮತ್ತು ಅದನ್ನು ಯಾವುದೇ ಕಾರಣಕ್ಕೂ ಪ್ರತಿಫಲಿಸದ ಗಾಢಕಪ್ಪು ವಸ್ತುಗಳ (Black body radiation) ಇರುವಿಕೆ ಕುರಿತಾದ PLANK'S ಥಿಯರಿಗೆ ಯಾರೂ ಕೂಡ ಸಮರ್ಪಕವಾದ ಉತ್ತರ ಕಂಡು ಹಿಡಿದಿರಲಿಲ್ಲ. ಇದರ ಬಗ್ಗೆ ಮೋಹಿತರಾದ ಬೋಸ್ ಈ ಕಬ್ಬಿಣದ ಕಡಲೆಯನ್ನು ಕಡಿದರು. ತಮ್ಮ ಸಂಶೋಧನೆಯನ್ನು ಹಲವಾರು ವಿಜ್ಞಾನ ಪತ್ರಿಕೆಗಳಿಗೆ, ಕಳುಹಿಸಿದರೂ ಅದು ಪ್ರಕಟವಾಗಲಿಲ್ಲ. ಸಹ ಸಂಶೋಧಕರು ಸಹ ಇದರ ಬಗ್ಗೆ ನಿರಾಸಕ್ತಿ ತೋರಿದರು. ಬೋಸ್‌ಗೆ ಇದು ಅರ್ಥವಾಗಲಿಲ್ಲ. ಆದರೆ ಧೃತಿಗೆಡಲೂ ಇಲ್ಲ. ತಾನು ಮಾಡಿದ ಸಂಶೋಧನೆಯನ್ನು ಸ್ಥೂಲವಾಗಿ ನಾಲ್ಕು ಪುಟಗಳಲ್ಲಿ ಬಣ್ಣಿಸಿ ನೇರವಾಗಿ ಐನ್‌ಸ್ಟೀನ್‌ರಿಗೆ ಕಳುಹಿಸಿಕೊಟ್ಟರು. ಹಲವಾರು ವರ್ಷಗಳಿಂದ ಉತ್ತರ ಕಾಣದಾಗಿದ್ದ Plank's ಥಿಯರಿಗೆ ಬೋಸ್ ಪರಿಹಾರ ಕಂಡುಹಿಡಿದ ಬಗೆಯನ್ನು ಅಪಾರವಾಗಿ ಮೆಚ್ಚಿದ ಐನ್‌ಸ್ಟೀನ್ ಅದನ್ನು ಜರ್ಮನ್ ಭಾಷೆಗೆ ಅನುವಾದಿಸಿ ಅಲ್ಲಿನ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟಿಸಿದರು. ಅದಾದ ಬಳಿಕ ಬೋಸ್‌ಗೆ ಜಾಗತಿಕ ಮನ್ನಣೆ ಲಭ್ಯವಾಯಿತು. ಇದರ ಫಲವಾಗಿ ಯುರೋಪಿಗೆ ಪ್ರಯಾಣ ಬೆಳೆಸುವ, ಅಲ್ಲಿ ಐನ್‌ಸ್ಟೀನ್, ಮೇಡಮ್ ಕ್ಯೂರಿ ಅವರಂತಹ ಮೇಧಾವಿಗಳ ಜೊತೆ ಒಡನಾಡುವ ಅವಕಾಶ ಕೂಡಿಬಂತು. ಈ ಮಧ್ಯೆ ಪ್ಲಾಂಕ್ಸ್ ಥಿಯರಿಗೆ ಪರಿಹಾರ ಕಂಡುಕೊಳ್ಳಲು ಬೋಸ್ ಅನುಸರಿಸದ ಮಾರ್ಗವನ್ನೇ ಅನುಸರಿಸಿ ಐನ್‌ಸ್ಟೀನ್ ಮಾಡಿದ ಸಂಶೋಧನೆ ಮುಂದೆ ಐನ್‌ಸ್ಟೀನ್-ಬೋಸ್ ಕಂಡೆನ್‌ಸೇಟ್ ಎಂಬ ವಾದಕ್ಕೆ ಕಾರಣವಾಯಿತು. ಈ ಸಂಶೋಧನೆಯ ವ್ಯಾಪ್ತಿಯಲ್ಲಿ ಬರುವ, ಅದೇ ಗುಣ ವಿಶೇಷಗಳನ್ನು ಹೊಂದಿರುವ ಪರಮಾಣುಗಳನ್ನು ಬೋಸಾನ್‌ಗಳೆಂದು ಕರೆಯಲಾಯಿತು. ಮುಂದೆ ಪೀಟರ್ ಹಿಗ್ಸ್ 1964ರಲ್ಲಿ ಬೋಸಾನ್‌ಗಳೆಂಬ ಕಣಗಳಿರುವ ಬಗ್ಗೆ ಸಂಶೋಧನೆ ನಡೆಸಿದರು. ಆಗ ಅಂತಹ ಮೂಲಕಣ ಅಥವಾ ದೇವಕಣಕ್ಕೆ ಬಂದ ಹೆಸರೇ ಹಿಗ್ಸ್-ಬೋಸಾನ್. ಈ ಕಣದ ಬೇರು ಬಯಲು ಮಾಡಲು, ಅದರ ಇರುವಿಕೆ ಸಾಬೀತುಪಡಿಸಲು ಹಿಗ್ಸ್ ಮತ್ತು ಎಂಗ್ಲರ್ಟ್ ನಡೆಸಿದ ಪ್ರಯತ್ನವೇ ಕಳೆದ ವರ್ಷದ ಆವಿಷ್ಕಾರ. ಈ ಪ್ರಯತ್ನಕ್ಕೆ, ಪ್ರಯೋಗಕ್ಕೆ ದ್ಯೋತಕವಾಗಿ ಇವರಿಬ್ಬರಿಗೆ ನೊಬೆಲ್ ಪುರಸ್ಕಾರ ದೊರೆತಿದೆ. ಆದರೆ ಇದರ ಹಿಂದಿನ ಪ್ರೇರಣೆ ಬೋಸ್ ಎಂಬುದನ್ನು ಯಾರೂ ಮರೆಯುವಂತಿಲ್ಲ. ಬೋಸ್ 1974ರಲ್ಲಿ ನಿಧನರಾದರು. ಅದಕ್ಕೂ ಮುನ್ನವೇ ಅವರಿಗೆ ನೊಬೆಲ್ ದೊರೆಯಬಹುದು ಎಂದೇ ಹೇಳಲಾಗಿತ್ತು. ಆದರೆ ಸಿಗಲಿಲ್ಲ. ಬೋಸ್ ಸಹ ಇಂತಹ ಯಾವುದೇ ಪುರಸ್ಕಾರಗಳನ್ನು ಬಯಸಲಿಲ್ಲ. "ಜೀವನ ನನಗೆ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನೇ ನೀಡಿದೆ. ನಾನು ಸಂತೃಪ್ತ" ಎಂದು ಹೇಳಿದ್ದರು. ಈಊಖಃನಲ್ಲಿ ಕಳೆದ ವರ್ಷ ಯಶಸ್ವಿಯಾದ ಈ ಪ್ರಯೋಗದ ನೇತೃತ್ವ ವಹಿಸಿದ್ದ ರಾಲ್ಫ್‌ಡೀಟರ್ ಹ್ಯೂರ್ ಕೋಲ್ಕೊತಾಗೆ ಭೇಟಿ ಇತ್ತಾಗ ಹೇಳಿದ ಮಾತು "ಖಂಡಿತ ಬೋಸ್‌ಗೆ ನೊಬೆಲ್ ಸಿಗಬೇಕಿತ್ತು. ಆದರೆ ನೊಬೆಲ್ ಸಿಗಲಿಲ್ಲವೆಂದ ಮಾತ್ರಕ್ಕೆ ಅವರ ಕೊಡುಗೆ ನಗಣ್ಯ ಎಂದಲ್ಲ. ಅವರ ಸಂಶೋಧನೆ ಅತ್ಯಂತ ಉನ್ನತ ಮಟ್ಟದ್ದು. ಅದನ್ನು ಕಡೆಗಣಿಸಲು ಎಂದೂ ಸಾಧ್ಯವಿಲ್ಲ" ಬಿರುದು-ಬಾವಲಿಗಳು ಸಾಧನೆಯ ಅಳತೆ ಗೋಲಲ್ಲ. ನೊಬೆಲ್ ಸಿಕ್ಕಿರಲಿ, ಬಿಡಲಿ ವಿಜ್ಞಾನ ಸಂಶೋಧನೆ ಕ್ಷೇತ್ರದಲ್ಲಿ ಬೋಸ್ ಸಾಧನೆ ಮಾತ್ರ ಅಜರಾಮರ. ನಿಜಕ್ಕೂ ಸತ್ಯೇಂದ್ರನಾಥ್ ಬೋಸ್ ಭಾರತದ ಹೆಮ್ಮೆಯ ಪುತ್ರ!
- ಕೆ.ಎಸ್.ಜಗನ್ನಾಥ್
jagannath.kudinoor@gmail.com