ಅಂಕಣಗಳು

ಮಲಾಲಾ ಗುಂಗಿನ ನಡುವೆಯೇ ಮನಾಲ್‌ಗೊಂದು ಸಲಾಂ

ಪಾಕಿಸ್ತಾನದಲ್ಲಿ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ದನಿಯೆತ್ತಿದ ಮಲಾಲಾ ಇದ್ದಾಳಲ್ಲ; ಅಂಥದೇ...

ಪಾಕಿಸ್ತಾನದಲ್ಲಿ ಮಕ್ಕಳ ಶಿಕ್ಷಣದ ಹಕ್ಕಿಗಾಗಿ ದನಿಯೆತ್ತಿದ ಮಲಾಲಾ ಇದ್ದಾಳಲ್ಲ; ಅಂಥದೇ ವ್ಯಕ್ತಿತ್ವದ ಮತ್ತೊಬ್ಬ ದಿಟ್ಟೆ -ಮನಾಲ್ ಶರೀಫ್. ಸೌದಿ ಅರೇಬಿಯಾದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿ ಗೆದ್ದದ್ದು ಈಕೆಯ ಹೆಚ್ಚುಗಾರಿಕೆ. ಒಂದು ಕಾಲದಲ್ಲಿ ಈಕೆ ಉಗ್ರಗಾಮಿ ಸಂಘಟನೆಯಲ್ಲಿದ್ದವಳು. ಅಲ್ಲಿಂದ ಹೊರಬರಲು ಕಾರಣವಾದದ್ದು 9/11ರ ಘಟನೆ. ಅವಳ ಹೋರಾಟದ ಬದುಕಿನ ಕಥೆಯನ್ನು ರೀಡರ್ಸ್ ಡೈಜೆಸ್ಟ್ ವಿಶೇಷ ಲೇಖನವೆಂದು ಪ್ರಕಟಿಸಿದೆ. ಅದರ ಭಾವಾನುವಾದ ಇಲ್ಲಿದೆ. ಓದಿಕೊಳ್ಳಿ.
'ಮುಸ್ಲಿಮರ ಪಾಲಿನ ಪವಿತ್ರ ಕ್ಷೇತ್ರವೆಂದರೆ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ. ಈ ಪುಣ್ಯ ಕ್ಷೇತ್ರವೇ ನನ್ನ ಹುಟ್ಟೂರು. ನಾನು ಹುಟ್ಟಿದ್ದು 1979ರಲ್ಲಿ. ಅದೇ ವರ್ಷದ ನವೆಂಬರ್‌ನಲ್ಲಿ, ಜುಹೇಮನ್ ತಯ್ಯಬಿ ಎಂಬ ಮುಸ್ಲಿಂ ಉಗ್ರಗಾಮಿ ನಾಯಕ ಮತ್ತು ಆತನ 400ಕ್ಕೂ ಹೆಚ್ಚು ಬೆಂಬಲಿಗರು, ಏಕಾಏಕಿ ಮೆಕ್ಕಾ ಕ್ಷೇತ್ರವನ್ನೇ ಆಕ್ರಮಿಸಿಕೊಂಡರು. ಈ ದಿಢೀರ್ ಆಕ್ರಮಣದಿಂದ ಸರ್ಕಾರ ಕಂಗಾಲಾಯಿತು. ನಂತರ, ಸೇನಾ ಕಾರ್ಯಾಚರಣೆಯ ಮೂಲಕ ಜುಹೇಮನ್ ಮತ್ತು ಬೆಂಬಲಿಗರನ್ನು ಸೆರೆ ಹಿಡಿದು ಎಲ್ಲರನ್ನೂ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.
ಅರಬ್ ರಾಷ್ಟ್ರಗಳು ಮೈ ತುಂಬಾ ಮಡಿವಂತಿಕೆಯನ್ನು ಹೊದ್ದುಕೊಂಡಿದ್ದ ಕಾಲ ಅದು. ಅಂಥ ಸಂದರ್ಭದಲ್ಲಿ ಸೌದಿ ಅರೇಬಿಯಾದ ರಾಜ, ಕೆಲವೊಂದು ಬದಲಾವಣೆಗಳಿಗೆ ಮುಂದಾಗಿದ್ದ. ಮುಖ್ಯವಾಗಿ, ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ಹೇರಲಾಗಿದ್ದ ಹಲವು ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಇಂಥ ಸಾಮಾಜಿಕ ಬದಲಾವಣೆ ಇಸ್ಲಾಂ ಧರ್ಮದ ಆಶಯಗಳಿಗೆ ವಿರುದ್ಧವಾದದ್ದು, ಸರ್ಕಾರದ ಇಂಥ ನಡೆಯನ್ನು ಧಿಕ್ಕರಿಸುತ್ತೇವೆ ಎಂದು ಹೇಳಿಕೊಂಡೇ ಜುಹೇಮನ್ ಮತ್ತು ಬೆಂಬಲಿಗರು ಮೆಕ್ಕಾಕ್ಕೆ ನುಗ್ಗಿ ಬಂದಿದ್ದರು.
