ಕನಸಿನ ಚಿನ್ನದ ಚಪ್ಪರಿಕೆಯಲ್ಲಿ...
ಕನ್ನಡದ ಶ್ರೇಷ್ಠ ಭಕ್ತಿ ಕವಿ ಮುಪ್ಪಿನ ಷಡಕ್ಷರಿಗಳ ಒಂದು ಪದ್ಯ ಕರ್ನಾಟಕದ ಜನಮಾನಸದಲ್ಲಿ ಬಹಳ ಪ್ರಮುಖವಾದ ಸ್ಥಾನ ಪಡೆದಿತ್ತು. ಅದೇ "ತಿರುಕನ ಕನಸು". ಊರೆಲ್ಲ ಅಲೆದಾಡಿ ತಂದ ಭಿಕ್ಷಾನ್ನವನ್ನು ಹೊಟ್ಟೆ ತುಂಬ ಉಂಡು, ಪಾಳುಬಿದ್ದ ಧರ್ಮಶಾಲೆಯಲ್ಲಿ ಒಬ್ಬ ಭಿಕ್ಷುಕ ಮಲಗಿದ್ದಾನೆ. ಸುಂದರವಾದ ಕನಸು ಬೀಳುತ್ತದೆ. ಅವನ ಕನಸಿನಲ್ಲಿ ಆ ರಾಜ್ಯದ ರಾಜ ಅಕಾಲ ಮರಣಕ್ಕೆ ತುತ್ತಾಗುತ್ತಾನೆ. ಅವನಿಗೆ ಮಕ್ಕಳಿಲ್ಲದ ಕಾರಣ ರಾಜ್ಯಕ್ಕೆ ಉತ್ತರಾಧಿಕಾರಿಯ ಸಮಸ್ಯೆಯುಂಟಾಗುತ್ತದೆ. ಉತ್ತರಾಧಿಕಾರಿ ಆಯ್ಕೆ ಹೇಗೆ ಎಂಬ ಪ್ರಶ್ನೆ ಮಂತ್ರಿ ವರ್ಗವನ್ನು ಕಾಡುತ್ತದೆ. ಪಟ್ಟದಾನೆಯ ಸೊಂಡಿಲಿಗೆ ಒಂದು ಪುಷ್ಪ ಮಾಲಿಕೆ ಕೊಟ್ಟು ಆ ಪುಷ್ಪ ಮಾಲಿಕೆಯನ್ನು ಅದು ಯಾರ ಕೊರಳಿಗೆ ಹಾಕುತ್ತದೆಯೋ ಅವರೇ ಆ ರಾಜ್ಯದ ಮುಂದಿನ ರಾಜನಾಗಬೇಕೆಂಬುದು ತೀರ್ಮಾನಿಸಲಾಗುತ್ತದೆ. ಆ ಆನೆ ಅರಮನೆಯನ್ನು ದಾಟಿ ಎಲ್ಲರನ್ನೂ ಬಿಟ್ಟು ಈ ತಿರುಕನ ಕೊರಳಿಗೆ ಮಾಲೆ ಹಾಕುತ್ತದೆ. ಕನಸಿನಲ್ಲಿಯೇ ಪಟ್ಟಾಭಿಷೇಕವಾಗುತ್ತದೆ. ಮದುವೆ, ರಾಣಿವಾಸ ಎಲ್ಲವೂ ಕನಸಿನಲ್ಲಿಯೇ ಆಗುತ್ತದೆ. ಯಾವುದೋ ಕಾರಣಕ್ಕೆ ತಿರುಕ ಮಹಾರಾಜರಿಗೆ ಸಿಟ್ಟು ಬಂದು ಒದೆಯುತ್ತಾರೆ. ಕಾಲ ಕೆಳಗಿದ್ದ ಒಂದೇ ಮಣ್ಣಿನ ಭಿಕ್ಷಾ ಪಾತ್ರೆ ಒಡೆದು ಚೂರಾಗುತ್ತದೆ. ತಿರುಕ ಮಹಾರಾಜರಿಗೆ ಎಚ್ಚರವಾದಾಗ ಅದೇ ಮುರುಕು ಧರ್ಮಶಾಲೆ, ಹರಕು ಬಟ್ಟೆ, ಒಡೆದ ಭಿಕ್ಷಾಪಾತ್ರೆ. ಈ ಕತೆ ನಿಮಗೆಲ್ಲಾ ಗೊತ್ತಿದ್ದರೂ ಮತ್ತೆ ಜ್ಞಾಪಿಸುತ್ತಿದ್ದೇನೆ.
