ಜಾತಿ ಎಂಬ ಬೇರುಗಳನ್ನು ಹುಡುಕುವುದು ಕಷ್ಟ. ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆದ ಜಾತಿಗಳು ಸಾವಿರಾರು ಇವೆ. ಒಂದೊಂದು ಸಮುದಾಯಕ್ಕೂ ತನ್ನದೇ ಆದ ಇತಿಹಾಸವಿದೆ. ಅದರಲ್ಲೂ ಆಯಾ ಜಾತಿಗಳ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ನಿಜಕ್ಕೂ ವರ್ಣಿಸಲು ಆಗದು.
ಹಲವಾರು ತಾವು ನಂಬಿರುವ ಆಚಾರ ವಿಚಾರಗಳ ಜೊತೆಗೆ ತಮ್ಮದೇ ಆದ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿವೆ. ಈಗ ಚರ್ಮವಾದ್ಯಗಳ ವಿಷಯಕ್ಕೆ ಬರುವುದಾದರೆ ಅವುಗಳಿಂದ ಹೊರ ಹೊಮ್ಮುವ ನಾದ ಕೇಳಲು ಇಂಪಾಗಿರುತ್ತದೆ. ಮದುವೆ, ಮುಂಜಿ, ದೇವರ ಉತ್ಸವ, ಮೆರಣವಣಿಗೆ, ಹೀಗೆ ಕಾರ್ಯಕ್ರಮಗಳು ಯಾವುದೇ ಆಗಿದ್ದರೂ ಚರ್ಮವಾದ್ಯಗಳು ಬೇಕು. ಅವು ಇಲ್ಲದೆ ಯಾವುದೇ ಕಾರ್ಯಕ್ರಮ ಜರುಗದು. ಆಧುನೀಕರಣ ಎಂಬುದು ನಮ್ಮನ್ನು ಎಷ್ಟೇ ಆವರಿಸಿದ್ದರೂ ಸಂಪ್ರದಾಯಗಳ ನೆರಳಲ್ಲೇ ನಾನು ನಡೆಯುವುದರಿಂದ ಯಾವುದನ್ನೂ ಬಿಡಲು ಆಗದು.
ಚರ್ಮವಾದ್ಯಗಳ ಸ್ವರ, ನಾದವನ್ನು ಆಲಿಸಿ ಜನ ಸಂತೋಷಪಡುತ್ತಾರೆ. ಆದರೆ, ಆ ಚರ್ಮವಾದ್ಯ ತಯಾರಿಕೆಯ ಹಿಂದಿನ ಶ್ರಮ, ಅದನ್ನು ತಯಾರಿಸುವವರ ಕಷ್ಟ ಯಾರ ಅರಿವಿಗೂ ಬರುವುದಿಲ್ಲ. ಸತ್ತ ಪ್ರಾಣಿಗಳ ಚರ್ಮವನ್ನು ಹದ ಮಾಡಿ ಅದರಿಂದ ವಾದ್ಯಗಳನ್ನು ತಯಾರಿಸಿ ಅವುಗಳಿಗೆ ಸ್ವರ ತುಂಬುವ ಕಾಯಕದಲ್ಲಿ ನಿರತವಾದ ಸಮುದಾಯವೊಂದಿದೆ. ಅದುವೇ 'ಡೊಹರ'.
ಮೂಲಪುರುಷ ಡೊಹರ ಕಕ್ಕಯ್ಯ: ಜಗಜ್ಯೋತಿ ಬಸವೇಶ್ವರರ ವಿಚಾರಕ್ಕೆ ಬಂದಾಗ ಡೊಹರ ಕಕ್ಕಯ್ಯ ಅವರ ಹೆಸರು ಕೇಳದವರಿಲ್ಲ. ಬಸವಣ್ಣನ ನಡೆ ಮತ್ತು ನುಡಿಯಿಂದ ಪ್ರಭಾವಿತರಾಗಿ ಕೊನೆಗೆ ಅವರ ಅನುಯಾಯಿ ಆಗಿದ್ದಲ್ಲದೆ ಸಮಾಜಕ್ಕೆ ದಾರಿದೀಪ ಆಗುವಂತಹ ವಚನಗನ್ನು ನಾಡಿಗೆ ಕಾಣಿಕೆಯಾಗಿ ಕೊಟ್ಟವರೇ ಡೊಹರ ಕಕ್ಕಯ್ಯ. ಚರ್ಮವಾದ್ಯಗಳ ಮರ್ಮ ಅರಿತ ಡೊಹರ ಜನಾಂಗಕ್ಕೆ ಇವರೇ ಮೂಲ ಪುರುಷ.
ಡೊಹರ ಕಕ್ಕಯ್ಯ ಮೂಲತ: ಮಹಾರಾಷ್ಟ್ರದವರು. 12ನೇ ಶತಮಾನದಲ್ಲಿ ಬಸವಣ್ಣನವರ ಪ್ರಭಾವ ಕೇಳಿದ ಬಳಿಕ ನೇರವಾಗಿ ಬಂದಿದ್ದು ಕರ್ನಾಟಕಕ್ಕೆ. ಹೀಗೆ ಬಂದವರೇ ಬಸವಣ್ಣನವರ ಕಟ್ಟಾ ಆನುಯಾಯಿಗಳಾದರು. ಅಷ್ಟೇ ಅಲ್ಲ, ಮಾದಾರ ಚನ್ನಯ್ಯ ಅವರಂತೆ ಡೊಹರ ಕಕ್ಕಯ್ಯ ಅವರೂ ಬಸವಣ್ಣನವರ ರಕ್ಷಾಕವಚವಾದರು. ಕ್ರಾಂತಿಯಲ್ಲೂ ಭಾಗಿ ಆದರು.
ಹೀಗಾಗಿ ಡೊಹರ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂದೇ ಹೇಳಬಹುದು. ತೆಲುಗರ ಜೊತೆಗೆ ಈ ಸಮಾಜದ ನಂಟಿದೆ. ಆದರೆ, ದಾಖಲೆಗಳ ಪ್ರಕಾರ ಡೊಹರರು ಮೂಲತ: ಮಹಾರಾಷ್ಟ್ರದವರು ಎಂದೇ ಹೇಳಲಾಗುತ್ತದೆ. ಏಕೆಂದರೆ ಅವರ ಮಾತೃ ಭಾಷೆ ಮರಾಠಿ. ಆದರೆ, ಜನರ ಜೊತೆಗೆ ಬೆರೆತಾಗ ಅವರು ಕನ್ನಡ ಬಳಸುತ್ತಾರೆ. ಮನೆಯಲ್ಲಿದ್ದರೆ, ಸಂಬಂಧಿಕರ ಜೊತೆ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರೆ.
ಚರ್ಮ ಹದ ಮಾಡುವ ಕಾಯಕ: ಚರ್ಮ ಹದ ಮಾಡುವುದು ಡೊಹರರ ಮೂಲ ಕಸುಬು. ಸಾವಿರಾರು ವರ್ಷಗಳಿಂದ ಇದನ್ನೇ ಅವರು ಜೀವನೋಪಾಯಕ್ಕೆ ಆಧಾರವನ್ನಾಗಿಯೂ ಮಾಡಿಕೊಂಡಿದ್ದಾರೆ. ಇಂದಿಗೂ ಹಲವಾರು ಕುಟುಂಬಗಳು ಮೂಲ ಕಸುಬು ಬಿಟ್ಟಿಲ್ಲ. ಪರಿಸ್ಥಿತಿ ಯಾವ ರೀತಿ ಇದೆ ಎಂದರೆ ಕೈಗಳನ್ನು ನೋಡಿದ ತಕ್ಷಣ ಇವರು ಡೊಹರರು ಎಂದು ಸುಲಭವಾಗಿ ಹೇಳಬಹುದಂತೆ. ಏಕೆಂದರೆ, ಚರ್ಮ ಹದ ಮಾಡಿ ಕೈಗಳು ಆ ರೀತಿಯಾಗಿರುತ್ತವೆ ಎನ್ನುತ್ತಾರೆ ಸಮಾಜದ ಮುಖಂಡರು. ಈ ಸಮುದಾಯ ಕುರಿತು ನಿರಂಜನ ಬಿ.ಬೆಟಗೇರಿ ಅವರ ನಿದೇರ್ಶನದಲ್ಲಿ ವಾರ್ತಾ ಇಲಾಖೆ ಸಾಕ್ಷ್ಯಚಿತ್ರವನ್ನೂ ತಯಾರಿಸಿದೆ. ಅದರಲ್ಲಿ ಡೊಹರರ ಕುರಿತು ಉಪಯುಕ್ತ ಮಾಹಿತಿಗಳೂ ಇವೆ.