ಕೆಲವೇ ದಿನಗಳ ನಂತರ, ಜುಹೇಮನ್‌ನ ಸಾವಿಗೆ ಪ್ರತೀಕಾರದ ರೂಪದಲ್ಲಿ ಮತ್ತೆ ಗಲಭೆ ನಡೆಸಲು, ಆ ಮೂಲಕ ತಮ್ಮ ಉದ್ದೇಶ ಏನೆಂದು ಸಾರಲು ಜುಹೇಮನ್‌ನ ಬೆಂಬಲಿಗರು ನಿರ್ಧರಿಸಿರುವ ಸುದ್ದಿ ಸರ್ಕಾರವನ್ನು ತಲುಪಿತು. ತಕ್ಷಣವೇ ಎಚ್ಚೆತ್ತುಕೊಂಡ ಸರ್ಕಾರ, ಉಗ್ರಗಾಮಿಗಳನ್ನು ಸಮಾಧಾನಿಸುವ ಕೆಲಸಕ್ಕೆ ಮುಂದಾಯಿತು. ಪರಿಣಾಮವಾಗಿ, ಟಿ.ವಿ.ಗಳಲ್ಲಿ ಅನೌನ್ಸರ್‌ಗಳಾಗಿದ್ದ ಮಹಿಳೆಯರನ್ನು ನೌಕರಿಯಿಂದ ತೆಗೆದು ಹಾಕಲಾಯಿತು. ಜಾಹೀರಾತುಗಳಲ್ಲಿ ಮಹಿಳೆಯರ ಚಿತ್ರ ಬಳಸಬಾರದೆಂದು ಆದೇಶ ಹೊರಡಿಸಲಾಯಿತು. ಚಿತ್ರಮಂದಿರಗಳಿಗೆ ಮಹಿಳೆಯರು ಹೋಗುವಂತಿಲ್ಲ, ಸಂಗೀತ ಕೇಳುವಂತಿಲ್ಲ, ಬುರ್ಖಾ ಧರಿಸದೆ ಹೊರಗೆ ಬರುವಂತಿಲ್ಲ ಎಂದೆಲ್ಲಾ ಕಾನೂನು ರೂಪಿಸಲಾಯಿತು.
ಸರ್ಕಾರ ತಮ್ಮೆದುರು ಮಂಡಿಯೂರುತ್ತಿದೆ ಎಂಬುದು ಗೊತ್ತಾದ ಮೇಲೆ ಉಗ್ರಗಾಮಿ ನಾಯಕರ ಉತ್ಸಾಹ ಮತ್ತಷ್ಟು ಹೆಚ್ಚಿತ್ತು. ಇದೇ ವೇಳೆಗೆ ತೈಲ ಮಾಫಿಯಾದ ಕೆಲವು ಮುಖಂಡರು ಉಗ್ರರಿಗೆ ಕೋಟ್ಯಂತರ ರುಪಾಯಿಗಳನ್ನು ಭಕ್ಷೀಸ್ ಎಂದು ಕೊಟ್ಟು, ಜಗತ್ತಿನ ಎಲ್ಲೆಡೆಯೂ ಧರ್ಮ ಯುದ್ಧ ನಡೆಸುವಂತೆ ಕರೆ ನೀಡಿದರು. ಈ ಬೆಳವಣಿಗೆಗಳನ್ನು ಕಂಡು ಬೆಚ್ಚಿದ ಸರ್ಕಾರ, ಜುಹೇಮನ್ ಎಂಬ ಉಗ್ರಗಾಮಿ ನಾಯಕನ ನೆನಪೇ ಇಲ್ಲದಂತೆ ಮಾಡಲು ಮುಂದಾಯಿತು. ಪರಿಣಾಮವಾಗಿ, ಜುಹೇಮನ್‌ನ ಬಗ್ಗೆ ಪ್ರಕಟವಾಗಿದ್ದ ಎಲ್ಲ ಪತ್ರಿಕಾ ವರದಿ ಹಾಗೂ ಛಾಯಾಚಿತ್ರಗಳನ್ನು ಸುಟ್ಟು ಹಾಕಲಾಯಿತು. ಆದರೆ, ಇಂಥ ಪ್ರಯತ್ನಗಳಿಂದ ಉಗ್ರಗಾಮಿಗಳ ಸಂಖ್ಯೆಯನ್ನು ತಗ್ಗಿಸಲು ಸಾಧ್ಯವಾಗಲಿಲ್ಲ.
ಇಷ್ಟೆಲ್ಲಾ ಆಗುವ ವೇಳೆಗೆ 10 ವರ್ಷಗಳು ಕಳೆದುಹೋಗಿದ್ದವು. ಈ ಸಂದರ್ಭದಲ್ಲಿ ಜಿಹಾದ್‌ನ ಮಹತ್ವ ವಿವರಿಸುವ ಪುಸ್ತಕ, ಕೆಸೆಟ್ ಹಾಗೂ ಕರಪತ್ರ ವಿತರಿಸುವ ಜವಾಬ್ದಾರಿಯನ್ನು ನನ್ನ ವಾರಿಗೆಯ ಮಕ್ಕಳಿಗೆ ವಹಿಸಲಾಗಿತ್ತು. ಆ ದಿನಗಳಲ್ಲಿ ಬಂಡುಕೋರರ ಶಿಬಿರ ಹಾಗೂ ಸಭೆಗಳಲ್ಲಿ-'ನಾವು ಹೇಳಿದಂತೆ ಕೇಳದವರನ್ನು ಕೊಂದು ಹಾಕೋಣ' ಎಂದು ಹೂಂಕರಿಸುತ್ತಿದ್ದ ಯುವಕನೊಬ್ಬ ಎಲ್ಲರ ಗಮನ ಸೆಳೆದಿದ್ದ. ಹೆಚ್ಚಿನ ಸಂದರ್ಭಗಳಲ್ಲಿ ಅವನ ಮಾತು ಆದೇಶದಂತೆ ಇರುತ್ತಿತ್ತು. ಅದೇ ಫೈನಲ್ ಆಗಿರುತ್ತಿತ್ತು. ಆ ಯುವಕನ ಹೆಸರೇನು ಗೊತ್ತೇ? ಒಸಾಮಾ ಬಿನ್ ಲಾಡೆನ್! ಅವತ್ತಿನ ಸಂದರ್ಭದಲ್ಲಿ ಸೌದಿ ಅರೇಬಿಯಾದಲ್ಲಿ ಹೆಣ್ಣು ಮಕ್ಕಳಿಗೆ ಯಾವ ಬಗೆಯ ಸ್ವಾತಂತ್ರ್ಯವೂ ಇರಲಿಲ್ಲ. ಹೆಂಗಸರಿಗೆ ಸ್ವಂತ ವ್ಯಕ್ತಿತ್ವವೇ ಇರಲಿಲ್ಲ. ಇಂಥವರ ತಾಯಿ, ಇಂಥ ವ್ಯಕ್ತಿಯ ಮಗಳು, ಇಂಥ ಆಸಾಮಿಯ ಹೆಂಡತಿ ಎಂದೇ ಅವರನ್ನು ಗುರುತಿಸಲಾಗುತ್ತಿತ್ತು. ಬುರ್ಖಾ ಧರಿಸದೆ ಹೊರಗೆ ಕಾಲಿಡುವಂತಿಲ್ಲ ಎಂಬ ಕಾನೂನೇ ಜಾರಿಯಲ್ಲಿತ್ತು. ಗಂಡಸರಿಂದ ಯಾವುದೇ ತೊಂದರೆ ಆಗದಿರಲಿ ಎಂಬ ಸದಾಶಯದಿಂದಲೇ ಹೀಗೆ ಮಾಡಿದ್ದೇವೆ. ಇದೆಲ್ಲಾ ನಿಮ್ಮ ಒಳ್ಳೆಯದಕ್ಕೇ. ನಾಲ್ಕು ಗೋಡೆಗಳ ಮಧ್ಯೆಯೇ ಇದ್ದರೆ ಮಹಾರಾಣಿಯರಂತೆ ಬದುಕಬಹುದು ಎಂಬ ಹಸಿ ಹಸಿ ಸುಳ್ಳನ್ನು ಹೇಳಿ ಮಹಿಳೆಯರನ್ನೂ ನಂಬಿಸಲಾಗಿತ್ತು. ಅವತ್ತಿನ ಸಂದರ್ಭದಲ್ಲಿ ನನಗೆ ಕೇವಲ 11 ವರ್ಷ. ಆ ವಯಸ್ಸಿನಲ್ಲಿ ಅದೆಷ್ಟರ ಮಟ್ಟಿಗೆ ಬ್ರೈನ್ ವಾಶ್ ಮಾಡಲಾಗಿತ್ತು ಎಂದರೆ, ಉಗ್ರಗಾಮಿ ನಾಯಕರು ಹೇಳುವುದೆಲ್ಲಾ ಹೆಂಡ್ರೆಡ್ ಪರ್ಸೆಂಟ್ ಸರಿ ಎಂದೇ ನಾನೂ ವಾದಿಸುತ್ತಿದ್ದೆ.