ನಮ್ಮ ಪ್ರಧಾನಿ ಮನಮೋಹನಸಿಂಗ್ರಿಗೆ ಆ ತಿರುಕನಂತೆ ಕನಸಿನಲ್ಲಾದರೂ ಒದೆಯುವ ದಾರ್ಢ್ಯತೆಯು ಇದ್ದಂತಿಲ್ಲ. ದಕ್ಷತೆಯ ದೃಷ್ಟಿಯಿಂದ ಯು.ಪಿ.ಎ. ಸರ್ಕಾರ ದಿವಾಳಿಯಾಗಿ ಇತರೆ ದೇಶಗಳಿಂದ ಭಿಕ್ಷೆ ಬೇಡುವ ಸ್ಥಿತಿ ಬಂದೊದಗಿದೆ. ಒಂಭತ್ತೂವರೆ ವರ್ಷಗಳಲ್ಲಿ ಸುಮಾರು 20 ಲಕ್ಷ ಕೋಟಿ ಬೆಲೆ ಬಾಳುವಷ್ಟು ಹಗರಣ ಮಾಡಿ ದೇಶದ ಬೊಕ್ಕಸವನ್ನೂ ಲೂಟಿ ಹೊಡೆದವರ ಯು.ಪಿ.ಎ. ಸರ್ಕಾರ ಶೋಭನ್ ಸರ್ಕಾರ್ ಎಂಬ ಸಾಧುವಿನ ಕನಸಿನ ಬೆನ್ನೇರಿ ಚಿನ್ನವನ್ನು ಹುಡುಕಲು ಹೊರಟು ನಗೆಪಾಟಲೀಗೀಡಾಗುವತ್ತ ಸಾಗಿದೆ.
ಭಾರತ ದೇಶದಲ್ಲಿ ಒಂದಾನೊಂದು ಕಾಲಕ್ಕೆ ಚಿನ್ನ ಎಂಬುದು ಕಬ್ಬಿಣಕ್ಕಿಂತಲೂ ಅಗ್ಗವಾಗಿತ್ತು. ರಾಜ್ಯವು ಸುಭಿಕ್ಷ ಸ್ಥಿತಿಯಲ್ಲಿದ್ದಾಗ ಮಂದೆ ಕ್ಲಿಷ್ಟ ಕಾಲಕ್ಕಿರಲಿ ಎಂದು ಭೂಮಿಯಲ್ಲಿ ಸಂಪತ್ತನ್ನು ಹೂತಿಡುವ ಪರಿಪಾಠವನ್ನು ಅನೇಕ ರಾಜರು ಬೆಳೆಸಿಕೊಂಡಿದ್ದರು. 12ನೇ ಶತಮಾನದಲ್ಲಿ ಇಂತಹ ಒಂದು ಪ್ರಸಂಗ ನಡೆದಿದೆ. ಚಾಲುಕ್ಯ ವಿಕ್ರಮಾದಿತ್ಯನ ಕಾಲದಲ್ಲಿ ಸುವರ್ಣಯುಗ ನಿರ್ಮಾಣವಾಗಿತ್ತು. ಮುಂದೆ ಕೆಲವು ವರ್ಷಗಳ ನಂತರ ಬಂಗ 'ತೈಲಪ' ಎಂಬ ರಾಜನು ವಿಷಯಾಸಕ್ತನಾಗಿ ರಾಜ್ಯವು ದುರ್ಭಿಕ್ಷಕ್ಕಿಡಾಗುವ ಪ್ರಸಂಗ ಬಂದಿತ್ತು. ಈ ಸಂದರ್ಭವನ್ನು ಉಪಯೋಗಿಸಿಕೊಂಡ ಬಿಜ್ಜಳನು ತೈಲಪನನ್ನು ಪದಚ್ಯುತಗೊಳಿಸಿ ಸೆರಮನೆಯಲ್ಲಿಟ್ಟು ತಾನು ಚಕ್ರವರ್ತಿಯಾಗುತ್ತಾನೆ. ಆ ಸಂದರ್ಭದಲ್ಲಿ ಬಸವಣ್ಣನವರು ಕೂಡಲಸಂಗಮದಿಂದ ಬಂದು ಬಿಜ್ಜಳನ ಆಸ್ಥಾನದಲ್ಲಿ ಕರಣಿಕ ವೃತ್ತಿಯನ್ನು ನಿರ್ವಹಿಸುತ್ತಿರುತ್ತಾರೆ. ಆಗ ಗರ್ಭಗುಡಿಯೊಂದರಲ್ಲಿ ವಿಚಿತ್ರ ಲಿಪಿಯಿರುವ ಒಂದು ತಾಮ್ರದ ಪಟವು ದೊರಕುತ್ತದೆ. ಅದನ್ನು