ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನೇತ್ರಾವತಿ ತಿರುವು, ಲಿಂಗನಮಕ್ಕಿ ಒಲವು, ಯಾವುದು ಪರ್ಯಾಯದ ಹರಿವು?

ಅಘನಾಶಿನಿ ನದಿಯ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಿ, ಅಲ್ಲಿಂದ ಅದನ್ನು...

Srinivasa Murthy VN
Updated On : 19 Oct 2013, 4:15 am

ವಿವಾದಗ್ರಸ್ತ ಎತ್ತಿನ ಹೊಳೆ ಯೋಜನೆಗೆ,  ಡಾ. ಮಧು ಸೀತಪ್ಪನವರು ಸೂಚಿಸಿದ್ದೆನ್ನಲಾಗಿರುವ ಪರ್ಯಾಯದ ಬಗ್ಗೆ ಎರಡು ಮಾತುಗಳನ್ನು ಬರೆಯಲು ಇಚ್ಛಿಸುತ್ತೇನೆ. ಅವರು ಹೇಳಿರುವಂತೆ ಅಘನಾಶಿನಿ ನದಿಯ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಿ, ಅಲ್ಲಿಂದ ಅದನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳಿಗೆ  ಸರಬರಾಜು ಮಾಡುವ ಯೋಜನೆಯು, ಮಂಡ್ಯ ಜಿಲ್ಲೆಯಿಂದ ಕಾವೇರಿಯ ನೀರನ್ನು ಬೆಂಗಳೂರು ನಗರಕ್ಕೆ ಸರಬರಾಜು ಮಾಡುತ್ತಿರುವ ಕೆಲಸದಷ್ಟೇ ಸುಲಭದ್ದು ಮತ್ತು ಪರಿಸರಕ್ಕೆ ಹಾನಿಕಾರಕವಲ್ಲದ್ದು ಎಂದು ಯಾರಾದರೂ ಭಾವಿಸಿದ್ದರೆ ಅವರನ್ನು ಅರಿವಿನ ಕೊರತೆ ಬಾಧಿಸುತ್ತಿದೆಯೆಂದು ಹೇಳಬಹುದು.
ಸಿದ್ದಾಪುರ ಅಥವಾ ಸಾಗರ ತಾಲ್ಲೂಕುಗಳಲ್ಲಿ ಯಾವುದೇ ಹೊಸ ಜಲಾಶಯದ ನಿರ್ಮಾಣವಿಲ್ಲದೆ, ಲಿಂಗನಮಕ್ಕಿ ಜಲಾಶಯವನ್ನೇ ಬಳಸಿಕೊಂಡು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬಹುದು ಎಂಬ ಆಲೋಚನೆಯು ಒಳ್ಳೆಯದೇ ಅನ್ನಿಸಿದರೂ, ವಿದ್ಯುತ್‌ಗೆ ತೊಂದರೆ ಆಗುತ್ತೋ ಬಿಡುತ್ತೋ, ಆದರೆ, ಕಾಡಿನ ನಾಶ ಮತ್ತು ಪರಿಸರಕ್ಕೆ  ಹಾನಿ ಆಗುವುದೇ ಇಲ್ಲ ಎಂಬುದು ಅಪ್ಪಟ ಸುಳ್ಳು.
ಲಿಂಗನಮಕ್ಕಿ ಜಲಾಶಯ ಮತ್ತು ಅಘನಾಶಿನಿ ನದಿಗಳ ನಡುವಿನ ಅಂತರ ಬಹಳ ಇಲ್ಲ ಎನ್ನುವುದು ಸತ್ಯವೇ ಆಗಿದ್ದರೂ, ಈ ಎರಡರ ಪರಿಸರದ  ಭೌಗೋಳಿಕ ರಚನೆಯು, ಯೋಜನೆಯ ಅನುಷ್ಠಾನಕ್ಕೆ ಒಡ್ಡುವ ಸವಾಲು ಸಾಮಾನ್ಯದ್ದಲ್ಲ ಎನ್ನುವುದೂ ಅಷ್ಟೇ ಸತ್ಯ.  