ಹೀಗಿರುವಾಗಲೇ, ಯಾರೂ ನಿರೀಕ್ಷಿಸಿರದ ಘಟನೆಯೊಂದು 1990ರಲ್ಲಿ ನಡೆದು ಹೋಯಿತು. ಅವತ್ತಿಗೆ, ಮುಸ್ಲಿಂ ಹೆಣ್ಣು ಮಕ್ಕಳು ಕಾರು ಓಡಿಸಬಾರದು. ಕಾರು ಓಡಿಸುವುದು ಇಸ್ಲಾಂ ಆಶಯಕ್ಕೆ ವಿರುದ್ಧ ಎಂದೆಲ್ಲ ನಂಬಿಸಲಾಗಿತ್ತು. ಆ ಆದೇಶವನ್ನು ಧಿಕ್ಕರಿಸಿದ 47 ಮಹಿಳೆಯರು, ಸೌದಿಯ ರಾಜಧಾನಿ ರಿಯಾದ್‌ನಲ್ಲಿ ಕಾರು ಚಲಾಯಿಸಿ, ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕೆಂದು ಒತ್ತಾಯಿಸಿದರು. ಅವರ ಬೇಡಿಕೆಗೆ, ಬಂಡುಕೋರ ಮುಖಂಡರಿಂದ ಉಗ್ರ ವಿರೋಧ ವ್ಯಕ್ತವಾಯಿತು. ಆಗ ಸೌದಿಯ ಸರ್ಕಾರ ಮಾಡಿದ ಮೊದಲ ಕೆಲಸವೆಂದರೆ ಕಾರು ಓಡಿಸಿದ ಎಲ್ಲ ಹೆಂಗಸರನ್ನೂ ನೌಕರಿಯಿಂದ ವಜಾ ಮಾಡಿದ್ದು, ಆಗಲೇ ನಾನು ನೋಟ್‌ಬುಕ್‌ನಲ್ಲಿ ಹೀಗೆ ಬರೆದಿದ್ದೆ: 'ಇಸ್ಲಾಂನ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡ ಎಲ್ಲ 47 ಹೆಂಗಸರನ್ನೂ ನೇಣಿಗೆ ಹಾಕಬೇಕು!'. ಜಿಹಾದ್‌ನ ಅಫೀಮು ನನ್ನ ತಲೆಯೊಳಗೆ ಆ ಮಟ್ಟಕ್ಕೆ ತುಂಬಿಕೊಂಡಿತ್ತು.
ಹೀಗೇ ವರ್ಷಗಳು ಕಳೆಯುತ್ತಿದ್ದವು. ಆಗಲೇ, ಅಂದರೆ 1996ರಲ್ಲಿ ಸೌದಿಯಲ್ಲಿದ್ದ ಮುಸ್ಲಿಂ ಉಗ್ರಗಾಮಿಗಳು ಖೋಬಾರ್ ಟವರ್‌ಗೆ ಬಾಂಬ್ ಹಾಕಿದರು. ಪರಿಣಾಮವಾಗಿ, ಅಮೆರಿಕದ 19 ಸೇನಾ ಮುಖ್ಯಸ್ಥರೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಸತ್ತು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಸುದ್ದಿ ಕೇಳಿದಾಗಲೂ ನನಗೆ ಅಯ್ಯೋ ಅನಿಸಲಿಲ್ಲ. 'ಒಂದು ಕ್ರಾಂತಿ ಆಗಬೇಕು ಅಂದ್ರೆ ಹೀಗೆಲ್ಲಾ ಜನ ಸಾಯಲೇಬೇಕು' ಎಂದು ಗೊಣಗಿಕೊಂಡು ಸುಮ್ಮನಾದೆ.
ನನ್ನ ಬದುಕಿಗೆ ನಿಜವಾದ ತಿರುವು ಸಿಕ್ಕಿದ್ದು ಇಸವಿ 2000ದಲ್ಲಿ. ಆ ವರ್ಷ, ಸೌದಿಯಲ್ಲಿ ಇಂಟರ್‌ನೆಟ್ ಬಳಕೆಗೆ ಅವಕಾಶ ಮಾಡಿಕೊಡಲಾಯಿತು. ಅದುವರೆಗೆ ಪ್ರಪಂಚವೆಂದರೆ ಸೌದಿ ಅರೇಬಿಯಾ ಮಾತ್ರ ಎಂದುಕೊಂಡಿದ್ದೆ. ಆದರೆ ಇಂಟರ್‌ನೆಟ್‌ನ ಕಾರಣದಿಂದ ಪ್ರಪಂಚ ಎಷ್ಟೊಂದು ವಿಶಾಲವಾಗಿದೆ ಎಂಬುದು ಅರ್ಥವಾಯಿತು. ಅವತ್ತಿನವರೆಗೂ ಕಾಲಿನ ಬೆರಳೂ ಸಹ ಗಂಡಸರಿಗೆ ಕಾಣಿಸಬಾರದು ಎಂಬ ನಿರ್ಧಾರದಿಂದ ಪರದೆಯ ಮಧ್ಯೆಯೇ ಬದುಕಿದ್ದವಳು ನಾನು. ಆದರೆ, ಇಂಟರ್‌ನೆಟ್‌ನ ಕಾರಣದಿಂದ ಹೊಸ ಗೆಳೆಯ -ಗೆಳತಿಯರ ಪರಿಚಯವಾದಂತೆಲ್ಲಾ ನಾನು ಪುರಾತನ ಕಾಲದಲ್ಲಿ ಬದುಕುತ್ತಿದ್ದೇನೆ ಅನ್ನಿಸಿತು. ಅಂತರ್ಜಾಲದ ಗೆಳೆಯರೊಂದಿಗೆ ಚರ್ಚಿಸುತ್ತಾ ಹೋದಂತೆಲ್ಲಾ ವಿವಿಧ ಧರ್ಮ ಹಾಗೂ ಅಲ್ಲಿರುವ ಪದ್ಧತಿಗಳ ಪರಿಚಯವಾಯಿತು. ಅದೇ ವೇಳೆಗೆ, ಧರ್ಮದ ಹೆಸರು ಹೇಳಿ ಮಹಿಳೆಯರಿಗೆ ಹಲವು ಬಗೆಯ ನಿರ್ಬಂಧ ಹೇರುವುದು, ಅವರನ್ನು ನಾಲ್ಕು ಗೋಡೆಯ ಮಧ್ಯೆಯೇ ಉಳಿಸಿ ಬಿಡುವುದು ಅಮಾನವೀಯ ನಡವಳಿಕೆ ಎಂದೂ ಅನ್ನಿಸತೊಡಗಿತು. ನನ್ನ ಮನಸ್ಸಿನ ತೊಳಲಾಟವನ್ನೆಲ್ಲಾ ಯಾರೊಂದಿಗೆ ಹೇಳಿಕೊಳ್ಳುವುದೆಂದು ಗೊತ್ತಾಗದೆ ಒದ್ದಾಡುತ್ತಿದ್ದಾಗಲೇ, ಅಮೆರಿಕದ ಪೆಂಟಗನ್ ಕಟ್ಟಡಕ್ಕೆ ಉಗ್ರಗಾಮಿಗಳು ವಿಮಾನ ನುಗ್ಗಿಸಿದ ಸುದ್ದಿ ಬಂತು.
ಘಟನೆ ನಡೆದ ಮರುದಿನವೇ, ಹೌದು. ವಿಮಾನ ನುಗ್ಗಿಸಿದ್ದು ನಾವೇ. ಅದಕ್ಕಾಗಿ ನಮಗೆ ವಿಷಾದವಿಲ್ಲ ಎಂದು ಅಲ್-ಖೈದಾ ಸಂಘಟನೆಯ ಮುಖಂಡರು ಹೇಳಿಕೆ ನೀಡಿದರು. ಈ ಹಿಂದೆ ಮುಸ್ಲಿಂ ರಾಷ್ಟ್ರಗಳ ಮೇಲೆ ಅಮೆರಿಕ ಸವಾರಿ ಮಾಡುತ್ತಿತ್ತಲ್ಲ; ಅದಕ್ಕೆ ದೇವರು ನೀಡಿದ ಶಿಕ್ಷೆಯೇ ಪೆಂಟಗನ್ ಕಟ್ಟಡದ ಮೇಲಿನ ದಾಳಿ ಎಂದೆಲ್ಲಾ ಅಲ್-ಖೈದಾದ ಮುಖಂಡರು ಹೇಳಿಕೆ ನೀಡಿದರು. ಐದು ವರ್ಷಗಳ ಹಿಂದೆಯೇ ಹೀಗಾಗಿದ್ದರೆ, ಹೌದು ಹೌದು. ನಮ್ಮ ಉಗ್ರಗಾಮಿ ನಾಯಕರು ಹೇಳಿರೋದು ಸರಿ ಎಂದು ವಾದಿಸುತ್ತಿದ್ದೆನೇನೋ; ಆದರೆ ಅಂತರ್ಜಾಲದ ಮೂಲಕ ಹಲವರೊಂದಿಗೆ ನಡೆಸಿದ್ದ ಚರ್ಚೆ ಹಾಗೂ ಓದಿಕೊಂಡಿದ್ದ ಹಲವು ಸಂಗತಿಗಳ ಕಾರಣದಿಂದ, ಆ ಕ್ಷಣಕ್ಕೆ ಅಲ್‌ಖೈದಾದ ದಾಳಿಯನ್ನು ಸಮರ್ಥಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಈ ಗೊಂದಲದ ಮಧ್ಯೆಯೇ ಟಿ.