ಅನೇಕ ಜನರು ಓದಲು ಪ್ರಯತ್ನಿಸುತ್ತಾರೆ. ಆದರೆ ತಿಳಿಯುವುದಿಲ್ಲ. ಕಪ್ಪಡಿ ಸಂಗಮದ ಗುರುಕುಲದಲ್ಲಿ ಪುರಾತನ ಲಿಪಿಗಳ ಬಗ್ಗೆ ಅಧ್ಯಯನ ಮಾಡಿದ್ದ ಬಸವಣ್ಣನವರು ಆ ತಾಮ್ರದ ಪಟವನ್ನು ಓದಿ ಸಿಂಹಾಸನದ ಕೆಳಗೆ ನಿಧಿ ಇರುವುದನ್ನು ಪತ್ತೆ ಹಚ್ಚುತ್ತಾರೆ. ಅನೇಕ ಜನರು ಇದೊಂದು ಕಟ್ಟುಕತೆ, ಸಿಂಹಾಸನವನ್ನು ಕದಲಿಸಿ ರಾಜರಿಗೆ ಅಪಚಾರ ಮಾಡಲು ಬಸವಣ್ಣನವರು ತಂತ್ರ ಹೂಡಿದ್ದಾರೆ ಎಂದು ಕೊಂಡಿ ಮಂಚಣ್ಣಾದಿಗಳು ಆರೋಪಿಸುತ್ತಾರೆ. ಅದಕ್ಕೆ ಬಸವಣ್ಣನವರು, ಈ ತಾಮ್ರಪಟದಲ್ಲಿ ಉಲ್ಲೇಖಿಸಿರುವಂತೆ ಸಂಪತ್ತು ಸಿಗದಿದ್ದರೆ ತನ್ನ ತಲೆಯನ್ನೇ ದಂಡವಾಗಿ ಪಡೆಯಬಹುದು ಎಂದು ಘೋಷಿಸುತ್ತಾನೆ.
ಬಸವಣ್ಣನವರ ದೈವೀಶಕ್ತಿಯ ಮೇಲೆ ವಿಶ್ವಾಸವಿದ್ದ ಬಿಜ್ಜಳನು ಬಸವಣ್ಣನವರು ಹೇಳಿದಂತೆ ಭೂಮಿಯನ್ನು ಅಗೆಸಿದಾಗ ಅರವತ್ತು ಕೋಟಿ ಹೊನ್ನು ಸಿಗುತ್ತದೆ. ಸಂತುಷ್ಟನಾದ ಬಿಜ್ಜಳನು ಸಿಕ್ಕ ಹೊನ್ನಿನಲ್ಲಿ ಬಸವಣ್ಣನವರಿಗೂ ಒಂದಂಶ ಕೊಡಲು ಸಿದ್ಧನಾಗುತ್ತಾನೆ. ಆದರೆ ಅದಕ್ಕೆ ಒಪ್ಪದ ಬಸವಣ್ಣನವರು "ಕೊಡಲು ನಿಮಗಾಗಲೀ, ತೆಗೆದುಕೊಳ್ಳಲು ನನಗಾಗಲಿ ಅಧಿಕಾರವಿಲ್ಲ, ಇದು ಚಾಲುಕ್ಯ ವಿಕ್ರಮಾದಿತ್ಯರಿಗೆ ಸೇರಿದ ಹೊನ್ನು. ಅದನ್ನು ಖರ್ಚು ಮಾಡಬೇಕಾಗಿರುವುದು ರಾಜ್ಯದ ಹಿತದೃಷ್ಟಿಯಿಂದ ಜನ ಕಲ್ಯಾಣಕ್ಕಾಗಿ. ನಾವು ಕೇವಲ ಯಾಚಕರು. ಈ ಸಂಪತ್ತಿನ ನಿಜವಾದ ಒಡೆಯರು ಜನರು' ಎಂದು ಹೇಳುತ್ತಾರೆ. ಮುಂದೆ 36 ವರ್ಷಗಳ ಕಾಲ ಕಲ್ಯಾಣವನ್ನು ಕೈಲಾಸವನ್ನಾಗಿ ಮಾಡುತ್ತಾರೆ. ಬೇಡುವವರೇ ಇಲ್ಲದ, ಎಲ್ಲರೂ ನೀಡಲು ಶಕ್ತರಾಗಿರುವ, ಸಮೃದ್ಧ, ಸಂತೃಪ್ತ ಕಲ್ಯಾಣ ರಾಜ್ಯವನ್ನು ಕಟ್ಟುತ್ತಾರೆ. ಇದು ಇತಿಹಾಸ.