ಕುರಿ, ಮೇಕೆ, ಎಮ್ಮೆ, ಹಸು, ಹೀಗೆ ಸತ್ತ ಪ್ರಾಣಿಗಳ ಚರ್ಮವನ್ನು ತಂದು, ಕೂದಲು ತೆಗೆದ ಬಳಿಕ ಅದನ್ನು ಐದು ದಿನಗಳ ಕಾಲ ನೀರಿನಲ್ಲಿ ನೆನೆಯಿಸಲಾಗುತ್ತದೆ. ಅದಕ್ಕೆ ಸುಣ್ಣ ಮತ್ತಿತರ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಸೇರಿಸಲಾಗುತ್ತದೆ. ಏದು ದಿನಗಳಾದ ಬಳಿಕ ಚರ್ಮ ಹದವಾಗುತ್ತದೆ. ನಂತ ಆ ಚರ್ಮವನ್ನು ಬಹು ಉಪಯೋಗಿಯಾಗಿ ತಯಾರು ಮಾಡಲಾಗುತ್ತದೆ. ಆದರಿಂದ ವಾದನಗಳನ್ನು ತಯಾರಿಸಲಾಗುತ್ತದೆ. ಹಲಗೆ, ಡಮರು, ಡೊಳ್ಳು, ಮೃದಂಗ ಮತ್ತಿತರ ವಾದ್ಯಗಳನ್ನು ಅತ್ಯಂತ ಕಲಾತ್ಮಕತೆಯಿಂದ ಡೊಹರರು ತಯಾರು ಮಾಡುತ್ತಾರೆ. ಇದಲ್ಲದೆ ಹಸು, ಎಮ್ಮೆ ಮತ್ತು ಎತ್ತುಗಳ ಕೊರಳಿಗೆ ಕಟ್ಟುವ ಗಂಟೆಯಿರುವ ಬೆಲ್ಟ್, ಬಾರುಕೋಲು ಸೇರಿದಂತೆ ಕೃಷಿಕರಿಗೆ ಆಗತ್ಯವಾದ ಪರಿಕರಗಳನ್ನೂ ಇವರು ತಯಾರಿಸಿ ಕೊಡುತ್ತಾರೆ. ಡೊಹರರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಶ್ರೇಷ್ಠವಾದ ಗುಣಮಟ್ಟದಿಂದ ಕೂಡಿರುತ್ತದೆ ಎಂಬುದೇ ಇದಕ್ಕೆ ಕಾರಣ.
ಉತ್ತರ ಕರ್ನಾಟಕದಲ್ಲಿ ಹೆಚ್ಚು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ಡೊಹರರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಈಗೀಗ ಚೇತರಿಸಿಕೊಳ್ಳುತ್ತಿದ್ದಾರೆ. ತಾವಾಯಿತು ತಾವು ನಂಬಿರುವ ಕಸುಬಾಯಿತು ಎಂದುಕೊಂಡು ಇದ್ದು ಹೋಗಿದ್ದ ಈ ಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂಬುದರ ಕುರಿತು ತಲೆಕೆಡಿಸಿಕೊಂಡವರಲ್ಲ. ಹೀಗಾಗಿ ಹಳೆಯ ತಲೆಮಾರಿನವರ ಪೈಕಿ ಹೆಚ್ಚಿನ ಮಂದಿ ಶಾಲೆಯ ಮೆಟ್ಟಿಲು ತುಳಿದಿರಲಿಲ್ಲ.
ಆದರೆ, ಈಗ ಡೊಹರರಲ್ಲೂ ಸಾಮಾಜಿಕ ಪ್ರಜ್ಞೆ ಬೆಳೆದಿದೆ. ಆದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಈ ಸಮುದಾಯದ ಮಕ್ಕಳಿಗಾಗಿಯೇ ಸರ್ಕಾರ ಶಾಲೆಗಳನ್ನು ತೆರೆದಿದೆ. ಶಿಕ್ಷಕರು ಮನೆ ಮನೆಗೆ ಹೋಗಿ ಮಕ್ಕಳನ್ನು ತರಗತಿಗಳಿಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಹಲವೆಡೆ ಅವರ ಈ ಪ್ರಯತ್ನ ಫಲವನ್ನೂ ಕೊಟ್ಟಿದೆ.
ಡೊಹರರು ಮಾಂಸಾಹಾರಿಗಳು. ಮನೆಗೆ ಅತಿಥಿಗಳು ಬಂದಾಗ ಮಾಂಸದ ಆಡುಗೆ ಮಾಡಿ ಬಡಿಸುತ್ತಾರೆ. ಜೊತೆಗೆ ಮದ್ಯಪಾನವೂ ಉಂಟು. ವಿಶೇಷ ಎಂದರೆ, ಮನೆ ದೊಡ್ಡದಾಗಿರಲಿ, ಸಣ್ಣದಾಗಿರಲಿ ಇವರು ಅಡುಗೆ ಮಾಡುವುದು ಮನೆಯ ಹೊರಭಾಗದಲ್ಲೇ. ಹೊರ ಆವರಣದಲ್ಲಿ ಒಲೆ ಇಟ್ಟು, ಕಟ್ಟಿಗೆಗಳಿಂದ ಬೆಂಕಿ ಹಾಕಿ ಅಡುಗೆ ಮಾಡುವ ಸಂಪ್ರದಾಯವನ್ನು ಇವರು ಪಾಲಿಸಿಕೊಂಡು ಬಂದಿದ್ದಾರೆ. ಈ ಸಮುದಾಯದಲ್ಲೂ ಹಿಂದಿನಿಂದ ನ್ಯಾಯ ಪಂಚಾಯಿತಿ ವ್ಯವಸ್ಥೆ ನಡೆದು ಬಂದಿದೆ. ಹಿರಿಯರೊಬ್ಬರನ್ನು ಗುರುತಿಸಿ ನ್ಯಾಯ ತೀರ್ಮಾನ ಮಾಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗುತ್ತದೆ. ಅವರನ್ನು 'ಭಗತ್' ಎಂದು ಕರೆಯುತ್ತಾರೆ. ಅಂದರೆ ಯಜಮಾನ ಎಂದರ್ಥ.