ವಿ. ಹಾಕಿದೆ. ಆಗ ಕಾಣಿಸಿದ ದೃಶ್ಯ, ನನ್ನೊಳಗೆ ತುಂಬಿಕೊಂಡಿದ್ದ ಕೌರ್ಯವೆಲ್ಲ ಕರಗಿ ಹೋಗುವಂತೆ ಮಾಡಿಬಿಟ್ಟಿತು. ಆ ದೃಶ್ಯ ಬೇರಾವುದೂ ಅಲ್ಲ: ಪೆಂಟಗನ್‌ಗೆ ವಿಮಾನ ನುಗ್ಗಿದ ಸಂದರ್ಭದ್ದು. ಸ್ಫೋಟ ಸಂಭವಿಸಿದ ತಕ್ಷಣ, ಗಾಬರಿಯಿಂದ ಓಡಿ ಬಂದ ವ್ಯಕ್ತಿಯೊಬ್ಬ ಪ್ರಾಣ ಉಳಿಸಿಕೊಳ್ಳುವ ಆಸೆಯಿಂದ 'ಹೋ' ಎಂದು ಜಿಗಿದು ಬಿಟ್ಟ. ಅದನ್ನು ನೋಡುತ್ತಿದ್ದಂತೆಯೇ ಮೈ ನಡುಗಿತು. ಬಹುಶಃ ಮನೆಯಲ್ಲಿ ಹೆಂಡತಿ, ಮಗು, ವಯಸ್ಸಾದ ಪೋಷಕರು ಇದ್ದರೇನೋ. ಅವರೆಲ್ಲರನ್ನೂ ನೆನಪಿಸಿಕೊಂಡು ಆ ವ್ಯಕ್ತಿ 110 ಅಂತಸ್ತಿನ ಆ ಕಟ್ಟಡದಿಂದ ಜಿಗಿದು ಬಿಟ್ಟನೇನೋ ಅನ್ನಿಸಿತು. ಮರುಗಳಿಗೆಯೇ ಹೀಗೆ ಜಿಗಿದ ವ್ಯಕ್ತಿ ನಮ್ಮ ಅಣ್ಣನೇ ಆಗಿದ್ದರೆ ಎಂಬ ಮತ್ತೊಂದು ಯೋಚನೆಯೂ ಕೈ ಜಗ್ಗಿತು. ಅವತ್ತು ಇಡೀ ರಾತ್ರಿ ನಿದ್ದೆ ಬರಲಿಲ್ಲ. ಕಣ್ಮುಚ್ಚಿದರೆ ಸಾಕು, ಹೋ ಎಂದು ಚೀರುತ್ತಾ ಪೆಂಟಗನ್ ಕಟ್ಟಡದಿಂದ ಜಿಗಿಯುತ್ತಿದ್ದ ವ್ಯಕ್ತಿಯ ಚಿತ್ರವೇ ಕಣ್ಮುಂದೆ ಬಂದು ನಿಲ್ಲುತ್ತಿತ್ತು. ಅದುವರೆಗೂ ರೋಲ್ ಮಾಡೆಲ್‌ಗಳಂತೆ ಕಾಣುತ್ತಿದ್ದ ಉಗ್ರಗಾಮಿ ನಾಯಕರು, ಆ ಕ್ಷಣದಿಂದಲೇ ಪರಮ ಕ್ರೂರಿಗಳಂತೆ ಕಾಣತೊಡಗಿದರು. ಈವರೆಗೂ ನಾನು ನಡೆದ ಹಾದಿಯೇ ಬೇರೆ. ನಾಳೆಯಿಂದ ತುಳಿಯಲಿರುವ ಹಾದಿಯೇ ಬೇರೆ ಎಂದು ಆ ಕ್ಷಣದಲ್ಲೇ ನಿರ್ಧರಿಸಿದೆ. ಉಗ್ರಗಾಮಿ ಸಂಘಟನೆಗಳೊಂದಿಗಿನ ನಂಟಿಗೆ ಗುಡ್ ಬೈ ಹೇಳಿದೆ.
ಹೀಗೇ ಆರೆಂಟು ತಿಂಗಳು ಕಳೆದವು. ಅದೊಮ್ಮೆ ಆಸ್ಪತ್ರೆಗೆ ಹೋಗಿ ಹಿಂದಿರುಗುವಾಗ, ಬಾಡಿಗೆಗೆ ಕಾರು ಸಿಗಲಿಲ್ಲ. ಅದೇ ವೇಳೆಗೆ ಬೇರೊಂದು ಕಾರ್‌ನಲ್ಲಿ ಬಂದ ಯುವಕರು ನನ್ನನ್ನು ಕಿಡ್‌ನ್ಯಾಪ್ ಮಾಡಿಬಿಟ್ಟರು. ಅವರಿಂದ ಬಹಳ ಕಷ್ಟಪಟ್ಟು ತಪ್ಪಿಸಿಕೊಂಡೆ. ಮರುದಿನ ಗೆಳತಿಯೊಂದಿಗೆ ಮಾತಾಡುತ್ತಾ 'ನಿನ್ನೆ ಹೀಗೆಲ್ಲಾ ಆಯ್ತು. ಈ ದೇಶದಲ್ಲಿ ಹೆಂಗಸರು ಕಾರು ಓಡಿಸಬಾರದು ಎಂಬ ಕಾನೂನು ಇಲ್ಲದೇ ಇದ್ದಿದ್ರೆ ನಾವೂ ನೆಮ್ಮದಿಯಿಂದ ಬದುಕಬಹುದಿತ್ತು' ಅಂದೆ. ಗೆಳತಿ ತಕ್ಷಣವೇ ಹೇಳಿದಳು: 'ಹೆಂಗಸರು ಕಾರು ಓಡಿಸಬಾರದು ಎಂದು ಕಾನೂನಿಲ್ಲ. ಇಲ್ಲಿ ಇರೋದು ಧರ್ಮದ ಮುಖಂಡರು ಹೊರಡಿಸಿರುವ ಫತ್ವಾ. ಅಷ್ಟೇ. ನಮ್ಮ ಹಕ್ಕು ಪಡ್ಕೋಬೇಕು ಅನ್ನುವುದಾದ್ರೆ ಫತ್ವಾಕ್ಕೆ ವಿರುದ್ಧವಾಗಿ ಹೆಜ್ಜೆ ಇಡಬೇಕು. ಈ ವಿಷಯದಲ್ಲಿ ಜನಬೆಂಬಲ ಸಿಗಬಹುದೇನೋ. ಒಮ್ಮೆ ಟ್ರೈ ಮಾಡಿ ನೋಡು...'