ಅಘನಾಶಿನಿ ನದಿಯಿಂದ  ಅಗತ್ಯವಿರುವಷ್ಟು ನೀರನ್ನು ವರ್ಷವಿಡೀ ಅಷ್ಟಷ್ಟೇ ಎತ್ತಿ ಲಿಂಗನಮಕ್ಕಿಗೆ ಹರಿಸಬೇಕೋ ಅಥವಾ ಮಳೆಗಾಲದಲ್ಲಿ ಮಾತ್ರಾ ಆ ಕೆಲಸವನ್ನು ಮಾಡಬೇಕೋ ಗೊತ್ತಿಲ್ಲ. ಹೇಗೇ ಆಗಿದ್ದರೂ ಅಷ್ಟು ನೀರನ್ನು ಉಂಚಳ್ಳಿ ಜಲಪಾತದ ಹಿಂಭಾಗದ ಯಾವುದೇ ಭಾಗದಲ್ಲಿ ಎತ್ತಬೇಕು ಎಂದಾದರೆ, ಅದು ತುಂಬಾ ಹಿಂದೆ  ಆಗಿದ್ದರೆ, ಮಳೆಗಾಲದ ಹೊರತಾಗಿ ಅಗತ್ಯ ಪ್ರಮಾಣದ ನೀರು ಸಿಗುವುದು ಕಷ್ಟ. ಮತ್ತು ನೀರಿನ ಸಾಗಾಣಿಕೆಯ ದೂರ ಹೆಚ್ಚುತ್ತಾ ಹೋಗುತ್ತದೆ. ಆದರೆ, ಜಲಪಾತದ ಹಿಂದೆ ಐದು ಕಿಲೋಮೀಟರುಗಳಿಗಿಂತಾ ಕಡಿಮೆ ದೂರದಲ್ಲಿ ಎಲ್ಲೇ ಆಗಿದ್ದರೂ, ಒಂದು ಮಳೆಗಾಲದ ನಂತರ (ಮುಂದಿನ ಮುಂಗಾರು ಮಳೆ ಆರಂಭಗೊಂಡು, ಕನಿಷ್ಠ ಒಂದು ವಾರ ಕಳೆಯುವವರೆಗೂ) ಒಂದು ವಾರದಿಂದ 15-20 ದಿನಗಳವರೆಗೂ ಅಷ್ಟು ನೀರನ್ನು ಎತ್ತಿದ್ದೇ ಆದರೆ, ಈಗ ಮಳೆಗಾಲದ ನಂತರ ಜೋಗ ಜಲಪಾತದ ಸೊಬಗಿಗೆ ಉಂಟಾಗಿರುವ ಗತಿಯೇ  ಉಂಚಳ್ಳಿ ಜಲಪಾತಕ್ಕೂ ಒದಗಿ ಬರುವುದರಲ್ಲಿ ಸಂಶಯವಿಲ್ಲ.  
ಈ ಯೋಜನೆಯ ಮೊದಲನೆಯ ಹಂತದಲ್ಲಿ ಅಘನಾಶಿನಿ ನದಿಯಿಂದ ನೀರೆತ್ತುವ ಸ್ಥಳದಿಂದ ಲಿಂಗನಮಕ್ಕಿ ಜಲಾಶಯದವರೆಗೆ 35 ನೂಕೋ (ನೂರು ಕೋಟಿ) ಘನ ಅಡಿಗಳಷ್ಟು ನೀರನ್ನು ಸಾಗಿಸಲು ನಾಲೆಗಳ ನಿರ್ಮಾಣವಂತೂ ಸಾಧ್ಯವೇ ಇಲ್ಲ. ಅಲ್ಲಲ್ಲಿ ನಾಲೆಯಿಂದ ಕೊಳವೆ, ಕೊಳವೆಯಿಂದ ನಾಲೆ ಎಂದು, ನೀರನ್ನು ಸಾಗಿಸುವ  ಮಾಧ್ಯಮವನ್ನು ಬದಲಾಯಿಸಲೇ ಬೇಕಾಗುತ್ತದೆ. ಹೀಗೆ ಮಾಡುವುದಾದರೆ ನೀರನ್ನು ಎತ್ತಲೆಂದು ನಿರ್ಮಾಣಗೊಳ್ಳಬೇಕಾದ ಯಂತ್ರಸ್ಥಾವರಗಳ ಸಂಖ್ಯೆಯೂ ಹೆಚ್ಚುತ್ತದೆ. ಈ ಕೆಲಸವು ಇಂತಿಷ್ಟೇ ಕಷ್ಟದ್ದೆಂದು ಈಗ ಹೇಳಲು ಸಾಧ್ಯವೇ ಇಲ್ಲ. ಸಂಪೂರ್ಣವಾಗಿ ಕೊಳವೆಯ ಮಾರ್ಗವನ್ನೇ ಅಳವಡಿಸುವುದಾದರೆ, ಅದಕ್ಕಾಗಿ ಗಜಗಾತ್ರದ ಭಾರೀ ಸುತ್ತಳತೆಯ ಕೊಳವೆಗಳನ್ನು ಅಥವಾ ಹಲವು ಸಣ್ಣ ಅಳತೆಯ ಕೊಳವೆಗಳನ್ನು ಹೆಚ್ಚಾಗಿ ರಸ್ತೆಗಳ ಪಕ್ಕದಲ್ಲಿಯೇ  ಜೋಡಿಸಬೇಕಾಗುತ್ತದೆ. ಎಷ್ಟು ಲಕ್ಷ ಘನ ಅಡಿಗಳಷ್ಟು ಗುಡ್ಡಗಳನ್ನು ರಸ್ತೆಗಳ ಬದಿಯಲ್ಲೇ ಅಗೆದು ಜರಿಸಬೇಕಾಗುತ್ತದೆ, ಎಷ್ಟು ಲಕ್ಷ ಮರಗಿಡಗಳನ್ನು ಕಡಿಯಬೇಕಾಗುತ್ತದೆ, ಅಲ್ಲಲ್ಲಿ ಎಷ್ಟು ಸಾವಿರ ಘನ ಅಡಿಗಳಷ್ಟು ಕಾಂಕ್ರೀಟ್ ತಳಪಾಯವನ್ನು ಹಾಕಬೇಕಾಗುತ್ತದೆ, ಪರಿಸರದ ಮೇಲೆ ಅದರಿಂದಾಗುವ ಒಟ್ಟು ದುಷ್ಪರಿಣಾಮ ಎಂಥಾದ್ದು ಎಂದೆಲ್ಲಾ  ಯೋಚಿಸಿದರೆ, ಈ ಯೋಜನೆಯೇ ಬೇಡ ಎನ್ನಿಸುತ್ತದೆ.