ಈ ಘಟನೆ ಹಿನ್ನೆಲೆಯಲ್ಲಿ ಪ್ರಸ್ತುತ ಯು.ಪಿ.ಎ. ಸರ್ಕಾರದ ಚಿನ್ನದ ಕನವರಿಕೆಯನ್ನು ವಿಶ್ಲೇಷಣೆ ಮಾಡೋಣ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಹಗರಣಗಳ ಧೂಳಿನಿಂದ ಮಸುಕಾಗಿರುವ ಈ ಸರ್ಕಾರಕ್ಕೆ ಮೊಟ್ಟ ಮೊದಲು ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕೇ ಇಲ್ಲ. ಮುಗ್ಧತೆಯ ಮುಖವಾಡ ಧರಿಸಿ, ಶುದ್ಧತೆಯ ಸರ್ಟಿಫಿಕೇಟ್ ತೆಗೆದುಕೊಂಡಿದ್ದ ಪ್ರಧಾನಿಗೆ ಕಲ್ಲಿದ್ದಲು ಬೂದಿ ಮೆತ್ತಿಕೊಂಡು ಕೊಳೆಯಾಗಿದ್ದಾರೆ. ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಾದವರು ಕನಸಿನ ಚಿನ್ನದ ನಾಟಕದ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಒಂದು ವೇಳೆ ಈ ಸಂದರ್ಭದಲ್ಲಿ ಎನ್ಡಿಎ ಸರ್ಕಾರವೇನಾದರೂ ಇದ್ದು ವಾಜಪೇಯಿಯವರೋ, ಅಡ್ವಾಣಿಯವರೋ ಪ್ರಧಾನಮಂತ್ರಿ ಸ್ಥಾನದಲ್ಲಿದ್ದು ಚಿನ್ನದ ಉತ್ಖನನ್ನಕ್ಕೆ ಒಪ್ಪಿಗೆ ನೀಡಿದ್ದರೆ ಮಾಧ್ಯಮಗಳು ಮತ್ತು ಸ್ವಯಂ ಘೋಷಿತ ವಿಚಾರವಾದಿಗಳು ಎಷ್ಟು ಬೊಬ್ಬೆಯಿಡುತ್ತಿದ್ದರು ಎಂಬುದು ನಿಮಗೆಲ್ಲಾ ಗೊತ್ತಿದೆ. ಅದನ್ನು ನಿಲ್ಲಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದರು. ಈಗ ಏಕೆ ಸುಮ್ಮನೆ ಕುಳಿತಿದ್ದಾರೆ? ಇದೆಂತಹ ಸೋಗಲಾಡಿತನ?