ನಾನು ತಡ ಮಾಡಲಿಲ್ಲ. ಅಣ್ಣನ ಸಹಾಯದಿಂದ ಕೆಲವೇ ದಿನಗಳಲ್ಲಿ ಡ್ರೈವಿಂಗ್ ಕಲಿತೆ. ನಂತರ, ಸೌದಿಯಲ್ಲಿ ಮುಸ್ಲಿಂ ಹೆಂಗಸರಿಗೆ ಇರುವ ಕಟ್ಟುಪಾಡುಗಳು, ಅವರಿಗೆ ದಕ್ಕಬೇಕಿರುವ ಹಕ್ಕುಗಳು, ಕಾರ್ ಡ್ರೈವಿಂಗ್‌ನಿಂದ ಇರುವ ಅನುಕೂಲಗಳು... ಇತ್ಯಾದಿ ವಿಷಯಗಳನ್ನು ನನ್ನದೇ ಧ್ವನಿಯಲ್ಲಿ ರೆಕಾರ್ಡ್ ಮಾಡಿಕೊಂಡೆ. ನಂತರ ಬುರ್ಖಾ ಇಲ್ಲದ ನನ್ನ ಫೋಟೋ, ಹೆಸರು ಹಾಗೂ ಈ ಹಿಂದೆ ಕೆಲಸ ಮಾಡಿದ್ದ ಸಂಘಟನೆ, ಅದರಿಂದ ದೂರವಾಗಲು ಕಾರಣವಾದ ಪ್ರಸಂಗವನ್ನು ವಿವರಿಸಿ ಯು-ಟ್ಯೂಬ್‌ಗೆ ಅಪ್‌ಲೋಡ್ ಮಾಡಿದೆ. 2011 ಜೂನ್ 17ರಂದು ಸೌದಿ ಅರೇಬಿಯಾದ ಬೀದಿಗಳಲ್ಲಿ ಕಾರು ಓಡಿಸುವ ಮೂಲಕ ನಮ್ಮ ಹಕ್ಕುಗಳಿಗಾಗಿ ಒತ್ತಾಯಿಸೋಣ. ಪಂಜರದೊಳಗಿನ ಪಕ್ಷಿಗೂ ತನ್ನಿಷ್ಟದಂತೆ ಹಾರಾಡುವ ಸ್ವಾತಂತ್ರ್ಯವಿದೆ. ಆದರೆ, ಸೌದಿ ಅರೇಬಿಯಾದ ಹೆಣ್ಣು ಮಕ್ಕಳಿಗೆ ಹೆಜ್ಜೆ ಹೆಜ್ಜೆಗೂ ನಿರ್ಬಂಧವೇಕೆ ಎಂದು ಕೇಳೋಣ, ಎಲ್ಲರೂ ಬನ್ನಿ ಎಂದು ಯು-ಟ್ಯೂಬ್‌ನಲ್ಲಿ ಮನವಿ ಮಾಡಿಕೊಂಡಿದ್ದೆ. ಮುಸ್ಲಿಂ ರಾಷ್ಟ್ರವೊಂದರ ಕಟ್ಟುಪಾಡುಗಳನ್ನು ವಿರೋಧಿಸಿ ಹೆಂಗಸೊಬ್ಬಳು ಇಂಟರ್‌ನೆಟ್ ಮೂಲಕ ಹೇಳಿಕೊಂಡದ್ದು ಬಹುಶಃ ಅದೇ ಮೊದಲು. ಜಗತ್ತಿನ ನಾನಾ ಭಾಗದ 8 ಲಕ್ಷಕ್ಕೂ ಹೆಚ್ಚು ಜನ, ನನ್ನ ಮಾತುಗಳನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲ, ಅದುವರೆಗೂ ನಾಲ್ಕು ಗೋಡೆಗಳ ಮಧ್ಯೆಯೇ ಉಳಿದು ಹೋಗಿದ್ದ 300ಕ್ಕೂ ಹೆಚ್ಚು ಮಹಿಳೆಯರು ಸೌದಿಯ ರಾಜಧಾನಿಯ ಮುಖ್ಯ ರಸ್ತೆಗಳಲ್ಲಿ ಕಾರು ಚಲಾಯಿಸಿ ಪುರುಷರ ದಬ್ಬಾಳಿಕೆಗೆ ಧಿಕ್ಕಾರ ಕೂಗಿದರು. ಆನಂತರದಲ್ಲಿ ನನಗೆ ಜೈಲು ಶಿಕ್ಷೆಯಾಯಿತು. ಸಾರ್ವಜನಿಕವಾಗಿ ನೇಣಿಗೆ ಹಾಕಿ ಎಂಬ ಒತ್ತಾಯವೂ ಬಂತು. ಹಿಂದೊಮ್ಮೆ ನಾನು ಹೀರೋಗಳೆಂದು