ಈ ಪ್ರದೇಶದಲ್ಲಿರುವ ಹಳ್ಳಿಗಳ ನಿವಾಸಿಗಳ ಬದುಕಿಗೆ ಪ್ರಮುಖ ಆಧಾರವೆಂದರೆ, ಬಹುತೇಕ ಇಲ್ಲಿಯ ಗುಡ್ಡಗಳ ನಡುವಿನ ತಗ್ಗಿನಲ್ಲಿರುವ ಅಡಿಕೆ ತೋಟಗಳು. ಅಘನಾಶಿನಿಯ ನೀರನ್ನು ಲಿಂಗನಮಕ್ಕಿಗೆ ಸಾಗಿಸುವ ದೂರವನ್ನು ಕಡಿಮೆಗೊಳಿಸಲೆಂದು ಕೈಗೊಳ್ಳುವ ಕ್ರಮದಿಂದ, ಮಾರ್ಗದಲ್ಲಿ ಅಡ್ಡ ಇರಬಹುದಾದ ಯಾವುದೇ  ತೋಟಕ್ಕೆ ಹಾನಿಯಾಗುವುದನ್ನು ಅಡಿಕೆ ಬೆಳೆಗಾರರು ಎಂದಿಗೂ ಸಹಿಸಲಾರರು. ಬಯಲು ಸೀಮೆಯ ಐದು ಜಿಲ್ಲೆಗಳ ಜನರ-ಜಾನುವಾರುಗಳ ನೀರಿನ ಬವಣೆಯನ್ನು ಕೊನೆಗಾಣಿಸಲು ಮಲೆನಾಡಿನ ಜನರು ತ್ಯಾಗಕ್ಕೆ ಸಿದ್ಧರಾಗಿ ಮಾನವೀಯತೆಯನ್ನು  ಮೆರೆಯಬೇಕು ಎಂದು ಸರ್ಕಾರ ಹೇಳಬಹುದು. ಸ್ವಂತ ಲಾಭದ ನಿರೀಕ್ಷೆಗಳನ್ನು ಹೊಂದಿರುವ ಯಾರೇ ಆದರೂ ಯೋಜನೆಯ ಪರವಾಗಿ ಭಾಷಣಗಳನ್ನೂ ಮಾಡಬಹುದು. ಆದರೆ, ಸಂತ್ರಸ್ತರಾಗಲಿರುವ ಮಲೆನಾಡಿನ ಪ್ರಜೆಗಳಿಂದ ತ್ಯಾಗ ಬಲಿದಾನಗಳನ್ನು ಬಯಸುವ ಜನರಿಗೆ ತಾವೇ ಆ ಸ್ಥಿತಿಗೆ ದೂಡಲ್ಪಟ್ಟರೆ ಹೇಗಾದೀತು ಎಂಬ ಸದಾಲೋಚನೆಯೂ ಇರಬೇಕಾಗುತ್ತದೆ.
ಬೆಳೆಯುತ್ತಿರುವ ನಗರವಾದ ಶಿರಸಿಯ ಕುಡಿಯುವ ನೀರಿನ ಬೇಡಿಕೆ ಈಗ ಇರುವಷ್ಟೇ ಮುಂದೆಯೂ ಇರುತ್ತದೆ ಎನ್ನಲಾಗದು. ಹಾಲಿ ಈ ನಗರವು ತನ್ನ ಅಗತ್ಯದ ಪೂರೈಕೆಗಾಗಿ ಕೆಂಗ್ರೆ ಮತ್ತು ಮಾರಿಗದ್ದೆ ಜಲ ಮೂಲಗಳಿಂದ ನೀರನ್ನು ಪಡೆಯುತ್ತಿದ್ದರೂ                                                                    ಕೆಲವೇ ವರ್ಷಗಳಲ್ಲಿ ಈ ಪೂರೈಕೆಯು ಕಡಿಮೆಯೆನ್ನಿಸಿ ಶಾಲ್ಮಲಾ ಅಥವಾ  ಅಘನಾಶಿನಿಯಿಂದಲೇ  ಪಡೆಯಬೇಕಾಗಬಹುದು. ಒಮ್ಮೆ ಅಘನಾಶಿನಿ ನದಿಯ ನೀರನ್ನು ಲಿಂಗನಮಕ್ಕಿ ಜಲಾಶಯದ ಮೂಲಕವಾಗಿಯಾಗಲೀ,  ಬೇರೆ ಮಾರ್ಗದಿಂದಾಗಲೀ ಐದು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ  ಸರಬರಾಜು ಮಾಡುವ ಕೆಲಸವು ಕಾರ್ಯರೂಪಕ್ಕೆ ಬಂತೆಂದರೆ, ಹತ್ತಿರದ ನಗರ ಪಟ್ಟಣಗಳಿಗೆ ಅಘನಾಶಿನಿಯ ನೆರವು ದೊರಕುವುದು ದುಸ್ತರವೇ.  
ಅಘನಾಶಿನಿಯಿಂದ ಪಡೆಯುವ 35 ನೂಕೋ ಘನ ಅಡಿ ನೀರಿನ ಜೊತೆಯಲ್ಲಿ, ಲಿಂಗನಮಕ್ಕಿ ಜಲಾಶಯದಿಂದಲೂ 15 ನೂಕೋ ಘನ ಅಡಿ ನೀರನ್ನು ಸಾಗಿಸುವ ವಿಷಯದ ಬಗ್ಗೆ  ಸ್ವಲ್ಪ ಗಂಭೀರವಾಗಿಯೇ ಚಿಂತಿಸಬೇಕಾಗುತ್ತದೆ. ಅದರಲ್ಲೂ ಈಗ ಸಾಗರ ನಗರದ ಹಾಗೂ ಮಾರ್ಗದಲ್ಲಿರುವ ಕೆಲವು ಹಳ್ಳಿಗಳ ಕುಡಿಯುವ ನೀರಿನ ಕೊರತೆಯನ್ನು ನೀಗಿಸುವುದಕ್ಕಾಗಿ, ಲಿಂಗನಮಕ್ಕಿಯ ಹಿನ್ನೀರನ್ನೇ ಆಶ್ರಯಿಸುವ ಯೋಜನೆಯು ಪ್ರಗತಿಯಲ್ಲಿರುವಾಗ, ಈ ಜಲಾಶಯದ ನೀರಿಗಾಗಿ ಸಿದ್ದಾಪುರದ ಬೇಡಿಕೆಯೂ ಮುಂದೆ ಬಂದರೆ, ವಿದ್ಯುದುತ್ಪಾದನೆಗೆ ನೀರಿನ ಕೊರತೆಯಾಗದ ರೀತಿಯಲ್ಲಿ ಈ ಅಗತ್ಯಗಳ ನಿರ್ವಹಣೆ ನಡೆಯಬೇಕಾಗುತ್ತದೆ. ಹಂಚಿಕೊಂಡು ತಿನ್ನಬೇಕು ಎಂಬ ತತ್ವ ಸರಿಯೇ. ಆದರೆ, ನಾವು ಉಪವಾಸವಿದ್ದು ಮತ್ತೊಬ್ಬರ ನೆರವಿಗೆ ಹೋಗಬೇಕು ಎಂದರೆ, ನಮ್ಮ ಆ ನೆರವಿನ ಪ್ರಮಾಣ ಎಷ್ಟಿರಬೇಕು, ಹೇಗಿರಬೇಕು, ನೆರವಿನ ವಿಧಾನ ಮತ್ತು ಮಾರ್ಗಗಳು ಯುಕ್ತವೇ ಎಂದೂ ಯೋಚಿಸಿ ಮುನ್ನಡೆಯಬೇಕಲ್ಲವೇ?  
ಪ್ರಸ್ತಾವಿತ ಯೋಜನೆಯ ಎರಡನೆಯ ಹಂತದ ಕಾಮಗಾರಿಯ ಬಗ್ಗೆ ಯೋಚಿಸುವುದಾದರೆ, ಈ ಕಾಮಗಾರಿಯಲ್ಲಿ ಲಿಂಗನಮಕ್ಕಿಯಿಂದ ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಮೂಲಕ ಚಿಕ್ಕಬಳ್ಳಾಪುರ ಇತ್ಯಾದಿ ಜಿಲ್ಲೆಗಳ ಬರಪೀಡಿತ ತಾಲ್ಲೂಕುಗಳ ಜನರ ಉಪಯೋಗಕ್ಕಾಗಿ ನಿರ್ದಿಷ್ಟ ಜಲಾಶಯದವರೆಗೆ ನೀರನ್ನು ಸಾಗಿಸುವ ವ್ಯವಸ್ಥೆ. ಈ ಮಾರ್ಗದಲ್ಲಿ ಅನೇಕ ಹೊಳೆಗಳು, ತುಂಗಾ ಮತ್ತು ಭದ್ರಾದಂತಹ ನದಿಗಳು, ಮತ್ತು ಈಗಾಗಲೇ ನಿರ್ಮಾಣಗೊಂಡಿರುವ ದೊಡ್ಡ ದೊಡ್ಡ ನಾಲೆಗಳು, ಬೇಸಾಯಕ್ಕೆ ಬಳಕೆಯಾಗುತ್ತಿರುವ ಫಲವತ್ತಾದ ಹೊಲ-ಗದ್ದೆ-ತೋಟಗಳು ಇರುವಾಗ ಅವುಗಳನ್ನೆಲ್ಲಾ ದಾಟಿ ಸಾಗಬೇಕಾದ, 50 ನೂಕೋ ಘನ ಅಡಿಗಳಷ್ಟು ನೀರಿನ ಹರಿವಿಗೆ ಅನುಕೂಲವಾಗುವಂಥಾ ನಾಲೆಯ ನಿರ್ಮಾಣ ಸಾಧ್ಯವೇ? ತಂತ್ರಜ್ಞರು ಮನಸ್ಸು ಮಾಡಿದರೆ ಅಸಾಧ್ಯವೇನಲ್ಲ. ದಾರಿಯಲ್ಲಿ ತಮ್ಮ ಜಮೀನಿನ ಭಾಗಗಳನ್ನು ಕಳೆದುಕೊಳ್ಳುವವರಿಗೆ ಪರಿಹಾರವನ್ನೂ ಸರ್ಕಾರವು ಕೊಡಬಹುದು. ಆದರೆ  ಇವೆಲ್ಲಾ  ಆಗಬೇಕಾದರೆ ಇನ್ನೂ ಏನೇನು ಮಾಡಬೇಕು ಎಂದು ಒಂದು ಕ್ಷಣ ಯೋಚಿಸಿದರೆ, ಎತ್ತಿನಹೊಳೆ  ಯೋಜನೆಯ ಕೆಲಸಕ್ಕೆ ಖರ್ಚಾಗಲಿರುವ ಹಣದ ದುಪ್ಪಟ್ಟೋ ಅಥವಾ ಇನ್ನೂ ಹೆಚ್ಚೋ ಇದಕ್ಕೆ ಬೇಕಾಗಬಹುದು. ಶಿವಮೊಗ್ಗ ಜಿಲ್ಲೆಯಾಚೆ ನೀರಿನ ಸಾಗಣೆಗೆ, ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗಳನ್ನೇ ಬಳಸಿಕೊಳ್ಳಬಹುದು ಎಂದರೂ, ಅಲ್ಲಿಯವರೆಗಂತೂ ಕಷ್ಟವೇ. ಕೊಳವೆ ಮಾರ್ಗವನ್ನೇ ನಿರ್ಮಿಸುವುದಾದರೂ, ಕನಿಷ್ಠ ಲಿಂಗನಮಕ್ಕಿಯಿಂದ ಚಿತ್ರದುರ್ಗ ಜಿಲ್ಲೆಯವರೆಗಿನ, ಸೂಕ್ತವೆನ್ನಿಸುವ, ಸಮೀಪದ ಮಾರ್ಗದಲ್ಲಿರುವ ಚನ್ನಗಿರಿ ತಾಲ್ಲೂಕಿನ ಜೋಳದಾಳು ಎಂಬ ಹಳ್ಳಿಯವರೆಗೆ ಅಥವಾ ಈ ಹಳ್ಳಿಯ ದಕ್ಷಿಣಕ್ಕಿರುವ ಪ್ರದೇಶದವರೆಗೆ ಎಷ್ಟು ಸಾವಿರ ಮರಗಳನ್ನು ಧರೆಗುರುಳಿಸಬೇಕಾಗುತ್ತದೆ ಎಂದು ಲೆಕ್ಕಹಾಕಿ ನೋಡಲಿ.  ಕಾಡಿನ ಭಾಗಗಳನ್ನು ತಪ್ಪಿಸಿ ಕೊಳವೆಗಳನ್ನು ಅಳವಡಿಸುತ್ತೇವೆ ಎಂಬ ಮಾತು ಕೇಳಲು ಹಿತವೆನ್ನಿಸುವ ಅಥವಾ ಕಾಗದದ ಮೇಲಿನ ಓದಲು ಖುಶಿಯಾಗುವ ಮಾತಾಗಿ ಉಳಿಯಬಹುದಷ್ಟೇ.
ಲಿಂಗನಮಕ್ಕಿ ಜಲಾಶಯದಿಂದ ನೀರು ಸಿಕ್ಕರೆ ಸಿಗಲಿ, ಅಘನಾಶಿನಿಯದಂತೂ ಬೇಕೇ ಬೇಕು ಎಂಬ ನಿರ್ಧಾರಕ್ಕೆ ಸರ್ಕಾರವು ಬಂದದ್ದೇ ಆದರೆ, ಅಘನಾಶಿನಿಯೊಂದಿಗೆ ವರದಾನದಿ ಸೇರಿಸಿಕೊಂಡು ತರಬಹುದಾದ ಪರ್ಯಾಯ ಯೋಜನೆಯೊಂದರ ಬಗ್ಗೆ ಹೇಳುತ್ತೇನೆ. ಬೇಡ್ತಿ ಮತ್ತು ವರದಾ ನದಿಗಳನ್ನು ಜೋಡಿಸುವ ಯೋಜನೆಯನ್ನು ಬದಿಗಿಟ್ಟು ನೋಡಿದಾಗ, ಮೇಲೆ ಹೇಳಿರುವ ಐದು ಜಿಲ್ಲೆಗಳ ಬರಪೀಡಿತ ಪ್ರದೇಶಗಳ ನೆರವಿಗೆ ವರದಾ ಹೇಗೆ ಸಹಕಾರಿಯಾಗಬಹುದು ಎಂದು ನೋಡೋಣ.   
ಉಂಚಳ್ಳಿ ಜಲಪಾತದಿಂದ ಐದು ಕಿಲೋಮೀಟರುಗಳಿಗಿಂತಲೂ ಹಿಂದೆ, ಸೂಕ್ತ ಸ್ಥಳದಲ್ಲೇ, ಈಗಾಗಲೇ ಹೇಳಿರುವಂತೆ ಮಳೆಗಾಲದಲ್ಲಿ ಮಾತ್ರ ಮತ್ತು ಹೆಚ್ಚೆಂದರೆ ಅಕ್ಟೋಬರ್ ತಿಂಗಳ ಮಧ್ಯಭಾಗದವರೆಗೆ, ಅಘನಾಶಿನಿಯ ನೀರನ್ನು ಎತ್ತುವ ಕಾರ್ಯವನ್ನು ಕೈಗೊಂಡರೂ, ಅಲ್ಲಿಂದ ನೀರನ್ನು ಪರಿಸರಕ್ಕೆ ಹಾಗೂ ಮಾರ್ಗದಲ್ಲಿರುವ ಹಳ್ಳಿಗಳ ನಿವಾಸಿಗಳಿಗೆ ಹೆಚ್ಚು ತೊಂದರೆಯಾಗದಂತೆ, ಪೂರ್ವಾಭಿಮುಖವಾಗಿ ಕೊಳವೆಗಳಲ್ಲಿ ಸಾಗಿಸಿ, 25-30 ಕಿಲೋಮೀಟರುಗಳಿಗಿಂತ ಕಡಿಮೆ ಅಂತರದಲ್ಲೇ ಹರಿಯುವ ವರದಾ ನದಿಗೆ, ಸೊರಬ ತಾಲೂಕಿನ ಚಂದ್ರಗುತ್ತಿಗೆ ಸ್ವಲ್ಪ ಹಿಂದೆ ಸೇರಿಸಬೇಕು. ಯಾವುದೇ ಜಲಾಶಯದ ನಿರ್ಮಾಣದ ಅಗತ್ಯವೂ ಇರುವುದಿಲ್ಲ. ಆದರೆ, ಒಂದು ತೊಂದರೆಯಿದೆ. ಅಘನಾಶಿನಿಯ ನೀರನ್ನು ವರದಾ ನದಿಗೆ ಸೇರಿಸುವ ಸ್ಥಳಕ್ಕೂ ಹಿಂದೆ, ನದಿಯ ಮೇಲ್ಭಾಗದ ಸಾಗರ ತಾಲ್ಲೂಕಿನ ಕೆಲವು ಕಡೆಗಳಲ್ಲಿ, ಮಳೆಗಾಲದ ದೊಡ್ಡ ಮಳೆಗಳು ಸುರಿಯುವ ಕೆಲವು ದಿನಗಳ ಕಾಲ ಅಕ್ಕ ಪಕ್ಕದ ಕೃಷಿ ಭೂಮಿಯ  ಮುಳುಗಡೆಯು ಪ್ರತಿ ವರ್ಷದ ವಿದ್ಯಮಾನವಾಗಿದೆ. ಹಾಗಾಗಿ, ವರದಾ ನದಿಯಲ್ಲಿ ಪ್ರವಾಹ ಏರಿದಾಗ ಅಘನಾಶಿನಿಯ ನೀರನ್ನು  ವರದಾಕ್ಕೆ ಸೇರಿಸುವಂತಿಲ್ಲ. ಆದ್ದರಿಂದ, ಅಘನಾಶಿನಿಯ ನೀರನ್ನು  ವರದಾ ನದಿಗೆ ಹರಿಸುವ ದಿನಗಳಲ್ಲಿ, ಪ್ರತಿ ಅರ್ಧ ಗಂಟೆ ಒಂದು ಗಂಟೆಗೊಮ್ಮೆ, ವರದಾ ನದಿಗೆ ಮೇಲ್ಭಾಗದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣದ ಬಗ್ಗೆ  ಅಗತ್ಯ ಮಾಹಿತಿಗಳನ್ನು ಪಡೆಯುತ್ತಾ, ಸೂಕ್ತವೆನ್ನಿಸುವಷ್ಟು  ಪ್ರಮಾಣದ ನೀರನ್ನು ಮಾತ್ರಾ  ಎತ್ತಿ ಹರಿಸಬೇಕಾಗುತ್ತದೆ.  
ಪ್ರಸ್ತಾವಿತ ದಂಡಾವತಿ ಯೋಜನೆಯೇನಾದರೂ ಕಾರ್ಯರೂಪಕ್ಕೆ ಬಂದರೆ, ಮಳೆಗಾಲದಲ್ಲಿ ಬಂಕಸಾಣದಲ್ಲಿ ವರದಾ ನದಿಗೆ ಬಂದು ಸೇರುವ ದಂಡಾವತಿಯ ನೀರಿನ ಪ್ರಮಾಣವು ತುಂಬಾ ಕಡಿಮೆಯಾಗುವ ಕಾರಣದಿಂದ, ಚಂದ್ರಗುತ್ತಿಯಿಂದಾಚೆಯ ವರದಾ ನದಿಯ ಕೆಳ ಹರಿವಿನ ಪ್ರಮಾಣವು ಹೆಚ್ಚಿ, ಸಾಗರ ತಾಲ್ಲೂಕಿನಲ್ಲಿ  ಮಳೆಗಾಲದಲ್ಲಿ ಈಗ ಕಂಡುಬರುವ ಮೇಲೆ ಹೇಳಿರುವ ಪ್ರವಾಹದ ಭೀತಿಯು ನೂರಕ್ಕೆ ಐವತ್ತರಿಂದ ಅರವತ್ತರಷ್ಟು ಕಡಿಮೆಯಾಗಬಹುದು. ಆದರೆ, ಇದೊಂದು ಕಾರಣಕ್ಕಾಗಿಯೇ ದಂಡಾವತಿ ಯೋಜನೆಯನ್ನು ಸಮರ್ಥಿಸುವ ಹಾಗಿಲ್ಲ. ಅದರಿಂದ ಉಂಟಾಗಬಹುದಾದ  ಸಮಸ್ಯೆಗಳನ್ನೂ ಎಚ್ಚರಿಕೆಯಿಂದಲೇ ಪರಿಹರಿಸಿಕೊಳ್ಳಬೇಕಾಗುತ್ತದೆ.