ಇನ್ನು ಶೋಭನ್ ಸರ್ಕಾರ್ರವರ ಕನಸಿನ ವಿಷಯಕ್ಕೆ ಬರೋಣ. ಸುಮಾರು 165 ವರ್ಷಗಳ ಹಿಂದೆ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ರಾಜ ರಾವ್ ಬಕ್ಷ್ಸಿಂಗ್ ಇನ್ನೂ ಪ್ರೇತಾತ್ಮವಾಗಿ ಅಲೆಯುತ್ತಿದ್ದಾನಂತೆ. ಈ ಸಾಧುಗಳು ನಂಬಿರುವ ಪ್ರಕಾರ ಹೇಳುವುದಾದರೆ ಪ್ರೇತಾತ್ಮರಾಗುವುದು ಯಾರು? ಯಾರು ಅತಿಯಾಸೆಯಿಂದ, ದುರಾಸೆಯಿಂದ ಸತ್ತಿರುತ್ತಾರೋ ಅವರು. ಆ ರಾಜನಾದರೋ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಮಡಿದಿದ್ದಾನೆ. ಇಂತಹವರು ಎಂದಾದರೂ ಪ್ರೇತಾತ್ಮರಾಗುವುದುಂಟೆ? ಒಂದು ವೇಳೆ ಈ ಪ್ರೇತಾತ್ಮವು ದೇಶದ ಹಿತವನ್ನೇ ಬಯಸುವುದಿದ್ದರೆ ಈ ಹಿಂದೆ ಆಗಿ ಹೋದ ಲಾಲ್ಬಹದ್ದೂರ್ ಶಾಸ್ತ್ರಿ, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಮುಂತಾದ ದೇಶಭಕ್ತ ನಿಸ್ವಾರ್ಥಿ ಪ್ರಧಾನ ಮಂತ್ರಿಗಳ ಕಾಲದಲ್ಲಿ ಏಕೆ ಯಾರಾದರೂ ಸಂತರು ಕನಸಿನಲ್ಲಿ ಹೇಳಲಿಲ್ಲಾ? ಒಂದು ಕಾಲದಲ್ಲಿ ನಮ್ಮ ದೇಶಕ್ಕೆ ಎಂತಹ ದುರ್ಗತಿ ಉಂಟಾಗಿತ್ತೆಂದರೆ ಅಮೆರಿಕದವರಿಗೆ ಹೆಚ್ಚಾಗಿ, ಪ್ರಾಣಿಗಳಿಗೆ ಹಾಕುವ ಅಥವಾ ಸಮುದ್ರಕ್ಕೆ ಚೆಲ್ಲುವ ಗೋಧಿಯನ್ನು ನಾವು ತರಿಸಿಕೊಂಡು ತಿನ್ನುವ ಪರಿಸ್ಥಿತಿ ಬಂದಿತ್ತು. ಅಂತಹ ಕಷ್ಟ ಕಾಲದಲ್ಲಿ ಈ ಶೋಭನ್ ಸರ್ಕಾರ್ ಹೇಳುವ ಪ್ರೇತಾತ್ಮ ಎಲ್ಲಿ ಅಲೆದಾಡುತ್ತಿತ್ತು? ಒಂದು ಕಡೆ ಅಸಾರಾಂ ಬಾಪು, ಪ್ರಜ್ಞಾಸಿಂಗ್ ಮುಂತಾದವರನ್ನು ಜೈಲಲಿಟ್ಟು ರಾಮ್ದೇವ್ ಬಾಬಾರಂತಹವರ ಮೇಲೆ ಸಿ.ಬಿ.ಐ.ಯನ್ನು ಛೂ ಬಿಟ್ಟು ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಯುಪಿಎ ಸರ್ಕಾರ ಶೋಭನ್ ಸರ್ಕಾರ್ರಂತ ಸಾಧುಗಳನ್ನು ಬೆಳೆಸಿಕೊಂಡು ಜನರಿಗೆ ಚಿನ್ನದ ಆಸೆ ಹುಟ್ಟಿಸಿ ತನಗಂಟಿದ ಭ್ರಷ್ಟಾಚಾರದ ಕೆಸರನ್ನು ಮರೆಸುವ ಪ್ರಯತ್ನ ಮಾಡುತ್ತಿದೆ. ಶೋಭನ್ ಸರ್ಕಾರ್ ಕನಸಿನಲ್ಲಿ ಕಂಡಂತೆ ನಿಧಿ ಸಿಗುವ ಸಾಧ್ಯತೆ ಖಂಡಿತ ಇಲ್ಲ. ಹಾಗೇನಾದರೂ ಸಿಕ್ಕಿದರೆ ಅವರಿಗಾಗುವ ಸನ್ಮಾನಗಳಿಗೆ ಲೆಕ್ಕವಿಲ್ಲ. ಒಂದು ವೇಳೆ ಸಿಗದಿದ್ದರೆ ಬಸವಣ್ಣನವರು ಘೋಷಿಸಿದಂತೆ ಶೋಭನ್ ಸರ್ಕಾರ್ ಕೂಡ ಜೀವತ್ಯಾಗ ಮಾಡಲು ಸಿದ್ಧರಾಗುತ್ತಾರಾ?
ಇನ್ನು ಪುರಾತತ್ವ ಇಲಾಖೆಯ ಚಟುವಟಿಕೆಗಳನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಈ ಉತ್ಖನನ ಕಾರ್ಯವು ಒಂದು ತಿಂಗಳಲ್ಲಿ ಮುಗಿಯಬಹುದು ಅಥವಾ ವರ್ಷಾನುಗಟ್ಟಲೆಯೂ ಆಗಬಹುದು ಎಂದು ಹೇಳಿಕೆ ನೀಡಿದೆ. ಆಧುನಿಕ ಯಂತ್ರಗಳನ್ನು ಬಳಸದೆ ಕೇವಲ, ಹಾರೆ, ಪಿಕಾಸಿಗಳಿಂದಲೇ ನಡೆಸುವ ನಿರ್ಧಾರ ಮಾಡಿದೆ. ಏಕೆ ಹೀಗೆ? ಇಂದು ವಿಜ್ಞಾನ ಬಹಳಷ್ಟು ಮುಂದುವರಿದಿದೆ. ಉಪಗ್ರಹಗಳ ಸಹಾಯದಿಂದ ಎಲ್ಲೆಲ್ಲಿ ಯಾವ ಯಾವ ನಿಕ್ಷೇಪಗಳಿವೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಕೇಂದ್ರಸರ್ಕಾರ ಚಿನ್ನದ ನಿಧಿಯನ್ನು ಹುಡುಕಲು ಏಕೆ ಇಸ್ರೋದ ವಿಜ್ಞಾನಿಗಳ ಸಹಾಯ ತೆಗೆದುಕೊಳ್ಳುತ್ತಿಲ್ಲ. ಉಪಗ್ರಹಗಳ ನೆರವಿನಿಂದ ನೂರಾರು ಅಡಿ ಕೆಳಗಿರುವ ರಾಮಜನ್ಮಭೂಮಿ ಸ್ಥಳದ ರಾಮಮಂದಿರದ ಕಂಬಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದಾದರೆ ಸಾವಿರ ಟನ್ ಚಿನ್ನವನ್ನು ಉಪಗ್ರಹಗಳ ಸಹಾಯದಿಂದ ಹುಡುಕಲು ಸಾಧ್ಯವಿಲ್ಲವೇ? ಈ ಸಾಮಾನ್ಯ ಸಂಗತಿ ನಮ್ಮ ಮಾಧ್ಯಮಗಳಿಗೆ, ಸರ್ಕಾರಕ್ಕೆ ಏಕೆ ಹೊಳೆಯುತ್ತಿಲ್ಲ? ಇಷ್ಟೆಲ್ಲಾ ಹೇಳಿಕೆ ಕೊಟ್ಟು ಸುದ್ದಿಯಾಗಿರುವ ಶೋಭನ್ ಸರ್ಕಾರ್ ಕ್ಯಾಮೆರಾಗಳ ಮುಂದೆ ಏಕೆ ಬರುತ್ತಿಲ್ಲ? ಒಂದು ವೇಳೆ ಈ ಚಿನ್ನದ ಕನಸು ಸುಳ್ಳಾದರೆ ಶೋಭನ್ ಸರ್ಕಾರ್ಗೆ, ಚರಣದಾಸ್, ಮಹಾಂತ, ಮನಮೋಹನಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ. ಚಿದಂಬರಂ ಇವರಿಗೆ ಯಾವ ಶಿಕ್ಷೆ ವಿಧಿಸಬೇಕು?
ಭಾರತದ ಮತದಾರರೇ ಜಾಗೃತರಾಗಿರಿ. ಕನಸಿನ ಚಿನ್ನದ ಚಪ್ಪರಿಕೆ ಸಾಕು. ಯುಪಿಎ ಸರ್ಕಾರಕ್ಕೆ ನಾವು ಚುನಾವಣೆಯಲ್ಲಿ ವಾಸ್ತವದ ಪಾಠ ಕಲಿಸೋಣ.
- ಶ್ರೀ ಬಸವಾನಂದ ಸ್ವಾಮೀಜಿ,
ಶ್ರೀ ಗುರು ಬಸವ ಮಹಾಮನೆ, ಮನಗುಂಡಿ, ಧಾರವಾಡ