ಆರಾಧಿಸಿದ್ದೆನಲ್ಲ, ಅದೇ ಜನರಿಂದ ಕೊಲೆ ಮಾಡುವ ಬೆದರಿಕೆಯೂ ಬಂತು. ಹೀಗೆ, ಒಂದೊಂದೇ ಬೆದರಿಕೆ ಬಂದಾಗಲೂ ಸೌದಿ ಅರೇಬಿಯಾದ ಸಾವಿರಾರು ಹೆಂಗಸರು ನನ್ನ ಪರವಾಗಿ ದನಿ ಎತ್ತಿದರು. ಮನಲ್ ಷರೀಫ್‌ಗೆ ಏನಾದರೂ ತೊಂದರೆಯಾದರೆ, ನಾವೆಲ್ಲರೂ ಬೀದಿಗೆ ಇಳೀತೇವೆ ಹುಷಾರ್ ಎಂದು ಎಚ್ಚರಿಸಿದರು. ಅವರೆಲ್ಲರ ಬೆಂಬಲದಿಂದಲೇ ನಾನು ಬದುಕುಳಿಯಲು ಸಾಧ್ಯವಾಗಿದೆ.
ಆದರೆ, ನನ್ನದೀಗ ನೆಮ್ಮದಿಯ ಬದುಕು ಎಂದು ಖಂಡಿತ ಹೇಳಲಾರೆ. ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿದ್ದಕ್ಕೆ ವಿದೇಶಗಳಲ್ಲಿರುವ ನಾಗರೀಕರಿಂದ, ವಿಶೇಷವಾಗಿ ಮುಸ್ಲಿಂ ಯುವತಿಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದಕ್ಕಿವೆ. ಮಹಿಳಾ ಸಮಾವೇಶಗಳಿಗೆ ಆಹ್ವಾನಗಳು ಬರುತ್ತಲೇ ಇವೆ. ಅದೇ ಸಂದರ್ಭದಲ್ಲಿ ಉಗ್ರಗಾಮಿಗಳ ಕಡೆಯಿಂದ ನಿರಂತರವಾಗಿ ಕೊಲೆ ಬೆದರಿಕೆಗಳೂ ಬರುತ್ತಿವೆ. ನನ್ನ ತಂದೆ, ಅಣ್ಣ ಹಾಗೂ ಗಂಡನ ಮೇಲೆ ಹಲ್ಲೆಗಳಾಗಿವೆ. 'ಫೇಸ್ ಬುಕ್‌ನಲ್ಲಿ ನಿಮ್ಮಮ್ಮ ಬುರ್ಖಾ ಇಲ್ಲದ ಫೋಟೋ ಹಾಕಿ ಇಸ್ಲಾಂಗೆ ಅವಮಾನ ಮಾಡಿದ್ದಾಳೆ ಕಣೋ' ಎಂದು ಹಂಗಿಸಿದ್ದ ಸಹಪಾಠಿಗಳು, ನನ್ನ ಮಗನ ಮೇಲೆ ಶಾಲೆಯೊಳಗೇ, ಕೈನ ಮೂಳೆ ಮುರಿದು ಹೋಗುವಂತೆ ಹೊಡೆದಿದ್ದಾರೆ. ಇಂಥ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಯಾರೂ ಬರುವುದಿಲ್ಲ. ಹಾಗಾಗಿ, ಭಯ ಮತ್ತು ಅಭದ್ರತೆಯ ಮಧ್ಯೆಯೇ ದಿನಗಳು ಉರುಳುತ್ತಿವೆ. ಸಂದರ್ಭ ಬಂದರೆ ನಾನು ಬಿದ್ದು ಹೋದೇನು. ಆದರೆ ಅನ್ಯಾಯದ ವಿರುದ್ಧ ಬಾಗಲಾರೆ. ಜನ ಜಾಗೃತಿಗೆ ಕಾರಣಳಾದೆ ಎಂಬ ಹೆಮ್ಮೆ-ತೃಪ್ತಿಯಿದೆ. ನನಗಷ್ಟೇ ಸಾಕು...'

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!