ವರದಾ ನದಿಯನ್ನು ಸೇರುವ ಅಘನಾಶಿನಿಯ 35 ನೂಕೋ ಘನ ಅಡಿ ನೀರು ವರದಾ ನದಿಯ ಭಾಗವಾಗಿಯೇ ಮುಂದಕ್ಕೆ ಹರಿದು, ಹಾವೇರಿ ಜಿಲ್ಲೆಯ ಗಳಗನಾಥದಲ್ಲಿ ತುಂಗಭದ್ರಾ ನದಿಯನ್ನು ಸೇರಿ, ಅಲ್ಲಿಂದ ಮುಂದಕ್ಕೆ  ತುಂಗಭದ್ರಾ ಜಲಾಶಯದ, ಈಗಾಗಲೇ ಇರುವ ಬಲದಂಡೆ ನಾಲೆಯ ಮೂಲಕ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯವರೆಗೂ ಸಾಗುತ್ತದೆ. ಅನಂತರ, ತುಮಕೂರು ಹಾಗೂ ಉಳಿದ ನಾಲ್ಕು ಜಿಲ್ಲೆಗಳ ಬರಪೀಡಿತ ಪ್ರದೇಶಗಳು ಅನಂತಪುರ ಜಿಲ್ಲೆಯಿಂದ ಈ ನೀರನ್ನು ನಾಲೆ ಅಥವಾ ಕೊಳವೆ ಮಾರ್ಗಗಳ ಮೂಲಕ ಪಡೆಯಬೇಕಾಗುತ್ತದೆ.  
ಈ ಬದಲಾದ ಯೋಜನೆಯಲ್ಲಿ  ಅಘನಾಶಿನಿ ನದಿಯ ನೀರನ್ನು ವರದಾ ನದಿಗೆ ಸೇರಿಸುವ ಕೊಳವೆ ಮಾರ್ಗವು ಸಿದ್ದಾಪುರ ಮತ್ತು ನಾಣಿಕಟ್ಟಾ ನಡುವೆ ಸಿದ್ದಾಪುರ-ಶಿರಸಿ ರಸ್ತೆಯನ್ನು ದಾಟಬೇಕಾಗುತ್ತದೆ. ಹೀಗೆ ದಾಟುವ ಸ್ಥಳದಿಂದ ಮುಂದಕ್ಕೆ  ಸೊರಬ ತಾಲ್ಲೂಕಿನ ಭಾಗದಲ್ಲಿ ಕೊಳವೆ ಮಾರ್ಗದ ಬದಲು, ಸೂಕ್ತವೆನ್ನಿಸಿದರೆ, ಹೆಚ್ಚಿನ ವನ್ಯ ಸಂಪತ್ತಿನ ನಾಶದ ಅಗತ್ಯವಿಲ್ಲದಂತೆ ನಾಲೆಯ ನಿರ್ಮಾಣವು ಸಾಧ್ಯವಾಗುವುದಾದರೆ ಅದನ್ನೂ ಮಾಡಬಹುದು. ಮುಂದೆ ಎಂದಾದರೂ ಸಿದ್ದಾಪುರ ಪಟ್ಟಣಕ್ಕೆ ಅಘನಾಶಿನಿಯ ನೀರನ್ನೇ ಪಡೆಯಬೇಕಾದಾಗ, ಈ ಕೊಳವೆ/ನಾಲೆ ಮಾರ್ಗ ಮತ್ತು ಸಿದ್ದಾಪುರ ಪಟ್ಟಣಗಳ ನಡುವಿನ ಅತ್ಯಂತ ಕಡಿಮೆ ದೂರದ ಜಾಗದಿಂದಲೇ ನೀರನ್ನು ಎತ್ತಿ ಮತ್ತೊಂದು ಕೊಳವೆ ಮಾರ್ಗದ ಮೂಲಕ ಸಿದ್ದಾಪುರ ಪಟ್ಟಣಕ್ಕೂ ಹರಿಸಲು ಅನುಕೂಲವಾಗುವಂತೆಯೂ ವ್ಯವಸ್ಥೆ ಮಾಡಬಹುದು.
ಇನ್ನು ಎತ್ತಿನಹೊಳೆ ಯೋಜನೆಗೆ ಪರ್ಯಾಯ ಯೋಜನೆಯನ್ನು ಸಾಧ್ಯವಾ ಗಮನಿಸೋಣ. ಮಳೆಗಾಲದಲ್ಲಿ  ಘಟ್ಟದ ಮೇಲಿಂದ ನೇತ್ರಾವತಿಯಲ್ಲಿ ಹೆಚ್ಚುವರಿಯಾಗಿ ಹರಿದು ಬರುವ ನೀರು ವ್ಯರ್ಥವಾಗಿ ಸಮುದ್ರವನ್ನು ಸೇರುತ್ತದೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ,  ಆ ಹೆಚ್ಚುವರಿ ನೀರಿನ ಅವಶ್ಯಕತೆ ಘಟ್ಟದ ಕೆಳಗಿನ ಜನರಿಗೆ, ಜಲಚರಗಳಿಗೆ ಎಷ್ಟು ಇದೆ ಎಂಬುದನ್ನು ಅಲ್ಲಿಯ ಸಾಮಾನ್ಯ ಜನರೂ ಪರಿಸರವಾದಿಗಳೂ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಆದರೆ, ಬರಪೀಡಿತ ಜಿಲ್ಲೆಗಳ ನೀರಿನ ಅಗತ್ಯವನ್ನು ಪೂರೈಸುವ ವಿಚಾರವನ್ನೂ ನಿರ್ಲಕ್ಷ್ಯಿಸಬಾರದು ಎಂಬುದೂ ನ್ಯಾಯವೇ. ಹಾಗಾದರೆ ಏನು ಮಾಡಬಹುದು?