ಮೌಲಿ ದೇವಿಯ ಆರಾಧಕರು: ಡೊಹರರು ಮೌಲಿ ದೇವಿಯನ್ನು ಪೂಜಿಸುತ್ತಾರೆ. ಆಕೆ, ಹೆರಿಗೆಯಾದ 10ನೇ ದಿನಕ್ಕೆ ಮೈಲಿಗೆ ಕಳೆಯುವವಳು ಎಂಬ ನಂಬಿಕೆ ಇದೆ. ಹೀಗಾಗಿ ಈ ದೇವಿಯನ್ನು ಹೆಣ್ಣು ಮಕ್ಕಳು ಹೆಚ್ಚಾಗಿ ಪೂಜೆ ಮಾಡುತ್ತಾರೆ. ಶಿವರಾತ್ರಿಯಂದು ಈ ಸಮುದಾಯದವರು ಭರ್ಜರಿ ಉತ್ಸವ ಆಚರಿಸುತ್ತಾರೆ. ಅಂದು ಹೆಣ್ಣು ಮಕ್ಕಳು ತಲೆಯ ಮೇಲೆ ಕಲಶ ಹೊತ್ತು ದೇವರನ್ನು ಪೂಜಿಸುತ್ತಾರೆ. ಬಾಜಾ ಭಜಂತ್ರಿ ಸಮೇತದೇವರ ಮೆರವಣಿಗೆ ನಡೆಸ್ತುತಾರೆ. ಉಳಿದಂತೆ ತುಳುಜಾ ಭವಾನಿ, ಪಂಡರಾಪುರದ ಖಂಡೋಬಾ, ಪೋಚಮ್ಮ, ಎಲ್ಲಮ್ಮ, ಮಾರಿಯಮ್ಮ ಮತ್ತಿತರ ದೇವತೆಗಳನ್ನು ಪೂಜಿಸುತ್ತಾರೆ. ರೋಗ ರುಜಿನ ಕಂಡು ಬಂದ ಸಂದರ್ಭದಲ್ಲಿ ಎಕಕ್ಲು ಜನಾಂಗದ ಮಹಿಳೆಯ ಸಲಹೆ, ಸೂಚನೆಯನ್ನು ಡೊಹರರು ಪಡೆಯುತ್ತಾರೆ. ಹೀಗಾಗಿ ತೆಲುಗು ಬಾಂಧವ್ಯವವೂ ಇದೆ ಎಂದು ಹೇಳಲಾಗುತ್ತದೆ.
ಅಭಿವೃದ್ಧಿಯ ಬೆಳಕು ಬೇಕು: ಚರ್ಮವನ್ನು ಹದ ಮಾಡುವುದರಲ್ಲೇ ಆನಂದ ಕಂಡುಕೊಂಡಿರುವ ಡೊಹರ ಸಮುದಾಯದವರ ಜೀವನವೂ ಹದವಾಗಬೇಕಿದೆ. ಇದಕ್ಕೆ ಸರ್ಕಾರ ಕಣ್ಣು ಬಿಟ್ಟು ಇವರತ್ತ ನೋಡಬೇಕು. ಎಲ್ಲ ಕ್ಷೇತ್ರಗಳಲ್ಲೂ ಈಗೀಗ ಕಣ್ಣು ಬಿಡುತ್ತಿರುವ ಸಮುದಾಯದ ಮೇಲೆ ಅಭಿವೃದ್ಧಿ ಎಂಬ ನೆರಳು ಬಿದ್ದರೆ ಅನುಕೂಲವಾಗುತ್ತದೆ. ಇತ್ತೀಚೆಗೆ ಚರ್ಮ ವಾದ್ಯಗಳ ಜಾಗದಲ್ಲಿ ಫೈಬರ್‌ನಿಂದ ಮಾಡಿದ ವಾದ್ಯಗಳು ಕಾಣಿಸಿಕೊಳ್ಳುತ್ತಿವೆ. ಇದೂ ಈ ಸಮಾಜದವರ ಕಸುಬಿಗೆ ಕೊಂಚ ಪೆಟ್ಟು ಬಿದ್ದಿದೆ. ಒಟ್ಟಿನಲ್ಲಿ ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಎಂಬಂತೆ ನಂಬಿರುವ ಕಸುಬುನ್ನು ಬಿಡದೆ ನಡೆಸಿಕೊಂಡು ಬಂದಿರುವ ಡೊಹರರು ನಾಡಿನ ಸಾಂಸ್ಕೃತಿಕ ಲೋಕಕ್ಕೆ ಭಾರಿ ಕೊಡುಗೆಯನ್ನೇ ನೀಡುತ್ತಾ ಬಂದಿದ್ದಾರೆ.
- ಕೆ.ವಿ.ಪ್ರಭಾಕರ
prabhukolar@yahoo.com