ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

'ಪ್ರಧಾನಮಂತ್ರಿ' ಎಂಬ ಅದ್ಭುತ ಧಾರಾವಾಹಿ

ಸೈದ್ಧಾಂತಿಕ ಪತ್ರಿಕೋದ್ಯಮದಲ್ಲಿ ದೀರ್ಘ ವರ್ಷಗಳನ್ನು ಕಳೆದಿರುವ ಅಡ್ವಾಣಿಯವರದ್ದು...

Srinivasa Murthy VN
Updated On : 22 Oct 2013, 12:53 pm

'As I See it" ಎನ್ನುವ ಹೆಸರಿನಲ್ಲಿ ಎರಡು ವರ್ಷಗಳ ಹಿಂದೆ ನನ್ನ ಬ್ಲಾಗ್ ಲೇಖನಗಳ ಸಂಕಲನವೊಂದು ಹೊರಬಂದಿತು. ಖ್ಯಾತ ಪತ್ರಕರ್ತ ಎಮ್. ಜೆ. ಅಕ್ಬರ್ ಅವರು ಆ ಸಂಕಲನಕ್ಕೆ ಮುನ್ನುಡಿ ಬರೆದುಕೊಟ್ಟರು.
ಅಕ್ಬರ್ ಅವರು ಮುನ್ನುಡಿಯಲ್ಲಿ ಹೇಳಿದ್ದನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದಿಡುತ್ತಿದ್ದೇನೆ...
"ಒಬ್ಬ ರಾಜಕಾರಣಿಯಾಗಿ, ಮಾತನಾಡುವುದಕ್ಕಿಂತ ಹೆಚ್ಚು ಓದುವುದಕ್ಕೇ ಸಮಯ ಮೀಸಲಿಡುವವರು ಆಡ್ವಾಣಿ. ಸೈದ್ಧಾಂತಿಕ ಪತ್ರಿಕೋದ್ಯಮದಲ್ಲಿ ದೀರ್ಘ ವರ್ಷಗಳನ್ನು ಕಳೆದಿರುವ ಅಡ್ವಾಣಿಯವರದ್ದು ರಾಜಕಾರಣದಲ್ಲೇ ಹೆಚ್ಚು ಮಗ್ನವಾಗಿರುವ ಮನಸ್ಸು. ಆದರೂ ಅವರ ಹೃದಯವಿರುವುದು ಬರಹದಲ್ಲಿ. ಆಡ್ವಾಣಿ ಅವರ ಲೇಖನಗಳು ಜೀವನದ ವಿವಿಧ ಮುಖಗಳನ್ನು ಪರಿಚಯಿಸುತ್ತಾ ಹೋಗುತ್ತವೆ. ಅವರು ರಾಜಕಾರಣಿಯಾದರೂ ಅವರ ಬರಹಗಳಲ್ಲಿ ರಾಜಕೀಯಕ್ಕೆ ಹೆಚ್ಚು ಜಾಗವಿಲ್ಲ. ಅವೇನಿದ್ದರೂ ನೆನಪು, ಪ್ರವಾಸ ಕಥನ, ಪುಸ್ತಕಗಳ ವಿಮರ್ಶೆ ಮತ್ತು ಅವರ ಮೆಚ್ಚಿನ ಹವ್ಯಾಸವಾದ ಸಿನೆಮಾಗಳ ಸಂಗಮ"
ಜನವರಿ 2011ರಲ್ಲಿ ನನ್ನ ಬ್ಲಾಗ್‌ನಲ್ಲಿ, ಬ್ರಿಟಿಷ್ ಆಡಳಿತದ ವಿರುದ್ಧದ ಚಿತ್ತಗಾಂಗ್ ಬಂಡಾಯದ ಬಗ್ಗೆ ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್‌ರು ನಿರ್ಮಿಸಿದ ಚಿತ್ರವೊಂದರ ಬಗ್ಗೆ ಪ್ರಸ್ತಾಪಿಸಿದ್ದೆ. "ಖೇಲೇ ಹಮ್ ಜೀ ಜಾನ್ ಸೇ" ಎನ್ನುವ ಆ ಚಿತ್ರ, 'ದಿ ಟೆಲಿಗ್ರಾಫ್‌'ನ ಮಾನಿನಿ ಮುಖರ್ಜಿಯವರ ಸಂಶೋಧನಾತ್ಮಕ ಪುಸ್ತಕದ ಮೇಲೆ ಆಧರಿತವಾಗಿತ್ತು.
ಗೋವಾರಿಕರ್ ಅವರ ಇನ್ನೆರಡು ರಾಷ್ಟ್ರಾಭಿಮಾನದ ಚಿತ್ರಗಳಾದ "ಲಗಾನ್‌" ಮತ್ತು "ಸ್ವದೇಸ್‌" ತುಂಬಾ ಯಶಸ್ಸು ಪಡೆದವು. ಇದೇನೇ ಇದ್ದರೂ ನನ್ನ ಆ ಲೇಖನದ ಮೂಲ ಪ್ರಶ್ನೆ, "ಅದೇಕೆ ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧದ ಭಾರತದ ಹೋರಾಟ, ಲೋಕನಾಯಕ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ತುರ್ತುಪರಿಸ್ಥಿತಿಯ ವಿರುದ್ಧ ಭಾರತೀಯರು ನಡೆಸಿದ ಹೋರಾಟ, 1975ರಲ್ಲಿ ಪ್ರಜಾಪ್ರಭುತ್ವವನ್ನು ಪತನಗೊಳಿಸಲು ಸರ್ಕಾರ ರೂಪಿಸಿದ ಯೋಜನೆಗಳ ವಿರುದ್ಧದ ಜನತೆಯ ಆಕ್ರೋಶದ ಕುರಿತು ಒಂದೇ ಒಂದು ಚಿತ್ರವೂ ತಯಾರಾಗಿಲ್ಲ?" ಎನ್ನುವುದಾಗಿತ್ತು.
ನನ್ನ ಇವತ್ತಿನ ಲೇಖನದ ಉದ್ದೇಶ "ಎಬಿಪಿ ನ್ಯೂಸ್‌" ಎನ್ನುವ ಸುದ್ದಿ ವಾಹಿನಿಗೆ ಮೆಚ್ಚುಗೆ ವ್ಯಕ್ತಪಡಿಸುವುದಾಗಿದೆ. 2011ರಲ್ಲಿ ನನ್ನ ಲೇಖನದಲ್ಲಿ ಪ್ರಸ್ತಾಪಿಸಿದ್ದ ಕೊರತೆಯನ್ನು ನೀಗಿಸಿರುವುದಕ್ಕಷ್ಟೇ ಅಲ್ಲದೆ, ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಜರುಗಿದ ಪ್ರಮುಖ ಘಟನಾವಳಿಗಳ ಬಗ್ಗೆ "ಪ್ರಧಾನಮಂತ್ರಿ" ಎನ್ನುವ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಹೆಚ್ಚಿನ ಜ್ಞಾನ ಕೊಡುತ್ತಿರುವುದಕ್ಕೆ ಆ ಸುದ್ದಿವಾಹಿನಿಯನ್ನು ನಾನು ಅಭಿನಂದಿಸುತ್ತೇನೆ.
ಇದುವರೆಗೂ ಆಪರೇಷನ್ ಬ್ಲೂ ಸ್ಟಾರ್, ಇಂದಿರಾ ಗಾಂಧಿಯವರ ಹತ್ಯೆ, ಇಂಡೋ-ಪಾಕ್ ಯುದ್ಧದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಗೆಲುವು, ತಾಷ್ಕೆಂಟ್ ಸಮಾವೇಶ ಮತ್ತು ಶಾಸ್ತ್ರಿಯವರ ಸಾವು, ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ಮತ್ತು 1977ರಲ್ಲಿ ಮೋರಾರ್ಜಿ ದೇಸಾಯಿ ಸಾಧಿಸಿದ ಗೆಲುವಿನ ಕುರಿತಾದ ಸುಮಾರು ಅರ್ಧ ಡಜನ್‌ಗೂ ಹೆಚ್ಚಿನ ಕಂತುಗಳನ್ನು ನಾನು ನೋಡಿದ್ದೇನೆ. ಇದಕ್ಕಾಗಿ ಆ ಸುದ್ದಿ ಸಂಸ್ಥೆ ನಡೆಸಿದ ಸಂಶೋಧನೆ, ಸಿದ್ಧಪಡಿಸಿದ ಸ್ಕ್ರಿಪ್ಟ್, ಸಂಕಲನ, ನಿರ್ದೇಶನ ಅತ್ಯದ್ಭುತವಾಗಿದೆ. ಶೇಖರ್ ಕಪೂರ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ "ಪ್ರಧಾನಮಂತ್ರಿ" ಕಾರ್ಯಕ್ರಮ ವೀಕ್ಷಕರನ್ನು ತಲ್ಲೀನರಾಗುವಂತೆ ಮಾಡುವುದಷ್ಟೇ ಅಲ್ಲದೆ, ಜ್ಞಾನವರ್ಧಕವೂ ಆಗಿದೆ ಎನ್ನುವುದು ದಿಟ.
ಈ 24 ಕಂತುಗಳ ಧಾರಾವಾಹಿಯಿಂದ ಇದುವರೆಗೂ ಪ್ರಸಾರವಾಗಿರುವುದು 14 ಅಥವಾ 15 ಕಂತುಗಳು. ಅಕ್ಟೋಬರ್ 19ರಂದು, ಶಾ ಬಾನು ಪ್ರಕರಣದ ಕುರಿತು ಪ್ರಸಾರವಾದ ಕಂತಿನಲ್ಲಿ, ಅಯೋಧ್ಯೆಯ ರಾಮ ಮಂದಿರದ ದ್ವಾರವನ್ನು ನ್ಯಾಯಾಲಯ ಹೇಗೆ ತೆರೆಸಿತು ಮತ್ತು ಹೇಗೆ ಸರ್ಕಾರ ಒಬ್ಬರಾದ ನಂತರ ಒಬ್ಬರಂತೆ ಹಿಂದು ಮತ್ತು ಮುಸಲ್ಮಾನ ಮತಗಳನ್ನು ಓಲೈಸುವ ಕೆಲಸ ಮಾಡಿತು ಎನ್ನುವುದನ್ನು ಪ್ರಸ್ತಾಪಿಸಲಾಗಿದೆ.
ಅಲ್ಲದೆ ನಿರ್ಮಾಪಕರು ಈ ಕಾರ್ಯಕ್ರಮವನ್ನು "ಯೂಟ್ಯೂಬ್‌"ನಲ್ಲಿಯೂ ಹರಿಬಿಟ್ಟು ಬುದ್ಧಿವಂತಿಕೆ ಮೆರೆದಿದ್ದಾರೆ. ನಾನು ಈ ಕಾರ್ಯಕ್ರಮವನ್ನು ನಿರ್ಮಿಸಿದ ಅವಿಕ್ ಬಾಬು ಮತ್ತು ಎಬಿಪಿ ನ್ಯೂಸ್‌ನ ಸಂಪಾದಕ ಶಾಝಿ ಝಮನ್ ಅವರೊಂದಿಗೆ ಮಾತನಾಡಿ ಅವರ ದಿಟ್ಟ ಹೆಜ್ಜೆಯನ್ನು ಪ್ರಶಂಸಿಸಿದ್ದೇನೆ.
ಕೊನೆಯದಾಗಿ
ಬಿಬಿಸಿಯ ಮಾರ್ಕ್ ಟುಲಿ ಮತ್ತು ಸತೀಶ್ ಜಾಕೋಬ್ ಅವರ ಪುಸ್ತಕ "AMRITSAR: Mrs. Gandhi’s Last Battle" 1985ರಲ್ಲಿ ಪ್ರಕಟವಾಯಿತು.
ಪ್ರಧಾನಮಂತ್ರಿ ಧಾರಾವಾಹಿಯಲ್ಲಿ, ಹೇಗೆ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳವನ್ನು ದುರ್ಬಲಗೊಳಿಸಲು ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಮತ್ತು ಆತನ ಆರಾಧಕರನ್ನು ಭಾರತ ಸರ್ಕಾರ ಬೆಳೆಸಿತು ಎನ್ನುವುದನ್ನು ತೋರಿಸಲಾಗಿದೆ. ಮೇಲ್ಕಂಡ ಪುಸ್ತಕದ ಆಧಾರದ ಮೇಲೆಯೇ ಈ ಕಂತನ್ನು ರೂಪಿಸಲಾಗಿದೆ. ಇದರಲ್ಲಿ ನಿರೂಪಕನ ಪಾತ್ರವನ್ನು ಸತೀಶ್ ಜಾಕೋಬ್ ನಿರ್ವಹಿಸಿದ್ದಾರೆ. ಆ ಪುಸ್ತಕದಲ್ಲಿ ಹೀಗೊಂದು ಘಟನೆ ಬರುತ್ತದೆ...
ಮಧ್ಯವಯಸ್ಕ ಹೆಂಗಸೊಬ್ಬಳು ತನ್ನ ಮಗನೊಂದಿಗೆ ಬಂದು ಭಿಂದ್ರನ್ವಾಲೆಯ ಮುಂದೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾಳೆ. ತನ್ನ ಗಂಡ ತನ್ನನ್ನು ಬಿಟ್ಟಿರುವುದಾಗಿಯೂ, ಕುಟುಂಬಕ್ಕೆ ಆತ ಯಾವುದೇ ಸಹಾಯ ಮಾಡುತ್ತಿಲ್ಲವಾದ್ದರಿಂದ ಆತನನ್ನು "ಮುಗಿಸಿ" ಹಾಕಬೇಕೆಂದು ಭಿಂದ್ರನ್ವಾಲೆಯನ್ನು ಬೇಡುತ್ತಾಳೆ!
ಅದಕ್ಕೆ ಭಿಂದ್ರನ್ವಾಲೆ "ನಾನು ಸಿಖ್ಖರ ವಿರೋಧಿಗಳಾದ ಪೊಲೀಸರು, ಸರ್ಕಾರಿ ಅಧಿಕಾರಿಗಳು ಮತ್ತು ಹಿಂದುಗಳನ್ನಷ್ಟೇ ಕೊಲ್ಲುವುದು" ಎನ್ನುತ್ತಾನೆ.
"ಹಾಗಿದ್ದರೆ ನೀವು ನನಗೆ ಗನ್ ಕೊಡಿ, ನಾನೇ ನನ್ನ ತಂದೆಯನ್ನು ಕೊಂದು ಹಾಕ್ತೀನಿ?" ಎಂದು ಕೇಳುತ್ತಾನೆ ಆ ಯುವಕ.
"ಹೋಗಿ ನೀನೇ ಒಂದು ಗನ್ ಖರೀದಿ ಮಾಡು" ಎಂದು ಗದರಿಸುತ್ತಾನೆ ಭಿಂದ್ರನ್ವಾಲೆ.
"ಆ ಕೆಲಸ ಮುಗಿಸಿದ ಮೇಲೆ ನನಗೆ ರಕ್ಷಣೆ ಕೊಡುತ್ತೀರಾ?" ಎಂಬ ಆ ಯುವಕನ ಮರುಪ್ರಶ್ನೆಗೆ ಭಿಂದ್ರನ್ವಾಲೆ,  "ಚಳವಳಿಯ ಹೆಸರಿನಲ್ಲಿ ಹತ್ಯೆ ಮಾಡಿದವರಿಗಷ್ಟೇ ನಾವು ರಕ್ಷಣೆ ಕೊಡುವುದು. ನನ್ನ ಜನರಿಗೆ ಹಿಂಸೆ ಕೊಟ್ಟ ಪೊಲೀಸನನ್ನೋ ಅಥವಾ ನಮ್ಮ ವಿರೋಧಿಗಳಾದ ಸರ್ಕಾರಿ ಅಧಿಕಾರಿಯನ್ನೋ ಕೊಂದು ಬಾ, ನಾನು ನಿನಗೆ ರಕ್ಷಣೆಯಷ್ಟೇ ಅಲ್ಲ, ಹೂ ಮಾಲೆ ಹಾಕಿ ಸ್ವಾಗತಿಸುತ್ತೇನೆ" ಎನ್ನುತ್ತಾನೆ.
ಕೊನೆಗೂ ಭಿಂದ್ರನ್ವಾಲೆ, ಆ ಯುವಕ ಮತ್ತು ಅವನ ತಾಯಿಯ ಮಾತಿಗೆ ಸೋತು, "ನಿನ್ನ ತಂದೆಯ ಹೆಸರು, ಆತ ಎಲ್ಲಿರುತ್ತಾನೆ ಎಂದು ಹೇಳು, ನಾನು ಅಲ್ಲಿನ ಮುಖ್ಯಪೇದೆಗೆ ಹೇಳಿ ಆತನ ಕಾಲು ಮುರಿಸುತ್ತೇನೆ" ಎಂದು ಆಶ್ವಾಸನೆ ಕೊಟ್ಟು ಕಳುಹಿಸುತ್ತಾನೆ.
ಇದೆಲ್ಲವನ್ನು ನೋಡಿದ ಸತೀಶ್ ಜಾಕೋಬ್, "ಭಿಂದ್ರನ್ವಾಲೆಗೆ ಹೀಗೆಲ್ಲ ಮಾಡುವುದಕ್ಕೆ ಅದ್ಹೆಗೆ ಸಾಧ್ಯವಾಗುತ್ತದೆ?" ಎಂದು ಆತನ ಆಪ್ತನೊಬ್ಬನಿಗೆ ಕೇಳಿದಾಗ, ಆ ವ್ಯಕ್ತಿ ಹೇಳುತ್ತಾನೆ:
"ಅವರ ಆಜ್ಞೆಯನ್ನು ಧಿಕ್ಕರಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ!"

- ಎಲ್. ಕೆ. ಆಡ್ವಾಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement