ಹರಿವೋ, ತಿರುವೋ ನೀರಂತೂ ಬೇಕು
ಪರಿಸರ ಕಾಳಜಿ ಅಥವಾ ಬುದ್ಧಿವಂತಿಕೆ ಒಂದು ಭೌಗೋಳಿಕ ಪ್ರದೇಶಕ್ಕೆ ಸೀಮಿತವಲ್ಲ. ಅಘನಾಶಿನಿ ಹಾಗೂ ಶರಾವತಿ(ಲಿಂಗನಮಕ್ಕಿ) ಪಾತ್ರದಿಂದ ಬೆಂಗಳೂರು ಹಾಗು ಸುತ್ತಮುತ್ತಲಿನ 27 ತಾಲೂಕುಗಳಿಗೆ ನಾನು ಸಲ್ಲಿಸಿರುವ ವರದಿಯ ಬಗ್ಗೆ ಶಕ್ಯತಾ ಹಾಗೂ ಅಧ್ಯಯನ ವರದಿಯನ್ನು ಸಲ್ಲಿಸಲು ರಾಜ್ಯ ಸರ್ಕಾರ ಕೆ.ಪಿ.ಸಿಯ ಅನ್ವೇಷಣಾ ವಿಭಾಗವನ್ನು ಕೋರಿದೆ. ಅಧ್ಯಯನದ ಸಮಯದಲ್ಲಿ ಈ ಯೋಜನೆಯ ಬಗ್ಗೆ ಲೇಖನಗಳನ್ನು ಬರೆದು ಅಧ್ಯಯನದ ಮೇಲೆ ಪ್ರಭಾವ ಬೀರಬಾರದೆಂದುಕೊಂಡಿದ್ದೆ. ಆದರೆ ನಾನು ಸಲ್ಲಿಸಿರುವ ವರದಿ ಕುರಿತು ಅಲ್ಪ ಸ್ವಲ್ಪ ಮಾಹಿತಿಯನ್ನು ಪಡೆದು, ಬೊ.ನಾ.ಕೃಷ್ಣಮೂರ್ತಿರವರು ಕನ್ನಡಪ್ರಭಕ್ಕೆ ಬರೆದಿರುವ ಲೇಖನ ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡದಿರಲೆಂದು ಈ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಬಹುಶಃ ಅವರು ನನ್ನ ವರದಿಯನ್ನು ಓದಿದ್ದಲ್ಲಿ ಅವರ ಲೇಖನದಲ್ಲಿ ಅಷ್ಟೊಂದು ವ್ಯಂಗ್ಯ ಇರುತ್ತಿರಲಿಲ್ಲ ಎಂದು ಭಾವಿಸುತ್ತೇನೆ.
ಈ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲು ಅನೇಕ ತಿಂಗಳುಗಳು ಹಾಗೂ ಸಾವಿರಾರು ಗಂಟೆಗಳ ಪರಿಶ್ರಮವಿದೆ. ಪರಿಸರ, ಅರಣ್ಯ, ಮೀನುಗಾರಿಕೆ, ಹೈಡ್ರಾಲಜಿ, ಹೈಡ್ರಾಲಿಕ್ಸ್, ಬೃಹತ್ ನೀರಾವರಿ, ಕೆಪಿಸಿ, ಕೆಪಿಸಿಎಲ್ ಹಾಗೂ ಐ.ಐ.ಎಸ್.ಸಿ.ಯಲ್ಲಿನ ಅನೇಕ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸಿದ್ದೇವೆ. ಒಂದು ಹುಲ್ಲು ಕಡ್ಡಿಯನ್ನು ಅಲುಗಿಸದೇ ಈ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಎಲ್ಲೂ ಹೇಳಿಲ್ಲ. ಪಶ್ಚಿಮಘಟ್ಟಗಳ ಪರಿಸರದ ಸೂಕ್ಷ್ಮತೆಯನ್ನೇ ಮೂಲ ಆಧಾರವಾಗಿಟ್ಟುಕೊಂಡು ವರದಿಯನ್ನು ತಯಾರಿಸಿದ್ದೇವೆ. ಅಘನಾಶಿನಿಯಿಂದ ಲಿಂಗನಮಕ್ಕಿಗೆ ನೀರೊಯ್ಯಲು ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಹೇಳಿರುವುದು ಸರಿಯಲ್ಲ. ಎನ್.ಆರ್.ಎಸ್.ಎ ಸಂಸ್ಥೆಯ 7 ಮೀಟರುಗಳ ನಿಖರ ಅಂತರದ ಉಪಗ್ರಹ ಇಮೇಜಿಂಗ್ ಬಳಸಿ ಅತ್ಯಂತ ಕಡಿಮೆ ಮರಗಳು ನಾಶವಾಗುವಂತೆ ಅಲೈನ್ಮೆಂಟ್ ರೂಪಿಸಲಾಗಿದೆ. ಈ ಇಮೇಜ್ಗಳಿಂದ ಮರಗಳ ಸಂಖ್ಯೆ ಎಣಿಸುವುದಿರಲಿ ರೆಂಬೆಯ ಗಾತ್ರಗಳನ್ನು ನಿಖರವಾಗಿ ಹೇಳಬಹುದು. ಅದಲ್ಲದೇ ಅಲೈನ್ಮೆಂಟ್ ಹಾದಿಯಲ್ಲಿ ನಡೆದು ಖುದ್ದಾಗಿ ವೀಕ್ಷಿಸಿದ್ದೇವೆ. ಪರಿಸರ ಎಂದರೆ ಕೇವಲ ಮರಗಿಡಗಳು ಮಾತ್ರವಲ್ಲ. ಈ ಜಲಾನಯನ ಪ್ರದೇಶದಲ್ಲಿ ನಶಿಸಿ ಹೋಗುವ ಭೀತಿಯಲ್ಲಿರುವ ಲಯನ್ ಟೇಲ್ಡ್ ಮಕಾಕ್ (ಅತ್ಯಂತ ವಿರಳ ಜಾತಿಯ ಕೋತಿಗಳು), ಮಿರಿಸ್ಟಿಕಾ ಸ್ವಾಂಪ್ಸ(ಅತ್ಯಂತ ವಿರಳ ಜಾತಿಯ ಬಳ್ಳಿಗಳು) ಹಾಗೂ ಹಾರ್ನ್ಬಿಲ್ ಪಕ್ಷಿಗಳಿಗೂ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಪರಿಸರ ತಜ್ಞರ ಸಲಹೆ ಮೇರೆಗೆ ತೆಗೆದುಕೊಳ್ಳಲಾಗಿದೆ. ಸಮುದ್ರ ಮಟ್ಟಕ್ಕಿಂತ 487 ಮೀಟರುಗಳ ಎತ್ತರದಲ್ಲಿ ಅಘನಾಶಿನಿ ನದಿಯಿಂದ ನೀರು ತೆಗೆಯುವುದಕ್ಕೆ ಸ್ಥಳವನ್ನು ಗುರುತಿಸಿದ್ದೇವೆ. ಈ ಸ್ಥಳದಲ್ಲಿ ಮೇಲೆ ಹೇಳಿರುವ ಯಾವುದೇ ಸೂಕ್ಷ್ಮ ಜೀವಿಗಳಿರುವುದಿಲ್ಲ. ನಾವು ಗೊತ್ತು ಮಾಡಿರುವ ಸ್ಥಳದಲ್ಲಿ(487ಮೀ) ನದಿಯಲ್ಲಿನ ನೀರಿನ ಮಾಪನದ ಪ್ರಕಾರ ಸರಾಸರಿ 65 ಟಿಎಂಸಿಯಷ್ಟು ನೀರು ಪ್ರತಿ ವರ್ಷ ಹರಿದು ಹೋಗಿದೆ. ಈ ಸ್ಥಳದಿಂದ ಅಘನಾಶಿನಿ ನದಿ ಸಮುದ್ರ ಸೇರುವ ಮುಂಚೆ ಇನ್ನು 95 ಟಿಎಂಸಿಯಷ್ಟು ನೀರು ನದಿಗೆ ಸೇರಿ ಸಮುದ್ರಕ್ಕೆ ಹರಿಯುತ್ತದೆ. ಅಂದರೆ ಅಘನಾಶಿನಿ ನದಿಯಲ್ಲಿನ ಒಟ್ಟು ನೀರು 160 ಟಿಎಂಸಿ ಯಷ್ಟು. ನಾವು ಗೊತ್ತುಪಡಿಸಿರುವ ಜಾಗದಲ್ಲಿ 65ಟಿಎಂಸಿ ಯಷ್ಟು ನೀರು ಹರಿದರೂ ನಾವು ಕೇವಲ 30 ರಿಂದ 35 ಟಿಎಂಸಿ ಯಷ್ಟು ನೀರನ್ನು ಬಳಸುತ್ತೇವೆ, ಉಳಿದ ಶೇ.50ರಷ್ಟು ಅಂದರೆ 30 ಟಿಎಂಸಿ ಯಷ್ಟು ನೀರು ನದಿಯಲ್ಲೇ ಹರಿದು ಮುಂದೆ ಸಾಗುತ್ತದೆ. ಆದುದರಿಂದ ಉಂಚಳ್ಳಿ ಜಲಪಾತದ ಸೊಬಗಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ನೀರನ್ನು ಕೇವಲ ಮಳೆಗಾಲದಲ್ಲಿ ಮಾತ್ರ ಬಳಸಲಾಗುವುದು. ಆದುದರಿಂದ ನದಿಯ ಹರಿವಿಗಾಗಲಿ ಅಥವಾ ಲವಣತ್ವಕ್ಕಾಗಲಿ ಯಾವುದೇ ಧಕ್ಕೆ ಬರುವುದಿಲ್ಲ. ಮಳೆಗಾಲದಲ್ಲಿ ಘಟ್ಟಪ್ರದೇಶಗಳಿಂದ ಹರಿಯುವ ನೀರಿನಲ್ಲಿ ಮೀನುಗಳಿಗೆ ಅಥವಾ ಇತರೆ ಅನೇಕ ಜಲಚರಗಳಿಗೆ ಬೇಕಾಗುವ ಆಹಾರ ಹಾಗು ಲವಣಾಂಶಗಳಿರುತ್ತವೆ. ಅಲ್ಲದೇ ಸಮುದ್ರದ ಅನೇಕ ಜಾತಿಯ ಮೀನುಗಳು ಹರಿದು ಬರುವ ಆಹಾರ ಹಾಗೂ ಲವಣಾಂಶಗಳಿಗೆ ಅವಲಂಬಿತವಾಗಿ ಸಂತಾನ ವೃದ್ಧಿ ಮಾಡುತ್ತವೆ. ನದಿಯ ಕೇವಲ ಶೇ.20 ರಷ್ಟು ನೀರನ್ನು ಬಳಸುವುದರಿಂದ ಹಾಗು ಅದರ ಸ್ವಾಭಾವಿಕ ಹರಿವಿಗೆ ಯಾವುದೇ ಧಕ್ಕೆಯಾಗದೆ ಇರುವುದರಿಂದ ಮೀನುಗಳಿಗಾಗಲಿ ಅಥವಾ ಇದನ್ನೇ ನಂಬಿ ಜೀವನ ಮಾಡುತ್ತಿರುವ ಮೀನುಗಾರರಿಗಾಗಲಿ ಯಾವುದೇ ತೊಂದರೆಯಾಗುವುದಿಲ್ಲ. ಪಶ್ಚಿಮಘಟ್ಟಗಳಿಂದ ಬೆಂಗಳೂರು ಮತ್ತು ಬರಪೀಡಿತ ಜಿಲ್ಲೆಗಳಿಗೆ ನೀರು ಕೊಡಲು ಸರ್ಕಾರದ ಮುಂದೆ ಮೂರು ಯೋಜನೆಗಳಿವೆ. ಯಾವ ಯೋಜನೆಗಳಿಗೂ ಪರಿಸರ ಪರಿಣಾಮವನ್ನು ಅಂದಾಜು ಮಾಡಿಲ್ಲ. ನಾನು ಸರ್ಕಾರವನ್ನು ಕೋರುವುದೇನೆಂದರೆ ನಮ್ಮ ಈ ಯೋಜನೆಗೆ ಪಶ್ಚಿಮಘಟ್ಟಗಳನ್ನು ಸಂರಕ್ಷಿಸುವ ಬಗ್ಗೆ ವರದಿ ಕೊಟ್ಟಿರುವ ಪ್ರೊ.ಮಾಧವ ಗಾಡ್ಗಿಲ್ ಹಾಗೂ ಪ್ರೊ.ಗಣೇಶಯ್ಯನವರ ನೇತೃತ್ವದಲ್ಲೇ ಪರಿಸರ ಪರಿಣಾಮದ ಅಂದಾಜು ಕಾರ್ಯ ನಡೆಯಲಿ. ಅವರ ಅಭಿಪ್ರಾಯದಂತೆ ಸರ್ಕಾರ ಮುಂದಿನ ಹೆಜ್ಜೆ ಇಡಲಿ.
ಉತ್ತರ ಕನ್ನಡ ಜಿಲ್ಲೆಯ ಈ ನದಿಪಾತ್ರದಲ್ಲಿ ಹಳ್ಳಿಗಳಲ್ಲಿ ಸರಿಯಾದ ರಸ್ತೆಗಳಿಲ್ಲ, ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ಹೋಗಲು ವಾಹನ ವ್ಯವಸ್ಥೆಯಿಲ್ಲ. ಆಸ್ಪತ್ರೆಗೆ ಹೋಗ ಬೇಕಾದರೆ ಈ ದುಸ್ಥರ ರಸ್ತೆಗಳಲ್ಲೇ ಸಾಗಬೇಕು. ಕೆಲವು ಹಳ್ಳಿಗಳಲ್ಲಿ ಹತ್ತನೇ ತರಗತಿಯವರೆಗೆ ಓದಿರುವವರ ಸಂಖ್ಯೆ ಬೆರಳೆಣಿಕೆಯಷ್ಟು. ಒಳ್ಳೆಯ ವಿದ್ಯುತ್ ಸೌಲಭ್ಯವಿಲ್ಲ. ಸರ್ಕಾರ ಈ ಭಾಗದ ಜನರಿಗೆ ಈ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಈ ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಕನಿಷ್ಠ ಸಾವಿರ ಕೋಟಿ ರೂಗಳನ್ನು ಮಂಜೂರು ಮಾಡಬೇಕು. ನಾವು ಅಘನಾಶಿನಿಯಿಂದ ಲಿಂಗನಮಕ್ಕಿ ನೀರು ತರುವ ಮಾರ್ಗದಲ್ಲಿ ಅನಾವಶ್ಯಕವಾಗಿ ಯಾವುದೇ ವಸತಿಗಳ ಅಥವಾ ಅಡಿಕೆ ತೋಟಗಳ ಮೂಲಕ ಹಾದುಬರದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಒಂದು ವೇಳೆ ಕೆಲವು ಅಡಿಕೆ ತೋಟಗಳಲ್ಲಿ ಹಾದು ಹೋಗಬೇಕಾದಲ್ಲಿ ಆ ಮಾಲೀಕರು ಬಗುರ ಹುಕುಂ ಸಾಗುವಳಿದಾರರಾಗಿದ್ದರೂ ಶಿವಮೊಗ್ಗ ವಿಮಾನ ನಿಲ್ದಾಣ ಭೂ ಸ್ವಾಧೀನದ ಮಾದರಿಯಲ್ಲಿ ಪರಿಹಾರ ಕೊಡಬೇಕು. ಸಿರಸಿ ಹಾಗು ಸಿದ್ದಾಪುರ, ಬೆಂಗಳೂರಿಗಿಂತ ಐದು ಪಟ್ಟು ಬೃಹದಾಕಾರವಾಗಿ ಬೆಳೆದರೂ ಅದಕ್ಕೆ ನೀರುಣಿಸುವಷ್ಟು ನೀರು ಸುತ್ತ ಮುತ್ತಲಿನ ಜಲಾಯನ ಪ್ರದೇಶದಲ್ಲಿದೆ. ಆದುದರಿಂದ ಇಲ್ಲಿಯ ಜನ ವಿನಾ ಕಾರಣ ಆತಂಕ ಪಡುವಂತಿಲ್ಲ. ಕರಾವಳಿ ಹಾಗು ಶಿವಮೊಗ್ಗ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವುದಕ್ಕೂ ನೀರಿರುವುದಿಲ್ಲ ಎಂಬ ಮಾತು ಕೇಳಿ ಬಂದಿದೆ. ಬೇಸಿಗೆಯಲ್ಲಿ ಈ ಪ್ರದೇಶಗಳಿಗೆ ಲಿಂಗನಮಕ್ಕಿ, ಮಾಣಿ ಹಾಗೂ ಗೇರುಸೊಪ್ಪ ಜಲಾಶಯಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸೂಚಿಸಿದ್ದೇವೆ. ನೀವು ಉಪವಾಸ ಮಾಡಿ ನಮಗೆ ದಾನ ಮಾಡಿ ಎಂದು ನಾವು ಕೇಳುತ್ತಿಲ್ಲ. ನೀವು ಮೂರು ಹೊತ್ತು ಊಟಮಾಡಿ ಮಿಕ್ಕಿದ್ದನ್ನು ಬೆಂಗಳೂರು ಹಾಗೂ ಬರಪೀಡಿತ ಜಿಲ್ಲೆಗಳಿಗೆ ಹಾಯಿಸಿ ಎಂದಷ್ಟೇ ಕೇಳುತ್ತಿದ್ದೇವೆ.
ಈಗಿನ ಕಾಲದಲ್ಲಿ ಎಷ್ಟು ಮಕ್ಕಳು ಜೋಗ ಜಲಪಾತದ ಸೊಬಗನ್ನು ನೋಡಿದ್ದಾರೆ? ಮಳೆಗಾಲದಲ್ಲಿ ಶಾಲಾ ಕಾಲೇಜುಗಳಿಗೆ ರಜೆಯಿರುವುದಿಲ್ಲ ಹಾಗೂ ಹವಾಮಾನ ಅನುಕೂಲವಾಗಿರುವುದಿಲ್ಲ. ಮಳೆಗಾಲದ ನಂತರ ಜೋಗದಲ್ಲಿ ನೀರಿರುವುದಿಲ್ಲ. ಮಳೆಗಾಲದಲ್ಲಿ ಬೀಳುವ ಹೆಚ್ಚುವರಿ ನೀರನ್ನು ಶೇಖರಿಸಿ, ಮಳೆಗಾಲದ ನಂತರ ಪ್ರತಿ ಶನಿವಾರ ಹಾಗೂ ಭಾನುವಾರ, ದಸರಾ ರಜೆಗಳು, ಕ್ರಿಸಮಸ್ ರಜೆಗಳು ಹಾಗೂ ಬೇಸಿಗೆ ರಜೆಗಳು ಅಂದರೆ ಒಟ್ಟು ನೂರು ದಿನಗಳ ಕಾಲ ಜೋಗ ಜಲಪಾತದ ಸೊಬಗನ್ನು ಹೆಚ್ಚಿಸಬಹುದು. ಈ ನೂರು ದಿನಗಳಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ರಾಜಾ,ರಾಣಿ,ರೋರರ್ ಹಾಗೂ ರಾಕೆಟ್ನ ಸೊಬಗನ್ನು ಕಣ್ತುಂಬ ನೋಡಬಹುದು. 100 ದಿನಗಳ ಕಾಲ ಪ್ರತಿ ದಿನ 8 ಗಂಟೆಗಳ ಕಾಲ 400 ಕ್ಯುಸೆಕ್ ನೀರನ್ನು ಜೋಗ ಜಲಪಾತಕ್ಕೆ ಬಿಡಲಾಗುವುದು. ಇದಕ್ಕೆ ಬೇಕಾಗುವುದು(100ದಿನಗಳಿಗೆ) ಒಟ್ಟು ಕೇವಲ 2 ಟಿಎಂಸಿ ಯಷ್ಟು ನೀರು. ಹೊನಲು ಬೆಳಕು ದೀಪಗಳನ್ನು ಅಳವಡಿಸುವುದರ ಜೊತೆಗೆ ಸಂಗೀತ ಕಾರಂಜಿಗಳನ್ನು ಹಾಕಿ ಜೋಗದ ಸೊಬಗನ್ನು ಸಂಜೆಯಲ್ಲೂ ನೋಡಬಹುದು. ರಜೆ ದಿನಗಳಲ್ಲಿ ಜೋಗದಲ್ಲಿ ನೀರು ಹರಿಯುವುದರಿಂದ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗಳನ್ನು ಆಕರ್ಷಿಸಬಹುದು, ಇದರಿಂದ ಪ್ರವಾಸೋದ್ಯಮ ಹಾಗೂ ಸ್ಥಳೀಯ ಆರ್ಥಿಕತೆಯು ಅಭಿವೃದ್ಧಿಯಾಗುತ್ತದೆಂದು ನಮ್ಮ ವರದಿಯಲ್ಲಿ ತಿಳಿಸಿದ್ದೇವೆ. ಆದುದರಿಂದ ಲಿಂಗನಮಕ್ಕಿಯಲ್ಲಿ ನಾವು 15 ಟಿಎಂಸಿ ನೀರನ್ನು ತೆಗೆದರೆ ಜೋಗದ ಸೊಬಗಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಅಘನಾಶಿನಿಯಿಂದ ನೀರನ್ನು ಲಿಂಗನಮಕ್ಕಿಗೆ ಹಾಕುವ ಉದ್ದೇಶವೇನೆಂದರೆ, ಲಿಂಗನಮಕ್ಕಿಯಿಂದ 8 ತಿಂಗಳ ಕಾಲ ನೀರನ್ನು ಪೂರ್ವಕ್ಕೆ ಸಾಗಿಸಬಹುದು. ಇದರಿಂದ ನೀರನ್ನು ಸಾಗಿಸಲು ಬೇಕಾದ ವಿದ್ಯುತ್ ಶಕ್ತಿ ಹಾಗೂ ಪೈಪ್ಗಳ ಗಾತ್ರವು ಕಡಿಮೆಯಾಗುತ್ತದೆ. ನಾವು ಗಮನಿಸಿರುವಂತೆ ಶೇ.30 ರಷ್ಟು ವರ್ಷಗಳಲ್ಲಿ ಲಿಂಗನಮಕ್ಕಿಗೆ 200 ಕ್ಕೂ ಹೆಚ್ಚೂ ಟಿಎಂಸಿ ನೀರು ಹರಿದು ಬಂದಿದೆ. ಆ ವರ್ಷಗಳಲ್ಲಿ ಆಘನಾಶಿನಿ ನದಿಯ ನೀರನ್ನು ಬಳಸುವ ಅವಶ್ಯಕತೆಯಿರುವುದಿಲ್ಲ. ಬೊ.ನಾ.ಕೃ ಅವರು ಹೇಳಿರುವಂತೆ ಅಘನಾಶಿನಿ ನದಿಯ ನೀರನ್ನು ವರದಾ ನದಿಗೆ ಹಾಯಿಸಿ ಆಂಧ್ರದ ಅನಂತಪುರದವರೆಗೆ ಸಾಗಿಸಿ ಅನಂತಪುರದಿಂದ ಬೆಂಗಳೂರಿಗೆ ಸಾಗಿಸಿ ಎಂದು ಒಳ್ಳೆಯ ಆಲೋಚನೆ. ಆದರೆ 1892- 1924 ಅಂತಾರಾಜ್ಯ ಒಪ್ಪಂದಗಳು, ನದಿ ವಿವಾದಗಳು ಇದಕ್ಕೆ ಅಡ್ಡಿಯಾಗುತ್ತವೆ. ತುಂಗಾಭಧ್ರ ಜಲಾಶಯದಲ್ಲಿ ಹೂಳು ತುಂಬಿ 40 ಟಿಎಂಸಿ ಯಷ್ಟು ನೀರು ಆಂಧ್ರಕ್ಕೆ ಹರಿದು ಹೋಗುತ್ತಿದೆ. ಹಾಗಾದಲ್ಲಿ ಆಂಧ್ರ ಸರ್ಕಾರ ಹೆಚ್ಚುವರಿಯಾಗಿ ಹರಿದುಹೋದ ನೀರನ್ನು ನಾವು ಅನಂತಪುರದಿಂದ ಕರ್ನಾಟಕಕ್ಕೆ ಸಾಗಿಸಲು ಅನುಮತಿ ಕೊಡುತ್ತಾರೆಯೆ? ಒಮ್ಮೆ ಗಡಿ ದಾಟಿದ ನೀರು ಮತ್ತೇ ಗಡಿಯೊಳಗೆ ಹರಿದು ಬರುವುದು ಕನಸಿನ ಮಾತು.
ರಾಜ್ಯದ ಶೇ70 ರಷ್ಟು ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ) ಕೊಡುವ ಬೆಂಗಳೂರಿಗೆ ನೀರು ಎಷ್ಟು ಮುಖ್ಯವೋ, ಈ ನಗರಕ್ಕೆ ಹಾಲು, ಮೊಟ್ಟೆ, ತರಕಾರಿ, ಕೋಳಿ, ಮಾಂಸ ಸರಬರಾಜು ಮಾಡುವ 27 ಬರಪೀಡಿತ ತಾಲೂಕುಗಳಿಗೂ ನೀರು ಅಷ್ಟೇ ಮುಖ್ಯ. ಸುತ್ತ ಮುತ್ತಲಿನ ಬರಪೀಡಿತ ತಾಲ್ಲೂಕುಗಳು ಉಳಿದರೆ ಬೆಂಗಳೂರು ಉಳಿದೀತು. ಬೆಂಗಳೂರಿನಲ್ಲಿರುವ ವಾಯು ಮಾಲಿನ್ಯವೇ ಈ ಬರಪೀಡಿತ ತಾಲ್ಲೂಕುಗಳ ಮಳೆಯ ವೈಪರೀತ್ಯಕ್ಕೆ ಮುಖ್ಯ ಕಾರಣ. 24 ಗಂಟೆ ನೀರು-ವಿದ್ಯುತ್ ಬೇಕು, ಬೆಂಗಳೂರಿನಲ್ಲಿ ಸೈಟ್ ಬೇಕು, ವಿದ್ಯಾಭ್ಯಾಸ ಬೇಕು, ಆಸ್ಪತ್ರೆಗಳು ಬೇಕು, ಐಟಿ-ಬಿಟಿ ಉದ್ಯೋಗಗಳು ಬೇಕು. ಆದರೆ ಬೆಂಗಳೂರಿಗೆ ನೀರು ಬೇಕೆಂದರೆ ನಮ್ಮ ನದಿಗೆ ಕೈ ಹಾಕಬೇಡಿ ಎನ್ನುವುದು ಯಾವ ನ್ಯಾಯ ಸ್ವಾಮಿ?
- ಡಾ.ಮಧು ಸೀತಪ್ಪ