ಬೋಸ್ರ ದೇಶಪ್ರೇಮ ನೆನೆಯುತ್ತಾ...
1943ರ ಆ ದಿನದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಸರ್ಕಾರ...
ಅಕ್ಟೋಬರ್ 21 ಭಾರತೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ರಚಿಸಲ್ಪಟ್ಟ ದಿನ. 1943 ರ ಆ ದಿನದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿದರು. ಬೋಸರು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದವರು. ಪರ್ಯಾಯ ಪ್ರಾಯೋಗಿಕ ಸರ್ಕಾರವನ್ನೇ ರಚಿಸಿದ್ದ ಅವರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ.
ಬ್ರಿಟಿಷರು ಭಾರತೀಯ ಕ್ರಾಂತಿಕಾರಿಯೋಧರ ಸಾಹಸ, ಶೌರ್ಯದ ಬಗ್ಗೆ ಬಹಳ ಹೆದರಿದ್ದರು. ಇವರ ಬಗ್ಗೆ ಬ್ರಿಟಿಷ್ ಪತ್ರಾಗಾರಗಳಲ್ಲಿ ಭಾರೀ ಪ್ರಮಾಣದ ದಾಖಲೆಗಳಿವೆ. ಸುಭಾಷ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾದಾಗ ಭಾರತಕ್ಕೆ ತಾತ್ಕಾಲಿಕ ಪ್ರಯೋಗಾತ್ಮಕ ಸರ್ಕಾರವನ್ನು ಸ್ಥಾಪಿಸಿ, ನಡೆಸುವ ವಿಚಾರವನ್ನು ನಾಯಕರ ಸಭೆಯಲ್ಲಿ ಮಂಡಿಸಿದ್ದರು. ಐರ್ಲೆಂಡ್ ದೇಶದಲ್ಲಿ ಇದೇ ಮಾದರಿಯಲ್ಲಿ ಸರ್ಕಾರ ನಡೆದಿದ್ದರ ನಿದರ್ಶನವನ್ನೂ ನೀಡಿದ್ದರು. ಆದರೆ ಕಾಂಗ್ರೆಸ್ ಇದಕ್ಕೆ ಅನುಮತಿ ನೀಡಲಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದ ಸುಭಾಷ್ ತಮ್ಮ ಕನಸಿನ ತಾತ್ಕಾಲಿಕ ಸರ್ಕಾರದ ರಚನೆಗೆ ಇಟಲಿ ಹಾಗೂ ಜರ್ಮನಿಯ ಪೂರ್ಣ ಬೆಂಬಲ ಪಡೆದುಕೊಂಡು ಜಪಾನಿನ ನೆರವಿಗಾಗಿ ಕಾಯುತ್ತಿದ್ದರು.
ವಿಖ್ಯಾತ ಕ್ರಾಂತಿಕಾರಿಯೋಧ ರಾಸ್ ಬಿಹಾರಿ ಬೋಸ್ರಿಂದ ಭಾರತೀಯ ರಾಷ್ಟ್ರೀಯ ಸೈನ್ಯದ ನಾಯಕತ್ವವನ್ನು ವಹಿಸಿಕೊಂಡ ಸುಭಾಷ್ ಅದಕ್ಕೆ ಹೊಸ ಪ್ರೇರಣೆ, ಚೈತನ್ಯವನ್ನು ನೀಡಿದರು. ಏಷಿಯಾ ಖಂಡದಲ್ಲೇ ಪ್ರಥಮವೆನಿಸುವಂತೆ ಮಹಿಳಾ ಸೇನೆಯನ್ನು ಸ್ಥಾಪಿಸಿ ಅದಕ್ಕೆ "ಝಾನ್ಸಿ ರಾಣಿ ಲಕ್ಷ್ಮೀಬಾಯಿ ವನಿತಾ ಸೇನೆ" ಎಂಬ ಹೆಸರನ್ನಿರಿಸಿದರು. 1943ರಲ್ಲಿ ಸಿಂಗಾಪುರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಸೇನೆಯ ಕವಾಯಿತನ್ನು ನೋಡಲು ಜಪಾನ್ನ ಪ್ರಧಾನಿ ಟೋಜೋರವರು ಸಿಂಗಾಪೂರಿಗೆ ಬಂದಿದ್ದರೆಂಬುದು ಭಾರತದ ಇತಿಹಾಸದ ಮೈಲಿಗಲ್ಲು. ಕ್ರಮೇಣ ದಕ್ಷಿಣ ಪೂರ್ವ ಏಷಿಯಾದ ಅನೇಕ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಿ ನಾಯಕರ ಬೆಂಬಲ ಪಡೆದ ಸುಭಾಷ್ ತಾತ್ಕಾಲಿಕ ಸರ್ಕಾರದ ಸ್ಥಾಪನೆಗೆ ನಿರ್ದಿಷ್ಟ ರೂಪವನ್ನು ನೀಡಿದರು. ಅಕ್ಟೋಬರ್ 10, 1943 ರಂದು ಸಿಂಗಾಪುರದಲ್ಲಿ ಮಧ್ಯಾಹ್ನ 4 ಗಂಟೆಗೆ "ಆಜಾದ್ ಹಿಂದ್ ಸರ್ಕಾರ" ಸ್ಥಾಪನೆಗೊಂಡಿತು. ಇದರ ಪ್ರಧಾನಿಯಾಗಿ ನೇತಾಜಿಯವರೇ ಪ್ರತಿಜ್ಞಾವಚನವನ್ನು ಸ್ವೀಕರಿಸಿದರು. ಇನ್ನಿತರರನ್ನು ಮಂತ್ರಿಗಳನ್ನಾಗಿ ಮಾಡಲಾಯಿತು. ಈ ವಾರ್ತೆಯನ್ನು ಬಿ.ಬಿ.ಸಿ ಸಂಸ್ಥೆ ಅಗ್ರಮಾನ್ಯ ಸುದ್ದಿಯನ್ನಾಗಿ ಬಿತ್ತರಿಸಿತು. ಈ ಹಿನ್ನೆಲೆಯಲ್ಲೇ 1942ರ "ಚಲೇಜಾವ್" ಚಳವಳಿಯ ಶಕ್ತಿ ವರ್ಧಿಸಿತು. ಜಪಾನ್ ಸರ್ಕಾರ ಈ ಸರ್ಕಾರಕ್ಕೆ ಅಧಿಕೃತ ಮಾನ್ಯತೆ ನೀಡಿತಲ್ಲದೆ 10 ಕೋಟಿ ಯೆನ್ ಸಾಲವನ್ನೂ ನೀಡಿತು. ಬರ್ಮಾ, ಜರ್ಮನಿ, ಇಟಲಿ, ರಷ್ಯಾ, ಚೀನಾ ಮೊದಲಾದ ಹತ್ತಾರು ದೇಶಗಳು ಈ ಸರ್ಕಾರಕ್ಕೆ ಅಧಿಕೃತ ಮನ್ನಣೆ ನೀಡಿದವು. ದ್ವಿತೀಯ ಮಹಾಯುದ್ಧದಲ್ಲಿ ಜಪಾನಿನ ವಶಕ್ಕೆ ಬಂದಿದ್ದ ಅಂಡಮಾನ್ ನಿಕೋಬಾರ್ ದ್ವೀಪ ವೃಂದವನ್ನು ನೇತಾಜಿ ತಮ್ಮ ಸರ್ಕಾರದ ಅಧೀನವನ್ನಾಗಿಸಿಕೊಂಡು ಅವುಗಳಿಗೆ "ಸ್ವರಾಜ್ಯ ದ್ವೀಪ" ಹಾಗೂ "ಶಹೀದ್ ದ್ವೀಪ" ಎಂದುನಾಮಕರಣ ಮಾಡಿದರು. ಈ ಸರ್ಕಾರವು ತನ್ನದೇ ಕರೆನ್ಸಿ ನೋಟು, ಛಾಪಾಕಾಗದ, ಹಾಗೂ ನ್ಯಾಯಾಂಗ ವಿಧಾನಗಳನ್ನು ಹೊಂದಿತ್ತು. ಕೆಲವು ರಾಷ್ಟ್ರಗಳಲ್ಲಿ ತನ್ನ ದೂತಾವಾಸ ಕಾರ್ಯಾಲಯಗಳನ್ನೂ ಆರಂಭಿಸಿತ್ತು. ಈ ಬೆಳವಣಿಗೆಗಳನ್ನು ಬ್ರಿಟೀಷ್ ಸರ್ಕಾರವು ಗಮನಿಸುತ್ತಿತ್ತು ಹಾಗೂ ಭಾರತವನ್ನು ಬಿಟ್ಟು ಬೇಗನೆ ತಮ್ಮ ದೇಶಕ್ಕೆ ಮರಳಲು ಚಿಂತಿಸುತ್ತಿತ್ತು. ಆದರೆ ಆ ಸಮಯಕ್ಕೆ ವಿಶ್ವದ ದ್ವಿತೀಯ ಮಹಾಯುದ್ಧ ನಡೆದು, ಜಪಾನ್ ದೇಶ ಅಶಕ್ತವಾಯಿತು. ಆಗ ಅಲ್ಲಿ ಅಕಾಲಿಕವಾಗಿ ದೀರ್ಘಾವಧಿಯ ಮಳೆ ಆರಂಭವಾಯಿತು. ವಾಯುಸೇನೆಯ ಬೆಂಬಲ ಕಡಿಮೆಯಿತ್ತು, ಸರ್ಕಾರದ 15,000 ಸೈನಿಕರ ವಿಭಾಗಕ್ಕೆ ನಾಲ್ಕು ಮಂದಿ ವೈದ್ಯರು ಮಾತ್ರವೇ ಇದ್ದರು, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಕೊರತೆ ಹೆಚ್ಚಿತು.
1945 ರಲ್ಲಿ ಜಪಾನಿನ ಹಿರೋಷಿಮಾ-ನಾಗಾಸಾಕೀ ನಗರಗಳ ಮೇಲೆ ಅಣುಬಾಂಬ್ ಪ್ರಯೋಗಿಸಿತು. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ ನೇತಾಜಿ ರಷ್ಯಾ ದೇಶದ ಬೆಂಬಲ ಪಡೆದು ಯುದ್ಧ ಮುಂದುವರಿಸಲು ನಿರ್ಧರಿಸಿದ್ದರು. ದೂರೇಲಾಲ್ ಎಂಬ ಯೋಧನು ಸಿಂಗಾಪುರದ ಕಾರಾಗೃಹದಲ್ಲಿದ್ದನು. ಆತನನ್ನು ಬಿಡುಗಡೆಗೊಳಿಸಿ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಅವನಿಗೆ ವಿಶೇಷ ಜವಾಬ್ದಾರಿಯನ್ನು ವಹಿಸಲಾಯಿತು. ಕೆಲವು ತಿಂಗಳ ಬಳಿಕ ಆತ ಬ್ರಿಟಿಷರ ಜೊತೆ ಶಾಮೀಲಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿ ಈ ಸೇನೆಯ ರಹಸ್ಯಗಳೆಲ್ಲಾ ಬಯಲಾದವು. ಕ್ರಮೇಣ ಇಡೀ ಸೈನ್ಯವನ್ನೇ ಬ್ರಿಟಿಷ್ ಸರ್ಕಾರ ಬಂಧಿಸುವಲ್ಲಿ ಸಫಲವಾಯಿತು.
ಇಂಥ ಇತಿಹಾಸದ ಮಜಲುಗಳನ್ನು ನಮ್ಮ ಬಿಸಿರಕ್ತದ ತರುಣರಿಗೆ ಪರಿಚಯಿಸಲಾಗುತ್ತಿಲ್ಲವೆಂಬುದು ವಿಷಾದನೀಯ ಸಂಗತಿ. ಭಾರತವು ಮರುಹುಟ್ಟು ಪಡೆಯಲು ಹಾಗೂ ಅದು ವಿಶ್ವದ ಅಗ್ರಮಾನ್ಯ ಸೂಪರ್ ಪವರ್ ಆಗಿ ಬೆಳೆಯಬೇಕಾದರೆ ಇಂತಹ ಐತಿಹಾಸಿಕ ಘಟನೆಗಳ ಬಗ್ಗೆ ತಿಳಿಯುವುದು ಅರ್ಥಪೂರ್ಣವಾಗಿರುತ್ತದೆ.
- ಪ್ರೊ. ಟಿ.ಎನ್.ಪ್ರಭಾಕರ್, ಮೈಸೂರು