ಮೊದಲು, ಘಟ್ಟದ ಕೆಳಗಿನ ಭಾಗದಲ್ಲಿ, ಸಮುದ್ರವನ್ನು ಸೇರುವವರೆಗೂ, ಮಳೆಗಾಲದಲ್ಲಿ ನೇತ್ರಾವತಿ ನದಿಯಲ್ಲಿ, ಎಲ್ಲಾ ರೀತಿಯಲ್ಲೂ ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಇರಲೇಬೇಕಾದ ನೀರಿನ ಕನಿಷ್ಠ ಪ್ರಮಾಣವೆಷ್ಟು ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಿ, ಅದಕ್ಕಿಂತಾ ಹೆಚ್ಚಿನ ಪ್ರಮಾಣದ ನೀರು ಘಟ್ಟದ ಮೇಲಿಂದ ಹರಿದು ಬರುತ್ತಿದ್ದರೆ, ಆ ಹೆಚ್ಚಿನ ಪ್ರಮಾಣದ ನೀರನ್ನು ಬರಪೀಡಿತ ಪ್ರದೇಶಗಳಿಗೆ ಪೂರೈಸಲು ಸಾಧ್ಯವೇ ಎಂದು ಯೋಚಿಸಬೇಕು. ಸಾಧ್ಯ ಎಂದಾದರೆ ಮೂಡಿಗೆರೆ ತಾಲ್ಲೂಕಿನ, ನೇತ್ರಾವತಿ ಜಲಾನಯನ ಪ್ರದೇಶದ, ಗುಡ್ಡಗಳ ಯಾವ ಭಾಗದಲ್ಲಿ ಸುರಿಯುವ ಮಳೆಯಿಂದ ಈ ಹೆಚ್ಚಿನ ಪ್ರಮಾಣದ ನೀರು ದೊರೆಯುತ್ತದೆ ಎಂಬುದನ್ನು ಗುರುತಿಸಿ, ಆ ನೀರು ಮಾತ್ರ ಸಣ್ಣ ಸಣ್ಣ ಕಾಲುವೆಗಳ ಮೂಲಕ ಬನಕಲ್ ಬಳಿ ಅಥವಾ ಇನ್ನೂ ಸ್ವಲ್ಪ ಹಿಂದೆ ಹೇಮಾವತಿ ನದಿಯನ್ನು ಸೇರುವಂತೆ ಮಾಡಬೇಕು. ಆದರೆ ಈ ಕ್ರಮವು ಮುಂದಿನ ಪ್ರದೇಶಗಳಲ್ಲಿ ಹೇಮಾವತಿ ನದಿಯ ಅಕ್ಕಪಕ್ಕದ ಕೃಷಿ ಜಮೀನುಗಳ ಹಾಗೂ ಹಳ್ಳಿಗಳ ಮುಳಗಡೆಗೆ ಕಾರಣವಾಗಬಾರದು. ಮುಂದೆ ಆ ನೀರು ಹೇಮಾವತಿಯ ಭಾಗವೇ ಆಗಿ ಗೊರೂರು ಜಲಾಶಯವನ್ನು ಸೇರುತ್ತದೆ. ಗೊರೂರು ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸದೇ, ಜಲಾಶಯಕ್ಕೆ  ಹರಿದು ಬರುವ ಹೆಚ್ಚುವರಿ ನೀರನ್ನು ಆಗಿಂದಾಗ್ಗೆ ಸೂಕ್ತ ನಾಲೆಗಳ/ಕೊಳವೆಗಳ ಮೂಲಕ ಬರಪೀಡಿತ ಜಿಲ್ಲೆಗಳಿಗೆ ಸಾಗಿಸಬಹುದು.  ಈ ಪ್ರಕಾರ ಹೇಮಾವತಿಯ ಮೂಲಕ ದೊರೆಯುವ ನೀರಿನ ಪ್ರಮಾಣವು 50 ನೂಕೋ ಘನ ಅಡಿ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ತೀರಾ ಕಡಿಮೆಯೇನೂ ಆಗದು ಎಂಬ ನಂಬಿಕೆ ನನಗಿದೆ.  
ಈ ಎರಡು ಪರ್ಯಾಯ ಸಾಧ್ಯತೆಗಳ ವಿಚಾರದಲ್ಲಿ,  ಸಂಬಂಧಿಸಿದ ಎಲ್ಲಾ ತಾಲ್ಲೂಕುಗಳ ಜನರೊಂದಿಗೆ  ಪಾರದರ್ಶಕವಾಗಿ ಚರ್ಚಿಸಿ, ಬಹುಮತ ಅಭಿಪ್ರಾಯಕ್ಕೆ ಮನ್ನಣೆಯನ್ನು ನೀಡಿ  ನಿರ್ಧಾರಕ್ಕೆ ಬರಬಹುದಾಗಿದೆ.

- ಬೊ. ನಾ. ಕೃಷ್ಣಮೂರ್ತಿ
 ಸಾಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement